ಸೋಮವಾರ, ಮಾರ್ಚ್ 4, 2019

2ನೇ ಚುನಾವಣೆಯಲ್ಲಿ ಅತಿ ಹೆಚ್ಚು ಪಕ್ಷೇತರರ ಆಯ್ಕೆ

16ನೇ ಲೋಕಸಭೆಯು ಪೂರ್ತಿಯಾಗಿ ಅಧಿಕೃತ ಪ್ರತಿಪಕ್ಷ ಇಲ್ಲದೆ ಕಳೆದು ಹೋಯಿತು. ಇಂಥದ್ಧೆ ಸ್ಥಿತಿ 2ನೇ ಲೋಕಸಭೆಯಲ್ಲೂ ಉಂಟಾಗಿತ್ತು. 1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಎಂದಿನಂತೆ ಭರ್ಜರಿ ಗೆಲುವು ಸಾಧಿಸಿ, 494 ಸೀಟುಗಳ ಪೈಕಿ 371 ಸೀಟುಗಳನ್ನು ಗೆದ್ದುಕೊಂಡಿತು. ಮತ ಪ್ರಮಾಣ ಕೂಡ ಶೇ.45ರಿಂದ ಶೇ.48ಕ್ಕೇರಿಕೆಯಾಯಿತು. ವಿಶೇಷ ಎಂದರೆ, ಈ ಚುನಾವಣೆಯಲ್ಲೂ ಪಕ್ಷೇತರರು ಶೇ.19.3ರಷ್ಟು ವೋಟು ಪಡೆದು 42 ಸೀಟುಗಳನ್ನು ಗೆದ್ದರು. ಈವರೆಗೆ ಇದು ದಾಖಲೆಯಾಗೇ ಉಳಿದಿದೆ. ಇನ್ನು ಬಿಜೆಎಸ್‌ 4 ಸೀಟು ಗೆದ್ದರೆ, ಸಿಪಿಐ 27, ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ 19 ಸೀಟುಗಳನ್ನು ಪಡೆದುಕೊಂಡವು. ಮೊದಲನೆಯ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕ್ಷೇತ್ರಗಳು ಹೆಚ್ಚಾಗಿದ್ದವು ಮತ್ತು ಒಟ್ಟಾರೆ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಹೆಚ್ಚುವರಿಯಾಗಿ ಏಳು ಸೀಟುಗಳನ್ನು ಪಡೆದುಕೊಡಿತು. ಜತೆಗೆ, ಈ ಎಲೆಕ್ಷ ನ್‌ನಲ್ಲಿ ಮೊದಲ ಬಾರಿಗೆ ಅಂಚೆ ಮತದಾನ ವ್ಯವಸ್ಥೆ(ಪೋಸ್ಟ್‌ ವೋಟಿಂಗ್‌ ಸಿಸ್ಟಮ್‌)ಯನ್ನು ಜಾರಿಗೆ ತರಲಾಯಿತು. 403 ಕ್ಷೇತ್ರಗಳಲ್ಲಿ 91 ಕ್ಷೇತ್ರಗಳು ದ್ವಿದಸ್ಯ ಕ್ಷೇತ್ರಗಳಾಗಿದ್ದರೆ, ಉಳಿದವು ಏಕಸದಸ್ಯ ಕ್ಷೇತ್ರಗಳಾಗಿದ್ದವು. ದ್ವಿದಸ್ಯ ಕ್ಷೇತ್ರ ಪದ್ಧತಿ ಕಂಡ ಕೊನೆಯ ಚುನಾವಣೆ ಇದು. ಭಾರತದ ಪ್ರಥಮ ಪ್ರಧಾನಿಯಾಗಿ ಜನಪ್ರಿಯರಾಗಿದ್ದ ಜವಾಹರಲಾಲ್‌ ನೆಹರು ಅವರು ಎರಡನೇ ಅವಧಿಗೆ ಮತ್ತೆ ಪ್ರಧಾನಿಯಾದರು. ಲೋಕಸಭೆಯ ಸ್ಪೀಕರ್‌ ಆಗಿ ಹುಕುಂ ಸಿಂಗ್‌ ಸರ್ದಾರ್‌ ಅವರು ಆಯ್ಕೆಯಾದರು. ಅನೇಕ ಮೊದಲುಗಳನ್ನು ಕಂಡ 2ನೇ ಸಾರ್ವತ್ರಿಕ ಚುನಾವಣೆಯು ಕುಖ್ಯಾತಿಗೂ ಒಳಗಾಯಿತು.ಬೂತ್‌ಗಳನ್ನು ವಶಕ್ಕೆ ಪಡೆದ ಮೊದಲ ಪ್ರಕರಣ ದಾಖಲಾಯಿತು. ಬಿಹಾರದ ಬೇಗುಸರಾಯ್‌ ಜಿಲ್ಲೆಯ ಮಾತಿಹಾನಿ ವಿಧಾನಸಭಾ ಕ್ಷೇತ್ರದ ರಚಿಯಾಹಿ ಬೂತ್‌ ಅನ್ನು ಕೆಲವರು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಕಪ್ಪುಚುಕ್ಕೆಯಾಗಿ ದಾಖಲಾಯಿತು. 
- ತಿಪ್ಪಾರ 

ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.
https://vijaykarnataka.indiatimes.com/elections/lok-sabha/news/large-number-independent-candidates-elected-in-1957-lok-sabha-election/articleshow/68219193.cms

ಕಾಮೆಂಟ್‌ಗಳಿಲ್ಲ: