ಇಸ್ರೇಲ್ ಜನರಿಂದ ಬೀಬಿ ಎಂದು ಕರೆಯಿಸಿಕೊಳ್ಳುವ ಬೆಂಜಮಿನ್ ನೆತನ್ಯಾಹು ಭ್ರಷ್ಟಾಚಾರ ಮತ್ತು ಆಡಳಿತ ದುರುಪಯೋಗಕ್ಕಾಗಿ ಕೋರ್ಟ್ ಕಟಕಟೆಯಲ್ಲಿದ್ದಾರೆ. ಮಧ್ಯಪ್ರಾಚ್ಯ ರಾಜಕಾರಣದ ಧಾಡಸಿ ನಾಯಕನ ಭವಿಷ್ಯಕ್ಕೆ ಮಂಕು ಕವಿಯಲಿದೆಯೇ?
– ಮಲ್ಲಿಕಾರ್ಜುನ ತಿಪ್ಪಾರ
ಇಸ್ರೇಲ್‌ನ ಪ್ರಶ್ನಾತೀತ ನಾಯಕ, ಪ್ರಖರ ರಾಷ್ಟ್ರವಾದಿ ಬೆಂಜಮಿನ್ ನೆತನ್ಯಾಹು ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಕೋರ್ಟ್‌ಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯುವ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಭಾನುವಾರ ಅವರು ವಿಚಾರಣೆಗೆ ಹಾಜರಾಗಲಿದ್ದು, ಅದರೊಂದಿಗೆ ‘ಅಧಿಕಾರದಲ್ಲಿದ್ದಾಗಲೇ ಕಟಕಟೆ ಏರಿದ ಮೊದಲ ಪ್ರಧಾನಿ’ ಎಂಬ ಕುಖ್ಯಾತಿಯೂ ನೆತನ್ಯಾಹು ಬೆನ್ನಿಗಂಟಿದೆ.
ಸುತ್ತ ವೈರಿ ರಾಷ್ಟ್ರಗಳ ಕೂಟವನ್ನೆ ಕಟ್ಟಿಕೊಂಡಿರುವ ಪುಟ್ಟ ದೇಶ ಇಸ್ರೇಲ್‌ನ ರಾಜಕಾರಣದಲ್ಲಿ ಬೆಂಜಮಿನ್ ನೆತನ್ಯಾಹು ಅವರದ್ದು ಮಹತ್ತರ ಪಾತ್ರವಿದೆ. ದಶಕಗಳಿಂದ ಇಸ್ರೇಲ್ ರಾಜಕಾರಣದಲ್ಲಿ ಪ್ರಭಾವವನ್ನು ಹೊಂದಿರುವ ನೆತನ್ಯಾಹು ಇದೀಗ, ಭ್ರಷ್ಟಾಚಾರ, ವಿಶ್ವಾಸದ್ರೋಹ ಸೇರಿ ಇನ್ನಿತರ ಆರೋಪಗಳಿಂದಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಹಾಗೆ ನೋಡಿದರೆ, ಈ ಕೊರೊನಾ ವೈರಸ್ ಪರಿಸ್ಥಿತಿ ಸೃಷ್ಟಿಯಾಗದಿದ್ದರೆ ಅವರು ಎರಡು ತಿಂಗಳ ಮೊದಲೇ ಕಟಕಟೆ ಏರಬೇಕಿತ್ತು.
ನೆತನ್ಯಾಹು ಅವರು ಮೂರು ರೀತಿಯ ಆರೋಪಗಳಿಂದಾಗಿ ವಿಚಾರಣೆ ಎದುರಿಸುತ್ತಿದ್ದಾರೆ. 1. ಅವರು ಬೆಝಕ್ ಟೆಲಿಕಾಂ ಇಸ್ರೇಲ್ ಕಂಪನಿಗೆ ಅಂದಾಜು 50 ಕೋಟಿ ಡಾಲರ್ ಲಾಭವಾಗುವಂತೆ ಶಾಸನಾತ್ಮಕ ಸಹಾಯ ಮಾಡಿದ್ದು. ಇದಕ್ಕೆ ಪ್ರತಿಯಾಗಿ, ಈ ಕಂಪನಿ ನಿಯಂತ್ರಣ ಹೊಂದಿರುವ ‘ವಲ್ಲಾ’ ನ್ಯೂಸ್ ವೆಬ್‌ಸೈಟ್‌ನಲ್ಲಿ ನೆತನ್ಯಾಹು ಹಾಗೂ ಅವರ ಪತ್ನಿ ಪರವಾಗಿರುವ ಸುದ್ದಿಗಳ ಪ್ರಸಾರ. 2. ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ 2 ಲಕ್ಷ ಡಾಲರ್ ಮೌಲ್ಯದ ಕಾಣಿಕೆಗಳನ್ನು ಇಸ್ರೇಲಿ ಮೂಲದ ಹಾಲಿವುಡ್ ನಿರ್ಮಾಪಕ ಅರ್ನಾನ್ ಮಿಲ್ಚನ್ ಹಾಗೂ ಆಸ್ಪ್ರೇಲಿಯನ್ ಬಿಸಿನೆಸ್‌ಮನ್ ಜೇಮ್ಸ್ ಪ್ಯಾಕರ್ ಅವರಿಂದ ಪಡೆದಿದ್ದಾರೆ. ಇದರಲ್ಲಿ ದುಬಾರಿ ಷಾಂಪೇನ್, ಸಿಗಾರ್‌ಗಳೂ ಸೇರಿವೆ. 3. ಅರ್ನಾನ್ ಮೋಜ್ ಒಡೆತನದ ‘ಯೆಡಿಯೂತ್ ಅಹ್ರನೋಥ್’ ಪತ್ರಿಕೆಯಲ್ಲಿ ತಮ್ಮ ಪರವಾಗಿ ಉತ್ತಮ ಸುದ್ದಿಗಳು ಪ್ರಕಟವಾಗುವಂತೆ ನೆತನ್ಯಾಹು ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ‘ಯೆಡಿಯೂತ್ ಅಹ್ರನೋಥ್’ನ ಎದುರಾಳಿ ಪತ್ರಿಕೆಗಳ ಬೆಳವಣಿಗೆಯನ್ನು ತಡೆಯುವ ವಾಗ್ದಾನ.
ಮೇಲ್ನೋಟಕ್ಕೆ ಇವೆಲ್ಲ ಸಾಮಾನ್ಯ ರಾಜಕಾರಣಿಯೊಬ್ಬ ತನ್ನ ಏಳಿಗೆಗೆ ಮಾಡಬಹುದಾದ ಪ್ರಕರಣಗಳು ಎನಿಸುತ್ತವೆ. ಆದರೆ, ಇಸ್ರೇಲ್‌ನಂಥ ರಾಷ್ಟ್ರದಲ್ಲಿ ಇದೆಲ್ಲವೂ ಅಷ್ಟು ಸಮ್ಮತವಾದಂತೆ ತೋರುವುದಿಲ್ಲ. ‘‘ಇದೆಲ್ಲ ನನ್ನ ಎದುರಾಳಿಗಳು ಹಾಗೂ ಪೊಲೀಸ್ ವ್ಯವಸ್ಥೆ ರೂಪಿಸಿರುವ ಷಡ್ಯಂತ್ರ,’’ ಎಂದು ನೆತನ್ಯಾಹು ಆರೋಪಿಸುತ್ತಿದ್ದಾರೆ. ಬಲಪಂಥೀಯ ನಾಯಕನಾಗಿರುವುದಕ್ಕೆ ಇಂಥ ಆರೋಪಗಳನ್ನು ಎದುರಿಸಬೇಕಾಗಿದೆ ಎಂದು ಹೇಳುವ ಮೂಲಕ ಇಡೀ ಪ್ರಕರಣವನ್ನು ಸೈದ್ಧಾಂತಿಕ ಸಂಘರ್ಷಕ್ಕೆ ಪರಿವರ್ತಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ, ಒಂದೊಮ್ಮೆ ವಿಚಾರಣೆ ಪೂರ್ಣಗೊಂಡು ತಪ್ಪಿತಸ್ಥರು ಎಂದು ಸಾಬೀತಾದರೆ ಅವರ ರಾಜಕೀಯ ಜೀವನವೇ ಮುಗಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಂದು ನೆತನ್ಯಾಹು ಕೋರ್ಟ್ ಕಟಕಟೆಯಲ್ಲಿ ನಿಂತಿರಬಹುದು. ಆದರೆ, ಇಂದಿನ ಶಕ್ತಿಶಾಲಿ ಇಸ್ರೇಲ್‌ನ ಹಿಂದೆ ನೆತನ್ಯಾಹು ಅವರ ಕಾರ್ಯಕ್ಷ ಮತೆಯೂ ಸಾಕಷ್ಟಿದೆ. ನಾಲ್ಕು ಬಾರಿ ಪ್ರಧಾನಿಯಾಗಿರುವ ಅವರಿಗೆ ಸೋಲು-ಗೆಲುವು ಹೊಸದಲ್ಲ. ಇಸ್ರೇಲಿಗಳಿಂದ ಪ್ರೀತಿಯಿಂದ ‘ಬೀಬಿ’ ಎಂದು ಕರೆಯಿಸಿಕೊಳ್ಳುವ ನೆತನ್ಯಾಹು ಜನಿಸಿದ್ದು 1949 ಅಕ್ಟೋಬರ್ 21ರಂದು ಟೆಲ್ ಅವಿವ್‌ನಲ್ಲಿ. ಇವರ ತಂದೆ ಇತಿಹಾಸತಜ್ಞ. ಅಮೆರಿಕದಲ್ಲಿ ಅವರಿಗೆ ಶೈಕ್ಷ ಣಿಕ ರಂಗದಲ್ಲಿ ಉನ್ನತ ಹುದ್ದೆ ದೊರೆತ ಹಿನ್ನೆಲೆಯಲ್ಲಿ ಅವರ ಕುಟುಂಬ 1963ರಲ್ಲಿ ಅಮೆರಿಕಕ್ಕೆ ವಲಸೆ ಹೋಯಿತು. 18ನೇ ವಯಸ್ಸಿಗೆ ನೆತನ್ಯಾಹು ಇಸ್ರೇಲಿಗೆ ಮರಳಿದರು. ಸೇನೆಯಲ್ಲಿ ಐದು ವರ್ಷ ಕಾಲ ಇದ್ದು, ಕಮಾಂಡೊ ಯುನಿಟ್‌ನಲ್ಲಿ ಕ್ಯಾಪ್ಟನ್ ಆಗಿದ್ದರು. 1968ರಲ್ಲಿ ನಡೆದ ಬೈರುತ್ ಏರ್‌ಪೋರ್ಟ್ ಕಾರ್ಯಾಚರಣೆ ಮತ್ತು 1973ರಲ್ಲಿ ನಡೆದ ಮಧ್ಯ ಪ್ರಾಚ್ಯ ಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಬಳಿಕ ಅವರು ಮತ್ತೆ ಅಮೆರಿಕಕ್ಕೆ ವಾಪಸ್ಸಾದರು. ಆಗಲೇ ಅವರು ಅಮೆರಿಕದ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಿಂದ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ಪಡೆದುಕೊಂಡರು. 1976ರಲ್ಲಿ ಬೆಂಜಮಿನ್ ಸಹೋದರ ಯೋನಾಥನ್ ಎಂಟೆಬ್ಬೆ ಕಾರ್ಯಾಚರಣೆ ವೇಳೆ ಹುತಾತ್ಮನಾದ. ಆಗ ಬೆಂಜಮಿನ್, ತಮ್ಮ ಸಹೋದರನ ನೆನಪಿಗಾಗಿ ಉಗ್ರ ವಿರೋಧಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಈ ಅವಧಿಯಲ್ಲಿ ಅಮೆರಿಕದಲ್ಲಿ ಇಸ್ರೇಲ್ ರಾಯಭಾರಿಯಾಗಿದ್ದ ಮೋಶೆ ಏರೆನ್ಸ್ ಅವರ ಕಣ್ಣಿಗೆ ಬಿದ್ದರು. ಮೋಶೆ ಅವರು ಬೆಂಜಮಿನ್ ಅವರನ್ನು ತಮ್ಮ ಡೆಪ್ಯುಟಿಯಾಗಿ ನೇಮಕ ಮಾಡಿಕೊಂಡರು. ಅಲ್ಲಿಂದಲೇ ನೆತನ್ಯಾಹು ಅವರ ಸಾರ್ವಜನಿಕ ಬದುಕು ಆರಂಭವಾಯಿತು. ಅಮೆರಿಕದ ಶೈಲಿಯಲ್ಲಿ ಅತ್ಯದ್ಭುತವಾಗಿ ಇಂಗ್ಲಿಷ್ ಮಾತನಾಡಬಲ್ಲ ನೆತನ್ಯಾಹು, ಅಮೆರಿಕದ ದೂರದರ್ಶನಗಳಿಂದಾಗಿ ಮನೆ ಮಾತಾದರು. ಅವಕಾಶ ಸಿಕ್ಕಾಗಲೆಲ್ಲ ಇಸ್ರೇಲ್ ಪರವಾಗಿ ಪ್ರಬಲ ವಾದ ಮಂಡಿಸುತ್ತಿದ್ದರು. ಇದು ಅವರಿಗೆ ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ಶಾಶ್ವತ ಪ್ರತಿನಿಧಿಯಾಗುವ ಅವಕಾಶವನ್ನು ತಂದುಕೊಟ್ಟಿತು.
1988ರಲ್ಲಿ ಇಸ್ರೇಲ್‌ಗೆ ಮರಳಿ, ಇಸ್ರೇಲ್‌ನ ಸಂಸತ್ತಿಗೆ ಆಯ್ಕೆಯಾದರು. ರಾಜಕೀಯವಾಗಿ ನೆತನ್ಯಾಹು ಅವರು ಬಲಪಂಥೀಯವಾದಿ. 1992ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನೆತನ್ಯಾಹು ಪ್ರತಿನಿಧಿಸುತ್ತಿದ್ದ ಲಿಕುಡ್ ಪಕ್ಷ ಸೋಲು ಕಂಡಿತು. ಆಗ ಇವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. 1996ರಲ್ಲಿ ಶಿಮೋನ್ ಪೆರೆಸ್ ಅವರನ್ನು ಸೋಲಿಸಿ ಪ್ರಧಾನಿಯಾಗಿ ಆಯ್ಕೆಯಾದರು. ಇಸ್ರೇಲ್‌ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2001ರಲ್ಲಿ ಏರಿಯಲ್ ಶೆರೋನ್ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ, ಹಣಕಾಸು ಸಚಿವರಾಗಿ ಕೆಲಸ ಮಾಡಿದರು. ಗಾಜಾ ಪಟ್ಟಿಯಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದನ್ನು ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2005ರಲ್ಲಿ ಇಸ್ರೇಲ್ ರಾಜಕಾರಣದಲ್ಲಿ ಧ್ರುವೀಕರಣ ಆರಂಭವಾಯಿತು. ಆಗ, ಶರೋನ್ ಅವರು ಲಿಕುಡ್ ಪಕ್ಷದಿಂದ ಹೊರಬಂದು ಕಡಿಮಾ ಪಕ್ಷ ಆರಂಭಿಸಿದರು. ಲಿಕುಡ್ ಪಕ್ಷದ ನಾಯಕತ್ವವನ್ನು ನೆತನ್ಯಾಹು ವಹಿಸಿಕೊಂಡರು. 2009ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು. ಆಗ ಇವರದ್ದು ಮೈನಾರಿಟಿ ಸರಕಾರ. 2012ರಲ್ಲಿ ಸಂಸತ್ತನ್ನು ವಿಸರ್ಜಿಸಿ ಅವಧಿಪೂರ್ವ ಚುನಾವಣೆಗೆ ಮುಂದಾದರು. ಇದೇ ವೇಳೆ, ಗಾಜಾ ಬಂಡುಕೋರರ ಮೇಲೆ ಉಗ್ರ ದಾಳಿಗೂ ಆದೇಶಿಸಿದರು. ಎಂಟು ದಿನ ನಡೆದ ಈ ಯುದ್ಧ ಇಸ್ರೇಲ್‌ನ ಅತ್ಯಂತ ಯಶಸ್ವಿ ಕಾರ್ಯಾಚರಣೆ ಎಂದು ದಾಖಲಾಯಿತು. 2013ರಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು. 2014ರ ಜುಲೈ ಹೊತ್ತಿಗೆ ಎರಡು ರಾಷ್ಟ್ರಗಳ ಮಧ್ಯೆ ಹಿಂಸಾಚಾರ ಉಲ್ಬಣಗೊಂಡಿತು. 50 ದಿನ ಯುದ್ಧ ನಡೆಯಿತು. 2015ರ ಚುನಾವಣೆಯಲ್ಲಿ ಲಿಕುಡ್ ಪಕ್ಷ ಬಹುಮತದೊಂದಿಗೆ ನೆತನ್ಯಾಹು ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು. ನೆತನ್ಯಾಹು ದಾಖಲೆಯ ನಾಲ್ಕನೇ ಬಾರಿ ಪ್ರಧಾನಿಯಾದರು. ‘ಎಲ್ಲ ಬಣ್ಣ ಮಸಿ ನುಂಗಿತು’ ಎನ್ನುವ ಹಾಗೆ ಅವರೆಲ್ಲ ಪರಾಕ್ರಮಗಳನ್ನು ಭ್ರಷ್ಟಾಚಾರ ಆರೋಪಗಳು, ಕ್ರಿಮಿನಲ್ ಪ್ರಕರಣಗಳು ನುಂಗಿ ಹಾಕುತ್ತಿವೆ.
ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ನಿಷ್ಣಾತವಾಗಿರುವ ನೆತನ್ಯಾಹು ಅವರು ಕುತೂಹಲಿ, ವಿನಮ್ರ ಹಾಗೂ ನೆರವಾಗುವ ಗುಣವುಳ್ಳವರು. ಅವರಿಗಿರುವ ಸ್ನೇಹಶೀಲ ಗುಣವೂ ಅಂತಾರಾಷ್ಟ್ರೀಯವಾಗಿ ಅನೇಕ ನಾಯಕರನ್ನು ಇಸ್ರೇಲ್‌ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಜಕಾರಣಿ, ಮುತ್ಸದ್ಧಿ, ಚಿಂತಕ, ಅತ್ಯುತ್ತಮ ಆಡಳಿತಗಾರರಾಗಿರುವ ನೆತನ್ಯಾಹುಗೆ ಮೂರು ಬಾರಿ ಮದುವೆಯಾಗಿದೆ. ಮೊದಲ ಹೆಂಡತಿಯ ಹೆಸರು ಮಿರಿಯಾಮ್ ವೀಜ್ಮನ್, ಎರಡನೇ ಹೆಂಡತಿ ಫ್ಲೇರ್ ಕೇಟ್ಸ್ ಮತ್ತು ಮೂರನೇ ಹೆಂಡತಿ ಸಾರಾ ಬೆನ್ ಆಟ್ರ್ಜಿ. ಮೊದಲ ಇಬ್ಬರಿಗೆ ಡಿವೋರ್ಸ್ ನೀಡಿದ್ದಾರೆ. ರಾಜಕೀಯ ಚಾಣಾಕ್ಷನಾಗಿರುವ ನೆತನ್ಯಾಹು ಅಷ್ಟೇ ಸಶಕ್ತ ಬರಹಗಾರರೂ ಹೌದು. ‘ಇಂಟರ್‌ನ್ಯಾಷನಲ್ ಟೆರರಿಸಮ್: ಚಾಲೆಂಜ್ ಆ್ಯಂಡ್ ರೆಸ್ಪಾನ್ಸ್’ ಸೇರಿ ನಾಲ್ಕು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.
2019ರ ಎಲೆಕ್ಷ ನ್‌ನಲ್ಲಿ ಪೂರ್ಣ ಬಹುಮತ ಬಾರದ್ದರಿಂದ ನೆತನ್ಯಾಹು ತಮ್ಮ ಎದುರಾಳಿ ಬೆನ್ನಿ ಗ್ಯಾಂಟ್ಜ್ ಜೊತೆಗೂಡಿ ಸರಕಾರ ರಚಿಸಿದ್ದರು. ಒಪ್ಪಂದದಂತೆ 18 ತಿಂಗಳ ಬಳಿಕ ಅಂದರೆ, 2020 ನವೆಂಬರ್ 17ಕ್ಕೆ ಬೆನ್ನಿ ಗ್ಯಾಂಟ್ಜ್‌ಗೆ ಪ್ರಧಾನಿ ಹುದ್ದೆ ಬಿಟ್ಟುಕೊಡಲಿದ್ದಾರೆ. ಆದರೆ, ಈಗಿನ ಬೆಳವಣಿಗೆಗೆಳು ಇಸ್ರೇಲನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಿವೆ ಕಾದು ನೋಡಬೇಕು.