ಸೋಮವಾರ, ಜೂನ್ 1, 2020

Actor Sonu Sood's Ghar Bhejo Initiative ಅಪರಂಜಿ ಹೃದಯದ ಸೋನು ಸೂದ್

ಮತ್ತೊಬ್ಬರಿಗೆ ಸಹಾಯ ಮಾಡುವುದೇ ಯಶಸ್ಸಿನ ಮಂತ್ರ ಎಂದು ಭಾವಿಸಿ ಅದರಂತೆ ನಡೆಯುತ್ತಿರುವ ನಟ ಸೋನು ಸೂದ್, ಲಾಕ್ಡೌನ್ ವೇಳೆ ಸಾವಿರಾರು ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ನೆರವಿನ ಹಸ್ತ ಚಾಚಿದ್ದಾರೆ. 
- ಮಲ್ಲಿಕಾರ್ಜುನ ತಿಪ್ಪಾರ
ಲಾಕ್‌ಡೌನ್‌ನ ವೇಳೆ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಸಿದ್ಧವಾಗಿರುವ ಶ್ರಮಿಕ್ ರೈಲುಗಳ ವೆಚ್ಚವನ್ನು ಯಾರು ಭರಿಸಬೇಕು ಎಂದು ಸರಕಾರಗಳು ಕಚ್ಚಾಡುತ್ತಿರುವಾಗ, ಬಸ್ಗಳನ್ನು ರಾಜ್ಯದೊಳಗೆ ಬಿಡಬೇಕೋ ಬೇಡವೋ ಎಂದು ರಾಜಕಾರಣಿಗಳು ಪರಸ್ಪರ ಕೆಸರೆರಚಾಡುತ್ತಿರುವ ಸಂದರ್ಭದಲ್ಲೇ ಮುಂಬಯಿನಲ್ಲಿ‘ಖಳನಾಯಕ’ರೊಬ್ಬರು ಸದ್ದಿಲ್ಲದೇ ಬಸ್ಗಳ ಮೂಲಕ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿ ತಮ್ಮದು ‘ಶುದ್ಧ ಬಂಗಾರ’ದ ಹೃದಯ ಎಂಬುದನ್ನು ತೋರಿಸಿಕೊಟ್ಟರು!

ಅವರು ಯಾರೆಂದು ಗೊತ್ತಾಗಿರಬಹುದು. ನಿಮ್ಮ ಊಹೆ ನಿಜ. ಅವರು ‘ವಿಲನ್’ ಪಾತ್ರಗಳನ್ನು ನಿಭಾಯಿಸಿ ಪ್ರಖ್ಯಾತರಾಗಿರುವ ನಟ ‘ಸೋನು ಸೂದ್’.

ಲಾಕ್ಡೌನ್ ವೇಳೆ ಮುಂಬಯಿ ಮಹಾನಗರದಿಂದ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಕರ್ನಾಟಕ, ಒಡಿಶಾ ಸೇರಿದಂತೆ ಅನೇಕ ರಾಜ್ಯಗಳಿಗೆ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿರುವ ಸುದ್ದಿಗಳು, ಚಿತ್ರಗಳು, ಕಾರ್ಮಿಕರ ಕಣ್ಣೀರಿನ ಕತೆಗಳು ಯಥೇಚ್ಛವಾಗಿ ಪ್ರಸಾರವಾದವು. ನಾವೆಲ್ಲರೂ ಅಯ್ಯೊ ಪಾಪ ಎಂದೆವಷ್ಟೇ, ಆದರೆ ಸೋನು ಸೂದ್ ಮಾತ್ರ ತಮ್ಮದೇ ಖರ್ಚಿನಲ್ಲಿಬಸ್ಗಳನ್ನು ಬಾಡಿಗೆ ಪಡೆದು ಕಾರ್ಮಿಕರನ್ನು ಅವರವರ ಹಳ್ಳಿಗಳಿಗೆ ತಲುಪಿಸುವ ‘ಘರ್ ಭೇಜೋ’(ಮನೆಗೆ ತಲುಪಿಸಿ) ಕಾರ್ಯಕ್ಕೆ ಮುಂದಾದರು. ಕಳೆದ ಮೂರ್ನಾಲ್ಕು ವಾರಗಳಲ್ಲಿಅಂದಾಜು 20 ಸಾವಿರ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸಿ, ಅವರ ಪ್ರೀತಿ ಹಾರೈಕೆಗಳಿಗೆ ಪಾತ್ರರಾಗಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೂದ್, ಕೇರಳದಲ್ಲಿಸಿಲುಕಿದ್ದ ಒಡಿಶಾದ 200ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ವಿಮಾನದಲ್ಲೇ ವಾಪಸ್ ರಾಜ್ಯಗಳಿಗೆ ಕಳುಹಿಸಿ ಕೊಟ್ಟಿದ್ದಾರೆ. ಈ ಮಾನವೀಯ ಕಾರ್ಯದಲ್ಲೀಗ ಸೂದ್ ಜೊತೆ ಅವರ ಸ್ನೇಹ ಬಳಗವೂ ಸೇರಿಕೊಂಡಿದೆ. ವಲಸಿಗ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ಕಾರ್ಯವೂ ವಿಸ್ತಾರಗೊಂಡಿದೆ. ಅವರು ಆರಂಭಿಸಿರುವ ಸಹಾಯವಾಣಿಗೆ 50ರಿಂದ 60 ಸಾವಿರದಷ್ಟು ಕರೆಗಳು ಬರುತ್ತಿವೆ ಎಂದರೆ ಜನರು ಅವರ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿ.

ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ರಾಕ್ಷಸೀ ಕೃತ್ಯಗಳನ್ನು ಲೀಲಾಜಾಲವಾಗಿ ಮಾಡುವ ಸೂದ್, ಜೀವನದಲ್ಲಿನಿಜವಾದ ‘ಹೀರೋ’ ಆಗಿ ಹೊರಹೊಮ್ಮಿದ್ದಾರೆ. ಅವರ ಈ ಕಾರ್ಯಕ್ಕೆ ಅಗಾಧ ಪ್ರಶಂಸೆಯೂ ವ್ಯಕ್ತವಾಗಿದೆ. ದೇಶ, ವಿದೇಶದ ಮಾಧ್ಯಮಗಳಲ್ಲಿಅವರ ಕಾರ್ಯಕ್ಕೆ ಮನ್ನಣೆ ದೊರೆಯುತ್ತಿದೆ. ಕೆಲವರು  ಸೂದ್ ಅವರನ್ನು ಸುಷ್ಮಾ ಸ್ವರಾಜ್(ಯುದ್ಧಪೀಡಿತ ವಿದೇಶಗಳಲ್ಲಿಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆ ತರುವಲ್ಲಿಪ್ರಮುಖ ಪಾತ್ರ ನಿರ್ವಹಿಸಿದ್ದರು) ಅವರೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಅದೆಲ್ಲವನ್ನೂ ವಿನಮ್ರತೆಯಿಂದಲೇ ಸ್ವೀಕರಿಸುತ್ತಿದ್ದಾರೆ ಸೂದ್.

ಬಹಳಷ್ಟು ನಟ, ನಟಿಯರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ಸುಮ್ಮನಿದ್ದಾರೆ. ಆದರೆ, ಸೂದ್ ಅವರು ಮಾತ್ರ ಯಾಕೆ ರೀತಿಯ ಕಾರ್ಯಾಚರಣೆಗಿಳಿದರು, ಅವರಿಗೆ ಅಂಥ ಪ್ರೇರಣೆಯಾಗಿದ್ದಾರರೂ ಏನು ಎಂದು ಹುಡುಕಿದರೆ, ಅವರದ್ದೇ ಮಾತುಗಳಲ್ಲಿಉತ್ತರ ಸಿಗುತ್ತದೆ. ‘‘ನಮ್ಮ ನಗರಗಳನ್ನು ಕಟ್ಟಿದ ಈ ವಲಸಿಗರು ಹೈವೇಗಳಲ್ಲಿ ತಮ್ಮ ಜೀವವನ್ನು ಅಪಾಯಕ್ಕಿಟ್ಟು ನಡೆದುಕೊಂಡು ಹೋಗುತ್ತಿದ್ದರು, ಅನೇಕರು ಈ ಪಯಣದ ಹಾದಿಯಲ್ಲಿ ಜೀವ ಬಿಟ್ಟಿದ್ದಾರೆ. ಆಗ ನನಗೆ ಅನಿಸಿತು, ಈ ವಲಸಿಗರಿಗೆ ಸಹಾಯವಾಗುವಂಥದ್ದು ಏನಾದರೂ ಮಾಡಬೇಕು. ಇದೇ ಈ ಕ್ಷ ಣಕ್ಕೆ ಬೇಕಾಗಿರುವುದು,’’ ಎಂದು ಭಾವಿಸಿದ ಸೂದ್ ‘ಘರ್ ಭೇಜೋ’ ಕಾರ್ಯಕ್ಕೆ ಚಾಲನೆ ನೀಡಿದರು. ಒಂದು ಒಳ್ಳೆಯ ಕಾರ್ಯಕ್ಕೆ ಹಲವರ ಕೈಗಳು ಗೊತ್ತಿಲ್ಲದೆಯೇ ಜೊತೆಯಾಗುತ್ತವೆ. ಸೂದ್ ಅವರ ವಿಷಯದಲ್ಲೂಅದು ನಿಜವಾಯಿತು.

47 ವರ್ಷದ ಸೂನು ಸೂದ್ ಕೂಡ 20 ವರ್ಷ ಹಿಂದೆ ಇದೇ ರೀತಿ ವಲಸಿಗರಾಗಿಯೇ ಮುಂಬಯಿಗೆ ಬಂದವರು. ಅದಕ್ಕೇ ಇರಬೇಕು, ವಲಸಿಗರ ನೋವು ಎಲ್ಲರಿಗಿಂತ ಮೊದಲು ಅವರಿಗೆ ತಟ್ಟಿದ್ದು.

ಪಂಜಾಬ್ನ ಮೋಗಾದಲ್ಲಿ1973ರ ಜುಲೈ 30ರಂದು ಸೋನು ಜನಿಸಿದರು. ತಂದೆ ಶಕ್ತಿ ಸಾಗರ್ ಸೂದ್, ತಾಯಿ ಸರೋಜಾ ಸೂದ್. ಮೋಗಾದಲ್ಲಿ ಆರಂಭಿಕ ಶಿಕ್ಷ ಣ ಪೂರೈಸಿದ ಸೋನು ನಾಗ್ಪುರದ ಯಶವಂತರಾವ್ ಚಹ್ವಾಣ್ ಎಂಜಿನಿಯರಿಂಗ್ ಕಾಲೇಜ್ನಿಂದ ಎಲೆಕ್ಟ್ರಿಕಲ್ ಎಂಜಿನಿಯರ್ ಪದವಿ ಪಡೆದಿದ್ದಾರೆ. ಕಿಕ್ ಬಾಕ್ಸಿಂಗ್ ಮತ್ತು ಗಿಟಾರ್ ನುಡಿಸುವುದು ಅವರ ಹವ್ಯಾಸಗಳು. ಮಾಡೆಲಿಂಗ್ ಮತ್ತು ಸಿನಿಮಾ ಜಗತ್ತಿನೆಡೆಗೆ ಆಕರ್ಷಿತರಾಗಿ ಮುಂಬಯಿಗೆ ಪಯಣ ಬೆಳೆಸಿದರು. ಎಲ್ಲರಂತೆ ಆರಂಭಿಕ ದಿನಗಳಲ್ಲಿ ಸೋನು ಕೂಡ ಅವಕಾಶಕ್ಕಾಗಿ ಚಪ್ಪಲಿ ಸವೆಸಬೇಕಾಯಿತು. 1999ರಲ್ಲಿಅವರ ಕನಸು ಕೈಗೂಡಿತು. ತಮಿಳು ಸಿನಿಮಾ ‘ಕಲ್ಲಳಂಗರ್’ ಚಿತ್ರದ ಮೂಲಕ ಸಿನಿ ಜಗತ್ತಿಗೆ ಪದಾರ್ಪಣೆ ಮಾಡಿದರು. 2000ರಲ್ಲಿ‘ಹ್ಯಾಂಡ್ಸ್ ಅಪ್’ ಚಿತ್ರದ ಮೂಲಕ ತೆಲುಗು ಸಿನಿಮಾರಂಗಕ್ಕೂ ಪರಿಚಯವಾದರು. ಬಳಿಕ 2002ರಲ್ಲಿಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. 2011ರಲ್ಲಿತೆರೆಗೆ ಬಂದ ಸುದೀಪ್ ಅಭಿನಯದ ‘ವಿಷ್ಣುವರ್ಧನ್’ ಚಿತ್ರದ ಮೂಲಕ ಕನ್ನಡ ಸಿನಿರಸಿಕರಿಗೂ ಹತ್ತಿರವಾದರು. ಕಳೆದ ವರ್ಷ ತೆರೆ ಕಂಡ, ನಟ ದರ್ಶನ್ ಅಭಿಯನದ ‘ಕುರುಕ್ಷೇತ್ರ’ ಚಿತ್ರದಲ್ಲಿಅರ್ಜುನನ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡರು. ಈ 20 ವರ್ಷದ ಅವಧಿಯಲ್ಲಿಕನ್ನಡ, ಹಿಂದಿ ಸೇರಿದಂತೆ ಆರು ಭಾಷೆಗಳ 60ಕ್ಕೂ ಹೆಚ್ಚು ಚಿತ್ರಗಳಲ್ಲಿಅಭಿನಯಿಸಿದ್ದಾರೆ. ಏಷ್ಯಾದ ಬಹುದೊಡ್ಡ ನಟ ಜಾಕಿಚಾನ್ ಅವರೊಂದಿಗೆ ಬಹುಭಾಷಾ ಚಿತ್ರವಾದ ‘ಕುಂಗ್ ಫು ಯೋಗ’ದಲ್ಲಿತೆರೆ ಹಂಚಿಕೊಂಡಿದ್ದಾರೆ. ಆರು ಅಡಿ ಎತ್ತರದ ಅಜಾನುಬಾಹು ಸೋನು ಕಟ್ಟುಮಸ್ತಾದ ಶರೀರವನ್ನು ಹುರಿಗೊಳಿಸಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ದಬಾಂಗ್(2010) ಚಿತ್ರದ ಚೇದಿ ಸಿಂಗ್ ವಿಲನ್ ಪಾತ್ರ ಸೂದ್ ಅವರಿಗೆ ಹೊಸ ಐಡೆಂಟಿಟಿ ತಂದುಕೊಟ್ಟಿತು. ಯುವ, ಅಥಡು, ಆಶೀಕ್ ಬನಾಯಾ ಅಪ್ನೆ, ಜೋಧಾ ಅಕ್ಬರ್, ದೂಕುಡು, ಶೂಟ್ಔಟ್ ಎಟ್ ವಾಡಲಾ, ಹ್ಯಾಪಿ ನ್ಯೂ ಇಯರ್, ಕುಂಗ್ ಫು ಯೋಗ, ಸಿಂಬಾ, ವಿಷ್ಣುವರ್ಧನ ಚಿತ್ರಗಳು ಸೂದ್ ಅವರಿಗೆ ಹೆಸರು ತಂದುಕೊಟ್ಟವು. ತಮಿಳು, ತೆಲುಗು, ಹಿಂದಿ, ಕನ್ನಡ, ಪಂಜಾಬಿ ಮತ್ತು ಇಂಗ್ಲಿಷ್ ಸಿನಿಮಾಗಳಲ್ಲಿಅಭಿನಯಿಸಿದ್ದಾರೆ. 2016ರಲ್ಲಿತಂದೆಯ ಹೆಸರಿನಲ್ಲಿಚಿತ್ರ ನಿಮಾಣ ಸಂಸ್ಥೆಯನ್ನೂ ಆರಂಭಿಸಿದ್ದಾರೆ.

ಅರುಂಧತಿ(2009) ಚಿತ್ರದ ಅಭಿನಯಕ್ಕಾಗಿ ಆಂಧ್ರಪ್ರದೇಶ ರಾಜ್ಯ ನಂದಿ ಅತ್ಯುತ್ತಮ ವಿಲನ್ ಅವಾರ್ಡ್, ಇದೇ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಫಿಲಂ ಫೇರ್ ಅವಾರ್ಡ್ ಕೂಡ ಬಂದಿದೆ. ಇಷ್ಟು ಮಾತ್ರವಲ್ಲದೆ ಅಪ್ಸರಾ, ಐಐಎಫ್ಎ, ಎಸ್ಐಐಎಂಎ(ಸೈಮಾ) ಪ್ರಶಸ್ತಿಗಳು ಸೂದ್ ಅವರಿಗೆ ಸಂದಿವೆ.
ಬಹುತೇಕರು ಯಶಸ್ಸಿಗೆ ತಮ್ಮದೇ ಮಾನದಂಡ ಹುಡುಕಿಕೊಳ್ಳುತ್ತಾರೆ. ಇಲ್ಲವೇ ಜನರೇ ಅವರಿಗೊಂದು ಯಶಸ್ಸಿನ ಅಳತೆಗೋಲನ್ನು ಸಿದ್ಧಪಡಿಸುತ್ತಾರೆ. ಆದರೆ, ಸೂದ್ ಅವರ ದೃಷ್ಟಿಯಲ್ಲಿಯಶಸ್ಸು ಎನ್ನುವುದು ತುಂಬ ಭಿನ್ನವಾಗಿದೆ. ‘‘ಒಂದು ವೇಳೆ ನೀವು ಯಾರಿಗಾದರೂ ಸಹಾಯ ಮಾಡಲು ಸಾಧ್ಯವಾದರೆ ಮಾತ್ರ ಯಶಸ್ಸು ಸಾಧಿಸಿದ ಹಾಗೆ,’’ ಎನ್ನುತ್ತಾರೆ ಅವರು. ಇದು ಅವರ ತಂದೆ, ತಾಯಿ ಹೇಳಿಕೊಟ್ಟ ಯಶಸ್ಸಿನ ಸೂತ್ರ. ಬಹುಶಃ ಅದೇ ಕಾರಣಕ್ಕೆ ಅವರು ಯಾರೂ ನಿರೀಕ್ಷಿಸದ ರೀತಿಯಲ್ಲಿನೆರವಿನ ಹಸ್ತವನ್ನು ಚಾಚುತ್ತಿದ್ದಾರೆ.

ನಿಮಗೊಂದು ವಿಷಯ ಹೇಳಲೇಬೇಕು; ಲಾಕ್ಡೌನ್ ಸಂದರ್ಭದಲ್ಲಿಮಾತ್ರ ಸೂದ್ ನೆರವು ನೀಡುತ್ತಿಲ್ಲ. ಅವರ ನೆರವಿನ ಕಾರ್ಯಕ್ಕೆ ದೊಡ್ಡ ದಾಖಲೆಗಳೇ ಇವೆ. ಇದಕ್ಕೂ ಮೊದಲು ಅವರು, ಪಂಜಾಬ್ನಲ್ಲಿಮಾದಕ ದ್ರವ್ಯ ವಿರುದ್ಧ ಹೋರಾಟದಲ್ಲಿತೊಡಗಿಸಿಕೊಂಡಿದ್ದರು. 2016ರಲ್ಲಿತಮ್ಮ ತಾಯಿ ಸರೋಜ ಹೆಸರಲ್ಲಿಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರ ಸಹಾಯಕ್ಕೆ ಮುಂದಾದರು. ಇವರ ಜೊತೆಗೆ, ಬೇರೆ ರೀತಿಯಲ್ಲೂಅಂಗವಿಕಲವಾದವರಿಗೂ ಸೂದ್ ನೆರವು ನೀಡುತ್ತಾ ಬಂದಿದ್ದಾರೆ. ಅಂಗವಿಕಲ ವಿದ್ಯಾರ್ಥಿಗಳು ಬ್ಯಾಡ್ಮಿಂಟನ್ ಟೂರ್ನಿಯಲ್ಲಿಪಾಲ್ಗೊಳ್ಳಲು ಧನಸಹಾಯ ಮಾಡಿದ್ದಾರೆ. ತಮ್ಮ ತಂದೆಯ ಹೆಸರಲ್ಲಿ(ಶಕ್ತಿ ಅನ್ನದಾನಂ) ಮುಂಬಯಿನ ನಿರ್ಗತಿಕ ಒಂದೂವರೆ ಲಕ್ಷ  ಮಕ್ಕಳಿಗೆ ನಿತ್ಯ ಊಟವನ್ನು ನೀಡುತ್ತಿದ್ದಾರೆ. ಅವರ ಈ ಎಲ್ಲಕಾರ್ಯಕ್ಕೆ ಪತ್ನಿ ಸೋನಾಲಿ, ಮಕ್ಕಳಾದ ಅಯಾನ್ ಮತ್ತು ಇಶಾನ್ ಅವರ ಬೆಂಬಲ ಇದ್ದೇ ಇದೆ.  ಅಂದ ಹಾಗೆ, ಸೂದ್ ಅವರ ನೆರವಿನಿಂದ ತಮ್ಮ ಊರುಗಳನ್ನು ತಲುಪಿದವರ ಪಟ್ಟಿಯಲ್ಲಿಕನ್ನಡಿಗರು ಇದ್ದಾರೆ.



ಈ ಲೇಖನವು ವಿಜಯ ಕರ್ನಾಟಕದ 2020ರ ಮೇ 31ರ ಸಂಚಿಕೆಯಲ್ಲಿ ಪ್ರಕಟವಾಗಿದೆ.