ಸೋಮವಾರ, ಜುಲೈ 31, 2017

ಹುಡುಗನೊಬ್ಬನ ಗಜಲ್‌ಗಳು: ನಾವು ಸಾಯಲ್ಲ, ಬದುಕುತ್ತೇವೆ ಎನ್ನುವ ಕೂಗು ಗುಮ್ಮಟದಲ್ಲಿ ಪ್ರತಿಧ್ವನಿಸಿತು....

- ಪ್ರದ್ಯುಮ್ನ
ವಿಶ್ವ ವಿಖ್ಯಾತ ಗೋಲ್‌ಗುಂಬಜ್‌ನ ಅಭಿಮುಖವಾಗಿ ಮುಖ್ಯ ರಸ್ತೆಯ ಆಚೆ ಇದ್ದ ಈ ಲಾಡ್ಜ್‌ನ ಕೋಣೆ ತುಂಬ ವೌನ. ಕಿಟಕಿಯಾಚೆ ನೋಡಿದರೆ ಗಂಭೀರತೆಯನ್ನೇ ಹೊತ್ತು ನಿಂತಂತೆ ಭಾಸವಾಗುತ್ತಿದ್ದ ಗೋಲ್‌ಗುಂಬಜ್‌ನ ಬೃಹತ್ ಗುಮ್ಮಟ ಮಾತ್ರ ಕಣ್ಣಳತೆಯಲ್ಲಿತ್ತು. ಆ ಗುಮ್ಮಟದ ಪ್ಯಾಸೇಜ್‌ನಲ್ಲಿ ಓಡಾಡುತ್ತಿರುವ ಪ್ರವಾಸಿಗರು ಚಿಕ್ಕವರಂತೆ ಕಾಣುತ್ತಿದ್ದರು. ಇದನ್ನೆಲ್ಲ ನೋಡುತ್ತಿದ್ದ ಅವರಿಬ್ಬರ ಮುಖದಲ್ಲೀಗ ಯಾವುದೇ ಭಾವನೆಗಳಿಲ್ಲ. ನಿರ್ಭಾವುಕ ಮನಸ್ಸು. ಎಲ್ಲವೂ ಮೊದಲೇ ನಿರ್ಧರಿಸಿಕೊಂಡಂತಿತ್ತು. ತಾವೇನು ಮಾಡಲು ಹೊರಟಿದ್ದೇವೆ ಎಂಬ ಸ್ಪಷ್ಟ ಅರಿವು ಅವರಲ್ಲಿತ್ತು. ಹೊರಗಡೆ ಧಾವಂತ, ಬಸ್‌ಗಳ ಓಡಾಟ, ಆಟೋಗಳ ಹಾರ್ನ್, ಜನರ ಕೂಗಾಟಗಳೆಲ್ಲವೂ ಇವರ ಕಿವಿಗೆ ಬಿದ್ದರೂ, ಮನಸ್ಸಿನೊಳಗೆ ಹರಳುಗಟ್ಟುತ್ತಿದ್ದ ಅಂತಿಮ ಕ್ಷಣದ ಭಾವನೆಗಳಿಗೇನೂ ಭಂಗ ತರುತ್ತಿರಲಿಲ್ಲ. ಇಬ್ಬರು ಒಬ್ಬರ ಮುಖವನ್ನೊಮ್ಮೆ ನೋಡುತ್ತಾ, ಗುಮ್ಮಟದತ್ತ ದೃಷ್ಟಿ ಹಾಯಿಸುತ್ತಾ ನಿಂತಿದ್ದರು ಕಿಟಕಿಯ ಪಕ್ಕದಲ್ಲಿ.

ತಾನು ಸತ್ತ ಮೇಲೆ ತನ್ನ ಗೋರಿ ವೈಭವಯುತವಾಗಿರಬೇಕು ಎಂಬ ಮಹದಾಸೆಯಿಂದ ಬಿಜಾಪುರದ ಸುಲ್ತಾನ್ ಆದಿಲ್ ಶಾ ಬದುಕಿರುವಾಗಲೇ ಗೋಲ್ ಗುಂಬಜ್ ನಿರ್ಮಾಣ ಆರಂಭಿಸಿದ್ದ. ಆದರೆ, ಅದು ಪೂರ್ತಿಯಾಗುವ ಮೊದಲೇ ಅಸು ನೀಗಿದ. ಆತ, ಆತನ ಇಬ್ಬರು ಪತ್ನಿಯರಾದ ತಾಜ್ ಜಹಾನ್ ಬೇಗಮ್, ಅರೋಸ್ ಬೀಬಿ ಮತ್ತು ಪ್ರೇಯಸಿ ರಂಭಾ, ಮಕ್ಕಳು, ಮೊಮ್ಮಕ್ಕಳ ಗೋರಿಗಳು ಅದರಲ್ಲಿವೆ ಎಂಬ ಇತಿಹಾಸದ ಕಲ್ಪನೆ ಇಬ್ಬರಿಗೂ ಇತ್ತು. ಆದಿಲ್ ಶಾ ಮತ್ತು ರಂಭಾ ನಡುವಿನ ಪ್ರೇಮದ ಬಗ್ಗೆ ಅಷ್ಟೇನೂ ತಿಳಿವಳಿಕೆ ಇಲ್ಲದಿದ್ದರೂ, ಆಕೆಯೊಬ್ಬಳು ಅಪ್ರತಿಮ ಸುಂದರಿಯಾಗಿದ್ದಳು. ನೃತ್ಯಗಾತಿಯಾಗಿದ್ದ ಆಕೆಯನ್ನು ಆದಿಲ್ ಶಾ ತುಂಬ ಪ್ರೀತಿಸುತ್ತಿದ್ದ ಎಂಬುದನ್ನು ಗೂಗಲಿಂಗ್ ಮಾಡಿ ತಿಳಿದುಕೊಂಡಿದ್ದರು. ಆಗ್ರಾದಲ್ಲಿರುವ ತಾಜ್ ಮಹಲ್ ಪ್ರೇಮ ಸ್ಮಾರಕವಾಗಿ ವಿಶ್ವವಿಖ್ಯಾತವಾಗಿರುವಂತೆ ಈ ಗುಂಬಜ್ ಯಾಕೆ ಪ್ರೇಮ ಸ್ಮಾರಕವಾಗಲಿಲ್ಲ, ಪ್ರೇಮಿಗಳಿಗೊಂದು ವೇದಿಕೆಯಾಗಲಿಲ್ಲ ಎಂಬ ಪ್ರಶ್ನೆಗಳು ಆತನಲ್ಲಿ ಮೂಡುತ್ತಿದ್ದವು. ಹೈಸ್ಕೂಲ್‌ನಲ್ಲಿ ಓದಿದ್ದು ಬಿಟ್ಟರೆ ಇತಿಹಾಸ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ ಆತನಿಗೆ. ಆ ಲಾಡ್ಜ್‌ನ ಆ ಕ್ಷಣದಲ್ಲಿ ಆತನಿಗೆ ಅನಿಸಿದ್ದು; ನಮ್ಮ ಪ್ರೇಮದಂತೆ ಅವರಿಬ್ಬರದ್ದೂ ಎಲ್ಲರಿಂದಲೂ ನಿಕೃಷ್ಟವಾಗಿರಬೇಕು ಇಲ್ಲವೇ ಬೇಕಂತಲೇ ಅವರ ಪ್ರೇಮ ಕಹಾನಿಯನ್ನು ಇತಿಹಾಸಕಾರರು ಸ್ಪಷ್ಟವಾಗಿ ದಾಖಲಿಸಿರಲಿಕ್ಕಿಲ್ಲ... ಹೀಗೆ ನಾನಾ ಯೋಚನೆಗಳಲ್ಲಿ ಮುಳುಗಿದ್ದ ಆತನಿಗೆ, ‘‘ಏನ್ ಯೋಚ್ನೆ ಮಾಡುತ್ತಿದ್ದೀಯಾ?’’ ಎಂದು ಅವನ ಯೋಚನಾಸರಣಿಗೆ ಬ್ರೇಕ್ ಹಾಕಿದಳು. ‘‘ಏನಿಲ್ಲ, ಆದಿಲ್ ಶಾ ಮತ್ತು ರಂಭಾ ಪ್ರೇಮದ ಬಗ್ಗೆ,’’ ಅಂದ ತಲೆ ತಗ್ಗಿಸಿಕೊಂಡೇ. ‘‘ನಮ್ಮ ಪ್ರೀತಿ ಹೇಗೆ ನಮ್ಮವರಿಗೆ ಅನಿಷ್ಟವಾಗಿ ಕಂಡಿದೆಯೋ, ತೀರಾ ಇಂಪಾರ್ಟೆನ್ಸ್ ಇಲ್ಲವೋ ಹಾಗೆ ಇರಬೇಕು ಅವರದ್ದು,’’ ಕಿಟಕಿಯಿಂದಲೇ ಗುಮ್ಮಟವನ್ನು ದಿಟ್ಟಿಸುತ್ತಾ ಆಕೆ ಹೇಳಿದಾಗ, ಅರೇ... ಇವಳು ನನ್ನಂತೆ ಯೋಚಿಸುತ್ತಿದ್ದಾಳಲ್ಲ ಎಂದು ನಸು ನಕ್ಕ. ಅವರಿಬ್ಬರು ಮತ್ತೆ ಅದೇ ಗುಮ್ಮಟದತ್ತ ಚಿತ್ತ ಹಾಯಿಸಿದರು. ಸಂಜೆ ಆಗೋವರೆಗೂ ಗುಮ್ಮಟವನ್ನು ದಿಟ್ಟಿಸಿ ನೋಡುತ್ತ ಇರಬೇಕೆಂದು ನಿರ್ಧರಿಸಿದಂತೆ ಆ ದೃಷ್ಟಿ.
ಬೆಂಗಳೂರಿನಲ್ಲಿ ಪ್ರತಿಷ್ಠತ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ ಅವರಿಬ್ಬರ ಮಧ್ಯೆ ಪ್ರೇಮಾಂಕುರ ಹೇಗೆ ಆಯಿತು ಎಂಬುದಕ್ಕೆ ಉತ್ತರವಿಲ್ಲ. ಅವನು ನಾರ್ಥಿ. ಆದರೆ, ಬೆಂಗಳೂರಿಗೆ ಬಂದು ಐದು ವರ್ಷದಲ್ಲಿ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದ. ಅವಳು ಮೈಸೂರಿನವಳು. ಇಬ್ಬರ ಮಧ್ಯೆ ಇರುವ ಓದುವ ಹವ್ಯಾಸ ಅವರನ್ನು ಒಂದುಗೂಡಿಸಿತ್ತು. ತಾವು ಓದಿದ ಪುಸ್ತಕಗಳ ಬಗ್ಗೆ ವಿಮರ್ಶೆ ಮಾಡಿಕೊಳ್ಳುತ್ತಾ, ಕಾಫಿ ಡೇನಲ್ಲಿ ತಾಸುಗಟ್ಟಲೇ ಕಳೆಯುವುದು ಇಬ್ಬರಿಗೂ ಇಷ್ಟ. ಇಷ್ಟಾನಿಷ್ಟಗಳು ಒಂದಾದ ಮೇಲೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಹುಡುಗ ಉತ್ತರ ಭಾರತೀಯ ಎಂಬ ಕಾರಣವೇ ಅವಳ ಮದುವೆಗೆ ದೊಡ್ಡ ಅಡ್ಡಿಯಾಯಿತು. ಇಂಥದೊಂದು ‘ಕಾರಣ’ ತಮ್ಮಿಬ್ಬರನ್ನು ದೂರ ಮಾಡಬಹುದು ಎಂದೂ ಯೋಚಿಸಿರಲಿಲ್ಲ. ಆದರೆ, ಅದೇ ಸತ್ಯ ಎಂದು ಗೊತ್ತಾದ ಮೇಲೆ, ಬೇರೆ ಬೇರೆಯಾಗಿ ಬದುಕುವುದಕ್ಕಿಂತ ಸಾಯುವುದೇ ಲೇಸೆಂದು ದೂರದ ಬಿಜಾಪುರಕ್ಕೆ ಬಂದು ತಮ್ಮ ಅಂತ್ಯದ ಕ್ಷಣಗಳನ್ನು ಲೆಕ್ಕ ಹಾಕುತ್ತಿದ್ದರು.
ಬಿಜಾಪುರದ ಅಷ್ಟು ಸ್ಥಳಗಳನ್ನೂ ಒಂದು ಇಡೀ ದಿನ ನೋಡಿದ್ದ ಅವರು ಗೋಲ್ ಗುಂಬಜ್ ಮಾತ್ರ ನೋಡಲು ಹೋಗಿರಲಿಲ್ಲ. ಲಾಡ್ಜ್‌ನ ಕಿಟಕಿಯಿಂದಲೇ ಆ ಗುಮ್ಮಟವನ್ನು ತಮ್ಮ ಕಣ್ಣು ತುಂಬಿಕೊಳ್ಳುತ್ತಿದ್ದರು.
ಕೋಣೆಯ ಬಾಗಿಲಿಂದ ಕಟ.. ಕಟ.. ಕಟ.. ಎಂಬ ಶಬ್ಧ ಬಂದಾಗಲೇ ತಾವು ಚಹಾಗೆ ಆರ್ಡರ್ ಮಾಡಿದ್ದು ನೆನಪಾಗಿ, ಬಾಗಿಲು ತರೆದ ಆತ. ಎದುರಿಗಿದ್ದ ಯುವಕನ ಮುಖದಲ್ಲಿ ಮಂದಹಾಸ ನರ್ತಿಸುತ್ತಿತ್ತು. ‘‘ಸರ್, ನಿಮ್ಮ ಚಹಾ..’’ ಎನ್ನುತ್ತಾ ಒಳ ಬಂದು ಟೀಫಾಯಿ ಮೇಲಿಟ್ಟು ನಿಂತ. ಅವರಿಬ್ಬರ ಮುಖವನ್ನೊಮ್ಮೆ ನೋಡಿದ, ಹೋಗು ನೀನು ಇನ್ನು ಎಂಬ ಸೂಚನೆ ಅದರಲ್ಲಿತ್ತು. ‘‘ಸರ್... ತಪ್ಪು ತಿಳಿದುಕೊಳ್ಳುವುದಿಲ್ಲ ಎಂದರೆ ಒಂದು ಮಾತು ಹೇಳಲಾ,’’ ಎಂದ. ಯಾರ ಜತೆ ಮಾತನಾಡಲೂ ಮನಸ್ಸಿಲ್ಲದ ಅವರು ಇವನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರ ಉತ್ತರಕ್ಕೂ ಕಾಯದೆ, ಮಾತು ಮುಂದುವರಿಸಿದ ಆ ಯುವಕ, ‘‘ಸರ್... ನೀವು ಇಲ್ಲಿಗೆ ಬಂದಾಗಿನಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ. ನಿಮ್ಮಿಬ್ಬರ ನಿರ್ಧಾರ ಏನೆಂದು ನಾನು, ಈ ಮೂರು ವರ್ಷಗಳ ಹಿಂದೆ ನನಗಾದ ಅನುಭವದಿಂದಲೇ ಗ್ರಹಿಸಬಲ್ಲೆ,’’ ಎಂದು ಸುಮ್ಮನಾದ. ಅವರೇನೂ ಇವನ ಮಾತಿಗೆ ಅಂಥ ಆಸಕ್ತಿ ತೋರಿಸಲಿಲ್ಲ. ಆದರೂ, ಮತ್ತೆ ಮುಂದುವರಿದ ಆ ಯುವಕ, ‘‘ನಿಮಗೆ ಇಷ್ಟ ಇಲ್ಲದಿದ್ದರೂ ನನ್ನದೊಂದು ಕತೆ ಹೇಳ್ತಿನಿ ಕೇಳಿ; ನಾನು ಮತ್ತು ನನ್ನ ಗೆಳತಿ ಇಬ್ಬರು ನಿಷ್ಕಲ್ಮಷ ಪ್ರೀತಿಯ ತೂಗುಯ್ಯಲೆಯಲ್ಲಿ ಜೀಕುತ್ತಿದ್ದೆವು. ನಮಗೆ ನಮ್ಮದೇ ಪ್ರಪಂಚ. ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದೆವು. ಅವಳು ನನಗಿಂತಲೂ ಬುದ್ಧಿವಂತೆ, ಗುಣವಂತೆ. ನಮ್ಮ ಪ್ರೀತಿಯಲ್ಲಿ ಲವಲೇಶವೂ ಕಲ್ಮಶವಿರಲಿಲ್ಲ. ಆದರೆ, ಗೊತ್ತಲ್ಲ.. ಈ ಜಗತ್ತು ಪ್ರೀತಿಸುವವರನ್ನು ಹೇಗೆ ನೋಡುತ್ತದೆ ಎಂದು. ನಮ್ಮಿಬ್ಬರ ಪ್ರೀತಿಗೆ ಅಡ್ಡವಾಗಿದ್ದು ಆಕೆಯ ಅಪ್ಪನ ಶ್ರೀಮಂತಿಕೆ. ಆದರೆ, ಅವಳು ಅಂಥ ಶ್ರೀಮಂತಿಕೆಯನ್ನು ಧಿಕ್ಕರಿಸಿ ನನ್ನೊಂದಿಗೆ ಬರಲು ಸಿದ್ಧಳಿದ್ದಳು. ನನಗೆ ಧೈರ್ಯ ಇರಲಿಲ್ಲ. ನಾವಿಬ್ಬರು ನೀವು ಈಗ  ಕೈಗೊಂಡಿರುವ ನಿರ್ಧಾರವನ್ನೇ ಅಂದು ಮಾಡಿ, ಆ ಗುಂಬಜ್ ಸ್ವಲ್ಪ ದೂರದಲ್ಲಿ ಇನ್ನೊಂದು ಗುಮ್ಮಟವಿದೆ. ಅಲ್ಲಿಗೆ ಯಾರೂ ಬರಲ್ಲ. ಆ ಗುಮ್ಮಟ ಏರಿ ಮೇಲಿಂದ ಹಾರಿದೆವು. ಆದರೆ, ನನ್ನ ನಸೀಬು ಚೆನ್ನಾಗಿರಲಿಲ್ಲ; ನಾನು ಬದುಕಿದೆ. ಅವಳು ನನ್ನ ಪ್ರೀತಿಗಾಗಿ ಜೀವ ಕೊಟ್ಟಳು. ಬಿದ್ದಿದ್ದಷ್ಟೆ ಗೊತ್ತಿದ್ದ ನನಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಆಗಲೇ ನಿರ್ಧರಿಸಿದ್ದೆ ಸಾವಿಗಿಂತ ಬದುಕು ಮುಖ್ಯ. ಆಕೆಯ ಮಾತು ಕೇಳಿದ್ದರೆ ಎಲ್ಲಿಗಾದರೂ ಹೋಗಿ ಬದುಕಬಹುದಿತ್ತು. ನನ್ನ ಹೇಡಿತನದಿಂದ ಆಕೆ ಪ್ರಾಣಬಿಡಬೇಕಾಯಿತು. ಪ್ರೀತಿ ಮಾಡಿದವರಿಗೆ ಸಾವೇ ಪರಿಹಾರವಲ್ಲ. ಅಂದು ಊರು ಬಿಟ್ಟವನು ಇನ್ನೂ ಊರಿಗೆ ಹೋಗಿಲ್ಲ. ಈ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಾ, ‘ನಿಮ್ಮ ಹಾಗೆ’ ಬರುವವರಿಗೆ ನನ್ನ ಕತೆಯನ್ನು ಹೇಳುತ್ತೇನೆ. ಗೋರಿಗಳ ಮೇಲೆ ಎದ್ದಿರುವ ಆ ಗುಮ್ಮಟವಿದೆಯಲ್ಲ ಅದು ನಮ್ಮ ಬದುಕಿಗೆ ಸ್ಫೂರ್ತಿಯಾಗಬೇಕೆ ಹೊರತು ಸಾವಿಗಲ್ಲ,’’ ಎನ್ನುತ್ತಾ ಅವರಿಬ್ಬರ ಮುಖವನ್ನೊಮ್ಮೆ ನೋಡಿ ತನ್ನದೆ ಆದ ಮಂದಹಾಸ ಬೀರಿ, ಹೊರಟು ಹೋದ.
ಅವರಿಬ್ಬರ ಮುಖದಲ್ಲೀಗ ಪಶ್ಚಾತ್ತಾಪದ ಗೆರೆಗಳು ಕಾಣಲಾರಂಭಿಸಿದ್ದವು. ಆತ ಹೇಳಿದ ಕತೆ ಅವರಿಬ್ಬರಲ್ಲೂ ಹೊಸ ಚೈತನ್ಯ ಉಂಟು ಮಾಡಿತ್ತು. ಸಾವಿಗಿಂತ ಬದುಕು ಶ್ರೇಷ್ಠ. ಪ್ರೀತಿಯ ವೈಫಲ್ಯಕ್ಕೆ ಸಾವು ಅಂತ್ಯವಲ್ಲ ಎಂಬ ನಿರ್ಧಾರಕ್ಕೆ ಬಂದವರೇ ಗೋಲ್ ಗುಂಬಜ್ ನೋಡಲು ಹೊರಟರು. ಅಷ್ಟೊತ್ತಿಗಾಗಲೇ ಬೆಂಕಿಯುಗುಳುತ್ತಿದ್ದ ಸೂರ್ಯ ತನ್ನ ಪ್ರತಾಪವನ್ನು ಬಿಟ್ಟು, ಪಡುವಣದಲ್ಲಿ ನಿಧಾನವಾಗಿ ಜಾರುತ್ತಿದ್ದ. ಬೀಸುತ್ತಿದ್ದ ತಂಪನೆಯ ಗಾಳಿಯೂ ಇಬ್ಬರಲ್ಲೂ ಹೊಸ ಭರವಸೆಯನ್ನು ಮೂಡಿಸುತ್ತಿತ್ತು. ಅವರ ಮುಖದಲ್ಲೀಗ ಮೊದಲಿನ ನಿರ್ಭಾವುಕತೆ ಇಲ್ಲ. ಹೊಸ ಹುಮ್ಮಸ್ಸಿನ ಅಲೆಗಳು ನಗುವಿನ ರೂಪದಲ್ಲಿ ಹೊರ ಬರುತ್ತಿವೆ. ರಸ್ತೆಯಾಚೆಗಿನ ಗುಂಬಜ್‌ನ ಮುಖ್ಯದ್ವಾರದಲ್ಲಿ ಜನಜಂಗುಳಿ, ಎಲ್ಲರ ಮುಖದಲ್ಲಿ ಸಂತೋಷದ ಓಕುಳಿ. ಪಿಸುಮಾತನ್ನು ಪ್ರತಿಧ್ವನಿಸುವ ಗುಮ್ಮಟ ಅಲ್ಲಿದ್ದವರಿಗೆಲ್ಲ ಅಚ್ಚರಿಯ ಭಂಡಾರ. ಗೋಲ್ ಗುಂಬಜ್ ಒಳ ಹೊಕ್ಕ ಇಬ್ಬರು ಜೋರಾಗಿ ‘‘ನಾವು ಸಾಯಲ್ಲ... ಬದುಕುತ್ತೇವೆ...’’ ಕೂಗಿದರು. ಅವರಿಬ್ಬರು ಈ ಮಾತುಗಳು ಪ್ರತಿಧ್ವನಿಗೊಂಡು ಅಲೆ ಅಲೆಯಾಗಿ ತೇಲಿ ಬಂದವು. ಸುತ್ತಮುತ್ತಲಿನವರು ಒಂದು ಕ್ಷಣ ಇವರಿಬ್ಬರನ್ನು ನೋಡಿ, ಪ್ರತಿಧ್ವನಿಸುವ ಈ ಗುಮ್ಮಟದ ಸೌಂದರ್ಯದಲ್ಲಿ ಮಗ್ನರಾದರು. ಮನಸ್ಸು ಹಗುರವಾಗೋವರೆಗೂ ಇಬ್ಬರು ಕೂಗುತ್ತಲೇ ಇದ್ದರು. ಕೂಗಿ ಕೂಗಿ ಧ್ವನಿ ತುಸು ದುರ್ಬಲವಾದ ಬಳಿಕ ಆ ಗುಮ್ಮಟ ಬಿಟ್ಟು ಹೊರ ಬಂದಾಗ ಇಬ್ಬರ ಮನಸ್ಸು ಆಕಾಶದಲ್ಲಿ ತೇಲಾಡುವಷ್ಟು ಹಗುರವಾಗಿತ್ತು. ಅವರಲ್ಲೀಗ ಬದುಕುವ ಛಲ ನೂರ್ಮಡಿಸಿತ್ತು. ಮತ್ತೆಂದೂ ಇಂಥ ಕಟು ನಿರ್ಧಾರಕ್ಕೆ ಬರಬಾರದು ಎಂದು ನಿಶ್ಚಯಿಸಿ, ಮುಖ್ಯದ್ವಾರ ದಾಟಿ ಹೊರಬಂದರು.
ಆಕೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಆ ಚಿಕ್ಕ ಸೀಸೆ ಚರಂಡಿಯ ಪಾಲಾಗಿತ್ತು.


(ಈ ಲೇಖನ ವಿಜಯ ಕರ್ನಾಟಕದ ಜುಲೈ 31,2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)