Health ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Health ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮೇ 11, 2020

Learn to Live With Corona virus ಕೊರೊನಾ ಜತೆಗೇ ನಡೆಯಲಿ ಜೀವನ

- ಮಲ್ಲಿಕಾರ್ಜುನ ತಿಪ್ಪಾರ/ಕಿರಣ್ ಕುಮಾರ್ ಡಿ.ಕೆ

Yes, the show must go on...
ನಾವೀಗ ಕೊರೊನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಲೇಬೇಕಿದೆ. ಯಾಕೆಂದರೆ, ಸದ್ಯಕ್ಕೆ ಈ ಕೊರೊನಾಗೆ ಪರಿಹಾರವಿಲ್ಲ. ಇರುವ ಪರಿಹಾರ ಮಾರ್ಗಗಳನ್ನು ಅಳವಡಿಸಿ, ಬಳಸಿ ನೋಡಿದ್ದಾಯಿತು. ಈ ಅನುಭವ ಹಾಗೂ ಈ ಹಿಂದಿನ ರೋಗಗಳ ಇತಿಹಾಸದ ಹಿನ್ನೆಲೆಯಲ್ಲಿನಾವೀಗ ಕಂಡುಕೊಳ್ಳಬೇಕಾಗಿರುವ ಸತ್ಯ; ನಮ್ಮ ಬದುಕು ಇನ್ನೇನಿದ್ದರೂ ಕೊರೊನಾ ಜೊತೆಗೇ ನಡೆಯಬೇಕು. ಆದರೆ, ಅದಕ್ಕೊಂದು ಕ್ರಮ ವಿಧಿಸಿಕೊಳ್ಳಬೇಕಷ್ಟೇ.
ಕೊರೊನಾ ವೈರಸ್ಗಿಂತಲೂ ಮಿಗಿಲಾದ, ಅತಿಭಯಂಕರ ವೈರಸ್ಗಳನ್ನು ಈ ಜಗತ್ತು ಕಂಡಿದೆ. ಕಡು ಕಷ್ಟ, ನಷ್ಟ ಅನುಭವಿಸಿದೆ. ಅಂಥ ಕಾಯಿಲೆಗಳನ್ನೂ ಅರಗಿಸಿಕೊಂಡಿದೆ, ಅವುಗಳ ವಿರುದ್ಧ ಜಯ ಸಾಧಿಸಿದೆ. ಸಿಡುಬು, ಮಾರ್ಬರ್ಗ್ ವೈರಸ್, ಎಬೋಲಾ ವೈರಸ್, ರೇಬಿಸ್, ಎಚ್ಐವಿ, ಹಂಟಾ ವೈರಸ್, ಇನ್ಫ್ಲುಂಯೆಜಾ, ಡೆಂಗೆ, ರೋಟಾ ವೈರಸ್, ಸಾರ್ಸ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ಲೇಗ್, ಕಾಲರಾದಂಥ ಕಾಯಿಲೆಗಳು ಶತಮಾನಗಳವರೆಗೂ ನರಸಂಕುಲವನ್ನು ಹಿಂಡಿ ಹಿಪ್ಪೆ ಮಾಡಿವೆ. ಆದರೂ, ಮನುಷ್ಯ ತನ್ನ ಬದುಕನ್ನು ರೂಪಿಸಿಕೊಳ್ಳಲಿಲ್ಲವೇ? ನಾಗರಿಕತೆಯನ್ನು ವಿಸ್ತರಿಸಲಿಲ್ಲವೇ? ಅಸಾಧ್ಯವಾದುದನ್ನು ಸಾಧಿಸಲಿಲ್ಲವೇ? ಈಗಲೂ ಹಾಗೆಯೇ, ನಾವು ಈ ಕೊರೊನಾ ಜತೆಗೆ ಬದುಕುವುದನ್ನು ರೂಡಿಸಿಕೊಳ್ಳಲೇಬೇಕು.
ಯಾವುದೇ ಹೊಸ ವೈರಸ್ನಿಂದ ಕಾಯಿಲೆ ಹುಟ್ಟಿಕೊಂಡಾಗ ಇಡೀ ಜಗತ್ತು ತಲ್ಲಣಗೊಳ್ಳುವುದು ಸಹಜ. ಈಗಲೂ ಹಾಗೆಯೇ ಆಗುತ್ತಿದೆ. ನಾವೆಲ್ಲರೂ ಭಯದಿಂದಲೇ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೇವೆ. ಈ ಹಿಂದೆ ತಲ್ಲಣಗೊಳಿಸಿದ್ದ ವೈರಸ್ಗಳಿಗೆ ಹೋಲಿಸಿದರೆ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ತುಂಬ ಕಡಿಮೆ. ಫ್ಲೂನಿಂದಲೇ ಪ್ರತಿ ವರ್ಷಕ್ಕೆ 10ರಿಂದ 15 ಸಾವಿರ ಜನರು ಸಾಯುತ್ತಾರೆ, ರಸ್ತೆ ಅಪಘಾತಗಳಲ್ಲಿಸಾಯುವರೂ ಸಂಖ್ಯೆ ಇದಕ್ಕಿಂತ ಎರಡು ಪಟ್ಟು ಹೆಚ್ಚು. ಇದಾವುದು ನಮಗೆ ಭಯವನ್ನು ಹುಟ್ಟಿಸುವುದಿಲ್ಲ. ಹೊಸದಾಗಿ ಕಾಡುತ್ತಿರುವ ಈ ಕೊರೊನಾ ಮಾತ್ರ ಎಲ್ಲಿಲ್ಲದ ಭೀತಿಯನ್ನು ಹುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ- ಮದ್ದಿಲ್ಲದಿರುವುದು ಮತ್ತು ಅತ್ಯಂತ ವೇಗವಾಗಿ ಹರಡುವುದು. ಆದರೆ, ಒಂದು ಮಾತನ್ನು ನೆನಪಿಡಿ. ಕೊರೊನಾದಿಂದಲೇ ನಮ್ಮ ಬದುಕು ನಿಂತು ಹೋಗುವುದಿಲ್ಲ; ಜಗತ್ತು ನಾಶವಾಗುವುದಿಲ್ಲ. ವಿನಾಕಾರಣ ಭಯಪಡಬೇಕಾದ ಅಗತ್ಯವಿಲ್ಲ. ಇದೇ ಅಭಿಪ್ರಾಯವನ್ನು ಪದ್ಮಶ್ರೀ ಪುರಸ್ಕೃತ ಖ್ಯಾತ ವೈದ್ಯ ಬಿ.ಎಂ. ಹೆಗ್ಡೆ ಅವರು ಹೊಂದಿದ್ದಾರೆ. ಸಂದರ್ಶನವೊಂದರಲ್ಲಿಅವರು, ‘‘ಕೊರೊನಾ ಭೂತವಲ್ಲ. ಹೆದರಬೇಡಿ. ಅದೊಂದು ಕಾಯಿಲೆ. ಬರುತ್ತದೆ. ಹೋಗುತ್ತದೆ. ಹಾಗಂತ ನಿರ್ಲಕ್ಷ ್ಯ ಮಾಡುವುದು ಬೇಡ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಎಚ್ಚರಿಕೆ ಇರಲಿ,’’ ಎನ್ನುತ್ತಾರೆ.
ಹೆಗ್ಡೆ ಅವರ ಮಾತುಗಳು ಅಕ್ಷ ರಶಃ ಸತ್ಯ. ನಮ್ಮೊಳಗೆ ಹುಟ್ಟುವ ಹೆದರಿಕೆ ನಮ್ಮನ್ನು ಕೊಂದು ಹಾಕುತ್ತದೆ. ಹಾಗಂತ, ‘ತಲೆ ಗಟ್ಟಿ ಇದೆ ಎಂದು ಬಂಡೆಗಲ್ಲಿಗೆ ಡಿಕ್ಕಿ ಹೊಡೆಯುವ ಅಗತ್ಯವಿಲ್ಲ’. ಕಾರಣವಿಲ್ಲದೇ ಕೊರೊನಾ ಕುರಿತು ಭಯಗೊಳ್ಳುವುದು ಬೇಡ. ಭವಿಷ್ಯದ ಸ್ಥಿತಿಯನ್ನು ನೆನೆದುಕೊಂಡು ನಮ್ಮೊಳಗಿನ ಧೀಃಶಕ್ತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ.



ಲಾಕ್ಡೌನ್ವೊಂದೇ ಪರಿಹಾರವಲ್ಲ
ಕೊರೊನಾ ನಿಯಂತ್ರಣಕ್ಕೆ ಈಗಿರುವ ಸದ್ಯ ಪರಿಹಾರ ‘ಬ್ರೇಕ್ ದಿ ಚೈನ್’ ಅಂದರೆ, ಸೋಂಕಿತರನ್ನು ಪ್ರತ್ಯೇಕವಾಗಿಸಿ, ವೈರಸ್ ಹರಡುವುದನ್ನು ತಡೆಯುವುದು. ಅದಕ್ಕಾಗಿ ಇಡೀ ದೇಶವನ್ನು ಲಾಕ್ಡೌನ್ ಮಾಡಿ, ಮೂರು ಬಾರಿ ಅದನ್ನು ವಿಸ್ತರಿಸಲಾಗಿದೆ. ಆದರೆ, ಇದೊಂದೇ ಪರಿಹಾರವಲ್ಲ. ಲಾಕ್ಡೌನ್ ವಿಸ್ತರಿಸುತ್ತ ಹೋದರೆ ನಮ್ಮ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದು, ಇಡೀ ದೇಶವೇ ನರಳಬೇಕಾಗಬಹುದು. ಈಗಾಗಲೇ, ಲಾಕ್ಡೌನ್ ಎಫೆಕ್ಟ್ ಅನ್ನು ದೇಶ ಅನುಭವಿಸುತ್ತಿದೆ. ಹಾಗಾಗಿ, ನಮ್ಮ ಮುಂದಿರುವ ಏಕೈಕ ದಾರಿ, ಕೊರೊನಾದೊಂದಿಗೆ ಬದುಕುವುದು. ‘‘ನಾವಿನ್ನು ಕೊರೊನಾ ಜತೆಗಿನ ಬದುಕನ್ನು ಕಲಿಯಬೇಕಿದೆ,’’ ಎಂದು ಆರೋಗ್ಯ ಸಚಿವಾಲಯ ಹೇಳಿದ್ದು ಈ ನೆಲೆಯಲ್ಲಿ. ಯಾಕೆಂದರೆ, ಲಾಕ್ಡೌನ್ ಹೊರತಾಗಿಯೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂದರೆ, ಅದು ತನ್ನ ತುತ್ತ ತುದಿ ತಲುಪಿಯೇ ಕೆಳಗಿಳಿಯುವುದು ಈಗಿನ ಟ್ರೆಂಡ್ ನೋಡಿದರೆ ಗೊತ್ತಾಗುತ್ತದೆ. ಈಗಾಗಲೇ ಚೀನಾ, ಇಟಲಿ, ಇರಾನ್, ಸ್ಪೇನ್ ರಾಷ್ಟ್ರಗಳಲ್ಲೂಹೀಗೆ ಆಗಿದೆ. ಅಲ್ಲೆಲ್ಲಈಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.

ಮದ್ದಿದ್ದರೆ ಬೇರೆಯಾಗಿರುತ್ತಿತ್ತು ಕತೆ
ಒಂದು ವೇಳೆ ಕೊರೊನಾ ವೈರಸ್ಗೆ ಮದ್ದು ಇದ್ದರೆ ಈಗಿರುವ ಪರಿಸ್ಥಿತಿ ಉದ್ಭವ ಆಗುತ್ತಿರಲಿಲ್ಲ. ಆರ್ಥಿಕ ಕುಸಿತವೂ ಇರುತ್ತಿರಲಿಲ್ಲ. ಹಾಗಾಗಿ, ಸಾಮಾಜಿಕ ಅಂತರೊಂದಿಗೆ, ಕೊರೊನಾ ಜೊತೆಗೆ ನಮ್ಮ ಜೀವನವನ್ನು ಮರು ರೂಪಿಸಿಕೊಳ್ಳಬೇಕು. ಈಗಿರುವ ಪರಿಹಾರ ಎಂದರೆ, ಎಷ್ಟು ಸಾಧ್ಯವೇ ಅಷ್ಟು ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಡಾ. ಬಿ.ಎಂ. ಹೆಗ್ಡೆ ಅವರು ಈ ಕುರಿತು ಹೇಳಿರುವ ಸಂಗತಿಗಳು ಅನ್ವಯಕಗಳಾಗಿವೆ. ‘‘ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮೊದಲನೆಯದಾಗಿ ಸಾವಧಾನಿಯಾಗಿರಬೇಕು. ಮನಸ್ಸಿನಲ್ಲಿದ್ವೇಷ ಭಾವನೆ ಇರಬಾರದು. ಎಂಥದ್ದೇ ಸಂದರ್ಭದಲ್ಲಿಸಮಚಿತ್ತದಿಂದಿರಬೇಕು. ಎರಡನೆಯದಾಗಿ ಆಹಾರ. ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯನ್ನು ನಾವು ಅನುಸರಿಸಿದರೆ ಒಳ್ಳೆಯದು. ಮೂರನೆಯದು ವಿಶ್ರಾಂತಿ. ದೇಹಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲವಿಶ್ರಾಂತಿ ಅಗತ್ಯ. ಹೀಗೆ ಮಾಡಿದರೆ, ಖಂಡಿತವಾಗಿಯೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಒಂದೊಮ್ಮೆ ವೈರಸ್ ಸೋಂಕಿತವಾದರೂ ನಾವುದನ್ನು ಮೆಟ್ಟಿ ನಿಲ್ಲಬಹುದು’’ ಎನ್ನುತ್ತಾರೆ ಡಾ. ಬಿ.ಎಂ ಹೆಗ್ಡೆ ಅವರು.

ಉಳಿದಿರುವ ದಾರಿಗಳಾದರೂ ಯಾವುವು?
ಮದ್ದಿಲ್ಲದೇ ಕೊರೊನಾವಂತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ನಮಗೆ ಉಳಿದಿರುವ ದಾರಿಗಳಾದರೂ ಏನಿವೆ? ಒಂದೊ, ಕೊರೊನಾವನ್ನು ಹರ್ಡ್ ಇಮ್ಯುನಿಟಿ (ಸಮುದಾಯ ಪ್ರತಿರೋಧ ಶಕ್ತಿ) ಮೂಲಕ ತಡೆಯಬಹುದು. ಭಾರತದಂಥ ರಾಷ್ಟ್ರದಲ್ಲಿಅದು ದೊಡ್ಡ ಅನಾಹುತವನ್ನೇ ಸೃಷ್ಟಿಸಬಲ್ಲದು. ಇದನ್ನು ಹೊರತುಪಡಿಸಿದರೆ, ಸೋಂಕು ತಗುಲಿಸಿಕೊಳ್ಳದಂತೆ ವೈಯಕ್ತಿಕ ನೆಲೆಯಲ್ಲಿನಾವೇ ಎಚ್ಚರ ವಹಿಸುವುದು. ಅಂದರೆ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸುವುದು. ಎಷ್ಟು ಸಾಧ್ಯವೋ ಅಷ್ಟು ಜನ ಜಂಗುಳಿಯಾಗದಂತೆ ನೋಡಿಕೊಳ್ಳುವುದು. ಮದ್ದು ಸಿಗೋವರೆಗೂ ಇವಿಷ್ಟೇ ಪರಿಹಾರಗಳು. ಅಲ್ಲಿತನಕ ನಾವು ಕೊರೊನಾದೊಂದಿಗೆ ಹೆಜ್ಜೆ ಹಾಕೋಣ.

(ಈ ಲೇಖನ ವಿಜಯ ಕರ್ನಾಟಕದ 2020 ಮೇ 11ರ ಸಂಚಿಕೆಯಲ್ಲಿ ಪ್ರಕಟವಾಗಿದೆ)