ಭಾನುವಾರ, ಮಾರ್ಚ್ 10, 2019

ಪ್ರಧಾನಿ ಹುದ್ದೆಗೇರಿದ ದಕ್ಷಿಣ ಭಾರತದ ಮೊದಲ ನಾಯಕ ಪಿ ವಿ ನರಹಸಿಂಹ ರಾವ್

ಸ್ವಲ್ಪ ಅವಧಿಗೆ ಅಧಿಕಾರ ವಂಚಿತವಾಗಿದ್ದ ಕಾಂಗ್ರೆಸ್‌ 1991ರ ಚುನಾವಣೆಯ ಮೂಲಕ ಮತ್ತೆ ಆಡಳಿತಕ್ಕೆ ಬಂತಾದರೂ ಈ ಮೊದಲಿದ್ದ ಧಾಡಸಿತನ ಇರಲಿಲ್ಲ. ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ರಾಜನ ಗತ್ತಿನಲ್ಲಿದ್ದ ಕಾಂಗ್ರೆಸ್‌ಗೆ ಇದೀಗ ಮೈತ್ರಿಯ ಆಸರೆ ಬೇಕಿತ್ತು. ಬಹುಶಃ ಈ ಚುನಾವಣೆಯಿಂದಲೇ, ನಿಜಾರ್ಥದ ಮೈತ್ರಿಕೂಟದ ರಾಜಕಾರಣದ ಶೆಕೆ ಆರಂಭವಾಯಿತು ಎನ್ನಬಹುದು. ಈ ಹಿಂದೆಯೂ ಕೂಟಗಳು ರಚನೆಯಾಗಿದ್ದವು. ಆದರೆ, ಅವು ಅನಿವಾರ್ಯತೆಗಳಾಗಿರಲಿಲ್ಲ. ಇನ್ನು ಚುನಾವಣೆಯ ಫಲಿತಾಂಶಕ್ಕೆ ಬಂದರೆ, ಕಾಂಗ್ರೆಸ್‌ 545 ಸ್ಥಾನಗಳ ಪೈಕಿ 244 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು. ಬಿಜೆಪಿ ಇದೇ ಮೊದಲ ಬಾರಿಗೆ ಮೂರಂಕಿ ದಾಟಿ, ಒಟ್ಟು 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್‌ ಶೇ.36.4ರಷ್ಟು ಮತ ಗಳಿಸಿದರೆ, ಬಿಜೆಪಿ ಮತ ಪ್ರಮಾಣ ಶೇ.20ರಷ್ಟಿತ್ತು. ಬಿಜೆಪಿ ನಂತರದ ಸ್ಥಾನದಲ್ಲಿ ಜನತಾದಳ(ನ್ಯಾಷನಲ್‌ ಫ್ರಂಟ್‌) 69, ಎಡಪಕ್ಷ ಗಳು 49 ಕ್ಷೇತ್ರಗಳಲ್ಲಿ ಜಯ ಕಂಡವು. 'ಮಂಡಲ್‌-ಮಂದಿರ' ವಿಷಯಗಳು ಚುನಾವಣಾ ವಸ್ತುಗಳಾದವು. ಜತೆಗೆ ಮತಗಳು ಕೂಡ ಧ್ರುವೀಕರಣಗೊಂಡವು. ವಿಶೇಷ ಎಂದರೆ, ಗಾಂಧಿ ಕುಟುಂಬದ ಹೊರತಾದ ಪ್ರಧಾನಿಯನ್ನು ಕಾಣಲು ಸಾಧ್ಯವಾಯಿತು. ಆಂಧ್ರ ಮೂಲದ ಪಿ.ವಿ.ನರಸಿಂಹ ರಾವ್‌ ಅವರು ಪ್ರಧಾನಿಯಾದರು. ನರಸಿಂಹ ರಾವ್‌ ಅವರ ಆಡಳಿತದಲ್ಲಿ ಎರಡು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದಾಗಿ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಉದಾರೀಕರಣಕ್ಕೆ ಮುಕ್ತ ಮಾಡಿದ್ದು. ಎರಡನೆಯದ್ದು, 1992ರ ಡಿಸೆಂಬರ್‌ನಲ್ಲಿ ಸಂಭವಿಸಿದ ಬಾಬರಿ ಮಸೀದಿ ಧ್ವಂಸ ಪ್ರಕರಣ. ಈ ಪೈಕಿ, ಮೊದಲನೆಯದ್ದು ಬೆಳವಣಿಗೆ ದೇಶದ ಆರ್ಥಿಕತೆ ಸದೃಢಗೊಳ್ಳಲು ಕಾರಣವಾಯಿತು. ಎರಡನೆಯ ಘಟನೆಯು ಇನ್ನೂ ತನ್ನ ವಿವಾದದ ಕಿಡಿಯನ್ನು ಹೊತ್ತಿಸಿಕೊಂಡೇ ಇದೆ. ಹಾಗೆಯೇ, ಈ ಬೆಳವಣಿಗೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ್ತಷ್ಟು ಲಾಭ ಮಾಡಿಕೊಟ್ಟಿತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದು ಗಮನಿಸಲೇಬೇಕಾದ ಸಂಗತಿ ಎಂದರೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡು ಶ್ರಿಪೆರಂಬದೂರಿಗೆ ಹೋದಾಗ ಎಲ್‌ಟಿಟಿಇ ಮಾನವ ಬಾಂಬ್‌ ಸ್ಫೋಟಕ್ಕೆ ಬಲಿಯಾದರು. ಇಡೀ ಜಗತ್ತಿನಲ್ಲೇ ಮಾನವ ಬಾಂಬ್‌ ಪ್ರಯೋಗವಾದದ್ದು ಇದೇ ಮೊದಲು.

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ಕಾಮೆಂಟ್‌ಗಳಿಲ್ಲ: