ಸೋಮವಾರ, ಮಾರ್ಚ್ 4, 2019

ಎಸ್‌ಪಿ ಜನತಾ ಪರಿವಾರದ ಮತ್ತೊಂದು ಟಿಸಿಲು

ಕಾಂಗ್ರೆಸ್‌ ಮತ್ತು ಬಿಜೆಪಿಯ ಹೊರತಾಗಿ ಸದ್ದು ಮಾಡುವ ಪ್ರಾದೇಶಿಕ ಪಕ್ಷ ಗಳ ಪೈಕಿ ಸಮಾಜವಾದಿ ಪಾರ್ಟಿ(ಎಸ್‌ಪಿ)ಯೂ ಒಂದು. ಉತ್ತರ ಪ್ರದೇಶದಲ್ಲಿ ಬುನಾದಿ ಹೊಂದಿರುವ ಎಸ್‌ಪಿ, ತನ್ನನ್ನು ತಾನು ಪ್ರಜಾಸತ್ತಾತ್ಮಕ ಸಮಾಜವಾದಿ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಭಾರತದ ರಾಜಕಾರಣದಲ್ಲಿ ಉತ್ತರ ಪ್ರದೇಶಕ್ಕೆ ವಿಶೇಷ ಸ್ಥಾನವಿದೆ. ಯಾಕೆಂದರೆ, ಈ ರಾಜ್ಯವೊಂದೇ 80 ಸೀಟುಗಳನ್ನು ತನ್ನ ಮಡಿಲೊಳಗೆ ಇಟ್ಟುಕೊಂಡಿದೆ. ಹಾಗಾಗಿ, ತಮ್ಮದೇ ಆದ ಅಸ್ತಿತ್ವ ಹೊಂದಿರು ಎಸ್‌ಪಿ, ಬಿಎಸ್‌ಪಿ ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಗಳು ರಚನೆಯಾದಾಗಲೆಲ್ಲ ಪ್ರಮುಖ ಪಾತ್ರ ನಿರ್ವಹಿಸಿವೆ. 2019ರ ಚುನಾವಣೆಯಲ್ಲೂ ಉಭಯ ಪಕ್ಷ ಗಳು ಮೈತ್ರಿಯೊಂದಿಗೆ ಕಣಕ್ಕಿಳಿಯುತ್ತಿರುವುದು ಇದಕ್ಕೆ ಸಾಕ್ಷಿ. ಜಯಪ್ರಕಾಶ್‌ ನಾರಾಯಣ್‌ ಅವರ ಚಳವಳಿಯಿಂದ ಉದಯಿಸಿದ್ದ ಜನತಾ ಪಾರ್ಟಿ ಮೂರು ವರ್ಷದ ಅಧಿಕಾರದ ಬಳಿಕ ಛಿದ್ರವಾಗಿ ಹೋಯಿತು. ಆಗ ಅನೇಕ ಪಕ್ಷ ಗಳು ತಲೆ ಎತ್ತಿದವು. ಆ ಪೈಕಿ ಎಸ್‌ಪಿಯೂ ಒಂದು. ತಮ್ಮ ಕಾರ್ಯಕರ್ತರಿಂದ ಪ್ರೀತಿಯಿಂದ 'ನೇತಾಜಿ' ಎಂದು ಕರೆಯಿಸಿಕೊಳ್ಳುವ ಮುಲಾಯಂ ಸಿಂಗ್‌ ಯಾದವ್‌ ಉತ್ತರ ಪ್ರದೇಶದಲ್ಲಿ ಪಕ್ಷ ವನ್ನು ಸಂಘಟಿಸಿ ಅದನ್ನು ಅಧಿಕಾರದವರೆಗೂ ಕೊಂಡೊಯ್ದರು. ನಾಲ್ಕು ಬಾರಿ ಬೇರೆ ಪಕ್ಷ ಗಳ ನೆರವಿನೊಂದಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೂ ಬಂದರು. ಹಾಗೆಯೇ, ದೇವೇಗೌಡ ಮತ್ತು ಐ.ಕೆ.ಗುಜ್ರಾಲ್‌ ನೇತೃತ್ವದ ಕೇಂದ್ರ ಸರಕಾರದಲ್ಲೂ ಎಸ್‌ಪಿ ಪ್ರಮುಖ ಪಾತ್ರ ನಿರ್ವಹಿಸಿತ್ತು. 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಹುಸಿಗೊಳಿಸಿದ ಎಸ್‌ಪಿ, ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಈ ಬಾರಿಯೂ ನೇತಾಜಿ ಸಿಎಂ ಆಗುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಮುಲಾಯಂ ಸಿಂಗ್‌ ಅವರು ತಮ್ಮ ಪುತ್ರ ಅಖಿಲೇಶ್‌ ಸಿಂಗ್‌ ಯಾದವರ್‌ ಅವರಿಗೆ ಪಟ್ಟ ಕಟ್ಟಿ ಮುಖ್ಯಮಂತ್ರಿ ಮಾಡಿದರು. ಅಂದ ಹಾಗೆ, ಮೊದಲ ಬಾರಿಗೆ ಎಸ್‌ಪಿ ಐದು ವರ್ಷಗಳ ಪೂರ್ತಿ ಉತ್ತರ ಪ್ರದೇಶದಲ್ಲಿ ಅಧಿಕಾರ ಚಲಾಯಿಸಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಎಸ್‌ಪಿಯೊಳಗೇ ದೊಡ್ಡ ಮಟ್ಟದ ಕೋಲಾಹಲ ಕೂಡ ನಡೆಯಿತು. ಸೈದ್ಧಾಂತಿಕವಾಗಿ ಎಸ್‌ಪಿ ಜಾತ್ಯತೀತ, ಸಮಾಜವಾದ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಎಸ್‌ಪಿ ಚುನಾವಣಾ ಗುರುತು ಸೈಕಲ್‌. ಅಖಿಲೇಶ್‌ ಸಿಂಗ್‌ ಯಾದವ್‌ ಈಗ ಪಕ್ಷ ವನ್ನು ಮುನ್ನಡೆಸುತ್ತಿದ್ದಾರೆ. 

ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.

ಕಾಮೆಂಟ್‌ಗಳಿಲ್ಲ: