ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಕಂದಮ್ಮಗಳಿಗೆ ಅವ್ವಳಾದ ಸಿಂಧುತಾಯಿ ಬದುಕೇ ಸಂಘರ್ಷ. ‘ಚಿಂದಿ’ಯಿಂದ ‘ಚಿನ್ನ’ದಂಥ ತಾಯಿ ಆಗೋವರೆಗಿನ ಕತೆ ಸ್ಫೂರ್ತಿದಾಯಕ.
- ಮಲ್ಲಿಕಾರ್ಜುನ ತಿಪ್ಪಾರ
‘ಎಲ್ಲೆಡೆಯೂ ತಾನಿರಲು ಸಾಧ್ಯವಿಲ್ಲಎಂದು ದೇವರು ತಾಯಿಯನ್ನು ಸೃಷ್ಟಿಸಿದ’ ಎಂಬ ಮಾತಿದೆ. ಈ ಮಾತು ಸಿಂಧುತಾಯಿ ಸಪಕಾಳ್ ವಿಷಯದಲ್ಲಿನಿಜವಾಗಿದೆ. ‘ಅನಾಥಾಚಿ ಆಯಿ’(ಅನಾಥರ ತಾಯಿ) ಎಂದು ಖ್ಯಾತರಾದ ಅವರು ಅನಾಥ ಮಕ್ಕಳಿಗೆ ಅಕ್ಷ ರಶಃ ದೇವರಾದರು, ತನ್ನ ಹೊಟ್ಟೆಯಲ್ಲಿಹುಟ್ಟಿದ ಮಕ್ಕಳಂತೆ ಸಾಕಿ, ಸಲುಹಿದರು. ಅವರು ತಮ್ಮ ಬದುಕಿನ ಪೂರ್ತಿ 1500ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಸರೆಯಾದರು. ಈ ಕುಟುಂಬ ಬೆಳೆದು ಈಗ ದೊಡ್ಡದಾಗಿದೆ. 282 ಅಳಿಯಂದಿರು, 47 ಸೊಸೆಯರು ಸೇರಿಕೊಂಡಿದ್ದಾರೆ.
‘ಅನಾಥಮಕ್ಕಳ ಅವ್ವ’ ಸಿಂಧುತಾಯಿ ಬದುಕು ಪೂರ್ತಿ ಸಂಘರ್ಷವೇ. ಆಕೆಯ ಜೀವನದ ಪ್ರತಿಪುಟದಲ್ಲೂದೌರ್ಜನ್ಯ, ಅವಮಾನ, ಹಿಂಸೆಯೇ ತುಂಬಿದೆ. ಆದರೂ ಧೃತಿಗೆಡದೇ ಅವರು ತಮ್ಮನ್ನು ತಾವು ರೂಪಿಸಿಕೊಂಡು, ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಸ್ವೀಕರಿಸುವವರೆಗಿನ ಪಯಣ ಯಾರಿಗಾದರೂ ಸ್ಫೂರ್ತಿಯಾಗಬಲ್ಲದು. ಅನಾಥರ ಪಾಲಿನ ದೈವ ಎನಿಸಿಕೊಂಡ ಸಿಂಧುತಾಯಿ, ಹಿಂದೊಮ್ಮೆ ಅನಾಥವಾಗಿಯೇ ಮನೆಯಿಂದ ಹೊರಹಾಕಲ್ಪಟ್ಟ ನತದೃಷ್ಟ ಹೆಣ್ಣುಮಗಳು!
1948 ನವೆಂಬರ್ 14ರಂದು ಮಹಾರಾಷ್ಟ್ರ ವಾರ್ಧಾ ಜಿಲ್ಲೆಯ ಪಿಂಪ್ರಿ ಮೆಘೇ ಹಳ್ಳಿಯ ಕಡುಬಡತನದ ಕುಟುಂಬವೊಂದರಲ್ಲಿಜನಿಸಿದರು. ಅಂದಿನ ಕಾಲದಲ್ಲಿಹೆಣ್ಣು ಮಕ್ಕಳು ಜನಿಸಿತೆಂದರೆ ಯಾರಿಗೂ ಸಂತೋಷವೇ ಇರುತ್ತಿರಲಿಲ್ಲ. ಸಿಂಧುತಾಯಿ ವಿಷಯದಲ್ಲಿಈ ಹಣೆಬರಹ ಬದಲಾಗಲಿಲ್ಲ. ಆದರೆ, ಎಂಥ ನಿಕೃಷ್ಟ ಸ್ಥಿತಿ ಎದುರಾಗಿತ್ತು ಎಂದರೆ, ಆ ಹೆಣ್ಣು ಮಗುವಿಗೆ ‘ಚಿಂದಿ’ ಎಂದು ಕರೆಯುತ್ತಿದ್ದರಂತೆ! ಇಂಥ ಮನಸ್ಥಿತಿಯ ಜನರು ಇರುವಾಗ ಸಿಂಧುತಾಯಿ ಬಾಲ್ಯ ಹೇಗೆ ಚೆನ್ನಾಗಿರಲು ಸಾಧ್ಯ? ನಾಲ್ಕನೇ ತರಗತಿ ಮುಗಿಯುತ್ತಿದ್ದಂತೆ, ನವರಾಂವ್ ಹಳ್ಳಿಯ 25 ವರ್ಷದ ಶ್ರೀಹರಿ ಸಪಕಾಳ್‌ಗೆ ಮದುವೆ ಮಾಡಿಕೊಟ್ಟರು. ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದಾತ. ಆದರೆ, ಹೆಂಡತಿಗೆ ವಿಪರೀತ ಕಾಟ ಕೊಡುತ್ತಿದ್ದ. ಸಿಂಧು ತಾಯಿ 20 ವರ್ಷಕ್ಕೆ ಬರುವಷ್ಟರ ಹೊತ್ತಿಗಾಗಲೇ ಎರಡು ಮಕ್ಕಳಗಾಗಿದ್ದವು. ಗಂಡನ ಕಿರುಕುಳವೂ ಮಿತಿಮೀರಿತ್ತು. ಸ್ಥಳೀಯ ಸಾಹುಕಾರನೊಬ್ಬ ಸಿಂಧುತಾಯಿ ಹೊಟ್ಟೆಯಲ್ಲಿದ್ದ ಮೂರನೇ ಮಗುವಿನ ಬಗ್ಗೆ ಪುಕಾರು ಹಬ್ಬಿಸಿದ. ಇದನ್ನೇ ಸತ್ಯ ಎಂದು ನಂಬಿದ ಗಂಡ ಇನ್ನಷ್ಟು ಕಿರುಕುಳ ನೀಡಲಾರಂಭಿಸಿದ. ಬಸುರಿಯಿದ್ದಾಗಲೇ ಆಕೆಯ ಹೊಟ್ಟೆಗೆ ಒದ್ದು, ದನದ ಕೊಟ್ಟಿಗೆಗೆ ಹಾಕುವ ಮೂಲಕ ವಿಕೃತಿ ಮೆರೆದಿದ್ದ. ದನಗಳು ತುಳಿದು ಸಾಯಿಸಲಿ ಎಂದೇ ಕೊಟ್ಟಿಗೆಗೆ ಹಾಕಿದ್ದಂತೆ. ಆದರೆ, ದನವೊಂದು ಬಸುರಿ ಸಿಂಧುತಾಯಿ ರಕ್ಷ ಣೆಗೆ ನಿಂತು ಬೇರೆ ಯಾವುದೇ ದನಗಳು ಹತ್ತಿರ ಸುಳಿಯದಂತೆ ನೋಡಿಕೊಂಡಿತಂತೆ. ಈ ವಿಷಯವನ್ನು ಸ್ವತಃ ಸಿಂಧುತಾಯಿ ಅವರು 2016ರಲ್ಲಿಹೇಳಿಕೊಂಡಿದ್ದಾರೆ.
ಸಿಂಧುತಾಯಿ ಬವಣೆಯ ಬದುಕು ಇಷ್ಟಕ್ಕೆ ನಿಲ್ಲಲಿಲ್ಲ. ಗಂಡನ ದೌರ್ಜನ್ಯಕ್ಕೆ ರೋಸಿ ಹೋಗಿ 10 ದಿನದ ಮಗುವಿನೊಂದಿಗೆ ತಂದೆ-ತಾಯಿ ಊರಿಗೆ ಹೋದರೆ, ಅಲ್ಲಿಯೂ ತಿರಸ್ಕಾರದ ಸ್ವಾಗತ. ತಂದೆ, ತಾಯಿ ಅವರನ್ನು ಒಳಗೇ ಬಿಟ್ಟುಕೊಳ್ಳಲಿಲ್ಲ. ಅಲ್ಲಿಂದ ಹೊರಬಿದ್ದ ಅವರಿಗೆ ಬದುಕಲೇಬೇಕೆಂಬ ಹಠ. ಅದಕ್ಕಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರೈಲ್ವೆ ನಿಲ್ದಾಣ, ಸ್ಮಶಾನಗಳೇ ಆಸರೆಗಳಾಗಿದ್ದವು. ಸ್ಮಶಾನದ ಹೆಣಗಳ ಮೇಲಿದ್ದ ಬಟ್ಟೆ, ಅನ್ನವೇ ಆಹಾರ, ಭಿಕ್ಷೆಯೇ ಮೃಷ್ಟಾನ್ನವಾಗಿತ್ತು.
ಭಿಕ್ಷ ಕರ ಜತೆಗೇ ಜೀವನ ಸಾಗಿತ್ತು. ರೈಲ್ವೆ ನಿಲ್ದಾಣದಲ್ಲಿಮಲಗಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ಯವ್ವನದಲ್ಲಿದ್ದ ತನ್ನನ್ನು ಮಗುವನ್ನು ಯಾರಾದರೂ ಅಪಹರಿಸಿದರೆ ಎಂಬ ಚಿಂತೆ ಎದುರಾಗುತ್ತಿದ್ದಂತೆ, ನಗರದ ಸ್ಮಶಾನಭೂಮಿ ಸುರಕ್ಷಿತ ತಾಣ ಎಂದರಿತು ಅಲ್ಲಿಗೆ ಹೋದರು. ಆ ದಿನಗಳು ತಮ್ಮ ಬದುಕಿನ ಅತ್ಯಂತ ಕೆಟ್ಟ ದಿನಗಳು ಎಂದ ಆಗಾಗ ನೆನೆಪಿಸಿಕೊಳ್ಳುತ್ತಿದ್ದರು ಅವರು. ಸ್ಮಶಾನದಲ್ಲಿದ್ದಾಗ ಹಸಿವು ಆದಾಗ ತಿನ್ನಲು ಏನೂ ಇರುತ್ತಿರಲಿಲ್ಲ. ಆದರೆ, ಹೊಟ್ಟೆಯ ಬೆಂಕಿಯನ್ನು ಆರಿಸಲು ಹೆಣದ ಬೆಂಕಿಯ ಸಹಾಯ ಪಡೆದುಕೊಳ್ಳದೇ ವಿಧಿಯೇ ಇರಲಿಲ್ಲ! ಸ್ಮಶಾನದಲ್ಲಿಯಾರೋ ನಾದಿದ ಗೋಧಿ ಹಿಟ್ಟನ್ನು ಗೋರಿಯ ಮೇಲೆ ಬಿಟ್ಟು ಹೋಗಿದ್ದರಂತೆ, ಅದು ಕೊಳೆಯುವ ಸ್ಥಿತಿಗೆ ತಲುಪಿತ್ತು. ಅದನ್ನೇ ನೀರಿನಲ್ಲಿಅದ್ದಿ, ಮುರಿದ ಮಡಿಕೆಯಲ್ಲಿಟ್ಟು ಹೆಣದ ಚಿತೆಯ ಮೇಲಿಟ್ಟು ರೊಟ್ಟಿ ಮಾಡಿ, ಹಸಿವು ನೀಗಿಸಿಕೊಳ್ಳಬೇಕಾದ ಊಹಾತೀತ ಪರಿಸ್ಥಿತಿಯನ್ನು ಅವರು ಎದುರಿಸಿದ್ದಾರೆ.
ಆ ಕೆಟ್ಟ ಪರಿಸ್ಥಿತಿಯೇ ಸಿಂಧುತಾಯಿಗೆ ಹೊಸ ಹುಟ್ಟು ನೀಡಿತು. ಯಾಕೆಂದರೆ, ಆಗಲೇ ಅವರು ನಿರ್ಧರಿಸಿದ್ದರಂತೆ, ತಾನು ಹೊಸ ಜೀವವನ್ನು ಆರಂಭಿಸಬೇಕು. ಬಾಳಿನಲ್ಲಿಬಂದಿದ್ದನ್ನು ಛಲದಿಂದ ಎದುರಿಸಬೇಕೆಂದು ತಮ್ಮೊಳಗೇ ಶಪಥ ಮಾಡಿಕೊಂಡು ಮುನ್ನುಗ್ಗಿದರು. ಆ ನಂತರ ಅವರು ತನ್ನಂಥ ಅದೆಷ್ಟೋ ಅನಾಥಮಕ್ಕಳಿಗೆ ನೆರವಾದರು, ಅವರ ಬದಕನ್ನು ಹಸನು ಮಾಡಿದರು. ತಾವು ಮಾತ್ರ ಬದುಕುವುದಲ್ಲದೇ ತನ್ನಂಥ ನೂರಾರು ಜನರಿಗೆ ಸಹಾಯ ಮಾಡಿದರು. ಆದಿವಾಸಿಗಳ ಕಷ್ಟಕ್ಕೆ ಮರುಗಿದರು. ಸಮಾಜದ ಕಟ್ಟಕಡೆಯಲ್ಲಿರುವವರ ಮಕ್ಕಳನ್ನು ಎದೆಗಪ್ಪಿಕೊಂಡು ಬೆಳೆಸಿದರು.
1971ರಲ್ಲಿಅಮರಾವತಿ ಜಿಲ್ಲೆಯ ಚಿಖಲ್ದಾರಾ ಎಂಬ ಗುಡ್ಡಗಾಡು ಊರಿಗೆ ಹೋಗಿ, ಅಲ್ಲಿಆದಿವಾಸಿಗಳ ಪರವಾಗಿಯೂ ಸಿಂಧುತಾಯಿ ಹೋರಾಟ ನಡೆಸಿದರು. ಹುಲಿ ಸಂರಕ್ಷ ಣೆಗಾಗಿ ಕಾಡಿನಲ್ಲಿದ್ದ 84 ಆದಿವಾಸಿ ಕುಟುಂಬಗಳನ್ನು ಹೊರದಬ್ಬಲಾಗಿತ್ತು. ಅವರ ಪರವಾಗಿ ಹೋರಾಟ ನಡೆಸಿದರು. ಸಿಂಧುತಾಯಿ ಹೋರಾಟದ ಕಿಚ್ಚಿಗೆ ಸಣ್ಣ ಉದಾಹರಣೆಯನ್ನು ನೀಡಬಹುದು. ಹುಲಿ ಸಂರಕ್ಷ ಣಾ ಅರಣ್ಯ ಉದ್ಘಾಟನೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚಿಖಲ್ದಾರಾಗೆ ಬಂದಿದ್ದರು. ಈ ವೇಳೆ ಸಿಂಧುತಾಯಿ ಕಾಡು ಪ್ರಾಣಿಗಳಿಂದ ಆದಿವಾಸಿಗಳು ಅನುಭವಿಸುತ್ತಿರುವ ನೋವನ್ನು ಅಭಿವ್ಯಕ್ತಿಸುವ ಫೋಟೊವೊಂದನ್ನು ಇಂದಿರಾ ಗಾಂಧಿ ಎದುರು ಪ್ರದರ್ಶಿಸಿದರು. ‘‘ದನಕ್ಕೆ ಕಾಡು ಪ್ರಾಣಿ ಹಾನಿ ಮಾಡಿದಾಗ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಆದರೆ, ಆದಿವಾಸಿ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡರೂ ಅಧಿಕಾರಿಗಳು ಕ್ಯಾರೆ ಮಾಡುವುದಿಲ್ಲ. ಮನುಷ್ಯರ ನೋವಿಗೆ ಬೆಲೆ ಇಲ್ಲವೇ?’’ ಎಂದು ಇಂದಿರಾ ಗಾಂಧಿ ಅವರನ್ನು ಪ್ರಶ್ನಿಸಿದರಂತೆ. ತಕ್ಷ ಣವೇ ಪ್ರಧಾನಿ ಪರಿಹಾರಕ್ಕೆ ಆದೇಶಿಸಿದರು!
ಇದೇ ವೇಳೆ ಆದಿವಾಸಿ ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಮಕ್ಕಳ ಸ್ಥಿತಿಯನ್ನು ಕಂಡು ಅವರ ಆಸರೆಗೆ ಮುಂದಾದರು. ಇಲ್ಲಿಂದ ಆರಂಭವಾದ ಅನಾಥ ಮಕ್ಕಳ ರಕ್ಷ ಣೆ ನಿಧಾನವಾಗಿ ಮಹಾರಾಷ್ಟ್ರದಾದ್ಯಂತ ಹರಡಿಕೊಂಡಿತು. ವಿಶೇಷವಾಗಿ ಪುಣೆಯ ಸುತ್ತಮುತ್ತ ಅನಾಥರಿಗೆ ಸಿಂಧುತಾಯಿ ಆಸರೆಯಾದರು. ಇದಕ್ಕಾಗಿ ನಾನಾ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಈ ಪೈಕಿ ಮದರ್ ಗ್ಲೋಬಲ್ ಫೌಂಡೇಷನ್, ಸನ್ಮತಿ ಬಾಲ ನಿಕೇತನ, ಮಮತಾ ಬಾಲ ಸದನ, ಸಪ್ತಸಿಂಧು ಮಹಿಳಾ ಆಧಾರ್, ಬಾಲಸಂಗೋಪನ ಮತ್ತು ಶಿಕ್ಷ ಣ ಟ್ರಸ್ಟ್ ಹೀಗೆ ಎಲ್ಲಸಂಸ್ಥೆಗಳು ಅನಾಥರ ರಕ್ಷ ಣೆಗೆ ಮೀಸಲಾದವು. ಹೀಗೆ ಶುರುವಾದ ಅವರ ಅನಾಥ ಮಕ್ಕಳ ಸಾಕುವ ಕೈಂಕರ್ಯ ನಿರಂತರವಾಗಿ ನಡೆದುಕೊಂಡು ಬಂತು. ಜನರು ಪ್ರೀತಿಯಿಂದ ‘ಅನಾಥರ ಅವ್ವ’ ಎಂದು ಕರೆಯಲಾರಂಭಿಸಿದರು. ಸಿಂಧುತಾಯಿಯ ಮಾನವೀಯ ಕಾರ್ಯ ಕಂಡು ಹಲವು ಪ್ರಶಸ್ತಿ, ಗೌರವವಗಳು ಹುಡುಕಿಕೊಂಡು ಬಂದವು. ಪದ್ಮಶ್ರೀ(2021) ಸೇರಿದಂತೆ 700ಕ್ಕೂ ಹೆಚ್ಚು ಪ್ರಶಸ್ತಿಗಳು ಅವರಿಗೆ ಸಂದಿವೆ. 2010ರಲ್ಲಿಸಿಂಧುತಾಯಿ ಜೀವನಕತೆ ಆಧರಿಸಿ ನಿರ್ದೇಶಕ ಅನಂತ ನಾರಾಯಣ ಮಹಾದೇವನ್ ಅವರು ‘ಮೀ ಸಿಂಧುತಾಯಿ ಸಪಕಾಳ್’ ಮರಾಠಿ ಸಿನಿಮಾ ಮಾಡಿದ್ದರು.
ಮಹಿಳಾ ಶಕ್ತಿಗೆ ಗಡಿಗಳೇ ಇಲ್ಲಎಂಬುದನ್ನು ಸಿಂಧುತಾಯಿ ನಿರೂಪಿಸಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಅವರು ಸಾಧಿಸಿದ್ದಾರೆ. 74 ವರ್ಷ ಬದುಕಿದ ಸಿಂಧುತಾಯಿ, ಲಕ್ಷಾಂತರ ಅಬಲೆಯರು ಎನಿಸಿಕೊಂಡಿರುವ ಹೆಣ್ಣುಮಕ್ಕಳಿಗೆ ಸ್ಫೂರ್ತಿಯ ಕಿಡಿ. ಅಂಥ ಮಹಾತಾಯಿ ಜ.4ರಂದು ಇಹಲೋಕ ತ್ಯಜಿಸಿದರು. ಆದರೆ ಅವರು ತೋರಿದ ತಾಯಿ ವಾತ್ಸಲ್ಯ, ಮಮತೆಗಳು ಮಾತ್ರ ಮಾಸಲಾರವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ