ಶನಿವಾರ, ಮಾರ್ಚ್ 16, 2019

ನೆಹರು ಸಮಾಜವಾದಿ ನೀತಿ ವಿರೋಧಿಸಿ ಸ್ವತಂತ್ರ ಪಾರ್ಟಿ ಕಟ್ಟಿದ ಸಿ.ರಾಜಗೋಪಾಲಾಚಾರಿ

ಒಂದು ಕಾಲದಲ್ಲಿ ಸ್ವತಂತ್ರ ಪಾರ್ಟಿಭಾರತೀಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ ಪಕ್ಷ ವಾಗಿತ್ತು. 1959ರಿಂದ 1974ರವರೆಗೆ ಸಕ್ರಿಯವಾಗಿದ್ದ ಈ ಪಕ್ಷ ವನ್ನು ಮುನ್ನಡೆಸಿದ್ದು ಸಿ. ರಾಜಗೋಪಾಲಾಚಾರಿ ಅವರು. ಅಂದಿನ ಪ್ರಧಾನಿ ನೆಹರು ಅವರ ಸಮಾಜವಾದಿ ಧೋರಣೆ ವಿರೋಧಿಸಿ ರಾಜಗೋಪಾಲಾಚಾರಿ ಅವರು ಪಕ್ಷ ವನ್ನು ಸ್ಥಾಪಿಸಿದರು. ಪಕ್ಷ ದ ಸೈದ್ಧಾಂತಿಕ ನೆಲೆ ಸಂಪ್ರದಾಯವಾದವಾದರೂ ಅದರ ಸ್ವರೂಪದಲ್ಲಿ ಉದಾರವಾದವೂ ಇತ್ತು. ಪಕ್ಷ ಪ್ರಮುಖ ನಾಯಕರೆಲ್ಲರೂ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರೇ. ಟಿ.ಪಿ. ಪಂತಲು, ಮಿನೋ ಮಸಾನಿ, ಎನ್‌.ಜಿ.ರಂಗಾ ಮತ್ತು ಕೆ.ಎಂ. ಮುನ್ಶಿ ಆ ಪೈಕಿ ಪ್ರಮುಖರು. 
ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಪರ ಇದ್ದ ಈ ಪಕ್ಷ ದ ನಾಯಕತ್ವ ಮಾತ್ರ ಸಾಂಪ್ರದಾಯಿಕ ಮುಂದುವರಿದ ವರ್ಗದವರ ಕೈಯಲ್ಲೇ ಇತ್ತು. ಅಂದರೆ ಜಮೀನ್ದಾರು ಮತ್ತು ಈ ಹಿಂದೆ ರಾಜರಾಗಿದ್ದವರು. ಪ್ರಧಾನಿ ನೆಹರು ಕೂಡ ಈ ಪಕ್ಷ ವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು, ''ಮಧ್ಯ ವಯಸ್ಸಿನ ನಾಯಕರ ಭೂ ಒಡೆಯರ ಪಕ್ಷ '' ಎಂದು ಹೇಳುತ್ತಿದ್ದರು. ಸ್ವತಂತ್ರ ಪಾರ್ಟಿ ಅಸ್ತಿತ್ವಕ್ಕೆ ಬಂದ ಬಳಿಕ ಅದು 1962ರ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿತು. ತಾನು ಎದುರಿಸಿದ ಮೊದಲ ಚುನಾವಣೆಯಲ್ಲಿ ಶೇ.6.8ರಷ್ಟು ಮತ ಗಳಿಸಿ, ಒಟ್ಟು 18 ಸ್ಥಾನ ಗೆದ್ದುಕೊಂಡಿತು. ಅಲ್ಲದೆ, ಬಿಹಾರ, ರಾಜಸ್ಥಾನ, ಗುಜರಾತ್‌ ಮತ್ತು ಒಡಿಶಾ ವಿಧಾನಸಭೆಗಳಲ್ಲಿ ಪ್ರಮುಖ ವಿರೋಧ ಪಕ್ಷ ವಾಯಿತು. 1967ರ ಚುನಾವಣೆ ಹೊತ್ತಿಗೆ ಸ್ವತಂತ್ರ ಪಕ್ಷ ವು ದೇಶದ ಕೆಲವು ಭಾಗಗಳಲ್ಲಿ ಭಾರಿ ಪ್ರಭಾವ ಹೊಂದಿತ್ತು. ಈ ಚುನಾವಣೆಯಲ್ಲಿ ಶೇ.8.7ರಷ್ಟು ಮತ ಪಡೆದು ನಾಲ್ಕನೇ ಲೋಕಸಭೆ(1967-71)ಯಲ್ಲಿ ಪ್ರತಿಪಕ್ಷ ವಾಗಿ ಗುರುತಿಸಿಕೊಂಡಿತು. ಒಟ್ಟು 44 ಸ್ಥಾನಗಳನ್ನು ಅದು ಗೆದ್ದುಕೊಂಡಿತ್ತು. ಇಂದಿರಾ ಗಾಂಧಿ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಸ್ವತಂತ್ರ ಪಕ್ಷ ಕೂಡ ಜನತಾ ಪಾರ್ಟಿಯ ಭಾಗವಾಯಿತು. 1971ರಲ್ಲಿ ಶೇ.3ರಷ್ಟು ಮತ ಪಡೆದು 8 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಯಶಸ್ವಿಯಾಯಿತು. 1974ರಲ್ಲಿ ರಾಜಗೋಪಾಲಚಾರಿ ನಿಧನ ಬಳಿಕ ಪಕ್ಷ ವನ್ನು ಚರಣ್‌ ಸಿಂಗ್‌ ನೇತೃತ್ವದ ಭಾರತೀಯ ಲೋಕದಳ ಪಕ್ಷ ದ ಜತೆ ವಿಲೀನ ಮಾಡಲಾಯಿತು. ಸ್ವತಂತ್ರ ಪಾರ್ಟಿಯ ಸ್ಥಾಪನೆಯ ಉದ್ದೇಶವೇ ಕಾಂಗ್ರೆಸ್‌ ನೀತಿ ವಿರೋಧಿಯಾದ್ದರಿಂದ, ಅವಕಾಶ ಸಿಕ್ಕಾಗಲೆಲ್ಲ ಅದು ಕಾಂಗ್ರೆಸ್‌ ವಿರೋಧಿ ಪಕ್ಷ ಗಳ ಜತೆಗೂಡಿದರು.


ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡಿದೆ.

ಕಾಮೆಂಟ್‌ಗಳಿಲ್ಲ: