ಸಿಖ್ಖರ ಪವಿತ್ರ ದೇಗುಲವಾದ ಸ್ವರ್ಣ ಮಂದಿರದಲ್ಲಿ ಖಲಿಸ್ಥಾನ ಉಗ್ರರು ಅಡಗಿಕೊಂಡಿದ್ದರು. ಅವರನ್ನು ಅಲ್ಲಿಂದ ಹೊಡೆದು ಹಾಕುವ ಸೇನಾ ಕಾರ್ಯಾಚರಣೆ, ಆಪರೇಷನ್ ಬ್ಲೂಸ್ಟಾರ್ ಎಂದು ಪ್ರಖ್ಯಾತವಾಗಿದೆ. ಇಂದಿರಾ ಗಾಂಧಿ ಅವರು ಸ್ವರ್ಣ ಮಂದಿರಕ್ಕೆ ಸೇನೆಯನ್ನು ಕಳುಹಿಸಿದ್ದು ಕೆಲವು ಸಿಖ್ಖರಿಗೆ ಸರಿ ಕಾಣಲಿಲ್ಲ. ಅವರು ಇಂದಿರಾ ಮೇಲೆ ಆಕ್ರೋಶಗೊಂಡಿದ್ದರು. ಇದರ ಪರಿಣಾಮ ಇಂದಿರಾ ಗಾಂಧಿ ಅವರನ್ನು 1984 ಅಕ್ಟೋಬರ್ 31ರಂದು ಅವರ ಅಂಗರಕ್ಷ ಕರಾಗಿದ್ದವರೇ ಗುಂಡಿಟ್ಟು ಕೊಂದರು. ಗಾಂಧಿ ಹತ್ಯೆ ನಂತರದ ಸಿಖ್ ವಿರೋಧಿ ದಂಗೆಗಳು ಶುರುವಾದವು. ಈ ಹೊತ್ತಲ್ಲಿ ನಡೆದ ನಡೆದ 8ನೇ ಸಾರ್ವತ್ರಿಕ ಚುನಾವಣೆಯು ತುಂಬ ಮಹತ್ವದ್ದಾಗಿತ್ತು. ಇಂದಿರಾ ಗಾಂಧಿ ಹತ್ಯೆ ಚುನಾವಣೆ ಮೇಲೆ ಸಂಪೂರ್ಣ ಪರಿಣಾಮ ಬೀರಿತ್ತು. ಇಂದಿರಾ ಪುತ್ರ ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 414 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಫಲಿತಾಂಶವನ್ನು ಪಡೆಯಿತು. ಭಾರತೀಯ ಜನತಾ ಪಾರ್ಟಿ(ಬಿಜೆಪಿ) 2ಸ್ಥಾನಗಳನ್ನು ಗೆಲ್ಲುವ ಮೂಲಕ ಚುನಾವಣಾ ರಾಜಕೀಯವನ್ನು ಆರಂಭಿಸಿತು. 1984ರ ಚುನಾವಣೆಯಲ್ಲಿ ದೇಶದೆಲ್ಲೆಡೆ ಸಕಾಲಕ್ಕೆ ನಡೆಯಿತಾದರೂ ಅಸ್ಸಾಮ್ ಮತ್ತು ಪಂಜಾಬ್‌ನಲ್ಲಿ ನಡೆಯುತ್ತಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ 1985ರವರೆಗೆ ಮುಂದೂಡಲಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ನಂತರ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದು ಆಂಧ್ರ ಪ್ರದೇಶದ ತೆಲುಗು ದೇಶಂ ಪಾರ್ಟಿ(ಪಿಡಿಪಿ). ಎನ್.ಟಿ.ರಾಮರಾವ್ ನೇತೃತ್ವದಲ್ಲಿ ಒಟ್ಟು 30 ಸ್ಥಾನಗಳನ್ನು ಗೆದ್ದುಕೊಂಡಿತು. ತಾನು ಎದುರಿಸಿದ ಮೊದಲನೆಯ ಚುನಾವಣೆಯಲ್ಲಿ ಗರಿಷ್ಠ ಸೀಟುಗಳನ್ನು ಪಡೆದ ಟಿಡಿಪಿ, ಕೇಂದ್ರದಲ್ಲಿ ಪ್ರಮುಖ ಪ್ರತಿಪಕ್ಷ ವಾಗಿ ಹೊರಹೊಮ್ಮಿತು. ಇದು ಭಾರತೀಯ ಚುನಾವಣೆಯ ಇತಿಹಾಸದಲ್ಲೇ ಇನ್ನು ದಾಖಲೆಯಾಗಿ ಉಳಿದಿದೆ. ಪ್ರಧಾನಿ ರಾಜೀವ್ ಗಾಂಧಿ ಪ್ರಧಾನಿಯಾಗಿ ಆಯ್ಕೆಯಾದರೆ, ಎನ್‌ಟಿಆರ್ ಅವರು ಪ್ರತಿಪಕ್ಷ ದ ನಾಯಕರಾದರು. ಇನ್ನುಳಿದಂತೆ ಜನತಾ ಪಾರ್ಟಿ 10, ಲೋಕದಳ 3 ಮತ್ತು ಕಮ್ಯುನಿಸ್ಟ್ ಪಾರ್ಟಿ 22 ಸ್ಥಾನಗಳನ್ನು ಗೆದ್ದುಕೊಂಡವು. ಈ ಚುನಾವಣೆ ಅನೇಕ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟವು. ಹೊಸ ತಲೆಮಾರಿನ ರಾಜಕಾರಣಿಯಾಗಿ ರಾಜೀವ್ ಗಾಂಧಿ ಅವರು ಪ್ರವರ್ಧಮಾನಕ್ಕೆ ಬಂದರು. ರಾಜೀವ್ ಅವಧಿಯಲ್ಲಿ ತಂತ್ರಜ್ಞಾನಕ್ಕೆ ವಿಶೇಷ ಒತ್ತು ದೊರೆಯಿತು. ಸಂವಹನ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾದವು. ಹಾಗೆಯೇ, ಇಂದಿಗೂ ಪ್ರತಿಪಕ್ಷ ಗಳಿಗೆ ಆಯುಧವಾಗಿರುವ ಬೋಪೊರ್ಸ್ ಖರೀದಿ ಹಗರಣ ಕೂಡ ಹೆಚ್ಚು ಸದ್ದು ಮಾಡಿತು. ಇದು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
- ತಿಪ್ಪಾರ
- ತಿಪ್ಪಾರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ