ಗುರುವಾರ, ನವೆಂಬರ್ 22, 2007

ಸ್ತಬ್ಧಚಿತ್ರ

ಈ ಬಾಲ್ಯವೇ ಹಾಗೇ
ಭಾವನೆಗಳ ಬರಹಕ್ಕೆ ನಿಲುಕದ
ನೀಲಾಕಾಶ... ಎತ್ತ ನೋಡಿದತ್ತ
ಆದಿ-ಅಂತ್ಯವಿಲ್ಲದ ಸ್ತಬ್ದಚಿತ್ರ.

ಊರೂ ಹೊಡೆದು, ಊರಲ್ಲಿ ಭಾಷಣ ಬೀಗಿದು
ಮೊದಲ ಬಹುಮಾನ ತಂದದ್ದು,
ಶಿಕ್ಷಕರು ತಲೆ ನೇವರಿದ ನೆನಪು
ಈಗಲೂ ಹಚ್ಚು-ಹಸಿರು, ನವ-ನವೀರು.

ಚೇಳು ಕಡಿಸಿಕೊಂಡಿದ್ದು, ನೋವು ಮರೆಸಲು
ಅವ್ವ ಕಥೆ ಹೇಳಿದ್ದು, ಅವಳ ತೊಡೆಯ
ಮೇಲೆ ನಿದ್ದೆ ಹೊಗಿದ್ದು, ಈಗಲೂ ಚೇಳು
ಎಂದಾಗಲೆಲ್ಲ ಒತ್ತರಿಸುತ್ತದೆ ಮಾಸಿದ ನೆನಪು.

ಅಕ್ಕಳನ್ನು ಕಾಡಿದ್ದು, ತಂಗಿಯನ್ನು ಪೀಡಿಸಿದ್ದು,
ಅವ್ವಳಿಂದ ಬೈಯಿಸಿಕೊಂಡಿದ್ದು, ಗೆಳೆಯನಿಗೆ
ಹೊಡಿದಿದ್ದು, ಮತ್ತೆ ರಮಿಸಿದ್ದು, ಎಲ್ಲವೂ ಹಾಗೆ
ಇದೆ, ಗೆರೆ ಕೊರೆದ ಚಿತ್ರಗಳಂತೆ.

ಮನೆಯ ಎದುರಿಗಿದ್ದ ಟ್ರ್ಯಾಕ್ಟರ್ ಇಂಜಿನ್ ಕ್ಲಚ್ ಒತ್ತಿ
ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡಿಸಿ, ಬಿಳಿಸಿದ್ದು, ಅಪ್ಪನಿಂದ
ಬಾಸುಂಡೆ ಏಟು ಬೀಗಿಸಿಕೊಂಡಿದ್ದು, ಇನ್ನೂ ಹಾಗೇ
ಇದೆ, ಮೊನ್ನೆ ನಡೆದ ಘಟನೆಯಂತೆ.

ಸ್ಕ್ರ್ಯೂ ಬಿಗಿಯಲು ಬಾರದೇ ಸ್ಕ್ರ್ಯೂಡ್ರೈವರ್
ಅಂಗೈ ಸೇರಿದ್ದು, ಅದ್ನೋಡಿ ಮೇಸ್ತ್ರಿ
ಕೆನ್ನೆಗೆ ಬಾರಿಸಿದ್ದು, ಕಣ್ಣೀರ್ ಕಪಾಳಕ್ಕೆ ಇಳಿದಿದ್ದು,
ರಸ್ತೆ ಬದಿಯಲ್ಲಿ ಗ್ಯಾರೆಜ್ ಕಂಡಾಗಲೆಲ್ಲ
ನೆನಪು ಕಣ್ತೆರೆಯುತ್ತದೆ.

ಇಂದಿನ ವರ್ಣಮಯ ಬದುಕಿನ
ನಡುವೆ, ಅಂದಿನ ಬಾಲ್ಯದ ಕಪ್ಪು-ಬಿಳಪು
(ವಿ)ಚಿತ್ರಗಳು ಈಗ ಬರೀ ಚಿತ್ರ, ಸ್ತಬ್ಧಚಿತ್ರ.

ಗುರುವಾರ, ನವೆಂಬರ್ 1, 2007

ಅಯ್ಯೋ ಕನ್ನಡವೇ... ಪರರು ಕನಿಕರಿಸುವಂತಾಯ್ತೇ...?


ಮೊದಲು ಈ ಘಟನೆಯನ್ನು ಓದಿ.

ನಾಲ್ಕು ದಿನಗಳ ಹಿಂದೆ ಕಚೇರಿ ಕೆಲಸ ಮುಗಿಸಿಕೊಂಡು ಅಂಬತ್ತೂರ್‌ನತ್ತ ಗಿಜಿಗಿಡುವ ಬಸ್ಸಿನಲ್ಲಿ ಹೊರಟಿದ್ದೆ. ಹೊರಗಡೆ ಮಳೆಯ ರುದ್ರ ನರ್ತನ ನಡೆದಿತ್ತು. ಬಸ್ಸು ಗಿಜಿಗುಡುತ್ತಿರುವುದರಿಂದ ಸ್ವಲ್ಪ ಬೆಚ್ಚಗಿನ ವಾತವಾರಣ ನಿರ್ಮಾಣವಾಗಿತ್ತು. ಹೀಗೆ ಸಾಗುತ್ತಿದ್ದ ಬಸ್ ಕೊನೆಯ ಸ್ಟಾಪ್ ಹತ್ತಿರವಾಗುತ್ತಿದ್ದಂತೆ ಬಸ್ಸನಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕರಗುತ್ತಾ ಬಂತು. ಆದರೆ, ಹೊರಗಡೆ ಮಳೆ ಮಾತ್ರ ಧೋ.. ಎನ್ನುತ್ತಿತ್ತು.

ನಾನು ಕಳಿತು ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಡ್ರೈವರ್ ಮತ್ತು ಕಂಡಕ್ಟರ್‌ಗೆ ಪರಿಚಯವಿದ್ದಂತೆ ತೋರಿತು ನನಗೆ. ಬಸ್ಸಿನಲ್ಲಿದ್ದ ಜನರು ಕಡಿಮೆಯಾದ್ದರಿಂದ ಕಂಡಕ್ಟರ್ ಕೂಡಾ ಡ್ರೈವರ್ ಸಮೀಪದಲ್ಲಿಯೇ ಬಂದು ಕುಳಿತುಕೊಂಡ. ಆಗ ಡ್ರೈವರ್, ಕಂಡಕ್ಟರ್ ಮತ್ತು ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯ ನಡುವಿನ ಸಂಭಾಷಣೆ ಕೇಳಿ ಆಶ್ಚರ್ಯವೆನಿಸಿತು. ಮಳೆಯಾಗುತ್ತಿದ್ದ ಕಾರಣ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಟ್ರಾಪಿಕ್ ಜಾಮ್ ಕುರಿತಂತೆ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಕಂಡಕ್ಟರ್‌ನೊಂದಿಗೆ ಮಾತಿಗಿಳಿದ.

"ಬೆಂಗಳೂರಿನಲ್ಲಿ 200 ಮೀಟರ್‌(ನಿಜವಾಗಲೂ ಇದೆಯಾ) ಅಂತರದಲ್ಲಿ ಫ್ಲೈ ಓವರ್‌ಗಳಿವೆ. ಆದರೂ ಅಲ್ಲಿ ಇಲ್ಲಿಕ್ಕಿಂತ ಹೆಚ್ಚು ಟ್ರಾಫಿಕ್" ಎಂದ.

"ಹೌದು, ನೀನು ಹೇಳುವುದು ನಿಜ. ಅಲ್ಲಿ ತುಂಬಾ ಟ್ರಾಫಿಕ್ ಅಂತ ಕೇಳಲ್ಪಟ್ಟಿದ್ದೇನೆ" ಎಂದು ಕಂಡಕ್ಟರ್ ಮಾರ್ನುಡಿದ.

"ಬೆಂಗಳೂರಿನಲ್ಲಿ ತಮಿಳು ಮಾತಾಡೊ ಜನ ಜಾಸ್ತಿ ಸಿಗುತ್ತಾರಲ್ಲ...?" ಎಂದು ಅನುಮಾನ ಮಿಶ್ರಿತ ದನಿಯಲ್ಲಿ ಕಂಡಕ್ಟರ್ ಪ್ರಶ್ನಿಸಿದ ಆತನನ್ನು.

ತಕ್ಷಣವೇ ಉತ್ತರಿಸಿದ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ, "ಹೌದು, ಆದರೆ ತಮಿಳು ಮತ್ತು ಕನ್ನಡ ಮಾತಾಡೋರಕ್ಕಿಂತಲೂ ತೆಲುಗು ಮಾತಾಡೋ ಜನ ಬಹಳ ಇದ್ದಾರೆ ಬೆಂಗಳೂರಿನಲ್ಲಿ" ಅಂದ.

ಇವರ ಸಂಭಾಷಣೆಯನ್ನೇ ಆಲಿಸುತ್ತಿದ್ದ ನನಗೆ ಈ ಮಾತನ್ನು ಕೇಳೆ ಒಮ್ಮೆಲೇ ದಿಗ್ಭ್ರಮೆಯಾಯಿತು.

(ಮೇಲಿನ ಸಂಭಾಷಣೆ ನಡೆದಿದ್ದು ತಮಿಳು ಭಾಷೆಯಲ್ಲಿ. ನನಗೆ ಪೂರ್ತಿಯಾಗಿ ತಮಿಳು ಬರದಿದ್ದರೂ ಕೂಡಾ ಅವರ ಮಾತಿನ ಭಾವಾರ್ಥ ನೀಡಿದ್ದೇನೆ)
*****

ಮೇಲಿನ ಸಂಭಾಷಣೆ ಓದಿದರಲ್ಲ. ನವೆಂಬರ್ 1ಕ್ಕೆ ಇನ್ನೂ ನಾಲ್ಕು ಮುಂಚಿತವಾಗಿರುವಂತೆಯೇ ಇದು ಚೆನ್ನೈನಲ್ಲಿ ನನ್ನ ಅನುಭವಕ್ಕೆ ಬಂದದ್ದು.

ನೋಡಿ ಕನ್ನಡ ಪರಿಸ್ಥಿತಿ ಏನಾಗಿದೆ ಅಂತ್. ಕನ್ನಡ ದುಸ್ಥಿತಿಯಲ್ಲಿದೇ ಎಂದು ಕನ್ನಡಿಗರೇ ಕಳವಳ ಪಡುವುದು ಸೊಜಿಗವಲ್ಲ. ಆದರೆ, ಬೇರೆ ಭಾಷೆಯವರು ಕೂಡಾ ಬೆಂಗಳೂರು ಕನ್ನಡದ ಬಗ್ಗೆ ಕನಿಕರ (!?) ವ್ಯಕ್ತಪಡಿಸಿತ್ತಿರುವುದು ಕೊಂಚ ನನಗೆ ಆಶ್ಚರ್ಯವುಂಟು ಮಾಡಿತು.

ಅವರು ನಿಜವಾಗಿಯೂ ಕನ್ನಡ ದುಸ್ಥಿತಿಗೆ ವ್ಯಥೆ ಪಡುತ್ತಿದ್ದಾರೋ ಅಥವಾ ಬೆಂಗಳೂರಿನಲ್ಲಿ "ತಮಿಳು" ಬದಲಾಗಿ "ತೆಲುಗು" ಪ್ರಾಬಲ್ಯಪಡಿಯುತ್ತಿದೆ ಎಂದು ಆತಂಕಪಡುತ್ತಿದ್ದಾರೋ ಎಂಬದು ನನಗೆ ಅರ್ಥವಾಗಲಿಲ್ಲ. ಕನ್ನಡ ದುಸ್ಥಿತಿಗೆ ಇಳಿದಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.

ಮತ್ತೆ ನವೆಂಬರ್ 1 ಬಂದಿದೆ. ಸಿಹಿ ಹಂಚಿ, ನಾಮಕಾವಸ್ಥೆಗೆ ರಾಜ್ಯೋತ್ಸವದ ಆಚರಣೆಯ ನಡೆಯುತ್ತದೆ. ಮಂತ್ರಿ ಮಹೋದಯರು (ಸಂತೋಷದ ವಿಷಯವೆಂದರೆ, ಈ ಬಾರಿಯ ರಾಜ್ಯೋತ್ಸವದಲ್ಲಿ ಮಂತ್ರಿ ಮಹೋದಯರ ಆಟೋಟ ಅಷ್ಟಾಗಿಲ್ಲ, ಎಲ್ಲ ರಾಜ್ಯಪಾಲರ ದರ್ಬಾರು) ಭಾಷೆಯ ಹೆಸರಿನಲ್ಲಿ ತಮ್ಮ ವೋಟುಗಳನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಸಾಹಿತಿಗಳು, ಬರಹಗಾರರು, ಕನ್ನಡ ಪರ ಹೋರಾಟಗಾರರು ಈ ಒಂದು ದಿನ ಕನ್ನಡವನ್ನೇ ಮೈ ಮೇಲೆ ಆಹ್ವಾನಿಸಿಕೊಂಡವರಂತೆ ಮಾತಾಡುತ್ತಾರೆ. ಸಂಜೆ ಮರೆಯುತ್ತಾರೆ ಎಂಬುದು ನನ್ನದಷ್ಟೆ ವಾದವಲ್ಲ. ಇದು ಸಮಗ್ರ ಪ್ರಜ್ಞಾವಂತ ಕನ್ನಡಿಗರ ವಾದ ಎಂದು ನಾನು ಭಾವಿಸಿಕೊಳ್ಳುತ್ತೇನೆ.

2000 ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಇಂದಿನ ಸ್ಥಿತಿಯ ಕುರಿತು ನಿಜವಾದ ಚಿಂತನೆ ನಡೆಯುತ್ತಿದೆಯಾ..? ನಮ್ಮಷ್ಟೆ ಇತಿಹಾಸ ಹೊಂದಿರುವ ಪಕ್ಕದ "ತಮಿಳ್‌ ಭಾಷೆಗೆ"ಗೆ ಶಾಸ್ತ್ರೀಯ ಸ್ಥಾನ ಮಾನ ದೊರೆಯುತ್ತದೆ. ಆದರೆ ನಮ್ಮ ತಾಯಿ ನುಡಿಗಿಲ್ಲ. ನಾಲ್ಕಾರು ಸಾಹಿತಿಗಳು ಅದಕ್ಕಾಗಿ ಉಪವಾಸ ಮಾಡುತ್ತಾರೆ ಮತ್ತು ಇನ್ನೂ ನಾಲ್ಕಾರು ಸಾಹಿತಿಗಳು ಶಾಸ್ತ್ರಿಯ ಸ್ಥಾನಮಾನ ಅಗತ್ಯವಿಲ್ಲ ಎಂದು ಸಾರುತ್ತಾರೆ.

ಹೀಗಾದರೆ ಕನ್ನಡ ನುಡಿ ಉಳಿದೀತೇ ಎಂಬ ಪ್ರಶ್ನೇ ನಮ್ಮಂಥವರದು. ಯಾರು ಕೊಡುತ್ತಾರೆ ಉತ್ತರ...? ಉತ್ತರ ಕೊಡಬೇಕಾದವರೆಲ್ಲ ಕುರ್ಚಿಯ ಆಸೆಗಾಗಿ ಕೀಳು ಮಟ್ಟದ ರಾಜಕೀಯಕ್ಕೀಳಿದಿದ್ದಾರೆ (ದಯವಿಟ್ಟು ಕ್ಷಮಿಸಿ. ಕರ್ನಾಟಕದ ಇಂದಿನ ರಾಜಕೀಯಕ್ಕೆ "ಕೀಳುಮಟ್ಟ"ದ ಶಬ್ಧ ಬಳಸಿದರೆ "ಶಬ್ಧ"ಕ್ಕೂ ಅಪಚಾರ ಮಾಡಿದಂತೆ ಎಂಬ ಭಾವನೆ ನನ್ನದು).

ನಿಜವಾಗಿಯೂ ನಾವು ಈಗ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. "ಕನ್ನಡಕ್ಕೆ ಕೈ ಎತ್ತು.. ನಿನ್ನ ಕೈ ಕಲ್ಪವೃಕ್ಷವಾಗುವುದು" ಎಂಬ ಕವಿವಾಣಿ ಕಾರ್ಯರೂಪಕ್ಕೆ ಇಳಿಯುವುದು ಯಾವಾಗ...? ಜಾಗತಿಕರಣ ಅಲೆಗೆ ಸಿಲುಕಿ ಸ್ಥಳೀಯ ಸಂಸ್ಕೃತಿ, ವೇಷ, ಭೂಷಣ, ನಡೆ, ನುಡಿ, ಆಚಾರ-ವಿಚಾರ, ಸಂಪ್ರದಾಯಗಳು ತತ್ತರಿಸಿ ಹೋಗುತ್ತಿರುವಾಗ ಕನ್ನಡ ಎಂಬ ಸ್ನೇಹಮಯಿ, ಮೃದು ಭಾಷೆ ಈ ಹೊಡೆತವನ್ನು ತಾಳಿಕೊಂಡು ಬೆಳೆಯಬಲ್ಲದೆ..?

ಖಂಡಿತ ಬೆಳೆಯುತ್ತದೆ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಅಷ್ಟೆ. ಪಕ್ಕದ ತಮಿಳುರನ್ನು ನೋಡಿ ನಾವು ಕಲಿಯಬೇಕಾಗಿದೆ. ನಾಡು-ನುಡಿ ವಿಷಯ ಬಂದಾಗ ಪಕ್ಷ ಭೇದ ಮರೆತ ಜನರು ಒಂದಾಗುತ್ತಾರೆ. ರಾಷ್ಟ್ರೀಯ ಮಟ್ಟದ ವಾಹನಿಯೊಂದು ಸಂದರ್ಶಿದಾಗಲೂ ತಮಿಳುನಲ್ಲಿಯೇ ಮಾತಾಡುತ್ತಾರೆ ಆ ನಾಡಿನ ಮುಖ್ಯಮಂತ್ರಿ.. ಆದರೆ, ಇಂಗ್ಲಿಷ್ ಬರದಿದ್ದರೂ ಪರವಾಗಿಲ್ಲ. ಕನ್ನಡ ವಾಹಿನಿಗಳಲ್ಲಿ ಇಂಗ್ಲಿಷ್ ಮಾತಾಡುತ್ತಾರೆ ನಮ್ಮ ನಾಡಿನಲ್ಲಿ. ಇಲ್ಲಿ ಯಾರನ್ನು ತೆಗಳುವ ಉದ್ದೇಶ ನನಗಿಲ್ಲ. ಕೇವಲ ಹೋಲಿಕೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕುರಿತು ಹೇಳುವುದು ಅಷ್ಟೆ ನನ್ನ ಉದ್ದೇಶ. ನಮ್ಮಲ್ಲಿ ಅದಾಗುತ್ತಿಲ್ಲ. ಎಲ್ಲವೂ ಹೈಕಮಾಂಡ್‌ಗಳು ಕಟ್ಟಪ್ಪಣೆಯಲ್ಲಿ ನಡೆಯುತ್ತಿರುವಾಗ ಇದೂ ಸಾಧ್ಯವೂ ಇಲ್ಲ. ಹೀಗಿರುವಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವುದಾದರೂ ಹೇಗೆ, ಅಲ್ಲವೇ ?

ಇಲ್ಲಿ ಕೇವಲ ರಾಜಕೀಯ ಇಚ್ಛಾಶಕ್ತಿ ಮತ್ತು ರಾಜಕಾರಣಿಗಳನ್ನು ದೂರಿದರೂ ಸಾಲದು. ರಾಜಕಾರಣಿಗಳಷ್ಟೆ ಕನ್ನಡಿಗರು ಕೂಡಾ ಜವಾಬ್ದಾರರು ಎಂಬುದು ನನ್ನ ಅನಿಸಿಕೆ. ವಿದ್ಯಾವಂತರು ಎನಿಸಿಕೊಂಡಿರುವ ಬುದ್ಧಿವಂತ ಜನ ತಮ್ಮ ಮಕ್ಕಳಲ್ಲಿ ಮೊದಲು ಕನ್ನಡ ಪ್ರೀತಿ ಬೆಳೆಸಬೇಕು. ಆಳುವವರು ಕನ್ನಡದ ಕುರಿತು ಅಸಡ್ಡೆ ತೋರಿದಾಗ ಕಿವಿ ಹಿಂಡುವ ಕೆಲಸ ಮಾಡಬೇಕು. "ಕನ್ನಡ" ಎಂಬ ವಿಷಯ ಬಂದಾಗ ಕನ್ನಡಿಗರಿಗೆ ಬಂದಿರುವ ಬಳುವಳಿಗಳಾದ, "ಶಾಂತ ಪ್ರಿಯ"ರು, "ಸಹನಶೀಲ"ರು ಎಂಬ ಬಿರುದುಗಳನ್ನು ಕಿತ್ತೆಸೆಯಬೇಕು. ಆಗ ನಿಜವಾದ ಕನ್ನಡ ತಳವೂರಿ, ಬೆಳೆಯಲು ಸಾಧ್ಯ.

ಪ್ರತಿಯೊಬ್ಬ ಕನ್ನಡಿಗನು ನಮ್ಮ ನುಡಿಗೆ ಶಾಸ್ತ್ರಿಯ ಸ್ಥಾನಮಾನ ತಂದುಕೊಡುವಲ್ಲಿ ವೈಯಕ್ತಿವಾಗಿ ಮತ್ತು ಸಾಮೂಹಿಕವಾಗಿ ಚಳುವಳಿಯ ರೂಪದಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ಕರ್ನಾಟಕ ಮತ್ತು ಕನ್ನಡಕ್ಕೆ ಯಾವಾಗಲೂ ಕೊಂಚ ತಾರತಮ್ಯ ನೀತಿಯನ್ನೇ ಅನುಸರಿಸುವ ಕೇಂದ್ರಕ್ಕೆ ಬಿಸಿ ಮುಟ್ಟಿಸದಂತಾಗುತ್ತದೆ.

ಆದರೆ, ಕರ್ನಾಟದಲ್ಲಿ ಹುಟ್ಟಿ-ಬೆಳೆದ ಚಳುವಳಿಗಳ ಗತಿ ಇಂದು ಏನಾಗಿದೆ.

(ಈ ಲೇಖನ ವೆಬ್‌ದುನಿಯಾ.ಕನ್ನಡದಲ್ಲಿ ಪ್ರಕಟವಾಗಿದೆ. ಇಲ್ಲಿ ಕ್ಲಿಕಿಸಿ)