ವ್ಯಕ್ತಿಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವ್ಯಕ್ತಿಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಅಕ್ಟೋಬರ್ 15, 2022

Justice D Y Chandrchud | ಡಿ ವೈ ಚಂದ್ರಚೂಡ್ ನ್ಯಾಯನಿಷ್ಠ, ಧೈರ್ಯಶಾಲಿ ನ್ಯಾಯಮೂರ್ತಿ

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ, 'ಭಾರತೀಯ ನ್ಯಾಯಾಂಗವು ವ್ಯವಸ್ಥೆ ಸುರಕ್ಷಿತ ಕೈಗಳಲ್ಲಿದೆ' ಎಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬಂತು! ನ್ಯಾಯವಾದಿಯಾಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ, ಹೈಕೋರ್ಟ್ ನ್ಯಾಯಮೂರ್ತಿ- ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅವರು ತೋರಿದ ಧೈರ್ಯ, ದೃಢತೆ, ನ್ಯಾಯಪರತೆಯೇ ಈ ಮೆಚ್ಚುಗೆಯ ಹಿಂದಿನ ಕಾರಣ.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ನ್ಯಾ. ಚಂದ್ರಚೂಡ್ ಅವರನ್ನು ಹತ್ತಿರದಿಂದ ಬಲ್ಲ ಮುಂಬೈ ನ್ಯಾಯವಾದಿಗಳು ಅವರನ್ನು ಮೂರು ಸಿ(C)ಗಳಲ್ಲಿ ಬಣ್ಣಿಸುತ್ತಾರೆ.  compassion, courage and conscientiousness. ಅಂದರೆ, ಸಹಾನುಭೂತಿ, ಧೈರ್ಯ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ವ್ಯಕ್ತಿ ಎಂದರ್ಥ. ಅವರು ನೀಡಿದ ಎಲ್ಲ ತೀರ್ಪುಗಳಲ್ಲಿ ನ್ಯಾಯಪರತೆಯೊಂದಿಗೆ ಈ ಮೂರು ಮೌಲ್ಯಗಳು ಪ್ರತಿಫಲನಗೊಂಡಿರುವುದನ್ನು ಸುಲಭವಾಗಿ ಗುರುತಿಸಬಹುದು. ಹಾಗಾಗಿಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿ. ವೈ.ಚಂದ್ರಚೂಡ ಅವರಿಗೆ ವಿಶೇಷವಾದ ಗೌರವವಿದೆ. ಅವರೀಗ ಸುಪ್ರೀಂ ಕೋರ್ಟ್‌ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ. ಸುಮಾರು ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ  ಇರಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದೀರ್ಘ ಅವಧಿಗೆ ಸಿಜೆಐ ಆಗುತ್ತಿರುವುದು ಇವರೇ ಮೊದಲಿಗರು. ಇನ್‌ಫ್ಯಾಕ್ಟ್ ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತರಾವ್ ವಿ ಚಂದ್ರಚೂಡ್ ಅವರೂ 7 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಇದು ಈ ವರೆಗಿನ ಗರಿಷ್ಠ ದಾಖಲೆಯಾಗಿದೆ. ಈಗ ಅವರ ಪುತ್ರ ದೀರ್ಘಾವಧಿಗೆ ಅದೇ ಹುದ್ದೆಯಲ್ಲಿ ಇರಲಿರುವುದು ಕಾಕತಾಳೀಯವಷ್ಟೇ.  ಬಹುಶಃ ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ತಂದೆ-ಮಗ ಇಬ್ಬರು ದೀರ್ಘಾವಧಿಗೆ ಸಿಜೆಐ ಆಗಿರುವುದು ವಿಶಿಷ್ಟ ದಾಖಲೆಯಾಗಲಿದೆ.

1959ರಲ್ಲಿ ಜನನ
ಡಿ ವೈ ಚಂದ್ರಚೂಡ್ ಅವರ ಪೂರ್ತಿ ಹೆಸರು ಧನಂಜಯ್ ಯಶವಂತರಾವ್ ಚಂದ್ರಚೂಡ್. 1959 ನವೆಂಬರ್ 11ರಂದು ಮುಂಬೈನಲ್ಲಿ ಜನಿಸಿದರು. ತಂದೆ ಯಶವಂತರಾವ್ ಚಂದ್ರಚೂಡ್. ಅವರೂ ಸಿಜೆಐ ಆಗಿದ್ದವರು. ತಾಯಿ ಪ್ರಭಾ. ಶಾಸ್ತ್ರೀಯ ಸಂಗೀತಗಾರ್ತಿ. ಧನಂಜಯ್ ಅವರು ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್‌ ಲಾ ಕಾಲೇಜಿನಿಂದ ಕಾನೂನು ಪದವಿ ಗಳಿಸಿದರು. ಹಾಗೆಯೇ, ಹಾರ್ವರ್ಡ್ ಲಾ ಸ್ಕೂಲ್‌ನಿಂದ ಮಾಸ್ಟರ್ ಆಫ್ ಲಾ ಮತ್ತು ಜುರಿಡಿಕಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಸಂಪಾದಿಸಿದರು.  ಆ ಬಳಿಕ ಅವರು ಬಾಂಬೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕಿ ಆರಂಭಿಸಿದರು. ಈ ಮಧ್ಯೆ ಅವರು ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಕೆಲಸ ಮಾಡಿದರು. 2000ರಲ್ಲಿ ಅವರನ್ನು ಬಾಂಬೆ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಅಕ್ಟೋಬರ್ 31ರಂದು ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. 2016 ಮಾರ್ಚ್ 13ರಂದು ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಭಡ್ತಿ ನೀಡಲಾಯಿತು. 

ಬಹುಮುಖ ವ್ಯಕ್ತಿತ್ವ
ನಿಯೋಜಿತ ಸಿಜೆಐ ಡಿ ವೈ ಚಂದ್ರಚೂಡ್ ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರ ಪೀಠದಲ್ಲಿ ಸ್ವಾಭಾವಿಕ ನಾಯಕನಂತಿರುತ್ತಾರೆ. ಅವರ ಸಮಚಿತ್ತತೆ, ಸಭ್ಯತೆ ಮತ್ತು ದೃಢವಾದ ನಡವಳಿಕೆ, ಅವರ ಪಾಂಡಿತ್ಯ ಮತ್ತು ನ್ಯಾಯದಾನ ಮಾಡುವ ಅವರ ಉತ್ಸಾಹವು ಹೆಚ್ಚು ವಿಶ್ವಾಸಾರ್ಹವಾಗಿದೆ. ಹಾಗಾಗಿ, ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಬಗ್ಗೆ ಇಡೀ ಜಗತ್ತೇ ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದರೆ ಅತಿಶಯೋಕ್ತಿಯೇನೂ ಆಗಲಾರದು. 

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಚಂದ್ರಚೂಡ್ ಅವರು ಮುಂಬೈ ವಿಶ್ವವಿದ್ಯಾಲಯದ ಕಂಪ್ಯಾರಟಿವ್ ಕಾನ್ಸಿಟಿಟ್ಯೂಷನಲ್ ಲಾ ಕಾಲೇಜು ಹಾಗೂ ಅಮೆರಿಕದ ಓಕ್ಲಹೋಮ್ ಯುನಿವರ್ಸಿಟಿಯ ಸ್ಕೂಲ್‌ ಆಫ್ ಲಾ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕರೂ ಹೌದು. ಚಂದ್ರಚೂಡ ಅವರು ನಿಸರ್ಗ ಪ್ರೇಮಿ. ನಡೆಯುವುದೆಂದರೆ ತುಂಬ ಖುಷಿ ಅವರಿಗೆ. ಅಧ್ಯಾತ್ಮಿಕ ಹಾಗೂ ತತ್ವಜ್ಞಾನ ವಿಷಯಗಳು ಇಷ್ಟ. ಇಬ್ಬರು ಮಕ್ಕಳಿದ್ದಾರೆ. ಮೊದಲನೆಯ ಮಗ ಅಭಿನವ್ ಬಾಂಬೆ ಹೈಕೋರ್ಟ್‍‌ನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಎರಡನೇಯ ಮಗ ಚಿಂತನ್ ಅವರು ಲಂಡನ್‌ನ ಬ್ರಿಕ್ ಕೋರ್ಟ್ ಚೇಂಬರ್ಸ್‌ನಲ್ಲಿ ನ್ಯಾಯವಾದಿಯಾಗಿದ್ದಾರೆ.

ತಂದೆ ತೀರ್ಪುಗಳನ್ನೇ ಬದಲಿಸಿದ ಮಗ
ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತ ವಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 16ನೇ ಮುಖ್ಯ ನ್ಯಾಯಮೂರ್ತಿಯಾಗಿ ಏಳು ವರ್ಷ ನಾಲ್ಕು ತಿಂಗಳು ಕಾಲ ಕಾರ್ಯ ನಿರ್ವಹಿಸಿದ್ದರು. ಆ ಸಮಯದಲ್ಲಿ ಸಿಜೆಐ ಆಗಿ ಯಶವಂತ ಚಂದ್ರಚೂಡ್ ಅವರು ಖಾಸಗಿ ಹಕ್ಕು (right to privacy) ಮತ್ತು ವಿವಾಹೇತರ ಸಂಬಂಧ (Adultery) ಕುರಿತು ತೀರ್ಪು ನೀಡಿದ್ದರು. ಸೀನಿಯರ್ ಚಂದ್ರಚೂಡ್ ಅವರು ಅಡಲ್ಟರಿ ಕಾನೂನಿನ 497 ವಿಧಿಯ ಸಿಂಧುತ್ವವನ್ನು ಎತ್ತಿ ಹಿಡಿದ್ದರು. ಇದಾದ 35 ವರ್ಷದ ಬಳಿಕ ಅವರ ಪುತ್ರ ಡಿ ವೈ ಚಂದ್ರಚೂಡ್ ಅವರು, ನಮ್ಮ ತೀರ್ಪುಗಳು ವರ್ತಮಾನಕ್ಕೆ ಹೆಚ್ಚು ಹೊಂದಾಣಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು. ಅಲ್ಲದೇ, ವಿವಾಹೇತರ ಸಂಬಂಧ ಅಪರಾಧಿಕರಣವನ್ನು ತೆಗೆದು ಹಾಕಿದ್ದರು.  ಅದೇ ರೀತಿ, ಖಾಸಗಿ ಹಕ್ಕಿಗೆ ಸಂಬಂಧಿಸಿದಂತೆ ಸಿಜೆಐ ಯಶವಂತ್ ಚಂದ್ರಚೂಡ್ ಅವರು ವಿವಾದಿತ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಬದಲಿಸಿದ್ದರು. 

ಡಿ ವೈ ಚಂದ್ರಚೂಡ್ ನೀಡಿದ ಪ್ರಮುಖ ತೀರ್ಪುಗಳು
|  ಅಯೋಧ್ಯೆ ವಿವಾದ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠವು 2019 ನವೆಂಬರ್ 9ರಂದು ಐತಿಹಾಸಿಕ ತೀರ್ಪು ಪ್ರಕಟಿಸಿತು. ವಿವಾದಿತ ಅಯೋಧ್ಯೆಯ ಜಾಗವು ಹಿಂದೂಗಳಿಗೆ ಸೇರಿದ್ದು, ಮುಸ್ಲಿಮರಿಗೆ ಪರ್ಯಾಯ ಭೂಮಿ ಒದಗಿಸುವಂತೆ ಆದೇಶ ಮಾಡಲಾಯಿತು. ಈ ಸಾಂವಿಧಾನಿಕ ಪೀಠದ ನೇತೃತ್ವವನ್ನು ಅಂದಿನ ಮುಖ್ಯ ನ್ಯಾಯಮೂರ್ತಿ  ರಂಜನ್ ಗೊಗೊಯ್ ವಹಿಸಿದ್ದರು. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಸ್ ಅಬ್ದುಲ್ ನಝೀರ್, ಅಶೋಕ್ ಭೂಷಣ್ ಮತ್ತು ಎಸ್ ಎ ಬೋಬ್ಡೆ ಅವರು ಪೀಠದಲ್ಲಿದ್ದ ಇತರರು. ದಶಕಗಳಿಂದ ನಡೆದುಕೊಂಡಿದ್ದ ಬಂದಿದ್ದ ಪ್ರಕರಣಕ್ಕೆ ಈ ತೀರ್ಪು ಅಂತ್ಯ ಹಾಡಿತು.

|  ಖಾಸಗಿ ಹಕ್ಕು: 2007 ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಪೀಠವು ಖಾಸಗಿ ಹಕ್ಕಿನ ಸಂಬಂಧ ಐತಿಹಾಸಿಕ ತೀರ್ಪು ಪ್ರಕಟಿಸಿತು. ಖಾಸಗಿ ಹಕ್ಕು ಕೂಡ ಮೂಲಭೂತ ಹಕ್ಕು ಎಂಬುದನ್ನು ಸಂವಿಧಾನ ಖಾತರಿಪಡಿಸುತ್ತದೆ ಎಂಬ ತೀರ್ಪನ್ನು ಬರೆದಿದ್ದೇ ನ್ಯಾ. ಡಿ ವೈ ಚಂದ್ರಚೂಡ್ ಅವರು. ಖಾಸಗಿ ಹಕ್ಕು ಮತ್ತು ಘನತೆಯ ಹಕ್ಕು ಬದುಕಿನ ಆಂತರಿಕ ಹಕ್ಕುಗಳಾಗಿವೆ ಎಂದು ತಮ್ಮ ತೀರ್ಪಿನಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

|  ಗರ್ಭಪಾತ ಹಕ್ಕು:  ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿತು. ಅವಿವಾಹಿತ ಮತ್ತು ವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ಹೊಂದಿದ್ದಾರೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪು ನೀಡಿದ ಡಿ ವೈ ಚಂದ್ರಚೂಡ ನೇತೃತ್ವದ ಪೀಠದಲ್ಲಿ ಎ ಎಸ್ ಬೋಪಣ್ಣ, ಬಿ ವಿ ನಾಗರತ್ನ ನ್ಯಾಯಮೂರ್ತಿಗಳಿದ್ದರು. 

|  ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ:  ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದವರ ಪ್ರವೇಶಕ್ಕೆ ಒಪ್ಪಿಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ಪೀಠದಲ್ಲೂ ನ್ಯಾ. ಡಿ ವೈ ಚಂದ್ರಚೂಡ್ ಅವರಿದ್ದರು. ಮಹಿಳೆಯರಿಗೆ ದೇಗುಲ ಪ್ರವೇಶ ನಿರಾಕರಿಸುವುದು ಸಾಂವಿಧಾನಿಕ ತತ್ವದ ವಿರುದ್ಧವಾಗಿದೆ ಎಂದು 9 ನ್ಯಾಯಮೂರ್ತಿಗಳಿದ್ದ ಪೀಠವು ಅಭಿಪ್ರಾಯಪಟ್ಟಿತ್ತು.

|  ಕ್ರಿಯೇಟಿವ್ ಪ್ರೈವೇಟ್ ಲಿ. ವರ್ಸಸ್ ಪಶ್ಚಿಮ ಬಂಗಾಳ ಪ್ರಕರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ರಿಪಬ್ಲಿಕ್ ಟಿವಿ  ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ರಕ್ಷಣಾ ಸಚಿವಾಲಯ ವರ್ಸಸ್ ಬಬಿತಾ ಪುನಿಯಾ ಪ್ರಕರಣದಲ್ಲಿ ಲಿಂಗ ಸಮಾನ ನ್ಯಾಯ ಹಾಗೂ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಪರಿಸರ ರಕ್ಷಣೆ, ಕಾರ್ಮಿಕರ ಹಿತರಕ್ಷಣೆ ಸಂಬಂಧ ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಅದೇ ರೀತಿ, ಸಾಂವಿಧಾನಿಕ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲೂ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ತೀರ್ಪುಗಳಲ್ಲಿ ನ್ಯಾ. ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆ ಕೆಲಸ ಮಾಡಿದೆ.

ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿತವಾಗಿರುವ ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆಯಿಂದಾಗಿ ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಹಾಗಾಗಿ, ಅವರ ಮೇಲೆ ನಿರೀಕ್ಷೆಗಳ ಬೆಟ್ಟ ದೊಡ್ಡದಿದೆ. ಮುಖ್ಯ ನ್ಯಾಯಮೂರ್ತಿಯಾಗಿ ಅವರ ಮುಂದೆ ಸಾಕಷ್ಟು ಸವಾಲಗಳೂ ಇವೆ. ಆದರೆ, ಈವರೆಗಿನ ಅವರ ಕಾರ್ಯವೈಖರಿಯನ್ನು ಪರಿಗಣಿಸಿದರೆ, ಎಲ್ಲ ಸವಾಲು, ಸಂಕಟಗಳನ್ನು ಅವರು ಮೆಟ್ಟಿ ನಿಲ್ಲುತ್ತಾರೆಂಬುದರಲ್ಲಿ ಅನುಮಾನಗಳಿಲ್ಲ.

ಈ ಲೇಖನವು ವಿಸ್ತಾರನ್ಯೂಸ್ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ.

ಭಾನುವಾರ, ಜುಲೈ 31, 2022

Partha Chatterjee and Arpita Mukherjee- ಹಗರಣಕ್ಕೆ ಪಾರ್ಥ ಅರ್ಪಿತ!

ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಎಂಬೆರಡು ಹೆಸರು ಬೇಡದ ಕಾರಣಕ್ಕೆ ಪ್ರಸಿದ್ಧಿಯಾಗಿವೆ. ವಿಭಿನ್ನ ವ್ಯಕ್ತಿತ್ವದ ಈ ಇಬ್ಬರು ಹಗರಣದ ಸುಳಿಯಲ್ಲಿಸಿಲುಕಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
‘‘ಅವಳು ಚೆಲುವೆ. ಪ್ರತಿಭಾವಂತೆ. ಕೆಳಹಂತದಿಂದ ಮೇಲೆ ಬಂದವಳು. ನಾನು ಯಾವಾಗಲೂ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. 2013ರಲ್ಲಿನಾನು ಬಿಜೆಪಿ ಸೇರಿದೆ. ಆ ಬಳಿಕ ಸಂಪರ್ಕ ಕಡಿದು ಹೋಯಿತು. ಒಂದಂತೂ ಸತ್ಯ. ಆಕೆ, ಅತಿಯಾದ ಮಹತ್ವಾಕಾಂಕ್ಷೆ ಹೊಂದಿದ್ದಳು...’’

- ಚಿತ್ರಕರ್ಮಿ ಹಾಗೂ ಬಿಜೆಪಿಯ ನಾಯಕ ಸಂಗಮಿತ್ರ ಚೌಧರಿ ಅವರು ಅರ್ಪಿತಾ ಮುಖರ್ಜಿ ಬಗ್ಗೆ ಆಡಿದ ಮಾತುಗಳಿವು. ಚೌಧರಿ ಮಾತುಗಳು ಸತ್ಯ. ಅರ್ಪಿತಾ ಮುಖರ್ಜಿ ಎಷ್ಟು ಪ್ರತಿಭಾವಂತಳೋ ಅಷ್ಟೇ ಮಹತ್ವಾಕಾಂಕ್ಷಿಯೂ ಹೌದು. ಯಾವುದೋ ಒಂದು ಹಂತದಲ್ಲಿರಾಜಕಾರಣಿಯ ನಂಟು ಬೆಳೆಸಿಕೊಂಡು, ಈಗ ಹಗರಣದ ಸುಳಿಯಲ್ಲಿಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಾಪ್ತ ಹಾಗೂ ಸಚಿವರಾಗಿದ್ದ ಪಾರ್ಥ ಚಟರ್ಜಿ ಶಾಲಾ ಸೇವಾ ಆಯೋಗದ ನೇಮಕಾತಿ ವೇಳೆ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಜಾರಿ ನಿರ್ದೇಶನಾಲಯ(ಇ.ಡಿ) ಹೊರ ಹಾಕುತ್ತಿರುವ ಮಾಹಿತಿ, ಎಣಿಸುತ್ತಿರುವ ನೋಟುಗಳ ಮೌಲ್ಯ ಇಡೀ ಹಗರಣದ ಕತೆಯನ್ನು ಹೇಳುತ್ತಿವೆ. ಈ ಕತೆಯೊಳಗೇ ‘ಕ್ಯಾಶ್‌ ಕ್ವೀನ್‌’ ನಟಿ ಅರ್ಪಿತಾ ಮುಖರ್ಜಿ ಅವರದ್ದೂ ಒಂದು ಪ್ರಮುಖ ಪಾತ್ರ! ಯಾಕೆಂದರೆ, ಬಗೆದಷ್ಟು ಸಿಗುತ್ತಿರುವ ನಗದು ಅರ್ಪಿತಾ ಮನೆಯಲ್ಲೇ ಹೆಕ್ಕಿರುವುದು. ಈವರೆಗೆ ಅರ್ಪಿತಾ ಮನೆಯಲ್ಲಿ50 ಕೋಟಿ ರೂ. ನಗದು ಮತ್ತು ನಾಲ್ಕೂವರೆ ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಯಾರು ಈ ಅರ್ಪಿತಾ ಮುಖರ್ಜಿ?
ಪ್ರತಿಭಾವಂತೆ ನಟಿ ಎನಿಸಿಕೊಂಡಿದ್ದ ಅರ್ಪಿತಾಗೆ ಸಿನಿಮಾರಂಗದಲ್ಲಿಅಬ್ಬಾ ಎನ್ನುವಂಥ ಯಶಸ್ಸು ಕಾಣಲಿಲ್ಲ. 2008ರಿಂದ 2014ರ ಅವಧಿಯಲ್ಲಿಅರ್ಪಿತಾ ಅವರು ಬೆಂಗಾಳಿ ಮತ್ತು ಒಡಿಯಾ ಭಾಷೆಯ ಕೆಲವು ಚಿತ್ರಗಳಲ್ಲಿನಟಿಸಿದ್ದಾರೆ. ಆದರೆ, ರಾಜಕೀಯ ಕಾರಿಡಾರ್‌ನಲ್ಲಿದೊರೆತ ಸಂಪರ್ಕಗಳು ಅರ್ಪಿತಾ ಅವರನ್ನು ಕೋಲ್ಕೊತಾದ ಪ್ರತಿಷ್ಠಿತ ವ್ಯಕ್ತಿಯನ್ನಾಗಿಸಿದವು. ದಕ್ಷಿಣ ಕೋಲ್ಕೊತಾದ ಚೋಕಾ ಪ್ರದೇಶದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿವಾಸ್ತವ್ಯ ಸಾಮಾನ್ಯವಾಯಿತು. ನಗರದಲ್ಲಿರುವ ಹುಕ್ಕಾ ಬಾರ್‌ಗಳಿಗೆ ಅರ್ಪಿತಾ ನಿತ್ಯದ ಕಸ್ಟಮರ್‌. ಬ್ಯಾಂಕಾಂಕ್‌, ಸಿಂಗಾಪುರ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿರಜೆ ಮೋಜು ಕಳೆದಿದ್ದಿದೆ. 

ಕೋಲ್ಕೊತಾದ ಹೊರವಲಯದಲ್ಲಿರುವ ಬೆಲ್ಗಾರಿಯಾದಲ್ಲಿವಾಸವಾಗಿದ್ದ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿಬಂದವರು ಅರ್ಪಿತಾ. ಕಾಲೇಜು ದಿನಗಳಿಂದಲೇ ಮಾಡೆಲಿಂಗ್‌ನಲ್ಲಿಆಸಕ್ತಿ. ತಂದೆಯ ಮರಣದ ನಂತರ, ಜಾಗ್ರಾಮ್‌ನ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದರು ಎಂಬ ಮಾಹಿತಿ ಈಗ ಹೊರ ಬಿದ್ದಿದೆ. ಆದರೆ, ಈ ಮದುವೆಯ ಬಗ್ಗೆ ಹೆಚ್ಚಿನ ವಿವರಗಳೂ ಇನ್ನೂ ಸಿಕ್ಕಿಲ್ಲ. ಆ ಬಳಿಕ ಚಿತ್ರೋದ್ಯಮಕ್ಕೆ ಮರಳಿದ ಅರ್ಪಿತಾ, ಸುವೇಂದು ನಿರ್ದೇಶನದ ‘ಬಂದೆ ಉತ್ಕಲ್‌ ಜನನಿ’, ಅಶೋಕ್‌ ಪಟಿ ಅವರ ‘ಪ್ರೇಮ್‌ ರೋಗಿ’ ಸೇರಿದಂತೆ ಎಂಟು ಒಡಿಯಾ ಸಿನಿಮಾಗಳಲ್ಲಿನಾಯಕಿಯಾಗಿ ನಟಿಸಿದ್ದಾರೆ. ಈ ಎರಡೂ ಚಿತ್ರಗಳು ಬಾಕ್ಸಾಫಿಸ್‌ನಲ್ಲಿಹಿಟ್‌ ಎನಿಸಿಕೊಂಡಿವೆ. 2012ರಲ್ಲಿತೆರೆ ಕಂಡ ‘ರಾಜು ಆವಾರಾ’ ಒಡಿಯಾ ಚಿತ್ರವೇ ಕೊನೆ. ಮತ್ತೆ ಅರ್ಪಿತಾ ಒಡಿಯಾ ಚಿತ್ರದಲ್ಲಿಕಾಣಿಸಿಕೊಂಡಿಲ್ಲ. ಇದಕ್ಕೂ ಮೊದಲು ಕೇಮಿತಿ ಬಂಧನ (2011), ಮು ಕನಾ ಇತೆ ಖರಾಪ್‌(2010) ಚಿತ್ರಗಳಲ್ಲಿನಟಿಸಿದ್ದಾರೆ. ‘ಭೂತ್‌ ಇನ್‌ ರೋಸ್‌ವಿಲ್ಲೆ’, ‘ಜೀನಾ ದಿ ಎಂಡ್ಲೆಸ್‌ ಲವ್‌’, ‘ಬಿದೇರ್ಹಿ ಖೋಂಜೆ ರವೀಂದ್ರಹತ್‌’, ‘ಮಾಮಾ ಭಗ್ನೆ’ ಮತ್ತು ಪಾರ್ಟನರ್‌’ ಸೇರಿದಂತೆ ಕೆಲವು ಬೆಂಗಾಲಿ ಸಿನಿಮಾಗಳಲ್ಲಿಸಣ್ಣ ಪಾತ್ರಗಳಲ್ಲಿಅಭಿನಯಿಸಿದ್ದಾರೆ. ಆದರೆ 2014ರಿಂದ ಯಾವುದೇ ಬೆಂಗಾಲಿ ಸಿನಿಮಾದಲ್ಲೂಕಾಣಿಸಿಕೊಂಡಿಲ್ಲಅರ್ಪಿತಾ. 

ಪಾರ್ಥ ಚಟರ್ಜಿ ಅವರ  ನಕ್ತಲಾ ಉದಯನ್‌ ಸಂಘದ 2020 ಸಾಲಿನ ದುರ್ಗಾ ಪೂಜೆಗೆ ಅರ್ಪಿತಾ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದರು. ಆ ವೇಳೆಯಲ್ಲಿಅರ್ಪಿತಾ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಾರ್ಥ ಚಟರ್ಜಿ ಅವರ ಜತೆಗೆ ವೇದಿಕೆ ಹಂಚಿಕೊಂಡಿರುವ ಫೋಟೊಗಳು, ಕಂತೆ ಕಂತೆ ನೋಟು ಸಿಗುತ್ತಿದ್ದಂತೆ ಭಾರಿ ವೈರಲ್‌ ಆದವು. ಪ್ರತಿಪಕ್ಷ ಗಳು, ಟಿಎಂಸಿ ಜತೆ ಅರ್ಪಿತಾ ಇದ್ದಾರೆಂಬುದಕ್ಕೆ ಈ ಫೋಟೊಗಳು ಸಾಕ್ಷಿಯಾಗಿವೆ ಎಂದು ಆರೋಪಿಸಿವೆ. ಈ ಫೋಟೊಗಳನ್ನು ಪ್ರತಿಪಕ್ಷ ದ ನಾಯಕ ಸುವೇಂದು ಅಧಿಕಾರಿ ಟ್ವಿಟರ್‌ನಲ್ಲಿಹಂಚಿಕೊಂಡು, ಟಿಎಂಸಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. 

ದೀದಿಯ ಅತ್ಯಾಪ್ತ ಪಾರ್ಥ ಚಟರ್ಜಿ
ಈ ಹಿಂದೆ ಶಾರದಾ ಮತ್ತು ನಾರದ ಹಗರಣವು ಮಮತಾ ಬ್ಯಾನರ್ಜಿ ಸುತ್ತ ಇದ್ದ ಬಹುತೇಕ ನಾಯಕರನ್ನು ಸುತ್ತಿಕೊಂಡಿತ್ತು. ಆ ಸುಳಿಯಲ್ಲಿಸಿಲುಕಿಕೊಳ್ಳದೇ ಇದ್ದ ಏಕೈಕ ಹಿರಿಯ ಸಚಿವ ಈ ಪಾರ್ಥ ಚಟರ್ಜಿ. ಆ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈಗ ಅದೇ ವ್ಯಕ್ತಿಯ ಸುತ್ತ ಶಿಕ್ಷ ಕರ ನೇಮಕ ಹಗರಣ ಸುತ್ತಿಕೊಂಡಿದೆ! 

ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದ ಪಾರ್ಥ ಅವರು, 1960ರ ದಶಕದಲ್ಲಿಕಾಂಗ್ರೆಸ್‌ ಮೂಲಕ ರಾಜಕಾರಣ ಆರಂಭಿಸಿದರು. ಶುಭ್ರತ್‌ ಮುಖರ್ಜಿ ಮತ್ತು ಪ್ರಿಯ ರಂಜನ್‌ ದಾಸಮುನ್ಷಿ ಅವರು ಪಾರ್ಥ ಅವರಿಗೆ ರೋಲ್‌ ಮಾಡೆಲ್‌ ರಾಜಕಾರಣಿಗಳು. ವಿದ್ಯಾರ್ಥಿಗಳ ದಿನಗಳಲ್ಲಿರಾಜಕೀಯದಲ್ಲಿದ್ದೂ ಉನ್ನತ ಶಿಕ್ಷ ಣವನ್ನು ಪಡೆದುಕೊಂಡ ಕೆಲವೇ ಕೆಲವು ಬಂಗಾಳದ ನಾಯಕರಲ್ಲಿಇವರು ಒಬ್ಬರು. ಕಲ್ಕತ್ತಾ ವಿವಿಯಿಂದ ಪಿಜಿ ಪದವಿ ಪಡೆದ ಅವರು, ಇಂಡಿಯನ್‌ ಇನ್ಸ್‌ ಟಿಟ್ಯೂಟ್‌ ಆಫ್‌ ಸೋಷಿಯಲ್‌ ವೆಲೆಧೀರ್‌ ಆ್ಯಂಡ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದರು. ಕಾರ್ಪೊರೇಟ್‌ ಕಂಪನಿಯಲ್ಲಿಸ್ವಲ್ಪ ದಿನಗಳ ಕಾಲ ಎಚ್‌ಆರ್‌ ಆಗಿ ಕೆಲಸ ಮಾಡಿದ ಅನುಭವವಿದೆ.

ಟಿಎಂಸಿ ಸರ್ಕಲ್‌ನಲ್ಲಿ‘ಪಾರ್ಥ ದಾ’ ಎಂದೇ ಖ್ಯಾತರಾಗಿದ್ದ ಅವರೇನೂ ಆಕರ್ಷಕ ಭಾಷಣಕಾರರಲ್ಲ. ಬದಲಿಗೆ ಅತ್ಯುತ್ತಮ ಸಂಘಟಕ. ಇಂದು ಟಿಎಂಸಿ ಏನಾದರೂ ಬಂಗಾಳದಲ್ಲಿತಳಮಟ್ಟದಲ್ಲಿಗಟ್ಟಿ ಕಾರ್ಯಕರ್ತರ ಪಡೆಯನ್ನು ಹೊಂದಿದೆ ಎಂದರೆ ಅದರಲ್ಲಿಪಾರ್ಥ ಅವರ ಕೊಡಗೆ ಅಪಾರ. ಆ ಕಾರಣಕ್ಕಾಗಿಯೇ ಮಮತಾ ದೀದಿ ಅವರನ್ನು ತಮ್ಮ ಅತ್ಯಾಪ್ತ ಬಳಗಕ್ಕೆ ಸೇರಿಸಿಕೊಂಡಿದ್ದರು. ಕಾಂಗ್ರೆಸ್‌ನಿಂದ ಟಿಎಂಸಿಗೆ ಹಿರಿಯ ನಾಯಕರೊಂದಿಗೆ ಬಂದ ಅವರು, ನಿಧಾನ ಮತ್ತು ನಿರಂತರ ಗತಿಯಲ್ಲಿತಮ್ಮ ರಾಜಕೀಯ ಬೆಳವಣಿಗೆಯನ್ನು ಕಂಡುಕೊಂಡರು. ದಕ್ಷಿಣ ಕೋಲ್ಕೊತಾ ಮೂಲದ ಪಾರ್ಥ ಅವರು, ಬಂಗಾಳ ವಿಧಾನಸಭೆಗೆ 2001ರಲ್ಲಿಬೆಹಲಾ ಪಶ್ಚಿಮ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದರು. ಆ ಬಳಿಕ ಸತತ ಐದು ಅವಧಿಗೆ ಗೆದ್ದಿದ್ದಾರೆ. 2011ರಲ್ಲಿಟಿಎಂಸಿ ಅಧಿಕಾರಕ್ಕೆ ಬಂದಾಗ ಪ್ರಮುಖ ಖಾತೆಗಳೇ ಇವರನ್ನು ಅರಸಿಕೊಂಡು ಬಂದವು. 2014ರಿಂದಲೂ ಅವರ ಸಂಪುಟ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಬಂಗಾಳ ವಿಧಾನಸಭೆಯಲ್ಲಿಪ್ರತಿಪಕ್ಷ ದ ನಾಯಕರಾಗಿಯೂ ಪಾರ್ಥ ಕಾರ್ಯಧಿನಿರ್ವಹಿಸಿದ್ದಾರೆ. ಈಗ ಹಗರಣದ ಹಿನ್ನೆಲೆಯಲ್ಲಿಟಿಎಂಸಿ ಪಕ್ಷ ದಿಂದಲೇ ಅವರನ್ನು ಕಿತ್ತು ಹಾಕಲಾಗಿದೆ.

‘ಎಲ್ಲಬಣ್ಣಗಳನ್ನು ಮಸಿ ನುಂಗಿತು’ ಎನ್ನುವ ಹಾಗೆ, ಪಾರ್ಥ ಚಟರ್ಜಿ ಅವರೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಹಣದ ಲಾಲಸೆ, ಅಧಿಕಾರದ ದರ್ಪಗಳೆರಡೂ ಸೇರಿ ಬಿಟ್ಟರೆ ಅನಾಹುತ ಗ್ಯಾರಂಟಿ. ರಾಜಕೀಯ ಇತಿಹಾಸದಲ್ಲಿಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೂ ರಾಜಕೀಯ ನಾಯಕರು ಬುದ್ಧಿ ಕಲಿಯುವುದಿಲ್ಲ. ಅಪಾರ ಅನುಭವವಿದ್ದೂ ಅತಿಆಸೆಗೆ ರಾಜಕೀಯ ಜೀವನಕ್ಕೆ ಕೊಳ್ಳಿ ಇಟ್ಟುಕೊಂಡಿದ್ದು ಪಾರ್ಥ; ಅತಿ ಮಹತ್ವಾಕಾಂಕ್ಷಿಯೇ ಅರ್ಪಿತಾ ಅವರ ಜೀವನಕ್ಕೆ ಮುಸುಕು ಕವಿಯುವಂತೆ ಮಾಡಿತು!



ಈ ಲೇಖನವು ವಿಜಯ ಕರ್ನಾಟಕದ 2022ರ ಜುಲೈ 31ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಗುರುವಾರ, ಜೂನ್ 30, 2022

Rebel Leader Eknath Shinde: ‘ರೆಬೆಲ್‌ ಲೀಡರ್‌’ ಏಕನಾಥಗೆ ಮುಖ್ಯಮಂತ್ರಿ ಪಟ್ಟ

ಕಣ್ಣ ಮುಂದೆಯೇ ಮಕ್ಕಳ ಸಾವಿನಿಂದಾಗಿ ರಾಜಕಾರಣದಿಂದ ದೂರವೇ ಸರಿದಿದ್ದ ಏಕನಾಥ ಶಿಂಧೆ ಮತ್ತೆ ಅಗ್ರಗಣ್ಯ ನಾಯಕರಾಗಿ ಬೆಳೆದಿದ್ದೇ ಅಚ್ಚರಿ


- ಮಲ್ಲಿಕಾರ್ಜುನ ತಿಪ್ಪಾರ
ಏಕನಾಥ ಶಿಂಧೆ ಎಂಬ ಏಕವ್ಯಕ್ತಿ ಮೇಲೆ ಇಡೀ ದೇಶ ಕುತೂಹಲದ ಕಣ್ಣಿಟ್ಟಿದೆ. ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌  ನೇತೃತ್ವದ ‘ಮಹಾ ವಿಕಾಸ್‌ ಅಘಾಡಿ’ ಸರಕಾರವನ್ನು ಖೆಡ್ಡಾಗೆ ಕೆಡವಿರುವ ಏಕನಾಥ, ಶಿವಸೇನೆಯ ಪ್ರಮುಖ ಹಾಗೂ ಭಾರಿ ಪ್ರಭಾವಿ ನಾಯಕ. ತಮ್ಮ ಪಕ್ಷ ವು ‘ಹಿಂದುತ್ವ’ವನ್ನು ಕೈಬಿಟ್ಟಿದೆ ಎಂದು ಆರೋಪಿಸಿ, 30ಕ್ಕೂ ಅಧಿಕ ಶಾಸಕರೊಂದಿಗೆ ಅಸ್ಸಾಂನ ಗುವಾಹಟಿ ಹೋಟೆಲ್‌ನಲ್ಲಿತಳವೂರಿದ್ದಾರೆ. ಮೇಲ್ನೋಟಕ್ಕೆ, ಶಿವಸೇನೆಯ ಸೈದ್ಧಾಂತಿಕ ವೈರುಧ್ಯದ ಕಾರಣಕ್ಕೇ ಬಂಡಾಯ ಬಾವುಟ ಹಾರಿಸಿದ್ದಾರೆ ಎನಿಸಿದರೂ ಆಳದಲ್ಲಿಅವರನ್ನು ಪಕ್ಷ ದಲ್ಲಿ ಮೂಲೆಗುಂಪು ಮಾಡಲಾಗುತ್ತಿದ್ದ ಪಿಸುಮಾತುಗಳಿವೆ!

ಹಣಬಲ ಮತ್ತು ತೋಳ್ಬಲದಲ್ಲಿಏಕನಾಥ ಶಿಂಧೆ ಅವರನ್ನು ಸರಿಗಟ್ಟುವವರಿಲ್ಲ. ಪಕ್ಷ ಕ್ಕೆ ಬೇಕಿರುವ ಮತಗಳನ್ನು ಕ್ರೋಡೀಕರಿಸುವಲ್ಲಿಸಿದ್ಧಹಸ್ತರು. ವಿಶೇಷವಾಗಿ ಠಾಣೆ ವ್ಯಾಪ್ತಿಯಲ್ಲಿಏಕನಾಥ ಅವರೇ ಶಿವಸೇನೆಯ ಅಸಲಿ ನಾಯಕ. ಅಷ್ಟರ ಮಟ್ಟಿಗೆ ವರ್ಚಸ್ಸಿದೆ. ಏಕನಾಥ ಅವರು ಹೇಗೆ ಇಷ್ಟು ಪ್ರಸಿದ್ಧಿಯಾದರು ಎಂದು ತಿಳಿದುಕೊಳ್ಳಧಿಬೇಕಿದ್ದರೆ ಅವರ ರಾಜಕೀಯ ಗುರು ‘ಆನಂದ್‌ ದಿಘೆ ಅವರ ಕುರಿತು ಕೊಂಚ ತಿಳಿದುಕೊಳ್ಳಬೇಕು. ‘ಧರ್ಮವೀರ್‌’ ಆನಂದ ದಿಘೆ ಠಾಣೆಯಲ್ಲಿಅಕ್ಷ ರಶಃ ಸಮಾನಂತರ ಸರಕಾರವನ್ನೇ ನಡೆಸುಧಿತ್ತಿದ್ದರು. ತಮ್ಮದೇ ಶೈಲಿಯಲ್ಲಿನಿತ್ಯವೂ ದರ್ಬಾರ್‌ ನಡೆಸಿ, ಸಮಸ್ಯೆಧಿಗಳನ್ನು ಆಲಿಸುತ್ತಿದ್ದರು. ಬಾಳಾಸಾಹೇಬ್‌ ಠಾಕ್ರೆ ಅವರ ಪರಮ ನಿಷ್ಠರು. ಈ ನಿಷ್ಠೆ ಯಾವ ಪರಿ ಇತ್ತೆಂದರೆ, 1989ರಲ್ಲಿಶ್ರೀಧರ ಖೋಪ್ಕರ್‌ ಎಂಬ ಸದಸ್ಯ ಕಾಂಗ್ರೆಸ್‌ ಪರವಾಗಿ ಮತ ಹಾಕಿದ್ದಕ್ಕೆ ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿಆನಂದ ದಿಘೆ ಅವರನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರ ಬಂದಿದ್ದರು. 2001ರಲ್ಲಿಹೃದಯಾಘಾತದಿಂದ ಸಾವಿಗೀಡಾದರು. ದಿಘೆ ಬಳಿಕ ಉಂಟಾಗಿದ್ದ ನಿರ್ವಾತವನ್ನು ತುಂಬಿದ್ದು ಇದೇ ಏಕನಾಥ ಶಿಂಧೆ. ಅವರದ್ದೇ ರಾಜಕೀಯ ಪಟ್ಟು, ಶೈಲಿಯನ್ನು ಕರಗತ ಮಾಡಿಕೊಂಡಿ­ದ್ದಾರೆ. ದಿಘೆ ಅವರಂತೆ ಏಕನಾಥ ಅವರದ್ದೂ ‘ಆಕ್ರಮಣಕಾರಿ’ ರಾಜಕಾರಣ; ಎಲ್ಲವೂ ತಾಬಡತೋಬಡ ಆಗಬೇಕು. ಎಂವಿಎ ಸರಕಾರದಲ್ಲಿಲೋಕೋಪಯೋಗಿ ಸಚಿವರಾಗಿರುವ 58 ವರ್ಷದ ಏಕನಾಥ ಅವರಿಗೇನೂ ರಾಜಕೀಯ ಕೌಟುಂಬಿಕ ಹಿನ್ನೆಲೆ ಇಲ್ಲ. 

ಸಾತಾರಾ ಮೂಲದವರು: ಏಕನಾಥ ಸಾತಾರಾ ಜಿಲ್ಲೆಜವಳಿ ತಾಲೂಧಿಕಿಧಿನವರು. ಹುಟ್ಟಿದ್ದು ಮರಾಠ ಕುಟುಂಬದಲ್ಲಿ1964 ಫೆಬ್ರವರಿ 9ರಂದು. ತಂದೆ ಸಂಭಾಜಿ. ಏಕನಾಥ ಚಿಕ್ಕವರಿದ್ದಾಗಲೇ ಅವರ ಕುಟುಂಬ ಠಾಣೆಗೆ ಸ್ಥಳಾಂತಧಿರವಾಯಿತು. ಮಂಗಳಾ ಹೈಸ್ಕೂಲ್‌ ಮತ್ತು ಜೂನಿಯರ್‌ ಕಾಲೇಜ್‌ನಲ್ಲಿ11ನೇ ತರಗತಿವರೆಗೆ ಓದಿದ್ದಾರೆ. ಮುಂದೆ ಓದುವ ಆಸೆ ಇದ್ದರೂ ಕುಟುಂಬಕ್ಕಾಗಿ ತಮ್ಮ ಶಿಕ್ಷ ಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ದಿನಗೂಲಿ ಕೆಲಸಗಳನ್ನು ಮಾಡಬೇಕಾಯಿತು. ತುಂಬಾ ಕಷ್ಟಪಟ್ಟು ಕೊನೆಗೆ ಆಟೊರಿಕ್ಷಾ ಚಾಲಕರಾದರು. 70 ಮತ್ತು 80ರ ದಶಕದಲ್ಲಿಮಹಾರಾಷ್ಟ್ರದ ಎಲ್ಲಯುವಕರಂತೆ ಏಕನಾಥ ಅವರಿಗೆ ಸೇನೆ ಚಟುವಟಿಕೆಗಳು ಆಕರ್ಷಿಸಿದವು. 1980ರಲ್ಲಿಶಿವಸೇನೆ ಸೇರಿದರು. ಠಾಣೆ ಜಿಲ್ಲಾಶಿವಸೇನೆ ಪ್ರಮುಖರಾಗಿದ್ದ ಆನಂದ್‌ ದಿಘೆ ಅವರ ‘ನೀಲಿಗಣ್ಣಿನ ಹುಡುಗ’ನಾಗಲು ಬಹಳ ದಿನಗಳೇನೂ ಬೇಕಾಗಲಿಲ್ಲ. ಪ್ರಾಮಾಧಿಣಿಕತೆ, ಕಠಿಣ ಪರಿಶ್ರಮಗಳಿಂದಾಗಿ ಬಾಳಾಸಾಹೇಬ್‌ ಠಾಕ್ರೆ ಕಣ್ಣಿಗೂ ಬಿದ್ದರು. ಠಾಕ್ರೆ ಮತ್ತು ಆನಂದ್‌ ದಿಘೆ ಅವರ ಆಶ್ರಯದಲ್ಲಿಏಕನಾಥ, ಶಿವಸೇನೆಧಿಯಲ್ಲಿಒಂದೊಂದೇ ಹುದ್ದೆಗಳನ್ನೇರುತ್ತಾ ಮುನ್ನಡೆದರು. 

ಕಣ್ಣ ಮುಂದೆ ಮಕ್ಕಳು ಜಲಸಮಾಧಿ: ಏಕನಾಥ ಅವರಿಗೆ 2000 ಕಹಿ ನೀಡಿದ ವರ್ಷ. ಕಣ್ಣ ಮುಂದೆಯೇ ಅವರ ಮೂವರು ಮಕ್ಕಳ ಪೈಕಿ ಇಬ್ಬರು ಜಲಧಿ ಸಮಾಧಿಧಿಯಾದರು. ಅದು ಜೂನ್‌ 2ನೇ ತಾರೀಖು. 11 ವರ್ಷದ ಪುತ್ರ ದಿಪೇಶ್‌,  7 ವರ್ಷದ ಮಗಳು ಶುಭದಾ ಅವರು ಊರಿನ ಕೆರೆಯಲ್ಲಿಬೋಟಿಂಗ್‌ ಮಾಡುತ್ತಿದ್ದರು. ಬೋಟ್‌ ಮುಗುಚಿ ಮಕ್ಕಳಿಬ್ಬರು ಜಲ ಸಮಾಧಿಯಾದರು. ಮಕ್ಕಳ ಸಾವು ಅವರಿಗೆ ಬಾಧಿಸಿತು. ಖಿನ್ನತೆಗೆ ಜಾರಿದರು. ಸಕ್ರಿಯ ರಾಜಕಾರಣದಿಂದಲೇ ವಿಮುಖರಾದರು. ಹೀಗೆ ಬಿಟ್ಟರೆ ಏಕನಾಥ ಕೈಗೆ ಸಿಗುವುದಿಲ್ಲಎಂದು ಭಾವಿಸಿದ ದಿಘೆ, ಏಕನಾಥ ಅವರನ್ನು ಠಾಣೆ ಮುನ್ಸಿಪಲ್‌ ಕಾರ್ಪೊರೇಷನ್‌(ಟಿಎಂಸಿ) ಸದನ ನಾಯಕಧಿರನ್ನಾಗಿ ಮಾಡಿದರು. ನಿಧಾನವಾಗಿ ಏಕನಾಥ, ಮಕ್ಕಳ ಸಾವಿನ ನೋವಿನಿಂದ ಹೊರ ಬಂದರು. ರಾಜಕಾರಣದಲ್ಲಿಮತ್ತೆ ಸಕ್ರಿಯರಾದರು. ಶಿಂಧೆ ಅವರ ಮತ್ತೊಬ್ಬ ಪುತ್ರ ಡಾ.ಶ್ರೀಕಾಂತ್‌ ಅವರು ಕಲ್ಯಾಣ್‌ ಕ್ಷೇತ್ರದಿಂದ 2014ರಿಂದಲೂ ಸಂಸತ್‌ ಸದಸ್ಯರು. 

ಬಳ್ಳಾರಿ ಜೈಲಿನಲ್ಲಿದ್ದರು: ಏಕನಾಥ ಮತ್ತು ಕರ್ನಾಟಕದ ನಡುವೆ ‘ಬೇಡವಾದ ಕಾರಣಕ್ಕೆ’ ನಂಟಿದೆ. 1985ರಲ್ಲಿಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಉಚ್ಚ್ರಾಯದ ಕಾಲ. ಆಗ ಮಹಾರಾಷ್ಟ್ರದಲ್ಲಿಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರತಿಭಟನೆ, ಗಲಾಟೆಗಳಾಗುಧಿತ್ತಿದ್ದವು. ಅಂಥ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಏಕನಾಥ ಅವರನ್ನು ಬಂಧಿಸಿ ಸುಮಾರು 40 ದಿನಗಳ ಕಾಲ ಬಳ್ಳಾರಿ ಜೈಲಿನಧಿಲ್ಲಿಡಲಾಗಿತ್ತು. ಏಕನಾಥ ಅವರು ಶಿವಸೇನೆಯ ಮುಂಚೂಣಿಯ ನಾಯಕಧಿರಾಗಿ, ಬೆಲೆ ಏರಿಕೆ, ಕಾಳದಂಧೆ ಸೇರಿದಂತೆ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ್ದಾರೆ. 

ನಾಲ್ಕು ಬಾರಿ ಶಾಸಕ, ಸಚಿವ: 1997ರಲ್ಲಿಠಾಣೆ ಮುನ್ಸಿಪಲ್‌ ಕಾರ್ಪೊರೇಷನ್‌ (ಟಿಎಂಸಿ)ಗೆ ಆಯ್ಕೆಧಿಯಾಗಿ, 2001ರಿಂದ ಸಭಾನಾಯಕರಾಗಿದ್ದರು ಏಕನಾಥ್‌. ಟಿಎಂಸಿಗೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರ ತಮ್ಮನ್ನು ಸೀಮಿತಧಿಗೊಳಿಸಲಿಲ್ಲ. ಬದಲಿಗೆ ಇಡೀ ಥಾಣೆ ಜಿಲ್ಲೆಗೆ ಸಂಬಂಧಿಸಿದ ಎಲ್ಲವಿಷಯಗಳಲ್ಲೂಮುಂಚೂಣಿಧಿಯಲ್ಲಿರುತ್ತಿದ್ದರು. ಪರಿಣಾಮವಾಗಿ, ಕೋಪರಿ-ಪಾಚಪಾಖಾಡಿಧಿ (2004)ಕ್ಷೇತ್ರದಿಂದ ಸ್ಪರ್ಧಿಸಲು ಶಿವಸೇನೆ ಟಿಕೆಟ್‌ ನೀಡಿತು. ಗೆದ್ದರು. ಆ ಬಳಿಕ ಸತತವಾಗಿ 2009, 2014 ಮತ್ತು 2019ರಲ್ಲಿಆಯ್ಕೆಧಿಯಾದರು. ಬಾಳಾಸಾಹೇಬ್‌ ಠಾಕ್ರೆ ಅವರು 2005ರಲ್ಲಿಥಾಣೆ ಜಿಲ್ಲಾಶಿವಸೇನೆಯ ಮುಖ್ಯಸ್ಥರನ್ನಾಗಿ ಮಾಡಿದರು. ಶಿವಸೇನೆಯಲ್ಲಿಈ ರೀತಿ ಶಾಸಕ- ಜಿಲ್ಲಾಮುಖ್ಯಸ್ಥ ಜವಾಬ್ದಾರಿ ಹೊಂದಿದ ಮೊದಲನೇ ವ್ಯಕ್ತಿಧಿಯಾದರು. 2014ರ ಚುನಾವಣೆ ಬಳಿಕ ಮಹಾರಾಷ್ಟ್ರ ವಿಧಾನಸಭೆಯಲ್ಲಿಪ್ರತಿಪಕ್ಷ ದ ನಾಯಕ ಹುದ್ದೆ ಒಲಿಯಿತು. ಇದಾದ ತಿಂಗಳಲ್ಲಿಶಿವಸೇನೆಯು ಬಿಜೆಪಿ ಸರಕಾರದಲ್ಲಿಭಾಗವಹಿಸುತ್ತಿದ್ದಂತೆ ಏಕನಾಥ್‌ ಅವರು ಲೋಕೋಪಯೋಗಿ ಸಚಿವರಾದರು. ಈ ವೇಳೆ, ಯಶವಂತರಾಯ ಚವಾಣ್‌ ಮುಕ್ತ ವಿಶ್ವವಿದ್ಯಾಲಯ ನೋಂದಣಿ ಮಾಡಿಕೊಂಡರು. ಶೇ.77.25 ಅಂಕಗಳೊಂದಿಗೆ ಬಿ ಎ ಡಿಗ್ರಿಯನ್ನು ಪಡೆದುಕೊಂಡರು. ಮರಾಠಿ ಮತ್ತು ರಾಜ್ಯಶಾಸ್ತ್ರ ಮುಖ್ಯ ವಿಷಯಗಳಾಗಿದ್ದವು.  2019ರ ಎಂವಿಎ ಸರಕಾರದಲ್ಲಿಲೋಕೋಪಧಿಯೋಗಿ ಜತೆಗೆ ಜತೆಗೆ ಹೆಚ್ಚುವರಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಣೆ ಹೆಗಲೇರಿತು. ಸಚಿವರಾಗಿ ಅವರು ತುಂಬಾ ಚುರುಕಾಗಿದ್ದರು. ತಮ್ಮ ಬಳಿ ಬರುವ ಎಲ್ಲಶಾಸಕರ ಬೇಕು ಬೇಡಗಳನ್ನು ಈಡೇರಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಉನ್ನತ ಹುದ್ದೆಯ ನಾಯಕರವರೆಗೂ ಅವರು ಕೈಗೆ ಸಿಗುತ್ತಿದ್ದರು. ಇದರಿಂದಾಗಿ ಪಕ್ಷ ದೊಳಗೆ ಜನಪ್ರಿಯರಾದರು.  ಬಹುಶಃ ಈ ಗುಣಗಳೇ ಅವರ ಹಿಂದೆ 30ಕ್ಕೂ ಅಧಿಕ ಶಾಸಕರು ಬರಲು ಕಾರಣವಾಗಿರಬಹುದು!

ಅದೇನೇ ಇರಲಿ, ಮಹಾರಾಷ್ಟ್ರದಲ್ಲಿಬಹುದೊಡ್ಡ ರಾಜಕೀಯ ಪಲ್ಲಟಕ್ಕೆ ಏಕನಾಥ ಅವರು ಶ್ರೀಕಾರ ಹಾಕಿದ್ದಾರೆ. ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಿರುವ ಅವರ ಮಂದೆ ಸಾಕಷ್ಟು ಸವಾಲುಗಳಿವೆ. ಅವರ ಬಂಡಾಯಕ್ಕೆ ಬಿಜೆಪಿ ಕೂಡ ಸಾಥ್‌ ನೀಡಿರುವ ಸಾಧ್ಯತೆಗಳಿರುವುದರಿಂದ ಸದ್ಯಧಿಕ್ಕಂತೂ ಬಂಡಾಯದಲ್ಲಿಗೆಲುವು ಅವರಿಗೇ ಒಲಿಯಧಿಬಹುದು. ಆದರೆ, ಮುಂದಿನ ಚುನಾವಣೆಗೆ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕು.



(ಈ ಲೇಖನವು ವಿಜಯ ಕರ್ನಾಟಕದ ಭಾನುವಾರ ಸಂಚಿಕೆಯ ವ್ಯಕ್ತಿಗತ ಅಂಕಣದಲ್ಲಿ ಪ್ರಕಟವಾಗಿದೆ)

 

ಮಂಗಳವಾರ, ಮೇ 17, 2022

Ravindra Jadeja- ಜಡೇಜಾ ಅಂದರೆ 'ಜಯ'

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿಭಾರತೀಯ ಕ್ರಿಕೆಟ್‌ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್‌ನಲ್ಲಿಸಿಎಸ್‌ಕೆ ತಂಡದ ನಾಯಕ.


- ಮಲ್ಲಿಕಾರ್ಜುನ ತಿಪ್ಪಾರ
ಸಂದರ್ಶಕ: ವೃತ್ತಿ ಜೀವನದ ಅಂತ್ಯಕ್ಕೆ ನಿಮ್ಮ ಹೆಸರಿನಲ್ಲಿವಿಶಿಷ್ಟ ದಾಖಲೆ ಯಾವುದು ಇರಬೇಕೆಂದು ಇಚ್ಛಿಸುತ್ತೀರಿ?
ಕ್ರಿಕೆಟಿಗ: ಒಂದೇ ಪಂದ್ಯದಲ್ಲಿ ಐದು ವಿಕೆಟ್‌ ಹಾಗೂ ಶತಕ ಗಳಿಸಿದ ದಾಖಲೆ.

ಹೀಗೆ, ತಮ್ಮ ದಾಖಲೆ ಯಾವುದು ಇರಬೇಕೆಂದು ಹೇಳಿ ಅದನ್ನು ಸಾಧಿಸಿದ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ವಿಶ್ವದ ನಂ.1 ಆಲ್‌ರೌಂಡರ್‌ ರವೀಂದ್ರ ಜಡೇಜಾ. ಆದರೆ, ಅವರ ವೃತ್ತಿಜೀವನ ಅಂತ್ಯವಾಗುತ್ತಿಲ್ಲ; ಈಗಷ್ಟೇ ಉಚ್ಛ್ರಾಯ ಸ್ಥಿತಿಗೆ ತಲುಪಿದೆ!

ಖಾಸಗಿ ಕ್ರೀಡಾ ವಾಹಿನಿಯೊಂದು 2018ರಲ್ಲಿನಡೆಸಿದ ಸಂದರ್ಶನದ ತುಣುಕು ಇದು. ಇದಾಗಿ ನಾಲ್ಕು ವರ್ಷದಲ್ಲೇ ಜಡೇಜಾ ತಮ್ಮ ಕನಸಿನ ದಾಖಲೆ ಪೂರ್ತಿಗೊಳಿಸುವ ಟೆಸ್ಟ್‌ ಪಂದ್ಯವನ್ನು ಆಡಿ­ದರು. ಕಳೆದ ಮಾರ್ಚ್‌ ತಿಂಗಳಲ್ಲಿ ಮೊಹಾಲಿಯಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಜಡೇಜಾ ಅವರು 7ನೇ ವಿಕೆಟ್‌ನಲ್ಲಿ ಅಮೋಘ 175 ರನ್‌ಗಳನ್ನು ಸಿಡಿಸಿ, ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಗೊಂಚಲು ಕೂಡ ಪಡೆದುಕೊಂಡು, ತಮ್ಮ ಕನಸಿನ ದಾಖಲೆ ಸಾಧಿಸಿ ಬೀಗಿದರು. ಈ ಸಂದರ್ಶನದ ತುಣುಕನ್ನು ಯಾಕೆ ಪ್ರಸ್ತಾಪಿಸಬೇಕಾಯಿತು ಎಂದರೆ, ತಾವು ಅಂದುಕೊಂಡಿದ್ದನ್ನು ಛಲ ಬಿಡದೇ ಸಾಧಿಸುವ ಗುಣ ಅವರಲ್ಲಿದೆ. ಆ ಗುಣವೇ ಅವರನ್ನೀಗ ನಾಲ್ಕು ಬಾರಿ ಐಪಿಎಲ್‌ ಚಾಂಪಿಯನ್‌ ಪಟ್ಟ ಏರಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ನಾಯಕತ್ವದವರೆಗೂ ಕರೆ ತಂದಿದೆ. 

ವರ್ಷದಿಂದ ವರ್ಷಕ್ಕೆ ಪರಿಪೂರ್ಣ ಆಟಗಾರರಾಗಿ ಬದಲಾಗುತ್ತಿರುವ ರವೀಂದ್ರ ಜಡೇಜಾ ಭಾರತೀಯ ಕ್ರಿಕೆಟ್‌ನ ಬಹುದೊಡ್ಡ ಆಸ್ತಿ ಮತ್ತು ಇದೇ ಮಾತನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೂ ಅನ್ವಯಿಸಬಹುದು. ಜಡೇಜಾ 2012ರ ಆವೃತ್ತಿಯಿಂದ ಸಿಎಸ್‌ಕೆ ಬಳಗದಲ್ಲಿದ್ದಾರೆ. ಆ ಆವೃತ್ತಿಯ ಹರಾಜಿನಲ್ಲಿ ಅವರನ್ನು 9.8 ಕೋಟಿ ರೂಪಾಯಿಗೆ ಸಿಎಸ್‌ಕೆ ಫ್ರಾಂಚೈಸಿ ಖರೀದಿಸಿತ್ತು. ಅದು ಆಗ ದಾಖಲೆ. ಕಳೆದ ಹರಾಜಿಗೂ ಮೊದಲು 16 ಕೋಟಿ ರೂಪಾಯಿ ತೆತ್ತು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. 33 ವರ್ಷದ ಜಡೇಜಾ ಐಪಿಎಲ್‌ ಸಿಎಸ್‌ಕೆ ಪರವಾಗಿ ಅದ್ಭುತವಾದ ಆಟವನ್ನೇ ಆಡಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 200 ಪಂದ್ಯಗಳನ್ನಾಡಿ 2386 ರನ್‌ಗಳೊಂದಿಗೆ 127 ವಿಕೆಟ್‌ ಕೂಡ ಕಿತ್ತಿದ್ದಾರೆ. 

ಕ್ರಿಕೆಟ್‌ನಲ್ಲಿ ‘ಸವ್ಯಸಾಚಿ’ಗಳಿಗೂ ಎಂದಿಗೂ ವಿಶೇಷ ಸ್ಥಾನವಿದೆ. ಕ್ರಿಕೆಟ್‌ ಇತಿಹಾಸವನ್ನು ನೋಡಿದರೆ ಗ್ಯಾರಿ ಸೋಬರ್ಸ್‌, ಜಾಕಸ್‌ ಕಾಲಿಸ್‌, ಕಪಿಲ್‌ ದೇವ್‌, ಇಮ್ರಾನ್‌ ಖಾನ್‌, ರಿಚರ್ಡ್‌ ಹ್ಯಾಡ್ಲಿ, ಕೇಥ್‌ ಮಿಲ್ಲರ್‌, ಲ್ಯಾನ್ಸ್‌ ಕ್ಲುಸ್ನರ್‌, ಟೋನಿ ಗ್ರೇಗ್‌ನಂಥ ಆಟಗಾರರು ಕ್ರಿಕೆಟ್‌ಗೆ ಹೊಸ ಮೆರುಗು ತಂದುಕೊಟ್ಟಿದ್ದಾರೆ. ಅದೇ ಸಾಲಿನಲ್ಲಿ ಜಡೇಜಾ ಕೂಡ ಸಾಗುತ್ತಿದ್ದಾರೆ. ಬ್ಯಾಟ್‌, ಬಾಲ್‌ ಮತ್ತು ಫೀಲ್ಡಿಂಗ್‌ ಮೂಲಕ ತಮ್ಮ ತಂಡವನ್ನು ಯಶಸ್ಸಿನ ದಡಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಪ್ರತಿ ಪಂದ್ಯದಲ್ಲಿ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಭಾರತೀಯ ಟೆಸ್ಟ್‌ ಕ್ರಿಕೆಟ್‌ ತಂಡದ ಕಾಯಂ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ ಹಾಗೂ ಅವರ ಪ್ರಯತ್ನದ ಫಲವಾಗಿ ಹಲವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. ಹಾಗಾಗಿ, ಅವರನ್ನು ‘ಮ್ಯಾಚ್‌ ವಿನ್ನರ್‌’ ಎಂದು ಹೇಳಿದರೆ ಅತಿಯಾಗದು. ಟೆಸ್ಟ್‌ ಆಗಲಿ, ಒನ್‌ ಡೇ, ಟಿ20 ಅಥವಾ ಐಪಿಎಲ್‌ ಪಂದ್ಯವೇ ಆಗಿರಲಿ, ಸೋಲಿನ ಅಂಚಿನಲ್ಲಿದ್ದ ತಂಡವನ್ನು ಏಕಾಂಗಿಯಾಗಿ ಬ್ಯಾಟ್‌ ಹಾಗೂ ಬಾಲ್‌ ಮೂಲಕ ಮೇಲಕ್ಕೆತ್ತಿದ ಉದಾಹರಣೆಗಳಿವೆ.

ಹಾಗಂತ, ಅವರೇನೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅದ್ಭುತವಾದ್ದನ್ನು ಮಾಡುವುದಿಲ್ಲ. ಬದಲಿಗೆ, ತಮ್ಮ ಆಟ­ವನ್ನು ಶಿಸ್ತುಬದ್ಧವಾಗಿ ಆಡುತ್ತಾರಷ್ಟೇ. ಉದಾಹರಣೆಗೆ, ರವೀಚಂದ್ರನ್‌ ಅಶ್ವಿನ್‌ ರೀತಿಯಲ್ಲಿ ಜಡೇಜಾ ಅವ­ರೇನೂ ಒಂದೇ ಓವರ್‌ನಲ್ಲಿ 6 ಬಾಲ್‌ಗಳನ್ನು ಒಂದ­ಕ್ಕಿಂತ ಒಂದು ಭಿನ್ನವಾಗಿ ಎಸೆಯುವುದಿಲ್ಲ. ಬದಲಿಗೆ ಸ್ಟಂಪ್‌ ಟು ಸ್ಟಂಪ್‌ ಹಾಗೂ ಲೈನ್‌ ಮತ್ತು ಲೆಂಥ್‌ ಕರಾರು­ವಕ್ಕಾಗಿ ಬೌಲಿಂಗ್‌ ಮಾಡುತ್ತಾರೆ. ಅವರ ಶಿಸ್ತಿನ  ಬೌಲಿಂಗ್‌ಗೆ ಪಿಚ್‌ ಕೂಡ ಸಾಥ್‌ ನೀಡಿದರೆ ಮುಗೀತು ಎದುರಾಳಿಯ ವಿಕೆಟ್‌ಗಳು ಬೀಳುತ್ತಾ ಹೋಗುತ್ತವೆ. ಬ್ಯಾಟಿಂಗ್‌ನಲ್ಲೂ ಅಷ್ಟೇ ವಿಶೇಷವಾದ್ದನ್ನು ಏನೂ ಮಾಡಲು ಹೋಗುವುದಿಲ್ಲ, ಚೆಂಡಿನ ದಿಕ್ಕು ಮತ್ತು ಗತಿಯನ್ನು ಗುರು­ತಿಸಿ ಅದನ್ನು ಅಷ್ಟೇ ಶಿಸ್ತು ಬದ್ಧವಾಗಿ ಬಲವಾಗಿ ಹೊಡೆಯುತ್ತಾರೆ; ಚೆಂಡು ಬೌಂಡ್ರಿ ಗೆರೆಯನ್ನು ದಾಟಿರುತ್ತದೆ. ಇನ್ನು ಫೀಲ್ಡಿಂಗ್‌ನಲ್ಲಿ ಮಾತಾಡು­ವಂತೆಯೇ ಇಲ್ಲ, ಬಹುಶಃ ಮೊಹಮ್ಮದ್‌ ಕೈಫ್‌ ಮತ್ತು ಯುವರಾಜ್‌ ಸಿಂಗ್‌ ಅವರ ಬಳಿಕ ಭಾರತಕ್ಕೆ ಸಿಕ್ಕ ಅದ್ಭುತ ಫೀಲ್ಡರ್‌ ಇವರು. ಅವರ ಬಳಿ ಬಾಲ್‌ ಹೋದರೆ ಎದುರಾಳಿ ತಂಡದ ಬ್ಯಾಟರ್‌ ರನ್‌ ಕದಿಯಲು ಮುಂದಾಗುವುದೇ ಇಲ್ಲ! ಅಷ್ಟರ ಮಟ್ಟಿಗೆ ಅವರ ಥ್ರೋಗಳು ಕರಾರುವಕ್ಕಾಗಿ­ರುತ್ತವೆ ಮತ್ತು ಫೀಲ್ಡಿಂಗ್‌ ಮೂಲಕವೇ ಬೌಂಡರಿಗಳನ್ನು ಉಳಿಸಿ ತಂಡಕ್ಕೆ ನೆರವಾಗುವ ಚಾಕಚಕ್ಯತೆ ಅವರಲ್ಲಿ ಇದೆ. ಈ ವರೆಗೆ 59 ಟೆಸ್ಟ್‌ಗಳಿಂದ 242 ವಿಕೆಟ್‌ ಹಾಗೂ 2 ಶತಕಗಳೊಂದಿಗೆ 2369 ರನ್‌ ಗಳಿಸಿದ್ದಾರೆ. 168 ಅಂತಾರಾಷ್ಟ್ರೀಯ ಒಂದು ದಿನದ ಪಂದ್ಯಗಳನ್ನಾಡಿ 2411 ರನ್‌ಗಳೊಂದಿಗೆ 188 ವಿಕೆಟ್‌ಗಳನ್ನು ಪಡೆದುಕೊಂಡಿ­ದ್ದಾರೆ. 57 ಟಿ20 ಪಂದ್ಯಗಳಲ್ಲಿ47 ವಿಕೆಟ್‌ ಹಾಗೂ 326 ರನ್‌ ಗಳಿಸಿದ್ದಾರೆ.

1988 ಡಿಸೆಂಬರ್‌ 6ರಂದು ರವೀಂದ್ರ ಜಡೇಜಾ ಗುಜರಾತ್‌ನ ಜಾಮ್‌ನಗರದ ರಜಪೂತ್‌ ಕುಟುಂಬದಲ್ಲಿ ಜನಿಸಿದರು. ತಂದೆ ಅನಿರುದ್ಧ ಖಾಸಗಿ ಏಜೆನ್ಸಿ ಪರವಾಗಿ ವಾಚ್‌ಮನ್‌ ಕೆಲಸ ಮಾಡುತ್ತಿದ್ದರು.  ಮಗ ಸೇನೆ ಸೇರಿಕೊಳ್ಳಲಿ ಎಂದು ತಂದೆ ಆಸೆ ಪಟ್ಟರೆ ಕ್ರಿಕೆಟ್‌ ಆಗುವ ಕನಸು ಕಂಡಿದ್ದ ಜಡೇಜಾಗೆ ತಾಯಿ ಲತಾ ಆಸರೆಯಾಗಿ ನಿಂತಿದ್ದರು. ಆದರೆ, ವಿಧಿ ಬೇರೆಯದ್ದೇ ಆಟ ಹೂಡಿತ್ತು. 2005ರಲ್ಲಿಅವರ ತಾಯಿ ರಸ್ತೆ ಅಪಘಾತದಲ್ಲಿಮೃತಪಟ್ಟರು. ಆಗ ಜಡೇಜಾ ಅವರಿಗೆ ಕೇವಲ 17 ವರ್ಷ. ತೀವ್ರ ಆಘಾತಕ್ಕೆ ಒಳಗಾಗಿದ್ದ ಅವರು ಕ್ರಿಕೆಟ್‌ ತೊರೆಯುವ ನಿರ್ಧಾರ ಮಾಡಿದ್ದರಂತೆ. ಆದರೆ, ತಾಯಿ ಆಸೆ ನೆರವೇರಿಸುವ ಪಣ ತೊಟ್ಟಂತೆ ತಮಗೆ ಸಿಕ್ಕ ಅವಕಾಶ­ಗಳನ್ನು ಬಾಚಿಕೊಂಡು ಜಡೇಜಾ ಈಗ ವಿಶ್ವದ ನಂ.1 ಆಲ್‌ರೌಂಡರ್‌ ಆಗಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದಾರೆ. 2016ರಲ್ಲಿರೀವಾ ಸೋಲಂಕಿಯನ್ನು ವರಿಸಿದರು, ದಂಪತಿಗೆ ಒಂದು ಹೆಣ್ಣು ಮಗುವಿದೆ. 

‘ಜಡ್ಡು’, ‘ರಾಕ್‌ ಸ್ಟಾರ್‌’, ‘ಸರ್‌ ಜಡೇಜಾ’ ಇತ್ಯಾದಿ ಅಡ್ಡ  ಹೆಸರುಗಳನ್ನು ಹೊಂದಿರುವ ಜಡೇಡಾ, ಮೈದಾನದಲ್ಲಿಶತಕ ಅಥವಾ ಅರ್ಧ ಶತಕ ಸಿಡಿಸಿದಾಗ ಕತ್ತಿ ವರಸೆ ರೀತಿಯಲ್ಲಿ ಬ್ಯಾಟ್‌ ಬೀಸುವುದನ್ನು ನೋಡುವುದೇ ಚೆಂದ. 16ನೇ ವಯಸ್ಸಿಗೆ ಜಡೇಜಾ ಅಂಡರ್‌ 19 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದರು. ಆದರೆ, ಭಾರತ ತಂಡ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದೆ 2008ರಲ್ಲೂ ಅಂಡರ್‌-19 ಟೀಮ್‌ ಆಯ್ಕೆಯಾದರಲ್ಲದೇ ವೈಸ್‌ ಕ್ಯಾಪ್ಟನ್‌ ಕೂಡ ಆದರು. ಆಗ ಕ್ಯಾಪ್ಟನ್‌ ಆಗಿದ್ದವರು ಮತ್ತೊಬ್ಬ ದಿಗ್ಗಜ ವಿರಾಟ್‌ ಕೊಹ್ಲಿ. ಈ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತೀಯ ತಂಡ ವಿಶ್ವಕಪ್‌ ಎತ್ತಿ ಹಿಡಿಯಿತು. ಜಡೇಜಾ 6 ಪಂದ್ಯಗಳಿಂದ 10 ವಿಕೆಟ್‌ ಪಡೆದುಕೊಂಡರು. 2006-07ರ ಸಾಲಿನ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟರು. ದೇಶಿಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ಪರವಾಗಿ ಅವರು ಆಡುತ್ತಾರೆ. ರಣಜಿ ಪಂದ್ಯದಲ್ಲಿ ವಿಶಿಷ್ಟ ಸಾಧನೆ ಅವರ ಹೆಸರಿನಲ್ಲಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರು ತ್ರಿಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದಲ್ಲಿ 8ನೇ ಆಟಗಾರ ಎಂಬ ಖ್ಯಾತಿ ಅವರ ಬೆನ್ನಿಗಿದೆ. 2008-09ರ ಸಾಲಿನ ರಣಜಿ ಕ್ರಿಕೆಟ್‌ ಪಂದ್ಯಾವಳಿ ಅದ್ಭುತ ಆಲ್‌ರೌಂಡ್‌ ಆಟದಿಂದ ಆಯ್ಕೆಗಾರ ಗಮನ ಸೆಳೆದರು. ಈ ಟೂರ್ನಿಯಲ್ಲಿ ಅವರು 739 ರನ್‌ ಹಾಗೂ 42 ವಿಕೆಟ್‌ ಪಡೆದುಕೊಂಡು, ಭಾರತೀಯ  ಒಂದು ದಿನದ ಕ್ರಿಕೆಟ್‌ ತಂಡದ ಕದ ತಟ್ಟಿದರು. ಕೊಲಂಬೊದಲ್ಲಿ ನಡೆದ ತಮ್ಮ ಮೊದಲ ಅಂತಾರಾಷ್ಟ್ರೀಯ ಒಡಿಐನಲ್ಲಿ 60 ರನ್‌ ಗಳಿಸಿದರು. ಆದರೆ, ಯಾವುದೇ ವಿಕೆಟ್‌ ಪಡೆಯಲಿಲ್ಲ. 2012ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ನಂತರ ಜಡ್ಡು ನಿಧಾನವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ತಂಡದ ಅವಿಭಾಜ್ಯ ಅಂಗವಾದರು.

ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಅದರದ್ದೇ ಆದ ಮಹತ್ವವಿದೆ; ವಿಶಿಷ್ಟ ಪರಂಪರೆಯಿದೆ. ಯಾಕೆಂದರೆ, ವಿಶ್ವದ ಅತ್ಯುತ್ತಮ ಕ್ಯಾಪ್ಟನ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಮಹೇಂದ್ರ ಸಿಂಗ್‌ ಧೋನಿ ಅವರು ಸಿಎಸ್‌ಕೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯದಿದ್ದಾರೆ. ಆ ತಂಡದ ನೇತೃತ್ವ  ಈಗ ಸವ್ಯಸಾಚಿ ಜಡೇಜಾ ಹೆಗಲಿಗೇರಿದೆ. ಈವರೆಗೆ ಅವರ ಆಟವನ್ನು ನೋಡುತ್ತಾ ಬಂದವರಿಗೆ ನಾಯಕನಾಗಿಯೂ ಜಡೇಜಾ ಯಶಸ್ವಿಯಾಗುತ್ತಾರೆಂಬ ನಂಬಿಕೆ ಸಿಎಸ್‌ಕೆ ತಂಡದ ಅಭಿಮಾನಿಗಳದ್ದು.



ಬುಧವಾರ, ಫೆಬ್ರವರಿ 16, 2022

Fearless Businessman Rahul Bajaj - ಹಮಾರಾ 'ರಾಹುಲ್‌ ಬಜಾಜ್‌'

 ಭಾರತದ ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್‌ ಬಜಾಜ್‌, ಅಜ್ಜನಿಂದ ಬಂದ ಬಜಾಜ್‌ ಆಟೊ ಕಂಪನಿಯನ್ನು ಉತ್ತುಂಗಕ್ಕೇರಿಸಿದವರು.


1970 
‘ಬಲಾಢ್ಯ ನಾಯಕಿ’ ಪ್ರಧಾನಿ ಇಂದಿರಾ ಗಾಂಧಿ ಅವರು ‘ಲೈಸೆನ್ಸ್‌ ರಾಜ್‌’ ಹೆಸರಿನಲ್ಲಿಉತ್ಪಾದನಾ ವಲಯವನ್ನು ಅನಗತ್ಯ ನಿಯಂತ್ರಣಕ್ಕೊಳಪಡಿಸಿದ್ದರು. ಈ ವ್ಯವಸ್ಥೆಯ ಪರಿಣಾಮ ಖರೀದಿದಾರರು ಸ್ಕೂಟರ್‌ ಬುಕ್‌ ಮಾಡಿ, ಅದನ್ನು ಖರೀದಿಸಲು ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಆಗ ರಾಹುಲ್‌ ಬಜಾಜ್‌ ಅವರು ಸಂದರ್ಶನವೊಂದರಲ್ಲಿ, ‘‘ಹೆಚ್ಚಿನ ಭಾರತೀಯರಿಗೆ ಅಗತ್ಯವಿರುವ ಸರಕುಗಳ ಉತ್ಪಾದನೆಗಾಗಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ ಹೋಗಲು ಸಿದ್ಧ,’’ ಎಂದು ಹೇಳಿದ್ದರು.

2019
‘ವಿಕ’ ಸೋದರ ಪತ್ರಿಕೆ ‘ದಿ ಎಕನಾಮಿಕ್‌ ಟೈಮ್ಸ್‌’ ಪತ್ರಿಕೆಯ ಇಟಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿಮಾತನಾಡಿದ್ದ ರಾಹುಲ್‌ ಬಜಾಜ್‌, ‘‘ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರದ ಎರಡನೇ ಅವಧಿಯಲ್ಲಿಯಾರನ್ನು ಬೇಕಾದರೂ ನಾವು ಟೀಕಿಸಲು ಅವಕಾಶವಿತ್ತು. ಆದರೆ, ಈಗ ಅಂಥ ವಾತಾವರಣ ಇಲ್ಲ. ಉದ್ಯಮದಲ್ಲಿಅನೇಕರಿಗೆ ಈ ಭಾವನೆ ಇದೆ. ಉದ್ಯಮದ ಗೆಳೆಯರ ಮನಸ್ಸಿನಲ್ಲಿಯೂ ಅನೇಕ ವಿಷಯಗಳಿವೆ. ಆದರೆ, ಯಾರೂ ಮಾತನಾಡುತ್ತಿಲ್ಲ. ಆದರೆ, ನಾನು ಮಾತನಾಡುತ್ತೇನೆ,’’ ಎಂದಿದ್ದರು. ವಿಶೇಷ ಎಂದರೆ, ಇದೇ ಕಾರ್ಯಕ್ರಮದಲ್ಲಿಗೃಹ ಸಚಿವ ಅಮಿತ್‌ ಶಾ ಕೂಡ ಇದ್ದರು!

***

ಮೇಲಿನ ಈ ಎರಡೂ ಘಟನೆಗಳು, ಶನಿವಾರ ನಿಧನರಾದ ಉದ್ಯಮಿ ರಾಹುಲ್‌ ಬಜಾಜ್‌ ಅವರ ವ್ಯಕಿತ್ವವನ್ನು ಪರಿಚಯಿಸುತ್ತವೆ. ಉದ್ಯಮ ಹಿತಾಸಕ್ತಿಗಳ ಹೊರತಾಗಿಯೂ ಅವರು ವ್ಯವಸ್ಥೆಯ ವಿರುದ್ಧ ಮಾತಾಡಬೇಕಾದ ಅಗತ್ಯ ಎನಿಸಿದರೆ ಯಾರಿಗೂ ಹೆದರದೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಇಷ್ಟಪಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉದ್ಯಮ ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲೂಬಜಾಜ್‌ ಕುಟುಂಬ ಪಾಲ್ಗೊಂಡಿದೆ, ಅಜ್ಜ ಜಮನ್‌ಲಾಲ್‌ ಬಜಾಜ್‌, ಚಿಕ್ಕಪ್ಪ ರಾಮಕೃಷ್ಣ ಬಜಾಜ್‌ ಅವರು ಹೋರಾಟದಲ್ಲಿಪಾಲ್ಗೊಂಡು, ಜೈಲುವಾಸ ಅನುಭವಿಸಿದ್ದರು. ಬಜಾಜ್‌ ಕುಟುಂಬದ ಹಿನ್ನೆಲೆ ಮತ್ತು ರಾಹುಲ್‌ ಬಜಾಜ್‌ ಅವರನ್ನು ತುಲನೆ ಮಾಡಿದಾಗ ಸಾರ್ವಜನಿಕವಾಗಿ ಅವರು ತೋರಿದ ಧೈರ್ಯ ಮತ್ತು ಉದ್ಯಮದಲ್ಲಿಅವರು ಅಳವಡಿಸಿಕೊಂಡ ಬಂದ ನೀತಿಗಳ ಸೂಧಿರ್ತಿಮೂಲದ ಪರಿಚಯವಾಗುತ್ತದೆ. 

ರಾಹುಲ್‌ ತಮ್ಮ ಗೆಳೆಯರ ಬಳಗ, ಉದ್ಯಮದ ಸ್ನೇಹಿತರ ವಲಯದಲ್ಲಿಮೊದಲಿನಿಂದಲೂ, ‘ಬಾರ್ನ್‌ ಆ್ಯಂಟಿ ಎಸ್ಟಾಬ್ಲಿಷ್‌ಮೆಂಟ್‌’ ಮತ್ತು ‘ಫಿಯರ್‌ಲೆಸ್‌’ ಎಂದು ಗುರುತಿಸಿಕೊಂಡಿದ್ದರು. ಈ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ ಕೂಡ. ಉದ್ಯಮಿಯಾಗಿ ಬಜಾಜ್‌ ಗ್ರೂಪ್‌ ಕಂಪನಿಗಳನ್ನು ತುಂಬ ಎತ್ತರಕ್ಕೆ ಕೊಂಡೊಯ್ಯುವಲ್ಲಿಅವರ ಕಾಣಿಕೆ ಮರೆಯುವಂತಿಲ್ಲ. ಆಟೊ, ಹಣಕಾಸು, ಸಾರ್ಜನಿಕ ಸೇವೆಯಲ್ಲಿಅವರು ತೋರಿದ ಅಪ್ರತಿಮ ಸಾಧನೆಗಳ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿಅಲ್ಪ ಕಾಣಿಕೆ ದೊರೆತಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ. 

ರಾಹುಲ್‌ ಬಜಾಜ್‌ 1938 ಜೂನ್‌ 10ರಂದು ಪಶ್ಚಿಮ ಬಂಗಾಳದ ಕೊಲ್ಕೊತಾದಲ್ಲಿಜನಿಸಿದರು. ತಂದೆ ಕಮಲನಯನ ಬಜಾಜ್‌, ಇವರು ಉದ್ಯಮಿ ಜತೆಗೆ ರಾಜಕಾರಣಿಯೂ ಹೌದು. ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಹುಲ್‌, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಜಮನ್‌ಲಾಲ್‌ ಬಜಾಜ್‌ ಅವರ ಮೊಮ್ಮಗ. 1958ರಲ್ಲಿದಿಲ್ಲಿಯ ಸೇಂಟ್‌ ಸ್ಟೀಫನ್‌ ಕಾಲೇಜಿನಿಂದ ಪದವಿ ಪಡೆದ ರಾಹುಲ್‌, ಬಾಂಬೆ ವಿಶ್ವವಿದ್ಯಾಲಯದಲ್ಲಿಕಾನೂನು ಅಧ್ಯಯನ ಮಾಡಿದರು. ಅಲ್ಲಿಂದ ಅಮೆರಿಕಕ್ಕೆ ತೆರಳಿ ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ನಲ್ಲಿಎಂಬಿಎಂ ಮಾಡಿದರು. 

1965ರಲ್ಲಿಎಂಬಿಎ ಪದವಿ ಪಡೆದು ಭಾರತಕ್ಕೆ ಮರಳಿದ ರಾಹುಲ್‌ ಮೊದಲಿಗೆ ಕಂಪನಿಯ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಆಗಿ ಸೇರಿಕೊಂಡು, ಮಾರ್ಕೆಟಿಂಗ್‌, ಅಕೌಂಟ್ಸ್‌, ಪರ್ಚೇಸ್‌ ಮತ್ತು ಆಡಿಟ್‌ಗಳಂಥ ಪ್ರಮುಖ ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ಆಗ ಬಜಾಜ್‌ನ ಆಟೊ ಸಿಇಒ ಆಗಿದ್ದ ನಾವಲ್‌ ಕೆ ಫಿರೋದಿಯಾ ಅವರ ಮಾರ್ಗದರ್ಶನದಲ್ಲಿಉದ್ಯಮ, ವ್ಯಾಪಾರದ ಪಟ್ಟುಗಳನ್ನು ಕಲಿತರು. 1972ರಲ್ಲಿರಾಹುಲ್‌ ತಂದೆ ಕಮಲನಯನ ಬಜಾಜ್‌ ನಿಧನರಾದರು. ಇದಕ್ಕೂ ಮೊದಲೇ ಸಿಇಒ ಆಗಿದ್ದ ಫಿರೋದಿಯಾ ಕೂಡ ಕಂಪನಿ ತೊರೆದಿದ್ದರು. ಹಾಗಾಗಿ, ರಾಹುಲ್‌ ಅವರನ್ನೇ ಬಜಾಜ್‌ ಆಟೊ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ವ್ಯವಹಾರ ಚತುರ ಮತ್ತು ಮಹತ್ವಾಕಾಂಕ್ಷಿಯಾಗಿದ್ದ ರಾಹುಲ್‌, ಸಣ್ಣ ಆಟೊ ಕಂಪನಿ ಎನಿಸಿಕೊಂಡಿದ್ದ ಬಜಾಜ್‌ನ್ನು ಜಗತ್ತಿನ ಬೃಹತ್‌ ಕಂಪನಿಗಳಲ್ಲಿಒಂದಾಗಿಸಿದರು. ಅವರ ನಾಯಕತ್ವದಲ್ಲಿಬಜಾಜ್‌ ಗ್ರೂಪ್‌ ಯಶಸ್ಸಿನ ಉತ್ತುಂಗ ತಲುಪಿತು. ಒಂದೇ ದಶಕದಲ್ಲಿಶತಕೋಟಿ ವ್ಯವಹಾರ ಮಾಡುವ ಕಂಪನಿಯಾಗಿ ಬೆಳೆಯಿತು. ಬಜಾಜ್‌ ಆಟೊ ಬೆಳವಣಿಗೆಯಲ್ಲಿಚೇತಕ್‌ ಸ್ಕೂಟರ್‌ ಮತ್ತು ಪಲ್ಸರ್‌ ಮೋಟರ್‌ ಸೈಕಲ್‌ ಸಕ್ಸೆಸ್‌ ಬಹಳ ಪಾತ್ರ ನಿರ್ವಹಿಸಿದೆ. ಈಗಿನ ಕಾಲದ ಬಹಳ ಮಂದಿಗೆ ಗೊತ್ತಿಲ್ಲ, ಬಜಾಜ್‌ ಚೇತಕ್‌ ಸ್ಕೂಟರ್‌ ಬುಕ್‌ ಮಾಡಿ, ಅದನ್ನು ಖರೀದಿಸಲು ಐದಾರು ವರ್ಷ ಕಾಯಬೇಕಾದ ಪರಿಸ್ಥಿತಿ ಇತ್ತು. ಅಷ್ಟರ ಮಟ್ಟಿಗೆ ಬೇಡಿಕೆ ಸೃಷ್ಟಿಯಾಗಿತ್ತು. ‘ಹಮಾರಾ ಬಜಾಜ್‌’ ನಿಜಾರ್ಥದಲ್ಲಿಭಾರತದ ಸ್ಕೂಟರೇ ಆಗಿತ್ತು ಎಂದು ವಿಶ್ಲೇಷಿಸಬಹುದು. ಭಾರತವು ಉದಾರೀಕರಣಕ್ಕೆ ಹೊರಳುತ್ತಿದ್ದ ಕಷ್ಟದ ಅವಧಿಯಲ್ಲಿ ಕಂಪನಿ ಈ ಮಟ್ಟಿಗೆ ಯಶಸ್ಸು ಸಾಧಿಸಿತು. ಇದಕ್ಕೆ ರಾಹುಲ್‌ ಬಜಾಜ್‌ ತೋರಿದ ನಾಯಕತ್ವ, ಪ್ರಾವೀಣ್ಯ ಮತ್ತು ಸಾಮರ್ಥ್ಯ‌ವೇ ಕಾರಣ.

ಜಮನ್‌ಲಾಲ್‌ ಬಜಾಜ್‌ 1926ರಲ್ಲಿಸ್ಥಾಪಿಸಿದ ಬಜಾಜ್‌ ಕಂಪನಿ ಇಂದು ಜಗತ್ತಿನ ದೈತ್ಯ ಕಂಪನಿಗಳಲ್ಲಿಒಂದಾಗಿದೆ, 60 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದೆ ಎಂದರೆ ಅದಕ್ಕೆ ರಾಹುಲ್‌ ಕೊಡುಗೆ ಸಾಕಷ್ಟಿದೆ. ರಾಹುಲ್‌ 2008ರಲ್ಲಿ ಕಂಪನಿಯನ್ನು ಮೂರು ವಿಭಾಗಗಳಾಗಿ ಅಂದರೆ, ಬಜಾಜ್‌ ಆಟೊ, ಫೈನಾನ್ಸ್‌ ಕಂಪನಿ ಬಜಾಜ್‌ ಫಿನ್‌ಸರ್ವ್‌ ಮತ್ತು ಹೋಲ್ಡಿಂಗ್‌ ಕಂಪನಿಯಾಗಿ ವಿಂಗಡಿಸಿದರು. ಅವರ ನೇತೃತ್ವದಲ್ಲಿಬಜಾಜ್‌ ಆಟೋ ಉತ್ತುಂಗ ತಲುಪಿದ್ದು ಎಷ್ಟು ನಿಜವೋ ಅಷ್ಟೇ ಸಂಕಟವನ್ನು ಎದುರಿಸಿದೆ ಎನ್ನಬಹುದು. 2001ರಲ್ಲಿಅಂದರೆ, ಉದಾರೀಕರಣದ ಬಳಿಕ ಮಾರುಕಟ್ಟೆಯಲ್ಲಿಕಂಪನಿಯ ವಾಹನಗಳ ಮಾರಾಟ ತೀವ್ರ ಕುಸಿತ ಕಂಡಿತ್ತು. ಹೋಂಡಾ, ಸುಜುಕಿ, ಯಮಹಾದಂಥ ಕಂಪನಿಗಳು ಹೊಸ ಹೊಸ ಮೋಟಾರ್‌ಸೈಕಲ್‌ಗಳನ್ನು ಪರಿಚಯಿಸಿ ಭಾರತೀಯ ಮಾರುಕಟ್ಟೆಯ ಒಟ್ಟು ಚಿತ್ರಣವನ್ನು ಬದಲಿಸಿದವು. ಇದರಿಂದ ಬಜಾಜ್‌ ಕೊಂಚ ವಿಚಲಿತವಾದಂತೆ ಕಂಡು ಬಂದಿತಾದರೂ, ಕಂಪನಿಯು ಪಲ್ಸರ್‌ ಮೋಟಾರ್‌ ಸೈಕಲ್‌ ಬಿಡುಗಡೆ ಮಾಡುವ ಮೂಲಕ ಎಲ್ಲನಿರೀಕ್ಷೆಗಳನ್ನು ಮೀರಿ ಯಶಸ್ಸು ಸಾಧಿಸಿತು. ಮುಂದಿನ 10ರಿಂದ 15 ವರ್ಷ ಪಲ್ಸರ್‌ ಅಕ್ಷ ರಶಃ ಮಾರುಕಟ್ಟೆ ಲೀಡರ್‌ ಆಗಿತ್ತು. ಬಜಾಜ್‌ ಕಂಪನಿಯ ಯಶಸ್ಸಿನಲ್ಲಿಚೇತಕ್‌ ಮತ್ತು ಪಲ್ಸರ್‌ಗಳು ಮಹತ್ವದ ಕೊಡುಗೆ ನೀಡಿವೆ ಎಂದು ಹೇಳುವುದು ಇದೇ ಕಾರಣಕ್ಕೆ. 

2005ರಲ್ಲಿರಾಹುಲ್‌ ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದು ಜವಾಬ್ದಾರಿಯನ್ನು ಹಿರಿಯ ಪುತ್ರ ರಾಜೀವ್‌ ಬಜಾಜ್‌ಗೆ ವಹಿಸಿದರು. ಆ ಬಳಿಕ 2006ರಿಂದ 2010ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದರು. 2016ರಲ್ಲಿಫೋರ್ಬ್ಸ್‌ ಪ್ರಕಟಿಸಿದ ಜಗತ್ತಿನ ಕೋಟ್ಯಧೀಶರ ಪಟ್ಟಿಯಲ್ಲಿರಾಹುಲ್‌ ಬಜಾಜ್‌ 722ನೇ ಸ್ಥಾನದಲ್ಲಿದ್ದರು. 1979-80 ಮತ್ತು 1999-2000 ಎರಡು ಅವಧಿಯಲ್ಲಿಸಿಐಐ(ಭಾರತೀಯ ಕೈಗಾರಿಕೆಗಳ ಒಕ್ಕೂಟ) ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಅನನ್ಯ ಕಾರ್ಯನಿರ್ವಹಣೆಗಾಗಿ 2017ರಲ್ಲಿಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಸಿಸಿಐ ಪ್ರೆಸಿಡೆಂಟ್‌ ಅವಾರ್ಡ್‌ ಪ್ರದಾನ ಮಾಡಿದ್ದರು. 2021ರ ಏಪ್ರಿಲ್‌ನಲ್ಲಿಬಜಾಜ್‌ ಆಟೋದ ಕಾರ್ಯನಿರ್ವಾಹಕೇತರ ಅಧ್ಯಕ್ಷ  ಸ್ಥಾನದಿಂದ ಕೆಳಗಿಳಿದು, ಸೋದರಸಂಬಂಧಿ ನೀರಜ್‌ ಬಜಾಜ್‌ಗೆ ಆ ಸ್ಥಾನ ಬಿಟ್ಟುಕೊಟ್ಟರು. ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿ ಸಮ್ಮಾನಗಳು ಅವರನ್ನು ಅರಸಿ ಬಂದಿವೆ. 

ಉದ್ಯಮದಲ್ಲಿಅನನ್ಯ ಸಾಧನೆ ಮಾಡಿದ್ದ ರಾಹುಲ್‌ ಬಜಾಜ್‌ ಅವರ ವೈಯಕ್ತಿಕ ಆಸಕ್ತಿಗಳೂ ಅಷ್ಟೇ ಅನನ್ಯವಾಗಿದ್ದವು. ಕುರ್ತಾ ಅವರ ಅಚ್ಚುಮೆಚ್ಚಿನ ಉಡುಪಾಗಿತ್ತು. ಅವರ ಬಳಿ ಕುರ್ತಾಗಳ ದೊಡ್ಡ ಸಂಗ್ರಹವಿತ್ತು. ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್‌ ಬಜಾಜ್‌ ನಿರ್ಗಮನ ಖಂಡಿತವಾಗಿಯೂ ಭಾರತೀಯ ಉದ್ಯಮಕ್ಕೆ ಕಾಡಲಿದೆ.


ಈ ಲೇಖನವು ವಿಜಯ ಕರ್ನಾಟಕದ 2022 ಫೆ.13ರ ಸಂಚಿಕೆಯಲ್ಲಿ ಪ್ರಕಟವಾಗಿದೆ


ಭಾನುವಾರ, ಜನವರಿ 9, 2022

Mother of Orphans Sindhutai Sapkal : ಅನಾಥರ ಆಯಿ ಸಿಂಧುತಾಯಿ ಸಕಪಾಳ್

 ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಕಂದಮ್ಮಗಳಿಗೆ ಅವ್ವಳಾದ ಸಿಂಧುತಾಯಿ ಬದುಕೇ ಸಂಘರ್ಷ. ‘ಚಿಂದಿ’ಯಿಂದ ‘ಚಿನ್ನ’ದಂಥ ತಾಯಿ ಆಗೋವರೆಗಿನ ಕತೆ ಸ್ಫೂರ್ತಿದಾಯಕ.


- ಮಲ್ಲಿಕಾರ್ಜುನ ತಿಪ್ಪಾರ
‘ಎಲ್ಲೆಡೆಯೂ ತಾನಿರಲು ಸಾಧ್ಯವಿಲ್ಲಎಂದು ದೇವರು ತಾಯಿಯನ್ನು ಸೃಷ್ಟಿಸಿದ’ ಎಂಬ ಮಾತಿದೆ. ಈ ಮಾತು ಸಿಂಧುತಾಯಿ ಸಪಕಾಳ್‌ ವಿಷಯದಲ್ಲಿನಿಜವಾಗಿದೆ. ‘ಅನಾಥಾಚಿ ಆಯಿ’(ಅನಾಥರ ತಾಯಿ) ಎಂದು ಖ್ಯಾತರಾದ ಅವರು ಅನಾಥ ಮಕ್ಕಳಿಗೆ ಅಕ್ಷ ರಶಃ ದೇವರಾದರು, ತನ್ನ ಹೊಟ್ಟೆಯಲ್ಲಿಹುಟ್ಟಿದ ಮಕ್ಕಳಂತೆ ಸಾಕಿ, ಸಲುಹಿದರು. ಅವರು ತಮ್ಮ ಬದುಕಿನ ಪೂರ್ತಿ 1500ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಸರೆಯಾದರು. ಈ ಕುಟುಂಬ ಬೆಳೆದು ಈಗ ದೊಡ್ಡದಾಗಿದೆ. 282 ಅಳಿಯಂದಿರು, 47 ಸೊಸೆಯರು ಸೇರಿಕೊಂಡಿದ್ದಾರೆ.

‘ಅನಾಥಮಕ್ಕಳ ಅವ್ವ’ ಸಿಂಧುತಾಯಿ ಬದುಕು ಪೂರ್ತಿ ಸಂಘರ್ಷವೇ. ಆಕೆಯ ಜೀವನದ ಪ್ರತಿಪುಟದಲ್ಲೂದೌರ್ಜನ್ಯ, ಅವಮಾನ, ಹಿಂಸೆಯೇ ತುಂಬಿದೆ. ಆದರೂ ಧೃತಿಗೆಡದೇ ಅವರು ತಮ್ಮನ್ನು ತಾವು ರೂಪಿಸಿಕೊಂಡು, ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಸ್ವೀಕರಿಸುವವರೆಗಿನ ಪಯಣ ಯಾರಿಗಾದರೂ ಸ್ಫೂರ್ತಿಯಾಗಬಲ್ಲದು. ಅನಾಥರ ಪಾಲಿನ ದೈವ ಎನಿಸಿಕೊಂಡ ಸಿಂಧುತಾಯಿ, ಹಿಂದೊಮ್ಮೆ ಅನಾಥವಾಗಿಯೇ ಮನೆಯಿಂದ ಹೊರಹಾಕಲ್ಪಟ್ಟ ನತದೃಷ್ಟ ಹೆಣ್ಣುಮಗಳು!

1948 ನವೆಂಬರ್‌ 14ರಂದು ಮಹಾರಾಷ್ಟ್ರ ವಾರ್ಧಾ ಜಿಲ್ಲೆಯ ಪಿಂಪ್ರಿ ಮೆಘೇ ಹಳ್ಳಿಯ ಕಡುಬಡತನದ ಕುಟುಂಬ­ವೊಂದರಲ್ಲಿಜನಿಸಿದರು. ಅಂದಿನ ಕಾಲದಲ್ಲಿಹೆಣ್ಣು ಮಕ್ಕಳು ಜನಿಸಿತೆಂದರೆ ಯಾರಿಗೂ ಸಂತೋಷವೇ ಇರುತ್ತಿರಲಿಲ್ಲ. ಸಿಂಧುತಾಯಿ ವಿಷಯದಲ್ಲಿಈ ಹಣೆಬರಹ ಬದಲಾಗಲಿಲ್ಲ. ಆದರೆ, ಎಂಥ ನಿಕೃಷ್ಟ ಸ್ಥಿತಿ ಎದುರಾಗಿತ್ತು ಎಂದರೆ, ಆ ಹೆಣ್ಣು ಮಗುವಿಗೆ ‘ಚಿಂದಿ’ ಎಂದು ಕರೆಯುತ್ತಿದ್ದರಂತೆ! ಇಂಥ ಮನಸ್ಥಿತಿಯ ಜನರು ಇರುವಾಗ ಸಿಂಧುತಾಯಿ ಬಾಲ್ಯ ಹೇಗೆ ಚೆನ್ನಾಗಿರಲು ಸಾಧ್ಯ? ನಾಲ್ಕನೇ ತರಗತಿ ಮುಗಿಯುತ್ತಿದ್ದಂತೆ, ನವರಾಂವ್‌ ಹಳ್ಳಿಯ 25 ವರ್ಷದ ಶ್ರೀಹರಿ ಸಪಕಾಳ್‌ಗೆ ಮದುವೆ ಮಾಡಿಕೊಟ್ಟರು. ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದಾತ. ಆದರೆ, ಹೆಂಡತಿಗೆ ವಿಪರೀತ ಕಾಟ ಕೊಡುತ್ತಿದ್ದ. ಸಿಂಧು ತಾಯಿ 20 ವರ್ಷಕ್ಕೆ ಬರು­ವಷ್ಟರ ಹೊತ್ತಿಗಾಗಲೇ ಎರಡು ಮಕ್ಕಳಗಾಗಿದ್ದವು. ಗಂಡನ ಕಿರುಕುಳವೂ ಮಿತಿಮೀರಿತ್ತು. ಸ್ಥಳೀಯ ಸಾಹುಕಾರನೊಬ್ಬ ಸಿಂಧುತಾಯಿ ಹೊಟ್ಟೆಯಲ್ಲಿದ್ದ ಮೂರನೇ ಮಗುವಿನ ಬಗ್ಗೆ ಪುಕಾರು ಹಬ್ಬಿಸಿದ. ಇದನ್ನೇ ಸತ್ಯ ಎಂದು ನಂಬಿದ ಗಂಡ ಇನ್ನಷ್ಟು ಕಿರುಕುಳ ನೀಡಲಾರಂಭಿಸಿದ. ಬಸುರಿಯಿದ್ದಾಗಲೇ ಆಕೆಯ ಹೊಟ್ಟೆಗೆ ಒದ್ದು, ದನದ ಕೊಟ್ಟಿಗೆಗೆ ಹಾಕುವ ಮೂಲಕ ವಿಕೃತಿ ಮೆರೆದಿದ್ದ. ದನಗಳು ತುಳಿದು ಸಾಯಿಸಲಿ ಎಂದೇ ಕೊಟ್ಟಿಗೆಗೆ ಹಾಕಿದ್ದಂತೆ. ಆದರೆ, ದನವೊಂದು ಬಸುರಿ ಸಿಂಧುತಾಯಿ ರಕ್ಷ ಣೆಗೆ ನಿಂತು ಬೇರೆ ಯಾವುದೇ ದನಗಳು ಹತ್ತಿರ ಸುಳಿಯದಂತೆ ನೋಡಿಕೊಂಡಿತಂತೆ. ಈ ವಿಷಯವನ್ನು ಸ್ವತಃ ಸಿಂಧುತಾಯಿ ಅವರು 2016ರಲ್ಲಿಹೇಳಿಕೊಂಡಿದ್ದಾರೆ. 

ಸಿಂಧುತಾಯಿ ಬವಣೆಯ ಬದುಕು ಇಷ್ಟಕ್ಕೆ ನಿಲ್ಲಲಿಲ್ಲ. ಗಂಡನ ದೌರ್ಜನ್ಯಕ್ಕೆ ರೋಸಿ ಹೋಗಿ 10 ದಿನದ ಮಗುವಿನೊಂದಿಗೆ ತಂದೆ-ತಾಯಿ ಊರಿಗೆ ಹೋದರೆ, ಅಲ್ಲಿಯೂ ತಿರಸ್ಕಾರದ ಸ್ವಾಗತ. ತಂದೆ, ತಾಯಿ ಅವರನ್ನು ಒಳಗೇ ಬಿಟ್ಟುಕೊಳ್ಳಲಿಲ್ಲ. ಅಲ್ಲಿಂದ ಹೊರಬಿದ್ದ ಅವರಿಗೆ ಬದುಕಲೇಬೇಕೆಂಬ ಹಠ. ಅದಕ್ಕಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರೈಲ್ವೆ ನಿಲ್ದಾಣ, ಸ್ಮಶಾನಗಳೇ ಆಸರೆಗಳಾಗಿದ್ದವು. ಸ್ಮಶಾನದ ಹೆಣಗಳ ಮೇಲಿದ್ದ ಬಟ್ಟೆ, ಅನ್ನವೇ ಆಹಾರ, ಭಿಕ್ಷೆಯೇ ಮೃಷ್ಟಾನ್ನವಾಗಿತ್ತು.

ಭಿಕ್ಷ ಕರ ಜತೆಗೇ ಜೀವನ ಸಾಗಿತ್ತು. ರೈಲ್ವೆ ನಿಲ್ದಾಣದಲ್ಲಿಮಲಗಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ಯವ್ವನದಲ್ಲಿದ್ದ ತನ್ನನ್ನು ಮಗುವನ್ನು ಯಾರಾದರೂ ಅಪಹರಿಸಿದರೆ ಎಂಬ ಚಿಂತೆ ಎದುರಾಗುತ್ತಿದ್ದಂತೆ, ನಗರದ ಸ್ಮಶಾನಭೂಮಿ ಸುರಕ್ಷಿತ ತಾಣ ಎಂದರಿತು ಅಲ್ಲಿಗೆ ಹೋದರು. ಆ ದಿನಗಳು ತಮ್ಮ ಬದುಕಿನ ಅತ್ಯಂತ ಕೆಟ್ಟ ದಿನಗಳು ಎಂದ ಆಗಾಗ ನೆನೆಪಿಸಿಕೊಳ್ಳುತ್ತಿದ್ದರು ಅವರು. ಸ್ಮಶಾನದಲ್ಲಿದ್ದಾಗ ಹಸಿವು ಆದಾಗ ತಿನ್ನಲು ಏನೂ ಇರುತ್ತಿರಲಿಲ್ಲ. ಆದರೆ, ಹೊಟ್ಟೆಯ ಬೆಂಕಿಯನ್ನು ಆರಿಸಲು ಹೆಣದ ಬೆಂಕಿಯ ಸಹಾಯ ಪಡೆದುಕೊಳ್ಳದೇ ವಿಧಿಯೇ ಇರಲಿಲ್ಲ! ಸ್ಮಶಾನದಲ್ಲಿಯಾರೋ ನಾದಿದ ಗೋಧಿ ಹಿಟ್ಟನ್ನು ಗೋರಿಯ ಮೇಲೆ ಬಿಟ್ಟು ಹೋಗಿದ್ದರಂತೆ, ಅದು ಕೊಳೆಯುವ ಸ್ಥಿತಿಗೆ ತಲು­ಪಿತ್ತು. ಅದನ್ನೇ ನೀರಿನಲ್ಲಿಅದ್ದಿ, ಮುರಿದ ಮಡಿಕೆಯಲ್ಲಿಟ್ಟು ಹೆಣದ ಚಿತೆಯ ಮೇಲಿಟ್ಟು ರೊಟ್ಟಿ ಮಾಡಿ, ಹಸಿವು ನೀಗಿಸಿಕೊಳ್ಳಬೇಕಾದ ಊಹಾತೀತ ಪರಿಸ್ಥಿತಿಯನ್ನು ಅವರು ಎದುರಿಸಿದ್ದಾರೆ. 

ಆ ಕೆಟ್ಟ ಪರಿಸ್ಥಿತಿಯೇ ಸಿಂಧುತಾಯಿಗೆ ಹೊಸ ಹುಟ್ಟು ನೀಡಿತು. ಯಾಕೆಂದರೆ, ಆಗಲೇ ಅವರು ನಿರ್ಧರಿಸಿದ್ದರಂತೆ, ತಾನು ಹೊಸ ಜೀವವನ್ನು ಆರಂಭಿಸಬೇಕು. ಬಾಳಿನಲ್ಲಿಬಂದಿದ್ದನ್ನು ಛಲದಿಂದ ಎದುರಿಸಬೇಕೆಂದು ತಮ್ಮೊಳಗೇ ಶಪಥ ಮಾಡಿಕೊಂಡು ಮುನ್ನುಗ್ಗಿದರು. ಆ ನಂತರ ಅವರು ತನ್ನಂಥ ಅದೆಷ್ಟೋ ಅನಾಥಮಕ್ಕಳಿಗೆ ನೆರವಾದರು, ಅವರ ಬದಕನ್ನು ಹಸನು ಮಾಡಿದರು. ತಾವು ಮಾತ್ರ ಬದುಕುವುದಲ್ಲದೇ ತನ್ನಂಥ ನೂರಾರು ಜನರಿಗೆ ಸಹಾಯ ಮಾಡಿದರು. ಆದಿವಾಸಿಗಳ ಕಷ್ಟಕ್ಕೆ ಮರುಗಿದರು. ಸಮಾಜದ ಕಟ್ಟಕಡೆಯಲ್ಲಿರುವವರ ಮಕ್ಕಳನ್ನು ಎದೆಗಪ್ಪಿಕೊಂಡು ಬೆಳೆಸಿದರು.

1971ರಲ್ಲಿಅಮರಾವತಿ ಜಿಲ್ಲೆಯ ಚಿಖಲ್ದಾರಾ ಎಂಬ ಗುಡ್ಡಗಾಡು ಊರಿಗೆ ಹೋಗಿ, ಅಲ್ಲಿಆದಿವಾಸಿಗಳ ಪರವಾಗಿಯೂ ಸಿಂಧುತಾಯಿ ಹೋರಾಟ ನಡೆಸಿದರು. ಹುಲಿ ಸಂರಕ್ಷ ಣೆಗಾಗಿ ಕಾಡಿನಲ್ಲಿದ್ದ 84 ಆದಿವಾಸಿ ಕುಟುಂಬಗಳನ್ನು ಹೊರದಬ್ಬಲಾಗಿತ್ತು. ಅವರ ಪರವಾಗಿ ಹೋರಾಟ ನಡೆಸಿದರು. ಸಿಂಧುತಾಯಿ ಹೋರಾಟದ ಕಿಚ್ಚಿಗೆ ಸಣ್ಣ ಉದಾಹರಣೆಯನ್ನು ನೀಡಬಹುದು. ಹುಲಿ ಸಂರಕ್ಷ ಣಾ ಅರಣ್ಯ ಉದ್ಘಾಟನೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚಿಖಲ್ದಾರಾಗೆ ಬಂದಿದ್ದರು. ಈ ವೇಳೆ ಸಿಂಧುತಾಯಿ ಕಾಡು ಪ್ರಾಣಿಗಳಿಂದ ಆದಿವಾಸಿಗಳು ಅನುಭವಿಸುತ್ತಿ­ರುವ ನೋವನ್ನು ಅಭಿವ್ಯಕ್ತಿಸುವ ಫೋಟೊ­ವೊಂದನ್ನು ಇಂದಿರಾ ಗಾಂಧಿ ಎದುರು ಪ್ರದರ್ಶಿಸಿದರು. ‘‘ದನಕ್ಕೆ ಕಾಡು ಪ್ರಾಣಿ ಹಾನಿ ಮಾಡಿದಾಗ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಆದರೆ, ಆದಿವಾಸಿ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡರೂ ಅಧಿಕಾರಿಗಳು ಕ್ಯಾರೆ ಮಾಡುವುದಿಲ್ಲ. ಮನುಷ್ಯರ ನೋವಿಗೆ ಬೆಲೆ ಇಲ್ಲವೇ?’’ ಎಂದು ಇಂದಿರಾ ಗಾಂಧಿ ಅವರನ್ನು ಪ್ರಶ್ನಿಸಿದರಂತೆ. ತಕ್ಷ ಣವೇ ಪ್ರಧಾನಿ ಪರಿಹಾರಕ್ಕೆ ಆದೇಶಿಸಿದರು! 

ಇದೇ ವೇಳೆ ಆದಿವಾಸಿ ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಮಕ್ಕಳ ಸ್ಥಿತಿಯನ್ನು ಕಂಡು ಅವರ ಆಸರೆಗೆ ಮುಂದಾದರು. ಇಲ್ಲಿಂದ ಆರಂಭವಾದ ಅನಾಥ ಮಕ್ಕಳ ರಕ್ಷ ಣೆ ನಿಧಾನವಾಗಿ ಮಹಾರಾಷ್ಟ್ರದಾದ್ಯಂತ ಹರಡಿ­ಕೊಂಡಿತು. ವಿಶೇಷವಾಗಿ ಪುಣೆಯ ಸುತ್ತಮುತ್ತ ಅನಾಥರಿಗೆ ಸಿಂಧುತಾಯಿ ಆಸರೆಯಾದರು. ಇದಕ್ಕಾಗಿ ನಾನಾ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಈ ಪೈಕಿ ಮದರ್‌ ಗ್ಲೋಬಲ್‌ ಫೌಂಡೇಷನ್‌, ಸನ್ಮತಿ ಬಾಲ ನಿಕೇತನ, ಮಮತಾ ಬಾಲ ಸದನ, ಸಪ್ತಸಿಂಧು ಮಹಿಳಾ ಆಧಾರ್‌, ಬಾಲಸಂಗೋಪನ ಮತ್ತು ಶಿಕ್ಷ ಣ ಟ್ರಸ್ಟ್‌ ಹೀಗೆ ಎಲ್ಲಸಂಸ್ಥೆಗಳು ಅನಾಥರ ರಕ್ಷ ಣೆಗೆ ಮೀಸಲಾದವು. ಹೀಗೆ ಶುರುವಾದ ಅವರ ಅನಾಥ ಮಕ್ಕಳ ಸಾಕುವ ಕೈಂಕರ್ಯ ನಿರಂತರವಾಗಿ ನಡೆದುಕೊಂಡು ಬಂತು. ಜನರು ಪ್ರೀತಿಯಿಂದ ‘ಅನಾಥರ ಅವ್ವ’ ಎಂದು ಕರೆಯಲಾರಂಭಿಸಿದರು. ಸಿಂಧುತಾಯಿಯ ಮಾನವೀಯ ಕಾರ್ಯ ಕಂಡು ಹಲವು ಪ್ರಶಸ್ತಿ, ಗೌರವವಗಳು ಹುಡುಕಿಕೊಂಡು ಬಂದವು. ಪದ್ಮಶ್ರೀ(2021) ಸೇರಿದಂತೆ 700ಕ್ಕೂ ಹೆಚ್ಚು ಪ್ರಶಸ್ತಿಗಳು ಅವ­ರಿಗೆ ಸಂದಿವೆ. 2010ರಲ್ಲಿಸಿಂಧುತಾಯಿ ಜೀವನಕತೆ ಆಧರಿಸಿ ನಿರ್ದೇಶಕ ಅನಂತ ನಾರಾಯಣ ಮಹಾದೇವನ್‌ ಅವರು ‘ಮೀ ಸಿಂಧುತಾಯಿ ಸಪಕಾಳ್‌’ ಮರಾಠಿ ಸಿನಿಮಾ ಮಾಡಿದ್ದರು. 

ಮಹಿಳಾ ಶಕ್ತಿಗೆ ಗಡಿಗಳೇ ಇಲ್ಲಎಂಬುದನ್ನು ಸಿಂಧುತಾಯಿ ನಿರೂಪಿಸಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಅವರು ಸಾಧಿಸಿದ್ದಾರೆ. 74 ವರ್ಷ ಬದುಕಿದ ಸಿಂಧುತಾಯಿ, ಲಕ್ಷಾಂತರ ಅಬಲೆ­ಯರು ಎನಿಸಿಕೊಂಡಿರುವ ಹೆಣ್ಣು­ಮಕ್ಕಳಿಗೆ ಸ್ಫೂರ್ತಿಯ ಕಿಡಿ. ಅಂಥ ಮಹಾತಾಯಿ ಜ.4ರಂದು ಇಹ­ಲೋಕ ತ್ಯಜಿಸಿದರು. ಆದರೆ ಅವರು ತೋರಿದ ತಾಯಿ ವಾತ್ಸಲ್ಯ, ಮಮತೆಗಳು ಮಾತ್ರ ಮಾಸಲಾರವು.


(ಈ ಲೇಖನವು ವಿಜಯ ಕರ್ನಾಟಕದ 2022ರ ಜನವರಿ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ)


ಸೋಮವಾರ, ಅಕ್ಟೋಬರ್ 25, 2021

NCB Mumbai Zonal Director Sameer Wankhede: ಡ್ರಗ್ಸ್ ವಿರುದ್ಧ ಸಮೀರ್ ವಾಂಖೆಡೆ ಸಮರ

 ಮುಂಬಯಿಯಲ್ಲಿ ಐಆರ್‌ಎಸ್ ಅಧಿಕಾರಿ ವಾಂಖೆಡೆ ಅವರು ಡ್ರಗ್ಸ್ ಜಾಲದ ವಿರುದ್ಧ ಸಮರವನ್ನೇ ಸಾರಿದ್ದಾರೆ. ಮಾದಕ ದ್ರವ್ಯ ಹಾಗೂ ಬಾಲಿವುಡ್ ನಡುವಿನ ನಂಟನ್ನು ಭೇದಿಸುವಲ್ಲಿ ನಿರತರಾಗಿದ್ದಾರೆ.

- ಮಲ್ಲಿಕಾರ್ಜುನ ತಿಪ್ಪಾರ
ಸಮೀರ್ ವಾಂಖೆಡೆ. ಈ ಹೆಸರನ್ನು ಕೇಳಿದರೆ ಬಾಲಿವುಡ್ ಸೆಲೆಬ್ರಿಟಿಗಳು ಬೆಚ್ಚಿ ಬೀಳುತ್ತಿದ್ದಾರೆ. ಮಾದಕ ದ್ರವ್ಯ ಸೇವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲಘಿ, ಈ ಹಿಂದೆ ಅವರು ಕಸ್ಟಮ್ಸ್ ಸೇವೆಯಲ್ಲಿದ್ದಾಗಲೂ ಸೆಲೆಬ್ರಿಟಿಗಳು ಥರಗುಟ್ಟಿದ್ದರು! ಅವರು ಮುಂಬಯಿ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿದ್ದರು. ಆಗಲೂ ಹೊರ ದೇಶಗಳಿಂದ ತರುತ್ತಿದ್ದ ಬೆಲೆ ಬಾಳುವ ವಸ್ತುಗಳಿಗೆ ತೆರಿಗೆ ಪಾವತಿಸದೇ ಬಿಟ್ಟುಕೊಡುತ್ತಿರಲಿಲ್ಲ ಈ ಖಡಕ್ ಅಧಿಕಾರಿ. ಹಾಗಾಗಿ, ಬಾಲಿವುಡ್ ಹಾಗೂ ವಾಂಖೆಡೆ ಅವರ ಮಧ್ಯೆ ಮೊದಲಿನಿಂದಲೂ ಒಂಥರಾ ಲವ್ ಆ್ಯಂಡ್ ಹೇಟ್ ಸಂಬಂಧ!

ಒಂದು ವರ್ಷದಿಂದ ವಾಂಖೆಡೆ ಅವರು, ಗಣ್ಯ ವಲಯದಲ್ಲಿ ಹೆಪ್ಪುಗಟ್ಟಿರುವ ಮಾದಕ ಸೇವನೆ, ಮಾರಾಟದ ಜಾಲವನ್ನು ಭೇದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 2020ರ ಜೂನ್ ತಿಂಗಳಲ್ಲಿ ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ ಆತ್ಮಹತ್ಯೆ ಪ್ರಕರಣ ತನಿಖೆಯು ವಿಸ್ತಾರಗೊಳ್ಳುತ್ತಿದ್ದಂತೆ ಡ್ರಗ್ಸ್‌ನ ಭಯಾನಕತೆಗಳು ಅನಾವರಣಗೊಂಡವು. ಅಲ್ಲಿಂದ ಶುರುವಾದ ವಾಂಖೆಡೆ ಅವರ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯು ಸದ್ಯ ‘ಸೂಪರ್ ಸ್ಟಾರ್’ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನವರೆಗೂ ಸಾಗಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಮಾದಕ ದ್ರವ್ಯ ಬಳಕೆಯ ಸಂಗತಿಗಳು ಬಯಲಾಗಿದ್ದವು. ಆಗ ಸುಶಾಂತ್‌ನ ಗೆಳತಿ ರೇಹಾ ಚಕ್ರವರ್ತಿ ಹಾಗೂ ಆಕೆಯ ಸಹೋದರನನ್ನು ಬಂಧಿಸಲಾಗಿತ್ತು. ಜೊತೆಗೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್‌ಪ್ರೀತ್ ಸಿಂಗ್, ಭಾರ್ತಿ ಸಿಂಗ್ ಇತ್ಯಾದಿ ನಟಿಯರನ್ನು ಡ್ರಗ್ಸ್ ಸಂಬಂಧ ವಿಚಾರಣೆಗೊಳಪಡಿಸಲಾಗಿತ್ತು. ಇದೀಗ ಆರ್ಯನ್ ಖಾನ್ ಪ್ರಕರಣವು ಬಾಲಿವುಡ್‌ನ ಇತರೆ ಸೆಲೆಬ್ರಿಟಿಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಈಗಾಗಲೇ ನಟಿ ಅನನ್ಯಾ ಪಾಂಡೆ ಎರಡು ಬಾರಿ ವಿಚಾರಣೆ ಎದುರಿಸಿದ್ದಾಳೆ. ಈ ಎಲ್ಲದರ ಹಿಂದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಮುಂಬಯಿ ರೆನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಕರ್ತವ್ಯ ಎದ್ದು ಕಾಣುತ್ತಿದೆ. ಕಾನೂನು ಪಾಲನೆಯೊಂದನ್ನೇ ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅವರಿಗೆ, ಸೆಲೆಬ್ರಿಟಿ ಅಥವಾ ಸಾಮಾನ್ಯರು ಎಂಬ ತಾರತಮ್ಯವಿಲ್ಲಘಿ. ಯಾರು ತಪ್ಪು ಮಾಡುತ್ತಾರೋ ಅವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. 

ಇಷ್ಟಾಗಿಯೂ ಅವರು ಆರೋಪಗಳಿಂದ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವುದಕ್ಕಾಗಿ ವಾಂಖೆಡೆ ಸೆಲೆಬ್ರಿಟಿಗಳ  ಬೆನ್ನು ಹಿಂದೆ ಬಿದ್ದಿದ್ದಾರೆ ಎಂಬ ಆರೋಪ ಸಾಮಾನ್ಯವಾಗಿದೆ. ಜೊತೆಗೆ ಎನ್‌ಸಿಪಿಯ ನಾಯಕ ನವಾಬ್ ಮಲಿಕ್ ಅವರಂತೂ, ಬಾಲಿವುಡ್ ಸೆಲೆಬ್ರಿಟಿಗಳಿಂದ ವಾಂಖೆಡೆ ಅವರು ಸುಲಿಗೆಗಿಳಿದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದುಘಿ, ಅವರನ್ನು ಜೈಲಿಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ ಎಂದಿದ್ದಾರೆ. ಜೊತೆಗೆ, ದುಬೈ ಮತ್ತು ಮಾಲ್ಡೀವ್ಸ್‌ಗೆ ವಾಂಖೆಡೆ ತೆರಳಿದ್ದ ೆಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆಲ್ಲಘಿ, ಸಮೀರ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಜೊತೆಗೆ, ಆರ್ಯನ್ ಖಾನ್ ಬಂಧನದ ವೇಳೆಯ ಹಾಜರಿದ್ದ ಕೆಲವು ಖಾಸಗಿ ವ್ಯಕ್ತಿಗಳಿಂದಾಗಿ ವಾಂಖೆಡೆ ಅವರ ಒಟ್ಟಾರೆ ಉದ್ದೇಶದ ಮೇಲೂ ಶಂಕೆ ಮೂಡುತ್ತಿರುವುದು ಸುಳ್ಳಲ್ಲಘಿ. ಇದಕ್ಕೆಲ್ಲ ಅವರು ಸಮರ್ಥನೆ ನೀಡಿದ್ದಾರೆಂಬುದು ಬೇರೆ ಮಾತು. 

ವಿಶೇಷ ಏನೆಂದರೆ, ಸಮೀರ್ ಪತ್ನಿ ಕ್ರಾಂತಿ ರೇಡ್ಕರ್ ಕೂಡಾ ಒಬ್ಬ ನಟಿ. ಮರಾಠಿ ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಹೆಸರಿದೆ. ಅಜಯ್ ದೇವಗನ್ ನಟನೆಯ ‘ಗಂಗಾಜಲ್’ ಚಿತ್ರದಲ್ಲೂ ಕ್ರಾಂತಿ ನಟಿಸಿದ್ದಾರೆ. ಹಾಗಾಗಿ, ಸಮೀರ್ ಅವರಿಗೆ ಚಿತ್ರರಂಗ ಹೊಸದಲ್ಲ. ಅಲ್ಲಿ ನಡೆಯುವ ಬೆಳವಣಿಗೆಗಳು, ಹೈಕ್ಲಾಸ್ ಸೊಸೈಟಿಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಅರಿವು ಅವರಿಗಿದೆ.

ಎನ್‌ಸಿಬಿಯ ಮುಂಬಯಿ ರೆನಲ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುವ ಮೊದಲು ಮಹಾರಾಷ್ಟ್ರ ಸರ್ವೀಸ್ ಟ್ಯಾಕ್ಸ್ ವಿಭಾಗದಲ್ಲಿದ್ದರು. ಆಗ ಅವರು ತೆರಿಗೆ ವಂಚಿಸುತ್ತಿದ್ದ ಸುಮಾರು 2,500 ಮಂದಿ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಪೈಕಿ 200 ಸೆಲೆಬ್ರಿಟಿಗಳಿದ್ದರು. ಎರಡು ವರ್ಷದಲ್ಲಿ ಮುಂಬಯಿನಲ್ಲೇ ಒಟ್ಟು 87 ಕೋಟಿ ರೂಪಾಯಿಯನ್ನು ಖಜಾನೆಗೆ ಹರಿದು ಬರುವಂತೆ ಮಾಡಿದ್ದರು. 2011ರಲ್ಲಿ ಭಾರತೀಯ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದಿತು. ಆಗ ತಂಡಕ್ಕೆ ನೀಡಲಾಗಿದ್ದ ಟ್ರೋಫಿಯಲ್ಲಿ  ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಇದೆ. ಹಾಗಾಗಿ, ತೆರಿಗೆ ಪಾವತಿಸಿಯೇ ಪಡೆದುಕೊಳ್ಳಬೇಕೆಂದು ಇವರು ಪಟ್ಟು ಹಿಡಿದಿದ್ದರು. ಕಸ್ಟಮ್ಸ್ ತೆರಿಗೆ ಕೊಟ್ಟ ಮೇಲೆಯೇ ಟ್ರೋಫಿಯನ್ನು ಕ್ಲಿಯರ್ ಮಾಡಿದ್ದರು. ಅವರ ಈ ನಡೆಯೂ ಭಾರೀ ಚರ್ಚೆಗೆ ಕಾರಣವಾಗಿತ್ತುಘಿ.

2013ರಲ್ಲಿ ವಿದೇಶಿ ಕರೆನ್ಸಿಯನ್ನು ಹೊಂದಿದ್ದ ಗಾಯಕ ಮಿಕಾ ಸಿಂಗ್ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ಅದೇ ರೀತಿ, ಅನುರಾಗ್ ಕಶ್ಯಪ್, ವಿವೇಕ್ ಒಬೇರಾಯ್ ಮತ್ತು ರಾಮಗೋಪಾಲ್ ವರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಾಂಖೆಡೆ ಅವರ ತನಿಖಾ ಕ್ಷಕಿರಣಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ಮುಂಬಯಿಯೊಂದರಲ್ಲೇ ವಾಂಖೆಡೆ ಹಾಗೂ ಅವರ ತಂಡವು 17 ಸಾವಿರ ಕೋಟಿ ರೂ. ವೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದೆ! ಮಾದಕ ದ್ರವ್ಯ ಜಾಲ ಭೇದಿಸುವ ಅವರ ಈ ಕಾರ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ದೈಹಿಕ ಹಲ್ಲೆಗೂ ಒಳಗಾಗಿದ್ದಾರೆ ವಾಂಖೆಡೆ. 2020 ನವೆಂಬರ್ 22ರಂದು 60 ಮಂದಿ ಇದ್ದ ಡ್ರಗ್ ಪೆಡ್ಲರ್‌ಗಳ ಗುಂಪೊಂದು ವಾಂಖೆಡೆ ಹಾಗೂ ಎನ್‌ಸಿಬಿಯ ಇತರ ಐದು ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿ ವೇಳೆ ವಾಂಖೆಡೆ ಅವರಿಗೆ ಸಣ್ಣ ಪುಟ್ಟ ಗಾಯಳಾದವು. ಆದರೆ, ತಂಡದ ಇತರ ಸದಸ್ಯರು ತೀವ್ರವಾಗಿ ಗಾಯಗೊಂಡರು. ಅವರನ್ನು ಬೆದರಿಸುವ ಹಲವು ಘಟನೆಗಳು ನಡೆಯುತ್ತಲೇ ಇವೆ. ಆದರೆ, ವಾಂಖೆಡೆ ಅದಾವುದಕ್ಕೂ ತಲೆಕೆಡಿಸಿಕೊಳ್ಳದೇ ಬಾಲಿವುಡ್ ಹಾಗೂ ಮಾದಕ ದ್ರವ್ಯ ಜಾಲ ನಡುವಿನ ನಂಟನ್ನು ಭೇದಿಸುವ ಕೆಲಸವನ್ನು ಮುಂದುವರಿಸಿದ್ದಾರೆ. 

2008ರ ಬ್ಯಾಚಿನ ಐಆರ್‌ಎಸ್ ಅಧಿಕಾರಿಯಾಗಿರುವ ಸಮೀರ್ ಅವರ ಮೊದಲಿಗೆ ಮುಂಬಯಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲಿ ಡೆಪ್ಯುಟಿ ಕಸ್ಟಮ್ಸ್ ಕಮಿಷನರ್ ಆಗಿದ್ದರು. ಆ ಬಳಿಕ ಅವರನ್ನು ದಿಲ್ಲಿ ಹಾಗೂ ಆಂಧ್ರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು. ಅಲ್ಲಿಂದ ಅವರು ಡೆಪ್ಯುಟಿ ಕಮಿಷನರ್ ಆ್ ಏರ್ ಇಂಟೆಲಿಜೆನ್ಸ್ ಯುನಿಟ್(ಎಐಯು), ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್‌ಐಎ) ಹೆಚ್ಚುವರಿ ಎಸ್‌ಪಿಯಾಗಿಯೂ ಕೆಲಸ ಮಾಡಿದ್ದಾರೆ. ಇದೀಗ ಎನ್‌ಸಿಬಿ ಮುಂಬಯಿ ರೆನಲ್ ನಿರ್ದೇಶಕರಾಗಿ ದಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. 

ಮೂಲತಃ ಮುಂಬೈನವರೇ ಆಗಿರುವ ಸಮೀರ್ ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ದರು. ಸಮೀರ್-ಕ್ರಾಂತಿ ರೇಡ್ಕರ್ ದಂಪತಿಗೆ ಅವಳಿ ಮಕ್ಕಳಿದ್ದಾರೆ.  42 ವರ್ಷದ ಸಮೀರ್ ವಾಂಖೆಡೆ ಅವರು ಸಾರ್ವಜನಿಕ ಅಧಿಕಾರಿಯಾಗಿ ತೋರಿದ ದಕ್ಷತೆಗಾಗಿ ಮಹಾರಾಷ್ಟ್ರದ ಜಮದಾರ್ ಬಾಪು ಲಕ್ಷ್ಮಣ್ ಲಮಖೆಡೆ ಅವಾರ್ಡ್ ಕೂಡ ಬಂದಿದೆ.

ಮುಂಬಯಿನಲ್ಲಿ ಮಾದಕ ದ್ರವ್ಯ ಮಾರಾಟ, ಸೇವನೆ ವಿರುದ್ಧ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿರುವ ವಾಂಖೆಡೆಗೆ ಸಾಜರ್ವನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಅವರು ತಮ್ಮ ಕೆಲಸದಲ್ಲಿ ತೋರುತ್ತಿರುವ ಧೈರ್ಯ, ಸ್ಥೈರ್ಯ, ಕರ್ತವ್ಯ ಪ್ರಜ್ಞೆಘಿ, ವೃತ್ತಿಪರತೆಯೇ ಅವರಿಗೆ ‘ಗಣ್ಯ’ ಸ್ಥಾನವು ಲಭ್ಯವಾಗುವಂತೆ ಮಾಡಿದೆ. ಆದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಯಾವ ಅಧಿಕಾರಿಯಾಗಿ ಪ್ರಮಾಣಿಕವಾಗಿ, ನಿರ್ಭೀತಿಯಿಂದ ಕೆಲಸ ಮಾಡಲು ಆರಂಭಿಸುತ್ತಾನೋ ಆಗ ಆತನನ್ನು ಹಿಂದಕ್ಕೆ ಎಳೆಯುವ  ಪ್ರಯತ್ನಗಳು ಬೇಕಾದಷ್ಟು ನಡೆಯುತ್ತವೆ. ಇದಕ್ಕೆ ವಾಂಖೆಡೆ ಕೂಡ ಅವರು ಹೊರತಾಗಿಲ್ಲಘಿ. ಈಗಾಗಲೇ ಅದು ಅವರ ಅನುಭವವಕ್ಕೂ ಬಂದಿದೆ. ಇದು ವ್ಯವಸ್ಥೆಯ ದೋಷ. ಇದೆಲ್ಲವನ್ನೂ ಮೀರಿ ಮುನ್ನಡೆಯುವ ಛಾತಿ ವಾಂಖೆಡೆ ಅವರಿಗಿದೆ ಎಂಬುದು ಈಗಾಗಲೇ  ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.


ಈ ಲೇಖನವು ವಿಜಯ ಕರ್ನಾಟಕದ, 2021ರ ಅಕ್ಟೋಬರ್ 24ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಭಾನುವಾರ, ಆಗಸ್ಟ್ 1, 2021

Billionaire investor Rakesh Jhunjhunwala: 'ಷೇರುಪೇಟೆ ಸರದಾರ'ನ ವಿಮಾನಯಾನ

‘ಭಾರತೀಯ ವಾರೆನ್‌ ಬಫೆಟ್‌’ ರಾಕೇಶ್‌ ಜುಂಜುನ್‌ವಾಲಾ ಅವರೀಗ ‘ಆಕಾಶ’ಕ್ಕೆ ಏಣಿ ಹಾಕಲು ಅಣಿಯಾಗುತ್ತಿದ್ದಾರೆ. ಷೇರುಪೇಟೆ ಚತುರ ಹೂಡಿಕೆದಾರನ ವಿಮಾನಯಾನ ಸಂಸ್ಥೆಗೆ ಸಕ್ಸೆಸ್‌ ಸಿಗುತ್ತಾ? 


-ಮಲ್ಲಿಕಾರ್ಜುನ ತಿಪ್ಪಾರ
ಷೇರುಪೇಟೆ ವಹಿವಾಟು ಬಲ್ಲವರಿಗೆ, ಹೂಡಿಕೆದಾರರ ವಲಯಕ್ಕೆ  ರಾಕೇಶ್‌ ಜುಂಜುನ್‌ವಾಲಾ ಚಿರಪರಿಚಿತ ಹೆಸರು. ಆದರೆ, ಸಾಮಾನ್ಯರಿಗೆ ಅವರ ಬಗ್ಗೆ ಗೊತ್ತಾಗಿದ್ದು ಅಗ್ಗದ ವಿಮಾನಯಾನ ಸಂಸ್ಥೆ ಆರಂಭಿಸುವ ಬಗ್ಗೆ ಘೋಷಣೆ ಮಾಡಿದಾಗಲೇ!

‘ಭಾರತದ ವಾರೆನ್‌ ಬಫೆಟ್‌’ ಎಂದು ಕರೆಸಿಕೊಳ್ಳುವ 61 ವರ್ಷದ ಈ ಚಾಣಾಕ್ಷ  ಹೂಡಿಕೆದಾರ ಇಡುವ ನಡೆಗಳೇ ನಿಗೂಢ. ಅವರ ಈ ಗುಣಕ್ಕೆ ಅಲ್ಟ್ರಾ ಲೋ ಕಾಸ್ಟ್‌ ಏರ್‌ಲೈನ್‌ ಸ್ಥಾಪನೆಯೇ ಘೋಷಣೆಯೇ ಸಾಕ್ಷಿ. ಯಾಕೆಂದರೆ, ಕೋವಿಡ್‌ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಇಡೀ ವಿಮಾನಯಾನ ವಲಯದ ಮೇಲೆ ‘ಆಕಾಶ’ವೇ ಕಳಚಿ ಬಿದ್ದಿದೆ. ಅದರಿಂದ ಹೊರಬರಲು ಹರಸಾಹಸ ಪಡುತ್ತಿದೆ. ಸಾಂಕ್ರಾಮಿಕ ಪರಿಸ್ಥಿತಿ ಶುರುವಾಗುವ ಕೆಲವು ವರ್ಷಗಳ ಮೊದಲೇ ಕಿಂಗ್‌ ಫಿಶರ್‌ ಸಂಸ್ಥೆ ಬಾಗಿಲು ಹಾಕಿದ್ದರೆ, 2019ರಲ್ಲಿಜೆಟ್‌ ಏರ್‌ವೇಸ್‌ ಕೂಡ ಸೇವೆ ರದ್ದುಪಡಿಸಿತ್ತು. ಜೊತೆಗೆ, ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಕೂಡ ಲಾಭದಲ್ಲಿಲ್ಲ. ಟಾಟಾ ಒಡೆತನದ ವಿಸ್ತಾರ, ಸ್ಪೈಸ್‌ಜೆಟ್‌, ಇಂಡಿಗೋ, ಏರ್‌ ಏಷ್ಯಾ ಸೇರಿ ಕೆಲವು ಸಂಸ್ಥೆಗಳು ಸೇವೆಯನ್ನು ಒದಗಿಸುತ್ತಿವೆ. ಬಹುಶಃ ಕೊರೊನಾದಿಂದ ಅತಿ ಹೆಚ್ಚು ಹೊಡೆತ ಬಿದ್ದಿರುವುದು ವಿಮಾನಯಾನ ಕ್ಷೇತ್ರದ ಮೇಲೆ. ಹಾಗಾಗಿ, ಈ ಕ್ಷೇತ್ರದಲ್ಲಿಹೂಡಿಕೆ ಮಾಡುತ್ತಿರುವ ‘ಬಿಗ್‌ ಬುಲ್‌’ ರಾಕೇಶ್‌ ಜುಂಜುನ್‌ವಾಲಾ ಅವರ ನಡೆ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ.

ಇಂಥ ವಿಷಮ ಪರಿಸ್ಥಿತಿಯಲ್ಲಿ ಈತ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಆರಂಭಿಸಲು ಹೊರಟಿದ್ದಾರೆ ಎಂದರೆ ಅವರ ಲೆಕ್ಕಾಚಾರದ ಬಗ್ಗೆ ಯೋಚಿಸಲೇಬೇಕಾಗುತ್ತದೆ. ಅವರ ಈ ಸಾಹಸಕ್ಕೆ ಇಂಡಿಗೋ ಹಾಗೂ ಜೆಟ್‌ವೇಸ್‌ನ ಮಾಜಿ ಅಧಿಕಾರಿಗಳೂ ಸಾಥ್‌ ನೀಡುತ್ತಿದ್ದಾರೆ. ತಾವು ಸ್ಥಾಪಿಸಲು ಹೊರಟಿರುವ ವಿಮಾನಯಾನ ಸಂಸ್ಥೆಗೆ ರಾಕೇಶ್‌, ‘ಆಕಾಶ್‌ ಏರ್‌’ ಎಂದು ನಾಮಕರಣ ಮಾಡಲಿದ್ದಾರೆ. ಈ ಸಂಸ್ಥೆಯಲ್ಲಿಅವರು ಶೇ.40 ಪಾಲು ಹೊಂದಲಿದ್ದಾರೆ. ಕೆಲವೇ ದಿನಗಳಲ್ಲಿಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡುವ ಸಾಧ್ಯತೆಯೂ ಇದೆ.

ದೊಡ್ಡ ವಿಮಾನ ತಯಾರಿಕಾ ಕಂಪನಿ ಎನಿಸಿಕೊಂಡಿರುವ ಬೋಯಿಂಗ್‌ ಭಾರತೀಯ ಆಕಾಶದಲ್ಲಿಮತ್ತೆ ರೆಕ್ಕೆ ಬಿಚ್ಚಲು ಜುಂಜುನ್‌ವಾಲಾ ಆರಂಭಿಸಲಿರುವ ಸಂಸ್ಥೆ ಬಲ ನೀಡುವ ಸಾಧ್ಯತೆ ಇದೆ. ಯಾಕೆಂದರೆ, ಭಾರತದಲ್ಲಿಜೆಟ್‌ ಏರ್‌ವೇಸ್‌ ಬೋಯಿಂಗ್‌ನ ಅತಿ ದೊಡ್ಡ ಗ್ರಾಹಕನಾಗಿತ್ತು. ಅದು ಬಾಗಿಲು ಹಾಕಿದ ಮೇಲೆ ಭಾರತದಲ್ಲಿಸ್ಪೈಸ್‌ಜೆಟ್‌ ಬಿಟ್ಟು ಬೋಯಿಂಗ್‌ಗೆ ಅಂಥ ಹೇಳಿಕೊಳ್ಳುವ ಗ್ರಾಹಕರಿರಲಿಲ್ಲ. ಉಳಿದ ವಿಯಾನಯಾನ ಕಂಪನಿಗಳು, ಏರ್‌ಬಸ್‌ ತಯಾರಿಸುವ ಕಡಿಮೆ ಅಗಲದ ವಿಮಾನಗಳನ್ನೇ ಹೆಚ್ಚಾಗಿ ಬಳಸುತ್ತಿವೆ. ಹಾಗಾಗಿ, ‘ಆಕಾಶ್‌ ಏರ್‌’ನಿಂದಾಗಿ ಭಾರತೀಯ ಆಕಾಶದಲ್ಲಿಬೋಯಿಂಗ್‌ ವರ್ಸಸ್‌ ಏರ್‌ಬಸ್‌ ಸ್ಪರ್ಧೆಯನ್ನು ಮತ್ತೆ ಕಾಣಬಹುದು. ಮುಂದಿನ ನಾಲ್ಕು ವರ್ಷಗಳಲ್ಲಿ180 ಆಸನಗಳುಳ್ಳ ಸುಮಾರು 70 ವಿಮಾನಗಳನ್ನು ಖರೀದಿಸುವ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ.

‘ಫೋರ್ಬ್ಸ್‌ ಇಂಡಿಯಾ’ ಪ್ರಕಾರ ರಾಕೇಶ್‌ ಭಾರತದ 48ನೇ ಶ್ರೀಮಂತ ವ್ಯಕ್ತಿ. ಸುಮಾರು 34,387 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಸಾಧಾರಣ ವ್ಯಕ್ತಿಯೊಬ್ಬ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವ ಕತೆಯೂ ರಣರೋಚಕವಾಗಿದೆ. ರಾಕೇಶ್‌ ಅವರ ತಂದೆ ಮುಂಬೈಯಲ್ಲಿಆದಾಯ ತೆರಿಗೆ ಅಧಿಕಾರಿಯಾಗಿದ್ದರು. ಇವರದ್ದು ಮಧ್ಯಮ ವರ್ಗದ ಕುಟುಂಬ. ರಾಕೇಶ್‌ ಹುಟ್ಟಿದ್ದು 1960 ಜುಲೈ 5ರಂದು ಇಂದಿನ ತೆಲಂಗಾಣದ ಹೈದ್ರಾಬಾದ್‌ನಲ್ಲಿ. ಬೆಳೆದಿದ್ದೆಲ್ಲಮುಂಬಯಿಯಲ್ಲಿ. ತಂದೆ ಆದಾಯ ತೆರಿಗೆ ಅಧಿಕಾರಿಯಾಗಿದ್ದರಿಂದ ಮನೆಯಲ್ಲಿಷೇರು ಪೇಟೆ ಬಗೆಗಿನ ಮಾತುಕತೆಗಳು ಸಾಮಾನ್ಯವಾಗಿದ್ದವು. ಅದು ಯುವಕ ರಾಕೇಶ್‌ ಕಿವಿಯ ಮೇಲೆ ಬೀಳುತ್ತಿತ್ತು. ಪರಿಣಾಮ ಕಾಲೇಜಿನಲ್ಲಿರುವಾಗಲೇ ರಾಕೇಶ್‌ಗೆ ಷೇರು ಪೇಟೆ ವ್ಯವಹಾರ, ಹೂಡಿಕೆಯ ಮೇಲೆ ಆಸಕ್ತಿ ಬೆಳೆಯಿತು. 1985ರಲ್ಲಿಸಿಡನ್‌ಹಮ್‌ ಕಾಲೇಜಿನಿಂದ ಪದವಿ ಪಡೆದ ಬಳಿಕ ಇನ್ಸ್‌ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟಂಟ್‌ ಆಫ್‌ ಇಂಡಿಯಾ ಸಂಸ್ಥೆ ಸೇರಿದರು. 

1986ರಲ್ಲಿಅವರು ಕೇವಲ 43 ರೂಪಾಯಿಗೆ 5000 ಟಾಟಾ ಟೀ ಷೇರುಗಳನ್ನು ಖರೀದಿಸಿದ್ದರು. ಮೂರು ತಿಂಗಳ ಬಳಿಕ ಷೇರು ಮೌಲ್ಯ 143 ರೂ.ಗೆ ಏರಿಕೆಯಾಯಿತು. ಹೂಡಿಕೆಗೆಗಿಂತ ಮೂರು ಪಟ್ಟು ಲಾಭ ಮಾಡಿಕೊಂಡ ರಾಕೇಶ್‌ ಮುಂದಿನ ಮೂರು ವರ್ಷಗಳಲ್ಲಿಷೇರು ಹೂಡಿಕೆಗಳಲ್ಲಿ20ರಿಂದ 25 ಲಕ್ಷ  ರೂಪಾಯಿ ಲಾಭ ಮಾಡಿಕೊಂಡರಂತೆ!

1987ರಲ್ಲಿರಾಕೇಶ್‌ ಅವರು ರೇಖಾ ಎಂಬವರನ್ನು ವಿವಾಹವಾದರು. ಪತ್ನಿ ಕೂಡ ಷೇರು ಪೇಟೆ ಹೂಡಿಕೆದಾರೆ. 2003ರಲ್ಲಿಇವರಿಬ್ಬರು ತಮ್ಮದೇ ಸ್ಟಾಕ್‌ ಟ್ರೇಡಿಂಗ್‌ ಕಂಪನಿ ಶುರು ಮಾಡಿದರು. ಅದಕ್ಕೆ ತಮ್ಮಿಬ್ಬರ ಹೆಸರಿನ ಮೊದಲನೇ ಅಕ್ಷ ರಗಳನ್ನು ಸೇರಿಸಿ ‘ರೇರಾ(್ಕಛ್ಟಿa) ಎಂಟರ್‌ಪ್ರೈಸಸ್‌’ ಎಂದು ಕರೆದಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಷೇರುಪೇಟೆ ವ್ಯವಹಾರದಲ್ಲಿರಾಕೇಶ್‌ ಅವರನ್ನೇ ಅನುಸರಿಸುವ ಬಹುದೊಡ್ಡ ವರ್ಗವೇ ಇದೆ. ಅವರ ಒಂದು ಸಣ್ಣ ಇಶಾರೆಯೂ ಕಂಪನಕ್ಕೆ ಕಾರಣವಾಗುತ್ತದೆ. ತಮ್ಮ ಖಾಸಗಿ ರೇರಾ ಸ್ಟಾಕ್‌ ಟ್ರೇಡಿಂಗ್‌ ಕಂಪನಿ ಮೂಲಕ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಟೈಟನ್‌, ಕ್ರಿಸಿಲ್‌, ಅರಬಿಂದೋ ಫಾರ್ಮಾ, ಪ್ರಜ್‌ ಇಂಡಸ್ಟ್ರೀಜ್‌, ಎನ್‌ಸಿಸಿ, ಆಪ್ಟೇಕ್‌ ಲಿ., ಅಯಾನ್‌ ಎಕ್ಸ್‌ಚೇಂಜ್‌, ಎಂಸಿಎಕ್ಸ್‌, ಫೋರ್ಟಿಸ್‌ ಹೆಲ್ತ್‌ಕೇರ್‌, ಲುಪಿನ್‌, ವಿಐಪಿ ಇಂಡಸ್ಟ್ರೀಜ್‌, ಜಿಯೋಜಿತ್‌ ಫೈನಾನ್ಷಿಯಲ್‌ ಸವೀರ್‍ಸಸ್‌, ರಾರ‍ಯಲಿಸ್‌ ಇಂಡಿಯಾ, ಜುಬಿಲಿಯೆಂಟ್‌ ಲೈಫ್‌ ಸೈನ್ಸೀಸ್‌, ಸ್ಟಾರ್‌ ಹೆಲ್ತ್‌ ಇನ್ಶೂರೆನ್ಸ್‌ ಹೀಗೆ ಹಲವಾರು ಕಂಪನಿಗಳಲ್ಲಿರಾಕೇಶ್‌ ಹೂಡಿಕೆ ಮಾಡಿದ್ದಾರೆ. ಜೊತೆಗೆ, ಷೇರು ವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆಯನ್ನೂ ಎದುರಿಸುತ್ತಿದ್ದಾರೆ!

ಷೇರುಪೇಟೆ ಬಿಟ್ಟು ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ ಬಾಲಿವುಡ್‌. ಹಲವು ಹಿಂದಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಶ್ರೀದೇವಿ ಅಭಿಯನದ ‘ಇಂಗ್ಲಿಷ್‌ ವಿಂಗ್ಲಿಷ್‌’, ಕರಿನಾ ಕಪೂರ್‌ ಅಭಿನಯದ ‘ಕೀ ಆ್ಯಂಡ್‌ ಕಾ’ ಚಿತ್ರಗಳನ್ನು ಹೆಸರಿಸಬಹುದು. ರಾಕೇಶ್‌ ಮಾನವ ಹಿತಾಕಾಂಕ್ಷಿ ಆಗಿಯೂ ಹೆಸರುವಾಸಿಯಾಗಿದ್ದಾರೆ. ವಿಶೇಷವಾಗಿ ಷೌಷ್ಟಿಕತೆ ಮತ್ತು ಶಿಕ್ಷ ಣಕ್ಕೆ ಸಂಬಂಧಿಸಿ ತೊಡಗಿಸಿಕೊಂಡಿದ್ದಾರೆ. ತಮ್ಮ ಆದಾಯದ ಶೇ.25ರಷ್ಟು ಹಣವನ್ನು ಸಮಾಜಮುಖಿ ಕೆಲಸಗಳಿಗೆ ಬಳುಸುತ್ತಿದ್ದಾರೆ. ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಆಶ್ರಯ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಮುಂಬೈಯಲ್ಲಿಕಣ್ಣಿನ ಆಸ್ಪತ್ರೆ ಕಟ್ಟಿಸಿ ಅದರ ಮೂಲಕ ಉಚಿತವಾಗಿ 15,000 ಕಣ್ಣಿನ ಚಿಕಿತ್ಸೆ ನಡೆಸುವ ಗುರಿ. 

ಹೂಡಿಕೆ ಮಾಡಿದರೆ ‘ಹೊಳೆಯಲ್ಲಿಹುಣಸೆ ಹಣ್ಣು ತೊಳೆ’ದಂತೆ ಭಾವಿಸಲಾಗುತ್ತಿರುವ ವಿಮಾನಯಾನ ಕ್ಷೇತ್ರದಲ್ಲಿಹಣ ಸುರಿಯಲು ಜುಂಜುನ್‌ವಾಲಾ ಮುಂದಾಗಿದ್ದಾರೆಂದರೆ, ಅವರ ಲೆಕ್ಕಾಚಾರ ಸರಿಯಾಗೇ ಇರಬೇಕು. ಸದ್ಯ ಬಸವಳಿದಂತೆ ಕಾಣುತ್ತಿರುವ ವಿಮಾನಯಾನ ಮುಂಬರುವ ವರ್ಷಗಳಲ್ಲಿಪುಟಿದೇಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸೊರಗುತ್ತಿರುವ ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ರಾಕೇಶ್‌ ಜುಂಜುನ್‌ವಾಲಾ ಅವರ ಆಕಾಶ್‌ ಏರ್‌ ಸಂಸ್ಥೆ ಬಲ ನೀಡಲಿದೆ ಎಂಬ ವಿಶ್ಲೇಷಣೆಗಳೂ ನಡೆಯುತ್ತಿವೆ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಈ ವರ್ಷಾಂತ್ಯ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿಜುಂಜುನ್‌ವಾಲಾ ಅವರ ‘ಆಕಾಶ ಏರ್‌’ ವಿಮಾನದಲ್ಲಿಹಾರಾಡಬಹುದು.


ಈ ಲೇಖನವು ವಿಜಯ ಕರ್ನಾಟಕದ 2021ರ ಆಗಸ್ಟ್ 1ರ ಸಂಚಿಕೆಯಲ್ಲಿ ಪ್ರಕಟವಾಗಿದೆ


ಭಾನುವಾರ, ಜುಲೈ 18, 2021

India-Born Sirisha Bandla flies to Space ಆಕಾಶದೆತ್ತರದ ಕನಸು ಬೆಂಬತ್ತಿದ ಬಾಂಡ್ಲಾ

ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ರಿಚರ್ಡ್‌ ಬ್ರಾನ್ಸನ್‌ ನೇತೃತ್ವದ ತಂಡದಲ್ಲಿಭಾರತೀಯ ಸಂಜಾತೆ, 34 ವರ್ಷದ ಸಿರಿಶಾ ಬಾಂಡ್ಲಾಇರುವುದು ಭಾರತೀಯರಾದ ನಮಗೆ ಹೆಮ್ಮೆ.

ಮಲ್ಲಿಕಾರ್ಜುನ ತಿಪ್ಪಾರ
ಭಾನುವಾರ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿರುವ ಭಾರತೀಯ ಸಂಜಾತೆ ಅಮೆರಿಕನ್‌ ಸಿರಿಶಾ ಬಾಂಡ್ಲಾಅವರ ವಿಷಯದಲ್ಲಿ ‘ಕನಸು ಕಂಡರಷ್ಟೇ ಅದನ್ನು ಸಾಕಾರಗೊಳಿಸುವುದು ಸಾಧ್ಯ’ ಎಂಬ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರ ಉಕ್ತಿ ಅಕ್ಷ ರಶಃ ನಿಜವಾಗಿದೆ!

ಕಂಡ ಕನಸನ್ನು ಬೆನ್ನಟ್ಟಿ ಅದನ್ನು ನಿಜವಾಗಿಸುವ ಪ್ರಯತ್ನದ ಅನುಭವ ಕೊಡುವ ಥ್ರಿಲ್‌ ಬೇರೆ ಯಾವುದರಿಂದಲೂ ದೊರೆಯಲು ಸಾಧ್ಯವಿಲ್ಲ. ಅಮೆರಿಕದ ಬಾಹ್ಯಾಕಾಶದ ಚಟುವಟಿಕೆಗಳ ಕೇಂದ್ರ ಸ್ಥಾನ ನಾಸಾದ ಜಾನ್ಸನ್‌ ಸ್ಪೇಸ್‌ ಸೆಂಟರ್‌ ಸಮೀಪದ ಹೂಸ್ಟನ್‌ನಲ್ಲಿ ಆಡಿ ಬೆಳೆದ ಹುಡುಗಿ ಗಗನಯಾತ್ರಿಯಾಗುವ ಕನಸು ಕಾಣುವುದು ಸಾಮಾನ್ಯ. ಆದರೆ, ಆ ಕನಸನ್ನು ಬೆಂಬತ್ತಿ ಅದನ್ನು ನನಸಾಗಿಸಿಕೊಳ್ಳುವ ಗುಣ ಸಿರಿಶಾ ಅವರಿಗೆ ಚಿಕ್ಕಂದಿನಿಂದಲೇ ಇತ್ತು. ನಾಸಾದಲ್ಲಿಗಗನಯಾತ್ರಿಯಾಗುವ ಕನಸು ಕಂಡರು. ಆದರೆ, ದೃಷ್ಟಿ ದೋಷದಿಂದಾಗಿ ಪೈಲಟ್‌ ಅಥವಾ ಗಗನಯಾತ್ರಿಧಿಯಾಗುವ ಅರ್ಹತೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಏರ್‌ಫೋರ್ಸ್‌ ಮೂಲಕ ನಾಸಾ ಕದ ತಟ್ಟುವ ಕನಸು ಕೈಗೂಡಲಿಲ್ಲ. ಆದರೇನಂತೆ, ಒಂದಿಲ್ಲಒಂದು ದಿನ ಬಾಹ್ಯಾಕಾಶಕ್ಕೆ ನೆಗೆದೇ ನೆಗೆಯುತ್ತೇನೆ ಎಂಬ ಛಲದಲ್ಲಿಯಾವುದೇ ಕೊರತೆ ಇರಲಿಲ್ಲ. ಕಂಡ ಕನಸನ್ನು ನಿಜವಾಗಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಅವರು ಬಿಡಲಿಲ್ಲ. ಅದಕ್ಕೀಗ ಫಲ ದೊರೆಯುತ್ತಿದೆ. ಅಗತ್ಯ ವಿದ್ಯಾಭ್ಯಾಸವನ್ನು ಪೂರೈಸಿಕೊಂಡ ಅವರೀಗ ತಮ್ಮ ಕನಸನ್ನು ನಿಜವಾಗಿಸಿಕೊಧಿಳ್ಳುತ್ತಿಧಿದ್ದಾರೆ; ಬಾಹ್ಯಾಕಾಶಕ್ಕೆ ಕಾಲಿಡುತ್ತಿರುವ ನಾಲ್ಕನೇ ಭಾರತೀಯ ಸಂಜಾತೆ ಎಂಬ ಕೀರ್ತಿಗೆ ಪಾತ್ರರಾಗುತ್ತಿದ್ದಾರೆ. 

ನಾಸಾ ಗಗನಯಾತ್ರಿಯಾಗಿದ್ದ ಕಲ್ಪನಾ ಚಾವ್ಲಾಅವರು 2003ರಲ್ಲಿಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿಭೂಮಿಗೆ ಮರಳುವಾಗ ದುರ್ಘಟನೆ ಸಂಭವಿಸಿ ಮೃತಧಿರಾಗಿದ್ದರು. ಇದಕ್ಕೂ ಮೊದಲ ರಾಕೇಶ್‌ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಇಂಡಿಯನ್‌. ಮತ್ತೊಬ್ಬರು ಭಾರತೀಯ ಮೂಲದ ಸುನೀತಾ ವಿಲಯಮ್ಸ್‌. ಸಿರಿಶಾ ಬಾಹ್ಯಾಕಾಶಕ್ಕೆ ತಲುಪಿದರೆ ಈ ವರೆಗೆ ಭಾರತ ಮೂಲದ ನಾಲ್ವರು ಇಂಥ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಸಿರಿಶಾ ಬಾಹ್ಯಾಕಾಶ ಕನಸಿಗೆ ಪ್ರೇರಣೆಯಾದವರು ರಾಕೇಶ್‌ ಶರ್ಮಾ! 

ಬಾಹ್ಯಾಕಾಶಕ್ಕೆ ತೆರಳಲಿರುವ ವರ್ಜಿನ್‌ ಸಂಸ್ಥಾಪಕ ಸರ್‌ ರಿಚರ್ಡ್‌ ಬ್ರಾನ್ಸನ್‌ ನೇತೃತ್ವದ ತಂಡದಲ್ಲಿಒಟ್ಟು ಆರು ಜನರಿದ್ದು, ರಿಚರ್ಡ್‌ ಬ್ರಾನ್ಸ್‌ನ ಗಗನಯಾತ್ರಿ 001 ಆದರೆ ಸಿರಿಶಾ ಗಗನಯಾತ್ರಿ 004. ಇವರ ಜೊತೆಗೆ, ಮುಖ್ಯ ಗಗನಯಾತ್ರಿ ಬೆಥ್‌ ಮೋಸೆಸ್‌(ಗಗನಯಾತ್ರಿ 002), ಮುಖ್ಯ ಕಾರ್ಯಾಚರಣೆ ಎಂಜಿನಿಯರ್‌ ಕೊಲಿನ್‌ ಬೆನ್ನೆಟ್‌(ಗಗನಯಾತ್ರಿ 003) ಹಾಗೂ ಡೇವ್‌ ಮ್ಯಾಕೆ ಮತ್ತು ಮಸೂಚಿ ಇಬ್ಬರು ಪೈಲಟ್‌ಗಳಿದ್ದಾರೆ. ಈ ಆರು ಜನರನ್ನು ಹೊತ್ತ ವರ್ಜಿನ್‌ ಗ್ಯಾಲಕ್ಟಿಕ್‌ ವಿಎಸ್‌ಎಸ್‌ ಯೂನಿಟಿ ಗಗನ ನೌಕೆ  ಭಾನುವಾರ ನ್ಯೂ ಮೆಕ್ಸಿಕೊದಿಂದ ಬಾಹ್ಯಾಕಾಶಕ್ಕೆ ಪ್ರಯಾಣ ಆರಂಭಿಸಲಿದೆ. ಇದರಲ್ಲಿಕಂಪನಿಯ ಮಾಲೀಕ ಬ್ರಾನ್ಸನ್‌ ಅವರದ್ದು ‘ಗ್ರಾಹಕರ ಬಾಹ್ಯಾಕಾಶ ಹಾರಾಟದ ಅನುಭವವ ಮೌಲ್ಯಮಾಪನ’ ಮಾಡುವ ಜವಾಬ್ದಾರಿಯಾದರೆ, ಏರೋನಾಟಿಕಲ್‌ ಎಂಜಿನಿಯರ್‌ ಆಗಿರುವ ಸಿರಿಶಾ ಅವರದ್ದು ‘ಸಂಶೋಧಕರ ಅನುಭವ’ವನ್ನು ಕಟ್ಟಿಕೊಡುವ ಹೊಣೆಯನ್ನ ಹೊತ್ತುಕೊಡಿದ್ದಾರೆ. ಬೆಳಕಿನ ವೇಗಕ್ಕಿಂತಲೂ ಮೂರುವರೆ ಪಟ್ಟು ವೇಗದಲ್ಲಿಈ ಸ್ಪೇಸ್‌ ಪ್ಲೇನ್‌ ಹಾರಲಿದೆ. 

ಬ್ರಾನ್ಸ್‌ನ ಒಡೆತನದ ‘ವರ್ಜಿನ್‌ ಗ್ಯಾಲಕ್ಟಿಕ್‌’ನಲ್ಲಿ ಸರಕಾರಕ್ಕೆ ಸಂಬಂಧಿಸಿದ ವ್ಯವಹಾರ ವಿಭಾಗ ಮತ್ತು ಸಂಶೋಧನಾ ಕಾರ್ಯಚರಣೆಗಳ ವೈಸ್‌ ಪ್ರೆಸಿಡೆಂಟ್‌ ಆಗಿ ಕಾರ್ಯಧಿನಿರ್ವಧಿಹಿಸುತ್ತಿದ್ದಾರೆ.  ಆಂಧ್ರದ ಗುಂಟೂರು ಜಿಲ್ಲೆಧಿಯಲ್ಲಿ1988ರಲ್ಲಿಸಿರಿಶಾ ಜನಿಸಿದರು. ತಂದೆ ಕೃಷಿ ವಿಜ್ಞಾನಿ ಡಾ.ಮುರಳಿ, ತಾಯಿ ಅನುರಾಧಾ. ಸಿರಿಶಾಗೆ ನಾಲ್ಕು ವರ್ಷವಿದ್ದಾಗ ಅವರ ಕುಟುಂಬವು ಅಮೆರಿಕದ ಹೂಸ್ಟನ್‌, ಟೆಕ್ಸಾಸ್‌ಗೆ ಸ್ಥಳಾಂತಧಿರಗೊಂಡಿತು. ಸದ್ಯ ವಾಷಿಂಗ್ಟನ್‌ನಲ್ಲಿವಾಸವಾಗಿದ್ದಾರೆ. ಟೆಕ್ಸಾಸ್‌ನ ಸ್ಥಳೀಯ ಶಾಲೆಯಲ್ಲಿಶಿಕ್ಷ ಣ ಪೂರೈಸಿದ ಬಳಿಕ 2006ರಲ್ಲಿಸಿರಿಶಾ ಪರ್ಡೂ್ಯ ವಿವಿ ಸೇರಿದರು. ಏರೋನಾಟಿಕಲ್‌, ಏರೋ ಸ್ಪೇಸ್‌ ಮತ್ತು ಆಸ್ಟ್ರೋನಾಟಿಕಲ್‌ ಎಂಜಿನಿಧಿಯರಿಂಗ್‌ ಪದವಿಯನ್ನು 2011ರಲ್ಲಿಪಡೆದುಕೊಂಡರು. 2015ರಲ್ಲಿಜಾರ್ಜಿಯಾ ವಾಷಿಂಗ್ಟನ್‌ ವಿಶ್ವವಿದ್ಯಾಲಯದಿಂದ ಬಿಸಿನೆಸ್‌ ಅಡ್ಮಿನಿಸ್ಪ್ರೇಷನ್‌ನಲ್ಲಿಸ್ನಾತಕೋತ್ತರ ಪದವಿಯನ್ನು ಗಳಿಸಿಕೊಂಡರು. 

ಸಿರಿಶಾ ಅವರು ಶಿಕ್ಷ ಣದ ಜೊತೆ ಜತೆಗೆಯೇ 2012ರಲ್ಲಿಕಮರ್ಷಿಯಲ್‌ ಸ್ಪೇಸ್‌ಫ್ಲೈಟ್‌ ಫೆಡರೇಷನ್‌ನಲ್ಲಿಅಸೋಸಿಯೇಟ್‌ ಡೈರೆಕ್ಟರ್‌ ಆಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಬಹುಶಃ 2015ರ ನಂತರ ಅವರು ಕನಸು ಕೈಗೂಡುವ ದಿನಗಳ ಶುರುವಾದವು ಎನ್ನಬಹುದು! ಯಾಕೆಂದರೆ, 2015ರಲ್ಲಿಅವರು ವರ್ಜಿನ್‌ ಗ್ಯಾಲಕ್ಟಿಕ್‌ ಕಂಪನಿ ಸೇರಿ, 2020ರವರೆಗೂ ವ್ಯವಹಾರ ಅಭಿವೃದ್ಧಿ ಮತ್ತು ಸರಕಾರಿ ವ್ಯವಹಾರಗಳ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಬಳಿಕ ಅವರು ವರ್ಜಿನ್‌ ಆರ್ಬಿಟ್‌ನಲ್ಲಿವಾಷಿಂಗ್ಟನ್‌ ಆಪರೇಷನ್‌ನ ಡೈರೆಕ್ಟರ್‌ ಆಗಿದ್ದರು. 

2021ರಿಂದ ಸಿರಿಶಾ ವರ್ಜಿನ್‌ ಗ್ಯಾಲಕ್ಟಿಕ್‌ನ ಸರಕಾರ ವ್ಯವಹಾರಗಳ ಉಪಾಧ್ಯಕ್ಷ ರಾಗಿ ಬಡ್ತಿ ಪಡೆದುಕೊಂಡರು. ವರ್ಜಿನ್‌ ಗ್ಯಾಲಕ್ಟಿಕ್‌ ಎನ್ನುವುದು ರಿಚರ್ಡ್‌ ಬ್ರಾನ್ಸನ್‌ ಅವರು ಸ್ಥಾಪಿಸಿದ ಅಮೆರಿಕನ್‌ ಸ್ಪೇಸ್‌ಕ್ರಾಫ್ಟ್‌ ಕಂಪನಿಯಾಗಿದೆ. ಬಾಹ್ಯಾಕಾಶ ಪ್ರವಾಸೋದ್ಯಮ ಹಿನ್ನೆಲೆಯಲ್ಲಿವರ್ಜನ್‌ ಕಂಪನಿ ಕೈಗೊಂಡಿರುವ ಬಾಹ್ಯಾಕಾಶದಂಚಿನ ಪಯಣವು ಮೈಲುಗಲ್ಲಾಗಲಿದೆ. ಆ ಐತಿಹಾಸಿಕ ಪ್ರಯತ್ನದಲ್ಲಿಭಾರತೀಯ ಸಂಜಾತೆಯೊಬ್ಬಳು ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. 

ಭೂಮಿಯಿಂದ ಮೂರು ಲಕ್ಷ  ಅಡಿ ಎತ್ತರದಲ್ಲಿಹಾರಾಟ ನಡೆಸಲಿರುವ ಸಿರಿಶಾಗೆ ಅಮ್ಮ ಮಾಡುವ ಊಟ ತಂಬ ಇಷ್ಟ. ಹಾಗಂತಲೇ ಅವರ ತಾಯಿ, ಫೇವರಿಟ್‌ ಮಟನ್‌ ಬಿರಿಯಾನಿ ಮಾಡಿಕೊಂಡು ಬಂದಿಧಿದ್ದರಂತೆ. ಅವರಿಗೆ ಆಂಧ್ರದ ವಿಶಿಷ್ಟ ‘ಪಪ್ಪು’(ಅನ್ನ) ತುಂಬ ಇಷ್ಟ. ಬಾಹ್ಯಾಕಾಶದಿಂದ ಮರಳಿದ ಬಳಿಕ ಅಮ್ಮನ ಕೈಯಿಂದ ಮಾಡಿದ ‘ಪಪ್ಪು’ ತಿನ್ನವ ಬಯಕೆಯನ್ಯೂ ಹೊಂದಿದ್ದಾರೆ.

ರಿಚರ್ಡ್‌  ಬ್ರಾನ್ಸನ್‌ ಬಳಿಕ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೂಸ್‌ ಕೂಡ ಜುಲೈ 20ರಂದು ಬ್ಲೂಒರಿಜಿನ್‌ ಕಂಪನಿಯ ನ್ಯೂ ಶೇಪರ್ಡ್‌ ಮೂಲಕ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ. ಜಗತ್ತಿನ ಇಬ್ಬರು ಶ್ರೀಮಂತ ಉದ್ದಿಮೆದಾರರು ನಡೆಸುತ್ತಿರುವ ಈ ಯಾನವು ಮುಂಬರುವ ದಿನಗಳಲ್ಲಿಹೊಸ ‘ಉದ್ಯಮ ಸ್ಥಾಪನೆ’ಗೂ ಕಾರಣವಾಗಬಹುದು!

ಈ ಎಲ್ಲಕಾರಣಗಳಿಂದಾಗಿಯೇ ಖಾಸಗಿ ಬಾಹ್ಯಾಕಾಶ ಯಾನ ಹೆಚ್ಚು ಚರ್ಚಿತವಾಗುತ್ತಿದೆ ಮತ್ತು ಅಂಥ ಒಂದು ಪ್ರಯತ್ನದಲ್ಲಿಭಾರತ ಸಂಜಾತೆ ಸಿರಿಶಾ ಭಾಗಿಯಾಗುತ್ತಿದ್ದಾರೆ. ಬಾಹ್ಯಾಕಾಶಕ್ಕೆ ತೆರಳುತ್ತಿರುವ ಸಿರಿಶಾ, ತನ್ನೊಂದಿಗೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಹೆಮ್ಮೆಯ  ಭಾವ ಹೊಂದಿದ್ದಾರೆ. ಇದನ್ನು ಅವರು ಸ್ವತಃ ಹೇಳಿಕೊಂಡಿದ್ದಾರೆ ಕೂಡ, ‘‘ನಾನು ಸ್ವಲ್ಪ ಭಾರತವನ್ನು ನನ್ನೊಂದಿಗೆ ಕರೆದೊಯ್ಯುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ’’ ಎಂದು ಹೇಳಿಕೊಂಡಿದ್ದಾರೆ. 

ಬಾಹ್ಯಾಕಾಶದ ಗೀಳಿನ ಹೊರತಾಗಿಯೂ ಸಿರಿಶಾ ಹಲವು ವಿಷಯಗಳಲ್ಲಿವಿಶಿಷ್ಟ ಆಸಕ್ತಿಗಳನ್ನು ಬೆಳೆಸಿಕೊಂಡಿದ್ದಾರೆ. ಹೊಸ ಹೊಸ ಸಂಗತಿಗಳಿಗೆ ಬಹಳ ಬೇಗ ಆಕರ್ಷಿತವಾಗಿವ ಅವರಿಗೆ ಬೋಟಿಂಗ್‌ ಮಾಡುವುದು ತುಂಬ ಇಷ್ಟ. ಇದರ ಜತೆಗೆ ಬಾಸ್ಕೆಟ್‌ಬಾಲ್‌ ಆಟವನ್ನು ನೋಡುವುದು ತುಂಬ ಎಂಜಾಯ್‌ ಮಾಡುತ್ತಾರೆ. ಬೆಕ್ಕು ಮತ್ತು ನಾಯಿ ಅಕ್ಕರೆ ಸಂಗಾತಿಗಳು. ನೆಚ್ಚಿನ ನಾಯಿ ‘ಚಾನ್ಸ್‌’ ಅವರ ಜೀವನದ ಭಾಗವೇ ಆಗಿದೆ. ಸಹೋದರಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಎಲ್ಲಹಬ್ಬಗಳನ್ನು ಆಚರಿಸುತ್ತಾರೆ. ಪ್ರವಾಸವನ್ನು ಹೆಚ್ಚಿಗೆ ಇಷ್ಟ ಪಡುವ ಸಿರಿಶಾ ಭಾರತವು ಸೇರಿದಂತೆ ಹಲವು ದೇಶಗಳನ್ನು ಸುತ್ತಿ ವಿಶಿಷ್ಟ ಅನುಭವವನ್ನು ಪಡೆದುಕೊಂಡಿದ್ದಾರೆ. 

ರಿಚರ್ಡ್‌ ಬ್ರಾನ್ಸನ್‌ ತಂಡದೊಂದಿಗೆ ಸಿರಿಶಾ ಬಾಂಡ್ಲಾ ಕೈಗೊಳ್ಳುತ್ತಿರುವ ಬಾಹ್ಯಾಕಾಶ ಯಾನ ಇತಿಹಾಸ ಸೃಷ್ಟಿಸುವುದು ಖಚಿತ. ಜೊತೆಗೆ, ಏನಾದರೂ ಹೊಸದನ್ನು ಮಾಡುವ ಹುಮ್ಮಸ್ಸು ಹೊಂದಿರುವ, ಜಗತ್ತಿನ ಪ್ರತಿಭಾವಂತ ಅಸಂಖ್ಯ ಹೆಣ್ಣುಮಕ್ಕಳಿಗೆ ಸಿರಿಶಾ ಅವರ ಈ ಜರ್ನಿ ಹುರುಪು ತುಂಬಲಿದೆ; ಕನಸುಗಳನ್ನು ಕಾಣಲು ದಾರಿ ಮಾಡಿಕೊಡಲಿದೆ. ಅಂಥದೊಂದು ಪ್ರೇರಣೆಗೆ ಕಾರಣವಾಧಿಗುತ್ತಿರುವ ಸಿರಿಶಾ ಬಾಹ್ಯಾಕಾಶ ಪಯಣಕ್ಕೆ ಗುಡ್‌ಲಕ್‌ ಹೇಳೋಣ.


ಈ ಲೇಖನವು ವಿಜಯ ಕರ್ನಾಟಕದ 2021 ಜುಲೈ 10 ಸಂಚಿಕೆಯಲ್ಲಿ ಪ್ರಕಟವಾಗಿದೆ



ಸೋಮವಾರ, ಜೂನ್ 14, 2021

Sunil Chhetri overtakes Lionel Messi - ಕಾಲ್ಚೆಂಡು ಮಾಂತ್ರಿಕ ಸುನಿಲ್‌ ಛೆತ್ರಿ

ರಾಷ್ಟ್ರೀಯ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ , ಅಂತಾರಾಷ್ಟ್ರೀಯ ಸಕ್ರಿಯ ಫುಟ್ಬಾಲಿಗರ ಪೈಕಿ ಅತಿ ಹೆಚ್ಚು ‘ಗೋಲ್‌’ ಬಾರಿಸಿದವರ ಪಟ್ಟಿಯಲ್ಲಿಮೆಸ್ಸಿಯನ್ನೇ ಮೀರಿಸಿದ್ದಾರೆ!


ಮಲ್ಲಿಕಾರ್ಜುನ ತಿಪ್ಪಾರ
ಆರಾಧಿಸುವ ವ್ಯಕ್ತಿಯ ಸಾಧನೆಯನ್ನು ನೀವೇ ಹಿಂದಿಕ್ಕಿ ಮುನ್ನಡೆದರೆ ಆಗ ಆಗುವ ಆನಂದವನ್ನು ಅಭಿವ್ಯಕ್ತಿಸಲಾದೀತೆ? ಏನಿದ್ದರೂ ಆ ಅನುಭವವನ್ನು ಅನುಭವಿಸಬೇಕಷ್ಟೇ. ಇಂಥದ್ದೇ ಮನಸ್ಥಿತಿಯಲ್ಲಿದ್ದಾರೆ ಭಾರತೀಯ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಛೆತ್ರಿ. 

‘ಜಗತ್ತಿನ ಸಾರ್ವಕಾಲಿಕ  ಶ್ರೇಷ್ಠ ಫುಟ್ಬಾಲಿಗ’ ಎಂದು ಗುರುತಿಸಿಕೊಳ್ಳುತ್ತಿ­ರುವ ಅರ್ಜೆಂಟೀನಾದ ಆಟಗಾರ ಲಿಯೋನೆಲ್‌ ಮೆಸ್ಸಿ ಸಾಧನೆಯನ್ನು ನಮ್ಮ ಸುನಿಲ್‌ ಹಿಂದಿಕ್ಕಿದ್ದಾರೆ. ಸಕ್ರಿಯ ಫುಟ್ಬಾಲ್‌ ಆಟಗಾರರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್‌ಗಳನ್ನು ಗಳಿಸಿದವರು ಪಟ್ಟಿಯಲ್ಲಿಪೋರ್ಚುಗಲ್‌ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ(103) ಅಗ್ರ ಸ್ಥಾನದಲ್ಲಿದ್ದರೆ, ಲಿಯೋನೆಲ್‌ ಮೆಸ್ಸಿ 72 ಗೋಲುಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರು. ಈಗ ಭಾರತದ ಸುನಿಲ್‌ ಬಾಂಗ್ಲಾದೇಶದ ವಿರುದ್ಧ ಏಷ್ಯಾ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ2 ಗೋಲು ಬಾರಿಸಿ, ತಮ್ಮ ಗೋಲುಗಳ ಸಂಖ್ಯೆಯನ್ನು 74ಕ್ಕೆ ಹೆಚ್ಚಿಸಿಕೊಂಡು, ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈವರೆಗೆ ಅವರು 117 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

ಅಂತಾರಾಷ್ಟ್ರೀಯ ಗೋಲುಗಳ ಪಟ್ಟಿಯಲ್ಲಿಮೆಸ್ಸಿಯನ್ನು ಅವರು ಹಿಂದೆ ಹಾಕುತ್ತಿದ್ದಂತೆ, ಮೆಸ್ಸಿಗಿಂತ ಯೇ ಶ್ರೇಷ್ಠ ಎಂಬ ವಾದ ಸೋಷಿಯಲ್‌ ಮೀಡಿಯಾಗಳಲ್ಲಿಜೋರಾಗಿತ್ತು. ಇದಕ್ಕೆಲ್ಲಉತ್ತರ ನೀಡಿರುವ ಸುನಿಲ್‌, ‘‘ಮೆಸ್ಸಿಯ ಅಸಂಖ್ಯ ಅಭಿಮಾನಿಗಳಲ್ಲಿನಾನೂ ಒಬ್ಬ. ನನ್ನ ಮತ್ತು ಅವರ(ಮೆಸ್ಸಿ) ಮಧ್ಯೆ ಹೋಲಿಕೆ ಸರಿ­ಯಲ್ಲ,’’ ಎಂದಿದ್ದಾರೆ. ‘‘ಲಿಯೋನೆಲ್‌ ಮೆಸ್ಸಿ­ಯನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ, ಕೈ ಕುಲುಕಿ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳುವೆ,’’ ಎನ್ನುವ ಅವರಿಗೆ ಅದು ಪಕ್ಕಾ ಫ್ಯಾನ್‌ಬಾಯ್‌ ಮೊಮೆಂಟ್‌!

ಕ್ರಿಕೆಟ್‌ನ್ನೇ ಉಸಿರಾಡುವ ಭಾರತದಂಥ ರಾಷ್ಟ್ರದಲ್ಲಿಫುಟ್ಬಾಲ್‌ ಆಟಗಾರರೊಬ್ಬರ ಈ ಸಾಧನೆಗೆ ಹೆಚ್ಚಿನ ಮಹತ್ವವಿದೆ. ಕ್ರಿಕೆಟ್‌ನ ಅಬ್ಬರದಲ್ಲಿಫುಟ್ಬಾಲ್‌ ಸೇರಿದಂತೆ ಇತರ ಆಟಗಳಿಗೆ ಪ್ರಾಧಾನ್ಯ, ಪ್ರಾಯೋಜಕತ್ವ ಸಿಗು­ವುದು ಕಷ್ಟ. ಹಾಗಿದ್ದೂ, ಹಲವು ಗುಂಪು ಆಟಗಾರರು ಮತ್ತು ಅಥ್ಲೀಟ್‌ಗಳು ದೇಶದ ಕೀರ್ತಿಯನ್ನು ಆಗಾಗ ಗಗನಕ್ಕೆ ಏರಿಸುತ್ತಲೇ ಇರುತ್ತಾರೆ. ಅಂಥ ಅಭಿಮಾನದ ಕ್ಷ ಣಕ್ಕೆ ಸುನಿಲ್‌ ಈಗ ಕಾರಣವಾಗಿದ್ದಾರೆ.

ದಂತಕತೆ ಬೈಚುಂಗ್‌ ಭುಟಿಯಾ ಬಳಿಕ ಸುನಿಲ್‌ ಛೆತ್ರಿ ಭಾರತೀಯ ಫುಟ್ಬಾಲ್‌ ನೊಗವನ್ನು ಸಮರ್ಥವಾಗಿ ಎಳೆಯುತ್ತಿದ್ದಾರೆ. ಇಂಡಿಯನ್‌ ಸೂಪರ್‌ ಲೀಗ್‌(ಐಸಿಎಲ್‌)ನಲ್ಲಿಬೆಂಗಳೂರು ಫುಟ್ಬಾಲ್‌ ಕ್ಲಬ್‌(ಬಿಎಫ್‌ಸಿ) ಪರವಾಗಿಯೂ ಆಡುತ್ತಿರುವ  ‘ಕ್ಯಾಪ್ಟನ್‌ ಫೆಂಟಾಸ್ಟಿಕ್‌’ ಸುನೀಲ್‌ ಛೆತ್ರಿ ಹುಟ್ಟಿದ್ದು ಈಗಿನ ತೆಲಂಗಾಣದ ಸಿಕಂದರಾಬಾದ್‌ನಲ್ಲಿ1984ರ ಆಗಸ್ಟ್‌ 3ರಂದು. ತಂದೆ ಕೆ.ಬಿ.ಛೆತ್ರಿ, ತಾಯಿ ಸುಶೀಲಾ. ತಂದೆ ಭಾರತೀಯ ಸೇನೆಯಲ್ಲಿಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಮೆಕಾನಿಕಲ್‌ ಎಂಜಿನಿಯರ್‌ ಅಧಿಕಾರಿ. ಸುನಿಲ್‌ ಅವರು ತಂದೆ ಅವರೂ ಭಾರತೀಯ ಸೇನೆಯ ಪರವಾಗಿ ಫುಟ್ಬಾಲ್‌ ಆಡಿದ್ದಾರೆ. ತಾಯಿ ಸುಶೀಲಾ ಹಾಗೂ ಅವರ ಇಬ್ಬರು ಅವಳಿ ಸಹೋದರಿಯರು ನೇಪಾಳದ ಮಹಿಳಾ ರಾಷ್ಟ್ರೀಯ ಫುಟ್ಬಾಲ್‌ ತಂಡಕ್ಕೆ ಆಡುತ್ತಿದ್ದರು. ತಂದೆ ತಾಯಿ ಇಬ್ಬರೂ ಫುಟ್ಬಾಲ್‌ ಆಟಗಾರರು; ಸುನಿಲ್‌ಗೆ ಫುಟ್ಬಾಲ್‌ ರಕ್ತಗತ.

ತಂದೆ ಸೇನೆಯಲ್ಲಿಅಧಿಕಾರಿಯಾಗಿದ್ದರಿಂದಾಗಿ ಸುನಿಲ್‌ ಶಾಲಾ ಶಿಕ್ಷ ಣ ಒಂದೇ ರಾಜ್ಯಕ್ಕೆ ಸಿಮೀತವಾಗಲಿಲ್ಲ. ಸಿಕ್ಕಿಮ್‌ನ ಗ್ಯಾಂಗ್ಟಕ್‌ನ ಬಹಾಯಿ ಸ್ಕೂಲ್‌, ಪಶ್ಚಿಮ ಬಂಗಾಳದ ಡಾರ್ಜೀಲಿಂಗ್‌ ಬೆತ್ನೀಸ್‌ ಸ್ಕೂಲ್‌, ಕೋಲ್ಕೊತಾದ ಲೊಯೊಲಾ ಸ್ಕೂಲ್‌ ಮತ್ತು ದಿಲ್ಲಿಯ ಆರ್ಮಿ ಪಬ್ಲಿಕ್‌ ಸ್ಕೂಲ್‌ನಲ್ಲಿಶಾಲಾ ಶಿಕ್ಷ ಣವನ್ನು ಪೂರೈಸಿದ್ದಾರೆ. ಕೋಲ್ಕೊತಾದ ಅಶುತೋಷ ಕಾಲೇಜ್‌ನಲ್ಲಿಪ್ರವೇಶ ಪಡೆದು, 12ನೇ ತರಗತಿಯಲ್ಲಿಓದುತ್ತಿದ್ದಾಗಲೇ 2001ರಲ್ಲಿಮಲೇಷ್ಯಾದಲ್ಲಿಆಯೋಜಿಸಲಾಗಿದ್ದ ಏಷ್ಯನ್‌ ಸ್ಕೂಲ್‌ ಚಾಂಪಿಯನ್‌ಶಿಪ್‌ಗೆ ಭಾರತೀಯ ತಂಡಧಿವನ್ನು ಪ್ರತಿನಿಧಿಸುವ ಅವಕಾಶ ಒದಗಿ ಬಂತು. ಕಾಲೇಜು ಶಿಕ್ಷ ಣಧಿಧಿಧಿವನ್ನು ಅರ್ಧಕ್ಕೆ ಮೊಟಕುಧಿಗೊಳಿಸಧಿಬೇಕಾ­ಧಿಯಿತು. ಮುಂದಿನ ನಾಲ್ಕೈದು ವರ್ಷದಲ್ಲಿಅವರು ಭಾರತೀಯ ರಾಷ್ಟ್ರೀಯ ಫುಟ್ಬಾಲ್‌ ತಂಡಕ್ಕೆ ಪ್ರವೇಶ ಪಡೆದರು. ನಂತರ ನಡೆದಿದ್ದೆಲ್ಲಇತಿಹಾಸ.

ಸುನಿಲ್‌ ತಮ್ಮ ಬಹುಕಾಲದ ಗೆಳತಿ ಸೋನಂ ಭಟ್ಟಾಚಾರ್ಯ ಅವರನ್ನು 2017ರಲ್ಲಿಮದುವೆಯಾದರು. ಈ ಸೋನಮ್‌ ಬೇರೆ ಯಾರೂ ಅಲ್ಲ. ರಾಷ್ಟ್ರೀಯ ಫುಟ್ಬಾಲ್‌ ತಂಡದ ಮಾಜಿ ಆಟಗಾರ, ಮೋಹನ್‌ ಬಗಾನ್‌ ತಂಡದ ದಂತಕತೆ ಸುಬ್ರತ ಭಟ್ಟಾಚಾರ್ಯ ಅವರ ಪುತ್ರಿ. ಇವರು ಛೆತ್ರಿ ಮೆಂಟರ್‌ ಕೂಡ. ಸುನಿಲ್‌ ಅವರ ಆಟ ಹಾಗೂ ವ್ಯಕ್ತಿತ್ವದ ಮೇಲೆ ಅವರ ತಾಯಿ ದಟ್ಟ ಪ್ರಭಾವ ಬೀರಿದ್ದಾರೆಂಬುದು ಅವರ ಮಾತುಗಳನ್ನು ಕೇಳಿದರೆ ಅರಿವಾ­ಗುತ್ತದೆ. ‘‘ಆಟದ ಬಗ್ಗೆ ಹೇಳುವುದಾದರೆ ಅದು ನನ್ನ ತಂದೆ, ತಾಯಿಂದಲೇ ಆರಂಭವಾಗುತ್ತದೆ, ವಿಶೇಷವಾಗಿ ನನ್ನ ತಾಯಿ. ತಾಯಿಯೊಂದಿಗೆ ಕೇರಂ, ಚೆಸ್‌, ಚೀನೀಸ್‌ ಚೆಕರ್ಸ್‌ ಮತ್ತು ಇತರ ಹೊರಾಂಗಣ ಕ್ರೀಡೆಗಳನ್ನು ಆಡುವುದು ತೀರಾ ಸಾಮಾನ್ಯವಾಗಿತ್ತು. ನನಗೆ 13 ವರ್ಷವಾಗೋವರೆಗೂ ಈ ಯಾವುದೇ ಆಟದಲ್ಲೂನನ್ನ ತಾಯಿಯನ್ನು ಸೋಲಿಸಲು ನನ್ನಿಂದಾ­ಗಲಿಲ್ಲ. ಅವರೂ ಎಂದು ಸೋಲಲು ಒಪ್ಪುತ್ತಿರಲಿಲ್ಲ. ಸೋಲು ಒಪ್ಪಿಕೊಳ್ಳ­ದಿರುವ ಗುಣ ನನ್ನ ತಾಯಿಯಿಂದಲೇ ಬಂದಿದೆ ನನಗೂ ಬಂದಿದೆ,’’  ಎನ್ನುತ್ತಾರೆ ಅವರು. ಬೈಚುಂಗ್‌ ಭುಟಿಯಾ ಅವರಿಂದಲೂ ಸಾಕಷ್ಟು ಕಲಿತಿದ್ದೇನೆ. ಅವರ ಸರಳ ವ್ಯಕ್ತಿತ್ವ ತುಂಬಾ ಇಷ್ಟ ಎನ್ನುತ್ತಾರೆ ಅವರು.

ರಾಷ್ಟ್ರೀಯ ತಂಡದ ಪರವಾಗಿ ಅತಿ ಹೆಚ್ಚು ಪಂದ್ಯಗಳು ಹಾಗೂ ಗೋಲು ಬಾರಿಸಿರುವ ದಾಖಲೆಯನ್ನು ಹೊಂದಿರುವ ಸುನಿಲ್‌ಅವರು ತಮ್ಮ ವೃತ್ತಿಪರ ಫುಟ್ಬಾಲ್‌ ಆಟವನ್ನು 2002ರಲ್ಲಿಏಷ್ಯಾದ ಹಳೆಯ ಕ್ಲಬ್‌ಗಳಲ್ಲಿಒಂದಾಗಿರುವ ಮೋಹನ್‌ ಬಗಾನ್‌ ಕ್ಲಬ್‌ನೊಂದಿಗೆ ಆರಂಭಿಸಿಧಿದರು. ಬಳಿಕ ಜೆಸಿಟಿ ಕ್ಲಬ್‌ಗೆ ವಲಸೆ ಬಂದು, 48 ಪಂದ್ಯಗಳಲ್ಲಿ21 ಗೋಲು ಬಾರಿಸಿ ಗಮನ ಸೆಳೆದರು. 2010ರಲ್ಲಿಮೇಜರ್‌ ಲೀಗ್‌ ಸಾಕರ್‌ನಲ್ಲಿಕನ್ಸಾಸ್‌ ಸಿಟಿ ವಿಜಾರ್ಡ್ಸ್‌ನೊಂದಿಗೆ ಗುರುಧಿತಿಸಿಧಿಕೊಂಡರು. ಈ ಮೂಲಕ ವಿದೇಶದ ಕ್ಲಬ್‌ ಪರವಾಗಿ ಆಟವಾಡಿದ ಭಾರತೀಯ ಉಪಖಂಡದ ಮೂರನೇ ಆಟಗಾರ ಎನಿಸಿಕೊಂಡರು. ಅಲ್ಲಿಂದ ಹಿಂದಿರುಗಿದ ಬಳಿಕ ಚಿರಾಗ್‌ ಯುನೈಟೆಡ್‌, ಮೋಹನ್‌ ಬಗಾನ್‌ ಪರವಾಗಿ ಐ ಲೀಗ್‌ನಲ್ಲಿಆಡಿದರು. ಮತ್ತೆ ವಿದೇಶಕ್ಕೆ ತೆರಳಿ ಪೋರ್ಚುಗಲ್‌ನ ಸ್ಪೋರ್ಟಿಂಗ್‌ ಕ್ಲಬ್‌ ಸೇರಿದರು. 2005ರಲ್ಲಿಭಾರತೀಯ ರಾಷ್ಟ್ರೀಯ ಫುಟ್ಬಾಲ್‌ ತಂಡವನ್ನು ಸೇರಿ, ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದರು. ಈ ಪಂದ್ಯದಲ್ಲಿಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ಹೊಡೆದರು.

ಸುನಿಲ್‌ ಛೆತ್ರಿ ಅವರ ನೆರವಿನಿಂದಾಗಿ ಭಾರತ ತಂಡವು 2007, 2009 ಮತ್ತು 2012ರಲ್ಲಿನೆಹರು ಕಪ್‌ ಮತ್ತು 2011ರ ಎಸ್‌ಎಎಫ್‌ಎಫ್‌ ಚಾಂಪಿ­ಯನ್‌ಶಿಪ್‌ ಗೆದ್ದುಕೊಂಡಿತು. 2008ರ ಏಷ್ಯನ್‌ ಫುಟ್ಬಾಲ್‌ ಕಾನೆಧಿಡೆರಷನ್‌(ಎಎಫ್‌ಸಿ) ಚಾಲೆಂಜ್‌ ಕಪ್‌ ಗೆಲ್ಲುವಲ್ಲಿಯೂ ಅವರ ಪಾತ್ರ ಮಹತ್ವ­ದ್ದಾಗಿತ್ತು. ಈ ಗೆಲುವಿನಿಂದಾಗಿಯೇ ಭಾರತವು 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯನ್‌ ಕಪ್‌ ಪಂದ್ಯಾವಳಿಯಲ್ಲಿಆಡಲು ಅರ್ಹತೆ ಪಡೆದು­ಕೊಂಡಿತು. 2007, 2011, 2013, 2014, 2017 ಮತ್ತು 2019 ಹೀಗೆ ದಾಖಲೆಯ ಆರು ಬಾರಿ ಎಐಎಫ್‌ಎಫ್‌(ಆಲ್‌ ಇಂಡಿಯಾ ಫುಟ್ಬಾಲ್‌ ಫೆಡರೆಷನ್‌) ವರ್ಷದ ಆಟಗಾರ ಎಂದು ಅವರನ್ನು ಹೆಸರಿಸಲಾಗಿದೆ. 2014ರಲ್ಲಿಇವರ ನೇತೃತ್ವದಲ್ಲಿಬೆಂಗಳೂರು ಫುಟ್ಬಾಲ್‌ ಕ್ಲಬ್‌ ಚೊಚ್ಚಿಲ ಋುತುವಿನಲ್ಲಿಪ್ರಶಸ್ತಿ ಗೆದ್ದುಕೊಂಡಿತು.

ಭಾರತದಲ್ಲಿಕ್ರಿಕೆಟ್‌ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟ ಫುಟ್ಬಾಲ್‌. 36 ವರ್ಷದ ಸುನಿಲ್‌  ಭಾರಧಿತೀಯ ಫುಟ್ಬಾಲ್‌ ತಂಡದ ಧ್ರುವತಾರೆ. ಹೊಸ ಪೀಳಿಗೆಯ ಆಟಗಾರರಿಗೆ ಅವರು ರೋಲ್‌ಮಾಡೆಲ್‌. ಭಾರತದ ಕ್ರೀಡಾಕ್ಷೇತ್ರದ ಪ್ರಮುಖ ಪ್ರಶಸ್ತಿ ಅರ್ಜುನ್‌ ಅವಾರ್ಡ್‌ಧಿ (2011), ದೇಶದ ನಾಲ್ಕನೇ ಅತ್ಯುಚ್ಚ ನಾಗರಿಕ ಪ್ರಶಸ್ತಿ ಪದ್ಮಶ್ರೀ ಮತ್ತು ದಿಲ್ಲಿಫುಟ್ಬಾಲ್‌ ಅಸೋಷಿಯೇಷನ್‌ನ ಫುಟ್ಬಾಲ್‌ ರತ್ನ ಅವಾರ್ಡ್‌  ಸಾಧನೆಯ ಕಿರೀಟಧಿವನ್ನು ಅಲಂಕರಿಸಿವೆ. ಶಾರುಖ್‌ ಖಾನ್‌ ಮತ್ತು ಸಚಿನ್‌ ತೆಂಡೂಲ್ಕರ್‌ ಅವರನ್ನು ಇಷ್ಟಪಡುವ ಅವರಿಗೆ ಸಂಗೀತ ಕೇಳುವುದು ಸಿಕ್ಕಾಪಟ್ಟೆ ಇಷ್ಟ. ಹಾಬಿಯಾಗಿ ಕ್ರಿಕೆಟ್‌, ಬ್ಯಾಡ್ಮಿಂಟ್‌, ಟೆನ್ನಿಸ್‌ ಕೂಡ ಆಡುತ್ತಾರೆ. ಬೆಂಗಳೂರು ಎಫ್‌ಸಿ ಮೂಲಕ  ಅವರು ಕನ್ನಡ ನಾಡಿಗೆ ಇನ್ನಷ್ಟು ಹತ್ತಿರವಾಗಿದ್ದೆರಂಬುದೂ ನಮಗೆ ಹೆಮ್ಮೆಯೇ ಸರಿ.


ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯ 2021ರ ಜೂನ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


ಶನಿವಾರ, ಜೂನ್ 12, 2021

Dr siddalingaiah- 'ಊರು ಕೇರಿ' ಬಿಟ್ಟು ನಡೆದ ಕವಿ ಸಿದ್ದಲಿಂಗಯ್ಯ

 ಕವಿ ಡಾ. ಸಿದ್ದಲಿಂಗಯ್ಯ ನಿಧನದಿಂದಾಗಿ ನಮ್ಮ ನೆಲದ ಹೋರಾಟದ, ಸಾಂಸ್ಕೃತಿಕ ಚಿಂತನೆಯ ದೊಡ್ಡದೊಂದು ಸತ್ವ ನಮ್ಮೊಳಗಿಂದ ಕಳೆದುಹೋದ ಭಾವ. ನಾಡಿನೆಲ್ಲೆಡೆ ದಲಿತ ಪ್ರಜ್ಞೆ ವಿಸ್ತರಿಸಿ, ಸಾಮೂದಾಯಿಕ ಜಾಗೃತಿಯನ್ನು ತಮ್ಮ ಬಂಡಾಯ ಭಾವದ ಕವಿತೆಗಳ ಮೂಲಕವೇ ಇವರು ಅಭಿವ್ಯಕ್ತಿಸಿದ್ದರು. ಇವರ ಬರಹ, ಹೋರಾಟಗಳೆಲ್ಲವೂ ಅನುಕರಣೀಯ, ದಾರಿದೀಪ.


ಡಾ.  ಸಿದ್ದಲಿಂಗಯ್ಯ ಅವರು ದಲಿತ ಸಮುದಾಯದ ಒಳಬೇಗುದಿ, ನೋವು, ಶೋಷಣೆ, ಅಪಮಾನ, ಮಡುಗಟ್ಟಿದ ಆಕ್ರೋಶವನ್ನು ಅಭಿವ್ಯಕ್ತಿಸಲು ಬಳಸಿದ ಪದಗಳು ನಿಗಿ ನಿಗಿ ಕೆಂಡ. ಅವು ಅಷ್ಟೇ ಆಗಿದ್ದರೆ, ವ್ಯಕ್ತಿಗತ ಆಕ್ರೋಶದ ನುಡಿಗಳಾ ಗಿರುತ್ತಿದ್ದವು; ಹಾಗಾಗಲಿಲ್ಲ. ಬಂಡಾಯ, ಪ್ರತಿಭಟನೆಯ ಸತ್ವ ದೊಂದಿಗೆ ಸಾಹಿತ್ಯಿಕ ಗುಣ ಅವರ ಕವಿತೆಗಳಲ್ಲಿದ್ದುದರಿಂದ ಸಾರ್ವತ್ರಿಕ ಎನಿಸಿಕೊಂಡವು. 

ಅವರ ಪ್ರಸಿದ್ಧ ಕವಿತೆ ‘ಇಕ್ರಲಾ ವದೀರ್ಲಾ...’ ಸಾಲುಗಳು ಮೇಲ್ನೋಟಕ್ಕೆ ರೋಷವನ್ನು ಅಭಿವ್ಯಕ್ತಿಸಿದರೂ ಆಳದಲ್ಲಿನೋವಿನ ನುಡಿಗಳೇ ಆಗಿವೆ. ನೋವು ಮತ್ತು ಆಕ್ರೋಶದ ಮೂಲಕವೇ ಅಭಿಧಿಧಿವ್ಯಕ್ತಿಯ ದಾರಿಯನ್ನು ಕಂಡುಕೊಂಡವರು ಅವರು. 

ಬರೆದ ಪ್ರತಿ ಕವಿತೆಯೂ, ಪ್ರತಿ ಪದವೂ ಸ್ವರೂಪದಲ್ಲಿಬಂಡಾಯವನ್ನು ಪ್ರತಿನಿಧಿಸುತ್ತವೆ. ಅವರು ಸಾಹಿತ್ಯ ಕೃಷಿ ಆರಂಭಿಸಿದ ಕಾಲದ ಸಂದರ್ಭವು ಕಾವ್ಯಕ್ಕೆ ಸೂಧಿರ್ತಿಯಾಗಿತ್ತು. ಡಾ. ಸಿದ್ದಲಿಂಗಯ್ಯ ಅವರು ತಮ್ಮ ಕವಿತೆ, ನಾಟಕ, ಪ್ರಬಂಧ, ವಿಮರ್ಶೆ, ಗದ್ಯದ ಮೂಲಕ ದಲಿತರ ಪ್ರಜ್ಞೆಯನ್ನು ವಿಸ್ತರಿಸಿಧಿದರು; ಸಾಮೂದಾಯಿಕ ಜಾಗೃತಿ ಹೆಚ್ಚಿಸಿದರು.  ಈ ಮೂಲಕ ನಾಡಿನ ಬಂಡಾಯ ಮತ್ತು ದಲಿತ ಸಾಹಿತ್ಯಕ್ಕೆ ಹೊಸ ಕಸುವು ತುಂಬಿದರು. ಪ್ರತಿಭಟನಾಸ್ತ್ರವನ್ನಾಗಿ ಸಾಹಿತ್ಯವನ್ನು ಬಳಸಿಕೊಂಡು ಜಾಗೃತಿಯ ದೀವಿಟಿಗೆಯನ್ನು ಮತ್ತೊಂದು ಪೀಳಿಗೆಗೆ ದಾಟಿಸಿದರು. ಕರ್ನಾಟಕದ ಮಟ್ಟಿಗೆ ದಲಿತ ಸಾಹಿತ್ಯದ ಇತಿಹಾಸವನ್ನು ಬರೆದರೆ ಅದು ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯದ ಇತಿಹಾಸವೂ ಆಗುತ್ತದೆ. 

ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದ ಬಡ, ಶೋಷಿತ ಕುಟುಂಬದಲ್ಲಿ1954 ಫೆಬ್ರವರಿ 3ರಂದು ಸಿದ್ದಲಿಂಗಯ್ಯ ಅವರು ಜನಿಸಿದರು. ತಂದೆ ದೇವಯ್ಯ, ತಾಯಿ ವೆಂಕಮ್ಮ. ಹಳ್ಳಿಯಲ್ಲಿಪ್ರಾಥಮಿಕ ಶಾಲೆ ಮುಗಿಸಿ ಬಂದು ಸೇರಿದ್ದು ಬೆಂಗಳೂರಿನ ಮಲ್ಲೇಶ್ವರದ ಸರಕಾರಿ ಹೈಸ್ಕೂಲ್‌ಗೆ. ಹಾಸ್ಟೆಲ್‌ನಲ್ಲಿವಾಸ್ತವ್ಯ. ಬಳಿಕ ಬೆಂಗಳೂರು ವಿವಿಯಿಂದ ಕನ್ನಡದಲ್ಲಿಎಂಎ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿ ಪಡೆದುಕೊಂಡರು. ಕವಿ ಜಿ ಎಸ್‌ ಶಿವರುದ್ರಪ್ಪ ಅವರು ಸಿದ್ದಲಿಂಗಯ್ಯ ಅವರನ್ನು ಸಂಶೋಧಕ ಸಹಾಯಕರನ್ನಾಗಿ ನೇಮಕ ಮಾಡಿಕೊಂಡರು. ಮುಂದೆ ಬೆಂಗಳೂರು ವಿವಿಯ ಕನ್ನಡ ಪ್ರಧ್ಯಾಪಕರಾಗಿ, ಕನ್ನಡ ವಿಭಾಗ ಮುಖ್ಯಸ್ಥರಾದರು. ಡಾ. ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. 

ಸಾಹಿತ್ಯ ಕೃತಿಗಳು: 1975ರಲ್ಲಿಪ್ರಕಟಗೊಂಡ ‘ಹೊಲೆ ಮಾದಿಗರ ಹಾಡು’ ಸಿದ್ದಲಿಂಗಯ್ಯರ ಮೊದಲ ಕವನ ಸಂಕಲನ.  ಆ ಬಳಿಕ ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಆಯ್ದ ಕವನಗಳು, ಅಲ್ಲೆಕುಂತವರೆ ಕವನ ಸಂಕಲನಗಳು ಪ್ರಕಟಗೊಂಡು ಜನಮನ್ನಣೆ ಗಳಿಸಿದವು.  ಏಕಲವ್ಯ(1986), ನೆಲಸಮ(1980), ಪಂಚಮ (1980) ಅವರು ರಚಿಸಿದ ನಾಟಕಗಳು. ಹಕ್ಕಿ ನೋಟ, ರಸಗಳಿಗೆಗಳು, ಎಡಬಲ, ಉರಿಕಂಡಾಯ ಅವರ ವಿಮರ್ಶಾ ಕೃತಿಗಳು. ‘ಊರು ಕೇರಿ’ ಅವರ ಸಿದ್ದಲಿಂಗಯ್ಯ ಆತ್ಮಚರಿತ್ರೆಯಾಗಿದೆ. ಇದು ಸಂಪುಟಗಳಲ್ಲಿಪ್ರಕಟವಾಗಿದೆ. ಅವತಾರಗಳು, ಸದನದಲ್ಲಿಸಿದ್ದಲಿಂಗಯ್ಯ ಭಾಗ -1, ಸದನದಲ್ಲಿಸಿದ್ದಲಿಂಗಯ್ಯ ಭಾಗ -2 ಮತ್ತು ಜನಸಂಸ್ಕೃತಿ ಅವರ ಲೇಖನ ಸಂಗ್ರಹಗಳು.

ಎರಡು ಬಾರಿ ಎಂಎಲ್ಸಿ
ಡಾ. ಸಿದ್ದಲಿಂಗಯ್ಯ ಅವರು 1988ರಿಂದ 1994 ಮತ್ತು  1995ರಿಂದ 2001ರ ತನಕ ಎರಡು ಅವಧಿಗೆ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಈ ಅವಧಿಯಲ್ಲಿನಾಡು ನುಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಸೆಳೆಯುವಲ್ಲಿಯಶಸ್ವಿಯಾಗಿದ್ದರು. ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿಯೂ ಗಮನಾರ್ಹ ಕೆಲಸ ಮಾಡಿದ್ದಾರೆ.

ಇಕ್ರಲಾ ವದಿರ್ಲಾ...!
ಸಿದ್ದಲಿಂಗಯ್ಯ ಅವರ ಕವಿತೆಗಳು ಬಂಡಾಯದ ಕಹಳೆಯೂದಿ ಕ್ರಾಂತಿ ಗೀತೆಗಳು ಎನಿಸಿಧಿಕೊಂಡವು. ಆ ಪೈಕಿ ‘ಇಕ್ರಲಾ ವದೀರ್ಲಾ/ ಈ ನನ್ನ ಮಕ್ಕಳ ಚರ್ಮ ಎಬ್ರಲಾ...’, ‘ನಿನ್ನೆ ದಿನ/ ನನ್ನ ಜನ/ ಬೆಟ್ಟದಂತೆ ಬಂದರು...’, ‘ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ..’,  ‘ಹಸಿವಿನಿಂದ ಸತ್ತೋರು, ಸೈಜುಗಲ್ಲುಹೊತ್ತೋರು/ ವದಿಸಿಕೊಂಡು ವರಗಿದವರು ನನ್ನ ಜನರು...’ ಕವಿತೆಗಳು ಪ್ರಮುಖವಾದವು. ಇಕ್ರಲಾ ವದೀರ್ಲಾ ಕವಿತೆಯಂತೂ ಧ್ವನಿಸುವ ಪ್ರತಿಭಟನೆ, ಬಂಡಾಯ, ಆಕ್ರೋಶದಿಂದಾಗಿ ಹೆಚ್ಚು ಜನಪ್ರಿಯವಾಗಿತ್ತು. ಇಂಥ ಕವಿತೆಗಳನ್ನು ಬರೆದಿದ್ದ ಸಿದ್ದಲಿಂಗಯ್ಯನವರು, ಆ ಬೆಟ್ಟದಲಿ ಸುಳಿದಾಡ ಬೇಡ ಗೆಳತಿ... ಎಂಬ ನವಿರು ಪ್ರೇಮಗೀತೆಯನ್ನು ಬರೆದು ಅಚ್ಚರಿ ಮೂಡಿಸಿದ್ದರು.

ಪ್ರಶಸ್ತಿಗಳು
ಪಂಪ, ನೃಪತುಂಗ, ಆಳ್ವಾಸ್‌ ನುಡಿಸಿರಿ, ನಾಡೋಜ, ಸಂದೇಶ, ಡಾ. ಅಂಬೇಡ್ಕರ್‌, ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಉತ್ತಮ ಚಲನಚಿತ್ರ ಗೀತ ರಚನೆಗಾಗಿ ಕರ್ನಾಟಕ ಸರಕಾರದಿಂದ ಪ್ರಶಸ್ತಿ ಕೂಡ ಬಂದಿದೆ.  ಶ್ರವಣಬೆಳಗೊಳ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದರು.

(2021ರ ಜೂನ್ 12ರ ವಿಜಯ ಕರ್ನಾಟಕ ವರದಿಯಲ್ಲಿ ಪ್ರಕಟವಾದ ವರದಿ)

ಗುರುವಾರ, ಜೂನ್ 3, 2021

George Fernandes- The Statesman: ಜಾರ್ಜ್... ನೀವು ಸದಾ ನೆನಪಿನಲ್ಲಿರುತ್ತೀರಿ

ಕಾರ್ಮಿಕ ಚಳವಳಿಯ ಅಗ್ರಮಾನ್ಯ ನಾಯಕರಾಗಿ, ಸಮಾಜವಾದಿ ಚಿಂತಕರಾಗಿ ಜಾರ್ಜ್ ಫರ್ನಾಂಡಿಸ್ ಅವರು ಏರಿದ ಎತ್ತರ ಅಷ್ಟಿಷ್ಟಲ್ಲ. ರಾಜಕಾರಣಿಗಳಿಗೆ ಅವರು ರೋಲ್ ಮಾಡೆಲ್. ಜೂನ್ 3 ಜಾರ್ಜ್ ಫರ್ನಾಂಡಿಸ್ ಹುಟ್ಟಿದ ದಿನ. ಅವರ ನೆನಪಿನಲ್ಲಿ...

 

- ಮಲ್ಲಿಕಾರ್ಜುನ ತಿಪ್ಪಾರ
ಹೋರಾಟದ ಮೂಲಕವೇ ರಾಜಕೀಯ ಏಳ್ಗೆ ಕಂಡು, ಜನ ಮತ್ತು ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಿದವರು ಜಾರ್ಜ್ ಫರ್ನಾಂಡಿಸ್. ಅವರನ್ನು ಕೇವಲ ರಾಜಕಾರಣಿ ಎಂಬ ಒಂದೇ ಪದದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಸಮತಾವಾದಿ, ಅತ್ಯುತ್ತಮ ವಾಗ್ಮಿ... ಹೀಗೆ ಏನೆಲ್ಲ ವಿಶೇಷಣಗಳನ್ನು ಅವರಿಗೆ ಧಾರಾಳವಾಗಿ ನೀಡಬಹುದು. ಅವರು ಎಂದೂ ತಾವು ನಂಬಿದ ಸಿದ್ಧಾಂತಕ್ಕೆ ತಿಲಾಂಜಲಿ ಇಡಲಿಲ್ಲ. ರಾಜಕೀಯದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು; ಯಾವುದಕ್ಕೂ ರಾಜಿಯಾಗಲಿಲ್ಲ. ಅಧಿಕಾರ ಸುಖ ಅವರನ್ನು ಆಲಸಿಯಾಗಿ ಮಾಡಲಿಲ್ಲ; ಗರ್ವಿಷ್ಠರನ್ನಾಗಿಸಲಿಲ್ಲ. ಅಧಿಕಾರ ಬರುವ ಮುಂಚೆ ಹೇಗಿದ್ದರೋ, ಕುರ್ಚಿಯಲ್ಲಿ ಕುಳಿತಾಗಲೂ ಹಾಗೆಯೇ ಇದ್ದರು. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು.

ಅವರ ಉಡುಗೆ ತೊಡುಗೆ ಸಿಂಪಲ್‌. ಒಂದು ಖಾದಿ ಪ್ಯಾಂಟ್‌; ಇಸ್ತ್ರಿಯಾಗದ ಖಾದಿ ಜುಬ್ಬಾ, ಇಷ್ಟೆ ಅವರ ತೊಡುಗೆ. ಬಿಳಿ ಕೂದಲು ತುಂಬಿದ ತಲೆ, ಮುಖಕ್ಕೊಂದು ಅಗಲವಾದ ಕನ್ನಡಕ ಅವರ ಒಟ್ಟು ವ್ಯಕ್ತಿತ್ವಕ್ಕೆ ಒಂದು ಗಂಭೀರತೆಯನ್ನು ತಂದುಕೊಟ್ಟಿತ್ತು. ಆದರೆ, ಅವರ ಜೀವನ ಮಾತ್ರ ಸರಳವಾಗಿರಲಿಲ್ಲ. ಮೂಲತಃ ಕರ್ನಾಟಕದವರಾದರೂ ಇಡೀ ಭಾರತವೇ ಅವರ ಹೋರಾಟದ ಅಂಗಣವಾಗಿತ್ತು. ಅವರು ಕಾಲಿಟ್ಟ ಕಡೆ ಹೋರಾಟದ ಹೆಜ್ಜೆಗಳು ಮೂಡುತ್ತಿದ್ದವು. ಮಂಗಳೂರು, ಬೆಂಗಳೂರು, ಮುಂಬಯಿ, ಬಿಹಾರ, ದಿಲ್ಲಿ... ಹೀಗೆ ಅವರ ಕಾರ್ಯಕ್ಷೇತ್ರ ಹರಡಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಯಾವಾಗಲೂ ಚಿಂತನೆಗಳಿರುತ್ತಿದ್ದವು. ಕಾರ್ಮಿಕರ ಶ್ರೇಯೋಭಿವೃದ್ಧಿಯೇ ಮೂಲಮಂತ್ರವಾಗಿತ್ತು. ಅವರ ಹಿತರಕ್ಷ ಣೆಗೆ ಎಂಥ ಹೋರಾಟಕ್ಕೂ ಅಣಿಯಾಗುತ್ತಿದ್ದರು. ಒಮ್ಮೆ ಅವರ ಮುಷ್ಕರ ಕರೆಗೆ ಇಡೀ ದೇಶವೇ ಸ್ತಬ್ಧವಾಗಿತ್ತು; ಅಂಥ ಧೀಃಶಕ್ತಿ ಅವರಲ್ಲಿತ್ತು. ಆದರೆ, ಅವರ ಕೊನೆಯ ದಿನಗಳು ಮಾತ್ರ ಯಾತನಾಮಯವಾಗಿದ್ದವು ಎಂಬುದು ಅವರನ್ನು ಇಷ್ಟಪಡೋರಿಗೆ ಅರಗಿಸಿಕೊಳ್ಳಲಾಗದ ಸಂಗತಿ.

ಕನ್ನಡದ ಕುವರ
ಜಾರ್ಜ್‌ ಫರ್ನಾಂಡಿಸ್‌ ಕನ್ನಡದವರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಕರಾವಳಿಯ ಮಂಗಳೂರಿನವರು.
1930 ಜೂನ್‌ 3ರಂದು ಮಂಗಳೂರಿನ ಕ್ಯಾಥೋಲಿಕ್‌ ಕುಟುಂಬದಲ್ಲಿ ಜನಿಸಿದರು. ತಂದೆ ಜೋಸೆಫ್‌ ಫರ್ನಾಂಡಿಸ್‌, ತಾಯಿ ಅಲಿಶಾ ಮಾರ್ಥಾ ಫರ್ನಾಂಡಿಸ್‌. ಇವರಿಗೆ ಆರು ಮಕ್ಕಳು. ಜಾರ್ಜ್‌ ಹಿರಿಯರು. ಕುಟುಂಬದಲ್ಲಿ ಜಾರ್ಜ್‌ ಅವರನ್ನು ಪ್ರೀತಿಯಿಂದ ಎಲ್ಲರೂ ಜರ್ರಿ ಎಂದು ಕರೆಯುತ್ತಿದ್ದರು. ಜೋಸೆಫ್‌ ಅವರದ್ದು ಕ್ರಿಶ್ಚಿಯನ್‌ ಸಂಪ್ರದಾಯಸ್ಥ ಕುಟುಂಬ. ಹಾಗಾಗಿ, ಹಿರಿಯ ಮಗ ಪಾದ್ರಿಯಾಗಲಿ ಎಂದು ಅವರನ್ನು ಪಾದ್ರಿ ತರಬೇತಿಗೆ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಆದರೆ ಜಾರ್ಜ್‌ ಪಾದ್ರಿಯಾಗಲಿಲ್ಲ. ಬೆಂಗಳೂರು ಬಿಟ್ಟು ಸೀದಾ ಮುಂಬೈ(ಅಂದಿನ ಬಾಂಬೆ)ಗೆ ತೆರಳಿದರು. ಆಗ ಅವರಿಗೆ ಕೇವಲ 19 ವರ್ಷ. ಮುಂಬೈನ ಬೀದಿಗಳಲ್ಲಿ ಅಲೆಯುತ್ತಿದ್ದ ಜಾರ್ಜ್‌ಗೆ ಪರಿಚಯದವರು ಯಾರೂ ಇರಲಿಲ್ಲ. ಎಷ್ಟೋ ಸಾರಿ ಅವರು ಸಮುದ್ರ ತೀರ ಮತ್ತು ರಸ್ತೆಗಳಲ್ಲಿ ಮಲಗುತ್ತಿದ್ದರು. ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಸಿಗುವವರೆಗೂ ಕೈಗೆ ಸಿಕ್ಕ ಕೆಲಸಗಳನ್ನು ಮಾಡಿದರು. ಮುಂಬೈಯಲ್ಲಿ ಅವರದ್ದು ಅಕ್ಷರಶಃ ಕಷ್ಟದ ಜೀವನವೇ ಆಗಿತ್ತು.

ಜಾರ್ಜ್ ಫರ್ನಾಂಡಿಸ್ (ಚಿತ್ರ ಕೃಪೆ-ಇಂಟರ್ನೆಟ್)
ಲೋಹಿಯಾ ಮತ್ತು ಡಿಮೆಲ್ಲೊ ಸಂಪರ್ಕ
ಮುಂಬೈ ಜೀವನದಲ್ಲಿ ಹೋರಾಟ ಬದುಕು ನಡೆಸುತ್ತಿರುವಾಗಲೇ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಮತ್ತು ಹಿರಿಯ ಕಾರ್ಮಿಕ ಮುಖಂಡ ಡಿ'ಮೆಲ್ಲೊ ಅವರ ಸಂಪರ್ಕ ಜಾರ್ಜ್‌ಗೆ ದೊರಕಿತು. ಇಲ್ಲಿಂದಲೇ ಜಾರ್ಜ್‌ ಅವರ ಹೋರಾಟದ ಮಜಲುಗಳು ಆರಂಭವಾದವು. ಅದು ಕಾರ್ಮಿಕ ಚಳವಳಿಕ ಉಚ್ಛ್ರಾಯ ಕಾಲ. ಹಾಗಾಗಿ, ನಿಧಾನವಾಗಿ ಕಾರ್ಮಿಕ ಚಳವಳಿಯಲ್ಲಿ ಜಾರ್ಜ್‌ ಅಗ್ರಗಣ್ಯ ನಾಯಕರಾಗಿ ರೂಪುಗೊಂಡರು. ಅಲ್ಲಿಂದ ಅವರು 1961ರಲ್ಲಿ ಬಾಂಬೆ ಮುನ್ಸಿಪಲ್‌ ಕಾರ್ಪೊರೇಷನ್‌ಗೆ ಸ್ಪರ್ಧಿಸಿ ಆಯ್ಕೆಯಾದರು. ಹೋರಾಟದ ಜತೆಗೆ ರಾಜಕೀಯ ಜೀವನವನ್ನು ಆರಂಭಿಸಿದರು.

ಜಾರ್ಜ್‌ ದಿ ಜೈಂಟ್‌ ಕಿಲ್ಲರ್‌!
ಕಾರ್ಪೊರೇಷನ್‌ಗೆ ಆಯ್ಕೆಯಾದ ಆರು ವರ್ಷದ ಬಳಿಕ ಜಾರ್ಜ್‌ ಲೋಕಸಭೆ ಸ್ಪರ್ಧೆಗೆ ಮುಂದಾದರು. ದಕ್ಷಿಣ ಮುಂಬೈ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದರು. ಅವರ ಎದುರಾಳಿ
, ಮಹಾರಾಷ್ಟ್ರದ ಅಂದಿನ ಪ್ರಖ್ಯಾತ ಕಾಂಗ್ರೆಸ್‌ ನಾಯಕ ಎಸ್‌.ಕೆ.ಪಾಟೀಲ್‌. ಈ ಚುನಾವಣೆಯಲ್ಲಿ ಜಾರ್ಜ್‌ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಫಲಿತಾಂಶ ಪ್ರಕಟವಾದಾಗ ಮಾತ್ರ ಎಲ್ಲರಿಗೂ ಆಶ್ಚರ್ಯವಾಗಿತ್ತು. ಪ್ರಭಾವಿ ಪಾಟೀಲ್‌ರನ್ನು ಸೋಲಿಸಿ ಜಾರ್ಜ್‌ ಆಯ್ಕೆಯಾಗಿದ್ದರು. ಅಲ್ಲಿಂದಲೇ ಅವರಿಗೆ The Giant Killer ಎಂಬ ಹೆಸರು ಬಂತು. ಇಲ್ಲಿಂದ ಅವರು ರಾಜಕೀಯದಲ್ಲಿ ಹಿಂದಿರುಗಿ ನೋಡಲಿಲ್ಲ. ಹೋರಾಟದ ಜತೆಗೆ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಮೇಲೇರಿದರು.

ಭೂಗತ ನಾಯಕ
1974ರ ಹೊತ್ತಿಗೆ ದೇಶದಲ್ಲಿ ಜಾರ್ಜ್‌ ಜನಪ್ರಿಯ ಹೆಸರಾಗಿತ್ತು. ಈ ಅವಧಿಯಲ್ಲಿ ಅವರು ರೇಲ್ವೆ ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಅದು ಎಷ್ಟು ಪರಿಣಾಮಕಾರಿ ಕರೆಯಾಗಿತ್ತು ಎಂದರೆ, ಇಡೀ ದೇಶ ಅಕ್ಷ ರಶಃ ಸ್ತಬ್ಧವಾಗಿತ್ತು. ಈ ಮುಷ್ಕರಕ್ಕೆ ದೇಶದ ಎಲ್ಲ ಉದ್ಯಮ ವಲಯಗಳಿಂದ ಬೆಂಬಲ ದೊರಕಿತ್ತು. ಮೂರು ವಾರಗಳ ಈ ಮುಷ್ಕರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯಲ್ಲೂ ಅಭದ್ರತೆ ಹುಟ್ಟು ಹಾಕಿತ್ತು ಎಂದರೆ ಅದರ ಪರಿಣಾವನ್ನು ಯಾರಾದರೂ ಊಹಿಸಬಹುದು. ಇದೇ ಸಂದರ್ಭದಲ್ಲಿ 'ಲೋಕ ನಾಯಕ' ಜಯಪ್ರಕಾಶ್‌ ನಾರಾಯಣ್‌ ಅವರ ಮೂವ್‌ಮೆಂಟ್‌ ಫಾರ್‌ ಚೇಂಜ್‌ ಚಳವಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಆಂತರಿಕವಾಗಿ ಹೆಚ್ಚುತ್ತಿದ್ದ ಸರಕಾರ ವಿರೋಧಿ ಧೋರಣೆ ಮತ್ತೊಂದೆಡೆ ಕೋರ್ಟ್‌ನಲ್ಲಾದ ಹಿನ್ನಡೆಯನ್ನು ಅರಗಿಸಿಕೊಳ್ಳಲಾಗದ ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಪ್ರತಿಪಕ್ಷ ನಾಯಕರು ಜೈಲು ಪಾಲಾದರು. ಆಗ ಜಾರ್ಜ್‌ ಮತ್ತು ಅವರ ಜತೆಗಿದ್ದವರು ಭೂಗತರಾದರು. ಈ ಸಂದರ್ಭದಲ್ಲಿ ಬರೋಡಾದಿಂದ ಡೈನಮೈಟ್‌ ತಂದು ಸರಕಾರಿ ಕಚೇರಿಗಳನ್ನು ಧ್ವಂಸಗೊಳಿಸುವ ಯೋಜನೆ ಜಾರ್ಜ್‌ ಅವರದ್ದಾಗಿತ್ತು. ಆದರೆ, ಕೋಲ್ಕತಾ(ಅಂದಿನ ಕಲ್ಕತ್ತಾ)ದಲ್ಲಿ ಸೆರೆ ಸಿಕ್ಕರು. ಡೈನಮೈಟ್‌ ಕದ್ದ ಆರೋಪವನ್ನು ಜಾರ್ಜ್‌ ಮೇಲೆ ಹಾಕಿ ಅವರನ್ನು 9 ತಿಂಗಳು ಕಾಲ ತಿಹಾರ್‌ ಜೈಲಿನಲ್ಲಿ ಇಡಲಾಯಿತು. ಈ ಪ್ರಕರಣವೇ ಮುಂದೆ 'ಬರೋಡಾ ಡೈನಮೈಟ್‌' ಎಂದು ಪ್ರಖ್ಯಾತವಾಯಿತು. ಜೈಲಿನಲ್ಲಿದ್ದುಕೊಂಡೇ ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ, ಮೂರು ಲಕ್ಷ ಮತಗಳ ಅಂತರದಿಂದ ಗೆದ್ದರು. ಜಾರ್ಜ್‌ ಅವರನ್ನು ಬಂಧಿಸಿದ ಕ್ಷ ಣದಲ್ಲಿ ಅವರ ಕೋಳ ತೊಟ್ಟ ಕೈ ಮೇಲತ್ತಿದ ಫೋಟೋ ಈ ಗೆಲುವಿನಲ್ಲಿ ಭಾರಿ ಪ್ರಭಾವ ಬೀರಿತ್ತು!

ಸಚಿವರಾದರು ಜಾರ್ಜ್‌
ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡಿತು. ಇದೇ ಮೊದಲ ಬಾರಿಗೆ ಮೊರಾರ್ಜಿ ದೇಸಾಯಿ ನೇತೃತ್ವದ ಪ್ರಥಮ ಕಾಂಗ್ರೆಸ್ಸೇತರ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲಿ ಜೈಲುಪಾಲಾಗಿದ್ದ ನಾಯಕರೆಲ್ಲ ಬಿಡುಗಡೆಗೊಂಡರು. ಜಾರ್ಜ್‌ ಅವರು ದೇಸಾಯಿ ಸಂಪುಟದಲ್ಲಿ ಕೈಗಾರಿಕಾ ಸಚಿವರಾದರು. ಬಂಡವಾಳ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದ ಅಮೆರಿಕ ಐಬಿಎಂ ಮತ್ತು ಕೊಕಾಕೋಲಾ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡ ಫಲವಾಗಿ ಅವರೆಡೂ ಕಂಪನಿಗಳು ಭಾರತದಿಂದ ಕಾಲು ಕೀಳಬೇಕಾಯಿತು. ಮುಂದೆ ಜನತಾ ದಳ ನಾಯಕ ವಿ.ಪಿ. ಸಿಂಗ್‌ ನೇತೃತ್ವದ ಸರಕಾರದಲ್ಲಿ ರೇಲ್ವೆ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವ ಕೊಂಕಣ ರೇಲ್ವೆ ಯೋಜನೆ ಅನುಷ್ಠಾನಗೊಳಿಸಿದರು.

ಬಿಜೆಪಿಯ ಸಖ್ಯ
ಜೆಪಿ ಚಳವಳಿಯಲ್ಲಿ ಉದಯಿಸಿದ ನಾಯಕರ ಜನತಾ ಪರಿವಾರ ದಿಕ್ಕಾಪಾಲಾದ ಸಂದರ್ಭ ಅದು. ರಾಜಕೀಯ ಅನಿವಾರ್ಯತೆ ಮತ್ತು ಕಾಂಗ್ರೆಸ್‌ ವಿರೋಧಿ ನೀತಿಯ ಪ್ರಮುಖ ಧ್ಯೇಯದಿಂದಾಗಿ ಜಾರ್ಜ್‌ ಅವರು ಅನಿವಾರ್ಯವಾಗಿ ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಆಡ್ವಾಣಿ ಜತೆ ಕೈ ಜೋಡಿಸಬೇಕಾಯಿತು. ವಿಶೇಷ ಎಂದರೆ, ಆರ್‌ಎಸ್‌ಎಸ್‌ ನೀತಿಯನ್ನು ಜಾರ್ಜ್‌ ಟೀಕಿಸುತ್ತಿದ್ದರು. ಹಾಗಿದ್ದೂ ಅವರು ಬಿಜೆಪಿ ಜತೆ ಹೆಜ್ಜೆ ಹಾಕಬೇಕಾಯಿತು. ಜತೆಗೆ ಬಿಜೆಪಿ ನೇತೃತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌-ಎನ್‌ಡಿಎ ಸಂಚಾಲಕರಾದರು. ಯಾರೂ ನಿರೀಕ್ಷಿಸದ ರೀತಿಯಲ್ಲಿ
1998ರಲ್ಲಿ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆಗ ಜಾರ್ಜ್‌ ಅವರಿಗೆ ರಕ್ಷಣಾ ಸಚಿವ ಸ್ಥಾನ ತಾನಾಗಿಯೇ ಒಲಿದು ಬಂತು. ವಿಪರ್ಯಾಸ ಎಂದರೆ, ಜಾರ್ಜ್‌ ತಮ್ಮ ಬದುಕಿನುದ್ದಕ್ಕೂ ಅಣ್ವಸ್ತ್ರಗಳನ್ನು ವಿರೋಧಿಸುತ್ತಲೇ ಬಂದಿದ್ದರು. ಆದರೆ, ಅದೇ ಜಾರ್ಜ್‌ ಅವರು ಅಣ್ವಸ್ತ್ರ ಪರೀಕ್ಷೆಯಲ್ಲಿ ವಾಜಪೇಯಿ ಜತೆ ಪಾಲುದಾರರಾದರು!

ಬೆನ್ನತ್ತಿದ ವಿವಾದಗಳು
ಜಾರ್ಜ್‌ ಅವರು ರಕ್ಷಣಾ ಸಚಿವರಾಗಿದ್ದಾಗಲೇ ಬಾರಾಕ್‌ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳು ಬೆನ್ನು ಹತ್ತಿದವು. ಇದಕ್ಕಾಗಿ ಅವರು ರಕ್ಷಣಾ ಸಚಿವ ಸ್ಥಾನವನ್ನು ತೊರೆಯಬೇಕಾಯಿತು. ಮುಂದೆ ತನಿಖೆ ವೇಳೆ ಜಾರ್ಜ್‌ ಅವರು ನಿರ್ದೋಷಿ ಎಂದು ಸಾಬೀತಾದ ಮೇಲೆ ಮತ್ತೆ ರಕ್ಷ ಣಾ ಸಚಿವರಾದರು. ಆದರೆ, ಕಾರ್ಗಿಲ್‌ ಯುದ್ಧದ ವೇಳೆ ಖರೀದಿಸಲಾದ ಶವಪೆಟ್ಟಿಗೆಗಳ ಹಗರಣ ಮತ್ತೆ ಜಾರ್ಜ್‌ ತಲೆಯೇರಿತು. ತೀರಾ ಇತ್ತೀಚೆಗಷ್ಟೇ ಈ ಹಗರಣದಲ್ಲೂ ಜಾರ್ಜ್‌ ಅವರು ನಿರ್ದೋಷಿ ಎಂದು ಸಾಬೀತಾಯಿತಾದರೂ, ಅದನ್ನು ಕೇಳಿ ಸಂತೋಷ ಪಡುವ ಸ್ಥಿತಿಯಲ್ಲಿ ಜಾರ್ಜ್‌ ಇರಲಿಲ್ಲ. ಸಾಮಾನ್ಯವಾಗಿ ಭಾರತದ ಮಗ್ಗಲು ಮುಳ್ಳು ಪಾಕಿಸ್ತಾನ ಎಂದು ಬಹುತೇಕ ರಾಜಕಾರಣಿಗಳು ಹೇಳುತ್ತಾರೆ. ಆದರೆ, ಜಾರ್ಜ್‌ ಮಾತ್ರ ಭಾರತದ ನಂ.1ವೈರಿ ಪಾಕಿಸ್ತಾನವಲ್ಲ ಚೀನಾ ಎಂದು ಬಹಿರಂಗವಾಗಿ ಹೇಳುವ ಮೂಲಕ ಭಾರಿ ಸಂಚಲನಕ್ಕೆ ಕಾರಣವಾಗಿದ್ದರು.

ನೇಪಥ್ಯಕ್ಕೆ ಜಾರಿದ ಜಾರ್ಜ್‌
2004ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಮರಳಿ ಅಧಿಕಾರ ಹಿಡಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಎನ್‌ಡಿಎ ಸೋಲು ಕಂಡು ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂತು. ಈ ಅವಧಿಯಲ್ಲಿ ದೇಶದ ಇಬ್ಬರು ಪ್ರಮುಖ ನಾಯಕರು ನೇಪಥ್ಯಕ್ಕೆ ಜಾರುವಂತಾಯಿತು. ಒಬ್ಬರು ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ, ಮತ್ತೊಬ್ಬರು ಜಾರ್ಜ್‌. ನಂತರ ಅವರಿಗೆ ಅಲ್ಜೈಮರ್‌ ಕಾಯಿಲೆ ಉಲ್ಬಣಗೊಂಡು ಸಂಪೂರ್ಣವಾಗಿ ಸಾರ್ವಜನಿಕ ಜೀವನದಿಂದ ಮರೆಯಾಗಬೇಕಾಯಿತು.

ಮರಳಿ ಬಾರದ ಲೋಕಕ್ಕೆ
ಜಾರ್ಜ್‌ ಅದ್ಭುತ ಮಾತುಗಾರರು. ಅವರು ಭಾಷಣಕ್ಕೆ ನಿಂತರೆ ಇಡೀ ಜನಸಮೂಹ ತದೇಕ ಚಿತ್ತದಿಂದ ಆಲಿಸುತ್ತಿತ್ತು. ಸಂಸತ್ತಿನಲ್ಲಿ ಮಾತನಾಡಲು ಆರಂಭಿಸಿದರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಕೊಂಕಣಿ, ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ಜಾರ್ಜ್‌ ನಿರರ್ಗಳವಾಗಿ ಮಾತನಾಡುತ್ತಿದ್ದರು. ಪ್ರಖರ ಸಮಾಜವಾದಿಯಾಗಿದ್ದ ಜಾರ್ಜ್‌ ತುಂಬ ದಿನಗಳ ಕಾಲ ಅನಾರೋಗ್ಯಪೀಡಿತರಾಗಿ ಕೊನೆಯ ದಿನಗಳನ್ನು ಅತ್ಯಂತ ಯಾತನೆಯಲ್ಲಿ ಕಳೆದರು. 2019ರ ಜನವರಿ 29ರಂದು ಇಹಲೋಕ ತ್ಯಜಿಸಿದರು.

ವಿಯೆಟ್ನಾಮಿಯಾಗಿ ಹುಟ್ಟುವೆ!
''ಒಂದು ವೇಳೆ ಪುನರ್ಜನ್ಮ ಎಂಬುದಿದ್ದರೆ ನಾನು ವಿಯೆಟ್ನಾಮಿಯಾಗಿ(ವಿಯೆಟ್ನಾಮ್‌ ಪ್ರಜೆ) ಹುಟ್ಟುವೆ,'' ಎಂದು ಜಾರ್ಜ್‌ ಒಮ್ಮೆ ಹೇಳಿದ್ದರು. ಒಂದುವರೆ ದಶಕದ ಹಿಂದೆ ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ಬಯಕೆಯನ್ನು ಅವರು ಹೊರಹಾಕಿದ್ದರು. ''ವಿಯೆಟ್ನಾಮಿ ಜನರು ತಮ್ಮ ಬದ್ಧತೆಯನ್ನು ಪೂರೈಸಲು ಸಾಯಲು ಸಿದ್ಧರಾಗಿರುತ್ತಾರೆ. ಅಂಥ ಶಿಸ್ತು ಅವರಲ್ಲಿರುತ್ತದೆ. ನಾನು ವಿಯೆಟ್ನಾಮ್‌ನ ಅಭಿಮಾನಿ,'' ಎಂದು ಹೇಳಿದ್ದರು.

ಭಾನುವಾರ, ಮೇ 23, 2021

Remembering Sundarlal Bahuguna: ಪರಿಸರದ ಪರಮಾಪ್ತ ಸುಂದರಲಾಲ್ ಬಹುಗುಣ

ಪರಿಸರ ರಕ್ಷಣೆಯಲ್ಲೂ ಗಾಂಧಿ ಮಾರ್ಗದ ಮೂಲಕವೇ ಯಶಸ್ಸು ಕಂಡ ಸುಂದರಲಾಲ್ಬಹುಗುಣ ಅವರು ಚಿಪ್ಕೋ ಚಳವಳಿಯ ಮೂಲಕ ಜಗದ್ವಿಖ್ಯಾತರಾದವರು.


- ಮಲ್ಲಿಕಾರ್ಜುನ ತಿಪ್ಪಾರ 
ಈಗಿನ ತಲೆಮಾರಿಗೆ ಸುಂದರಲಾಲ್ಬಹುಗುಣ ಹೆಸರು ಪರಿಚಿತವಲ್ಲ. 70ರಿಂದ 90ರ ದಶಕದವರೆಗಿನ ಯುವ ಸಮುದಾಯಕ್ಕೆ, ಪರಿಸರ ಪ್ರೇಮಿಗಳಿಗೆ ಸುಂದರಲಾಲ್ಬಹುಗುಣ ಎಂಬುದು ಕೇವಲ ಹೆಸರಾಗಿರಲಿಲ್ಲ. ಅದು ಪ್ರೇರಕ ಮಂತ್ರ; ಹೋರಾಟದ ದೀವಟಿಗೆ. ಪರಿಸರವಾದಿ, ಪರಿಸರ ಚಳವಳಿಗಾರ ಮಾತ್ರವಲ್ಲದೇ ಅವರ ಹೆಸರಿನಂತೆ ಬಹುಗುಣ ಅವರು, ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಮಹಿಳಾ ಹಕ್ಕುಗಳ ಹೋರಾಟದವರೆಗೂ ವ್ಯಕ್ತಿತ್ವ ಆವರಿಸಿಕೊಂಡಿದೆ. ನಮಗೆ ನಿಮಗೆಲ್ಲ ಅವರು ಪರಿಚತರಾಗಿದ್ದೇಚಿಪ್ಕೋ ಚಳವಳಿಯ ಮೂಲಕ. ಗಾಂಧಿ ಮಾರ್ಗದ ಮೂಲಕವೇ ಪರಿಸರ ರಕ್ಷಣೆಯನ್ನೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು. 

ಬಹುಶಃ ಹಿಮಾಲಯದ ತಪ್ಪಲಿನಲ್ಲಿಇಂದು ಅರಣ್ಯ ಉಳಿದಿರಲು ಬಹುಗುಣ ರೂಪಿಸಿದ ಚಳವಳಿಯೇ ಕಾರಣ. ಇಲ್ಲದಿದ್ದರೆ ಅಭಿವೃದ್ಧಿಯ ಹೆಸರಲ್ಲಿ ಹಿಮಾಲಯದ ತಪ್ಪಲಿನ ಕಾಡು ನಾಶವಾಗಿ, ಬೋಳು ದಿನ್ನೆಯಾಗಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿಹೆಚ್ಚು ಪ್ರಚಲಿತವಾಗುತ್ತಿರುವ ಗಂಗಾ ಉಳಿಸಿ ಚಳವಳಿಗೂ ಬಹುಗುಣ ಅವರು ಪ್ರೇರಕ ಎಂಬುದನ್ನು ಬಹುತೇಕ ಪರಿಸರ ಹೋರಾಟಗಾರರು ಒಪ್ಪಿಕೊಳ್ಳುತ್ತಾರೆ.

 ಅರಣ್ಯ ಗುತ್ತಿಗೆದಾರರು ನಡೆಸುತ್ತಿದ್ದ ಅರಣ್ಯ ನಾಶ ತಪ್ಪಿಸುವುದಕ್ಕಾಗಿಯೇ ಸುಂದರಲಾಲ್ಬಹುಗುಣ ನೇತೃತ್ವದಲ್ಲಿ 1974ರ ಮಾರ್ಚ್‌ 26ರಂದು ಉತ್ತರ ಪ್ರದೇಶದಲ್ಲಿ ಮೊದಲಿಗೆ ಚಿಪ್ಕೋ ಚಳವಳಿ ಆರಂಭವಾಯಿತು. ಅಂದಿನ ಉತ್ತರ ಪ್ರದೇಶದ ಅರಣ್ಯದ ಒಂದಿಷ್ಟು ಭಾಗವನ್ನು ಕಡಿಯಲು ಗುತ್ತಿಗೆದಾರರಿಗೆ ಅನುಮತಿ ನೀಡಲಾಯಿತು. ಆಗ ಅಲಕನಂದಾ ಕಣಿವೆಯ ಮೇಲ್ಭಾಗದ ಮಂಡಲ್ಹಳ್ಳಿಯಲ್ಲಿ ಜನರು ಮರ ಕಡಿಯುವುದನ್ನು ಪ್ರತಿಭಟಿಸಿದರು. ಹಾಗೆ, ಚಿಪ್ಕೋ ಚಳವಳಿ ಆರಂಭವಾಯಿತು. ಅದಕ್ಕೆ ಬಹುಗುಣ ನಾಯಕತ್ವವನ್ನು ವಹಿಸಿ, ವಿಶ್ವವ್ಯಾಪಿ ಮಾನ್ಯತೆ­ಯನ್ನು ದೊರಕಿಸಿಕೊಟ್ಟರು. ಹಿಂದಿ ಭಾಷೆಯಲ್ಲಿ ಚಿಪ್ಕೋಅಂದರೆಅಪ್ಪಿಕೊಳ್ಳುಎಂಬರ್ಥವಿದೆ. ಮರಗಳನ್ನು ಕಡಿಯಲು ಮುಂದಾದಾಗ ಚಳವಳಿ ನಿರತರು ಮರಗಳನ್ನು ತಬ್ಬಿಕೊಂಡು ಅವುಗಳ ರಕ್ಷ ಣೆಗೆ ಮುಂದಾದರು. ಈ ಚಳವಳಿ ಆ ನಂತರ ಜನರ ಚಳವಳಿಯಾಯಿತು; ರೈತರ ಚಳವಳಿಯಾಯಿತು; ಯುವ ಜನತೆಯ ಚಳವಳಿಯಾಯಿತು. ಚಿಪ್ಕೋ ಚಳವಳಿಯ ವ್ಯಾಪಕತೆ ಹೆಚ್ಚುತ್ತಾ ಹೋದಂತೆ ಬಹುಗುಣ ಅವರ ಪರಿಸರ ಕಾಳಜಿ ಸಂದೇಶಗಳು, ಗಾಂಧಿ ಹಾದಿಯ ಹೋರಾಟ ಜನರನ್ನು ಸೆಳೆಯಿತು. ಚಿಪ್ಕೋ ಚಳವಳಿ ಮತ್ತು ಪರಿಸರ ಹೋರಾಟಕ್ಕೆ ಬಹುಗುಣ ಅವರ ಅನನ್ಯ ಕೊಡುಗೆ ಎಂದರೆ, ಅವರು ಚಳವಳಿಗೆ ರೂಪಿಸಿದ Ecology is permanent economy ಸ್ಲೋಗನ್‌. ಹಾಗೆ ನೋಡಿದರೆ, ಇದು ಕೇವಲ ಘೋಷಣೆಯಲ್ಲ. ಅವರ ಹೋರಾಟದ ತಿರುಳು; ಪ್ರತಿಪಾದಿಸಿದ ಫಿಲಾಸಫಿ.

ಚಿಪ್ಕೋ ಚಳವಳಿ ಭಾಗವಾಗಿ ಬಹುಗುಣ ಅವರು, ಅಂದಿನ ಉತ್ತರ ಪ್ರದೇಶದ ಹಿಮಾಲಯದ ವ್ಯಾಪ್ತಿಯ ಹಳ್ಳಿಹಳ್ಳಿಗಳಿಗೆ ನಡೆದುಕೊಂಡೇ ಹೋಗಿ ಜನರನ್ನು ಜಾಗೃತಗೊಳಿಸಿದರು. 1981ರಿಂದ 1983ರ ಅವಧಿಯಲ್ಲಿ ಹಿಮಾಲಯದ ಸುಮಾರು 5000 ಕಿ.ಮೀ. ಕಾಲ್ನಡಿಗೆಯಲ್ಲಿ ಪ್ರವಾಸ ಮಾಡಿದರು. ಚಳವಳಿಗೆ ಸ್ಥಳೀಯರಿಂದ ದೊಡ್ಡ ಮಟ್ಟದ ಬೆಂಬಲ ಪಡೆ­ದರು. ಇದರ ಪರಿಣಾಮ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಿಮಾಲಯ ವ್ಯಾಪ್ತಿಯ ಕಾಡು ನಾಶಕ್ಕೆ ಅಂಕುಶ ಹಾಕುವ ಕಾನೂನನ್ನು ಜಾರಿಗೆ ತರಬೇಕಾ­ಯಿತು. ಇಲ್ಲಿಂದ ಭಾರತದ ಪರಿಸರ ಹೋರಾಟಕ್ಕೆ ಬಹುಗುಣ ಅವರು ಮುಖವಾದರು, ವಕ್ತಾರರೆನಿಸಿಕೊಂಡರು. 

ದಶಕಗಳವರೆಗೆ ನಡೆದ ತೆಹ್ರಿ ಡ್ಯಾಮ್ವಿರೋಧಿ ಹೋರಾಟಕ್ಕೆ ಬಹುಗುಣ ಚಾಲಕಶಕ್ತಿಯಾಗಿದ್ದರು. ಈ ಡ್ಯಾಮ್ನಿರ್ಮಾಣ ವಿರೋಧಿಸಿ ಹಲವು ಬಾರಿ ಸತ್ಯಾಗ್ರಹ ಕೈಗೊಂಡರು. ಉತ್ತರಾಖಂಡದಲ್ಲಿ ಹರಿಯುವ ಭಾಗಿರಥಿ ನದಿಗೆ ತೆಹ್ರಿ ಎಂಬ ಹಳ್ಳಿಯ ಸಮೀಪ ಡ್ಯಾಮ್ನಿರ್ಮಾಣ ಮಾಡಲಾಗುತ್ತಿತ್ತು. ಈ ಡ್ಯಾಮ್ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಬಹುಗುಣ ಜಾಗೃತಿ ಮೂಡಿಸಿದರು. ಆಡಳಿತ ಶಕ್ತಿಗಳು ಹೋರಾಟಕ್ಕೆ ಬೆಲೆ ನೀಡದೇ ಇದ್ದಾಗ ಸತ್ಯಾಗ್ರಹಗಳನ್ನು ಕೈಗೊಂಡರು.

1995ರಲ್ಲಿ ಬಹುಗುಣ ಅವರು ಭಾಗಿರಥಿ ನದಿಯ ದಂಡೆಯಲ್ಲಿ 45 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ಡ್ಯಾಮ್ಗೆ ಸಂಬಂಧಿಸಿ ಪರಿಶೀಲನಾ ಸಮಿತಿ ನೇಮಕ ಮಾಡಿದ ನಂತರವೇ ತಮ್ಮ ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು. ಇಷ್ಟಾಗಿಯೂ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಮತ್ತೆ ದಿಲ್ಲಿಯ ರಾಜಘಾಟ್ನಲ್ಲಿ ಗಾಂಧಿ ಸಮಾಧಿ ಬಳಿ 74 ದಿನ ಉಪವಾಸ ಸತ್ಯಾಗ್ರಹ ಕೈಗೊಂಡರು. ಆಗ ಪ್ರಧಾನಿಯಾಗಿದ್ದವರು ಎಚ್‌.ಡಿ.ದೇವೇಗೌಡ. ಯೋಜನೆಯ ಬಗ್ಗೆ ಪರಿಶೀಲಿಸುವ ವಾಗ್ದಾನವನ್ನು ದೇವೇಗೌಡರು ನೀಡಿದ ಬಳಿಕ ಬಹುಗುಣ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು. ಡ್ಯಾಮ್ನಿರ್ಮಾಣವೇನೂ ಸ್ಥಗಿತಗೊಳ್ಳಲಿಲ್ಲ. ಈ ಪ್ರಕರಣ ಸ್ಥಳೀಯ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ನಲ್ಲಿ ದಶಕಗಳ ಕಾಲ ನಡೆದು, 2001ರಲ್ಲಿ ಡ್ಯಾಮ್ನಿರ್ಮಾಣವು ಪುನರಾರಂಭವಾಯಿತು. ಇಷ್ಟಾದರೂ ಬಹುಗುಣ ಹೋರಾಟವನ್ನು ಕೈಬಿಡಲಿಲ್ಲ. ಅವರನ್ನು 2004ರಲ್ಲಿ ಡೆಹ್ರಾಡೂನ್ಗೆ ಸ್ಥಳಾಂತರಿಸಲಾಯಿತು.

ಬಹುಗುಣ ಅವರು ಹಿಮಾಲಯ ಜನರ ಬದುಕನ್ನು ರಕ್ಷಿಸಲು ಕಂಕಣಬದ್ಧರಾಗಿದ್ದರು. ವಿಶೇಷವಾಗಿ ಬೆಟ್ಟಗಳಲ್ಲಿ ದುಡಿಯುವ ಮಹಿಳೆಯರ ಹಕ್ಕುಗಳ ಪರವಾಗಿದ್ದರು. ಪರಿಸರ ಹೋರಾಟದ ಜತೆಗೆ ನದಿಗಳ ರಕ್ಷಣೆಗೂ ಮುಂದಾಳತ್ವ ವಹಿಸಿಕೊಂಡಿದ್ದರು. ಅವರ ಹೋರಾಟದ ಹಾದಿ ಸರಳ ರೇಖೆಯಲ್ಲ; ಅದು ಟಿಸಿಲೊಡೆದ ಅನೇಕ ಹಾದಿಗಳ ಸಂಗಮ. ತಮ್ಮ ಜೀವಿತಾವಧಿಯ ಪೈಕಿ ಒಟ್ಟು 76 ವರ್ಷಗಳನ್ನು ಸಾಮಾಜಿಕ ಹೋರಾಟಗಳಿಗೆ ತ್ಯಾಗ ಮಾಡಿದ್ದಾರೆ.

ಉತ್ತರಾಖಂಡದ ಮರೋದಾ ಎಂಬ ಸಣ್ಣ ಹಳ್ಳಿಯಲ್ಲಿ 1927 ಜನವರಿ 9ರಂದು ಬಹುಗುಣ ಜನಿಸಿದರು. ಇವರ ತಂದೆ ಅಂಬಾದತ್ತ ಅವರು ಅಂದಿನ ತೆಹ್ರಿ ಗರ್ವಾಲ್ರಾಜ್ಯಾಡಳಿತದಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದೆಲ್ಲೆಡೆ ಸ್ವಾತಂತ್ರ್ಯದ ಕಿಡಿ ಹೊತ್ತಿದ ಸಂದರ್ಭವದು. ಬಹುಗುಣ 14 ವರ್ಷ ಇದ್ದಾಗಲೇ ಮಹಾತ್ಮ ಗಾಂಧಿ ಅವರಿಂದ ಪ್ರಭಾವಿತರಾದರು. ಅಹಿಂಸೆ, ಸತ್ಯಾಗ್ರಹಗಳು ಅವರನ್ನು ಬಹುವಾಗಿ ಆಕರ್ಷಿಸಿದವು. ಗಾಂಧಿ ನಂತರ ಬಹುಗುಣರನ್ನು ಪ್ರಭಾವಿಸಿದವರು ಎಂದರೆ ಶ್ರೀದೇವ್ಸುಮನ್ಅವರು. ತೆಹ್ರಿ ಗರ್ವಾಲ್ರಾಜ್ಯಾಡಳಿತವನ್ನು ಕೊನೆಗಾಣಿಸಲು ಅವರು ಹೋರಾಟ ನಡೆಸುತ್ತಿದ್ದರು.

ಗಾಂಧಿ ಮತ್ತು ಸುಮನ್ಅವರಿಂದ ಬಹಳಷ್ಟು ಪ್ರಭಾವಿತಗೊಂಡಿದ್ದ ಬಹುಗುಣ ಚಿಕ್ಕವಯಸ್ಸಿನಲ್ಲೇ ಹೋರಾಟಕ್ಕೆ ಧುಮುಕಿದರು. ತೆಹ್ರಿ ಗರ್ವಾಲ್ರಾಜ್ಯಾಡಳಿತ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡರು. ಪರಿಣಾಮ ಏಳು ತಿಂಗಳು ಸೆರೆವಾಸ ಅನುಭವಿಸಬೇಕಾಯಿತು. ತಮ್ಮ 24ನೇ ವಯಸ್ಸಿನಲ್ಲಿ ಬಹುಗುಣ ಕಾಂಗ್ರೆಸ್ಪಾರ್ಟಿ ಸೇರಿದರು. 1947ರಲ್ಲಿ ಭಾರತ ಸ್ವತಂತ್ರಗೊಂಡರೂ ತೆಹ್ರಿ ರಾಜ್ಯಾಡಳಿತದ ವಿರುದ್ಧ ಹೋರಾಟ ಮುಂದುವರಿದೇ ಇತ್ತು. ಅಂತಿಮವಾಗಿ 1949 ಆಗಸ್ಟ್‌ 1ರಂದು ತೆಹ್ರಿ ರಾಜ್ಯ ಭಾರತದ ಒಕ್ಕೂಟವನ್ನು ಸೇರಿತು.

ಸ್ವಾತಂತ್ರ್ಯ ಹೋರಾಟದ ಬಳಿಕ ಬಹುಗುಣ ಅವರು ಮದ್ಯಪಾನ ವಿರೋಧಿ, ಮಹಿಳೆಯರ ಹಕ್ಕು ಹೋರಾಟಗಳಲ್ಲಿ ತೊಡಗಿಸಿಕೊಂಡರು. ಕೊನೆಗೆ ಚಿಪ್ಕೋ ಚಳವಳಿ ಮೂಲಕ ಪರಿಸರ ಸಂರಕ್ಷ ಣೆಯ ಪ್ರತಿನಿಧಿಯಾದರು. ವ್ಯಕ್ತಿಯೊಬ್ಬ ನಿಸ್ವಾರ್ಥವಾಗಿ ಸಮಾಜ ಸೇವೆಗೆ ತೊಡಗಿಸಿಕೊಂಡಾಗ ಅವರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಚಿಪ್ಕೋ ಚಳವಳಿಗೆ 1987ರಲ್ಲಿ ರೈಟ್ಲೈವ್ಲೀಹುಡ್ಅವಾರ್ಡ್ಸಂದಿತು. ದೇಶದ ಪರಮೋಚ್ಚ ನಾಗರಿಕ ಗೌರವಗಳಾದ ಪದ್ಮಶ್ರೀ(1981) ಮತ್ತು  ಪದ್ಮವಿಭೂಷಣ(2009) ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಐಐಟಿಗಳು, ಸಂಘ ಸಂಸ್ಥೆಗಳು ಬಹುಗುಣ ಅವರನ್ನು ಸನ್ಮಾನಿಸಿವೆ. ಅವರ ಜೀವನ, ಹೋರಾಟ, ಫಿಲಾಸಫಿಗಳು ಹಲವು ಪುಸ್ತಕಗಳಿಗೆ ವಿಷಯಗಳಾಗಿವೆ. ಬಹುಗುಣ ಕೆಲವು ಕೃತಿಗಳನ್ನು ರಚಿಸಿದ್ದಾರೆ.

ಅವರು ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಇಲ್ಲಿನ ಪರಿಸರ ಚಳವಳಿಗಳಿಗೆ ಪ್ರತ್ಯಕ್ಷ  ಹಾಗೂ ಪರೋಕ್ಷವಾಗಿ ಪ್ರೇರಕ ಶಕ್ತಿಯಾಗಿದ್ದರು. 94 ವರ್ಷ ವಯಸ್ಸಾಗಿದ್ದ ಬಹುಗುಣ ಕೋವಿಡ್ಸೋಂಕಿನಿಂದಾಗಿ ದಿಲ್ಲಿಯ ಏಮ್ಸ್ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೇ 21ರಂದು ಕೊನೆಯುಸಿರೆಳೆದರು. ಪರಿಸರ ಮೇಲಿನ ಪ್ರೀತಿ, ಬದುಕಿನ ಮೇಲಿನ ವ್ಯಾಮೋಹದಿಂದಾಗಿ ಅವರು ಚಿರಸ್ಥಾಯಿ. ಅವರನ್ನು ಕಳೆದುಕೊಂಡ ಹಿಮಾಲಯದ ಮರ ಗಿಡಗಳು ಕಣ್ಣೀರು ಸುರಿಸುತ್ತಿರಬಹುದು!


ಈ ಲೇಖನವು ವಿಜಯ ಕರ್ನಾಟಕದ 2021ರ ಮೇ 23ರ ಸಂಚಿಕೆಯಲ್ಲಿ ಪ್ರಕಟವಾಗಿದೆ.