ಭಾನುವಾರ, ಸೆಪ್ಟೆಂಬರ್ 19, 2021

Captain Amarinder Singh: ಅಮರೀಂದರ್ ಸಿಂಗ್ 'ಜನರ ಮಹಾರಾಜ'

ನವಜೋತ್‌ ಸಿಧು ಜೊತೆಗಿನ ಒಳಜಗಳದಲ್ಲಿ ಕೈಸೋತ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
‘‘ಇನ್ನು ನಾನು ಅವಮಾನ ಸಹಿಸಲಾರೆ,’’ ಎನ್ನುತ್ತಲೇ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ನ ನೂತನ ಅಧ್ಯಕ್ಷ , ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಹಾಗೂ ಅಮರೀಂದರ್‌ ಸಿಂಗ್‌ ನಡುವಿನ ಕಿತ್ತಾಟ ಒಂದು ಹಂತಕ್ಕೆ ತಲುಪಿದೆ. 

ಅನುಮಾನವೇ ಬೇಡ; ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಪಂಜಾಬ್‌ ಕಾಂಗ್ರೆಸ್‌ನ ದಿಗ್ಗಜ ಧುರೀಣ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಬೇರುಮಟ್ಟದಿಂದ ಸಂಘಟಿಸಿ, ಅದಕ್ಕೊಂದು ಸಾಂಸ್ಥಿಕ ರೂಪ ನೀಡಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಕೊಡುಗೆ ಅನನ್ಯ, ಅನುಪಮ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಅವರು ಮುಖ್ಯಮಂತ್ರಿ ಆಯ್ಕೆಯ ಮೊದಲ ಆದ್ಯತೆಯಾ­ಗುತ್ತಿದ್ದರು. ಪರಿಣಾಮ ಎರಡು ಬಾರಿ ಸಿಎಂ ಆಗಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ ಮೇಲೆ ಬಿಗಿ ಹಿಡಿತ ಹೊಂದಿದ್ದ ‘ಕ್ಯಾಪ್ಟನ್‌’ ವಿರುದ್ಧವೇ ಶಾಸಕರು, ಕೆಲವು ನಾಯಕರು ಬಂಡೆದ್ದ ಪರಿಣಾಮ, ಕಳೆದ ಎರಡ್ಮೂರು ವರ್ಷದಲ್ಲಿ ಪಂಜಾಬ್‌ ಕಾಂಗ್ರೆಸ್‌ ಬೀದಿ ಜಗಳವನ್ನು ಇಡೀ ರಾಷ್ಟ್ರವೇ ನೋಡಿದೆ. ಹಾಗೆ ನೋಡಿದರೆ, 2017ರಲ್ಲಿ ಪ್ರಚಂಡ ಬಹುಮತದಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂತಲ್ಲ, ಆಗಲೇ ಈ ಬಂಡಾಯದ ಕಿಚ್ಚು ಶುರವಾಗಿದ್ದು! ಹೇಗೆಂದರೆ, ಬಿಜೆಪಿಯಿಂದ ವಲಸೆ ಬಂದು ಕಾಂಗ್ರೆಸ್‌ ಸೇರಿದ್ದ ಮಾಜಿ ಕ್ರಿಕೆಟಿಗ ‘ಸಿಕ್ಸರ್‌’ ಸಿಧು, ಉಪಮುಖ್ಯಮಂತ್ರಿಯ ಹುದ್ದೆಗೆ ಹಕ್ಕು ಚಲಾಯಿಸಿದ್ದರು. 

ಆದರೆ, ಅಂದಿನ ಸನ್ನಿವೇಶದಲ್ಲಿ ಅಮರೀಂದರ್‌ ಸಿಂಗ್‌ ಏರಿದ್ದ ಎತ್ತರಕ್ಕೆ ದಿಲ್ಲಿ ವರಿಷ್ಠ ಮಂಡಳಿ ಎದುರಾಡುವ ಮಾತೇ ಇರಲಿಲ್ಲ, ಪರಿಣಾಮ ಸಿಧು ಡಿಸಿಎಂ ಸ್ಥಾನದಿಂದ ವಂಚಿತರಾಗಿ, ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾ­ಯಿತು. ಆದರೆ, ಅವರೊಳಗಿನ ಮಹತ್ವಾಕಾಂಕ್ಷಿ ಸಿಧು ತೃಪ್ತನಾಗಲಿಲ್ಲ. ಸ್ವಲ್ಪ ದಿನಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕ್ಯಾಪ್ಟನ್‌ ವಿರುದ್ಧ ಬಂಡಾಯ ಸಾರಿದರು. ಇಷ್ಟೇ ಆದರೆ ಪರ್ವಾಗಿರಲಿಲ್ಲ. ಸಿಎಂ ಆಗಿದ್ದ ಅಮರೀಂದರ್‌ ಅವರು ನಿಧಾನವಾಗಿ ಪಕ್ಷ ದ ಮೇಲಿನ ಹಿಡಿತ ಕಳೆದುಕೊಳ್ಳುವುದಕ್ಕೂ, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುವುದಕ್ಕೂ, ಸಿಧು ಅತೃಪ್ತ ಶಾಸಕರ ನಾಯಕನಾಗಿ ಹೊರಹೊಮ್ಮುವುದಕ್ಕೂ ಸರಿಹೋಗಿದೆ. ಹಲವು ಬಾರಿ ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಪಂಜಾಬ್‌ ಬಿಕ್ಕಟ್ಟನ್ನು ಶಮನ ಮಾಡಿದರು, ಅದು ತಾತ್ಕಾಲಿಕವಾಗಿತ್ತಷ್ಟೇ. ನವಜೋತ್‌ ಸಿಂಗ್‌ ಸಿಧು ಅವರನ್ನು ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ಮಾಡಿದ ಮೇಲೆ ಒಳಜಗಳ ಮತ್ತಷ್ಟು ಬಿಗಡಾಯಿಸಿತು. 

ಅಮರೀಂದರ್ ರಾಜೀನಾಮೆಯು ಪಂಜಾಬ್‌ ಕಾಂಗ್ರೆಸ್‌ನ ಒಳಜಗಳದ ಫಲಿತಾಂಶವಾದರೂ ಅದಕ್ಕೆ ಸಾಕಷ್ಟು ಆಯಾಮಗಳಿವೆ. 2017ರ ಚುನಾವಣೆ ವೇಳೆಗೆ ಪ್ರಶ್ನಾತೀತ ನಾಯಕರಾಗಿದ್ದ ಅಮರೀಂದರ್‌ ಸಿಂಗ್‌ 2022ರ ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯತೆಯಲ್ಲಿ ಕುಸಿದಿದ್ದಾರೆ. ‘ಜನರ ಮಹಾರಾಜ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು ಕೊನೆ ಕೊನೆಗೆ ಜನರಿಗೆ ಸಿಗುವುದೇ ಕಷ್ಟವಾಗಿತ್ತು. ಅಮರೀಂದರ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವು ಸಿಗಲಾರದು ಎಂಬ ಸಮೀಕ್ಷೆಯೂ ಅವರು ನಿರ್ಗಮನಕ್ಕೆ ಕಾರಣವಾಯಿತು. ಅವರ ನೆರಳಾಗಿದ್ದ ಬಹಳಷ್ಟು ಶಾಸಕರು ಪಾಳಯ ಬದಲಿಸಿದ್ದಾರೆ ಎನ್ನುತ್ತಾರೆ  ಪಂಜಾಬ್ ರಾಜಕಾರಣ ಬಲ್ಲ ವಿಶ್ಲೇಷಕರು. 

‘ಸೇನೆ ಇಲ್ಲದ ವಯೋವೃದ್ಧ ಸೇನಾನಿ’ಯಾಗಿರುವ ಅಮರೀಂದರ್‌ ಸಿಂಗ್‌ ವ್ಯಕ್ತಿತ್ವ ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಯೋಧ, ಸೇನಾ ಇತಿಹಾಸಿಕಾರ, ಶೆಫ್‌, ತೋಟಗಾರ, ಬರಹಗಾರ.. ಹೀಗೆ ನಾನು ಮುಖಗಳಿವೆ. ಅವರು ಅಪರೂಪದ ರಾಜಕೀಯ ನಾಯಕರು. ರಾಯಲ್‌ ಫ್ಯಾಮಿಲಿಯ ಅಮರೀಂದರ್‌ ರಾಜಕಾರಣಕ್ಕೆ ಬಂದಿದ್ದು, ತಮ್ಮ ಶಾಲಾ ದಿನಗಳ ಸ್ನೇಹಿತ ರಾಜೀವ್‌ ಗಾಂಧಿಯ ಒತ್ತಾಸೆಯಿಂದಾಗಿ. 1942 ಮಾರ್ಚ್‌ 11ರಂದು ಪಟಿಯಾಲಾದ ರಾಜಮನೆತನದಲ್ಲಿ ಜನಿಸಿದರು. ತಂದೆ ಮಹಾರಾಜ ಸರ್‌ ಯಾದವೀಂದ್ರ ಸಿಂಗ್‌ ಮತ್ತು ತಾಯಿ ಮಹಾರಾಣಿ ಮೊಹೀಂದರ್‌ ಕೌರ್‌. ಶಿಮ್ಲಾದ ಲೊರೆಟೋ ಕಾನ್ವೆಂಟ್‌, ಸನಾವರ್‌ದ ಲಾವರೆನ್ಸ್‌ ಸ್ಕೂಲ್‌ನಲ್ಲಿ ಆರಂಭದ ಶಿಕ್ಷ ಣ ಪಡೆದು, ಡೆಹ್ರಾಡೂನ್‌ನ ದಿ ಡೂನ್‌ ಸ್ಕೂಲ್‌ಗೆ ಸೇರಿದರು. ಅಮರೀಂದರ್‌ ಅವರ ಪತ್ನಿ ಪ್ರಣೀತ್‌ ಕೌರ್‌. ರಣೀಂದರ್‌ ಸಿಂಗ್‌ ಮತ್ತು ಜೈ ಇಂದೇರ್‌ ಕೌರ್‌ ಮಕ್ಕಳು. ಪತ್ನಿ ಪ್ರಣೀತ್‌ ಕೌರ್‌ ಅವರು ಸಂಸದೆಯಾಗಿದ್ದರು ಮತ್ತು 2009ರಿಂದ ಅಕ್ಟೋಬರ್‌ 2012ರವರೆಗೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಮರೀಂದರ್‌ ಅವರ ಸಹೋದರಿ ಹೇಮಿಂದರ್‌ ಕೌರ್‌ ಮಾಜಿ ವಿದೇಶಾಂಗ ಸಚಿವರಾಗಿದ್ದ ಕೆ. ನಟ್ವರ್‌ ಸಿಂಗ್‌ ಅವರ ಪತ್ನಿ. ಹಾಗೆಯೇ, ಶಿರೋಮಣಿ ಅಕಾಲಿ ದಳ(ಎ)ದ ಮುಖ್ಯಸ್ಥ ಸಿಮ್ರಂಜಿತ್‌ ಸಿಂಗ್‌ ಮನ್‌ ಕೂಡ ಇವರ ಸಂಬಂಧಿ. ಅಮರೀಂದರ್‌ ಸಿಂಗ್‌ ಅವರ ಒಟ್ಟು ಫ್ಯಾಮಿಲಿ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ.

ರಾಜಕಾರಣಕ್ಕೆ ಕಾಲಿಡುವ ಮುನ್ನ ಅಮರೀಂದರ್‌ ಅವರು, ಸೇನೆಯಲ್ಲಿ ಕ್ಯಾಪ್ಟನ್‌ ಆಗಿದ್ದರು. 1963ರಿಂದ 1966ವರೆಗೆ ಸೇವೆ ಸಲ್ಲಿಸಿದ್ದಾರೆ. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ಮಿಲಿಟರಿ ಅಕಾಡೆಮಿ ಪದವೀಧರರೂ ಹೌದು. ಅವರ ಸೇನೆಯಲ್ಲಿ ಸಿಖ್‌ ರೆಜಿಮಂಟ್‌ನಲ್ಲಿದ್ದರು. 1965ರ ಇಂಡೋ-ಪಾಕ್‌ ಯುದ್ಧದಲ್ಲಿಸಕ್ರಿಯವಾಗಿ ಪಾಲ್ಗೊಂಡ ಹಿರಿಮೆ ಅವರಿಗಿದೆ. ರಾಜೀವ್‌ ಗಾಂಧಿಯ ಒತ್ತಾಸೆಯ ಮೇರೆಗೆ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿ 1980ರಲ್ಲಿಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು. ಆದರೆ, ಆಪರೇಷನ್‌ ಬ್ಲೂಸ್ಟಾರ್‌ ಕಾರ್ಯಾಚರಣೆ ವಿರೋಧಿಸಿ ತಮ್ಮ ಲೋಕಸಭಾ ಸದಸ್ಯತ್ವ ಹಾಗೂ ಕಾಂಗ್ರೆಸ್‌ ಪಾರ್ಟಿಗೆ ರಾಜೀನಾಮೆ ನೀಡಿ ಹೊರಬಂದರು. ಬಳಿಕ ಶಿರೋಮಣಿ ಅಕಾಲಿ ದಳ ಸೇರ್ಪಡೆಯಾಗಿ ತಲವಂಡಿ ಸಾಬೋ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಸಚಿವರೂ ಆದರು. ಕೃಷಿ, ಅರಣ್ಯ, ಅಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆಗಳನ್ನು ನಿರ್ವಹಣೆ ಮಾಡಿ ಅನುಭವ ಪಡೆದುಕೊಂಡರು. 

ಆದರೆ, ಅಕಾಲಿದಳದಲ್ಲೂ ತುಂಬ ದಿನಗಳ ಕಾಲ ಅಮರೀಂದರ್‌ ಉಳಿಯಲಿಲ್ಲ. 1992ರಲ್ಲಿ ಆ ಪಕ್ಷ ವನ್ನು ತೊರೆದು ತಮ್ಮದೇ ಆದ ಶಿರೋಮಣಿ ಅಕಾಲಿ ದಳ(ಪ್ಯಾಂಥಿಕ್‌) ಸ್ಥಾಪಿಸಿದರು. ಆದರೆ, ವಿಧಾಸಭೆ ಚುನಾವಣೆಯಲ್ಲಿ ಹೀನಾಯವಾಗಿ ಅವರ ಪಕ್ಷ  ಸೋಲು ಕಂಡಿತು. ಸ್ವತಃ ಅಮರೀಂದರ್‌ ಅವರು ಕೇವಲ 856 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಪರಿಣಾಮ ತಮ್ಮ ಪಕ್ಷ ವನ್ನು ಅವರು 1998ರಲ್ಲಿಕಾಂಗ್ರೆಸ್‌ ಜತೆ ವಿಲೀನಗೊಳಿಸಿದರು. ಆಗ ಕಾಂಗ್ರೆಸ್‌ ನಾಯಕತ್ವ ಸೋನಿಯಾ ಗಾಂಧಿ ಹೆಗಲಿಗೇರಿತ್ತು. 1998ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು. ಆದರೆ, ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ  ಕಟ್ಟುವ ಹೊಣೆಗಾರಿಕೆ ಅವರನ್ನು ಮುಂಚೂಣಿಯ ನಾಯಕನನ್ನಾಗಿ ಮಾಡಿತು. 1999ರಿಂದ 2002, 2010ರಿಂದ 2013 ಮತ್ತು 2015ರಿಂದ 2017, ಹೀಗೆ ಮೂರು ಬೇರೆ ಬೇರೆ ಅವಧಿಯಲ್ಲಿ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರದ ಮೊಗಸಾಲೆಗೆ ತರುವಲ್ಲಿ ಯಶಸ್ವಿಯಾಗಿ, 2002ರಿಂದ 2007ರವರೆ ಮೊದಲ ಬಾರಿಗೆ  ಪಂಜಾಬ್‌ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅಮರೀಂದರ್‌ 2013ರಿಂದಲೂ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಆದರೆ, ಪಂಜಾಬ್‌ನಲ್ಲಿ ಮೋದಿ ಅಲೆಯ ನಡುವೆಯೂ ಅರುಣ್‌ ಜೇಟ್ಲಿ ಅವರನ್ನು ಸೋಲಿಸುವಲ್ಲಿ ಅಮರೀಂದರ್‌ ಯಶಸ್ವಿಯಾಗಿದ್ದರು. ಪಟಿಯಾಲ ನಗರ ಮೂರು ಬಾರಿ, ಸಮನಾ ಹಾಗೂ ತಲ್ವಾಂಡಿ ಸಾಬೋ ವಿಧಾನಸಭೆ ಕ್ಷೇತ್ರಗಳನ್ನು ತಲಾ ಒಂದು ಬಾರಿ ಪ್ರತಿನಿಧಿಸಿದ್ದಾರೆ. 2015ರಲ್ಲಿ ಕಾಂಗ್ರೆಸ್‌ ನಾಯಕತ್ವ ಇವರನ್ನು ಮತ್ತೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ನೇಮಿಸಿತು. ಪರಿಣಾಮ 2017ರಲ್ಲಿ ಎಲೆಕ್ಷ ನ್‌ನಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ದಾಖಲಿಸಿ ಮತ್ತೆ ಅಧಿಕಾರಕ್ಕೇರಿತು. ಅಮರೀಂದರ್‌ ಸಿಂಗ್‌ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. 

ಪಂಜಾಬ್‌ನಲ್ಲಿ ತಾವೊಬ್ಬ ನಿರ್ಣಾಯಕ ನಾಯಕ ಎಂಬುದನ್ನು ಕಾಲಕಾಲಕ್ಕೆ ಅವರು ಸಾಬೀತುಪಡಿಸುತ್ತಾ ಬಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಿತಾಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕತ್ವದ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡಲು ಅವರು ಯಾವತ್ತೂ ಹಿಂಜರಿದಿಲ್ಲ. ಈಗ ಕಾಲ ಬದಲಾಗಿದೆ; ಪಂಜಾಬ್‌ನ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. 79 ವರ್ಷದ ಅಮರೀಂದರ್‌ ಅವರಿಗೀಗ ಮೊದಲಿದ್ದ ಚಾರ್ಮ್‌ ಇಲ್ಲ ಎಂಬುದನ್ನು ಅರಿತ ಹಲವು ಶಾಸಕರು, ನಾಯಕರು ಅವರ ವಿರುದ್ಧವೇ ನಿಂತು ಕಾಳಗ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅವರು ನೀಡಿರುವ ರಾಜೀನಾಮೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಸದ್ಯಕ್ಕೆ ಹೇಳುವುದು ಕಷ್ಟ. ಆರೇಳು ತಿಂಗಳು ಕಳೆದರೂ ಸಾಕು, ಎಲ್ಲವೂ ನಿಚ್ಚಳವಾಗಲಿದೆ.



Virtual RAM: ವರ್ಚುವಲ್‌ RAM ಇದ್ದರೆ ಆರಾಮ್‌!

- ಮಲ್ಲಿಕಾರ್ಜುನ ತಿಪ್ಪಾರ
ಇಂದಿದ್ದ ಟೆಕ್ನಾಲಜಿ ಮಾರನೇ ದಿನಕ್ಕೆ ಹಳೆಯದ್ದಾಗಿ­ರುತ್ತದೆ. ಈ ಕಾರಣಕ್ಕಾಗಿಯೇ ತಂತ್ರಜ್ಞಾನವನ್ನು ನಿತ್ಯ ನೂತನ ಎಂದು ಕರೆಯುವುದು. ಇತ್ತೀಚಿನ ದಿನಗಳಲ್ಲಿಹೆಚ್ಚು ಸದ್ದು ಮಾಡುತ್ತಿರುವ ವರ್ಚವಲ್‌ RAM (Virutval RAM) ಬಗ್ಗೆ ಕೇಳಿರಬಹುದು. ಸ್ಯಾಮ್ಸಂಗ್‌ನಂಥ ಪ್ರಮುಖ ಕಂಪನಿಗಳು ಈ ವರ್ಚುವಲ್‌ RAM ಬಳಸುತ್ತಿವೆ. ಸ್ಯಾಮ್ಸಂಗ್‌, ‘RAM ಪ್ಲಸ್‌’ ಮೂಲಕ ಈ ವರ್ಚುವಲ್‌ RAM ಈಗಾಗಲೇ ಕಂಪ್ಯೂಟರ್‌ ಬಳಕೆಯಲ್ಲಿಹೆಚ್ಚು ಪ್ರಸಿದ್ಧಿಯಾಗಿವೆ. ಆದರೆ, ಸ್ಮಾರ್ಟ್‌ಫೋನ್‌ ವಿಷಯಕ್ಕೆ ಬಂದಾಗ ಅದು ಸ್ವಲ್ಪ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಯಾಮ್ಸಂಗ್‌ ಮಾತ್ರವಲ್ಲದೇ 2022ರ ಹೊತ್ತಿಗೆ ಒಪ್ಪೋ, ಶವೋಮಿ, ರಿಯಲ್‌ಮಿ ಮತ್ತು ಒನ್‌ಪ್ಲಸ್‌ನಂಥ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿಈ ವರ್ಚುವಲ್‌ RAM ಬಳಸುವ ಸಾಧ್ಯತೆಗಳಿವೆ. 

ಸ್ಯಾಮ್ಸಂಗ್‌ ಇತ್ತೀಚೆಗಷ್ಟೇ ತನ್ನ ಗ್ಯಾಲಕ್ಸಿ ಎ52ಎಸ್‌ 5ಜಿ ಸ್ಮಾರ್ಟ್‌ ಫೋನ್‌ಗೆ ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿತು. ಈ ಮೂಲಕ ಅದು ವರ್ಚುವಲ್‌ RAM ಕಾರ್ಯಕ್ಕೆ ಅನುಮತಿ ನೀಡಿದೆ. ಈಗ  ಈ ಫೋನ್‌ ಬಳಕೆ­ದಾರರು 4 ಜಿಬಿ ವರ್ಚುವಲ್‌ RAM ಪಡೆಯಲಿದ್ದಾರೆ. ಈ ಸಾಧನವು 4 ಜಿಬಿ ಮತ್ತು 8 ಜಿಬಿ RAMಗಳಲ್ಲಿ ಲಭ್ಯವಿದ್ದು, ಇದೀಗ ಹೆಚ್ಚುವರಿಯಾಗಿ 4 ಜಿಬಿ ವರ್ಚುವಲ್‌ RAM ಕೂಡ ದೊರೆಯಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ವರ್ಚುವಲ್‌ RAM ಬಳಕೆ ತೀರಾ ಸಾಮಾನ್ಯವಾಗ­ಬಹುದು. ಸದ್ಯಕ್ಕೆ ಕಂಪ್ಯೂಟರ್‌ನಲ್ಲೇ ಮಾತ್ರವೇ ಬಳಕೆ­ಯಾಗು­ತ್ತಿದೆ. ತಂತ್ರಜ್ಞಾನದ ಹೊಸ ಸಾಧ್ಯತೆ ಇದಾಗಿದ್ದು, ವರ್ಚುವಲ್‌ ಮೆಮೊರಿ ಬಳಕೆಯಿಂದಾಗಿ ಒಟ್ಟಾರೆ ಸಾಧನದ ವೆಚ್ಚ ತಗ್ಗಲೂ ಕಾರಣವಾದರೂ ಆಗಬಹುದು.

ವರ್ಚುವಲ್‌ RAM ಯಾಕೆ?
ಫಿಜಿಕಲ್‌ RAM ಹೆಚ್ಚು ತುಟ್ಟಿಯಾದ ಪರಿಣಾಮ ವರ್ಚು­ವಲ್‌ ಮೆಮೊರಿ ಬಳಕೆಯ ಸಾಧ್ಯತೆಗಳು ಹುಟ್ಟಿಕೊಂಡವು ಮತ್ತು ಅದನ್ನು ಸಾಧ್ಯ ಕೂಡ ಮಾಡಲಾಯಿತು. ಸ್ಟೋರೇಜ್‌ ಮಧ್ಯಮಗಳಾದ ಹಾರ್ಡ್‌ ಡಿಸ್ಕ್‌ ಮತ್ತು ಇತರ ಸಾಧನಗಳಿಗೆ ಹೋಲಿಸಿದರೆ ಪ್ರತಿ ಗಿಗಾಬೈಟ್‌ಗೆ ಫಿಸಿಕಲ್‌ RAM ಈಗಲೂ ತುಟ್ಟಿಯೇ ಆಗಿದೆ. ಈ ಕಾರಣಕ್ಕಾಗಿಯೇ ಅಗ್ಗದ RAM ಬಳಕೆಯ ಫಲವಾಗಿ ವರ್ಚುವಲ್‌ ಮೆಮೋರಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪರಿಣಾಮ ಯಾವುದೇ ಕಂಪ್ಯೂಟರ್‌ಗೆ ಈಗ ಫಿಸಿಕಲ್‌ RAM ಜತೆಗೆ ಹೆಚ್ಚುವರಿಯಾಗಿ ವರ್ಚುವಲ್‌ RAM ಬಳಕೆಯಾಗುತ್ತಿರು­ವುದರಿಂದ ಹೆಚ್ಚು ಮೆಮೊರಿ ದೊರೆಯುತ್ತಿದೆ. ಇನ್ನೊಂದು ಕಾರಣ ಏನೆಂದರೆ-ಎಲ್ಲಾಕಂಪ್ಯೂಟರ್‌ಗಳಲ್ಲಿಫಿಜಿಕಲ್‌ RAM ಇನ್‌ಸ್ಟಾಲ್‌ ಮಾಡಲು ಮಿತಿಯನ್ನು ಹೊಂದಿವೆ. ಈ ಮಿತಿಯನ್ನು ಮೀರಿ ಮೆಮೊರಿ ಬಳಕೆಗೆ ವರ್ಚುವಲ್‌ RAM ಅನುವು ಮಾಡಿಕೊಡುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿವರ್ಚುವಲ್‌ ಮೆಮೊರಿ ಬಳಕೆಯೂ ಹೆಚ್ಚಾಗುತ್ತಿದೆ.

ಪ್ರಯೋಜನಗಳೇನು?
ವರ್ಚುವಲ್‌ RAM ಬಳಕೆಯಿಂದ ಏಕಕಾಲಕ್ಕೆ ಹೆಚ್ಚೆಚ್ಚು ಅಪ್ಲಿಕೇಷನ್‌ಗಳನ್ನು ರನ್‌ ಮಾಡಲು ಸಾಧ್ಯವಾಗುತ್ತದೆ. ಫಿಜಿಕಲ್‌ ರಾರ‍ಯಮ್‌ನಲ್ಲಿರನ್‌ ಮಾಡಲು ಸಾಧ್ಯವಾಗದೇ ಇರುವ ಬೃಹತ್‌ ಅಪ್ಲಿಕೇಷನ್‌ಗಳನ್ನು ರನ್‌ ಮಾಡಲು ವರ್ಚುವಲ್‌ ರಾರ‍ಯಮ್‌ ನೆರವು ನೀಡುತ್ತದೆ. ಫಿಸಿಕಲ್‌ RAM ವೆಚ್ಚಕ್ಕೆ ಹೋಲಿಸಿದರೆ ಇದು ಅಗ್ಗ. ಕಡಿಮೆ ವೆಚ್ಚದಲ್ಲೇ ಹೆಚ್ಚು ಮೆಮೊರಿಯನ್ನು ಬಳಸಿಕೊಳ್ಳಬಹುದು. ಹಾರ್ಡ್‌ವೇರ್‌ ಮತ್ತು ಆಪರೇಟಿಂಗ್‌ ಸಿಸ್ಟಮ್‌ ಬೆಂಬಲಿಸುವ ಗರಿಷ್ಠ ಪ್ರಮಾಣದ ರಾರ‍ಯಮ್‌ ಹೊಂದಿರುವ ಸಿಸ್ಟಂನಲ್ಲಿಮೆಮೊರಿಯನ್ನು ಹೆಚ್ಚಿಸುವ ಅವಕಾಶವನ್ನು ಸೃಷ್ಟಿಸುತ್ತದೆ. ವರ್ಚುವಲ್‌ ರಾರ‍ಯಮ್‌ ಬಳಕೆಯ ಪ್ರಯೋಜನಗಳ ಜತೆಗೆ ಒಂದಿಷ್ಟು ಅನಾನುಕೂಲಗಳೂ ಇವೆ; ಫಿಸಿಕಲ್‌ RAMಗೆ ಹೋಲಿಸಿದರೆ ವರ್ಚುವಲ್‌ ಮೆಮೊರಿಯ ದಕ್ಷ ತೆಯ ಪ್ರಮಾಣ ಕಡಿಮೆ. ಸಿಸ್ಟಮ್‌ನ ಒಟ್ಟಾರೆ ಪ್ರದರ್ಶನದ ಮೇಲೆ ಋುಣಾತ್ಮಕ ಪರಿಣಾಮ ಬೀರಬಲ್ಲದು.

ಏನಿದು RAM?
RAM ಎಂದರೆ random-access memory. ಇದು ಕಂಪ್ಯೂಟರ್‌ನ ಪ್ರಮುಖ  ಭಾಗ. ಕಿರು ಅವಧಿಯ ಮೆಮೊರಿಯಾಗಿರುವ ರಾರ‍ಯಮ್‌ನಲ್ಲಿಪ್ರೊಸೆಸರ್‌ನ ಅಗತ್ಯಕ್ಕೆ ತಕ್ಕಂತೆ ಡೇಟಾ ಸಂಗ್ರಹವಾಗುತ್ತದೆ. RAM ಮೆಮೊರಿ ಹೆಚ್ಚಾದಷ್ಟು ಕಂಪ್ಯೂಟರ್‌ನ ಕಾರ್ಯಕ್ಷ ಮತೆಯೂ ಹೆಚ್ಚಾಗುತ್ತದೆ. ಏಕಕಾಲಕ್ಕೆ ಹತ್ತಾರು ಅಪ್ಲಿಕೇಷನ್‌ಗಳ ಮೂಲಕ ಕೆಲಸ ಮಾಡುವವರಿಗೆ RAM ಹೆಚ್ಚಿರುವ ಕಂಪ್ಯೂಟರ್‌ಗಳೇ ಬೇಕಾಗುತ್ತವೆ. ಹಾಗಾಗಿ, ಇದು ಕಂಪ್ಯೂಟರ್‌ನ ಪ್ರಮುಖ ಭಾಗ ಎಂದು ಪರಿಗಣಿಸಲಾಗುತ್ತದೆ.