ಬುಧವಾರ, ಅಕ್ಟೋಬರ್ 27, 2010

ಸಚಿನ್ಮಯ- ಕೇವಲ ದಾಖಲೆಗಾಗಿ ಅಲ್ಲ


ಸಚಿನ್ ತೆಂಡೂಲ್ಕರ್.

ಈ ಹೆಸರೇ ಪ್ರೇರಕ. ಸ್ಪೂರ್ತಿ. ವಿಶ್ವ ಕ್ರಿಕೆಟ್ ನ ಸಾಮ್ರಾಟನ ಬಗ್ಗೆ ಎಷ್ಟೇ ಬರೆದರೂ ಸಾಲದು. ಸಚಿನ್ ಈಗ ಎಲ್ಲ ಪದಗಳನ್ನು ಮೀರಿ ನಿಂತಿದ್ದಾರೆ. ಅವರ ಸಾಧನೆ ಬಣ್ಣಿಸಲು ಪದಗಳು ಸಾಲುವುದಿಲ್ಲ. ಸಚಿನ್ ಬಣ್ಣನೆಗೆ ಯಾವುದೇ ಪದ ಬಳಸಿದರೂ ಆ ಪದ ಅವರ ಸಾಧನೆಯನ್ನು ಪೂರ್ತಿಯಾಗಿ ಪರಿಚಯಿಸುವುದಿಲ್ಲ. ಒಬ್ಬ ವ್ಯಕ್ತಿ ಕ್ರೀಡೆಯಿಂದಲೇ ದೇವರ ಸ್ಥಾನಕ್ಕೇರುತ್ತಾರೆಂದರೆ ಅದು ಸಾಮಾನ್ಯದ ಮಾತೇನು..ಕ್ರೀಡೆಯತ್ತ ಸಚಿನ್ ಅವರಿಗಿರುವ ಬದ್ಧತೆಯನ್ನು ಯಾರು ಪ್ರಶ್ನಿಸಲಾಗದು. ಇದಕ್ಕೆ ಮತ್ತೊಂದು ತಾಜಾ ಉದಾಹರಣೆಯೆಂದರೆ, ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿನ ದ್ವಿಶತಕ. 37ನೇ ವಯಸ್ಸಿನಲ್ಲಿ ಸಚಿನ್ ಇನ್ನು 18ರ ಹರೆಯದ ಹುಡುಗನ ರೀತಿ ಆಡುತ್ತಾರೆಂದರೆ, ಅದು ಅವರ ಸಾಮರ್ಥ್ಯದ ಸಾಕ್ಷಿ. ಸಚಿನ್ ಗೆ ವಯಸ್ಸಾಯಿತು. ಹೀಗೆ ಜರಿದವರಿಗೆ ಅವರು ಬ್ಯಾಟಿಂಗ್ ನಿಂದಲೇ ಉತ್ತರ ನೀಡುತ್ತಾರೆ. ತುಟಿಪಿಟಿಕ್ ಎನ್ನುವುದಿಲ್ಲ. ಈ ಗುಣವೇ ಅವರನ್ನು ವಿಶ್ವ ಕ್ರಿಕೆಟ್ ನ ಅತ್ಯುಚ್ಛ ಸ್ಥಾನಕ್ಕೇರಿಸಿದೆ. ಆನೆ ನಡೆದಿದ್ದೇ ದಾರಿ ಎನ್ನುವಂತೆ ಸಚಿನ್ ಎಂಬ ಅಶ್ವಮೇಧ ಓಟಕ್ಕೆ ಯಾರೂ ಕಡಿವಾಣ ಹಾಕಲು ಸಾಧ್ಯವಿಲ್ಲ. ಅವರ ದಾಖಲೆಗಳನ್ನು ಭವಿಷ್ಯದಲ್ಲಿ ಯಾರಾದರೂ ಮುರಿಯಬಹುದು. ಆದರೆ, ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು ಬಿಡಿ. ರನ್ ಗಳ ಶಿಖರ ಏರಿ ಕುಳಿತಿರುವ ಸೂರ್ಯ ಶಿಕಾರಿ ಸಚಿನ್. ಇದಕ್ಕೆ ಅವರು ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ನಲ್ಲಿ ಆಡಿದ ಪರಿಯೇ ಸಾಕ್ಷಿ. ಸಚಿನ್ ಅವರ ಒಂದೊಂದು ಹೊಡೆತಕ್ಕೂ ಚಿನ್ನಸ್ವಾಮಿ ಅಂಗಣದಲ್ಲಿ ಪ್ರೇಕ್ಷರ ಓಹೋ ಎನ್ನುವ ಲಹರಿ. ಅದರೊಳಗೆ ಸಚಿನ್ ಗುಣಗಾನ.ಸಚಿನ್ ಬ್ಯಾಟ್ ಹಿಡಿದು ಕ್ರಿಸ್ ಗೆ ಇಳಿದರೆ ಸಾಕು. ದಾಖಲೆಗಳ ಮೇಲೆ ದಾಖಲೆಗಳು ದಾಖಲಾಗುತ್ತಾ ಹೋಗುತ್ತವೆ. ಟೆಸ್ಟ್ ಕ್ರಿಕೆಟ್ ನಲ್ಲಿ 49 ಶತಕ ಸಿಡಿಸಿರುವ ಈ ಸಿಡಿಲಮರಿಗೆ ಶತಕಗಳ ಅರ್ಧಶತಕಕ್ಕೆ ಇನ್ನೊಂದೇ ಶತಕ ಸಾಕು. ಅದು ಮುಂಬರುವ ನ್ಯೂಜಿಲೆಂಡ್ ಸರಣಿಯಲ್ಲಿ ಈ ಸಾಕಾರುಗೊಳ್ಳತ್ತದೆ. ಇದರಲ್ಲಿ ಅನುಮಾನ ಬೇಡ. ಏಕದಿನ ಪಂದ್ಯಗಳಲ್ಲಿ 46 ಶತಕ ಸಿಡಿಸಿದ್ದಾರೆ. ಇಲ್ಲಿಯೂ ಶತಕಗಳ ಅರ್ಧಶತಕಕ್ಕೆ ಅಡಿ ಇಡಲು ಬಹಳ ದಿನ ಕಾಯಬೇಕಿಲ್ಲ. ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಶತಕಗಳ ಶತಕ ದಾಖಲಿಸುವ ಕ್ಷಣಕ್ಕೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕಾದುಕುಳಿತಿದೆ. ಆ ಗಳಿಗೆ ಯಾವಾಗ... ಇನ್ನೇನೂ ದೂರವಿಲ್ಲ ಬಿಡಿ. ಎರಡೂ ಮಾದರಿಯ ಕ್ರಿಕೆಟ್ ನಿಂದ ಸಚಿನ್ ಇದೂವರೆಗೆ ಬರೋಬ್ಬರಿ 31838 ರನ್ ಗಳಿಸಿದ್ದಾರೆ. ಅಬ್ಬಾ... ಸಚಿನ್.ಇತ್ತೀಚೆಗಷ್ಟೇ, ಐಸಿಸಿ ವರ್ಷದ ವ್ಯಕ್ತಿ ಹಾಗೂ ಜನರ ಆಯ್ಕೆ ಪ್ರಶಸ್ತಿಯನ್ನು ಸಚಿನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದುವರೆಗೂ ಐಸಿಸಿ ಪ್ರಶಸ್ತಿ ಸಿಕ್ಕಿಲ್ಲವಲ್ಲ ಎಂಬ ಅವರ ಅಭಿಮಾನಿಗಳ ಕೊರಗು ಕೂಡಾ ಕೊನೆಯಾಗಿದೆ. ಈ ಸಂದರ್ಭದಲ್ಲಿ ಅವರು, ಎಲ್ಲಾ ಪ್ರಶಸ್ತಿಗಳಿಗಿಂತ ಜನರ ಆಯ್ಕೆಯ ಪ್ರಶಸ್ತಿ ತುಂಬಾ ಖುಷಿ ಕೊಡುತ್ತದೆ ಎಂದಿರುವುದು ಅವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.ಒಬ್ಬ ವ್ಯಕ್ತಿ ಸುಖಾಸುಮ್ಮನೇ ಉನ್ನತ ಸ್ಥಾನಕ್ಕೇರುವುದಿಲ್ಲ. ಅದರಲ್ಲೂ ಮಹಾತ್ಮನ ಸ್ಥಾನಕ್ಕೇರುವುದೆಂದರೆ ಮನುಷ್ಯ ಸಹಜ ಎಲ್ಲ ಗುಣಧರ್ಮಗಳನ್ನು ಬಿಟ್ಟುಕೊಡಬೇಕು. ಭಾರತದಲ್ಲಿ ಈ ಸ್ಥಾನಕ್ಕೇರಿದವರೆಂದರೆ ಇಬ್ಬರೇ. ಒಬ್ಬರು ಮಹಾತ್ಮ ಗಾಂಧಿಜಿ. ಇನ್ನೊಬ್ಬರು ಸಚಿನ್ ತೆಂಡೂಲ್ಕರ್. ಅದಕ್ಕೆ ಅವರನ್ನು ಕ್ರಿಕೆಟ್ ದೇವರು ಎಂದು ಅಭಿಮಾನಿಗಳು ಕರೆಯುವುದು. ಯಾವುದೇ ಕ್ರಿಕೆಟ್ ನಲ್ಲಿ 30, 32 ವಯಸ್ಸು ಎಂದರೆ ಅದು ನಿವೃತ್ತಿ ವಯಸ್ಸು. ಆದರೆ, ಸಚಿನ್ ಮಾತ್ರ ಹೊರತಾಗಿದ್ದಾರೆ. 37ನೇ ವಯಸ್ಸಿನಲ್ಲೂ ಅವರು ಕ್ರಿಕೆಟ್ ಆಡುವ ಪರಿಯನ್ನು ಗಮನಿಸಿದರೆ ಸಚಿನ್ ಗೆ ಸಚಿನ್ ಸಾಟಿ. ಅವರು ತಮಗೆ ಬೇಕಾಗುವಷ್ಟು ಕ್ರಿಕೆಟ್ ಆಡುವವರು ಎಂಬುದರಲ್ಲಿ ಅನುಮಾನವಿಲ್ಲ. ತಮ್ಮ ಸಮಕಾಲೀನ ಎಲ್ಲ ಬೌಲರ್ ಗಳಿಗೂ ನೀರು ಕುಡಿಸಿರುವ ಸಚಿನ್, ಬ್ಯಾಟಿಂಗ್ ನ ಅದ್ವಿತೀಯ. ಮಹಾನ್ ಕ್ರಿಕೆಟಿಗ ಎಂದು ಹೇಳುವುದು ಕ್ಲಿಷೆಯಷ್ಟೇ. ಸಚಿನ್ ಕೇವಲ ಆಟದಲ್ಲಷ್ಟೇ ಮಾದರಿಯಲ್ಲ. ಒಬ್ಬ ಸೆಲಿಬ್ರಿಟಿ ಹೇಗೆ ಇರಬೇಕು ಎಂಬುದಕ್ಕೂ ಸಚಿನ್ ಮಾದರಿ. ಸಚಿನ್ ಕೇವಲ ದಾಖಲೆಗೋಸ್ಕರ ಆಡುತ್ತಾರೆ. ಅವರಿಗೆ ದೇಶ ಮುಖ್ಯವಲ್ಲ ಎಂದು ವಿರೋಧಿಗಳು ಟೀಕಿಸಬಹುದು. ಆದರೆ, ಇದು ನೂರಕ್ಕೆ ನೂರರಷ್ಟು ಸುಳ್ಳು. ವ್ಯಕ್ತಿಯೊಬ್ಬ ಕೇವಲ ದಾಖಲೆಗಳಿಗೋಸ್ಕರ ಆಡುವುದಾದರೆ, ಕ್ರಿಕೆಟ್ ನಲ್ಲಿ ಇಷ್ಟೊಂದು ವಷ ಆಡಲು ಸಾಧ್ಯವೇ... ಮುಂಬೈ ಮರಾಠಿಗರಿಗೆ ಸೇರಿದ್ದು ಎಂದು ಕಿರಿಕಿರಿ ನಾಯಕ ಬಾಳಾ ಠಾಕ್ರೆಗೆ ತಿರುಗೇಟು ನೀಡಿದ ಸಚಿನ್, ಮುಂಬೈ ಎಲ್ಲರಿಗೂ ಸೇರಿದ್ದು ಎಂದು ಹೇಳುವ ಮೂಲಕ ಭವ್ಯ ಭಾರತದ ಏಕತೆಯನ್ನು ಸಾರಿದ್ದರು. ಅವರ ರಾಷ್ಟ್ರಭಕ್ತಿಗೆ ಇದೊಂದು ಉಕ್ತಿ ಸಾಲದೆ...ಸಚಿನ್ ಬಗ್ಗೆ ಯಾರೇ ಏನೇ ಹೇಳಲಿ. ಅವರೊಬ್ಬ ಅದ್ಭುತ ಕ್ರಿಕೆಟಿಗ ಮತ್ತು ವ್ಯಕ್ತಿ. ಎಲ್ಲ ಕಾಲಕ್ಕೂ ರೋಲ್ ಮಾಡಲ್. ಅವರಿಗೇ ಅವರೇ ಸಾಟಿ.
(ಕನ್ನಡಪ್ರಭದ 19-10-2010ರ ಕ್ರೀಡಾಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಬರಹ)