ನಿಸರ್ಗಕ್ಕೆ ಹಸಿರು ತೋರಣ ಕಟ್ಟಿದ್ದ ವಸಂತ, ನಮ್ಮ ಒಲುಮೆಗೆ ಆತನೇ ಕಾರಣ
- ಪ್ರದ್ಯುಮ್ನ
ಯುನಿವರ್ಸಿಟಿಯ ಹಾಸ್ಟೆಲ್‌ನ ಆ ಕಿಟಿಕಿಯಾಚೆ ನೋಡುತ್ತಿದ್ದವನಿಗೆ ಸಣ್ಣ ಸವಿನೆನಪೊಂದು ಹಾರಿ ಹೋದ ಅನುಭವ. ಶಿಶಿರ ಕಾಲದಲ್ಲಿ ತನ್ನೆಲ್ಲ ಎಲೆಗಳನ್ನು ಕಳಚಿ, ಅಸ್ಥಿ ಪಂಜರದಂತೆ ಕಾಣುತ್ತಿದ್ದ ಆ ಮರವೀಗ ಹಚ್ಚ ಹಸಿರು ಎಲೆಗಳನ್ನು ಹೊದ್ದುಕೊಂಡು ಮದುವಣಗಿತ್ತಿಯಂತೆ ರೆಡಿಯಾಗಿ ನಿಂತಿದೆ. ಅರೇ, ಎರಡು ವಾರದ ಹಿಂದೆಯಷ್ಟೇ ಒಣಗಿದಂತಿದ್ದ ಆ ಮರಕ್ಕೀಗ ಹಸಿರು ತೋರಣ. ಕಾಲ ಹೇಗೆ ನಮ್ಮ ಸುತ್ತಲಿನ ಪರಿಸರವನ್ನು ತನ್ನ ಆಣತಿಯಂತೆ ಬದಲಾಯಿಸುತ್ತಾ ಹೋಗುತ್ತಾನೆ ಅಲ್ಲವೇ? ಆತನಿಗೆ ಗೊತ್ತಿರದ ಸಂಗತಿ ಯಾವುದೂ ಇಲ್ಲ. ನಾನು ಇಲ್ಲಿಗೆ ಬಂದು ನಾಲ್ಕು ವಸಂತ ಕಳೆದು ಐದನೇ ವಸಂತ ಆರಂಭವಾಯಿತು ನೋಡಲೋ ಎಂಬಂತೆ ಆ ಚಿಗುರೆಲೆಗಳು ಗಾಳಿಗೆ ಹೊಯ್ದಡುತ್ತಿದ್ದವು. ಅದರ ಹಿಂದೆಯೇ ಬಿ.ಆರ್.ಲಕ್ಷ್ಮಣ ರಾವ್ ಅವರ ಪದ್ಯವೊಂದರ;
ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ...
ಎಂಬ ಸಾಲುಗಳು ಸ್ಮೃತಿ ಪಟಲದಲ್ಲಿ ಅಚ್ಚು ಹಾಕಿ ಮರೆಯಾದವು. ಎಷ್ಟು ಬೇಗ ಕಾಲ ಉರುಳಿ ಹೋಯಿತು? ಪಿಎಚ್‌ಡಿಗೋಸ್ಕರ ಈ ಯುನಿವರ್ಸಿಟಿಗೆ ನಿನ್ನೆ ಮೊನ್ನೆಯಷ್ಟೇ ಬಂದಿರುವ ಹಾಗಿದೆ ನನಗೆ. ಇನ್ನು ಒಂದೇ ವರ್ಷ ನನ್ನ ಸಂಶೋಧನೆ ಮುಗಿದು ಡಾಕ್ಟರೇಟ್ ಪದವಿ ಪಡೆಯಲು. ಆದರೆ, ಬೇಸಿಗೆ ಬಂದಾಗಲೆಲ್ಲ ನನ್ನೊಳಗೆ ಆಹ್ಲಾದಕರ ಭಾವನೆಗಳ ಉಬ್ಬರವಾಗುತ್ತವೆ. ನಿಸರ್ಗದಲ್ಲಾಗುವ ಹೊಸತನದ ಚಿಗುರು ನನ್ನೊಳಗೂ ಅನೇಕ ಭಾವನೆಗಳಿಗೆ ಮರಿ ಹಾಕಿ ಬಿಡುತ್ತದೆ. ಇಲ್ಲಿಗೆ ಬರುವ ಮುಂಚೆ, ಊರಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಆಲದ ಮರಗಳು, ಬೇಸಿಗೆಯಲ್ಲಿ ಭರ್ಜರಿ ನೆರಳನ್ನು ನೀಡುತ್ತಿದ್ದವು. ಊರಿನಿಂದ ಒಂದು ಮೈಲು ದೂರ ಇದ್ದ ಕಾಲೇಜು ಸುತ್ತ ಮುತ್ತ ಇದ್ದದ್ದು ನಾಲ್ಕೇ ನಾಲ್ಕು ಈ ಮರಗಳು. ಅವು ಕಾಲೇಜಿನಿಂದ ತುಸು ದೂರವೇ ಇದ್ದವು. ಪತ್ರಾಸ್ ಹೊದಿಕೆಯಿದ್ದ ಆ ಕಾಲೇಜಿನ ಕಟ್ಟಡದಲ್ಲಿ ಕುಳಿತು ಲೆಕ್ಚರ್ ಕೇಳುವುದು ಯಮಯಾತನೆ. ನಮಗೆ ಗೊತ್ತಿಲ್ಲದೆಯೇ ಬೆವರು ತನಗೆ ಹೇಗೆ ಬೇಕೋ ಹಾಗೆ ದಾರಿ ಮಾಡಿಕೊಂಡು ಯಾವುದೇ ಅಡೆ ತಡೆ ಇಲ್ಲದೆ ಇಳಿದು ಬಿಡುತ್ತಿತ್ತು. ಇದೇ ಅನುಭವ ಪಾಠ ಹೇಳುವ ಲೆಕ್ಚರ್‌ಗಳಿಗೂ ಆಗುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಮ್ಮ ಇತಿಹಾಸದ ಲೆಕ್ಚರ್‌ರು, ತಮ್ಮ ಪಾಠವನ್ನು ಕಾಲೇಜಿನ ಆಚೆ ಇದ್ದ ಆ ಆಲದ ಮರದ ಬುಡಕ್ಕೆ ಶಿಫ್ಟ್ ಮಾಡುತ್ತಿದ್ದರು. ಆಗ ತಾನೇ ಹಸಿರಿನಿಂದ ಹೊದ್ದು ನಿಂತಿದ್ದ ಆ ಮರದ ಕೆಳಗೆ ಹಾಯ್ ಎನಿಸುವಂಥ ತಂಪು. ಆಗಾಗ ಸುಳಿಯುವ ಗಾಳಿ ನಮ್ಮಲ್ಲಿ ಒಂದು ಹಿತವಾದ ಅನುಭವವನ್ನು ದಾಟಿಸಿಕೊಂಡು ಹೋಗುತ್ತಿತ್ತು. ನಾವೆಲ್ಲ ಒಂದು ಕಡೆ ಕುಳಿತರೆ, ಮತ್ತೊಂದೆಡೆ ಹುಡುಗಿಯರು. ಇತಿಹಾಸದ ಮೇಷ್ಟ್ರು ಷಹಾಜಹಾನ್‌ನ ಪ್ರೇಮ ಪುರಾಣ ಆರಂಭಿಸುತ್ತಿದ್ದಂತೆ ನಮ್ಮ ಮನಸ್ಸು ಪಾಠದ ಮೇಲಿಂದ ವರ್ಗವಾಗಿ ಪಕ್ಕದಲ್ಲಿ ಕುಳಿತಿದ್ದವರ ಕಡೆಗೆ ವಾಲುತ್ತಿತ್ತು. ಗಾಳಿಗೆ ಮುಖವೊಡ್ಡಿ ಪಾಠ ಕೇಳುತ್ತಿದ್ದಂತೆ ಕಾಣುತ್ತಿದ್ದ ಅವರ ಮುಖಗಳು ನಮ್ಮಳಗೆ ನಾನಾ ತರಂಗಗಳನ್ನ ಹುಟ್ಟು ಹಾಕುತ್ತಿದ್ದವು. ಅದರಲ್ಲೂ ಅವಳಿದ್ದಳಲ್ಲ, ಆ ಚೆಲುವೆ, ಅವಳನ್ನು ನೋಡುವುದೇ ಒಂದು ಸುಂದರ ಅನುಭವ; ಅಷ್ಟು ಚೆಲುವೆ ಆಕೆ. ಸುಳಿಯುತ್ತಿದ್ದ ಗಾಳಿಗೆ ಆಕೆಯ ಮುಂಗುರುಳು ಅತ್ತಿಂದ ಇತ್ತ, ಇತ್ತಿಂದ ಅತ್ತ ಹೊಯ್ದಡುತ್ತಿತ್ತು. ಮುಂಗುರುಳನ್ನು ಹತೋಟಿಗೆ ತರಲು, ಬೆರಳುಗಳು ಆಕೆಯ ಅನುಮತಿಯನ್ನು ಕೇಳುತ್ತಿರಲಿಲ್ಲ. ಆದರೆ, ಕೊನೆಗೆ ಸೋಲುತ್ತಿದ್ದದ್ದು ಬೆರಳುಗಳೇ. ಯಾಕೆಂದರೆ, ಆ ಮುಂಗುರುಳಿಗೆ ಗಾಳಿಯ ಬೆಂಬಲ. ಪಾಠ ತನ್ನ ಪಾಡಿಗೆ ತಾನು ನಡೆಯುತ್ತಿರುವಾಗಲೇ ಆಕೆ ಮಿಂಚಿನ ವೇಗದಲ್ಲಿ ನನ್ನತ್ತ ನೋಡಿ ಅಷ್ಟೇ ವೇಗದಲ್ಲಿ ಮುಖ ತಿರುಗಿಸಿದ್ದನ್ನು ಪಕ್ಕದಲ್ಲಿದ್ದ ಗೆಳೆಯ ನೋಡುತ್ತಿದ್ದ. ಅವನಿಗೆ ಗೊತ್ತಿತ್ತು ಆಕೆಯನ್ನು ಬಹಳ ಇಷ್ಟು ಪಡುತ್ತಿದ್ದೆ ಎಂಬುದು. ‘‘ಏ.. ಆಕಿ ನಿನ್ನ ನೋಡಿದ್ಲೋ,’’ ಎಂದು ಮೆಲ್ಲಗೆ ಕಿವಿಯಲ್ಲಿ ಉಸುರುತ್ತಿದ್ದ. ಇದು ದಿನಾ ರಿಪೀಟ್ ಆಗುತ್ತಲೇ ಇತ್ತು. ನನಗೆ ಗೊತ್ತಿಲ್ಲದೆ ಆಕೆ, ಆಕೆಗೆ ಗೊತ್ತಿಲ್ಲದೆ ನಾನು ಪರಸ್ಪರ ನೋಡುವುದು, ಆಗಾಗ ಕಣ್ಣಲ್ಲಿ ಮಾತನಾಡಿಕೊಳ್ಳುವುದು ನಡೆದೇ ಇತ್ತು. ‘ವಸಂತ’ ಕಾಲದ ಹಿಸ್ಟರಿ ಕ್ಲಾಸ್‌ಗಳೆಂದರೆ ನಮ್ಮ ನಡುವಿನ ಪ್ರೇಮ ಪಯಣದ ‘ಇತಿಹಾಸ’ದ ಆರಂಭಕ್ಕೆ ಮುನ್ನುಡಿ ಬರೆದಿದ್ದವು. ಆದರೆ ಎಷ್ಟು ದಿನ ಅಂತ ಹೀಗೆ ನೋಡಿಕೊಂಡಿರುವುದು, ನನ್ನೊಳಗೆ ಪ್ರೇಮ ಚಿಗುರೊಡೆದು ಬೆಳೆದು ಹೆಮ್ಮರವಾಗಿದ್ದನ್ನು ಆಕೆಗೆ ತಿಳಿಸಲೇಬೇಕಿತ್ತು. ಮೋಸ್ಟಲೀ, ಅವಳು ಹಾಗೆ ಅಂದು ಕೊಂಡಿರಬೇಕು ಅನಿಸುತ್ತದೆ. ಇಲ್ಲದಿದ್ದರೆ, ಅಂದು ಯಾಕೆ, ಕ್ಲಾಸ್ ಮುಗಿದ ಬಳಿಕ ಎಲ್ಲರು ಹೋದರೂ ಮರದ ನೆರಳಲ್ಲಿ ಒಬ್ಬಳೇ ನಿಲ್ಲುತ್ತಿದ್ದಳು? ಅದೇನೋ ಹೇಳುತ್ತಾರಲ್ಲ, ‘ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ’ ಎನ್ನುವಂಥ ಸ್ಥಿತಿ ನನ್ನದು. ಆ ದೊಡ್ಡ ಮರದ ಕೆಳಗೆ ನಾವಿಬ್ಬರೇ. ಆಹ್ಲಾದಕರವಾಗಿ ಬೀಸುತ್ತಿದ್ದ ಗಾಳಿಗೆ ಮುಖವೊಡ್ಡಿ, ನೋಟ್‌ಬುಕ್ ಎದೆಗವಚಿಕೊಂಡು ನಿಂತಿದ್ದಾಳೆ. ಆಕೆಯನ್ನು ಮಾತನಾಡಿಸಲೇಬೇಕು ಎಂದು ನಿಂತುಕೊಂಡ ನನಗೆ ಮಾತುಗಳೇ ಹೊರಡುತ್ತಿಲ್ಲ. ಈ ಕಣ್ಣಿನ ಭಾಷೆಗಿರುವಷ್ಟು ಧೈರ್ಯ, ಸಂವಹನ ನುಡಿಗಳಿಗಿರುವುದಿಲ್ಲ ಎಂಬ ಆಲೋಚನೆಗಳು ತಲೆಯಲ್ಲಿ ಗಿರಿಕಿ ಹೊಡೆಯುತ್ತಿರುವಾಗಲೇ ಧೈರ್ಯ ಮಾಡಿ, ‘‘ಹಲೋ,’’ ಎಂದೆ, ಆಕೆ ‘‘ಹಲೋ,’’ ಎಂದಾಗಲೇ ಗೊತ್ತಾಗಿದ್ದು, ನಾನಷ್ಟೇ ಅಲ್ಲ ಆಕೆಗೂ ಮಾತನಾಡಲು ಧೈರ್ಯ ಸಾಲುತ್ತಿಲ್ಲ ಎಂಬುದು. ಐದು, ಹತ್ತು ನಿಮಿಷ ಆದ್ಮೇಲೆ ನಮ್ಮಿಬ್ಬರ ಮಧ್ಯೆ ಅಳುಕು ನಿಧಾನವಾಗಿ ಕರಗಿ ಅದು- ಇದು ಮಾತನಾಡುತ್ತಲೇ, ಮನದಾಳದಲ್ಲಿದ್ದ ಭಾವನೆಗಳಿಗೆ ಮಾತಿನ ರೂಪ ಕೊಟ್ಟು ಒಂದೇ ಉಸಿರಿನಲ್ಲಿ ‘‘ನಂಗೆ ನೀನು ಭಾಳಾ ಇಷ್ಟ,’’ ಎಂದೆ. ಅಷ್ಟೇ ವೇಗದಲ್ಲಿ ಆಕೆ, ‘‘ನನಗೂ...,’’ ಎಂದವಳೆ ಅಲ್ಲಿಂದ ಮಿಂಚಿನ ಓಟದಲ್ಲಿ ಮಾಯವಾದವಳು. ಓಹೋ ಎಂದು ಜೋರಾಗಿ ಕಿರುಚಿ ಮೇಲೆ ನೋಡಿದವನಿಗೆ ಎಲೆಗಳ ಸಂದುಗೊಂದುಗಳಿಂದ ಸೂರ್ಯ ನನ್ನತ್ತಲೇ ಇಣುಕುತ್ತಿದ್ದ. ‘‘ಭಪ್ಪರೇ ಮಗನೆ,’’ ಎಂದಂತಾಯಿತು. ಗಾಳಿಗೆ ಮೆಲ್ಲನೆ ಸದ್ದು ಮಾಡುತ್ತಿದ್ದ ಎಲೆಗಳು, ಅಂದು ಯಾಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದವೋ?
ನಂತರದ ದಿನಗಳಲ್ಲಿ, ಹಿಸ್ಟರಿ ಕ್ಲಾಸ್‌ನಲ್ಲಿ ಅವಳನ್ನು ನೋಡುವುದೇ ಪಾಠವಾಗಿ ಬಿಟ್ಟಿತ್ತು. ಪಕ್ಕದಲ್ಲಿದ್ದ ಗೆಳೆಯ ಆಗಾಗ ತಿವಿಯುತ್ತಾ, ‘‘ಏ ಮಗನ ನೋಡಿದ್ದು ಸಾಕು, ಪಾಠಾನೂ ಸ್ವಲ್ಪ ಕೇಳು..,’’ ಅಂತಿದ್ದ. ನನ್ನ ದುರದೃಷ್ಟಕ್ಕೆ, ಹಿಸ್ಟರಿ ಲೆಕ್ಚರ್ ನನ್ನತ್ತ ಚಾಕ್‌ಪೀಸ್ ಎಸೆದವರೇ, ‘‘ಲೋ ತಮ್ಮ, ಎದ್ದು ನಿಲ್ಲು. ಅಶೋಕ ಏನೇನ್ ಮಾಡಿದ ಹೇಳು,’’ ಅಂದ್ರು. ‘‘ಲಕ್ಷೋಪ ಲಕ್ಷ ಸೈನಿಕರೊಂದಿಗೆ ಕಳಿಂಗ ಯುದ್ಧ ಮಾಡಿ ಗೆದ್ದ, ಆ ಮೇಲೆ ರಸ್ತೆಗಳಲ್ಲಿ ಗಿಡಗಳನ್ನು ನೆಟ್ಟ,’’ ಎಂದು ಪೆದ್ದು ಪೆದ್ದಾಗಿ, ಹೈಸ್ಕೂಲ್ ಹುಡುಗ ಹೇಳಿದ ಹಾಗೆ ಹೇಳಿದ್ದೇ ತಡ ಇಡೀ ಕ್ಲಾಸ್ ಗೊಳ್ಳೆಂದು ನಕ್ಕಿತು. ಆಕೆಯೂ ತುಸು ಜೋರೇ ನಕ್ಕಳು. ನಾಚಿಕೆಯಿಂದ ತಲೆ ತಗ್ಗಿಸಿದೆ.
ಆ ವಯಸ್ಸಿನಲ್ಲಿ, ನಮ್ಮನ್ನು ಇಷ್ಟಪಡುವ ಜೀವವೊಂದಿದೆ ಎಂದರೆ ಸಾಕು. ಎಲ್ಲವೂ ಆನಂದಮಯವಾಗಿಯೇ ಕಾಣುತ್ತದೆ. ಎಷ್ಟೆಲ್ಲ ಕಷ್ಟಗಳು ಹೂವಿನಂತೆ ಭಾಸವಾಗುತ್ತವೆ. ಕಿಸೆಯಲ್ಲಿ ನಾಲ್ಕು ಕಾಸು ಇಲ್ಲದಿದ್ದರೂ ಶ್ರೀಮಂತನ ಜಂಭಕ್ಕೇನೂ ಕೊರತೆ ಇರಲ್ಲ. ಆಗ, ಮುಂದಿರುವ ಗುರಿ ಮೈ ಮರೆಯುವ ಅಪಾಯಗಳೇ ಹೆಚ್ಚು. ನನಗೂ ಅದೇ ಆಗಿದ್ದು. ಪ್ರೇಮದ ಸುಳಿಯಲ್ಲಿ ಸಿಕ್ಕವನಿಗೆ ಫೈನಲ್ ಡಿಗ್ರಿ ರಿಸಲ್ಟ್ ದೊಡ್ಡ ಶಾಕ್ ನೀಡಿತ್ತು. ಯಾವ ಕ್ಲಾಸ್‌ನಲ್ಲಿ ಪ್ರೇಮ ಶುರುವಾಗಿತ್ತೋ ಅದೇ ಕ್ಲಾಸ್ ಅಂದರೆ, ಹಿಸ್ಟರಿ ಸಬ್ಜೆಕ್ಟ್‌ನಲ್ಲಿ ಢುಮ್ಕಿ ಹೊಡೆದಿದ್ದೆ. ಈ ವಿಷಯ ಅವಳಿಗೆ ಗೊತ್ತಾಗಿ, ಅದೇ ಮರದ ನೆರಳಿನಲ್ಲಿ ನಿಂತಿದ್ದಳು. ಆಕೆ ಅಂದು ಹೇಳಿದ ಮಾತುಗಳು, ಇಂದು ನಾನು ಡಾಕ್ಟರೇಟ್ ಮಾಡುವ ಹಂತಕ್ಕೆ ತಂದು ನಿಲ್ಲಿಸಿವೆ. ಆಕೆಯದ್ದು ನಿಷ್ಕಲ್ಮಷ ಪ್ರೇಮ. ತನ್ನಿಂದಾಗಿ ನನ್ನ ಭವಿಷ್ಯ ಹಾಳಾಯಿತು ಎಂದು ಬಹಳ ದುಃಖದಲ್ಲಿದ್ದಳು.
‘‘ನಮ್ಮಿಬ್ಬರದ್ದು ನಿಜವಾದ ಪ್ರೀತಿಯೇ ಆಗಿದ್ದರೆ, ನೀನು ಹಿಸ್ಟರಿ ಸಬ್ಜೆಕ್ಟ್‌ನಲ್ಲಿ ಪಿಎಚ್‌ಡಿ ಮಾಡಬೇಕು. ಅಲ್ಲಿಯವರೆಗೂ ನಮ್ಮಿಬ್ಬರ ಮಧ್ಯೆ ಯಾವುದೇ ಮಾತುಕತೆ ಇಲ್ಲ. ನೀನು ಬರೋವರೆಗೆ ನಾನು ಕಾಯುತ್ತಿರುತ್ತೇನೆ’’ ಎಂದವಳೇ ತಿರುಗಿ ನೋಡದೆ ಹೊರಟು ಹೋದಳು. ಚೂರು ಗಾಳಿ ಇರಲಿಲ್ಲ. ಎಲೆಗಳ ಸದ್ದಿಲ್ಲ. ಸಂದಿಯಲ್ಲಿ ಸೂಸುತ್ತಿದ್ದ ಸೂರ್ಯನ ಕಿರಣಗಳೂ ಪ್ರಖರವಾಗಿದ್ದವು. ಆಗಲೇ ನಿರ್ಧರಿಸಿದ್ದೆ. ಗೆಲ್ಲಲೇಬೇಕು ನಾನೊಂದು ದಿನ ಎಂದು.
ಅಂದಿನ ನಿರ್ಧಾರವನ್ನು ಪೂರೈಸುವ ಅಂತಿಮ ಘಟ್ಟದಲ್ಲಿದ್ದೇನೆ ಈಗ . ಎಲ್ಲವೂ ನಾನು ಅಂದುಕೊಂಡಂತೆ ಆದರೆ, ಮುಂದಿನ ವಸಂತ ಬರುವುದರೊಳಗೆ ನನ್ನ ಹೆಸರಿನ ಹಿಂದೆ ‘ಡಾ.’ ಸೇರಿರುತ್ತೆ. ಅದೇ ಮರದ ಕೆಳಗೆ ನಿಂತ ಆಕೆಗೆ ನನ್ನ ಮುಖ ತೋರಿಸುವ ಹಂಬಲ.
This article has been published in VijayKarnataka, on 27 March 2017 edition

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ