ಮಂಗಳವಾರ, ಮಾರ್ಚ್ 5, 2019

ಹೊಸ ರಾಜಕಾರಣ ಬಿತ್ತಿದ 5ನೇ ಚುನಾವಣೆ

ಭಾರತೀಯ ರಾಜಕಾರಣದಲ್ಲಿ 1971ರ ಚುನಾವಣೆ ಭಾರೀ ಬದಲಾವಣೆಗೆ ಕಾರಣವಾಯಿತು. ಇಂದಿರಾ ಗಾಂಧಿ ಮೂರನೇ ಅವಧಿಗೆ ಪ್ರಧಾನಿಯಾದರೆ, ಅವಧಿ ಪೂರ್ಣಗೊಂಡರೂ ಚುನಾವಣೆ ನಡೆಸದೇ ತುರ್ತುಪರಿಸ್ಥಿತಿ ಹೇರಿ, ಹೊಸ ರಾಜಕೀಯ ಮನ್ವಂತರಕ್ಕೆ ಹಾದಿ ತೋರಿಸಿದರು; ಹೊಸ ನಾಯಕರು ಉದಯಿಸಿದರು. ರಾಜಕಾರಣದ ಹೊಸ ಸಮೀಕರಣವನ್ನು ಮುಂದಿನ ವರ್ಷಗಳಲ್ಲಿ ಕಾಣಬೇಕಾಯಿತು. ನಾಲ್ಕನೇ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಕಾಂಗ್ರೆಸ್‌, 5ನೇ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿತು. ಈ ಚುನಾವಣೆ ಹೊತ್ತಿಗೆ ಕಾಂಗ್ರೆಸ್‌ ಒಡೆದ ಮನೆಯಾಗಿ, ಮೊರಾರ್ಜಿ ದೇಸಾಯಿನೇತೃತ್ವದ ಕಾಂಗ್ರೆಸ್‌ ಕೂಡ ಸ್ಪರ್ಧೆಯೊಡ್ಡಿತ್ತು. ಇಂದಿರಾ ನೇತೃತ್ವದ ಕಾಂಗ್ರೆಸ್‌ 518 ಕ್ಷೇತ್ರಗಳ ಪೈಕಿ 352 ಕ್ಷೇತ್ರಗಳನ್ನು ಗೆದ್ದುಕೊಂಡಿತು. ದೇಸಾಯಿ ನೇತೃತ್ವದ ಕಾಂಗ್ರೆಸ್‌ ಕೇವಲ 16 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಸಿಪಿಎಂ 25, ಸಿಪಿಐ 23 ಹಾಗೂ ಜನಸಂಘ 22, ಡಿಎಂಕೆ 23 ಸ್ಥಾನಗಳನ್ನು ಗೆದ್ದುಕೊಂಡವು. ಸ್ವತಂತ್ರಪಾರ್ಟಿ ಮಾತ್ರ ಇನ್ನಿಲ್ಲದಂತೆ ನೆಲಕಚ್ಚಿತು. ಈ ಹಿಂದಿನ ಅವಧಿಯಲ್ಲಿ ಇಂದಿರಾ ಗಾಂಧಿ ಮತ್ತು ಮೊರಾರ್ಜಿ ದೇಸಾಯಿ ಮಧ್ಯೆ ಕಾಂಗ್ರೆಸ್‌ ಒಡೆದು ಹೋಗಿತ್ತು. ಇಂದಿರಾ ಅವರನ್ನು ಪಕ್ಷ ದಿಂದ ಹೊರ ಹಾಕಲಾಗಿತ್ತು. ಆದರೆ, ಬಹುತೇಕ ಸಂಸದರು ಮತ್ತು ಕಾರ್ಯಕರ್ತರು ಇಂದಿರಾಗೆ ಸಪೋರ್ಟ್‌ ಮಾಡಿದ್ದರು. ಹಾಗಾಗಿ, ಚುನಾವಣಾ ಆಯೋಗ ಕೂಡ ಇಂದಿರಾ ಕಾಂಗ್ರೆಸ್‌ಗೆ ಮಾನ್ಯತೆ ನೀಡಿತ್ತು. ಇಂದಿರಾ ವಿರೋಧಿಸಿದ್ದ 31 ಸಂಸದರು ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌(ಆರ್ಗನೈಷನ್‌) ಅಡಿ ಗುರುತಿಸಿಕೊಂಡಿದ್ದರು. ಈ ಒಳ ಜಗಳದ ಹೊರತಾಗಿಯೂ, ಇಂದಿರಾ ಪ್ರಭಾವಳಿಯಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಮತ್ತೊಂದೆಡೆ, ಕಾಂಗ್ರೆಸ್‌(ಒ) ಸಂಯುಕ್ತ ಸೋಷಿಯಲಿಸ್ಟ್‌ ಪಾರ್ಟಿ, ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ, ಸ್ವತಂತ್ರ ಪಾರ್ಟಿ, ಬಿಜೆಎಸ್‌ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕಣಕ್ಕಿಳಿದರು ಇಂದಿರಾಳನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಆದರೆ, 1975ರಲ್ಲಿ ಇಂದಿರಾ ಗಾಂಧಿ ವಿಧಿಸಿದ ತುರ್ತು ಪರಿಸ್ಥಿತಿ ಭಾರತೀಯ ರಾಜಕಾರಣದ ವರಸೆಯನ್ನು ಬದಲಿಸಿದವು. ತುರ್ತು ಪರಿಸ್ಥಿತಿ ಹಿಂದೆಗೆದ ನಂತರ ನಡೆದ ಚುನಾವಣೆಯಲ್ಲಿ ಅದ ಪ್ರಭಾವ ಎದ್ದು ಕಾಣಿತು. 
- ತಿಪ್ಪಾರ 

ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ.

ಕಾಮೆಂಟ್‌ಗಳಿಲ್ಲ: