ಬುಧವಾರ, ಆಗಸ್ಟ್ 12, 2015

- ಗಜಲ್-


ಕನಸು ಕಾಣುವ ತುಡಿತ ಹಂಬಲ, ಇಲ್ಲದೆ ಯಾರ ಬೆಂಬಲ
ಕಣ್ ಮಂದಿನ ದಾರಿ ಮಬ್ಬು, ಸಾಗಬೇಕು ಇಲ್ಲದೆ ಯಾರ ಬೆಂಬಲ

ಯಾರು ಇದ್ದರೇನು, ಇಲ್ಲದಿದ್ದರೇನು, ನೊಗ ಹೊತ್ತು ನಡೆಯಬೇಕು
ಬದುಕಿನ ಬಂಡಿಯ ಕೀಲು ಕೀಳದಂತೆ, ಇಲ್ಲದೆ ಯಾರ ಬೆಂಬಲ

ಹರೆಯದ ದಿನಗಳ ನೆನೆ ನೆನೆದು, ಮುಂದಿರುವ ಜೀವನಕ್ಕೆ ದಾಟಿ,
ಕೋಟಿ ಸಂಕಟ ಮೀರಿ ಈಜಲೇಬೇಕು ಇಲ್ಲದೆ ಯಾರ ಬೆಂಬಲ

ತಂಪನೆಯ ಸುಳಿ ಗಾಳಿಗೆ ಮುಖವೊಡ್ಡಿ, ನೆನಪುಗಳ ಒಡ್ಡೋಲಗದಲ್ಲಿ
ಕನಸುಗಳ ತಳಕು ಹಾಕುತಾ, ನೆಗೆಯಬೇಕು ಆಕಾಶಕೆ, ಇಲ್ಲದೆ ಯಾರ ಬೆಂಬಲ
- Mallikarjun Tippar

ಸೋಮವಾರ, ಆಗಸ್ಟ್ 3, 2015

ವ್ಯಕ್ತಿಗತ: ನಿಸ್ವಾರ್ಥರಿಗೆ ಸಂದ ಅಮೋಘ ಪ್ರಶಸ್ತಿ

ಬಟ್ಟೆ ಇಲ್ಲದ ನಿರ್ಗತಿಕರಿಗೆ ವಸ್ತ್ರದಾನ ಮಾಡಿ ನೆಮ್ಮದಿ ಕಾಣುವ ಸಮಾಜ ಸೇವಕ ಅಂಶು ಗುಪ್ತ ಮತ್ತು ಸರಕಾರಿ ವ್ಯವಸ್ಥೆಯೊಳಗೇ ಇದ್ದು ಭ್ರಷ್ಟಾಚಾರವನ್ನು ಹತ್ತಿಕ್ಕುತ್ತಿರುವ ಸಂಜೀವ್ ಚತುರ್ವೇದಿ ಈಗ ನಮ್ಮ ಮುಂದಿರುವ ಆದರ್ಶವಂತರು.

ಸಂಸತ್ತಿನ ಉಭಯ ಸದನಗಳ ಗದ್ದಲ, ಯಾಕೂಬ್ ಮೆಮೊನ್ ಗಲ್ಲು, ಜನರ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನದ ನಡುವೆ ಭಾರತೀಯರೆಲ್ಲರೂ ಖುಷಿಪಡಬಹುದಾದ ಸುದ್ದಿ ಮಾತ್ರ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. ನಿಸ್ವಾರ್ಥ ಸೇವೆ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಭಾರತದ ಇಬ್ಬರಿಗೆ ಏಷ್ಯಾದ ಅತಿದೊಡ್ಡ ಗೌರವ, ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿತು. ಈ ಪೈಕಿ ಒಬ್ಬರು 'ಗೂಂಜ್' ಮುಖ್ಯಸ್ಥ ಅಂಶು ಗುಪ್ತ, ಮತ್ತೊಬ್ಬರು ಐಎಫ್‌ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ.

ನಿರ್ಗತಿಕರ ಮಾನ ಕಾಪಾಡಿದ ಗುಪ್ತ

''ನನಗೆ ಚಳಿ ಅಂತ ಅನಿಸಿದಾಗಲೆಲ್ಲ ಶವಗಳನ್ನು ತಬ್ಬಿಕೊಂಡು ಮಲಗುತ್ತೇನೆ,''

- 6 ವರ್ಷದ ಬಾಲಕಿಯೊಬ್ಬಳು ಹೇಳಿದ ಈ ಮಾತುಗಳು ಅಂಶು ಗುಪ್ತ ಅವರ ಮನವನ್ನು ಕಲಕಿದವು, ಇನ್ನಿಲ್ಲದಂತೆ ಕಾಡಿದವು. ಸಮಾಜ ಸೇವೆಗೆ ತುಡಿಯುತ್ತಿದ್ದ ಅವರ ಮನಸ್ಸಿಗೆ ಒಂದು ಸ್ಪಷ್ಟವಾದ ದಿಸೆಯನ್ನು ತೋರಿಸಿದವು. ಅದರ ಒಟ್ಟು ಫಲವೇ 'ಗೂಂಜ್' ಎಂಬ ಸರಕಾರೇತರ ಸಂಸ್ಥೆ. ಟ್ಟ ್ಛಟ್ಟ ಇ್ಝಟಠಿ ಎನ್ನುವುದು ಸಂಸ್ಥೆಯ ಧ್ಯೇಯ.

ಸರಕಾರಗಳು, ರಾಜಕೀಯ ನಾಯಕರೂ ಸೇರಿದಂತೆ ಎಲ್ಲರೂ 'ರೋಟಿ, ಕಪಡಾ, ಮಕಾನ್'(ಆಹಾರ, ಬಟ್ಟೆ, ಮನೆ) ಬಗ್ಗೆ ಮಾತನಾಡುತ್ತಾರೆ. ಆದರೆ, ಬಟ್ಟೆ ಬಗ್ಗೆ ಅಷ್ಟೊಂದು ಗಂಭೀರವಾಗಿ ಚಿಂತಿಸುವುದಿಲ್ಲ. ಅರೆಬಟ್ಟೆ ಧರಿಸುವ ಕೋಟ್ಯಂತರ ಜನರು ಭಾರತದಲ್ಲಿದ್ದಾರೆ. ಶ್ರೀಮಂತರು ಬಳಸಿ ಬಿಸಾಡುವ ಬಟ್ಟೆಗಳನ್ನು ತಂದು, ಅವುಗಳನ್ನು ಪುನಃ ಸಿದ್ಧಪಡಿಸಿ ಅಂಥ ಬಡವರಿಗೆ ಹಂಚುವುದೇ ಈ ಸಂಸ್ಥೆಯ ಕಾರ್ಯ. 21 ರಾಜ್ಯಗಳಿಗೆ ಗೂಂಜ್ ತನ್ನ ಸೇವೆಯನ್ನು ವಿಸ್ತರಿಸಿದೆ.

ಗೂಂಜ್‌ನ ಮುಖ್ಯಸ್ಥ ಅಂಶು ಗುಪ್ತ ಅವರು ಎಲ್ಲ ವಿದ್ಯಾವಂತರಂತೆ ಯೋಚಿಸಲಿಲ್ಲ. ಅವರೊಳಗೆ ಸಮಾಜಸೇವೆಯೆಂಬ 'ಹುಳು' ಸದಾ ಕೊರೆಯುತ್ತಲೇ ಇತ್ತು. ಆದರೆ, ಅದನ್ನು ಹೊರ ತೆಗೆಯುವುದು ಹೇಗೆ? ಮತ್ತು ಯಾವಾಗ? ಎಂಬ ಸ್ಪಷ್ಟ ದಾರಿ ಇರಲಿಲ್ಲ. ದೆಹಲಿಯವರೇ ಆದ ಗುಪ್ತ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್‌ನಲ್ಲಿ ಪದವಿ ಹಾಗೂ ಎಕಾನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಮುಗಿಸಿ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡಲು ಆರಂಭಿಸಿದರು. ಆದರೆ, ಅವರೊಳಗಿದ್ದ ಸಮಾಜ ಸೇವೆ 'ಹುಳು' ಮಾತ್ರ ಕಾರ್ಪೊರೇಟ್ ಸೆಕ್ಟರ್‌ನಲ್ಲಿ ಬಹಳ ದಿನ ಉಳಿಯಲು ಬಿಡಲಿಲ್ಲ. ಮೇಲೆ ಹೇಳಿದ ಒಂದು ಘಟನೆ ಅವರ ಮನಸು ಬದಲಿಸಿತು. 1999ರಲ್ಲಿ ದೆಹಲಿಯಲ್ಲಿ 'ಗೂಂಜ್' ಸಂಸ್ಥೆ ಹುಟ್ಟು ಹಾಕಿದರು. ಆ ಮೂಲಕ ನಿರ್ಗತಿಕ, ಅನಾಥ, ಬಡವರ ಮಾನ ಮುಚ್ಚುವ ಕೆಲಸವನ್ನು ತಪಸ್ಸು ಎನ್ನುವಂತೆ ಮಾಡುತ್ತ ಬಂದರು. ಇವರ ಈ ಸೇವೆ ಇಷ್ಟಕ್ಕೇ ನಿಲ್ಲಲಿಲ್ಲ. ಭೂಕಂಪ, ಚಂಡಮಾರುತ, ಕುಂಭದ್ರೋಣ ಮಳೆ ಸೇರಿದಂತೆ ನೈಸರ್ಗಿಕ ವಿಕೋಪಗಳಲ್ಲಿ ನಿರ್ಗತಿಕರಾದವರಿಗೆ ಬಟ್ಟೆಗಳನ್ನು ಪೂರೈಸಿದರು. ಆಸರೆಯತ್ತ ಕೈಚಾಚಿದವರಿಗೆ ಕಾಮಧೇನುವಾದರು.

ಗೂಂಜ್ ಕಟ್ಟಿಕೊಂಡು 16 ವರ್ಷಗಳಿಂದ ಸಮಾಜಸೇವೆಯಲ್ಲಿ ನಿರತರಾಗಿರುವ ಗುಪ್ತ ಅವರಿಗೆ ನೆನಪಿಡುವಂಥ ಘಟನೆ ಯಾವುದಾದರೂ ಇದೆಯಾ? ಅಂದರೆ, ''ಮೈ ಕೊರೆಯುವ ಚಳಿಗಾಲದ ಮುಂಜಾವಿನಲ್ಲಿ ಮುದುಕನೊಬ್ಬನಿಗೆ ಸೆಕೆಂಡ್ ಹ್ಯಾಂಡ್ ಮೇಲುಹೊದಿಕೆ ನೀಡಿದಾಗ ಆತನ ಮೊಗದಲ್ಲಿ ಅರಳಿದ ಸಂತೋಷವೇ ಸದಾ ಕಾಡುವಂಥದ್ದು,'' ಎನ್ನುತ್ತಾರೆ. ಅಂದರೆ, ಅವರು ತಮ್ಮ ಸುಖ ಸಂತೋಷಗಳನ್ನೆಲ್ಲವನ್ನೂ ಇಂಥ ಪುಟ್ಟ ಕಾರ್ಯಗಳಲ್ಲೇ ಕಂಡುಕೊಳ್ಳುತ್ತಾರೆ. ಇಂಥ ನಿಸ್ವಾರ್ಥ, ನಿಜ ಸಮಾಜ ಸೇವಕನಿಗೆ 2015ರ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ಸಂತೋಷದ ವಿಚಾರ. ಈ ಪ್ರಶಸ್ತಿ ಬರುವುದಕ್ಕಿಂತ ಮುಂಚೆ ಗೂಂಜ್ ಅಥವಾ ಅಂಶು ಗುಪ್ತ ಅವರು ಎಲ್ಲರಿಗೂ ಚಿರಪರಿಚಿತರಾಗಿರಲಿಲ್ಲ. ಇದೀಗ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಇನ್ನಷ್ಟು ಸಮಾಜಸೇವೆಯನ್ನು ಮಾಡಲು ಈ ಪ್ರಶಸ್ತಿ ಹುರಿದುಂಬಿಸಿದೆ.

ವ್ಯವಸ್ಥೆಯ ವಿರುದ್ಧ ಹೋರಾಡುವ ಚತುರ!

ವ್ಯವಸ್ಥೆಯ ಹೊರಗಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಒಂದು ತೆರನಾದರೆ, ವ್ಯವಸ್ಥೆಯೊಳಗಿದ್ದು ಬಂಡಾಯಗಾರರಾಗುವುದು ಇನ್ನೊಂದು ಮಾದರಿ. ಈ ಎರಡನೇ ಮಾದರಿಯಲ್ಲಿರುವವರು ಐಎಫ್‌ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ.

ಹರಿಯಾಣ ಕೇಡರ್‌ನ ಈ ಅಧಿಕಾರಿ ತಮ್ಮ ಮೊದಲ 5 ವರ್ಷದ ಅವಧಿಯಲ್ಲಿ 12 ಬಾರಿ ವರ್ಗಾವಣೆಯಾಗಿದ್ದಾರೆ!. ಇದರಿಂದಲೇ, ಆಳುವ ಸರಕಾರಕ್ಕೆ ಅವರ ಬಗ್ಗೆ ಎಷ್ಟು ಭಯವಿತ್ತ್ತು ಎನ್ನುವುದು ಅರಿವಿಗೆ ಬರುತ್ತದೆ. ಇಂಥ ಖಡಕ್ ಅಧಿಕಾರಿಗೆ ಇದೀಗ ಮ್ಯಾಗ್ಸೆಸೆ ಪ್ರಶಸ್ತಿ ಬಂದಿರುವುದು ವ್ಯವಸ್ಥೆಯೊಳಗೆ ಇದ್ದು ಬಂಡಾಯ ಸಾರುತ್ತಿರುವ ಅದೆಷ್ಟೋ ಅಧಿಕಾರಿಗಳಿಗೆ ಬಲ ತಂದಂತಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಚತುರ್ವೇದಿ ಅವರು, ತಮಗೆ ಬಂದಿರುವ ಈ ಪ್ರಶಸ್ತಿಯನ್ನು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಅರ್ಪಿಸಿದ್ದಾರೆ.

13 ವರ್ಷದ ತಮ್ಮ ಸೇವಾ ವಧಿಯಲ್ಲಿ ಅವರು ಎಂದಿಗೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಟ್ಟಿಲ್ಲ. ಇದರ ಪರಿ ಣಾಮ ಏನೆಂದರೆ, ಅವರ ವಿರುದ್ಧ ಅನೇಕ ಸುಳ್ಳು ಪ್ರಕರಣಗಳು ದಾಖಲಾದವು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಮಾವನೇ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು. ಅರಣ್ಯ ಇಲಾಖೆಯಿಂದ 4 ಬಾರಿ ತನಿಖೆಗೆಗೊಳಗಾದರು. ವಿಚಾರಣೆ ನಡೆದಾಗ ಸತ್ಯವಂತರಾಗಿ ಹೊರಬಂದಿದ್ದಾರೆ.

ಸಂಜೀವ್ ಹುಟ್ಟಿದ್ದು 1974 ರ ಡಿಸೆಂಬರ್ 21ರಂದು ಲಖನೌನಲ್ಲಿ. ಬಿ.ಟೆಕ್ ಪದವಿ ಪಡೆದಿದ್ದು ಅಲಹಾಬಾದ್‌ನ ಮೋತಿಲಾಲ ನೆಹರು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ. 2002ರ ಹರಿ ಯಾಣ ಕೇಡರ್‌ನ ಈ ಅಧಿಕಾರಿ ಐಎಫ್‌ಎಸ್ ಪರೀಕ್ಷೆಯಲ್ಲಿ 2ನೇ ರ‌್ಯಾಂಕ್ ಮತ್ತು ತರಬೇತಿ ವೇಳೆ 2 ಗೋಲ್ಡ್ ಮೆಡಲ್‌ಗಳನ್ನೂ ಪಡೆದಿದ್ದಾರೆ. ಹರಿಯಾಣದಲ್ಲಿ ತಮ್ಮ ಸೇವೆ ಆರಂಭಿಸಿದ ಸಂಜೀವ್, ಇತರೆ ಅಧಿಕಾರಿಗಳಂತೆ ಕಣ್ಣ ಮುಂದೆ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ನೋಡಿ ಸುಮ್ಮನೆ ಕೂರಲಿಲ್ಲ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದಷ್ಟು ದಿನವೂ, ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರಿಗೆ ಸಿಂಹಸ್ವಪ್ನವಾಗಿ ಕಾಡಿದರು. ಭ್ರಷ್ಟಾಚಾರದ ವಿರುದ್ಧದ ನಡೆಯಿಂದಾಗಿ ಅವರು 'ಚೊಚ್ಚಲೆಚ್ಚರಿಗ (ಜಿಠ್ಝಿಛಿಚ್ಝಿಟಡಿಛ್ಟಿ) ಅಧಿಕಾರಿ'ಯಾಗಿ ಗುರುತಿಸಿಕೊಂಡರು. ಇವರ ಪ್ರಯತ್ನದಿಂದಾಗಿ ಹರಿಯಾಣದ ಅಂದಿನ ಸಿಎಂ ಭೂಪೇಂದ್ರ ಸಿಂಗ್ ಹೂಡಾ, ಅರಣ್ಯ ಸಚಿವ ಹಾಗೂ ಇತರೆ ಹಿರಿಯ ಅಧಿಕಾರಿಗಳು ಇದೀಗ ಸುಪ್ರೀಂ ಕೋರ್ಟ್‌ಗೆ ಅಲೆಯುವಂತಾಗಿದೆ.

ರಾಜ್ಯ ಸರಕಾರದ ಕಿರುಕುಳದಿಂದ ಬೇಸತ್ತ ಚತುರ್ವೇದಿ, ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ಗೆ ಮನವಿ ಮಾಡಿಕೊಂಡು, ಕೇಂದ್ರ ಸೇವೆಗೆ ನಿಯೋಜಿಸುವಂತೆ ಕೇಳಿಕೊಂಡರು. ಇದರ ಫಲವಾಗಿ ಅವರು 2012ರಲ್ಲಿ ದೆಹಲಿಯ ಏಮ್ಸ್‌ನ ಜಾಗೃತದಳ ಮುಖ್ಯಸ್ಥರಾಗಿ ನೇಮಕಗೊಂಡರು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಿ, 200 ಪ್ರಕರಣ ಪತ್ತೆ ಹಚ್ಚಿದರು. ಈ ಪೈಕಿ 87 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಹಾಕಲಾಗಿದ್ದು, 20 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗುತ್ತಿದೆ. ಆದರೆ, 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕೂಡ ಇವರ 'ಪ್ರಾಮಾಣಿಕತೆಯ ವೇಗ'ವನ್ನು ತಡೆದುಕೊಳ್ಳಲಿಲ್ಲ. ಇದರ ಪರಿಣಾಮ ಅವರನ್ನು ಜಾಗೃತದಳದ ಜವಾಬ್ದಾರಿಯಿಂದ ಮುಕ್ತಗೊಳಿಸಿ,

ಏಮ್ಸ್‌ನ ಡೆಪ್ಯೂಟಿ ಡೈರೆಕ್ಟರ್ ಹುದ್ದೆಗೆ ಮಾತ್ರ ಸೀಮಿತಗೊಳಿಸಿತು. ಚತುರ್ವೇದಿಯಂಥ ಪ್ರಾಮಾಣಿಕರು ಇನ್ನೂ ಇರುವುದರಿಂದಲೇ ಒಂದಿಷ್ಟು ಭ್ರಷ್ಟಾಚಾರ ಹತೋಟಿಯಲ್ಲಿದೆ. ವ್ಯವಸ್ಥೆಯ ಮೇಲೆ ಜನರ ನಂಬಿಕೆ ಗಟ್ಟಿಯಾಗಲು ಕಾರಣವಾಗುತ್ತಿದೆ. 


* ಮಲ್ಲಿಕಾರ್ಜುನ ತಿಪ್ಪಾರ(publishe in VK on 2 aug 2015- Vyaktigatha)