ಸೋಮವಾರ, ಮೇ 8, 2017

ಸಂಜೆಬೆಳಕಿನಲ್ಲೊಂದು ವಾಸಿಯಾಗದ ಅನುರಾಗ!

ಹುಡುಗನೊಬ್ಬನ ಗಜಲ್‌ಗಳು:  ಚಟ ಚಕ್ರವರ್ತಿ ಜತೆ ಮದ್ವಿ ಮಾಡಿದ್ರು..ಅದರ ಫಲ ಅಕೀ ಊಣ್ಣಾಕತ್ತಾಳು...


- ಪ್ರದ್ಯುಮ್ನ
ಆ ಊರೇನೂ ಅಂಥ ದೊಡ್ಡದಲ್ಲ. ಹಾಗಂತ ತೀರಾ ಕುಗ್ರಾಮವಂತೂ ಅಲ್ಲವೇ ಅಲ್ಲ. ನಗರಗಳ ಜೀವನ ಶೈಲಿ ಹಳ್ಳಿಗಳ ಮೇಲೂ ಬಿದ್ದು, ಬದಲಾಗುವಂಥ ಸಂಕ್ರಮಣದ ಕಾಲ. ಊರಲ್ಲಿ ತುಸು ಆಧುನಿಕತೆ ಕಣ್ಣಿಗೆ ಕಾಣುವಷ್ಟು ಇತ್ತು. ಆ ಊರಿನ ಹೊರಗೆ ಇರುವ ಸರ
ಕಾರಿ ಶಾಲೆ ಮುಂದೆ ಹಾದು ಹೋಗುವ ಟಾರ್ ರೋಡ್‌ನಲ್ಲಿ ನಾಲ್ಕಾರು ಅಂಗಡಿಗಳು, ಆ ಪೈಕಿ ಈತ ಕೆಲಸ ಮಾಡುವ ಗ್ಯಾರೇಜು ಒಂದು. ಮುಂಜಾನೆ ಕಾಲೇಜಿಗೆ ಹೋಗಿ, ಮಧ್ಯಾಹ್ನದ ನಂತರ ಆತ ಅಲ್ಲಿಯ ಕೆಲಸ ಮಾಡುತ್ತಿದ್ದ. ಗ್ರೀಸು, ಆಯಿಲ್ ಮೆತ್ತಿದ ಡ್ರೆಸ್ ಹಾಕ್ಕೊಂಡು ಮೋಟರ್‌ಸೈಕಲ್ ರಿಪೇರಿಗೆ ಕುಳಿತನೆಂದರೆ, ಯಾವುದೂ ಹೊರಗಿನ ಜಗತ್ತಿನ ಬಗ್ಗೆ ಅರಿವೇ ಇರುತ್ತಿರಲಿಲ್ಲ. ಇಂಥದ್ದೇ ತಲ್ಲೀನತೆ ಪಾಠ ಕೇಳುವಾಗಲೂ ಇರ್ತಿತ್ತು ಎಂದು ಬೇರೆ ಹೇಳಬೇಕಿಲ್ಲ.
ಸೋಮವಾರ ಬಂತೆಂದರೆ ಈತ ಕೆಲಸ ಮಾಡುವ ಗ್ಯಾರೇಜ್ ಮುಂದಿರುವ ರಸ್ತೆಗೆ ಕಳೆ ಕಟ್ಟುತ್ತಿತ್ತು. ಗ್ಯಾರೇಜ್‌ನಿಂದ ಸ್ವಲ್ಪ ದೂರದಲ್ಲಿ ಊರ ದೇವರ ಭವ್ಯ ದೇವಸ್ಥಾನವಿತ್ತು. ಒಂದು ಕಡೆಯಿಂದ ಹೊಲಗಳಿಗೆ ಹೋದವರು, ತಮ್ಮ ದನಕರುಗಳನ್ನು ಹೊಡ್ಕೊಂಡು ಬರೋದು ನೋಡುತ್ತಿದ್ದರೆ, ಅದು ಪೇಂಟಿಂಗ್ ರೀತಿಯಲ್ಲಿ ಕಾಣಿಸುತ್ತಿತ್ತು. ಯಾಕೆಂದರೆ, ಪಡುವಣ ದಿಕ್ಕಿನಲ್ಲಿ ಸಂಜೆಯ ಸೂರ್ಯ ತನ್ನ ಮೈತುಂಬ ಬಂಗಾರದ ಬಣ್ಣ ಮೆತ್ತಿಕೊಳ್ಳುತ್ತಿದ್ದ. ಅದರ ಪ್ರತಿಫಲನ ಈ ರಸ್ತೆಯ ಮೇಲೂ ಚೆಲ್ಲುತ್ತಿತ್ತು. ಆ ಕೆಂಬೆಳಕಲ್ಲಿ ಎಲ್ಲವೂ ಆಕರ್ಷಕ, ಚಿತ್ತಾರ. ಇನ್ನು ಊರೊಳಗಿನಿಂದ ಮಹಿಳೆಯರು, ಮಕ್ಕಳು ಮತ್ತು ಯುವತಿಯರು ಆ ಊರ ದೇವರ ದರ್ಶನಕ್ಕೆ ಹೋಗುತ್ತಿದ್ದರು. ಅವರೂ ಅದೇ ರಸ್ತೆಯ ಮೂಲಕ ಹೋಗಬೇಕು. ಸೂರ್ಯನಿಗೆ ಎದುರಾಗಿ ಹೋಗುವ ಪ್ರತಿ ಹೆಂಗಳೆಯರ ಮುಖ ಬಂಗಾರ ವರ್ಣದಲ್ಲಿ ಅದ್ದಿ ತೆಗೆದಂತೆ ಕಾಣುತ್ತಿತ್ತು.
ಇಂಥ ಸಂಜೆಗಳನ್ನು ಆತ ಬೇಕಾದಷ್ಟು ನೋಡಿದ್ದ. ತನ್ನದೇ ಆದ ಲೋಕದಲ್ಲಿ ತೇಲುತ್ತಿದ್ದವನಿಗೆ ಈ ಸಂಜೆಗಳು ಅನೇಕ ಬಾರಿ ಆತನಲ್ಲಿ ಹೊಸ ಹೊಸ ಕನಸುಗಳನ್ನು ಹುಟ್ಟುಹಾಕಿವೆ. ಹಗಲುಗನಸು ಕಾಣುವುದು ಸಾಮಾನ್ಯ. ಆದರೆ, ಈತ ಸಂಜೆಗನಸು ಕಾಣುತ್ತಿದ್ದ. ಕೈಯಲ್ಲಿ ಸ್ಪ್ಯಾನರ್ ಹಿಡಿದುಕೊಂಡೇ ಬೈಕ್‌ನ ಎಂಜಿನೊಳಗೇ ಮುಖ ತೂರಿಸಿಕೊಂಡು ಹಾಗೆಯೇ ನಿಶ್ಚಲನಾಗಿದ್ದುಂಟು. ಆತನ ಮೇಸ್ತ್ರಿ(ಮೆಕ್ಯಾನಿಕ್), ‘‘ಏ... ಬಾರಾ ನಂಬರ್ ಪಾನಾ ಕೊಡೊ,’’ ಅಂದಾಗಲೇ ಆತ ತನ್ನ ಕಲ್ಪನಾಲೋಕದಿಂದ ವಾಸ್ತವಕ್ಕೆ ಮರಳುತ್ತಿದ್ದ. ಹೀಗೆ ಅದೆಷ್ಟೋ ಬಾರಿಯಾಗಿದೆಯೋ?
ಆ ಸಂಜೆಯು ಹಾಗೇ ಇತ್ತು. ಅಂದು ಕೂಡ ಸೋಮವಾರ. ಒಂದೆಡೆ ಹೊಲದಿಂದ ಬರುವವರ ಸಾಲು, ಮತ್ತೊಂದೆಡೆ ದೇವಸ್ಥಾನಕ್ಕೆ ಹೋಗುವವರಿಂದ ಇಡೀ ರಸ್ತೆ ತುಂಬಿಕೊಂಡಿತ್ತು. ಯಾವುದೋ ಬೈಕ್‌ನ ಹಿಂಬದಿಯ ಗಾಲಿ ಬಿಚ್ಚುತ್ತಿದ್ದ ಈತನಿಗೆ ಕಂಡಳು ಆಕೆ. ಆ ಇಳಿಸಂಜೆಯ ಸೂರ್ಯನ ಬಂಗಾರದ ಕಿರಣಗಳು ಆಕೆಯ ಮುಖದ ಮೇಲೆ  ಬಿದ್ದಿದ್ದರಿಂದ ಅವಳ ಚೆಲುವು ದುಪ್ಪಟ್ಟಾಗಿತ್ತು. ನಯವಾಗಿ ಬೀಸುತ್ತಿದ್ದ ಗಾಳಿ ಆಕೆಯ ಮುಖದ ಮೇಲೆ ಸುಳಿದು ಹೋಗುತ್ತಿರುವಾಗಲೇ, ಕೂದಲುಗಳು ಆ ಗಾಳಿಯ ಆಜ್ಞಾನುವರ್ತಿಯಂತೆ ನರ್ತಿಸುತ್ತಿದ್ದವು. ಗಾಲಿಯ ಸಂದಿಯಿಂದಲೇ ಆಕೆಯನ್ನು ನೋಡುತ್ತಿದ್ದ ಈತನನ್ನು, ಆಕೆಯು ತನ್ನ ಮುಖದ ಮೇಲೆ ಬೀಳುತ್ತಿದ್ದ ಕೂದಲನ್ನು ಸರಿಸುವ ಗಳಿಗೆಯಲ್ಲಿ ನೋಡಿದಳು. ಒಂದು ಕ್ಷಣ ಇಬ್ಬರ ಕಣ್ಣುಗಳು ಸಂಧಿಸಿದವು. ಅವಳೇನೋ ಮುಂದೆ ಹೋದಳು. ಆದರೆ, ಈತನಿಗೆ ಆ ಒಂದು ಕ್ಷಣ ಇಡೀ ಜಗತ್ತೇ ಸ್ತಬ್ಧವಾದ ರೀತಿ. ಕಾಲ ತನ್ನ ಕಾಲುಮುರಿದುಕೊಂಡು ಬಿದ್ದ ಭಾವ. ‘‘ಮುಗೀತೇನಪಾ ಗಾಲಿ ಬಿಚ್ಚುದು,’’ ಎಂದು ಮೇಸ್ತ್ರಿ ಕೂಗಿದಾಗಲೇ ಇಡೀ ಜಗತ್ತೇ ರಿಲಾಕ್ಸ್ ಆಗಿದ್ದು.  ‘‘ಮುಗೀತು... ಮುಗೀತು...’’ ಎನ್ನುತ್ತಲೇ ಅವಳು ಹೋದ ದಿಕ್ಕಿನತ್ತ ನೋಡುತ್ತಿದ್ದವನ ಮುಖದ ಮೇಲಿದ್ದ ಗ್ರೀಸ್‌ಗೆ ನೊಣವೊಂದು ಸಿಕ್ಕಿ ಹಾಕಿಕೊಂಡು, ಪಟಪಟನೆ ತನ್ನ ರೆಕ್ಕೆ ಬಡಿಯುತ್ತಿತ್ತು. ಆ ಗೋಧೂಳಿಯ ಸಮಯದಲ್ಲಿ ಈ ನೊಣದ ವಿಚಾರ ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ, ಗೊತ್ತಾಗಿದ್ದರೆ ಗೇಲಿ ಮಾಡುತ್ತಿದ್ದರೇನೋ!
ಬೇಡ ಬೇಡ ಎಂದರೂ ಅವಳ ಮುಖ ಈತನ ಮನಪರದೆಯ ಮೇಲೆ ಬರುತ್ತಲೇ ಇದೆ. ರಾತ್ರಿ ಪೂರ್ತಿ ನಿದ್ದೆಯೂ ಇಲ್ಲ. ಬೆಳಗ್ಗೆ ಎದ್ದು ಕಾಲೇಜಿಗೆ ಹೋಗುತ್ತಿರುವಾಗಲೇ ಆತನಿಗೆ ಗೊತ್ತಾಗಿದ್ದು, ಕಣ್ಣುಗಳೆರಡು ಕುಡಿದವರ ರೀತಿ ಕೆಂಪಾಗಿವೆ ಎಂಬುದು. ಈ ರೀತಿ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಆಗಿದೆ. ಆದರೆ, ಆಗ ತಡರಾತ್ರಿವರೆಗೂ ಕೆಲಸ ಮಾಡಿದ್ದರ ಪರಿಣಾಮವದು. ಆದರೆ ಈಗಿನದ್ದೇ ಬೇರೆ. ನಿನ್ನೆ ನೋಡಿದ ಮುಖದ ಗುಂಗಿನಲ್ಲೇ ಕಾಲೇಜು ಗೇಟ್ ದಾಟಿದವನ ಪಕ್ಕದಲ್ಲಿ ಬರುತ್ತಿದ್ದವಳು... ಅವಳೇ! ಈತನಿಗೆ ಕನಸೋ ನನಸೋ ನಂಬಲಾಗುತ್ತಿಲ್ಲ. ಆದರೂ ಸಾವರಿಸಿಕೊಂಡು ಹೋದವನಿಗೆ ಗೊತ್ತಾಗಿದ್ದು ಆಕೆಯ ಹೆಸರು ಮಲ್ಲಿಗೆ. ಕಾಲೇಜಿನಲ್ಲಿ ಅವನ ಜ್ಯೂನಿಯರ್.
ಇನ್ನು ಮುಂದೆ ಏನು ಹೇಳುವುದು? ಎಲ್ಲರ ಕಾಲೇಜ್ ಲೈಫ್‌ನಲ್ಲಾಗುವ ರೀತಿಯಲ್ಲೇ ಈತನೂ ಪ್ರೀತಿಯ ಬಲೆಯಲ್ಲಿ ಬಿದ್ದ. ಮೊದ ಮೊದಲು ಒನ್ ವೇ ಇದ್ದ ಪ್ರೀತಿ ಕಾಲೇಜು ಮುಗಿಯುವ ಹೊತ್ತಿಗೆ ಟು ವೇ ಆಗಿ ಬದಲಾಗಿತ್ತು. ಆದರೆ, ಬಹುತೇಕರ ಜೀವನದಲ್ಲಾಗುವಂತೆ ಈತನ ಪ್ರೀತಿಯೂ ಮದುವೆ ಎಂಬ ಹೊಸ ಆರಂಭಕ್ಕೆ ನಾಂದಿಯಾಗಲಿಲ್ಲ.
್ಡ್ಡ್ಡ
ಈಗ ಸುಮಾರು ಹತ್ತನ್ನೆರಡು ವರ್ಷಗಳು ಸರಿದು ಹೋಗಿವೆ. ಆ ಊರು ಇದೀಗ ಪಟ್ಟಣವೆಂಬ ಬೋರ್ಡನ್ನು ತನ್ನ ಹಣೆಗೆ ಅಂಟಿಸಿಕೊಂಡಿದೆ. ಆ ರಸ್ತೆ ಈಗಲೂ ಇದೆ. ನಾಲ್ಕಾರು ಇದ್ದ ಅಂಗಡಿಗಳು ಇದೀಗ ರಸ್ತೆಯ ಎರಡೂ ಬದಿಯಲ್ಲಿ ತುಂಬಿವೆ. ಅದರ ಮಧ್ಯೆಯೇ ಈತ ಕೆಲಸ ಮಾಡುತ್ತಿದ್ದ ಆ ಸಣ್ಣ ಗ್ಯಾರೇಜು ಈಗಲೂ ಇದೆ. ಅದೇ ಮೇಸ್ತ್ರಿ, ಮುರಿದ ಕುರ್ಚಿಯ ಮೇಲೆ ಯಾವುದಾದರೂ ಮೋಟರ್ ಸೈಕಲ್ ರಿಪೇರಿಗೆ ಬರಬಹುದೆಂದು ಕಾಯುತ್ತಿರುತ್ತಾನೆ. ಅಂದು ಆ ರಸ್ತೆಗಿದ್ದ ಸಾವಧಾನದ ಶ್ರೀಮಂತಿಕೆ, ತಂಗಾಳಿಯ ಸೋಕುವಿಕೆ ಇಂದಿಲ್ಲ. ರಸ್ತೆಗಳ ಮೇಲೆ ಬರ್.. ಬರ್.... ಎಂದು ವಾಹನಗಳು ಓಡುತ್ತಿವೆ. ಹೊಲದಿಂದ ಬರುವವರು ಇದೀಗ ಮೋಟರ್ ಸೈಕಲ್ ಏರಿದ್ದಾರೆ. ಇತ್ತ ಆ ದೇವಸ್ಥಾನಕ್ಕೆ ಹೋಗುವವರು ಕಾರು, ಜೀಪುಗಳ ಮೊರೆ ಹೋಗಿದ್ದರೆ, ಯುವತಿಯರು ಸ್ಕೂಟಿ ಸಂಗ ಮಾಡಿದ್ದಾರೆ. ಎಲ್ಲವೂ ಬದಲಾಗಿದೆ. ಎಲ್ಲೆಲ್ಲೂ ಧಾವಂತ ಎಂದು ಯೋಚಿಸುತ್ತ ಅದೇ ಗ್ಯಾರೇಜಿನಲ್ಲಿ ಕುಳಿತಿದ್ದ ಈತನನ್ನು, ರಸ್ತೆಯ ಬದಿಯ ಆಚೆ ನಡೆದುಕೊಂಡು ಹೋಗುತ್ತಿದ್ದವಳ ಕಣ್ಣುಗಳು ನೋಡುತ್ತಿದ್ದವು. ಅಂದು-ಇಂದಿನ ಪರಿಸ್ಥಿತಿ ತುಲನೆಯಲ್ಲಿದ್ದ ಈತ ಆ ನೋಟವನ್ನೇನೂ ಗಮನಿಸಲಿಲ್ಲ. ಆದರೆ, ಸುಪ್ತ ಮನಸ್ಸಿನೊಳಗಿನ ಆಜ್ಞೆ ಎಂಬಂತೆ ಸಡನ್ನಾಗಿ ಆಕೆಯನ್ನು ದಿಟ್ಟಿಸಿ ನೋಡಿದ. ಹೌದು.. ಆಕೆಯೇ. ಮಲ್ಲಿಗೆ. ಏನಿದು ಇಷ್ಟೊಂದು ಸೊರಗೋಗಿದ್ದಾಳೆ ಎನ್ನುತ್ತಿರುವಾಗಲೇ ಅವಳು ಇವನನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ ಮರೆಯಾದಳು.
ಇದನ್ನು ಗಮನಿಸುತ್ತಿದ್ದ ಆ ಮೇಸ್ತ್ರಿ, ‘‘ಯಾಕಪಾ ಹಿಂದಿದ್ದೆಲ್ಲ ನೆನಪಾಯ್ತೇನು?’’ ಎಂದು ಅವನ ಪ್ರತಿಕ್ರಿಯೆಗೂ ಕಾಯದೆ, ‘‘ನೀ ಏನಪಾ ಬೆಂಗ್ಳೂರು ಸೇರಿಕೊಂಡಿ. ನೀ ಹ್ವಾದ ಎರಡ ವರ್ಷಕ್ಕ ಮದ್ವೆ ಮಾಡಿದರು. ಆದ್ರ ಆ ಹುಡುಗ ಸರಿ ಇರ್ಲಿಲ್ಲ. ಅವಂಗ ಎಲ್ಲಾ ಚಟಾ ಇದ್ವು. ಚಟ ಚಕ್ರವರ್ತಿ ಅಂತ ಕರೀತಿದ್ರು ಮಂದಿ. ಎಲ್ಲಾ ಗೊತ್ತಿದ್ದು ಆಕಿ ಅಪ್ಪ ಮದ್ವಿ ಮಾಡಿದ. ಆದ್ರ ಈಗ ನೋಡು ಅದರ ಫಲ ಅಕೀ ಉಣ್ಣಾಕತ್ತಾಳು. ಎರಡ ವರಸದ ಹಿಂದ ಅಂವಾ ಸತ್ಹೋದ,’’ ಎಂದು ಹೇಳಿ ಅಂಗಡಿಯೊಳಗೆ ಸ್ಪ್ಯಾನರ್ ತರಲು ಹೋದ. ಈ ಸುದ್ದಿ ಕೇಳಿದ ಅವನಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಆಕೆಯ ಗಂಡ ಯಾಕೆ ಸತ್ತ? ಏನಾಗಿತ್ತು? ಎಂದು ಕೇಳಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಮೋಟರ್ ಸೈಕಲ್ ತಳ್ಳುತ್ತಾ ಒಬ್ಬ ಬಂದು, ‘‘ಮೇಸ್ತ್ರೀ ಗಾಡಿ ಸುರುವಾಗವಲ್ತು ನೋಡು,’’ ಎಂದ. ಮೇಸ್ತ್ರಿ ಗಾಡಿ ರಿಪೇರಿಯಲ್ಲಿ ಮಗ್ನನಾದ.
ಇತ್ತ ರಸ್ತೆಯಲ್ಲಿ ಧಾವಂತದ ಪರಾಕಾಷ್ಠೆ ಇತ್ತು. ಗದ್ದಲ ತುಂಬಿತ್ತು. ಪಾಂವ್... ಪಾಂವ್... ಎಂದು ಚಿತ್ರ ವಿಚಿತ್ರ ಹಾರ್ನ್ ಬಾರಿಸುತ್ತ ಹೋಗುವ ಬಸ್ಸು, ಕಾರುಗಳಿಗೇನೂ ಕೊರತೆ ಇರಲಿಲ್ಲ. ಆದರೆ, ಅವನ ಮನಸ್ಸಿನೊಳಗೆ ಎಲ್ಲವೂ ಸ್ತಬ್ಧ, ನಿಶ್ಶಬ್ಧ. ಅವಳನ್ನು ನೋಡಿದ ಮೇಲೆ; ಬೇಸಿಗೆಯಲ್ಲಿ  ಅಡ್ಡ ಮಳೆ ಜೋರಾಗಿ ಸುರಿದು ಹೋದಂಥ ಭಾವ. ಮಳೆಯಾಗಿದ್ದು ನಿಜ. ಆದರೆ, ನೆಲ ಆ ಮಳೆ ನೀರನ್ನೆಲ್ಲ ಕುಡಿದು, ಮಳೆಯಾದ ಬಗ್ಗೆ ಸಾಕ್ಷಿ ಕೇಳುವಂತಿತ್ತು ಆತನ ಮನಸ್ಥಿತಿ. ಅಷ್ಟರಲ್ಲಿ, ಆ ಮೋಟರ್ ಸೈಕಲ್ ಬರ್ರ ಅಂತ ಶುರುವಾಯ್ತು. ಮೇಸ್ತ್ರಿ ತನ್ನ ಕೈಯೊಳಗಿದ್ದ ಸ್ಪ್ಯಾನರ್ ಒಳಗಿಟ್ಟು ಬಂದು ಕುಳಿತ.
ಇತ್ತ ಪಡುವಣದಲ್ಲಿ ಸೂರ್ಯ, ಆ ಎತ್ತರದ ಬಿಲ್ಡಿಂಗ್‌ನಿಂದ ಇವನತ್ತ ಇಣುಕಿದಂತಾಯಿತು. ನೋಡಿದರೆ, ಆತನ ಮೈ ಬಣ್ಣ ಕೆಂಪಿಲ್ಲ, ಬರಬರುತ್ತಾ ಕಪ್ಪಾಗುತ್ತಿದೆ. ಈತನ ಮೇಲೆ ಅಗಾಧವಾದ ಸಿಟ್ಟು ಎಂಬಂತೆ ಆತ ತನ್ನ ದಿನದ ಕೆಲಸ ಮುಗಿಸಿ ಭೂಗರ್ಭ ಸೇರಿಬಿಟ್ಟ. ಇತ್ತ ರಸ್ತೆ ಮೇಲೆ ಬೀದಿ ದೀಪಗಳ ಬೆಳಕಿನ ಆಟ ಶುರುವಾಗಿತ್ತು. ಭಾರವಾದ ದನಿಯಂದಲೇ ಕೇಳಿದ, ‘‘ಆಕೆಯ ಗಂಡನಿಗೆ ಏನಾಗಿತ್ತು?’’. ಇದೇ ಪ್ರಶ್ನೆಗೆ ಕಾಯುತ್ತಿದ್ದೆ ಎನ್ನುವಂತೆ ಮೇಸ್ತ್ರಿ, ಒಂದು ಗುಕ್ಕಿನಲ್ಲಿ, ‘‘ಅದರ ಹೆಸ್ರ ಹೇಳಾಕ್ ಬರುದಿಲ್ಲ ನಂಗ. ಆದರ, ಅದೇನೋ ಚಲೋ ಆಗಲಾರ್ದು ಜಡ್ಡಂತ ನೋಡ. ಅದ ಈಕಿಗೂ ಬಂದೈತಿ ಅಂತಾರು ಮಂದಿ,’’ ಎಂದು ಹೇಳಿ ಸುಮ್ಮನಾದ.
‘ವಾಸಿಯಾಗದ ಕಾಯಿಲೆ ಯಾವುದು’ ಎಂದು ಯೋಚಿಸುತ್ತಲೇ ಆತನಿಗೆ ಉತ್ತರ ಗೊತ್ತಾಗಿತ್ತು. ಈಗ ರಸ್ತೆ ಆತನಿಗೆ ಬೆಂಗಾಡಿನ ಕಾಲು ದಾರಿಯಂತೆ ಭಾಸವಾಗುತ್ತಿದೆ. ಮತ್ತೆ ಸೂರ್ಯ ಹುಟ್ಟಲಾರ ಅನಿಸುತ್ತಿದೆ.

This article was published in VijayKarnataka, on 08 May 2017 edition