ಸೋಮವಾರ, ಮಾರ್ಚ್ 22, 2021

Did You Addicted to Smartphone: ನೀವು ಸ್ಮಾರ್ಟ್‌‌ಫೋನ್‌ಗೆ ಅಡಿಕ್ಟ್ ಆಗಿದ್ದೀರಾ?

- ಮಲ್ಲಿಕಾರ್ಜುನ ತಿಪ್ಪಾರ
ಸ್ಮಾರ್ಟ್‌ ಫೋನ್‌ ಬಳಸೋಕೆ ಶುರು ಮಾಡಿದ ಮೇಲೆ ಓದುವುದಕ್ಕೆ ಆಗುತ್ತಿಲ್ಲ? ನಿದ್ದೆ ಸರಿಯಾಗಿ ಮಾಡಲು ಆಗುತ್ತಿಲ್ಲವೇ? ಟಾಯ್ಲೆಟ್‌ಗೆ ಹೋಗಬೇಕಾದರೂ ಸ್ಮಾರ್ಟ್‌ ಫೋನ್‌ ಕೈಯಲ್ಲೇ ಇರುತ್ತದೆಯೇ? ಮೂರೂ ಹೊತ್ತು ಮೊಬೈಲ್‌ನಲ್ಲೇ ಮುಳುಗಿರ್ತಿಯಾ ಅಂತಾ ಬೈತಿರ್ತಾರೆ ಅಂತ ಅನಿಸುತ್ತಿದೆಯಾ? 

ಹೌದು, ಎಂದಾದರೆ ಖಂಡಿತವಾಗಿಯೂ ನೀವು ಸ್ಮಾರ್ಟ್‌ ಫೋನ್‌ ಗೀಳಿಗೆ ಬಿದ್ದಿದ್ದೀರಿ ಎಂದರ್ಥ. ಅದನ್ನೇ ಮತ್ತೊಂದು ರೀತಿ ಹೇಳುವುದಾದರೆ, ಸ್ಮಾರ್ಟ್‌ ಫೋನ್‌ಗೆ ಸಿಕ್ಕಾಪಟ್ಟೆ ಅಡಿಕ್ಟ್  ಆಗಿದ್ದೀರಿ, ಅದಕ್ಕೆ ದಾಸರಾಗಿದ್ದೀರಿ, ಅದೊಂದು ರೀತಿಯಲ್ಲಿಚಟ ಆಗಿದೆ!

ನಮ್ಮ ಯಾವುದೇ ನಡವಳಿಕೆ, ಹವ್ಯಾಸ, ಚಟುವಟಿಕೆಗಳು ಯಾವಾಗ ಚಟಗಳಾಗಿ ಬದಲಾಗುತ್ತವೆಯೋ ಆಗ ಅವುಗಳಿಂದ ಅಪಾಯವೇ  ಹೆಚ್ಚು. ಸ್ಮಾರ್ಟ್‌ ಫೋನ್‌ ಕೂಡ ಹಾಗೆಯೇ, ಅದು ನಮ್ಮ ಅಗತ್ಯವನ್ನು ಪೂರೈಸುವ ಸಾಧನ. ಎಷ್ಟು ಅಗತ್ಯವಿದೆಯೋ ಅಷ್ಟೇ ಬಳಸಬೇಕು. ಆದರೆ, ನಾವೆಲ್ಲಅದನ್ನು ಅನಗತ್ಯವಾಗಿ, ಅಗತ್ಯ ಮೀರಿ ಬಳಸುತ್ತಿರುವ ಪರಿಣಾಮ ಅದಕ್ಕೆ ಅಡಿಕ್ಟ್ ಆಗಿದ್ದೇವೆ. ಇದರಿಂದ ಹೊರ ಬರಲು ಈ ಟಿಟ್ಸ್‌ ಟ್ರೈ ಮಾಡಿ.

1. ಯಾವಾಗ ಬಳಸಿಕೊಳ್ಳಬೇಕು
ಫೋನ್‌ ಅನ್ನು ಯಾವಾಗ ಬಳಸಿಕೊಳ್ಳಬೇಕೆಂದು ನೀವೇ ನಿರ್ಧರಿಸಿಕೊಳ್ಳಿ. ದಿನದ ಇಂತಿಂಥ ಸಮಯದಲ್ಲಿಮಾತ್ರವೇ ಬಳಸಿ. ಉಳಿದ ಸಮಯದಲ್ಲಿಅದರಿಂದ ದೂರವಿರಿ. ಕಚೇರಿಯಲ್ಲಿಮಾತ್ರವೇ ನಿಮಗೆ ಫೋನ್‌ ಅಗತ್ಯ ಹೆಚ್ಚಿದ್ದರೆ ಅಲ್ಲಿಮಾತ್ರವೇ ಬಳಕೆ ಇರಲಿ. ಮನೆಯಲ್ಲಿಅದರಿಂದ ದೂರವಿರಿ.

2.ಒಂದಿಷ್ಟು ಗಂಟೆ ಸ್ವಿಚ್ಡ್‌ ಆಫ್‌ ಮಾಡಿ
ದಿನದಲ್ಲಿನಿಮಗೆ ಅಗತ್ಯವಿಲ್ಲದ ಸಮಯವನ್ನು ಗುರುತಿಸಿಕೊಂಡು ಆ ಸಮಯದಲ್ಲಿಫೋನ್‌ ಸ್ವಿಚ್ಡ್‌ ಆಫ್‌ ಮಾಡುವುದನ್ನು ರೂಢಿಸಿಕೊಳ್ಳಿ. ಹಾಗೆಯೇ, ಕಾರು ಚಾಲನೆ ಮಾಡುವಾಗ, ಜಿಮ್‌ ಮಾಡುವಾಗ, ಊಟ ಮಾಡುವಾಗ ಅಥವಾ ಮಕ್ಕಳೊಂದಿಗೆ ಆಟ ಆಡುವಾಗ ಫೋನ್‌ ಮುಟ್ಟಲು ಹೋಗಬೇಡಿ. ನಿಮ್ಮ ಬಾತ್‌ ರೂಮ್‌ಗೆ ಫೋನ್‌ ನಿಷೇಧಿಸಿ.

3.ಹಾಸಿಗೆಗೆ ಫೋನ್‌ ಬರಕೂಡದು
ಹೌದು, ಬಹಳಷ್ಟು ಜನ ಮಲಗುವ ಮುನ್ನ ಸುಮಾರು ಹೊತ್ತು ಸ್ಮಾರ್ಟ್‌ ಫೋನ್‌ ಬಳಸುತ್ತಾರೆ. ಇದೊಂದು ದುರಭ್ಯಾಸ. ನಿಮ್ಮ ನಿದ್ದೆ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಫೋನ್‌ ಹೊರಸೂಸುವ ನೀಲಿ ಕಿರಣಗಳು ನಿದ್ದೆಯನ್ನು ಹಾಳು ಮಾಡುತ್ತವೆ. ಫೋನ್‌ನಲ್ಲಿಇ-ಬುಕ್‌ ಓದುವ ಬದಲು ರಿಯಲ್‌ ಪುಸ್ತಕಗಳನ್ನೇ ಓದಿ. 

4.ಪರ್ಯಾಯ ಹುಡುಕಿಕೊಳ್ಳಿ
ಒಂದೊಮ್ಮೆ ನಿಮಗೆ ಬೋರ್‌ ಆಗುತ್ತಿದೆ, ಒಂಟಿತನ ಎನಿಸುತ್ತಿದೆ ಎಂದು ಫೋನ್‌ ಕೈಗೆತ್ತಿಕೊಳ್ಳಬೇಡಿ. ಬದಲಿಗೆ ಪರ್ಯಾಯ ದಾರಿ ಹುಡುಕಿಕೊಳ್ಳಿ. ಹೆಲ್ತ್  ಆಕ್ಟಿವಿಟಿ ಮಾಡಿ. ಮ್ಯೂಸಿಕ್‌ ಸಿಸ್ಟಮ್‌ನಲ್ಲಿಸಂಗೀತ ಆಲಿಸಿ; ಆಡಿ; ಹಾಡಿ. ಫೋನ್‌ ಬಿಟ್ಟು ಬೇರೆ ಏನಾದರೂ ಮಾಡಿಯಷ್ಟೆ.

5.ಸೋಷಿಯಲ್‌ ಮೀಡಿಯಾ ಆ್ಯಪ್‌ ತೆಗೆಯಿರಿ
ಸ್ಮಾರ್ಟ್‌ ಫೋನ್‌ನಲ್ಲಿನಾವು ಹೆಚ್ಚಿನ ಸಮಯವನ್ನು ಸೋಷಿಯಲ್‌ ಮೀಡಿಯಾಗಳಲ್ಲೇ ಕಳೆಯುತ್ತೇವೆ. ಇದರಿಂದಾಗಿ ನಮ್ಮ ಜೀವನ ಅಸಮತೋಲನವಾಗುತ್ತಿದೆ. ಹಾಗಾಗಿ, ಸೋಷಿಯಲ್‌ ಮೀಡಿಯಾ ಆ್ಯಪ್‌ಗಳಿಂದ ಹೊರಬನ್ನಿ. ಇಲ್ಲವೇ ಎಷ್ಟು ಅಗತ್ಯವಿದೆಯೋ ಅಷ್ಟೇ  ಬಳಸಿ. ಇಡೀ ದಿನ ಅಲ್ಲೇ ಇರಬೇಡಿ. ಸೋಷಿಯಲ್‌ ಮೀಡಿಯಾ ಆಚೆಯೂ ಲೈಫ್‌ ಇದೆ.

6. ಪದೇ ಪದೆ ಚೆಕ್‌ ಮಾಡಬೇಡಿ
ಪದೇಪದೆ ಸ್ಮಾರ್ಟ್‌ ಫೋನ್‌ ಕೈಗೆತ್ತಿಕೊಂಡು ಮೆಸೆಜ್‌ ಬಂದಿದೆಯಾ, ಸೋಷಿಯಲ್‌ ಮೀಡಿಯಾ ನೋಟಿಫಿಕೇಷನ್‌ ಬಂದಿದೆಯಾ, ಮೇಲ್‌ಗಳು ಬಂದಿದೆಯಾ ಅಂತಾ ಚೆಕ್‌ ಮಾಡೋದು ಹೆಚ್ಚುತ್ತಿದೆ. ಈ ಪ್ರವೃತ್ತಿಯೇ ಮುಂದೆ ಚಟವಾಗಿ ಬಿಡುತ್ತದೆ. ಹಾಗಾಗಿ, ಪದೇಪದೆ ಸ್ಮಾರ್ಟ್‌ ಫೋನ್‌ ಚೆಕ್‌ ಮಾಡಲು ಹೋಗಬೇಡಿ.

7. ಥಿಯೇಟರ್‌ನಲ್ಲಿಸಿನಿಮಾ ನೋಡಿ
ಇತ್ತೀಚಿನ ದಿನಗಳಲ್ಲಿಬಹಳಷ್ಟು ಮಂದಿ ಸ್ಮಾರ್ಟ್‌ ಫೋನ್‌ನಲ್ಲಿಸಿನಿಮಾ ನೋಡಲು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರಿಂದಾಗಿಯೇ ಹೆಚ್ಚಿನ ಸಮಯವನ್ನು ಅವರು ಸ್ಮಾರ್ಟ್‌ ಫೋನ್‌ಗಳಲ್ಲಿಕಳೆಯುತ್ತಿದ್ದಾರೆ. ಇದರಿಂದ ಹೊರ ಬರಲು ಚಿತ್ರಮಂದಿರಗಳಲ್ಲಿಸಿನಿಮಾ ನೋಡಿ  ಅಥವಾ ವಾರಕ್ಕೆ ನಿರ್ದಿಷ್ಟ ಸಮಯವನ್ನು ಇದಕ್ಕಾಗಿಯೇ ಮೀಸಲಿಡಿ.

ಈ ಲೇಖನವು ವಿಜಯ ಕರ್ನಾಟಕದ 2021ರ ಮಾರ್ಚ್ 22ರ ಸಂಚಿಕೆಯಲ್ಲಿ ಪ್ರಕಟವಾಗಿದೆ.




 

Mithali Raj is a 'Queen' of Indian Women Cricket ಕ್ರಿಕೆಟ್‌ನ 'ರಾಣಿ' ಮಿಥಾಲಿ ರಾಜ್‌

20 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ‘ರಾಣಿ’ಯಂತೆ ಮೆರೆಯುತ್ತಿರುವ, ದಾಖಲೆಗಳ  ಮೇಲೆ ದಾಖಲೆ ಪೇರಿಸುತ್ತಿರುವ ಮಿಥಾಲಿ ರಾಜ್‌ ಸ್ಫೂರ್ತಿಗೆ ಮತ್ತೊಂದು ಹೆಸರು.


- ಮಲ್ಲಿಕಾರ್ಜುನ ತಿಪ್ಪಾರ
ಹತ್ತು ಸಾವಿರ ಅಂತಾರಾಷ್ಟ್ರೀಯ ರನ್‌ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್‌, ವಿಶ್ವದ ಎರಡನೇ ಮಹಿಳಾ ಕ್ರಿಕೆಟರ್‌ ಎಂಬ ಖ್ಯಾತಿಗೆ ಪಾತ್ರರಾದ ಮಿಥಾಲಿ ರಾಜ್‌ ಸಾಧನೆ ಕುರಿತು Mithali + Magic = Milestone ಎಂಬ ಟ್ವೀಟ್‌ವೊಂದನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಡಿತ್ತು. ಇದು ಉತ್ಪ್ರೇಕ್ಷೆ ಏನಲ್ಲ. ಮಿಥಾಲಿ ಅವರ ಬ್ಯಾಟಿನಿಂದ ಈಗ ಚಿಮ್ಮುವ ಪ್ರತಿ ರನ್ನೂ ಮೈಲುಗಲ್ಲೇ!

ಪುರುಷರ ಕ್ರಿಕೆಟ್‌ ಪಾರಮ್ಯವಿರುವ ಭಾರತದಂಥ ದೇಶದಲ್ಲಿ20 ವರ್ಷಗಳ ಕಾಲ ಮಹಿಳೆಯೊಬ್ಬಳು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವುದು, ಹತ್ತು ಸಾವಿರ ರನ್‌ ಪೂರೈಸುವುದು ಅಸಾಧಾರಣ ಸಾಧನೆಯೇ ಸರಿ. ಇಂಗ್ಲೆಂಡ್‌ನ ಚಾರ್ಲೊಟ್‌ ಎಡ್ವರ್ಡ್ಸ್ ಈ ಮೊದಲು ಹತ್ತು ಸಾವಿರ ರನ್‌ ಪೂರೈಸಿದ ಮೊದಲ ದಾಂಡಿಗಳು. ಈಗ ಸಾಧನೆ ಮಾಡಿದ ಎರಡನೇ ಬ್ಯಾಟರ್‌ ಮಿಥಾಲಿಯಾಗಿದ್ದಾರೆ. ಜೊತೆಗೆ ಒನ್‌ಡೇ ಮಹಿಳಾ ಕ್ರಿಕೆಟ್‌ನಲ್ಲಿ7000 ರನ್‌ ಪೂರೈಸಿದ ಮೊದಲ ಬ್ಯಾಟರ್‌ ಇವರು. ಭಾರತದ ಮಟ್ಟಿಗೆ ಅವರೀಗ ಬರೀ ಕ್ರಿಕೆಟರ್‌ ಆಗಿ ಉಳಿದಿಲ್ಲ. ಮಿಥಾಲಿ ರಾಜ್‌ ಎನ್ನುವುದು ಸ್ಫೂರ್ತಿಗೆ ಪರ್ಯಾಯವಾಗಿದೆ. ‘ಮಿಥಾಲಿ’ ಈಗ ಮಹಿಳಾ ಕ್ರಿಕೆಟನ್ನು ಅಕ್ಷ ರಶಃ ‘ರಾಜ್‌’ ಮಾಡುತ್ತಿದ್ದಾರೆ. 

ಟೆಸ್ಟ್‌, ಒನ್‌ಡೇ ಹಾಗೂ ಟ್ವೆಂಟಿ20 ಕ್ರಿಕೆಟ್‌ ಮೂರು ಮಾದರಿಗಳಲ್ಲಿತಮ್ಮ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ ಮಿಥಾಲಿ, ಒನ್‌ಡೇ ಕ್ರಿಕೆಟ್‌ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಟ್ವೆಂಟಿ20 ಕ್ರಿಕೆಟ್‌ಗೆ 2019ರಲ್ಲಿನಿವೃತ್ತಿಯನ್ನು ಘೋಷಿಸಿದ್ದಾರೆ. ಈಗ ಅವರಾಡುವ ಪ್ರತಿ ಪಂದ್ಯ, ಹೊಡೆಯುವ ಪ್ರತಿ ರನ್‌, ಕ್ಯಾಪ್ಟನ್ಸಿ ಪ್ರತಿಯೊಂದೂ ದಾಖಲೆಗಳಾಗಿ ರೂಪಾಂತರವಾಗುತ್ತಿವೆ. ಮೊನ್ನೆಯಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಸ್ಕೋರ್‌ಬೋರ್ಡ್‌ ಸಾಕ್ಷಿಯಾಗಿದೆ.

‘‘ಯಶಸ್ಸಿನೊಂದಿಗೆ ಬರುವ ಸೋಲುಗಳನ್ನು ಸ್ವೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು; ಅವುಗಳಿಂದ ಪಾಠ ಕಲಿಯಬೇಕೇ ಹೊರತು ಬೇಜಾರಾಗಬಾರದು. ವೃತ್ತಿಪರ ಜಗತ್ತಿಗೆ ಕಾಲಿಡುವ ಮುನ್ನ ನಿಮ್ಮ ಆಟವನ್ನು ಎಂಜಾಯ್‌ ಮಾಡಿ,’’ ಎಂದು ಕಿರಿಯರಿಗೆ ಕಿವಿಮಾತು ಹೇಳುವ ಮಿಥಾಲಿ ಸೋಲು ಮತ್ತು ಗೆಲುವುಗಳನ್ನು ಅಷ್ಟೇ ಸಮಾನವಾಗಿ ಸ್ವೀಕರಿಸಿದವರು. ಗೆದ್ದಾಗ ಆಕಾಶಕ್ಕೆ ನೆಗೆಯದೇ; ಸೋತಾಗ ಪಾತಾಳಕ್ಕೆ ಇಳಿಯದೇ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಆದರೆ, ಅವರಲ್ಲಿರುವ ಗೆಲ್ಲುವ ‘ಹಠ’ ಸ್ವಭಾವವೇ ಅವರನ್ನು ಇಲ್ಲಿಯವರೆಗೂ ಕರೆ ತಂದಿದೆ. ಈ ಮನೋಭಾವವನ್ನು ನೀವು ಕ್ರಿಕೆಟ್‌ ಅಂಗಣದಲ್ಲಿಅವರಿಂದ ನಿರೀಕ್ಷಿಸಬಹುದು. ನಾಯಕತ್ವ ಪ್ರದರ್ಶಿಸುವಾಗಲೂ ಸಮಚಿತ್ತ ಭಾವ ಪ್ರದರ್ಶಿಸುತ್ತಲೇ ಗೆಲ್ಲುವ ಹಠವನ್ನು ನಾವು ನೋಡಬಹುದು. ಅವರ ಆಟದಲ್ಲೂಇದೇ ತಾದಾತ್ಮ್ಯತೆಯನ್ನು ನೀವು ಗಮನಿಸಬಹುದು.

ರಾಜಸ್ಥಾನದ ಜೋಧಪುರದ ತಮಿಳು ಕುಟುಂಬದಲ್ಲಿ1982 ಡಿಸೆಂಬರ್‌ 3ರಂದು ಮಿಥಾಲಿ ರಾಜ್‌ ಜನಿಸಿದರು. ತಂದೆ ದೊರೈರಾಜ್‌ ಅವರು ವಾಯುಪಡೆಯಲ್ಲಿಏರ್ಮನ್‌(ವಾರೆಂಟ್‌ ಆಫೀಸರ್‌) ಆಗಿದ್ದರು. ತಾಯಿ ಲೀಲಾ ರಾಜ್‌. ತಮ್ಮ ಹತ್ತನೇ ವಯಸ್ಸಿನಲ್ಲೇ ರಾಜ್‌ ತನ್ನ ಸಹೋದರನೊಂದಿಗೆ ಕ್ರಿಕೆಟ್‌ ಕಲಿಕೆ ಆರಂಭಿಸಿದರು. ಹೈದರಾಬಾದ್‌ನ ಕೀಸ್‌ ಹೈಸ್ಕೂಲ್‌ ಫಾರ್‌ ಗರ್ಲ್ಸ್‌ ಮತ್ತು ಸಿಕಂದರಾಬಾದ್‌ನ ಕಸ್ತೂರ್ಬಾ ಗಾಂಧಿ ಜೂನಿಯರ್‌ ಮಹಿಳಾ ಕಾಲೇಜ್‌ನಲ್ಲಿಓದಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿವಾಸ. 14ನೇ ವಯಸ್ಸಿನಲ್ಲೇ ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಂಡಕ್ಕೆ ಎಂಟ್ರಿ ಪಡೆಯುವ ಸಾಧ್ಯತೆಗಳಿತ್ತು. 1997ರ ಮಹಿಳಾ ಕ್ರಿಕೆಟ್‌ ವಿಶ್ವ ಕಪ್‌ ತಂಡಕ್ಕೆ ಮಿಥಾಲಿ ರಾಜ್‌ ಅವರನ್ನು ಪರಿಗಣಿಸಲಾಗಿತ್ತು. ಆದರೆ, ಅಂತಿಮ ತಂಡದಲ್ಲಿಸೇರಿಸಿಕೊಂಡಿರಲಿಲ್ಲ. ಮುಂದೆ 1999ರಲ್ಲಿಮಿಥಾಲಿ ರಾಜ್‌, ಐರ್ಲೆಂಡ್‌ ವಿರುದ್ಧ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ಶತಕ ಬಾರಿಸಿದರು. ಅಲ್ಲಿಂದ ಶುರುವಾದ ಕ್ರಿಕೆಟ್‌ ಜರ್ನಿ ಹಲವು ದಾಖಲೆಗಳೊಂದಿಗೆ ಮುಂದುವರಿದಿದೆ. 

2001-02ರಲ್ಲಿದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್‌ಗೂ ಕಾಲಿಟ್ಟರು. ಲಖನೌದಲ್ಲಿನಡೆದ 

ಟೆಸ್ಟ್‌ನಲ್ಲಿಮೂರನೇ ಟೆಸ್ಟ್‌ನಲ್ಲೇ ಮಿಥಾಲಿ ರಾಜ್‌ 209 ರನ್‌ ಚಚ್ಚುವ ಮೂಲಕ ಕರೆನ್‌ ರೋಲ್ಟನ್‌ ಅವರ ಗರಿಷ್ಠ ವೈಯಕ್ತಿಕ ಸ್ಕೋರ್‌ ದಾಖಲೆಯನ್ನು ಪುಡಿ ಪುಡಿ ಮಾಡಿದರು. ಆಗ ಮಿಥಾಲಿಗೆ ಕೇವಲ 19 ವರ್ಷ. ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲೂಅವರು 214 ರನ್‌ ಮಾಡಿದ್ದರು. 2004ರಲ್ಲಿಈ ದಾಖಲೆಯನ್ನು ಪಾಕಿಸ್ತಾನದ ಕಿರನ್‌ ಬಲೂಚ್‌ ಅವರು ವೆಸ್ಟ್‌ ಇಂಡೀಸ್‌ ವಿರುದ್ಧ 242 ರನ್‌ ಗಳಿಸುವ ಮೂಲಕ ಮುರಿದರು. 

ದಕ್ಷಿಣ ಆಫ್ರಿಕಾದಲ್ಲಿನಡೆದ 2005ರ ವಿಶ್ವ ಕಪ್‌ ಪಂದ್ಯಾವಳಿಯಲ್ಲಿತಂಡವನ್ನು ಮುನ್ನಡೆಸಿದ ರಾಜ್‌, ಮೊದಲ ಬಾರಿಗೆ ಭಾರತ ಫೈನಲ್‌ ತಲುಪುವುದಕ್ಕೂ  ಕಾರಣಕರ್ತರಾದರು. ಆದರೆ, ಕಪ್‌ ಗೆಲ್ಲಲಾಗಲಿಲ್ಲ. 2006ರಲ್ಲಿಭಾರತೀಯ ಮಹಿಳಾ ತಂಡ ಮೊದಲ ಬಾರಿಗೆ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯನ್ನು ಗೆದ್ದುಕೊಂಡಿತ್ತು. ಮಿಥಾಲಿ ತಂಡವನ್ನು ಮುನ್ನಡೆಸಿದ್ದರು. ಹಾಗೆಯೇ ಏಷ್ಯಾ ಕಪ್‌ನಲ್ಲಿಒಂದೂ ಪಂದ್ಯವನ್ನು ಸೋಲದೇ ಅಜೇಯರಾಗಿ ಪಂದ್ಯಾವಳಿಯನ್ನು ಗೆದ್ದುಕೊಂಡಿತ್ತು ರಾಜ್‌ ನೇತೃತ್ವದ ಭಾರತೀಯ ತಂಡ.

2013ರ ಮಹಿಳಾ ವಿಶ್ವಕಪ್‌ ಪಂದ್ಯಾವಳಿ ವೇಳೆ ಮಿಥಾಲಿ ಅವರು ಒನ್‌ಡೇ ಕ್ರಿಕೆಟ್‌ನಲ್ಲಿಮೊದಲನೆಯ ರಾರ‍ಯಂಕ್‌ನಲ್ಲಿದ್ದರು. ಮಹಿಳಾ ಒಂಡೇ ಕ್ರಿಕೆಟ್‌ನಲ್ಲಿ5,500 ರನ್‌ ಗಳಿಸಿದ ಎರಡನೇ ಆಟಗಾರ್ತಿ ಎಂಬ ಕೀರ್ತಿಗೆ 2017ರಲ್ಲಿಪಾತ್ರರಾದರು. ಹಾಗೆಯೇ, 20ಟ್ವೆಂಟಿ ಮತ್ತು ಒನ್‌ಡೇ ಕ್ರಿಕೆಟ್‌ನಲ್ಲಿಅತಿ ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ ಭಾರತದ ಮೊದಲ ಆಟಗಾರ್ತಿ. 2017ರ ಜುಲೈನಲ್ಲಿ6000 ರನ್‌ ಪೂರೈಸಿದ ಮೊದಲ ಆಟಗಾರ್ತಿಯಾದರು. 2017ರ ಮಹಿಳಾ ವಿಶ್ವಕಪ್‌ನಲ್ಲಿಭಾರತೀಯ ತಂಡ ಅದ್ಭುತ ಪ್ರದರ್ಶನ ತೋರಿತ್ತು. ಪರಿಣಾಮ ರಾಜ್‌ ನೇತೃತ್ವದ ತಂಡ ಫೈನಲ್‌ಗೆ ಏರಿತ್ತು. ಆದರೆ, ಅಂತಿಮ ಹಣಾಹಣಿಯಲ್ಲಿಇಂಗ್ಲೆಂಡ್‌ ವಿರುದ್ಧ 9 ರನ್‌ಗಳಿಂದ ಸೋಲಬೇಕಾಯಿತು.

ಸದ್ಯ ಮಿಥಾಲಿ ಅಂತಾರಾಷ್ಟ್ರೀಯ ಮಹಿಳಾ ಒಂದು ದಿನದ ಕ್ರಿಕೆಟ್‌ನಲ್ಲಿ7000 ರನ್‌ ಗಳಿಸಿದ ವಿಶ್ವದ ಮೊದಲ ಆಟಗಾರ್ತಿಯಾಗಿದ್ದಾರೆ. ಹಾಗೆಯೇ ಸತತ ಏಳು ಅರ್ಧ ಶತಕ ಗಳಿಸಿದ ದಾಖಲೆ, ಒನ್‌ಡೇಯಲ್ಲಿಅತಿ ಹೆಚ್ಚು ಅರ್ಧಶತಕ ಗಳಿಸಿದ ದಾಖಲೆ, 2018ರಲ್ಲಿನಡೆದ ಮಹಿಳಾ ಟ್ವೆಂಟಿ20 ವಿಶ್ವಕಪ್‌ನಲ್ಲಿ2000 ರನ್‌ ಪೂರೈಸಿದ ಮೊದಲ ಭಾರತದ ಕ್ರಿಕೆಟರ್‌ ಎಂಬ ದಾಖಲೆ, ಐಸಿಸಿ ಒನ್‌ಡೇ ವಿಶ್ವಕಪ್‌ನಲ್ಲಿಒಂದಕ್ಕಿಂತ ಹೆಚ್ಚು ಬಾರಿ ಫೈನಲ್‌ ಪಂದ್ಯದಲ್ಲಿನಾಯಕತ್ವ(2005 ಮತ್ತು 2017) ವಹಿಸಿದ ಮೊದಲ ಆಟಗಾರ್ತಿ ದಾಖಲೆ, 2019ರಲ್ಲಿನ್ಯೂಜಿಲೆಂಡ್‌ ವಿರುದ್ಧ ಒನ್‌ಡೇ ಸರಣಿಯಲ್ಲಿ200 ಪಂದ್ಯಗಳನ್ನಾಡಿದ ಮೊದಲ ಮಹಿಳಾ ಕ್ರಿಕೆಟರ್‌ ದಾಖಲೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ20 ವರ್ಷ ಪೂರೈಸಿದ ಮೊದಲ ಮಹಿಳಾ ಆಟಗಾರ್ತಿ ದಾಖಲೆ! ಉಶ್ಶಪ್ಪಾ.. ಎಷ್ಟೊಂದು ದಾಖಲೆಗಳು!

ಇಷ್ಟೆಲ್ಲದಾಖಲೆಗಳನ್ನು ಗುಡ್ಡೆ ಹಾಕಿದ ಮೇಲೆ ಪ್ರಶಸ್ತಿಗಳು ಬಾರದೆ ಹೋಗುತ್ತವೆಯೇ? ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಹಲವು ಪ್ರಶಸ್ತಿಗಳು ರಾಜ್‌ ಅವರನ್ನು ಅರಸಿ ಬಂದಿವೆ. 2017ರಲ್ಲಿವಿಸ್ಡನ್‌ ಲೀಡಿಂಗ್‌ ವುಮನ್‌ ಕ್ರಿಕೆಟರ್‌, 2003ರಲ್ಲಿಅರ್ಜುನ್‌ ಅವಾರ್ಡ್‌, 2015ರಲ್ಲಿಪದ್ಮಶ್ರೀ ಪ್ರಶಸ್ತಿ... ಹೀಗೆ ಹಲವು ಪ್ರಶಸ್ತಿಗಳು ಅವರ ಶೋಕೇಶ್‌ ಸೇರಿಕೊಂಡಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ20 ವರ್ಷ ಪೂರೈಸಿದ್ದರೂ ಅವರ ಕ್ರಿಕೆಟ್‌ ಪ್ರತಿಭೆಯ ಹೊಳಪು ದಿನದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೂ ಐದಾರು ವರ್ಷ ಕ್ರಿಕೆಟ್‌ ಆಡುವ ಕ್ಷ ಮತೆ ಅವರಲ್ಲಿದೆ ಎಂಬುದನ್ನು ಅವರು ಗಳಿಸುತ್ತಿರುವ ರನ್‌ಗಳೇ ಸಾರಿ ಹೇಳುತ್ತಿವೆ. ಮೂರೂ ಮಾದರಿಯ ಕ್ರಿಕೆಟ್‌ಗಳಲ್ಲಿಒಂದು ದಿನದ ಕ್ರಿಕೆಟ್‌ ಪಂದ್ಯವನ್ನೇ ಹೆಚ್ಚಾಗಿ ಇಷ್ಟಪಡುವ ಮಿಥಾಲಿಗೆ, ಬ್ಯಾಟಿಂಗ್‌ಗೆ ಸಚಿನ್‌ ತೆಂಡೂಲ್ಕರ್‌; ಕ್ಯಾಪ್ಟನ್‌ಶಿಪ್‌ಗೆ ರಿಕಿ ಪಾಂಟಿಂಗ್‌ ಆದರ್ಶ.

ಮಿಥಾಲಿ ಗೆಜ್ಜೆ ಕಟ್ಟಿಕೊಂಡರೆ ಭರತನಾಟ್ಯದ ಮೂಲಕ ಮನೆಸೂರೆಗೊಳ್ಳುವಂತೆ ಮಾಡಬಲ್ಲರು. ತಾಯಿ ಮತ್ತು ನೃತ್ಯ ಗುರು ತಮ್ಮ ಸ್ಫೂರ್ತಿಯೆಂದು ಅವರು ಆಗಾಗ ಹೇಳುತ್ತಾರೆ. ರಸಮಲಾಯಿ ಮತ್ತು ಪಿಸ್ತಾ ಐಸ್‌ಕ್ರೀಮ್‌ ಇಷ್ಟಪಡುವ ಮಿಥಾಲಿಗೆ ಅಡುಗೆ ಮತ್ತು ಹಾಡಲು ಬರುವುದಿಲ್ಲವಂತೆ. ಹಠವೇ ತಮ್ಮ ದೊಡ್ಡ ಶಕ್ತಿ ಎಂದು ಹೇಳಿಕೊಳ್ಳುವ ಮಿಥಾಲಿ ಅದರಿಂದಲೇ ಇಂದು ಲೆಜೆಂಡ್‌ ಸ್ಥಾನಕ್ಕೇರಿದ್ದಾರೆ. ಶಹಬ್ಬಾಸ್‌ ಮಿಥು!


ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯ 2021ರ ಮಾರ್ಚ್ ತಿಂಗಳ 21ನೇ ತಾರೀಖಿನ ಸಂಚಿಕೆಯಲ್ಲಿ ಪ್ರಕಟವಾಗಿದೆ



 

ಸೋಮವಾರ, ಮಾರ್ಚ್ 15, 2021

How to secure your Facebook profile?: ಫೇಸ್‌ಬಕ್ ಖಾತೆ ಸುರಕ್ಷಿತವಾಗಿಡುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ನಾವು ಈಗ ಸೋಷಿಯಲ್ ಮೀಡಿಯಾ ಯುಗದಲ್ಲಿ ಬದುಕುತ್ತಿದ್ದೇವೆ. ಸೋಷಿಯಲ್ ಮೀಡಿಯಾಗಳಿಲ್ಲದೇ ಬದುಕೇ ಇಲ್ಲ ಎನ್ನುವಷ್ಟರಮಟ್ಟಿಗೆ ನಾವು ಅವುಗಳಿಗೆ ದಾಸರಾಗಿದ್ದೇವೆ. ಈ ಜಾಲತಾಣಗಳಿಂದ ನಮಗೆ ಲಾಭ ಮತ್ತು ನಷ್ಟಗಳೆರಡೂ ಉಂಟು. ಅವುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ನಿಂತಿದೆ.

ಸೋಷಿಯಲ್ ಮೀಡಿಯಾಗಳ ಪೈಕಿ ಫೇಸ್‌ಬುಕ್ ಜನಪ್ರಿಯವಾಗಿರುವ ತಾಣವಾಗಿದೆ. ಅಂದಾಜು 2.8 ಶತಕೋಟಿ ಬಳಕೆದಾರರು ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿದ್ದಾರೆ ಎಂದರೆ ಅದರ ಅಗಾಧತೆಯನ್ನು ನೀವು ತಿಳಿದುಕೊಳ್ಳಬಹುದು. 

ಭಾರತದಲ್ಲಂತೂ ಫೇಸ್‌ಬುಕ್  ಸೇರಿದಂತೆ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಜನರು ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಆನ್‌ಲೈನ್ ಮೂಲಕ ಸ್ನೇಹಿತರನ್ನು ಸಂಪಾದಿಸುವುದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುವುದು ಇತ್ಯಾದಿ ಚಟುವಟಿಕೆಗಳಿಗೆ ಈ ತಾಣಗಳು ಅವಕಾಶವನ್ನು ಕಲ್ಪಿಸಿಕೊಡುತ್ತೇವೆ. ಈ ಫೇಸ್‌ಬುಕ್ ತಾಣವು ಎಲ್ಲೆಲ್ಲೋ ಇದ್ದವರನ್ನು ಒಂದೇ ಕ್ಲಿಕ್‌ನಲ್ಲಿ ಹತ್ತಿರವಾಗಿಸುತ್ತವೆ ಎಂಬುದು ಅಷ್ಟೇ ಸತ್ಯ. ಆದರೆ, ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅದರಿಂದ ಅಪಾಯಗಳ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ ಅಷ್ಟೇ ಖರೆ.

ಸಮುದ್ರದ ರೀತಿಯಲ್ಲಿರುವ ಈ ಫೇಸ್‌ಬುಕ್‌ನಲ್ಲಿ ಕೊಂಚ ಯಾಮಾರಿದರೂ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಫೇಸ್‌ಬುಕ್‌ನಲ್ಲಿ ಒಳ್ಳೆಯವರು ಸಕ್ರಿಯರಾಗಿರುವಂತೆ ಕೆಟ್ಟ ಬುದ್ಧಿಯವರೂ ಇದ್ದಾರೆ. ಹಾಗಾಗಿ ನಿಮ್ಮ ಪ್ರೊಫೈಲ್‌ನಲ್ಲಿರುವ ಮಾಹಿತಿಯನ್ನು, ನಿಮ್ಮ ಫೋಟೊಗಳನ್ನು ಕದ್ದು ಕುಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ನಾವು ಫೇಸ್‌ಬುಕ್‌ನಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಬಳಕೆದಾರರ ಸುರಕ್ಷತೆಗಾಗಿ ಫೇಸ್‌ಬುಕ್ ಕೂಡ ಹಲವು ಟೂಲ್‌ಗಳನ್ನು ಒದಗಿಸಿದೆ. ಅವುಗಳನ್ನು ಬಳಸಿಕೊಂಡು ನಿಮ್ಮ ಫೇಸ್‌ಬುಕ್ ಪುಟಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು. 

 ಪ್ರೊಫೈಲ್ ಸುರಕ್ಷತೆಗೆ ಹೀಗೆ ಮಾಡಿ

ಪ್ರೊಫೈಲ್ ಲಾಕ್ ಮಾಡಿ
ಸುರಕ್ಷತೆಯ ದೃಷ್ಟಿಯಿಂದ ಇದೊಂದು ಅತ್ತುತ್ಯಮ ಆಯ್ಕೆಯಾಗಿದೆ. ನೀವು ನಿಮ್ಮ ಪ್ರೊಫೈಲ್‌ ಅನ್ನು ಲಾಕ್ ಮಾಡಿದರೆ, ಯಾರಿಗೂ ನಿಮ್ಮ ಖಾತೆಯ ವಿವರವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಫ್ರೆಂಡ್ ಲಿಸ್ಟ್‌ನಲ್ಲಿದ್ದವರಿಗೆ ಮಾತ್ರವೇ ನಿಮ್ಮ ಪ್ರೊಫೈಲ್‌ ಅಕ್ಸೆಸ್ ಸಾಧ್ಯವಾಗುತ್ತದೆ. ಒಂದೊಮ್ಮೆ ಅಪರಿಚಿತರು ನಿಮ್ಮ  ಪ್ರೊಫೈಲ್‌ ನೋಡಬೇಕಾದರೆ ಅವರು ನಿಮಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಬೇಕು ಮತ್ತು ಅದನ್ನು ಅಕ್ಸೆಪ್ಟ್ ಮಾಡಿದಾಗ ಮಾತ್ರ ಪ್ರೊಫೈಲ್ ನೋಡಲು ಸಾಧ್ಯವಾಗುತ್ತದೆ. ಪ್ರೊಫೈಲ್ ಲಾಕ್ ಮಾಡಿದರೆ, ಹೊರಗಿನವರಿಗೆ ನಿಮ್ಮ ಟೈಮ್‌ಲೈನ್‌ನಲ್ಲಿರುವ ಯಾವುದೇ ಪೋಸ್ಟ್ ಆಗಲೀ ಅಥವಾ ಇತರ ಮಾಹಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ.

ಟೈಮ್‌ಲೈನ್ನಲ್ಲಿ ಏನಿರಬೇಕು?
ಫೇಸ್‌ಬುಕ್‌ ಪುಟದಲ್ಲಿ ನಿಮ್ಮ ಸ್ನೇಹಿತರು ಅನೇಕ ಪೋಸ್ಟ್‌ಗಳಿಗೆ ನಿಮ್ಮನ್ನು ಟ್ಯಗ್ ಮಾಡುತ್ತಿರುತ್ತಾರೆ. ಇದೆಲ್ಲವೂ ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಂಡು ಕಿರಿಕಿರಿ ಮಾಡುತ್ತಿರುತ್ತದೆ. ಇದನ್ನು ತಪ್ಪಿಸಲು  ಫೇಸ್‌ಬುಕ್ ನಿಮಗೆ ಟೈಮ್‌ಲೈನ್ ರಿವ್ಯೂ ಆಯ್ಕೆಯನ್ನು ನೀಡುತ್ತದೆ. ಈ ಟೈಮ್‌ಲೈನ್ ರಿವ್ಯೂ ಟೂಲ್ ಬಳಸಿಕೊಂಡು ಯಾವ ಪೋಸ್ಟ್‌ಗಳು ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಿಕೊಳ್ಳಬಹುದು. ಇದರಿಂದ ಅನಾವಶ್ಯಕ ಕಿರಿಕಿರಿಯನ್ನು ತಪ್ಪಿಸಿಕೊಳ್ಳಬಹುದು.

 ಆಡಿಯನ್ಸ್ ನಿರ್ಧರಿಸಿಕೊಳ್ಳಿ
ನೀವು ಪೋಸ್ಟ್ ಮಾಡುವ ಇಲ್ಲವೇ, ಷೇರ್ ಮಾಡುವ ಪೋಸ್ಟ್‌ಗಳನ್ನು ಯಾರು ನೋಡಬೇಕು, ನೋಡಬಾರದು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಹುದು. ಇದಕ್ಕಾಗಿ ಫೇಸ್‌ಬುಕ್ ಒದಗಿಸುವ ಆಡಿಯನ್ಸ್ ಸೆಲೆಕ್ಟರ್ ಆಯ್ಕೆಯನ್ನು ಬಳಸಿಕೊಳ್ಳಬೇಕು. ಈ ಟೂಲ್‌ನಿಂದ  ಬಳಕೆದಾರರು ಪೋಸ್ಟ್‌ಗಳನ್ನು ಯಾರು ವೀಕ್ಷಿಸಬಹುದು ಎಂದು ಸೆಟ್ ಮಾಡಬಹುದು. ಈ ಟೂಲ್‌ನಲ್ಲಿರುವ ಎವರೀವನ್ ಅಥವಾ ಫ್ರೆಂಡ್ಸ್ ಅಥವಾ ನಿಮಗೆ ಬೇಕಾದವರಿಗೆ ಮಾತ್ರವೇ ನಿಮ್ಮ ಪೋಸ್ಟ್ ತಲುಪುವ ಹಾಗೆ ಕಷ್ಟಮೈಸ್ ಕೂಡ ಮಾಡಿಕೊಳ್ಳಬಹುದು. 

ಮ್ಯಾನೇಜ್ ಆಕ್ಟಿವಿಟಿ
ನಿಮ್ಮ ಪೋಸ್ಟ್‌ಗಳನ್ನು ಡಿಲಿಟ್ ಮಾಡಲು ಇಳ್ಲವೇ ಆರ್ಕೈವ್ ಮಾಡಲು ಮ್ಯಾನೇಜ್ ಆಕ್ಟಿವಿಟಿ ನೆರವು ನೀಡುತ್ತದೆ. ಥ್ರ್ಯಾಶ್‌ಗೆ ಕಳುಹಿಸಲಾದ ಪೋಸ್ಟ್‌ಗಳು 30 ದಿನಗಳವರೆಗೂ ಅಂದರೆ ಆಟೋಮ್ಯಾಟಿಕ್ ಆಗಿ ಡಿಲಿಟ್ ಆಗೋವರೆಗೂ ಅಲ್ಲಿಯೇ ಇರುತ್ತವೆ. ಒಂದು ವೇಳೆ ಈ ಪೋಸ್ಟ್‌ಗಳನ್ನು ನೀವು ರಿಸ್ಟೋರ್ ಮಾಡಿಕೊಳ್ಳುವುದಾದರೆ 30 ದಿನಗಳ ಮುಂಚೆಯೇ ಮಾಡಿಕೊಳ್ಳಬೇಕು. ಆ ಬಳಿಕ ಮತ್ತೆ ಅವು ಸಿಗುವುದಿಲ್ಲ.





















(ಈ ಲೇಖನವು ವಿಜಯ ಕರ್ನಾಟಕದ 2021ರ ಮಾರ್ಚ್ 15ರ ಸಂಚಿಕೆಯಲ್ಲಿ ಪ್ರಕಟವಾಗಿದೆ)