ಸೋಮವಾರ, ಜೂನ್ 19, 2017

ಹುಡುಗನೊಬ್ಬನ ಗಜಲ್‌ಗಳು: ಜೀವ ಉಳಿಸಿದವಳು ಮಳೆಯಲ್ಲಿ ಕರಗಿದಳು

- ಪ್ರದ್ಯುಮ್ನ
ಈ ಮೋಡಗಳೇ ಅಡ್ನಾಡಿ. ಅದರಲ್ಲೂ ಬಯಲುಸೀಮೆಗೆ ಬಂದರೆ ಅವುಗಳದ್ದು ಚಿತ್ತ ಚಾಂಚಲ್ಯ. ಒಂದಿಷ್ಟು ಗಾಳಿ ಸೋಕಿದರೂ ಸಾಕು ಸಲುಗೆ ಬೆಳೆಸಿ ಕೈ ಕೊಡುತ್ತವೆ. ಬಿಸಿಲಿಗೆ ಬೆಂಡಾಗಿ ಬಾಯ್ತೆರೆದ ಭೂಮಿಗೆ ದೂರದಿಂದಲೇ ಆಸೆ ತೋರಿಸಿ ಕಾಲು ಕೀಳುವ ಈ ಮೋಡಗಳೂ ಹಳೆ ಗೆಳತಿಯ ನೆನಪಿನ ಹಾಗೆ.
ವಸಂತಕಾಲದಲ್ಲಿ ಸುರಿಯೋ ಅಡ್ಡಾದಿಡ್ಡಿ ಮಳೆಗೆ ಬಿರುಸು, ದಾಢಸಿತನ. ಈ ಮಳೆಗಾಲದ ಮಳೆ ಒಮ್ಮಮ್ಮೆ ಕೋಮಲೆ, ಮತ್ತೊಮ್ಮೆ ಸುಕೋಮಲೆ. ತಂಪಾದ ವಾತಾವರಣದಲ್ಲಿ ಆಗಾಗ ನಾಲ್ಕಾರು ಹನಿಗಳನ್ನು ಉದುರಿಸುತ್ತ, ಚೆಲ್ಲಾಟವಾಡುವ ನೈಸರ್ಗಿಕದತ್ತ ಸ್ವಭಾವ. ಮತ್ತೊಮ್ಮೆ ಕೋಪಗೊಂಡ ಪ್ರೇಯಸಿಯ ಹಾಗೆ ಭೋರ್ಗರೆಯುವ ಪ್ರತಾಪ-ಪ್ರಲಾಪ. ಈ ಕೋಪಕ್ಕೆ ಹಳೆಯ ಮಣ್ಣಿನ ಮನೆಗಳೆಲ್ಲ ಚಿಂದಿ ಚಿಂದಿ; ಓಣಿ ತುಂಬ ಕೆಸರು. ಸಂಜೆ ಸೂರ್ಯಾಸ್ತವೂ ಡಲ್ಲು. ಹೊರಗೆ ಕಾಲಿಡಲು ಆಗದಂತೆ ಮಾಡುವ ಈ ಮಳೆಗೆ ಒಂಚೂರೂ ಕರುಣೆ ಇಲ್ಲ ಎಂದೆನಿಸಿತು. ತನ್ನೆಲ್ಲ ಸಿಟ್ಟು ಸೆಡವನ್ನು ಮನಸೋಯಿಚ್ಛೆ ತೋರುವ ಮಳೆಗಾಲ ಅನೇಕರಲ್ಲಿ ಭಾವನೆಗಳಿಗೆ ಮರಿ ಹಾಕುವ ಸಕಾಲ ಎಂದು ಮನದೊಳಗೇ ಹೀಗೆ ಏನೇನೊ ಲೆಕ್ಕ ಹಾಕುತ್ತ ಕುಳಿತಿದ್ದ ಆತನಿಗೆ, ಕಿಟಕಿಯ ಮಾಡಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳು ಆಗ ತಾನೇ ಸುರಿದು ಮಾಯವಾ
ದ ಮಳೆಗೆ ಸಾಕ್ಷಿ ಹೇಳುತ್ತಿದ್ದವು. ಮಲೆನಾಡಿನಲ್ಲಿ ಹೇಗೋ ಗೊತ್ತಿಲ್ಲ. ಆದರೆ, ಬಯಲುಸೀಮೆಯಲ್ಲಿ ಮಳೆಯ ಸ್ವರೂಪವೇ ಚಿತ್ರ-ವಿಚಿತ್ರ. ಬಟಾಬಯಲಾಗುವ ಆಕಾಶದಲ್ಲಿ ಒಮ್ಮಿಲೇ ಕಪ್ಪು ಮೋಡಗಳು ದಂಡೆತ್ತಿ ಬಂದು ಇನ್ನೇನು ಜೋರು ಮಳೆ ಬೀಳುತ್ತದೆ ಎನ್ನುವಷ್ಟರಲ್ಲೇ, ಗಾಳಿಯೊಂದಿಗೆ ಮಾಯವಾಗುತ್ತವೆ. ಅದರ ಹಿಂದೆಯೇ ಬಿಳಿ ಮೋಡಗಳು ಆಕಾಶದಲ್ಲಿ ತೇಲುತ್ತವೆ. ಒಂದೇ ಕ್ಷಣದಲ್ಲಿ ತಂಪಾದ ವಾತಾವರಣ ತುಸು ಬೆಚ್ಚನೆಯ ಜಾಯಮಾನಕ್ಕೆ ಬದಲಾಗುತ್ತದೆ. ಮನಸ್ಸು ಹಾಗೆ ಅಲ್ಲವೇ? ಯಾವುದೋ ಸಿಹಿಯಾದ ನೆನಪಿನೊಂದಿಗೆ ಜೋಕಾಲಿ ಜೀಕುತ್ತಿರುವಾಗಲೇ ಅದರ ಹಿಂದೆಯೇ ಅಪ್ಪಳಿಸುವ ದುರಂತದ ನೆನಪಿನ ದಂಡು ನಮ್ಮನ್ನು ಭಂಗಗೊಳಿಸುತ್ತದೆ.
ಕಿಟಕಿಯಿಂದ ಆಚೆ ನೋಡುತ್ತಿದ್ದ ಅವನಿಗೆ, ಮಕ್ಕಳಿಬ್ಬರು ರಸ್ತೆಯಲ್ಲಿನ ಹೊಂಡದಲ್ಲಿ ನಿಂತಿದ್ದ ನೀರಿನಲ್ಲಿ ಕಾಗದದ ದೋಣಿ ತೇಲಿಬಿಟ್ಟು ಚಪ್ಪಾಳೆ ಹೊಡೆಯುತ್ತಿದ್ದದ್ದು ಕಾಣಿಸಿತು. ಅವರಿಗೆ ಎದುರಾಗಿರುವ ಬಯಲಿನಿಂದ ನಾಲ್ಕಾರು ಎಮ್ಮೆಗಳನ್ನು ಮೇಯಿಸಿಕೊಂಡು ಬರುತ್ತಿದ್ದ ಇಬ್ಬರು ಹುಡುಗರ ತಲೆ ಮೇಲೂ ಮಳೆ ಆಸರೆಗಾಗಿ ತಟ್ಟಿನ ಚೀಲಗಳಿದ್ದವು. ನೆನೆದಿದ್ದರಿಂದ ಅವುಗಳಿಂದಲೂ ತೊಟ್ಟಿಕ್ಕುತ್ತಿದ್ದ ಹನಿಗಳು ಅವರಿಬ್ಬರ ಕಾಲುಗಳಿಂದ ಇಳಿದು ಪಾದಕ್ಕೆ ಅಂಟಿ ಕೊನೆಯಾಗುತ್ತಿದ್ದವು... ಹೀಗೆ ಸೂಕ್ಷ್ಮವಾಗಿ ಅದನ್ನೆಲ್ಲ ಗಮನಿಸುತ್ತಿದ್ದ ಆತನ ಮನದೊಳಗೆ ಬೇಡ ಬೇಡ ಎಂದರೂ ಆ ಘಟನೆ ಮತ್ತೆ ಮತ್ತೆ ಇಣಕುತ್ತಿತ್ತು.
ಅದನ್ನು ನೆನಪಿಸಿಕೊಂಡರೇ ಈಗಲೂ ಅವನ ಮೈ ಬೆವರುತ್ತದೆ. ಆ ಶಾಕ್‌ನಿಂದ ಆತ ಹೊರಗೆ ಬರಲು ಸುಮಾರು ದಿನಗಳನ್ನೇ ತೆಗೆದುಕೊಂಡಿದ್ದ. ಆದರೂ ಪ್ರತಿ ಮಳೆಗಾಲದಲ್ಲಿ ಆ ಘಟನೆ ಆತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ತನ್ನಿಂದಾಗಿಯೇ ತನ್ನನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಜೀವವೊಂದನ್ನು ಬಲಿಕೊಡಬೇಕಾಯಿತು ಎಂದು ತಪ್ಪಿತಸ್ಥ ಭಾವದಲ್ಲಿರುತ್ತಾನೆ. ಅವರಿಬ್ಬರು ಪ್ರೀತಿಸಿ ಮದ್ವೆಯಾದವರಲ್ಲ. ಆದರೆ, ಮದ್ವೆಯಾಗಿ ಹುಚ್ಚರಂತೆ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದವರು. ಆಕೆಯೇನೂ ತುಂಬ ಓದಿದವಳಲ್ಲ. ತನ್ನೂರಲ್ಲಿದ್ದ ಹೈಸ್ಕೂಲ್‌ವರೆಗೆ ಮಾತ್ರ ಓದಿದ್ದಳು. ಆದರೆ ಅವಳಲ್ಲಿದ್ದ ಪ್ರೌಢಿಮೆ ಒಮ್ಮಮ್ಮೆ ಇವನಿಗೆ ಅಚ್ಚರಿ ಮೂಡಿಸುತ್ತಿತ್ತು. ಡಿಗ್ರಿ ಓದಿ, ಹೈಸ್ಕೂಲ್ ಟೀಚರ್ ಆಗಿದ್ದರೂ ಆಕಿಗಿರುವ ಜಾಣ್ಮೆ ತನ್ನಲ್ಲಿಲ್ಲ ಎಂದು ಅದೆಷ್ಟೋ ಬಾರಿ ಅಂದುಕೊಂಡಿದ್ದ. ಅವರಿಬ್ಬರ ಪುಟ್ಟ ಸಂಸಾರ ನಿಜಕ್ಕೂ ಹೊಟ್ಟೆಕಿಚ್ಚು ತರಿಸುವಂತಿತ್ತು.
ವಂಸತದ ಮಳೆ
ನಮ್ಮ ಈ ಪಲ್ಲಕ್ಕಿಯಲ್ಲಿ
ನಿನ್ನ ಮೆಲು ಪಿಸುಮಾತುಗಳು
ಜಪಾನಿನ ಹಾಯ್ಕುನಂತಿತ್ತು ಅವರಿಬ್ಬರ ಸಾಂಗತ್ಯ. ಒಬ್ಬರಿಗೊಬ್ಬರು ಎಂದೂ ಹಂಗಿಸಿಕೊಂಡವರಲ್ಲ; ಹೀಯಾಳಿಸಿಕೊಂಡವರಲ್ಲ. ಹಾಗೆಂದ ಮಾತ್ರಕ್ಕೆ ಆಕೆಯೇನೂ ಅಪೂರ್ವ ಸುಂದರಿಯಲ್ಲ; ಲಕ್ಷಣವಂತೆ. ಗುಣವಂತೆ. ಅವನೂ ಅಷ್ಟೇ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ನಿಲುವು. ಅವರಿಬ್ಬರ ನಡುವಿನ ಸಾಮರಸ್ಯ, ಒಲವು, ಚೆಲುವು, ಪ್ರೀತಿ, ಬೆಸುಗೆ, ಬಂಧನ ಆ ಚಿಕ್ಕ ಹಳ್ಳಿಯಲ್ಲಿ ಮನೆ ಮಾತಾಗಿತ್ತು. ಇದು ಅವರಿಗೂ ಆಗಾಗ ಕಿವಿಗೆ ಬೀಳುತ್ತಿತ್ತು. ಆದರೆ, ಅದರಿಂದೇನೂ ಉಬ್ಬಿ ಹೋದವರಲ್ಲ.
ಇಂಥದೊಂದು ಅಪರೂಪದ ಪ್ರೇಮಗೀತೆಗೆ ಶೋಕದ ಭಾವ ತುಂಬಲು ಆ ವಿಧಿ ಕಾದು ಕುಳಿತಿತ್ತು ಕಾಣುತ್ತದೆ. ಅಂದು ಹಾಗೆಯೇ; ಮಳೆ ಬರುವ ಯಾವ ಮುನ್ಸೂಚನೆಯೂ ಇರಲಿಲ್ಲ. ಆಕಾಶದಲ್ಲಿ ಬಿಳಿ ಮೋಡಗಳ ಕಾರುಬಾರು ಜೋರಾಗಿತ್ತು. ಆ ಮೋಡಗಳೆಲ್ಲ ನಾನಾ ಆಕಾರದಲ್ಲಿ ರಚಿತಗೊಂಡು ಊಹೆಗೆ ತಕ್ಕಂತೆ ಬದಲಾಗುತ್ತಿದ್ದವು. ರಜೆ ದಿನವಾದ್ದರಿಂದ ಆತ ಮನೆಯ ಅಂಗಳದಲ್ಲಿ ನಿಂತ ಬಿಳಿ ಮೋಡಗಳ ಚಿತ್ತಾಕರ್ಷಕ ವೈಚಿತ್ರ್ಯವನ್ನು ನೋಡುತ್ತ ನಿಂತಿದ್ದ. ‘‘ಮಳೆ ಬರುವ ಲಕ್ಷಣಗಳಿಲ್ಲ. ಊರ ಹೊರಗಿನ ದೇವಸ್ಥಾನಕ್ಕೆ ಹೋಗಿ ಬರೋಣ,’’ ಎಂದು ಆಕೆ ಮನೆಯ ಹೊಸ್ತಿಲಲ್ಲಿ ನಿಂತು ಕೇಳಿದಳು. ಆಕಾಶ ನೋಡುತ್ತಿದ್ದವನು ಹಾಗೆಯೇ, ‘‘ಆಯ್ತು ಹೋಗೋಣ, ವಾತಾವರಣವೂ ಚೆನ್ನಾಗಿದೆ,’’ ಎಂದ.
ಅವರಿಬ್ಬರೂ ಆಗಾಗ ಆ ದೇವಸ್ಥಾನಕ್ಕೆ ಹೋಗುತ್ತಿದ್ದರು. ದೇವಸ್ಥಾನದ ಹತ್ತಿರದಲ್ಲಿ ಒಂದು ಸಣ್ಣ ಹಳ್ಳ. ಬೇಸಿಗೆಯಲ್ಲಿ ಅದು ಹೊಲಗಳಿಗೆ ಹೋಗಲು ಕಾಲು ದಾರಿಯಾಗಿರುತ್ತಿತ್ತು. ಮಳೆಗಾಲದಲ್ಲಿ ಒಂದಿಷ್ಟು ನೀರು ಹರಿದು, ಹಳ್ಳದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಅವರಿಬ್ಬರೂ ದೇವಸ್ಥಾನಕ್ಕೆ ಹೋದಾಗಲೆಲ್ಲ ಆ ಹಳ್ಳದ ಗುಂಟ ಸುಮಾರು ದೂರ ಕ್ರಮಿಸಿ, ವಾಪಸ್ಸು ಬಂದು, ದೇಗುಲದ ಪಕ್ಕದಲ್ಲಿರುವ ಹಳೆಯ ಆಲದ ಮರ ಬುಡದಲ್ಲಿ ಕುಳಿತು ಮನೆಗೆ ಮರಳುತ್ತಿದ್ದರು.
ಅವರಿಬ್ಬರು ಜತೆಗೂಡಿ ದೇವಸ್ಥಾನಕ್ಕೆ ಹೋಗುವ ಹೊತ್ತಿನಲ್ಲಿ ಆಕಾಶದಲ್ಲಿ ಬಿಳಿ ಮೋಡಗಳು ಕರಗಿ, ಕಪ್ಪು ಮೋಡಗಳು ದಂಡೆತ್ತಿ ಬರುತ್ತಿದ್ದವು. ಕೂಗಳತೆ ದೂರದಲ್ಲಿದ್ದ ದೇವಸ್ಥಾನ ತಲುಪುವ ಹೊತ್ತಿಗೆ ದಪ್ಪ ದಪ್ಪ ಹನಿಗಳು ಮುಖದ ಮೇಲೆ ರಪ್ಪಂತ ಬಿದ್ದವು. ಇದು ಧಾರಾಕಾರವಾಗಿ ಸುರಿಯುವ ಮಳೆ ಎಂಬ ಮುನ್ಸೂಚನೆ ದೊರೆಯಿತು. ದೇವಸ್ಥಾನ ಸೇರಿಕೊಳ್ಳುವ ಹೊತ್ತಿಗೆ ತೋಯ್ದು ತೊಪ್ಪೆಯಾಗುವುದು ಖಂಡಿತ ಎಂಬುದು ಅರಿವಾಗುತ್ತಲೇ ಅಲ್ಲೇ ಪಕ್ಕದಲ್ಲಿದ್ದ ಆ ಆಲದ ಮರದ ಬುಡಕ್ಕೆ ಬಂದು ನಿಂತರು. ಮಳೆ ಭೋರ್ಗರೆಯಲಾರಂಭಿಸಿತು. ಸುಮಾರು ಹೊತ್ತು ಸುರಿದ ಮಳೆ ಒಂದಿಷ್ಟು ನಿತ್ರಾಣಗೊಳ್ಳುತ್ತಿದ್ದಂತೆ, ಆಕಾಶದಲ್ಲಿ ಮೋಡಗಳ ಚಲನೆ ಹೆಚ್ಚಾಯಿತು. ಗಾಳಿಯೂ ವೇಗ ಪಡೆದುಕೊಂಡಿತ್ತು. ಅವರು ನಿಂತಿದ್ದ ವಿರುದ್ಧ ದಿಕ್ಕಿನಲ್ಲೇ ಸಿಡಿಲು ಸಂಚಾರವಾಗುತ್ತಲೇ ಇತ್ತು. ಬೆಳ್ಳಂ ಬೆಳಗಿನಂತಿದ್ದ ವಾತಾವರಣ ಪೂರ್ತಿ ಮಬ್ಬುಗತ್ತಲಿನೊಳಗೇ ಲೀನವಾಯಿತು. ಹತ್ತಿರದಲ್ಲಿದ್ದ  ಕಾಲು ದಾರಿಯಂಥ ಹಳ್ಳದಲ್ಲಿ ಒಂದಿಷ್ಟು ನೀರು ಸರಸರನೇ ಓಡುತ್ತಿತ್ತು. ಅದರ ಜತೆಗೆ ನಾಯಿ ಮರಿ ನೀರಿನ ಚಲನೆಯಿಂದ ಹೊರ ಬರದೆ ಅದರೊಂದಿಗೆ ಜಾರಿಕೊಂಡು ಹೋಗುತ್ತಿತ್ತು. ನಾಯಿಮರಿ ಕಂಡ ಅವಳು, ‘‘ಅಯ್ಯ ನಾಯಿ ಮರಿ ಸತ್ತೇ ಹೋಗ್ತದೇರಿ, ಆ ನೀರಿನ ರಭಸಕ್ಕೆ. ಅದನ್ನ ಎತ್ತಿಕೊಂಡು ಬನ್ನಿ,’’ ಎಂದಳು. ಆ ಸಣ್ಣ ಹಳ್ಳದಲ್ಲಿ ಹರಿಯುತ್ತಿದ್ದ ನೀರಿಗೆ ಅಂಥ ರಭಸತನವೇನೂ ಇರಲಿಲ್ಲ. ಆದರೆ, ಅದು ನಾಯಿಮರಿಯ ಶಕ್ತಿಗೂ ಮೀರಿತ್ತು. ಆದರೆ, ಇತ್ತ ಆಕಾಶ ತುಂಬ ಗುಡುಗಿನ ಆರ್ಭಟ; ಆಗಾಗ ಸಿಡಿಲಿನ ಸಂಚಾರ. ಇನ್ನೂ ಈ ಮರದ ಬುಡದಲ್ಲಿ ನಿಂತರೆ ಅಪಾಯ ತಪ್ಪಿದ್ದಲ್ಲ, ಹೇಗಿದ್ದರೂ ನೆನೆದುಕೊಂಡಾಗಿದೆ, ಮಳೆಯೂ ಸ್ವಲ್ಪ ನಿತ್ರಾಣಗೊಂಡಿದೆ. ಓಡೋಡಿ ದೇವಸ್ಥಾನ ಸೇರಿಕೊಳ್ಳುವುದು ಸೂಕ್ತ ಎಂದು ಲೆಕ್ಕಾಚಾರ ಹಾಕುತ್ತಿದ್ದ ಆತನಿಗೆ, ನಾಯಿಮರಿಯನ್ನು ಹಾಗೇ ಬಿಟ್ಟು ಹೋಗುವುದಕ್ಕೆ ಮನಸ್ಸು ಬರಲಿಲ್ಲ. ಹೆಂಡತಿಗಿದ್ದ ಕರುಣೆಯ ಭಾವ ಗೊತ್ತಿದ್ದ ಆತ, ಆಕೆಯ ಮಾತನ್ನು ತೆಗೆದು ಹಾಕುವ ಸ್ಥಿತಿಯಲ್ಲೂ ಇರಲಿಲ್ಲ. ಆದರೆ, ಆತನಿಗೇನು ಗೊತ್ತಿತ್ತು;  ನಾಯಿ ಜೀವ ಉಳಿಸಲು ಹೋದವನಿಗೆ ತಾನು ಏನು ಕಳೆದುಕೊಳ್ಳಬಲ್ಲೆ ಎಂಬುದು?
ಬೀಸುತ್ತಿದ್ದ ಗಾಳಿಗೆ ಇದಿರಾಗಿ ಓಡಿ ಹೋದ ಅವನು, ನೀರಿನೊಂದಿಗೆ ಹರಿದುಕೊಂಡು ಹೋಗುತ್ತಿದ್ದ ನಾಯಿ ಮರಿ ಎತ್ತಿ ಇನ್ನೇನು ಆ ಮರದತ್ತ ಓಡಬೇಕು ಎನ್ನುವಷ್ಟರಲ್ಲಿ, ಕ್ಷಣಾರ್ಧದಲ್ಲಿ ಆತನ ಊಹೆಗೆ ನಿಲುಕದ ಅವಘಡ ನಡದೇ ಹೋಯಿತು. ಮರದ ಬುಡದಲ್ಲಿದ್ದ ಪ್ರೀತಿಯ ಹೆಂಡತಿ ಸುಂದರ ಸಿಡಿಲಿನ ಕ್ರೌರ್ಯಕ್ಕೆ ಬಲಿಯಾಗಿದ್ದಳು. ಆ ಆಲದ ಮರ ಅರ್ಧ ಸುಟ್ಟು ಹೋಗಿತ್ತು. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿಯೇ ಎಲ್ಲವೂ ಮುಗಿದು ಹೋಗಿತ್ತು.
***
ಈಗ ಅದೇ ನಾಯಿ ಮರಿ ಅವನ ಮನೆಯಲ್ಲಿ ಬೆಳೆದು ದೊಡ್ಡದಾಗಿದೆ. ಅವನು ನಿಧಾನವಾಗಿ ಆ ಶಾಕ್‌ನಿಂದ ಹೊರ ಬಂದಿದ್ದಾನೆ. ಈ ಮಧ್ಯೆ ಐದಾರು ಮಳೆಗಾಲವೂ ಸುರಿದು ಹೋಗಿವೆ. ಆದರೆ, ಪ್ರತಿ ಮಳೆಗಾಲ ಬಂದಾಗ ಆತನಿಗೆ ದುರಂತ ನೆನಪುಗಳು ಬಿಟ್ಟು ಬಿಡದೆ ಕಾಡುತ್ತವೆ. ಹಾಗೆ ಕಾಡಿದಾಗಲೆಲ್ಲ ಆಕೆಯ ಸಮಾಧಿ ಬಳಿ ಹೋಗಿ ತುಸು ಹೊತ್ತು ಧ್ಯಾನಸ್ಥನಾಗುತ್ತಾನೆ. ಯಾವಾಗಲೋ ಓದಿದ, ಜಪಾನಿನ ಬಾಶೋ ಕವಿಯ ಹಾಯ್ಕು ಆ ಸಮಾಧಿ ಬಳಿ ಹೋದಾಗಲೆಲ್ಲ ಆತನಿಗೆ ಗೊತ್ತಿಲ್ಲದ ಹಾಗೆಯೇ ಬಡಬಡಿಸುತ್ತಾನೆ.
ನಾವು ಮತ್ತೆ ಭೇಟಿಯಾಗೋಣ
ಈ ಹೂಬಿಡುವ ಸಮಾಧಿ ಬಳಿ
ಎರಡು ಬಿಳಿ ಪಾತರಗಿತ್ತಿಯಾಗಿ

(ಈ ಲೇಖನ ವಿಜಯ ಕರ್ನಾಟಕದ ಜೂನ್ 18, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಮಂಗಳವಾರ, ಜೂನ್ 6, 2017

ವ್ಯಕ್ತಿಗತ- ‘ಬಿಪಿ’ ಹೆಚ್ಚಿಸುವ ರಾವತ್!

ಮಲ್ಲಿಕಾರ್ಜುನ ತಿಪ್ಪಾರ
ಮೇಜರ್ ಗೊಗೊಯಿ ಅವರು ಕಲ್ಲುತೂರಾಟಗಾರನೊಬ್ಬನನ್ನು ಸೇನಾ ಜೀಪಿಗೆ ಕಟ್ಟಿ ತಮ್ಮನ್ನೂ ಸೇರಿದಂತೆ ಚುನಾವಣಾ ಹಾಗೂ ಸೇನಾ ಸಿಬ್ಬಂದಿಯನ್ನು ರಕ್ಷಿಸಿದ ಘಟನೆ ದೊಡ್ಡ ಸುದ್ದಿಯಾಯಿತು. ಸೇನೆಯ ಅಧಿಕಾರಿಯೊಬ್ಬರು ಮಾನವನನ್ನು ಗುರಾಣಿಯ ರೀತಿಯಲ್ಲಿ ಬಳಸಿಕೊಂಡಿದ್ದು ಎಷ್ಟು ಸರಿ ಮತ್ತು ತಪ್ಪು ಎಂಬ ಚರ್ಚೆಗಳು ಇನ್ನೂ ನಡೆದಿವೆ. ಆದರೆ, ಸೇನಾ ಮುಖ್ಯಸ್ಥರು ಈ ಪ್ರಕರಣವನ್ನು ಯಾವ ರೀತಿ ನೋಡುತ್ತಾರೆಂಬುದು ಬಹುತೇಕರ ಕುತೂಹಲವಾಗಿತ್ತು. ಈ ವಿಷಯದಲ್ಲಿ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ವಿಭಿನ್ನ ದಾರಿ ತುಳಿದರು. ಸಾರ್ವಜನಿಕವಾಗಿಯೇ ಮೇಜರ್ ಗೊಗೊಯಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಕೆಳದರ್ಜೆಯ ಸೇನಾ ಸ್ತರದಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು. ಶಿಸ್ತುಬದ್ಧ ಸೈನ್ಯದ ಅಧಿಕಾರಿಯೊಬ್ಬರು ಇಂಥ ದಾರಿ ಅನುಸರಿಸುವುದರ ಕುರಿತಾದ ಪರಾಮರ್ಶೆಯ ಆಚೆ ನಿಂತು ನೋಡಿದಾಗ ಸೇನೆಯ ಕಾರ್ಯತಂತ್ರಗಳು ಬದಲಾಗಿರುವುದು ಸ್ಪಷ್ಟವಾಗುತ್ತದೆ. ಇದರ ಹಿಂದೆ ಜನರಲ್ ಬಿಪಿನ್ ರಾವತ್ ಅವರ ಹೆಚ್ಚುಗಾರಿಕೆ ಮತ್ತು ಜಾಣ್ಮೆಯೂ ಅಡಗಿದೆ. ಗೊಗೊಯಿ ಅವರನ್ನು ಬೆಂಬಲಿಸುವ ಮೂಲಕ ಕಾಶ್ಮೀರ ಕಣಿವೆಯ ಪ್ರಕ್ಷುಬ್ಧ ಸ್ಥಿತಿಗೆ ಕಾರಣವಾದವರಿಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.
ಇಂಥ ಬಿಪಿನ್ ರಾವತ್ ಅವರು ತಾವು ಸೇನಾ ಮುಖ್ಯಸ್ಥರಾಗುವ ಬಗ್ಗೆ ಯೋಚಿಸಿರಲಿಕ್ಕೂ ಇಲ್ಲ. ಯಾಕೆಂದರೆ, ಸಂಪ್ರದಾಯದಂತೆ ಸೇವಾ ಜೇಷ್ಠತೆ ಆಧಾರದ ಮೇಲೆಯೇ ಜನರಲ್ ಸ್ಥಾನಕ್ಕೇರುವುದು ಭಾರತೀಯ ಸೇನೆಯಲ್ಲಿ ನಡೆದುಕೊಂಡು ಬಂದಿದೆ. ಈ ಸಂಪ್ರದಾಯವನ್ನು 1983ರಲ್ಲಿ ಇಂದಿರಾ ಗಾಂಧಿ ಅವರು ಮೊದಲ ಬಾರಿಗೆ ಮುರಿದರು. ನಂತರ ಯಥಾಸ್ಥಿತಿ ಇತ್ತು. ವಾಸ್ತವದಲ್ಲಿ ಸೇವಾ ಜೇಷ್ಠತೆ ಆಧಾರದ ಮೇಲೆ ಲೆಫ್ಟಿನೆಂಟ್ ಜನರಲ್‌ಗಳಾದ ಭಕ್ಷಿ ಮತ್ತು ಹಾರಿಝ್ ಅವರು ಮುಖ್ಯಸ್ಥರಾಗಬೇಕಿತ್ತು. ಆದರೆ, ಮೋದಿ ಸರಕಾರ ಮಾತ್ರ, ಸೇನಾ ಮುಖ್ಯಸ್ಥ ಸ್ಥಾನಕ್ಕೆ ಆಯ್ದುಕೊಂಡಿದ್ದು ‘ಮ್ಯಾನ್ ಆಫ್ ಆ್ಯಕ್ಷನ್’ ಎಂದೇ ಕರೆಯಿಸಿಕೊಂಡಿದ್ದ ಬಿಪಿನ್ ರಾವತ್ ಅವರನ್ನು. ಅಲ್ಲಿಗೆ, ಸೇನಾ ಮುಖ್ಯಸ್ಥರ ನೇಮಕ ವಿಷಯದಲ್ಲಿ ಮತ್ತೊಮ್ಮೆ ಇತಿಹಾಸ ಮರುಕಳಿಸಿತು.

ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳ ‘ಗಡಿ ನಿಯಂತ್ರಣ’ ರೇಖೆಯಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದ ರಾವತ್ ಅವರೇ ಈಗಿನ ಪರಿಸ್ಥಿತಿಯಲ್ಲಿ ಸೇನೆ ಮುಖ್ಯಸ್ಥರಾಗುವುದು ಹೆಚ್ಚು ಸೂಕ್ತ ಕೂಡ ಆಗಿತ್ತು. ಬರೋಬ್ಬರಿ ಮೂರು ದಶಕಗಳು ಸೇನೆಯ ವಿವಿಧ ಶ್ರೇಣಿಗಳಲ್ಲಿ ಸೇವೆ ಸಲ್ಲಿಸಿರುವ ರಾವತ್ ಅವರು, ಚೀನಾ ಗಡಿಯ ಈಸ್ಟರ್ನ್ ಸೆಕ್ಟರ್, ಪುಲ್ವಾಮಾದಲ್ಲಿ ಕಾರ್ಯಾಚರಣೆ ಹೊಣೆ ಹೊತ್ತು ಯಶಸ್ವಿಯಾಗಿದ್ದರು. ಜತೆಗೆ ಈಶಾನ್ಯ ರಾಜ್ಯದಲ್ಲೂ ಕಾರ್ಯಾಚರಣೆ ಜವಾಬ್ದಾರಿಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕ, ಸೇನಾ ಪ್ರಧಾನ ಕಚೇರಿಯ ಸೇನಾ ಕಾರ್ಯಾಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಟ್ರ್ಯಾಕ್ ರೆಕಾರ್ಡ್‌ನಲ್ಲಿ ಹೆಚ್ಚು ಗಮನ ಸೆಳೆಯುವ ಸಂಗತಿ ಎಂದರೆ; ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಕಾಂಗೋ ದೇಶದಲ್ಲಿ ಅವರು ತೋರಿದ ಪ್ರದರ್ಶನ.  ಸರ್ಜಿಕಲ್ ದಾಳಿಗಳನ್ನು ಸಂಘಟಿಸುವುದರಲ್ಲಿ ರಾವತ್ ಅವರು ಎಕ್ಸ್‌ಫರ್ಟ್. ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಭಾರಿ ಅನುಭವವ ಹೊಂದಿರುವ  ಇವರು, ಪಾಕಿಸ್ತಾನ ಜತೆಗಿನ ಎಲ್‌ಒಸಿ(ಗಡಿ ನಿಯಂತ್ರಣಾ ರೇಖೆ) ಮತ್ತು ಚೀನಾ ಜತೆಗಿನ ಎಲ್‌ಎಸಿ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ದಾಳಿಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.  ಸೇನಾ ಮುಖ್ಯಸ್ಥರಾಗುವ ಮುಂಚೆ ರಾವತ್ ಅವರು ಸದರ್ನ್ ಕಮಾಂಡ್‌ನ ಮುಖ್ಯಸ್ಥರಾಗಿ ಪುಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಉತ್ತರಾಖಂಡ ರಾಜ್ಯದ ಪೌಡಿ ಗಡ್ವಾಲ್ ಜಿಲ್ಲೆಯವರಾದ ರಾವತ್ ಅವರು ಜನಿಸಿದ್ದು ಸೇನಾ ಹಿನ್ನೆಲೆಯ ಕುಟುಂಬದಲ್ಲಿ. ಇವರ ತಂದೆ ಲಚು ಸಿಂಗ್ ರಾವತ್ ಕೂಡ ಸೇನಾಧಿಕಾರಿ. ಡೆಹ್ರಾಡೂನ್‌ನ ಕ್ಯಾಂಬ್ರಿಯನ್ ಹಾಲ್ ಬೋರ್ಡಿಂಗ್ ಸ್ಕೂಲ್, ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್ ಮತ್ತು ಅಮೆರಿಕದ ವೆಲ್ಲಿಂಗ್ಟನ್ ಆ್ಯಂಡ್ ಹೈಯರ್ ಕಮಾಂಡ್‌ನಿಂದ ಪದವಿ ಪಡೆದಿರುವ ಬಿಪಿನ್ ಅವರು, ರಕ್ಷಣೆ ಸಂಬಂಧಿಯ ಅಧ್ಯಯನಕ್ಕಾಗಿ ಮದ್ರಾಸ್ ವಿವಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. ಮೀರತ್‌ನಲ್ಲಿರುವ ಚೌಧರಿ ಚರಣ್ ಸಿಂಗ್ ವಿವಿಯಲ್ಲಿ ಪಿಎಚ್‌ಡಿ ಕೂಡ ಮಾಡಿದ್ದಾರೆ.
1978 ಡಿಸೆಂಬರ್ 6ರಂದು 11ನೇ ಗೋರ್ಖಾ ರೈಫಲ್ಸ್‌ನ  5ನೇ ಬೆಟಾಲಿಯನ್ ಸೇರಿಕೊಳ್ಳುವ ಮೂಲಕ ಸೇನಾ ಸೇವೆಗೆ ಅಡಿಯಿಟ್ಟರು. ವಿಶೇಷ ಎಂದರೆ ಇದೇ ಯೂನಿಟ್‌ನಿಂದ ರಾವತ್ ಅವರ ತಂದೆ ಕೂಡ ಸೇವೆ ಆರಂಭಿಸಿದ್ದರು. ಇಲ್ಲಿಂದ ಶುರುವಾದ ಸೇನಾವೃತ್ತಿ ಕಳೆದ ಮೂರು ದಶಕದಲ್ಲಿ ನಾನಾ ಮಜಲುಗಳನ್ನು ಕಂಡಿದೆ. ಈ ಸುದೀರ್ಘ ಅವಧಿಯಲ್ಲಿ ಅನೇಕ ಸೇವಾಪದಕಗಳು ಅವರನ್ನು ಅರಸಿಕೊಂಡು ಬಂದಿವೆ. ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿದ್ದಾಗ ಪ್ರತಿಷ್ಠಿತ ‘ಸಾವರ್ಡ್ ಆಫ್ ಆನರ್’ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರು ಖಡಕ್ ಸೇನಾಧಿಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅವರೊಬ್ಬ ಹೃದಯವಂತಿಕೆ ಮತ್ತು ನಾಗರಿಕ ಸಮಾಜದೊಂದಿಗೆ ಉತ್ತಮ ಬಾಂಧವ್ಯದ ಮೂಲಕ ಸಮತೋಲನ ಕಾಪಾಡಿಕೊಳ್ಳುವ ವ್ಯಕ್ತಿತ್ವ ಹೊಂದಿದ್ದಾರೆಂಬುದು ಬಹಳ ಜನರಿಗೆ ಗೊತ್ತಿಲ್ಲ.
ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವುದು ‘ಡರ್ಟಿ ವಾರ್’ ಎಂದು ನಿರ್ಭಿಡೆಯಾಗಿ ಹೇಳುವ ರಾವತ್ ಅವರು, ಭಯೋತ್ಪಾದನಾ ವಿರೋಧಿ ಸೇನಾ ಕಾರ್ಯಾಚರಣೆಗೆ ತಡೆಯೊಡ್ಡುವವರನ್ನು ಉಗ್ರರಿಗಾಗಿ ಕೆಲಸ ಮಾಡುತ್ತಿರುವವರೆಂದು ಪರಿಗಣಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಕಲ್ಲುತೊರಾಟಗಾರರಿಗೆ ಎಚ್ಚರಿಸಿದ್ದರು. ಅವರ ಈ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಜನರ ವಿಶ್ವಾಸ ಗಳಿಸುವ ಮೂಲಕ ಸೇನೆ ತನ್ನ ಕಾರ್ಯಾಚರಣೆ ಮಾಡಬೇಕೇ ಹೊರತು ಅವರನ್ನು ಹೆದರಿಸಿ ಅಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ಇದಾವುದಕ್ಕೂ ಅವರು ತಲೆಕೆಡಿಸಿಕೊಂಡಿಲ್ಲ. ಕಾಶ್ಮೀರದಲ್ಲಿ ನಡೆಯುತ್ತಿರುವ ‘ಕೊಳಕು ಯುದ್ಧ’ವನ್ನು ವಿನೂತನ ಕ್ರಮಗಳಿಂದಲೇ ಎದುರಿಸಬೇಕೆಂಬ ಅಚಲ ನಂಬಿಕೆ ಅವರದ್ದು. ಏತನ್ಮಧ್ಯೆ, ಕಾಶ್ಮೀರ ಕಣಿವೆಗೆ ಭೇಟಿ ನೀಡಿ, ಅಲ್ಲಿನ ನೈಜ ಸ್ಥಿತಿಯನ್ನು ಅವಲೋಕಿಸಿದ್ದಾರೆ.
ರಾವತ್ ಅವರು ಯೋಧರ ಹಿತಾಸಕ್ತಿ ಕಾಪಾಡುವಲ್ಲಿಯೂ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದು, ಸೇನಾ ವೇತನ ಆಯೋಗ ಮತ್ತು ಸರಕಾರದ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ, ಸೇನೆಯಲ್ಲಿ ಬ್ರಿಟಿಷ್ ಕಾಲದಿಂದಲೂ ಚಾಲ್ತಿಯಲ್ಲಿರುವ ‘ಸಹಾಯಕ್’ ಪದ್ಧತಿ ಕೊನೆಗಾಣಿಸುವತ್ತ ಮುಂದಾಗಿದ್ದಾರೆ. ನೆನಪಿರಲಿ, ಈ ಸಹಾಯಕ್ ಪದ್ಧತಿ ಹಿಂತೆಗೆಯುವ ಬಗ್ಗೆ ಸೇನೆಯೊಳಗೇ ಭಾರೀ ಅಸಮಾಧಾನವಿದೆ. ಹೀಗಿದ್ದಾಗ್ಯೂ ಅವರು ಈ ಕೆಲಸಕ್ಕೆ ಮುಂದಾಗಿದ್ದಾರೆ. ಈ ಎರಡು ಕ್ರಮಗಳು ಬಿಪಿನ್ ಅವರಲ್ಲಿರುವ ಮಾನವೀಯ ಗುಣಗಳಿಗೆ ಸ್ಪಷ್ಟ ನಿದರ್ಶನವಾಗಿವೆ.
ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡು ಈಗ ಆರು ತಿಂಗಳಷ್ಟಾಗಿದೆ. ಈಗಾಗಲೇ ರಾವತ್ ಕಾರ್ಯವೈಖರಿಗೆ ಎಲ್ಲರಿಗೂ ಗೊತ್ತಾಗಿದೆ. ಆದರೆ, ಅವರ ಮುಂದೆ ಸವಾಲುಗಳ ಸಾಲೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರ ಕಣಿವೆಯು ಅವರ ಜ್ಞಾನ ಮತ್ತು ಅನುಭವವನ್ನು ಒರೆಗೆ ಹಚ್ಚಲಿದೆ. ಈ ಕಣಿವೆ ರಾಜ್ಯದಲ್ಲಿ 90 ದಶಕದ ಪರಿಸ್ಥಿತಿ ಮತ್ತೆ ಮರುಕಳುಹಿಸಿದೆ. ಹಲವು ಆಯಾಮಗಳನ್ನು ಹೊಂದಿರುವ ಈ ಸಮಸ್ಯೆಯನ್ನು ಕೇವಲ ಬಂದೂಕಿನಿಂದ ಮಾತ್ರ ನಿರ್ವಹಿಸಲಾಗದು ಎಂಬ ಸ್ಪಷ್ಟ ಅರಿವು ಅವರಿಗೂ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಪರಿಹಾರ ಬಿಟ್ಟು ಬೇರೆ ದಾರಿಗಳಿಲ್ಲ. ‘ಸದ್ಯದ ಸ್ಥಿತಿಗೆ ಸೂಕ್ತ ವ್ಯಕ್ತಿ’ ಎಂಬ ಹಣೆಪಟ್ಟಿಯೊಂದಿಗೆ ಸೇನಾ ಮುಖ್ಯಸ್ಥನ ಜವಾಬ್ದಾರಿ ನಿರ್ವಹಿಸುತ್ತಿರುವ ರಾವತ್ ವಿಶಿಷ್ಟ ಸೇನಾ ಮುಖ್ಯಸ್ಥರಾಗಿ ಗುರುತಿಸಿಕೊಳ್ಳುವ ಎಲ್ಲ ಲಕ್ಷಣಗಳಿವೆ.

ಈ ಲೇಖನ ವಿಜಯ ಕರ್ನಾಟಕದ ಜೂನ್ 4, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.