ಗುರುವಾರ, ಮಾರ್ಚ್ 7, 2019

ಕಾಂಗ್ರೆಸೇತರ ಮೊದಲ ಸರಕಾರ ರಚನೆ

ಭಾರತೀಯ ರಾಜಕಾರಣದಲ್ಲಿ ಏಕಮೇವಾದ್ವಿತೀಯವಾಗಿ ಮೆರೆಯುತ್ತಿದ್ದ ಕಾಂಗ್ರೆಸ್‌ಗೆ ಬಲವಾದ ಪೆಟ್ಟು ನೀಡಿದ ಚುನಾವಣೆ ಇದು. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಪ್ರತಿಪಕ್ಷ ಗಳೆಲ್ಲವೂ ಒಗ್ಗೂಡಿ, ಕಾಂಗ್ರೆಸ್‌ ಅನ್ನು ಹೀನಾಯವಾಗಿ ಸೋಲಿಸಿದವು. ವಾಸ್ತವದಲ್ಲಿ 1975ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ, ಚುನಾವಣೆಯನ್ನು ಎರಡು ವರ್ಷದವರೆಗೂ ಮುಂದೂಡಿದರು. ಕರಾಳ ತುರ್ತು ಪರಿಸ್ಥಿತಿಯನ್ನು ಅನುಭವಿಸಿದ್ದ ಜನ 1977ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ, ಅದರ ಗರ್ವವನ್ನು ತೊಡೆದು ಹಾಕಿದರು. ಈ ಚುನಾವಣೆಯಲ್ಲಿ ಜನತಾ ಪಾರ್ಟಿ ನೇತೃತ್ವದಲ್ಲಿ ಸಿಪಿಎಂ, ಎಸ್‌ಎಡಿ, ಪಿಡಬ್ಲ್ಯೂಪಿಐ, ಆರ್‌ಎಸ್‌ಪಿ, ಎಐಎಫ್‌ಬಿ, ಆರ್‌ಪಿಐ, ಡಿಎಂಕೆ ಕೂಟ ರಚಿಸಿಕೊಂಡವು. ಇನ್ನು ಕಾಂಗ್ರೆಸ್‌ ನೇತೃತ್ವದ ಕೂಟದಲ್ಲಿ ಎಐಎಡಿಎಂಕೆ, ಸಿಪಿಐ, ಮುಸ್ಲಿಮ್‌ ಲೀಗ್‌, ಕೇರಳ ಕಾಂಗ್ರೆಸ್‌ ಇದ್ದವು. ಜನತಾ ಪಾರ್ಟಿ ಒಟ್ಟು 298 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 153 ಸ್ಥಾನಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಯಿತು. ಜನತಾ ಪರಿವಾರದ ನಾಯಕರಾಗಿ ಮೊರಾರ್ಜಿ ದೇಸಾಯಿಅವರನ್ನು ಆಯ್ಕೆ ಮಾಡಲಾಯಿತು. ಅವರು ಕಾಂಗ್ರೆಸೇತರ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ವಿಶೇಷ ಎಂದರೆ, ಈ ಚುನಾವಣೆ ನಡೆದಿದ್ದೇ ಡೆಮಾಕ್ರಷಿ ಅಥವಾ ಡಿಕ್ಟಟರ್‌ಶಿಫ್‌(ಜನತಂತ್ರ ಅಥವಾ ಸರ್ವಾಧಿಕಾರ) ಎಂಬ ಸೈದ್ಧಾಂತಿಕ ನೆಲೆಯಲ್ಲಿ. ಕಾಂಗ್ರೆಸ್‌ ವಿರೋಧಿ ನೆಲೆಯಲ್ಲಿ ಒಂದಾಗಿ ಸರಕಾರ ರಚಿಸಿದ್ದ ಜನತಾ ಪರಿವಾರ, 1979ರಲ್ಲಿ ಒಡೆದ ಮನೆಯಾಯಿತು. ಇದರಿಂದ ಅನಿವಾರ್ಯವಾಗಿ ಮೊರಾರ್ಜಿ ದೇಸಾಯಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಬಳಿಕ ಕಾಂಗ್ರೆಸ್‌ ಬೆಂಬಲದೊಂದಿಗೆ ಚರಣ್‌ ಸಿಂಗ್‌ ಅವರು ಪ್ರಧಾನಿಯಾದರು! ಸರ್ವಾಧಿಕಾರ, ಪ್ರಜಾತಂತ್ರ, ಸಂವಿಧಾನ ರಕ್ಷ ಣೆ ಹೆಸರಿನಲ್ಲಿ ನಡೆದ ಈ ಚುನಾವಣೆಯ ಅನೇಕ ಅವಕಾಶಗಳನ್ನು ಸೃಷ್ಟಿಸಿತು. ಆದರೆ, ಅಂಥ ಅವಕಾಶಗಳನ್ನು ಬಳಸಿಕೊಳ್ಳಲು ನಾಯಕರು ಮಾತ್ರ ವಿಫಲರಾದರು. ಕಾಂಗ್ರೆಸ್‌ಗೆ ಪರ್ಯಾಯ ರಾಜಕಾರಣ ಕನಸು ಕಾಣುವಂತೆ ಮಾಡಿದ್ದ ಜನತಾ ಪಾರ್ಟಿ ಅಧಿಕಾರಕ್ಕೆ ಕಚ್ಚಾಡಿಕೊಂಡಿದ್ದು ರಾಜಕೀಯ ಪ್ರಮಾದ ಎಂಬುದು ಮುಂಬರುವ ದಿನಗಳಲ್ಲಿ ಎಲ್ಲ ಭಾರತೀಯರ ಅನುಭವಕ್ಕೆ ಬಂತು. ವಿಶೇಷ ಎಂದರೆ, ತುರ್ತು ಪರಿಸ್ಥಿತಿ ವಿರೋಧಿಸಿ ಮತ ನೀಡಿದ್ದ ಭಾರತೀಯರು ನಂತರದ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ನೀಡಿ ಮತ್ತೆ ಅಧಿಕಾರಕ್ಕೆ ತಂದರು.   - ತಿಪ್ಪಾರ 

ಕಾಮೆಂಟ್‌ಗಳಿಲ್ಲ: