ಮಂಗಳವಾರ, ಮಾರ್ಚ್ 12, 2019

ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಶಕ್ತಿ ಸಿಪಿಐ(ಎಂ)

ಸಿಪಿಐ(ಎಂ) ಅನ್ನು ಸಾಮಾನ್ಯವಾಗಿ ಸಿಪಿಎಂ ಎಂದು ಕರೆಯುತ್ತಾರೆ. ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾ(ಸಿಪಿಐ)ದಿಂದ ಪ್ರತ್ಯೇಕಗೊಂಡು 1964 ಅಕ್ಟೋಬರ್‌ 31ರಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸ್‌ವಾದ) ರಚನೆಯಾಯಿತು. 1964ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾದ 7ನೇ ಸಮಾವೇಶದಲ್ಲಿ ಪಕ್ಷ ಇಬ್ಭಾಗವಾಯಿತು. ಸದ್ಯ, ಸಿಪಿಎಂ ಕೇರಳದಲ್ಲಿ ಅಧಿಕಾರದಲ್ಲಿದ್ದು, ಒಟ್ಟು 8 ರಾಜ್ಯಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯದಲ್ಲಿ ದಟ್ಟ ಪ್ರಭಾವ ಹೊಂದಿರುವ ಸಿಪಿಎಂ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಪಾಲಿಟ್‌ಬ್ಯೂರೊ ಈ ಪಕ್ಷ ದ ಅತ್ಯುನ್ನತ ನಿರ್ಧಾಕ ಕೈಗೊಳ್ಳುವ ಸಂಸ್ಥೆಯಾಗಿದೆ. ಸಿಪಿಎಂನ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ್‌ ಯಚೂರಿ ಅವರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭೆಯಲ್ಲಿ ಪಿ. ಕರುಣಾಕರನ್‌ ಅವರು ಪಕ್ಷ ದ ನಾಯಕರಾಗಿದ್ದಾರೆ. ಲೋಕಸಭೆಯಲ್ಲಿ 9, ರಾಜ್ಯಸಭೆಯಲ್ಲಿ 5 ಸಂಸದರನ್ನು ಹೊಂದಿರುವ ಸಿಪಿಎಂ, ಕೇರಳದಲ್ಲಿ 59, ತ್ರಿಪುರಾದಲ್ಲಿ 16 ಮತ್ತು ಪಶ್ಚಿಮ ಬಂಗಾಳದಲ್ಲಿ 26 ಶಾಸಕರನ್ನು ಹೊಂದಿದೆ. ಇನ್ನುಳಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 7 ಶಾಸಕರು ಸಿಪಿಎಂನಿಂದ ಆಯ್ಕೆಯಾಗಿದ್ದಾರೆ. ಮಾರ್ಕ್ಸ್‌ ಮತ್ತು ಲೆನಿನ್‌ ವಾದ ಸಿಪಿಎಂ ಪ್ರಮುಖ ಸಿದ್ಧಾಂತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ನೇತೃತ್ವದಲ್ಲಿ ದೀರ್ಘಾವಧಿಯವರೆಗೆ ಸಿಪಿಎಂ ಅಧಿಕಾರದಲ್ಲಿತ್ತು. ಹಾಗೆಯೇ, 1996ರಲ್ಲಿ ಪ್ರಧಾನಿ ಹುದ್ದೆ ಸಿಪಿಎಂ ನಾಯಕರಿಗೆ ಒಲಿದು ಬಂದಿತ್ತು. ರಾಷ್ಟ್ರದಾದ್ಯಂತ ಪಕ್ಷ ವನ್ನು ಬಲಪಡಿಸುವ ಅನೇಕ ಅವಕಾಶಗಳನ್ನು ಕೈ ಚೆಲ್ಲಿದೆ. ಇತ್ತೀಚಿನ ವರ್ಷಗಲ್ಲಂತೂ ಗಟ್ಟಿ ಬೇರುಗಳನ್ನು ಹೊಂದಿದ್ದ ಪಶ್ಚಿಮ ಬಂಗಾಳ, ತ್ರಿಪುರಾದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕೇರಳ ಮಾತ್ರ ಸಿಪಿಎಂ ಇದೀಗ ಆಸರೆಯಾಗಿ ಉಳಿದಿದೆ. ಇ ಎಂ ಎಸ್‌ ನಂಬೂದರಿಪಾದ್‌, ಹರಿಕಿಶನ್‌ ಸಿಂಗ್‌ ಸುರ್ಜಿತ್‌, ಪ್ರಕಾಶ್‌ ಕಾರಟ್‌, ಜ್ಯೋತಿ ಬಸು, ಬುದ್ಧದೇವ್‌ ಭಟ್ಟಾಚಾರ್ಯ, ಮಾಣಿಕ್‌ ಸರ್ಕಾರ್‌, ಈಗ ಕೇರಳ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್‌, ಸೀತಾರಾಮ್‌ ಯಚೂರಿ ಅವರು ಸಿಪಿಎಂನ ಪ್ರಮುಖ ನಾಯಕರು. ಕುಡುಗೋಲು ಮತ್ತು ಸುತ್ತಿಗೆಯು ಈ ಪಕ್ಷ ದ ಚುನಾವಣಾ ಚಿಹ್ನೆಯಾಗಿದೆ. 

ಕಾಮೆಂಟ್‌ಗಳಿಲ್ಲ: