ಬುಧವಾರ, ಜನವರಿ 8, 2020

New Features for WhatsApp: ವಾಟ್ಸ್‌ಆ್ಯಪ್‌ಗೆ ಮತ್ತಷ್ಟು ಹೊಸ ಫೀಚರ್‌ಗಳು!

- ಮಲ್ಲಿಕಾರ್ಜುನ ತಿಪ್ಪಾರ
ವಾಟ್ಸಪ್ ಎಂಬುದು ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ನಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿಅದರ ಅನಿವಾರ್ಯತೆಯ ಸೃಷ್ಟಿಯಾಗಿದೆ. ಅಂದರೆ ಅಷ್ಟರ ಮಟ್ಟಿಗೆ ವಾಟ್ಸಪ್ ನಮ್ಮನ್ನು ಆವರಿಸಿಕೊಂಡಿದೆ. ಇದಕ್ಕೆ ಕಾರಣ ಏನೆಂದು ಹುಡುಕುತ್ತಾ ಹೋದರೆ, ಬಳಕೆದಾರರ ಅಗತ್ಯಗಳನ್ನು ಮನಗಂಡು ಅದಕ್ಕ ತಕ್ಕಂತೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ. ಆ ಮೂಲಕ ಹೆಚ್ಚೆಚ್ಚು ಬಳಕೆದಾರರ ಸ್ನೇಹಿ ಆ್ಯಪ್‌ ಆಗಿ ಗುರುತಿಸಿಕೊಳ್ಳುತ್ತಿದೆ. ಹೊಸ ವರ್ಷದಲ್ಲೂ ವಾಟ್ಸಪ್ ಅನೇಕ ಹೊಸ ಫೀಚರ್‌ಗಳೊಂದಿಗೆ ನಿಮ್ಮ ಮುಂದೆ ಬರುತ್ತಿದೆ. ಬಹುದಿನಗಳ ಬೇಡಿಕೆಯಾದ ಡಾರ್ಕ್‌ಮೋಡ್ ಸೇರಿದಂತೆ ಅನೇಕ ಸಂಗತಿಗಳು ಸೇರ್ಪಡೆಯಾಗಲಿವೆ. ಜತೆಗೆ ಈ ವರ್ಷದಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ವಾಟ್ಸಪ್ ಸಪೋರ್ಟ್‌ ಮಾಡುವುದನ್ನು ನಿಲ್ಲಿಸಲಿದೆ.

ಡಾರ್ಕ್ ಮೋಡ್‌

ಈಗಾಗಲೇ ಬಹಳಷ್ಟು ಆ್ಯಪ್‌ಗಳಲ್ಲಿ ಡಾರ್ಕ್ ಮೋಡ್‌ ಸಾಮಾನ್ಯವಾಗಿದೆ. ಹಾಗೆಯೇ ವಾಟ್ಸಪ್ ಕೂಡ ಡಾರ್ಕ್ ಮೋಡ್‌ ಪರಿಚಯಿಸಲು ಹಲವು ದಿನಗಳಿಂದ ಕಾರ್ಯನಿರತವಾಗಿದೆ. ಬಹುಶಃ ಈ ವರ್ಷದಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ. ವಾಬೀಟಾಇನ್ಫೊ ಪ್ರಕಾರ, ವಾಟ್ಸಪ್‌ನ ಡಾರ್ಕ್‌ ಮೋಡ್‌ ಸಿದ್ಧವಾಗಿದೆ. ಆದರೆ, ಸ್ಟೇಟಸ್‌ ಅಪ್‌ಡೇಟ್‌ ಸೆಲ್‌, ಪ್ರೊಫೈಲ್‌ ಸೆಲ್ಸ್‌, ಕಾಂಟಾಕ್ಟ್ ಮತ್ತು ಸ್ಟೋರೇಜ್‌ ಲಿಸ್ಟ್‌ ಸೇರಿದಂತೆ ಇನ್ನಿತರ ಕೆಲವು ಅಂಶಗಳನ್ನು ಡಾರ್ಕ್‌ ಮೋಡ್‌ಗೆ ಹೊಂದಿಸಬೇಕಿದೆ. ಹಾಗಾಗಿ, ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಈ ವರ್ಷದಲ್ಲಿ ಖಂಡಿತವಾಗಿಯೂ ಐಒಎಸ್‌ ಮತ್ತು ಆಂಡ್ರಾಯ್ಡ್‌ ಫೋನ್‌ಗಳಲ್ಲಿ ನೀವು ಪರಿಪೂರ್ಣವಾದ ಡಾರ್ಕ್‌ ಮೋಡ್‌ ವಾಟ್ಸಪ್ ಅನ್ನು ನಿರೀಕ್ಷಿಸಬಹುದು.


ಐಪ್ಯಾಡ್‌ನಲ್ಲಿ ವಾಟ್ಸಪ್

ಆಂಡ್ರಾಯ್ಡ್‌ ಮತ್ತು ಐಫೋನ್‌ಗಳಲ್ಲಿ ವಾಟ್ಸಪ್ ಅನ್ನು ಸರಳವಾಗಿ ಬಳಸಬಹುದು. ಹಾಗೆಯೇ ಡೆಸ್ಕ್‌ಟಾಪ್‌ಗಳಲ್ಲೂ ವಾಟ್ಸಪ್ ಬಳಕೆ ಸುಲಭ. ಆದರೆ, ಇದುವರೆಗೆ ಐಪ್ಯಾಡ್‌ನಲ್ಲಿ ವಾಟ್ಸಪ್ ಬಳಕೆ ಸಾಧ್ಯವಾಗಿಲ್ಲ. ಒಂದೊಮ್ಮೆ ಆ್ಯಪ್‌ ಸ್ಟೋರ್‌ನಿಂದ ಐಪಾಡ್‌ನಲ್ಲಿ ವಾಟ್ಸಪ್ ಇನ್ಸ್ಟಾಲ್ ಮಾಡಿದರೂ ಅದು ಐಫೋನ್‌ನಲ್ಲಿ ತೆರೆದುಕೊಳ್ಳುವಂತೆ ತೆರೆದುಕೊಳ್ಳುತ್ತದೆ. ಐಪಾಡ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ವಾಟ್ಸಪ್ ಕಾರ್ಯನಿರ್ವಹಣೆ ಸಂಬಂಧ ಕಂಪನಿ ಕಾರ್ಯನಿರತವಾಗಿದೆ. ಈ ಬಗ್ಗೆ ಅಧಿಕೃತವಾದ ಮಾಹಿತಿ ಹೊರಬಿದ್ದಿಲ್ಲವಾದರೂ ಈ ವರ್ಷ ಐಪಾಡ್‌ಗೆ ವಾಟ್ಸಪ್ ಸಪೋರ್ಟ್‌ ಮಾಡಲಿದೆ. ಹಾಗಂತ ಐಪಾಡ್‌ಗೆ ರೂಪಿಸಲಾಗುತ್ತಿರುವ ವಾಟ್ಸಪ್ ಇತರ ವಾಟ್ಸಪ್ ಗಿಂತ ಭಿನ್ನವಾಗಿರುತ್ತದೆ ಎಂದು ಭಾವಿಸಬೇಕಿಲ್ಲ.

ಬ್ಲಾಕ್ಡ್ ಕಾಂಟಾಕ್ಟ್ ನೋಟಿಸ್‌

ಬ್ಲಾಕ್‌ ಮಾಡಲಾದ ಕಾಂಟಾಕ್ಟ್‌ಗಳನ್ನು ಮತ್ತೆ ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಪ್ರಯತ್ನದಲ್ಲಿ ವಾಟ್ಸಪ್ ಇದೆ. ಬಹುಶಃ ಈ ವರ್ಷಕ್ಕೆ ಸಾಧ್ಯವಾಗಬಹುದು. ಹೊಸ ಫೀಚರ್‌ ಕಾರ್ಯ ಸಾಧ್ಯವಾದರೆ, ಒಂದೇ ಟ್ಯಾಪ್‌ನಲ್ಲಿ ಬ್ಲಾಕ್‌ ಮಾಡಲಾದ ಕಾಂಟಾಕ್ಟ್‌ಗಳನ್ನು ಅನ್‌ಲಾಕ್‌ ಮಾಡಬಹುದು.

ಡಿಲಿಟ್‌ ಮೆಸೇಜ್‌ಗಳು

ಹೊಸ ಡಿಲಿಟ್‌ ಮೆಸೇಜ್‌ ಫೀಚರ್‌ ಸಿದ್ಧತೆಯಲ್ಲಿದೆ ವಾಟ್ಸಪ್. ಈ ಹೊಸ ಫೀಚರ್‌ ವಾಟ್ಸಪ್ ಸಂದೇಶಗಳನ್ನು ನಿಗದಿತ ಸಮಯದ ಬಳಿಕ ಸ್ವಯಂ ಆಗಿ ಡಿಲಿಟ್‌ ಮಾಡುತ್ತದೆ. ಈ ಫೀಚರ್‌ ಖಾಸಗಿ ಮತ್ತು ಗ್ರೂಪ್‌ ಚಾಟ್‌ಗೂ ದೊರೆಯಲಿದೆ. ಈಗಾಗಲೇ ಕುರಿತು ವಾಟ್ಸಪ್ ಕಾರ್ಯನಿರತವಾಗಿದೆ.

ಈ ಫೋನ್‌ಗಳಿಗೆ ಸಪೋರ್ಟ್‌ ಮಾಡಲ್ಲ!

ಈ ಹೊಸ ವರ್ಷದಲ್ಲಿ ವಾಟ್ಸಪ್ ಕೆಲವು ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಈಗಾಗಲೇ ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ಆಂಡ್ರಾಯ್ಡ್‌ 2.3.7 ಜಿಂಜರ್‌ಬ್ರೆಡ್‌ ಮತ್ತು ಇದಕ್ಕೂ ಹಿಂದಿನ ಆವೃತ್ತಿಗಳಿರುವ ಫೋನ್‌ಗಳು ಹಾಗೂ ಐಒಎಸ್‌ 8 ಮತ್ತು ಅದಕ್ಕೂ ಮೊದಲಿನ ಫೋನ್‌ಗಳಿಗೆ ವಾಟ್ಸಪ್ ಸಪೋರ್ಟ್‌ ಮಾಡುವುದಿಲ್ಲ ಎಂದು ಕಂಪನಿ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ. ಹಾಗಂತ, ವಾಟ್ಸಪ್ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತದೆ ಎಂದರ್ಥವಲ್ಲ. ಈ ಮೊದಲೇ ಅಕೌಂಟ್‌ ಹೊಂದಿದ್ದರೆ ವಾಟ್ಸಪ್ ಬಳಕೆಯನ್ನು ಮುಂದುವರಿಸಬಹುದು. ಆದರೆ, ಅದರಲ್ಲಿರುವ ಫೀಚರ್‌ಗಳು ಯಾವುದೇ ಸಮಯದಲ್ಲಿ ನಿಷ್ಕ್ರಿಯಗೊಳ್ಳಬಹುದು. ಅದರಲ್ಲೂ ವಿಂಡೋಸ್‌ ಫೋನ್‌ ಬಳಸುವವರಿಗೆ ವಾಟ್ಸಪ್ ಬಳಕೆ ಕಷ್ಟಸಾಧ್ಯವಾಗಲಿದೆ.