ಮಂಗಳವಾರ, ಮೇ 17, 2022

QR Code Scan Scam: ಕ್ಯೂಆರ್‌ ಕೋಡ್‌ ಬಳಸಿ ವಂಚನೆ, ಇರಲಿ ಎಚ್ಚರ


- ಮಲ್ಲಿಕಾರ್ಜುನ ತಿಪ್ಪಾರ
ತಂತ್ರಜ್ಞಾನ  ಬೆಳೆದಂತೆ ನಮ್ಮ ಜೀವನ ಬಹಳ ಸುಲಭವಾಗಿದೆ. ಕೈ ಬೆರಳ ತುದಿಯಲ್ಲೇ ಇಡೀ ಜಗತ್ತಿದೆ. ಕುಳಿತಲ್ಲೇ ನಿಮಗೆ ಬೇಕಾದ್ದನ್ನು ತರಿಸಿಕೊಳ್ಳ­ಬಹುದು; ಇಲ್ಲ ಮಾರಬಹುದು. ಈ ಡಿಜಿಟಲ್‌ ಯುಗದಲ್ಲಿ ಬಹಳಷ್ಟು ಉಪಯೋಗಗಳಿವೆ. ಹಾಗೆಯೇ, ಸ್ವಲ್ಪ ಮೈಮರೆತರೂ ಎಲ್ಲವನ್ನೂ ಕಳೆದುಕೊಳ್ಳಲು ಕ್ಷಣಾರ್ಧ ಸಾಕು. ಸೈಬರ್‌ ಖದೀಮರು ಯಾವ ಮಾಯೆ­ಯಿಂದಲಾದರೂ ನಿಮ್ಮ ಫೋನ್‌ ಹೊಕ್ಕು, ನಿಮ್ಮೆಲ್ಲ ಮಾಹಿತಿ ಹಾಗೂ ಹಣವನ್ನು ಕಿತ್ತುಕೊಳ್ಳಬಲ್ಲರು. ಈ ಖದೀಮರು ಇತ್ತೀಚಿನ ಎರಡು ವರ್ಷಗಳಲ್ಲಿ ಹೊಸ ದಾರಿ ಮೂಲಕ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ. ಅವರೀಗ ಕ್ಯೂಆರ್‌ ಕೋಡ್‌ ಬಳಸಿಕೊಂಡು, ಜನರ ಖಾತೆಯಲ್ಲಿರುವ ಹಣವನ್ನು ಎಗರಿಸುತ್ತಿದ್ದಾರೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಹೇಗೆ ವಂಚನೆ?

ಈ ಮೊದಲು ಫಿಶಿಂಗ್‌ ಮೇಲ್‌, ಲಿಂಕ್ಸ್‌ ಕಳುಹಿಸಿ ಹಣವನ್ನು ಎತ್ತುತ್ತಿದ್ದ ಖದೀಮರು ಕ್ಯೂಆರ್‌ ಕೋಡ್‌ ಮೂಲಕ ಆ ಕೆಲಸವನ್ನು ಮಾಡುತ್ತಿದ್ದಾರೆ. ಅಪರಿಚಿತರಿಗೆ ಕ್ಯೂಆರ್‌ ಕೋಡ್‌ ಕಳುಹಿಸಿ, ನಿಮಗೆ ಇಂತಿಂಥ ಸ್ಕೀಮ್‌ನಲ್ಲಿ ಹಣ ಬಂದಿದೆ, ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ, ನಿಮ್ಮ ಅಕೌಂಟ್‌ಗೆ ಹಣ ವರ್ಗಾವಣೆಯಾಗುತ್ತದೆ ಎಂಬ ಒಕ್ಕಣಿಕೆ ಸಂದೇಶಗಳನ್ನು ಕಳುಹಿಸುತ್ತಾರೆ. ಬಳಕೆದಾರರು ಇದನ್ನು ನಿಜ ಎಂದು ನಂಬಿ, ಹಣದ ಆಮಿಷಕ್ಕೆ ಒಳಗಾಗಿ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿದರೆ, ಖಾತೆಗೆ ಹಣ ವರ್ಗಾವಣೆ ಆಗುವ ಬದಲು, ನಿಮ್ಮ ಖಾತೆಯಲ್ಲಿರುವ ಹಣವೇ ಅವರಿಗೆ ವರ್ಗಾವಣೆ­ಯಾಗಿರುತ್ತದೆ! ಆಗಲೇ ಮೋಸ ಹೋಗಿರುವುದು ಗೊತ್ತಾಗುತ್ತದೆ. ಜತೆಗೆ ಹಣ ಮಾತ್ರವಲ್ಲದೇ, ನಮ್ಮೆಲ್ಲವೈಯಕ್ತಿಕ ಮಾಹಿತಿಯನ್ನು ಅವರು ಖದಿಯುತ್ತಾರೆ. ಸಾಮಾನ್ಯವಾಗಿ ಇಂಥ ಆಮಿಷ ಒಡ್ಡುವ ಸಂದೇಶಗಳು ವಾಟ್ಸ್‌ಆ್ಯಪ್‌ ಮೂಲಕವೇ ಇಲ್ಲವೇ ಮೇಲ್‌ ಮುಖಾಂತರ ಬರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ರಕ್ಷ ಣೆ ಹೇಗೆ? 
ಸೈಬರ್‌ ಕಳ್ಳರು ಒಂದಿಲ್ಲ ಒಂದು ಹೊಸ ದಾರಿಯನ್ನು ಹುಡುಕಿಕೊಳ್ಳುತ್ತಿದ್ದಾರೆ. ಈಗ ಕ್ಯೂಆರ್‌ ಕೋಡ್‌ ಮೂಲಕ ಹಣ ಕೀಳುತ್ತಿದ್ದಾರೆ. ಈ ವಂಚನೆಯ ಜಾಲಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂದರೆ, ನಮ್ಮ ಎಚ್ಚರದಲ್ಲಿ ನಾವಿರಬೇಕು. ಯಾವುದೇ ಕಾರಣಕ್ಕೂ ನಮ್ಮ ಯುಪಿಐ ಐಡಿ ಅಥವಾ ಬ್ಯಾಂಕ್‌ ಮಾಹಿತಿಯನ್ನು ಅಪರಿಚಿತರ ಜತೆ ಹಂಚಿಕೊಳ್ಳಬಾರದು. ಅಪರಿಚಿತರಿಂದ ಅಥವಾ ಶಂಕಾಸ್ಪದ ವ್ಯಕ್ತಿಗಳಿಂದ  ಬರುವ ಯಾವುದೇ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಲು ಹೋಗಬಾರದು. ಜತೆಗೆ, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳ­ಬಾರದು. ಇವಿಷ್ಟು ಮಾಡುವುದರಿಂದ ಖಂಡಿತವಾಗಿಯೂ ನೀವು ವಂಚಕರ ಜಾಲಕ್ಕೆ ಬೀಳದೆ ಬಚಾವ್‌ ಆಗಬಹುದು. ಹಾಗೆಯೇ, ಆನ್‌ಲೈನ್‌ ವ್ಯವಹಾರ ಮಾಡುವಾಗ ಅಥವಾ ಹಣವನ್ನು ಪಾವತಿಸುವಾಗ ವ್ಯಕ್ತಿಯ ನೈಜತೆಯನ್ನು ತಿಳಿಯಲು ಪ್ರಯತ್ನಿಸಿ. ಅದರಲ್ಲೂ ಆನ್‌ಲೈನ್‌ ವೇದಿಕೆಗಳಲ್ಲಿ ಖರೀದಿಸುವಾಗ ಬಹಳ ಹುಷಾರ್‌ ಆಗಿರಬೇಕು. ಸಿಕ್ಕ ಸಿಕ್ಕ ತಾಣಗಳಲ್ಲಿ ಖರೀದಿಗೆ ಮುಂದಾಗಬಾರದು. ವಿಶ್ವಾಸಾರ್ಹ ವೇದಿಕೆಗಳನ್ನು ಮಾತ್ರ ಬಳಸಿ. ಒಂದೊಮ್ಮೆ ನೀವು ಯುಪಿಐ ಬಳಸುತ್ತಿದ್ದರೆ ಕೋಡ್‌ ಮೂಲಕ ಅದನ್ನು ಸೆಕ್ಯುರ್‌ ಮಾಡಿಟ್ಟುಕೊಳ್ಳಿ. ಭೀಮ್‌, ಫೋನ್‌ಪೇ, ಗೂಗಲ್‌ ಪೇ ಸೇರಿದಂತೆ ಎಲ್ಲಯುಪಿಐ ಪೇಮೆಂಟ್‌ ತಾಣಗಳು ಬಳಕೆ­ದಾರರಿಗೆ ಸೆಕ್ಯುರಿಟಿ ಪಿನ್‌ ಮಾಡಲು ಅವಕಾಶ ಮಾಡಿಕೊಟ್ಟಿರುತ್ತವೆ. ಹಾಗಾಗಿ, ತಪ್ಪದೇ ಸೆಕ್ಯುರಿಟಿ ಪಿನ್‌ ಸೆಟ್‌ ಮಾಡಿಕೊಳ್ಳಿ. ಅಪರಿಚಿತರಿಂದ ವ್ಯವಹರಿಸುವಾಗ ಸಾಧ್ಯವಾದಷ್ಟು ನಗದು ಮೂಲಕ ವಹಿವಾ ಮಾಡುವುದು ಉತ್ತಮ. ಇದರಿಂದ ಆನ್‌ಲೈನ್‌ ವಂಚನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. 

ಎಚ್ಚರಿಕೆಯೊಂದೇ ದಾರಿ
ಆನ್‌ಲೈನ್‌ ಹಣಕಾಸು ವ್ಯವಹಾರ ಹೆಚ್ಚಾದಂತೆ ಆನ್‌ಲೈನ್‌ ವಂಚನೆಗಳೂ ಹೆಚ್ಚಾಗುತ್ತಿರುವುದು ಸತ್ಯ. ಹಾಗಾಗಿ, ನಾವು ಯಾವಾಗಲೂ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿಶೇಷವಾಗಿ, ಆನ್‌ಲೈನ್‌ ತಾಣಗಳ ಮೂಲ ಹಣ ಪಾವತಿಸುವ ಸಂದರ್ಭ ಎದುರಾದಾಗ ಎಷ್ಟು ಸಾಧ್ಯವೋ ಅಷ್ಟು ಮುಂಜಾಗೃತೆಯನ್ನು ವಹಿಸಿಕೊಳ್ಳಬೇಕು. ನಾವು ಯಾರಿಗೆ ಹಣ ಪಾವತಿಸುತ್ತಿದ್ದೇವೆ ಎಂಬುದರ ಬಗ್ಗೆ ಗೊತ್ತಿರಬೇಕು. ಚೂರೇ ಚೂರು ಸಂಶಯ ಬಂದರೂ ಆನ್‌ಲೈನ್‌ ಮೂಲಕ ಹಣ ಪಾವತಿಸಲು ಹೋಗಬೇಡಿ. ಹಾಗೆಯೇ, ಅಪರಿಚಿತರಿಂದ ಬರುವ ಯಾವುದೇ ರೀತಿಯ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾ‌ನ್‌ ಮಾಡಲು ಹೋಗಲೇ ಬೇಡಿ. ಹಣ ಕಳೆದುಕೊಂಡು ಪರಿತಪಿಸುವುದಕ್ಕಿಂತ ಕಳೆದುಕೊಳ್ಳದಂತೆ ನೋಡಿ­ಕೊಳ್ಳುವುದು ಬೆಸ್ಟ್‌ ಉಪಾಯ ಅಲ್ಲವೇ?



Ravindra Jadeja- ಜಡೇಜಾ ಅಂದರೆ 'ಜಯ'

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿಭಾರತೀಯ ಕ್ರಿಕೆಟ್‌ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್‌ನಲ್ಲಿಸಿಎಸ್‌ಕೆ ತಂಡದ ನಾಯಕ.


- ಮಲ್ಲಿಕಾರ್ಜುನ ತಿಪ್ಪಾರ
ಸಂದರ್ಶಕ: ವೃತ್ತಿ ಜೀವನದ ಅಂತ್ಯಕ್ಕೆ ನಿಮ್ಮ ಹೆಸರಿನಲ್ಲಿವಿಶಿಷ್ಟ ದಾಖಲೆ ಯಾವುದು ಇರಬೇಕೆಂದು ಇಚ್ಛಿಸುತ್ತೀರಿ?
ಕ್ರಿಕೆಟಿಗ: ಒಂದೇ ಪಂದ್ಯದಲ್ಲಿ ಐದು ವಿಕೆಟ್‌ ಹಾಗೂ ಶತಕ ಗಳಿಸಿದ ದಾಖಲೆ.

ಹೀಗೆ, ತಮ್ಮ ದಾಖಲೆ ಯಾವುದು ಇರಬೇಕೆಂದು ಹೇಳಿ ಅದನ್ನು ಸಾಧಿಸಿದ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ವಿಶ್ವದ ನಂ.1 ಆಲ್‌ರೌಂಡರ್‌ ರವೀಂದ್ರ ಜಡೇಜಾ. ಆದರೆ, ಅವರ ವೃತ್ತಿಜೀವನ ಅಂತ್ಯವಾಗುತ್ತಿಲ್ಲ; ಈಗಷ್ಟೇ ಉಚ್ಛ್ರಾಯ ಸ್ಥಿತಿಗೆ ತಲುಪಿದೆ!

ಖಾಸಗಿ ಕ್ರೀಡಾ ವಾಹಿನಿಯೊಂದು 2018ರಲ್ಲಿನಡೆಸಿದ ಸಂದರ್ಶನದ ತುಣುಕು ಇದು. ಇದಾಗಿ ನಾಲ್ಕು ವರ್ಷದಲ್ಲೇ ಜಡೇಜಾ ತಮ್ಮ ಕನಸಿನ ದಾಖಲೆ ಪೂರ್ತಿಗೊಳಿಸುವ ಟೆಸ್ಟ್‌ ಪಂದ್ಯವನ್ನು ಆಡಿ­ದರು. ಕಳೆದ ಮಾರ್ಚ್‌ ತಿಂಗಳಲ್ಲಿ ಮೊಹಾಲಿಯಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಜಡೇಜಾ ಅವರು 7ನೇ ವಿಕೆಟ್‌ನಲ್ಲಿ ಅಮೋಘ 175 ರನ್‌ಗಳನ್ನು ಸಿಡಿಸಿ, ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಗೊಂಚಲು ಕೂಡ ಪಡೆದುಕೊಂಡು, ತಮ್ಮ ಕನಸಿನ ದಾಖಲೆ ಸಾಧಿಸಿ ಬೀಗಿದರು. ಈ ಸಂದರ್ಶನದ ತುಣುಕನ್ನು ಯಾಕೆ ಪ್ರಸ್ತಾಪಿಸಬೇಕಾಯಿತು ಎಂದರೆ, ತಾವು ಅಂದುಕೊಂಡಿದ್ದನ್ನು ಛಲ ಬಿಡದೇ ಸಾಧಿಸುವ ಗುಣ ಅವರಲ್ಲಿದೆ. ಆ ಗುಣವೇ ಅವರನ್ನೀಗ ನಾಲ್ಕು ಬಾರಿ ಐಪಿಎಲ್‌ ಚಾಂಪಿಯನ್‌ ಪಟ್ಟ ಏರಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ನಾಯಕತ್ವದವರೆಗೂ ಕರೆ ತಂದಿದೆ. 

ವರ್ಷದಿಂದ ವರ್ಷಕ್ಕೆ ಪರಿಪೂರ್ಣ ಆಟಗಾರರಾಗಿ ಬದಲಾಗುತ್ತಿರುವ ರವೀಂದ್ರ ಜಡೇಜಾ ಭಾರತೀಯ ಕ್ರಿಕೆಟ್‌ನ ಬಹುದೊಡ್ಡ ಆಸ್ತಿ ಮತ್ತು ಇದೇ ಮಾತನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೂ ಅನ್ವಯಿಸಬಹುದು. ಜಡೇಜಾ 2012ರ ಆವೃತ್ತಿಯಿಂದ ಸಿಎಸ್‌ಕೆ ಬಳಗದಲ್ಲಿದ್ದಾರೆ. ಆ ಆವೃತ್ತಿಯ ಹರಾಜಿನಲ್ಲಿ ಅವರನ್ನು 9.8 ಕೋಟಿ ರೂಪಾಯಿಗೆ ಸಿಎಸ್‌ಕೆ ಫ್ರಾಂಚೈಸಿ ಖರೀದಿಸಿತ್ತು. ಅದು ಆಗ ದಾಖಲೆ. ಕಳೆದ ಹರಾಜಿಗೂ ಮೊದಲು 16 ಕೋಟಿ ರೂಪಾಯಿ ತೆತ್ತು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. 33 ವರ್ಷದ ಜಡೇಜಾ ಐಪಿಎಲ್‌ ಸಿಎಸ್‌ಕೆ ಪರವಾಗಿ ಅದ್ಭುತವಾದ ಆಟವನ್ನೇ ಆಡಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 200 ಪಂದ್ಯಗಳನ್ನಾಡಿ 2386 ರನ್‌ಗಳೊಂದಿಗೆ 127 ವಿಕೆಟ್‌ ಕೂಡ ಕಿತ್ತಿದ್ದಾರೆ. 

ಕ್ರಿಕೆಟ್‌ನಲ್ಲಿ ‘ಸವ್ಯಸಾಚಿ’ಗಳಿಗೂ ಎಂದಿಗೂ ವಿಶೇಷ ಸ್ಥಾನವಿದೆ. ಕ್ರಿಕೆಟ್‌ ಇತಿಹಾಸವನ್ನು ನೋಡಿದರೆ ಗ್ಯಾರಿ ಸೋಬರ್ಸ್‌, ಜಾಕಸ್‌ ಕಾಲಿಸ್‌, ಕಪಿಲ್‌ ದೇವ್‌, ಇಮ್ರಾನ್‌ ಖಾನ್‌, ರಿಚರ್ಡ್‌ ಹ್ಯಾಡ್ಲಿ, ಕೇಥ್‌ ಮಿಲ್ಲರ್‌, ಲ್ಯಾನ್ಸ್‌ ಕ್ಲುಸ್ನರ್‌, ಟೋನಿ ಗ್ರೇಗ್‌ನಂಥ ಆಟಗಾರರು ಕ್ರಿಕೆಟ್‌ಗೆ ಹೊಸ ಮೆರುಗು ತಂದುಕೊಟ್ಟಿದ್ದಾರೆ. ಅದೇ ಸಾಲಿನಲ್ಲಿ ಜಡೇಜಾ ಕೂಡ ಸಾಗುತ್ತಿದ್ದಾರೆ. ಬ್ಯಾಟ್‌, ಬಾಲ್‌ ಮತ್ತು ಫೀಲ್ಡಿಂಗ್‌ ಮೂಲಕ ತಮ್ಮ ತಂಡವನ್ನು ಯಶಸ್ಸಿನ ದಡಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಪ್ರತಿ ಪಂದ್ಯದಲ್ಲಿ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಭಾರತೀಯ ಟೆಸ್ಟ್‌ ಕ್ರಿಕೆಟ್‌ ತಂಡದ ಕಾಯಂ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ ಹಾಗೂ ಅವರ ಪ್ರಯತ್ನದ ಫಲವಾಗಿ ಹಲವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. ಹಾಗಾಗಿ, ಅವರನ್ನು ‘ಮ್ಯಾಚ್‌ ವಿನ್ನರ್‌’ ಎಂದು ಹೇಳಿದರೆ ಅತಿಯಾಗದು. ಟೆಸ್ಟ್‌ ಆಗಲಿ, ಒನ್‌ ಡೇ, ಟಿ20 ಅಥವಾ ಐಪಿಎಲ್‌ ಪಂದ್ಯವೇ ಆಗಿರಲಿ, ಸೋಲಿನ ಅಂಚಿನಲ್ಲಿದ್ದ ತಂಡವನ್ನು ಏಕಾಂಗಿಯಾಗಿ ಬ್ಯಾಟ್‌ ಹಾಗೂ ಬಾಲ್‌ ಮೂಲಕ ಮೇಲಕ್ಕೆತ್ತಿದ ಉದಾಹರಣೆಗಳಿವೆ.

ಹಾಗಂತ, ಅವರೇನೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅದ್ಭುತವಾದ್ದನ್ನು ಮಾಡುವುದಿಲ್ಲ. ಬದಲಿಗೆ, ತಮ್ಮ ಆಟ­ವನ್ನು ಶಿಸ್ತುಬದ್ಧವಾಗಿ ಆಡುತ್ತಾರಷ್ಟೇ. ಉದಾಹರಣೆಗೆ, ರವೀಚಂದ್ರನ್‌ ಅಶ್ವಿನ್‌ ರೀತಿಯಲ್ಲಿ ಜಡೇಜಾ ಅವ­ರೇನೂ ಒಂದೇ ಓವರ್‌ನಲ್ಲಿ 6 ಬಾಲ್‌ಗಳನ್ನು ಒಂದ­ಕ್ಕಿಂತ ಒಂದು ಭಿನ್ನವಾಗಿ ಎಸೆಯುವುದಿಲ್ಲ. ಬದಲಿಗೆ ಸ್ಟಂಪ್‌ ಟು ಸ್ಟಂಪ್‌ ಹಾಗೂ ಲೈನ್‌ ಮತ್ತು ಲೆಂಥ್‌ ಕರಾರು­ವಕ್ಕಾಗಿ ಬೌಲಿಂಗ್‌ ಮಾಡುತ್ತಾರೆ. ಅವರ ಶಿಸ್ತಿನ  ಬೌಲಿಂಗ್‌ಗೆ ಪಿಚ್‌ ಕೂಡ ಸಾಥ್‌ ನೀಡಿದರೆ ಮುಗೀತು ಎದುರಾಳಿಯ ವಿಕೆಟ್‌ಗಳು ಬೀಳುತ್ತಾ ಹೋಗುತ್ತವೆ. ಬ್ಯಾಟಿಂಗ್‌ನಲ್ಲೂ ಅಷ್ಟೇ ವಿಶೇಷವಾದ್ದನ್ನು ಏನೂ ಮಾಡಲು ಹೋಗುವುದಿಲ್ಲ, ಚೆಂಡಿನ ದಿಕ್ಕು ಮತ್ತು ಗತಿಯನ್ನು ಗುರು­ತಿಸಿ ಅದನ್ನು ಅಷ್ಟೇ ಶಿಸ್ತು ಬದ್ಧವಾಗಿ ಬಲವಾಗಿ ಹೊಡೆಯುತ್ತಾರೆ; ಚೆಂಡು ಬೌಂಡ್ರಿ ಗೆರೆಯನ್ನು ದಾಟಿರುತ್ತದೆ. ಇನ್ನು ಫೀಲ್ಡಿಂಗ್‌ನಲ್ಲಿ ಮಾತಾಡು­ವಂತೆಯೇ ಇಲ್ಲ, ಬಹುಶಃ ಮೊಹಮ್ಮದ್‌ ಕೈಫ್‌ ಮತ್ತು ಯುವರಾಜ್‌ ಸಿಂಗ್‌ ಅವರ ಬಳಿಕ ಭಾರತಕ್ಕೆ ಸಿಕ್ಕ ಅದ್ಭುತ ಫೀಲ್ಡರ್‌ ಇವರು. ಅವರ ಬಳಿ ಬಾಲ್‌ ಹೋದರೆ ಎದುರಾಳಿ ತಂಡದ ಬ್ಯಾಟರ್‌ ರನ್‌ ಕದಿಯಲು ಮುಂದಾಗುವುದೇ ಇಲ್ಲ! ಅಷ್ಟರ ಮಟ್ಟಿಗೆ ಅವರ ಥ್ರೋಗಳು ಕರಾರುವಕ್ಕಾಗಿ­ರುತ್ತವೆ ಮತ್ತು ಫೀಲ್ಡಿಂಗ್‌ ಮೂಲಕವೇ ಬೌಂಡರಿಗಳನ್ನು ಉಳಿಸಿ ತಂಡಕ್ಕೆ ನೆರವಾಗುವ ಚಾಕಚಕ್ಯತೆ ಅವರಲ್ಲಿ ಇದೆ. ಈ ವರೆಗೆ 59 ಟೆಸ್ಟ್‌ಗಳಿಂದ 242 ವಿಕೆಟ್‌ ಹಾಗೂ 2 ಶತಕಗಳೊಂದಿಗೆ 2369 ರನ್‌ ಗಳಿಸಿದ್ದಾರೆ. 168 ಅಂತಾರಾಷ್ಟ್ರೀಯ ಒಂದು ದಿನದ ಪಂದ್ಯಗಳನ್ನಾಡಿ 2411 ರನ್‌ಗಳೊಂದಿಗೆ 188 ವಿಕೆಟ್‌ಗಳನ್ನು ಪಡೆದುಕೊಂಡಿ­ದ್ದಾರೆ. 57 ಟಿ20 ಪಂದ್ಯಗಳಲ್ಲಿ47 ವಿಕೆಟ್‌ ಹಾಗೂ 326 ರನ್‌ ಗಳಿಸಿದ್ದಾರೆ.

1988 ಡಿಸೆಂಬರ್‌ 6ರಂದು ರವೀಂದ್ರ ಜಡೇಜಾ ಗುಜರಾತ್‌ನ ಜಾಮ್‌ನಗರದ ರಜಪೂತ್‌ ಕುಟುಂಬದಲ್ಲಿ ಜನಿಸಿದರು. ತಂದೆ ಅನಿರುದ್ಧ ಖಾಸಗಿ ಏಜೆನ್ಸಿ ಪರವಾಗಿ ವಾಚ್‌ಮನ್‌ ಕೆಲಸ ಮಾಡುತ್ತಿದ್ದರು.  ಮಗ ಸೇನೆ ಸೇರಿಕೊಳ್ಳಲಿ ಎಂದು ತಂದೆ ಆಸೆ ಪಟ್ಟರೆ ಕ್ರಿಕೆಟ್‌ ಆಗುವ ಕನಸು ಕಂಡಿದ್ದ ಜಡೇಜಾಗೆ ತಾಯಿ ಲತಾ ಆಸರೆಯಾಗಿ ನಿಂತಿದ್ದರು. ಆದರೆ, ವಿಧಿ ಬೇರೆಯದ್ದೇ ಆಟ ಹೂಡಿತ್ತು. 2005ರಲ್ಲಿಅವರ ತಾಯಿ ರಸ್ತೆ ಅಪಘಾತದಲ್ಲಿಮೃತಪಟ್ಟರು. ಆಗ ಜಡೇಜಾ ಅವರಿಗೆ ಕೇವಲ 17 ವರ್ಷ. ತೀವ್ರ ಆಘಾತಕ್ಕೆ ಒಳಗಾಗಿದ್ದ ಅವರು ಕ್ರಿಕೆಟ್‌ ತೊರೆಯುವ ನಿರ್ಧಾರ ಮಾಡಿದ್ದರಂತೆ. ಆದರೆ, ತಾಯಿ ಆಸೆ ನೆರವೇರಿಸುವ ಪಣ ತೊಟ್ಟಂತೆ ತಮಗೆ ಸಿಕ್ಕ ಅವಕಾಶ­ಗಳನ್ನು ಬಾಚಿಕೊಂಡು ಜಡೇಜಾ ಈಗ ವಿಶ್ವದ ನಂ.1 ಆಲ್‌ರೌಂಡರ್‌ ಆಗಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದಾರೆ. 2016ರಲ್ಲಿರೀವಾ ಸೋಲಂಕಿಯನ್ನು ವರಿಸಿದರು, ದಂಪತಿಗೆ ಒಂದು ಹೆಣ್ಣು ಮಗುವಿದೆ. 

‘ಜಡ್ಡು’, ‘ರಾಕ್‌ ಸ್ಟಾರ್‌’, ‘ಸರ್‌ ಜಡೇಜಾ’ ಇತ್ಯಾದಿ ಅಡ್ಡ  ಹೆಸರುಗಳನ್ನು ಹೊಂದಿರುವ ಜಡೇಡಾ, ಮೈದಾನದಲ್ಲಿಶತಕ ಅಥವಾ ಅರ್ಧ ಶತಕ ಸಿಡಿಸಿದಾಗ ಕತ್ತಿ ವರಸೆ ರೀತಿಯಲ್ಲಿ ಬ್ಯಾಟ್‌ ಬೀಸುವುದನ್ನು ನೋಡುವುದೇ ಚೆಂದ. 16ನೇ ವಯಸ್ಸಿಗೆ ಜಡೇಜಾ ಅಂಡರ್‌ 19 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದರು. ಆದರೆ, ಭಾರತ ತಂಡ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದೆ 2008ರಲ್ಲೂ ಅಂಡರ್‌-19 ಟೀಮ್‌ ಆಯ್ಕೆಯಾದರಲ್ಲದೇ ವೈಸ್‌ ಕ್ಯಾಪ್ಟನ್‌ ಕೂಡ ಆದರು. ಆಗ ಕ್ಯಾಪ್ಟನ್‌ ಆಗಿದ್ದವರು ಮತ್ತೊಬ್ಬ ದಿಗ್ಗಜ ವಿರಾಟ್‌ ಕೊಹ್ಲಿ. ಈ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತೀಯ ತಂಡ ವಿಶ್ವಕಪ್‌ ಎತ್ತಿ ಹಿಡಿಯಿತು. ಜಡೇಜಾ 6 ಪಂದ್ಯಗಳಿಂದ 10 ವಿಕೆಟ್‌ ಪಡೆದುಕೊಂಡರು. 2006-07ರ ಸಾಲಿನ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟರು. ದೇಶಿಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ಪರವಾಗಿ ಅವರು ಆಡುತ್ತಾರೆ. ರಣಜಿ ಪಂದ್ಯದಲ್ಲಿ ವಿಶಿಷ್ಟ ಸಾಧನೆ ಅವರ ಹೆಸರಿನಲ್ಲಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರು ತ್ರಿಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದಲ್ಲಿ 8ನೇ ಆಟಗಾರ ಎಂಬ ಖ್ಯಾತಿ ಅವರ ಬೆನ್ನಿಗಿದೆ. 2008-09ರ ಸಾಲಿನ ರಣಜಿ ಕ್ರಿಕೆಟ್‌ ಪಂದ್ಯಾವಳಿ ಅದ್ಭುತ ಆಲ್‌ರೌಂಡ್‌ ಆಟದಿಂದ ಆಯ್ಕೆಗಾರ ಗಮನ ಸೆಳೆದರು. ಈ ಟೂರ್ನಿಯಲ್ಲಿ ಅವರು 739 ರನ್‌ ಹಾಗೂ 42 ವಿಕೆಟ್‌ ಪಡೆದುಕೊಂಡು, ಭಾರತೀಯ  ಒಂದು ದಿನದ ಕ್ರಿಕೆಟ್‌ ತಂಡದ ಕದ ತಟ್ಟಿದರು. ಕೊಲಂಬೊದಲ್ಲಿ ನಡೆದ ತಮ್ಮ ಮೊದಲ ಅಂತಾರಾಷ್ಟ್ರೀಯ ಒಡಿಐನಲ್ಲಿ 60 ರನ್‌ ಗಳಿಸಿದರು. ಆದರೆ, ಯಾವುದೇ ವಿಕೆಟ್‌ ಪಡೆಯಲಿಲ್ಲ. 2012ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ನಂತರ ಜಡ್ಡು ನಿಧಾನವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ತಂಡದ ಅವಿಭಾಜ್ಯ ಅಂಗವಾದರು.

ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಅದರದ್ದೇ ಆದ ಮಹತ್ವವಿದೆ; ವಿಶಿಷ್ಟ ಪರಂಪರೆಯಿದೆ. ಯಾಕೆಂದರೆ, ವಿಶ್ವದ ಅತ್ಯುತ್ತಮ ಕ್ಯಾಪ್ಟನ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಮಹೇಂದ್ರ ಸಿಂಗ್‌ ಧೋನಿ ಅವರು ಸಿಎಸ್‌ಕೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯದಿದ್ದಾರೆ. ಆ ತಂಡದ ನೇತೃತ್ವ  ಈಗ ಸವ್ಯಸಾಚಿ ಜಡೇಜಾ ಹೆಗಲಿಗೇರಿದೆ. ಈವರೆಗೆ ಅವರ ಆಟವನ್ನು ನೋಡುತ್ತಾ ಬಂದವರಿಗೆ ನಾಯಕನಾಗಿಯೂ ಜಡೇಜಾ ಯಶಸ್ವಿಯಾಗುತ್ತಾರೆಂಬ ನಂಬಿಕೆ ಸಿಎಸ್‌ಕೆ ತಂಡದ ಅಭಿಮಾನಿಗಳದ್ದು.



ಬುಧವಾರ, ಮೇ 4, 2022

Elon Musk: ಸಾಹಸಿ ಉದ್ಯಮಿ ಮಸ್ಕ್‌

ಎಲಾನ್‌ ಮಸ್ಕ್‌ ಎಂಬ ವ್ಯಕ್ತಿ ಯಾವುದೇ ಅಳತೆಗೋಲಿಗೆ ಸಿಗುವ ಜಾಯಮಾನದವರಲ್ಲ; ಅವರಿಗೆ ಅವರೇ ಅಳತೆಗೋಲು, ಹೊಡೆದಿದ್ದೆಲ್ಲಗೋಲು!


- ಮಲ್ಲಿಕಾರ್ಜುನ ತಿಪ್ಪಾರ
ಒಂದಷ್ಟು ಪ್ರತಿಭೆ; ಮತ್ತೊಂದಿಷ್ಟು ಹುಚ್ಚುತನ, ಒಂದಷ್ಟು ಉಡಾಫೆ; ಮತ್ತೊಂದಿಷ್ಟು ಧೈರ್ಯ, ಒಂದಷ್ಟು ಸಾಹಸ; ಮತ್ತೊಂದಿಷ್ಟು ಹುಚ್ಚು ಸಾಹಸ, ಒಂದಷ್ಟು ತಿಕ್ಕುಲತನ; ಮತ್ತೊಂದಿಷ್ಟು ಮೊಂಡತನ, ಒಂದಷ್ಟು ಹುಮ್ಮಸ್ಸು; ಮತ್ತೊಂದಿಷ್ಟು ಕನಸು, ಒಂದಷ್ಟು ಸೊಗಸುಗಾರ; ಮತ್ತೊಂದಿಷ್ಟು ಮೋಜುಗಾರ... ಈ ಒಂದಿಷ್ಟು ಮತ್ತು ಮತ್ತೊಂದಿಷ್ಟು ಒಟ್ಟು ಮೊತ್ತವೇ ಎಲಾನ್‌ ರೀವ್‌ ಮಸ್ಕ್‌ ಅಲಿಯಾಸ್‌ ಎಲಾನ್‌ ಮಸ್ಕ್‌.

ಭೂಮಿ ಮೇಲಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌, ಹೆಚ್ಚಾಗಿ ನಷ್ಟವನ್ನು ಉಲಿಯುತ್ತಿದ್ದ ‘ಟ್ವಿಟರ್‌’ ಖರೀದಿಯ ಮೂಲಕ ತಾನೆಂಥ ಹುಚ್ಚು ಸಾಹಸಿಗ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈ ಹುಚ್ಚುತನ ಅವರ ವ್ಯಕ್ತಿತ್ವದಲ್ಲಿದೆ, ಯಾರೂ ಕಾಣದ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳುವ ಛಾತಿ ಅವರಿಗೆ ಒಗ್ಗಿದೆ ಅದೇ ಕಾರಣಕ್ಕೆ. ಎಷ್ಟೋ ರಾಷ್ಟ್ರಗಳು ಚಂದ್ರನಲ್ಲಿಗೆ ಹೋಗಲು ಪ್ಲ್ಯಾನ್‌ ಮಾಡುತ್ತಿರುವಾಗಲೇ, ಮಂಗಳನ ಅಂಗಳಲ್ಲಿ ಮಾನವರ ಕಾಲನಿ ಸೃಷ್ಟಿಸಬೇಕೆಂಬ ಹುಚ್ಚು ಕನಸು ಕಾಣಲು ಸಾಧ್ಯವಾಗುವುದು ಮಸ್ಕ್‌ಗೆ ಮಾತ್ರವೇ ಸಾಧ್ಯ. ಬರೀ ಕನಸಷ್ಟೇ ಅಲ್ಲ, ಆ ದಿಶೆಯಲ್ಲಿ ಯೋಜಿಸಿ, ರೂಪಿಸಿ ಮುಂದಡಿ ಇಡಬಲ್ಲ ಧೈರ್ಯಗಾರನೂ.

ಇಲ್ಲಿ ಒಂದು ಘಟನೆ ಹೇಳಬೇಕು; ಬಿಟ್‌ ಕಾಯಿನ್‌ ಕುರಿತು ಮಸ್ಕ್‌ ಒಂದೇ ಒಂದು ಮಸ್ಕರಿ ಟ್ವೀಟ್‌ ಮಾಡಿದ್ದರು. ಅದರಿಂದ ಅವರ ಟೆಸ್ಲಾ ಕಂಪನಿಗೆ ಒಂದು ಲಕ್ಷ  ಕೋಟಿ ರೂ.ಗೆ ಅಧಿಕ ನಷ್ಟ ಉಂಟು ಮಾಡಿತು ಮತ್ತು ವಿಶ್ವದ ನಂಬರ್‌ 1 ಶ್ರೀಮಂತ ಪಟ್ಟ ಕಳೆದುಕೊಳ್ಳಬೇಕಾಯಿತು. ಮತ್ತೊಮ್ಮೆ ಟೆಸ್ಲಾ ಕಂಪನಿಯು ವರ್ಷಕ್ಕೆ 5 ಲಕ್ಷ ಕಾರುಗಳನ್ನು ತಯಾರಿಸುತ್ತಿದೆ ಎಂಬ ಉತ್ಪ್ರೇಕ್ಷೆಯ ಹೇಳಿಕೆ ನೀಡಿದ್ದಕ್ಕಾಗಿ ಕಂಪನಿಯ ಪಾಲುದಾರರು ಮಸ್ಕ್‌ನ ಮೇಲೆ ಸಿಟ್ಟಾಗಿ ಈತನ ಟ್ವಿಟ್ಟರ್‌ ಖಾತೆಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ಮಸ್ಕ್‌ ಅವರ ಈ ತರಹದ ಹುಚ್ಚಾಟಗಳು ಬೇಕಾದಷ್ಟಿವೆ. ಆದರೆ, ಅವರ ಒಟ್ಟಾರೆ ವ್ಯಕ್ತಿತ್ವದಲ್ಲಿನಮಗೆ ಪ್ರೇರಣೆಯಾಗಬಲ್ಲಸಾಕಷ್ಟು ಸಂಗತಿಗಳಿವೆ ಎಂಬುದೂ ಅಷ್ಟೇಸತ್ಯ. 

ಎಲಾನ್‌ ಮಸ್ಕ್‌ ಅವರ ಹೆಸರಿನಲ್ಲಿ ಕಂಪನಿಗಳಿಗೆ ಒಂದಾ, ಎರಡಾ...? ಸ್ಪೇಸ್‌ಎಕ್ಸ್‌, ಟೆಸ್ಲಾ, ಬೋರಿಂಗ್‌ ಕಂಪನಿ, ಗಿ.್ಚಟಞ, ಪೇಪಾಲ್‌, ನ್ಯೂರೊಲಿಂಕ್‌, ಓಪನ್‌ಎಐ, ಝಿಪ್‌ 2, ಮಸ್ಕ್‌ ಫೌಂಡೇಷನ್‌(ಈ ಕಂಪನಿಗಳ ಪಟ್ಟಿಯಲ್ಲಿಕೆಲವು ಮಾರಿದ್ದು ಇದೆ)... ಹೀಗೆ ಪಟ್ಟಿ ದೊಡ್ಡದಿದೆ; ಈಗ ಹೊಸದಾಗಿ ಟ್ವಿಟರ್‌ ಮಾಲೀಕ. ಅವರ ಈ ಸಾಹಸ ಕಂಡು, ನೇಟಿಜನ್ಸ್‌ ಆ ಕಂಪನಿ ಖರೀದಿಸಿ, ಈ ಕಂಪನಿ ಖರೀದಿಸಿ ಎಂಬ ಪುಕ್ಕಟೆ ಸಲಹೆಗಳನ್ನು ಕೂಡ ಕೊಡುತ್ತಿದ್ದಾರೆ! ಈ ಸಲಹೆಗಳು ನಿಜವಾದರೂ ಆಗಬಹುದು. ಯಾಕೆಂದರೆ, 2017ರಲ್ಲಿಮಸ್ಕ್‌ ಅವರು, ‘‘ಐ ಲವ್‌ ಟ್ವಿಟರ್‌,’’ ಎಂದು ಟ್ವೀಟ್‌ ಮಾಡಿದ್ದರು. ‘‘ಹಾಗಿದ್ದರೆ ನೀವು ಅದನ್ನು ಖರೀದಿಸಿ,’’ ಎಂದು ನಿರೂಪಕ ಡೇವ್‌ ಸ್ಮಿತ್‌ ಮರು ಪ್ರತಿಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್‌, ‘‘ಎಷ್ಟಂತೆ ಅದರ ಬೆಲೆ,’’ ಎಂದು ಪ್ರಶ್ನಿಸಿದ್ದರು. ಮೊನ್ನೆ ಮಸ್ಕ್‌ ಟ್ವಿಟರ್‌ ಖರೀದಿಸಿದಾಗ ಈ ಹಳೆಯ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು!

ಎಲಾನ್‌ ಮಸ್ಕ್‌ ಅವರು 1971ರ ಜೂನ್‌ 28ರಂದು ದಕ್ಷಿಣ ಆಫ್ರಿಕಾದಲ್ಲಿ, ಕೆನಡಾದ ತಾಯಿತಂದೆಗಳಿಗೆ ಜನಿಸಿದರು. ಅವರ ಶಾಲಾ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ. ಅವರೇ ಹೇಳಿಕೊಂಡಿರುವಂತೆ; ಮಸ್ಕ್‌ ಪುಸ್ತಕದ ಹುಳು. ಎನ್‌ಸೈಕ್ಲೋಪಿಡಿಯಾಗಳಿಂದ ಹಿಡಿದು ಕಾಮಿಕ್‌ ಬುಕ್‌ ಗಳವರೆಗೆ ಎಲ್ಲವನ್ನು ಓದುತ್ತಿದ್ದರಂತೆ. ಪ್ರಿಟೋರಿಯಾ ನಗರದಲ್ಲಿರುವ ವಾಟರ್‌ಕ್ಲೂಫ್‌ ಹೌಸ್‌ ಪ್ರಿಪರೇಟರಿ ಸ್ಕೂಲ್‌ ಸೇರಿಕೊಂಡರು. ಬಳಿಕ ಪ್ರಿಟೋರಿಯಾ ಬಾಯ್ಸ್‌ ಹೈಸ್ಕೂಲ್‌ನಲ್ಲಿಶಿಕ್ಷ ಣ ಪಡೆದುಕೊಂಡರು. ಈ ದಿನಗಳು ಅವರಿಗೆ ಹೆಚ್ಚು ಏಕಾಂಗಿತನವನ್ನು ಕೊಟ್ಟವು. ಆದರೆ, ಎಲಾನ್‌ ಎಂಥ ಬುದ್ಧಿಶಾಲಿ ಎಂದರೆ, 10ನೇ ವಯಸ್ಸಿನಲ್ಲೇ ಸಾಫ್ಟ್‌ವೇರ್‌ ಕೋಡಿಂಗ್‌ ಕಲಿತುಕೊಂಡು, 12ನೇ ವಯಸ್ಸಿನಲ್ಲೇ ಒಂದು ವಿಡಿಯೋ ಗೇಮ್‌ ತಯಾರಿಸಿದರು. ಮುಂದೆ, ಎಕಾನಮಿಕ್ಸ್‌ ಪದವಿಗೆ ಸೇರಿದರು. ಆದರೆ, ಈ ಕೋರ್ಸ್‌ ತಮಗಲ್ಲಎಂಬುದು ಗೊತ್ತಾಗುತ್ತಿದ್ದಂತೆ  ಸೇರಿದ ಎರಡು ದಿನದಲ್ಲೇ ಅದನ್ನು ಬಿಟ್ಟು ‘ಝಿಪ್‌2’ ಎಂಬ ಸಾಫ್ಟ್‌ವೇರ್‌ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಅದನ್ನು ಕಾಂಪಾಕ್‌ ಕಂಪನಿಗೆ 340 ದಶಲಕ್ಷ  ಡಾಲರಿಗೆ ಮಾರಾಟ ಮಾಡಿದರು. ಆಗ ಮಸ್ಕ್‌ ಅವರಿಗೆ ಕೇವಲ 28 ವರ್ಷ. ಈ ವಯಸ್ಸಿಗೆ ಹೊತ್ತಿಗೆ ನಾವು- ನೀವಾದರೆ ಕೆಲಸ ಹುಡ್ಕೊಂಡು ಅಲೆಯುತ್ತಿದ್ದೆವು. ಆನಂತರ ಪೇಪಾಲ್‌ ಎಂಬ ಆನ್‌ಲೈನ್‌ ಹಣಪಾವತಿ ಕಂಪನಿಯನ್ನು ಹುಟ್ಟುಹಾಕಿ ನಂತರ ಅದನ್ನು ಇಬೇ ಕಂಪನಿಗೆ 120 ಕೋಟಿ ಡಾಲರ್‌ಗೆ ಮಾರಾಟ ಮಾಡಿದರು ಮಸ್ಕ್‌. ಟೆಸ್ಲಾಎಂಬ ವಿದ್ಯುತ್‌ ಚಾಲಿತ ಕಾರ್‌ ತಯಾರಿಕಾ ಕಂಪನಿ ಪ್ರಾರಂಭಿಸಿದರು. ಚಿಕ್ಕಂದಿನಿಂದಲೇ ಐಸಾಕ್‌ ಅಸಿಮೋವ್‌ ಮುಂತಾದ ವಿಜ್ಞಾನ ಲೇಖಕರನ್ನು ಓದುತ್ತ ಬೆಳೆದ ಮಸ್ಕ್‌ಗೆ ಬಾಹ್ಯಾಕಾಶ ಸಂಶೋಧನೆಯ ಹುಚ್ಚು. ಅದಕ್ಕಾಗಿಯೇ ಸ್ಪೇಸ್‌ ಎಕ್‌ ್ಸಪ್ಲೋರೇಷನ್‌ (ಸ್ಪೇಸ್‌ಎಕ್ಸ್‌) ಎಂಬ ಕಂಪನಿಯನ್ನು ಆಂಭಿಸಿದರು. ಮಸ್ಕ್‌ ಅವರ ಉದ್ಯಮ ಹುಚ್ಚು ಸಾಹಸಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ಒಂದರ ಮೇಲೊಂದು ಕಂಪನಿಗಳು ಆರಂಭಿಸುವುದು, ಇಲ್ಲವೇ ಸ್ವಾಧೀನ ಮಾಡಿಕೊಳ್ಳುವುದು ಅಥವಾ ಮಾರುವುದು ಈವರೆಗೆ ನಡೆದುಕೊಂಡು ಬಂದಿದೆ. 

ಉದ್ಯಮ ಸಾಹಸದಂತೆ ಅವರ ವೈಯಕ್ತಿಕ ಜೀವನವೂ ರೋಚಕವಾಗಿದೆ. ಎರಡು ಮದುವೆಗಳಾಗಿವೆ. ಸದ್ಯಕ್ಕೆ ಅವಿವಾಹಿತ. ಮೊದಲ ಹೆಂಡತಿ ಜಸ್ಟಿನ್‌ ವಿಲ್ಸನ್‌. ಈಕೆ ಕೆನಡಾದ ಲೇಖಕಿ. 2000ರಿಂದ 2008ರವರೆಗೆ ಮದುವೆ ಬಾಳಿಕೆ ಬಂತು. ಆ ನಂತರ ಇಂಗ್ಲಿಷ್‌ ನಟಿ ತಾಲುಲಾ ರಿಲೇ ಅವರನ್ನು 2010ರಲ್ಲಿಮದುವೆಯಾದರು; 2016ರಲ್ಲಿಬೇರೆ ಬೇರೆಯಾದರು. ಮಸ್ಕ್‌ಗೆ ಒಟ್ಟು ಆರು ಮಕ್ಕಳಿದ್ದಾರೆ. 2018ರಿಂದ ಕೆನಡಾದ ಗಾಯಕಿ, ಸಾಂಗ್‌ ರೈಟರ್‌ ಗ್ರೀಮ್ಸ್‌ (ಕ್ಲೇರ್‌ ಎಲಿಸ್‌ ಬೌಚರ್‌) ಜತೆ ಸಂಬಂಧವಿಟ್ಟುಕೊಂಡಿದ್ದಾರೆ. ಒಂದು ಮಗುವಿದೆ. ಹಲವು ಗುಪ್ತ ಪ್ರಣಯಗಳೂ ಇವೆ.  ಫೋರ್ಬ್ಸ್‌ ಪತ್ರಿಕೆ ಮಸ್ಕ್‌ ಅವರನ್ನು ಜಗತ್ತಿನ 25 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಸಾಲಿನಲ್ಲಿಸೇರಿಸಿದೆ.

ಮಸ್ಕ್‌ ಅವರಲ್ಲಿಇನ್ನೂ ಏನೇನು ಕನಸುಗಳಿವೆಯೋ? ಎಂಥ ಹುಚ್ಚ ಸಾಹಸಗಳಿಗೆ ಅಣಿಯಾಗುತ್ತಿದ್ದಾರೋ ಯಾರಿಗೆ ಗೊತ್ತು? ಅನಿರೀಕ್ಷಿತ ನಿರ್ಧಾರ ಕೈಗೊಳ್ಳುವುದರಲ್ಲಿಸಿದ್ಧಹಸ್ತರಾಗಿರುವ ವ್ಯಕ್ತಿಯ ನಡೆಯನ್ನು ಊಹಿಸುವುದು ಕಷ್ಟ. ಅವರ ಈ ಗುಣವೇ ಅವರನ್ನು ಇಂದು ವಿಶ್ವದ ಶ್ರೀಮಂತ ವ್ಯಕ್ತಿಸ್ಥಾನದಲ್ಲಿತಂದುಕೂರಿಸಿದೆ. ನೆಲದಿಂದ ಚಂದ್ರನಲ್ಲಿಗೆ ನೆಗೆಯುವ ಸಾಹಸಿ ಗುಣವನ್ನು ಗಟ್ಟಿಗೊಳಿಸಿದೆ.