ಶನಿವಾರ, ಏಪ್ರಿಲ್ 12, 2008

ದೂರ ನಿಲ್ಲಿ ಕವನಗಳೇ ..


ಸಾಕಾಗಿದೆ ಕವನಗಳ
ಸಹವಾಸ, ಹೂತ್ತುಗೂತ್ತಿಲ್ಲದೆ
ದಿಗ್ಗನೇ ಎದ್ದು ನಿಲ್ಲುವ ಭಾವಗಳಿಗೆ
ಅಕ್ಷರ ಅಂಗಿ ತೊಡಿಸುವ
ಪದಗಳೇ ದೂರ ನಿಲ್ಲಿ.

ಕಲ್ಪನೆ, ಕೌತುಕ ,
ಕಾಮವಾಂಛೆ ಮೀರಿ
ನಿಲ್ಲಲು ಸೆಣಿಸುತ್ತಿದ್ದೇನೆ
ಅಡ್ಡ ಬಂದು ಸೆಡ್ಡು
ಹೊಡೆಯಬೇಡಿ, ಪದಗಳ
ಬೇಡಿಯೊಳಗೆ ಬಂಧಿಯಾಗಲು
ನನಗಿಷ್ಟವಿಲ್ಲ

ಕನಸು, ಕನವರಿಕೆ
ನೀಗಲೆಂದೇ ದೂರ
ಹೋಗಿ ಎಂಬ ನಿವೇದನೆ
ನಿಮಗೆ, ಅದು ಹಮ್ಮು
ಎಂದರೆ ನಾನಲ್ಲ ಹೂಣೆ

ಆಕಾಶದ ಆಚೆ ಹಾರಿ
ಭೂ ಲೋಕವೆಲ್ಲಾ ತೂರಿ
ಸ್ವತಂತ್ರ, ಸ್ವೇಚ್ಚೆಯಡಿ
ಸಾಗುವ ಹುಮ್ಮಸ್ಸು ನನಗೆ
ತೊದರಗಾಲು ಹಾಕಬೇಡಿ
ದೂರ ನಿಲ್ಲಿ ಕವನಗಳೇ ....