ಮಂಗಳವಾರ, ಮೇ 17, 2022

Ravindra Jadeja- ಜಡೇಜಾ ಅಂದರೆ 'ಜಯ'

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿಭಾರತೀಯ ಕ್ರಿಕೆಟ್‌ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್‌ನಲ್ಲಿಸಿಎಸ್‌ಕೆ ತಂಡದ ನಾಯಕ.


- ಮಲ್ಲಿಕಾರ್ಜುನ ತಿಪ್ಪಾರ
ಸಂದರ್ಶಕ: ವೃತ್ತಿ ಜೀವನದ ಅಂತ್ಯಕ್ಕೆ ನಿಮ್ಮ ಹೆಸರಿನಲ್ಲಿವಿಶಿಷ್ಟ ದಾಖಲೆ ಯಾವುದು ಇರಬೇಕೆಂದು ಇಚ್ಛಿಸುತ್ತೀರಿ?
ಕ್ರಿಕೆಟಿಗ: ಒಂದೇ ಪಂದ್ಯದಲ್ಲಿ ಐದು ವಿಕೆಟ್‌ ಹಾಗೂ ಶತಕ ಗಳಿಸಿದ ದಾಖಲೆ.

ಹೀಗೆ, ತಮ್ಮ ದಾಖಲೆ ಯಾವುದು ಇರಬೇಕೆಂದು ಹೇಳಿ ಅದನ್ನು ಸಾಧಿಸಿದ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ವಿಶ್ವದ ನಂ.1 ಆಲ್‌ರೌಂಡರ್‌ ರವೀಂದ್ರ ಜಡೇಜಾ. ಆದರೆ, ಅವರ ವೃತ್ತಿಜೀವನ ಅಂತ್ಯವಾಗುತ್ತಿಲ್ಲ; ಈಗಷ್ಟೇ ಉಚ್ಛ್ರಾಯ ಸ್ಥಿತಿಗೆ ತಲುಪಿದೆ!

ಖಾಸಗಿ ಕ್ರೀಡಾ ವಾಹಿನಿಯೊಂದು 2018ರಲ್ಲಿನಡೆಸಿದ ಸಂದರ್ಶನದ ತುಣುಕು ಇದು. ಇದಾಗಿ ನಾಲ್ಕು ವರ್ಷದಲ್ಲೇ ಜಡೇಜಾ ತಮ್ಮ ಕನಸಿನ ದಾಖಲೆ ಪೂರ್ತಿಗೊಳಿಸುವ ಟೆಸ್ಟ್‌ ಪಂದ್ಯವನ್ನು ಆಡಿ­ದರು. ಕಳೆದ ಮಾರ್ಚ್‌ ತಿಂಗಳಲ್ಲಿ ಮೊಹಾಲಿಯಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಜಡೇಜಾ ಅವರು 7ನೇ ವಿಕೆಟ್‌ನಲ್ಲಿ ಅಮೋಘ 175 ರನ್‌ಗಳನ್ನು ಸಿಡಿಸಿ, ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಗೊಂಚಲು ಕೂಡ ಪಡೆದುಕೊಂಡು, ತಮ್ಮ ಕನಸಿನ ದಾಖಲೆ ಸಾಧಿಸಿ ಬೀಗಿದರು. ಈ ಸಂದರ್ಶನದ ತುಣುಕನ್ನು ಯಾಕೆ ಪ್ರಸ್ತಾಪಿಸಬೇಕಾಯಿತು ಎಂದರೆ, ತಾವು ಅಂದುಕೊಂಡಿದ್ದನ್ನು ಛಲ ಬಿಡದೇ ಸಾಧಿಸುವ ಗುಣ ಅವರಲ್ಲಿದೆ. ಆ ಗುಣವೇ ಅವರನ್ನೀಗ ನಾಲ್ಕು ಬಾರಿ ಐಪಿಎಲ್‌ ಚಾಂಪಿಯನ್‌ ಪಟ್ಟ ಏರಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ನಾಯಕತ್ವದವರೆಗೂ ಕರೆ ತಂದಿದೆ. 

ವರ್ಷದಿಂದ ವರ್ಷಕ್ಕೆ ಪರಿಪೂರ್ಣ ಆಟಗಾರರಾಗಿ ಬದಲಾಗುತ್ತಿರುವ ರವೀಂದ್ರ ಜಡೇಜಾ ಭಾರತೀಯ ಕ್ರಿಕೆಟ್‌ನ ಬಹುದೊಡ್ಡ ಆಸ್ತಿ ಮತ್ತು ಇದೇ ಮಾತನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೂ ಅನ್ವಯಿಸಬಹುದು. ಜಡೇಜಾ 2012ರ ಆವೃತ್ತಿಯಿಂದ ಸಿಎಸ್‌ಕೆ ಬಳಗದಲ್ಲಿದ್ದಾರೆ. ಆ ಆವೃತ್ತಿಯ ಹರಾಜಿನಲ್ಲಿ ಅವರನ್ನು 9.8 ಕೋಟಿ ರೂಪಾಯಿಗೆ ಸಿಎಸ್‌ಕೆ ಫ್ರಾಂಚೈಸಿ ಖರೀದಿಸಿತ್ತು. ಅದು ಆಗ ದಾಖಲೆ. ಕಳೆದ ಹರಾಜಿಗೂ ಮೊದಲು 16 ಕೋಟಿ ರೂಪಾಯಿ ತೆತ್ತು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. 33 ವರ್ಷದ ಜಡೇಜಾ ಐಪಿಎಲ್‌ ಸಿಎಸ್‌ಕೆ ಪರವಾಗಿ ಅದ್ಭುತವಾದ ಆಟವನ್ನೇ ಆಡಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 200 ಪಂದ್ಯಗಳನ್ನಾಡಿ 2386 ರನ್‌ಗಳೊಂದಿಗೆ 127 ವಿಕೆಟ್‌ ಕೂಡ ಕಿತ್ತಿದ್ದಾರೆ. 

ಕ್ರಿಕೆಟ್‌ನಲ್ಲಿ ‘ಸವ್ಯಸಾಚಿ’ಗಳಿಗೂ ಎಂದಿಗೂ ವಿಶೇಷ ಸ್ಥಾನವಿದೆ. ಕ್ರಿಕೆಟ್‌ ಇತಿಹಾಸವನ್ನು ನೋಡಿದರೆ ಗ್ಯಾರಿ ಸೋಬರ್ಸ್‌, ಜಾಕಸ್‌ ಕಾಲಿಸ್‌, ಕಪಿಲ್‌ ದೇವ್‌, ಇಮ್ರಾನ್‌ ಖಾನ್‌, ರಿಚರ್ಡ್‌ ಹ್ಯಾಡ್ಲಿ, ಕೇಥ್‌ ಮಿಲ್ಲರ್‌, ಲ್ಯಾನ್ಸ್‌ ಕ್ಲುಸ್ನರ್‌, ಟೋನಿ ಗ್ರೇಗ್‌ನಂಥ ಆಟಗಾರರು ಕ್ರಿಕೆಟ್‌ಗೆ ಹೊಸ ಮೆರುಗು ತಂದುಕೊಟ್ಟಿದ್ದಾರೆ. ಅದೇ ಸಾಲಿನಲ್ಲಿ ಜಡೇಜಾ ಕೂಡ ಸಾಗುತ್ತಿದ್ದಾರೆ. ಬ್ಯಾಟ್‌, ಬಾಲ್‌ ಮತ್ತು ಫೀಲ್ಡಿಂಗ್‌ ಮೂಲಕ ತಮ್ಮ ತಂಡವನ್ನು ಯಶಸ್ಸಿನ ದಡಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಪ್ರತಿ ಪಂದ್ಯದಲ್ಲಿ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಭಾರತೀಯ ಟೆಸ್ಟ್‌ ಕ್ರಿಕೆಟ್‌ ತಂಡದ ಕಾಯಂ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ ಹಾಗೂ ಅವರ ಪ್ರಯತ್ನದ ಫಲವಾಗಿ ಹಲವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. ಹಾಗಾಗಿ, ಅವರನ್ನು ‘ಮ್ಯಾಚ್‌ ವಿನ್ನರ್‌’ ಎಂದು ಹೇಳಿದರೆ ಅತಿಯಾಗದು. ಟೆಸ್ಟ್‌ ಆಗಲಿ, ಒನ್‌ ಡೇ, ಟಿ20 ಅಥವಾ ಐಪಿಎಲ್‌ ಪಂದ್ಯವೇ ಆಗಿರಲಿ, ಸೋಲಿನ ಅಂಚಿನಲ್ಲಿದ್ದ ತಂಡವನ್ನು ಏಕಾಂಗಿಯಾಗಿ ಬ್ಯಾಟ್‌ ಹಾಗೂ ಬಾಲ್‌ ಮೂಲಕ ಮೇಲಕ್ಕೆತ್ತಿದ ಉದಾಹರಣೆಗಳಿವೆ.

ಹಾಗಂತ, ಅವರೇನೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅದ್ಭುತವಾದ್ದನ್ನು ಮಾಡುವುದಿಲ್ಲ. ಬದಲಿಗೆ, ತಮ್ಮ ಆಟ­ವನ್ನು ಶಿಸ್ತುಬದ್ಧವಾಗಿ ಆಡುತ್ತಾರಷ್ಟೇ. ಉದಾಹರಣೆಗೆ, ರವೀಚಂದ್ರನ್‌ ಅಶ್ವಿನ್‌ ರೀತಿಯಲ್ಲಿ ಜಡೇಜಾ ಅವ­ರೇನೂ ಒಂದೇ ಓವರ್‌ನಲ್ಲಿ 6 ಬಾಲ್‌ಗಳನ್ನು ಒಂದ­ಕ್ಕಿಂತ ಒಂದು ಭಿನ್ನವಾಗಿ ಎಸೆಯುವುದಿಲ್ಲ. ಬದಲಿಗೆ ಸ್ಟಂಪ್‌ ಟು ಸ್ಟಂಪ್‌ ಹಾಗೂ ಲೈನ್‌ ಮತ್ತು ಲೆಂಥ್‌ ಕರಾರು­ವಕ್ಕಾಗಿ ಬೌಲಿಂಗ್‌ ಮಾಡುತ್ತಾರೆ. ಅವರ ಶಿಸ್ತಿನ  ಬೌಲಿಂಗ್‌ಗೆ ಪಿಚ್‌ ಕೂಡ ಸಾಥ್‌ ನೀಡಿದರೆ ಮುಗೀತು ಎದುರಾಳಿಯ ವಿಕೆಟ್‌ಗಳು ಬೀಳುತ್ತಾ ಹೋಗುತ್ತವೆ. ಬ್ಯಾಟಿಂಗ್‌ನಲ್ಲೂ ಅಷ್ಟೇ ವಿಶೇಷವಾದ್ದನ್ನು ಏನೂ ಮಾಡಲು ಹೋಗುವುದಿಲ್ಲ, ಚೆಂಡಿನ ದಿಕ್ಕು ಮತ್ತು ಗತಿಯನ್ನು ಗುರು­ತಿಸಿ ಅದನ್ನು ಅಷ್ಟೇ ಶಿಸ್ತು ಬದ್ಧವಾಗಿ ಬಲವಾಗಿ ಹೊಡೆಯುತ್ತಾರೆ; ಚೆಂಡು ಬೌಂಡ್ರಿ ಗೆರೆಯನ್ನು ದಾಟಿರುತ್ತದೆ. ಇನ್ನು ಫೀಲ್ಡಿಂಗ್‌ನಲ್ಲಿ ಮಾತಾಡು­ವಂತೆಯೇ ಇಲ್ಲ, ಬಹುಶಃ ಮೊಹಮ್ಮದ್‌ ಕೈಫ್‌ ಮತ್ತು ಯುವರಾಜ್‌ ಸಿಂಗ್‌ ಅವರ ಬಳಿಕ ಭಾರತಕ್ಕೆ ಸಿಕ್ಕ ಅದ್ಭುತ ಫೀಲ್ಡರ್‌ ಇವರು. ಅವರ ಬಳಿ ಬಾಲ್‌ ಹೋದರೆ ಎದುರಾಳಿ ತಂಡದ ಬ್ಯಾಟರ್‌ ರನ್‌ ಕದಿಯಲು ಮುಂದಾಗುವುದೇ ಇಲ್ಲ! ಅಷ್ಟರ ಮಟ್ಟಿಗೆ ಅವರ ಥ್ರೋಗಳು ಕರಾರುವಕ್ಕಾಗಿ­ರುತ್ತವೆ ಮತ್ತು ಫೀಲ್ಡಿಂಗ್‌ ಮೂಲಕವೇ ಬೌಂಡರಿಗಳನ್ನು ಉಳಿಸಿ ತಂಡಕ್ಕೆ ನೆರವಾಗುವ ಚಾಕಚಕ್ಯತೆ ಅವರಲ್ಲಿ ಇದೆ. ಈ ವರೆಗೆ 59 ಟೆಸ್ಟ್‌ಗಳಿಂದ 242 ವಿಕೆಟ್‌ ಹಾಗೂ 2 ಶತಕಗಳೊಂದಿಗೆ 2369 ರನ್‌ ಗಳಿಸಿದ್ದಾರೆ. 168 ಅಂತಾರಾಷ್ಟ್ರೀಯ ಒಂದು ದಿನದ ಪಂದ್ಯಗಳನ್ನಾಡಿ 2411 ರನ್‌ಗಳೊಂದಿಗೆ 188 ವಿಕೆಟ್‌ಗಳನ್ನು ಪಡೆದುಕೊಂಡಿ­ದ್ದಾರೆ. 57 ಟಿ20 ಪಂದ್ಯಗಳಲ್ಲಿ47 ವಿಕೆಟ್‌ ಹಾಗೂ 326 ರನ್‌ ಗಳಿಸಿದ್ದಾರೆ.

1988 ಡಿಸೆಂಬರ್‌ 6ರಂದು ರವೀಂದ್ರ ಜಡೇಜಾ ಗುಜರಾತ್‌ನ ಜಾಮ್‌ನಗರದ ರಜಪೂತ್‌ ಕುಟುಂಬದಲ್ಲಿ ಜನಿಸಿದರು. ತಂದೆ ಅನಿರುದ್ಧ ಖಾಸಗಿ ಏಜೆನ್ಸಿ ಪರವಾಗಿ ವಾಚ್‌ಮನ್‌ ಕೆಲಸ ಮಾಡುತ್ತಿದ್ದರು.  ಮಗ ಸೇನೆ ಸೇರಿಕೊಳ್ಳಲಿ ಎಂದು ತಂದೆ ಆಸೆ ಪಟ್ಟರೆ ಕ್ರಿಕೆಟ್‌ ಆಗುವ ಕನಸು ಕಂಡಿದ್ದ ಜಡೇಜಾಗೆ ತಾಯಿ ಲತಾ ಆಸರೆಯಾಗಿ ನಿಂತಿದ್ದರು. ಆದರೆ, ವಿಧಿ ಬೇರೆಯದ್ದೇ ಆಟ ಹೂಡಿತ್ತು. 2005ರಲ್ಲಿಅವರ ತಾಯಿ ರಸ್ತೆ ಅಪಘಾತದಲ್ಲಿಮೃತಪಟ್ಟರು. ಆಗ ಜಡೇಜಾ ಅವರಿಗೆ ಕೇವಲ 17 ವರ್ಷ. ತೀವ್ರ ಆಘಾತಕ್ಕೆ ಒಳಗಾಗಿದ್ದ ಅವರು ಕ್ರಿಕೆಟ್‌ ತೊರೆಯುವ ನಿರ್ಧಾರ ಮಾಡಿದ್ದರಂತೆ. ಆದರೆ, ತಾಯಿ ಆಸೆ ನೆರವೇರಿಸುವ ಪಣ ತೊಟ್ಟಂತೆ ತಮಗೆ ಸಿಕ್ಕ ಅವಕಾಶ­ಗಳನ್ನು ಬಾಚಿಕೊಂಡು ಜಡೇಜಾ ಈಗ ವಿಶ್ವದ ನಂ.1 ಆಲ್‌ರೌಂಡರ್‌ ಆಗಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದಾರೆ. 2016ರಲ್ಲಿರೀವಾ ಸೋಲಂಕಿಯನ್ನು ವರಿಸಿದರು, ದಂಪತಿಗೆ ಒಂದು ಹೆಣ್ಣು ಮಗುವಿದೆ. 

‘ಜಡ್ಡು’, ‘ರಾಕ್‌ ಸ್ಟಾರ್‌’, ‘ಸರ್‌ ಜಡೇಜಾ’ ಇತ್ಯಾದಿ ಅಡ್ಡ  ಹೆಸರುಗಳನ್ನು ಹೊಂದಿರುವ ಜಡೇಡಾ, ಮೈದಾನದಲ್ಲಿಶತಕ ಅಥವಾ ಅರ್ಧ ಶತಕ ಸಿಡಿಸಿದಾಗ ಕತ್ತಿ ವರಸೆ ರೀತಿಯಲ್ಲಿ ಬ್ಯಾಟ್‌ ಬೀಸುವುದನ್ನು ನೋಡುವುದೇ ಚೆಂದ. 16ನೇ ವಯಸ್ಸಿಗೆ ಜಡೇಜಾ ಅಂಡರ್‌ 19 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದರು. ಆದರೆ, ಭಾರತ ತಂಡ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದೆ 2008ರಲ್ಲೂ ಅಂಡರ್‌-19 ಟೀಮ್‌ ಆಯ್ಕೆಯಾದರಲ್ಲದೇ ವೈಸ್‌ ಕ್ಯಾಪ್ಟನ್‌ ಕೂಡ ಆದರು. ಆಗ ಕ್ಯಾಪ್ಟನ್‌ ಆಗಿದ್ದವರು ಮತ್ತೊಬ್ಬ ದಿಗ್ಗಜ ವಿರಾಟ್‌ ಕೊಹ್ಲಿ. ಈ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತೀಯ ತಂಡ ವಿಶ್ವಕಪ್‌ ಎತ್ತಿ ಹಿಡಿಯಿತು. ಜಡೇಜಾ 6 ಪಂದ್ಯಗಳಿಂದ 10 ವಿಕೆಟ್‌ ಪಡೆದುಕೊಂಡರು. 2006-07ರ ಸಾಲಿನ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟರು. ದೇಶಿಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ಪರವಾಗಿ ಅವರು ಆಡುತ್ತಾರೆ. ರಣಜಿ ಪಂದ್ಯದಲ್ಲಿ ವಿಶಿಷ್ಟ ಸಾಧನೆ ಅವರ ಹೆಸರಿನಲ್ಲಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರು ತ್ರಿಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದಲ್ಲಿ 8ನೇ ಆಟಗಾರ ಎಂಬ ಖ್ಯಾತಿ ಅವರ ಬೆನ್ನಿಗಿದೆ. 2008-09ರ ಸಾಲಿನ ರಣಜಿ ಕ್ರಿಕೆಟ್‌ ಪಂದ್ಯಾವಳಿ ಅದ್ಭುತ ಆಲ್‌ರೌಂಡ್‌ ಆಟದಿಂದ ಆಯ್ಕೆಗಾರ ಗಮನ ಸೆಳೆದರು. ಈ ಟೂರ್ನಿಯಲ್ಲಿ ಅವರು 739 ರನ್‌ ಹಾಗೂ 42 ವಿಕೆಟ್‌ ಪಡೆದುಕೊಂಡು, ಭಾರತೀಯ  ಒಂದು ದಿನದ ಕ್ರಿಕೆಟ್‌ ತಂಡದ ಕದ ತಟ್ಟಿದರು. ಕೊಲಂಬೊದಲ್ಲಿ ನಡೆದ ತಮ್ಮ ಮೊದಲ ಅಂತಾರಾಷ್ಟ್ರೀಯ ಒಡಿಐನಲ್ಲಿ 60 ರನ್‌ ಗಳಿಸಿದರು. ಆದರೆ, ಯಾವುದೇ ವಿಕೆಟ್‌ ಪಡೆಯಲಿಲ್ಲ. 2012ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ನಂತರ ಜಡ್ಡು ನಿಧಾನವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ತಂಡದ ಅವಿಭಾಜ್ಯ ಅಂಗವಾದರು.

ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಅದರದ್ದೇ ಆದ ಮಹತ್ವವಿದೆ; ವಿಶಿಷ್ಟ ಪರಂಪರೆಯಿದೆ. ಯಾಕೆಂದರೆ, ವಿಶ್ವದ ಅತ್ಯುತ್ತಮ ಕ್ಯಾಪ್ಟನ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಮಹೇಂದ್ರ ಸಿಂಗ್‌ ಧೋನಿ ಅವರು ಸಿಎಸ್‌ಕೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯದಿದ್ದಾರೆ. ಆ ತಂಡದ ನೇತೃತ್ವ  ಈಗ ಸವ್ಯಸಾಚಿ ಜಡೇಜಾ ಹೆಗಲಿಗೇರಿದೆ. ಈವರೆಗೆ ಅವರ ಆಟವನ್ನು ನೋಡುತ್ತಾ ಬಂದವರಿಗೆ ನಾಯಕನಾಗಿಯೂ ಜಡೇಜಾ ಯಶಸ್ವಿಯಾಗುತ್ತಾರೆಂಬ ನಂಬಿಕೆ ಸಿಎಸ್‌ಕೆ ತಂಡದ ಅಭಿಮಾನಿಗಳದ್ದು.



ಕಾಮೆಂಟ್‌ಗಳಿಲ್ಲ: