ಶುಕ್ರವಾರ, ಸೆಪ್ಟೆಂಬರ್ 28, 2007

ನಗುವ ನನ್ನ ನಲ್ಲೆ; ನೀ ಇರುವೇ ಹೃದಯಲ್ಲೆ

ಹೇ ಒರಟ,

"ಈ ಪ್ರೀತಿನೇ ಹಾಗೆ, ಬಾ ಅಂದ್ರ ಬರಲ್ಲ, ಹೋಗು ಅಂದ್ರ ಹೋಗಲ್ಲ" ಅಂತ್ ನೀನೇ ಹೇಳಿದ್ದು. ನೆನಪು ಮಾಡ್ಕೊ. ಶುದ್ಧ ಒರಟ ನೀನು. ನನ್ನ ಬೆನ್ನ ಹಿಂದೆ ಬಿದ್ದು, ನನ್ನ ಹೃದಯ ಕದ್ದವನು ನೀನೆ ತಾನೆ, ಈಗ ಆ ಹೃದಯ ಕಾಯುತ್ತಿದೆ ಎಂಬ ಅರಿವು ನಿನಗಿಲ್ಲಂದ್ರೆ ಏನರ್ಥ. ನನಗಿಂತಲೂ ನಿಂಗೆ ನಿನ್ನ ಕೆಲಸವೇ ಮುಖ್ಯನಾ... ಹೀಗೆ ಸಾವಿರಾರು ಪ್ರಶ್ನೆ ಕೇಳು ಬೇಕು ಅನ್ಕೊಂಡಿದ್ದೀನಿ, ಆದ್ರೆ ಕೇಳಲ್ಲ. ಅದು ನಿಂಗೂ ಗೊತ್ತು ದೊರೆ.

ಕಾಲೇಜ್‍‌ನಲ್ಲಿ ನನ್ನಷ್ಟಕ್ಕೆ ನಾನು ಹಾಡ್ತಾ, ಕುಣಿತಾ ಹಾಯಾಗಿದ್ದೆ. ನೀನೆಲ್ಲಿಂದ ಬಂದೆಯೊ..? ಅದು ಹ್ಯಾಗೆ ನನ್ನ ಮನಸ್ಸನ್ನಾ ಗೆದ್ದೆಯೋ..? ಒಂದು ಅರ್ಥ ಆಗಲ್ಲ ನಂಗೆ. ನಿಂಗೆ ಗೊತ್ತಾ, ನಾನು-ನೀನು ಸರಿಯಾದ ಜೋಡಿಯಲ್ಲಂತ ನನ್ನ ತಂಗಿ ಹೇಳ್ತಾಳೆ. ಅವಳು ಹೇಳೊದು ನಿಜ. ಕಾಲೇಜು ರಾಣಿ(ಮಿಸ್ ಕಾಲೆಜ್)ಯಾಗಿ ಆಯ್ಕೆಯಾದಾಕೆ ನಾನು. ಅದಾವುದೋ ಹಳ್ಳಿಯ ಮೊಲೆಯಿಂದ ಎದ್ದು ಬಂದವನಂತೆ ಇದ್ದೆ ನೀನು.

ನನ್ನ ಒಂದು ಕಣ್ ನೋಟಕ್ಕಾಗಿ ಕಾಲೇಜು ಹುಡುಗರೆಲ್ಲಾ ನನ್ನ ಹಿಂದೆನೇ ಬರ್ತಾ ಇದ್ದರ್ರೂ. ಆದ್ರೂ, ಹುಡುಗಾ ನೀನೆ ನಂಗೆ ಇಷ್ಟ, ಯಾಕೆ ಗೊತ್ತಾ..? ಹಾಗೇ ಸುಮ್ಮನೆ ನೋಡಿದ್ರೆ ನೇರವಾಗಿ ಇರಿಯುವ ಆ ನಿನ್ನ ಕಣ್ಣುಗಳು, ಯಾವಾಗಲೂ ನಿನ್ನ ತುಟಿಯಲ್ಲಿ ಸುಡೊ ಆ ಸಿಗರೇಟು, ನಿನ್ನ ಡಿಪಾರ್ಟಮೆಂಟ್ ಬಳಿ ಇದ್ದ ಗಿಡದ ಹತ್ತಿರ ಒಂದು ಕಾಲು ಓರೆಯಾಗಿಟ್ಟು ನಿಲ್ಲುವ ಭಂಗಿ ಇದೆಯಲ್ಲಾ.. ಅದು ನಂಗೆ ತುಂಬಾ ಇಷ್ಟ. ನಿನ್ನ ಹಾಗೆ ನಡೆಯೋಕೆ ಯಾರಿಗೂ ಬರಲ್ಲ.. ಒರಟ.

ಎಲ್ಲಕ್ಕಿಂತ ಹೆಚ್ಚಾಗಿ ನೀನು ಒರಟನಾಗಿ ಕಂಡ್ರೂ, ಮಗುವಿನಂಥ ನಿನ್ನ ಹೃದಯ ನನ್ನನ್ನು ಮರುಳು ಮಾಡಿತು ಮಾರಾಯಾ. ಇನ್ನೂ ನೀ ಬರೆಯುವ ಕವಿತೆಗಳು ನನ್ನಂಥ ಸಾವಿರಾರು ಹುಡುಗಿಯರನ್ನ ನಿನ್ನತ್ತ ತಂದುಕೊಡಬಲ್ಲವು. ಥ್ಯಾಂಕ್ ಗಾಡ್, ಸದ್ಯಕ್ಕೆ ಆ ದೈವ ನನ್ನದಾಗಿದೆ. ಸರೀ ಹೀಗೆ ಹೇಳ್ತಿದ್ದೀನಿ ಅಂತಾ ಬಹಳ ಉಬ್ಬಿ ಹೋಗಬೇಡ. ನಾನೇನು ನಿನಗಿಂತ ಕಮ್ಮಿ ಇಲ್ಲ ಎಂಬುದು ನೆನಪಿರಲಿ. ಹ್ಹ ಹ್ಹ ಹ್ಹ ಹ್ಹ.

ಅಯ್ಯಾ ದೊರೆ, ಆ ನಿನ್ನ ಕೆಲಸಗಳನ್ನು ಬದಿಗಿಟ್ಟ ನಿನಗಾಗಿ ಕಾಯುತ್ತಿರುವ ಈ ಹೃದಯಕ್ಕೆ ದರ್ಶನ ತೋರಿಸಬಾರ್ದಾ. ನಿನ್ನ ತುಟಿಗಳ ನಡುವೆ ಸದಾ ಸುಡುವ ಸಿಗರೆಟ್ ನೋಡುಬೇಕು ಅಂತಾ ತಂಬಾ ಆಸೆ ಕಣೋ. ಶ್.. ಹೀಗೆ ಹೇಳ್ತಿದ್ದೀನಿ ಅಂತ ಒಂದು ಪ್ಯಾಕ್ ಸಿಗರೆಟ್ ಮುಗ್ಸಿಬಿಟ್ಟು ಎರಡನೇ ಪ್ಯಾಕ್‌ಗೆ ಹೋಗಬೇಡ.

ಏ, ಹೇಳೊದು ಮೆರೆತು ಬಿಟ್ಟೆ. ನೀ ಬರೆದ "ನನ್ನ ನಲ್ಲೆ" ಕವನ ಮೊನ್ನೆಯ ವಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅದು ನನಗೋಸ್ಕರ ತಾನೆ ಬರೆದಿದ್ದು ತಾನೆ ? ಬರೆದಿರ್ತಿಯಾ ಬಿಡು. ತುಂಬಾ ಚೆನ್ನಾಗಿದೆ ಅಂತಾ ಹೇಳಲ್ಲಾ, ಯಾಕೆಂದ್ರೆ ನೀ ಬರೆದ ಯಾವ ಕವನಗಳು ಚೆನ್ನಾಗಿರಲ್ಲ ಹೇಳು. ಈ ಕವನದ ಸಾಲುಗಳನ್ನು ಕೂಡಾ ಅದೆಷ್ಟು ಹುಡುಗರು ಹುಡುಗಿಯರಿಗೆ "ಕೊಟ್" ಮಾಡ್ತಾರೋ ನಾ ಕಾಣೆ.

ನಗುವ ನನ್ನ ನಲ್ಲೆ
ನೀ ಇರುವೇ ಹೃದಯಲ್ಲೆ
ಭೂಮಿ-ಭಾನು ದಾಟಿ
ಪ್ರೀತಿಯ ಲೋಕಕ್ಕೆ
ಬಾರೆ.. ನನ್ನ ನಲ್ಲೆ,
ಈ ಲೈನ್‌ಗಳು ತುಂಬಾ ಇಷ್ಟ ಆಯ್ತು ನಂಗೆ. ಹೇಳು ಒರಟ, ಯಾವಾಗ ಬರ್ತಿಯಾ ಊರಿಗೆ, ಯಾವಾಗ ಹೋಗೋಣೊ ಪ್ರೀತಿಯ ಲೋಕಕ್ಕೆ.

ನಿನ್ನವಳು
ಮೀನಾಕ್ಷಿ

(ಈ ಪತ್ರ ಯಾಹೂ ಕನ್ನಡದಲ್ಲಿ ಪ್ರಕಟಗೊಂಡಿದೆ. ನೋಡಲು ಇಲ್ಲಿ ಕ್ಲಿಕಿಸಿ)

ಬುಧವಾರ, ಸೆಪ್ಟೆಂಬರ್ 19, 2007

ನನ್ನವಳ ಪ್ರೀತಿ

ನನ್ನವಳ
ಪ್ರೀತಿ ಅಂದ್ರ
ಚೆನ್ನೈ
ಮಳೆ ಇದ್ದಾಂಗ
ರಾತ್ರಿ ಪೂರ್ತಿ
ಧೋ ಎಂದು ಸುರಿದು
ಮತ್ತ...
ಬೆಳಗ್ಗೆ ಒಣಾ ಬಿಸಿಲು.

ಶುಕ್ರವಾರ, ಸೆಪ್ಟೆಂಬರ್ 14, 2007

ವಿದಾಯ ಹೇಳಿದ 'ನಾಯಕ' ಫ್ಲೆಮಿಂಗ್

ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕ ಯಾರು ಎಂಬ ಪ್ರಶ್ನೆ ಎದುರಾದಾಗ ಎರಡು ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತವೆ. ಆಸ್ಟ್ರೇಲಿಯಾ ತಂಡದ ನಾಯಕ 'ರಿಕಿ ಪಾಟಿಂಗ್' ಮತ್ತು ನ್ಯೂಜಿಲೆಂಡ್ ತಂಡದ 'ಸ್ಟೀಫನ್ ಫ್ಲೆಮಿಂಗ್'.

ಆದರೆ, ಇವರಿಬ್ಬರಲ್ಲೂ ಯಾರು ಉತ್ತಮರು ಎಂದು ಪ್ರಶ್ನಿಸಿದಾಗ, ಕ್ರಿಕೆಟ್ ಪಂಡಿತರು ಫ್ಲೆಮಿಂಗ್‌ನತ್ತ ಬೆರಳು ಮಾಡುತ್ತಾರೆ. ಯಾಕೆಂದರೆ, ಆಸ್ಟ್ರೇಲಿಯಾ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರಿದ್ದಾರೆ. ಹೀಗಿರುವಾಗ ನಾಯಕ ತನ್ನ ಕೆಲಸವನ್ನು ಯಾವುದೇ ಆಯಾಸವಿಲ್ಲದೇ ನಿರ್ವಹಿಸಬಹುದು. ಆದರೆ, ಯಾವುದೇ ಸ್ಟಾರ್ ಆಟಗಾರರಿಲ್ಲದೇ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸುವಂಥ ತಂತ್ರಗಳನ್ನು ಹೆಣಿದು ಖೆಡ್ಡಾಗೆ ಕೆಡವುವುದು ಫ್ಲೆಮಿಂಗ್‌‌ನಂತಹ ಚಾಣಾಕ್ಷರಿಗೆ ಮಾತ್ರ ಸಾಧ್ಯ.

ಇಂಥ ಆಟಗಾರ ಮತ್ತು ನಾಯಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿ, ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ ತಂಡದ ನಾಯಕನ ಸ್ಥಾನವನ್ನು ಕೂಡಾ ಬಿಟ್ಟುಕೊಡುವ ಮೂಲಕ, ಕ್ರಿಕೆಟ್‌ನಿಂದ ನಿವೃತ್ತಿಯ ಅಂಚಿನವರೆಗ ಬಂದಿರುವುದನ್ನು ಸೂಕ್ಷ್ಮವಾಗಿ ಹೊರಗೆಡುವಿದ್ದಾರೆ. ಆದರೆ, ಇದು ಅವರ ಅಭಿಮಾನಿಗಳಿಗಂತೂ ನಿರಾಶೆ ತಂದಿರುವುದರಲ್ಲಿ ಸಂಶಯವೇ ಇಲ್ಲ.

ನ್ಯೂಜಿಲೆಂಡ್ ಪರ ಅತಿ ಹೆಚ್ಚು ಯಶಸ್ಸು ಗಳಿಸಿದ ನಾಯಕರ ಹೆಸರು ಸಾಲಿನಲ್ಲಿ ಫ್ಲೆಮಿಂಗ್ ಹೆಸರು ಢಾಳವಾಗಿ ಕಾಣಿಸುತ್ತದೆ. ಇಂಥ ಮಹಾನ್ ಆಟಗಾರ ಇನ್ನೂ ಮುಂದೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬೇಸರ ಸಂಗತಿಯಾದರೂ, ಅರಗಿಸಿಕೊಳ್ಳಲೇಬೇಕು. ಯಾಕೆಂದರೆ, ಪ್ರತಿಯೊಂದು ಆರಂಭಕ್ಕೂ ಅಂತ್ಯವಿದ್ದೇ ಇರುತ್ತದೆ.

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪಾಟಿಂಗ್, ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ಸ್ಪಿನ್ ಮೋಡಿಗಾರ ಮುರಳೀಧರನ್ ಆಗಲಿ ಒಂದು ದಿನ ಅಂಕಣದಿಂದ ಹೊರಹೋಗಲೇಬೇಕು. ಅಂತಹುದೇ ಸ್ಥಿತಿಗೆ ಫ್ಲೆಮಿಂಗ್ ತಲುಪಿದ್ದಾರಷ್ಟೆ. ಅವರು ಟೆಸ್ಟ್‌ಗೆ ಲಭ್ಯವಿರುವುದಾಗಿ ಹೇಳಿದ್ದಾರಾದರೂ, "ಹೊಸ ನೀರು ಬಂದಾಗ, ಹಳೇ ನೀರು ಕೊಚ್ಚಿಕೊಂಡು ಹೋಗಲೇ ಬೇಕು" ಎನ್ನುವ ಹಾಗೆ, ನ್ಯೂಜೆಲಿಂಡ್ ತಂಡದಲ್ಲಿ ಬಿಸಿ ರಕ್ತದ ಯುವಕರ ಆಗಮನವಾಗುತ್ತಿರುವಾಗ ಫ್ಲೆಮಿಂಗ್ ಟೆಸ್ಟ್ ಕ್ರಿಕೆಟ್‌ನಿಂದ ನೇಪಥ್ಯಕ್ಕೆ ಸರಿಯುವ ದಿನಗಳು ಕೂಡಾ ಬಹಳ ದೂರವಿಲ್ಲ ಎಂದು ಹೇಳಬಹುದು.

ಫ್ಲೆಮಿಂಗ್ ಪೂರ್ಣ ಹೆಸರು, ಸ್ಟೀಫನ್ ಪೌಲ್ ಫ್ಲೆಮಿಂಗ್. ಇವರು 1973 ಏಪ್ರಿಲ್ 1 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದರು. ಫ್ಲೆಮಿಂಗ್ ತಂದೆ ಕ್ರೈಸ್ಟ್‌ಚರ್ಚ್‌ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರಾಗಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಫ್ಲೆಮಿಂಗ್, ನೋಡು ನೋಡುತ್ತಿದ್ದಂತೆ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದರು.

ಎಡಗೈ ಬ್ಯಾಟ್ಸ್‌ಮನ್‌ರಾದ ಫ್ಲೆಮಿಂಗ್, 1994ರಲ್ಲಿ ಭಾರತ ವಿರುದ್ಧ ಟೆಸ್ಟ್ ಆಡುವ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ತಾವಾಡಿದ ಪ್ರಥಮ ಪಂದ್ಯದಲ್ಲಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದು ವಿಶೇಷ. ಈ ಪಂದ್ಯದಲ್ಲಿ ಅವರು 92 ರನ್ ಗಳಿಸಿದ್ದರು.

ಇದೇ ಪ್ರವಾಸದಲ್ಲಿ ಅವರು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಕ್ಕೂ ಕಾಲಿಟ್ಟರು. ಈ ಪಂದ್ಯದಲ್ಲಿ ಅವರು 90 ರನ್ ಗಳಿಸಿ ರನ್ ಔಟ್‌ಗೆ ಬಲಿಯಾದರು.

ಫ್ಲೆಮಿಂಗ್ ಆಟದ ತಂತ್ರಗಾರಿಕೆ ಹೆಸರುವಾಸಿಯಾದಂತೆ ಕೆಲವು ವಿವಾದಗಳಿಗೂ ಸಿಕ್ಕಿಹಾಕಿಕೊಂಡಿದ್ದಾರೆ. 1995 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತಂಡದ ಸಹ ಸದಸ್ಯರೊಂದಿಗೆ ಹೊಟೇಲೊಂದರಲ್ಲಿ ಮಾರಿಜುನಾ ಸೇದುವಾಗ ಸಿಕ್ಕಿಬಿದ್ದಿದ್ದು ವಿವಾದಕ್ಕ ಕಾರಣವಾಗಿತ್ತು. ಮುಂದೆ 1996-97ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನ ಮೊದಲ ಶತಕ ದಾಖಲಿಸಿದ ಫ್ಲೆಮಿಂಗ್, ಮೂರನೇ ಟೆಸ್ಟ್ ಪಂದ್ಯದಲ್ಲಿ ಲೀ ಜೊರ್ಮನ್ ಅವರಿಂದ ನಾಯಕನ ಜವಾಬ್ದಾರಿ ವಹಿಸಿಕೊಂಡರು. ಆಗ ಅವರ ವಯಸ್ಸು 23 ವರ್ಷ 320 ದಿನಗಳು. ಹೀಗಾಗಿ ನ್ಯೂಜಿಲೆಂಡ್ ಕಂಡ ಅತ್ಯಂತ ಕಿರಿಯ ನಾಯಕ ಎಂದು ಗುರುತಿಸಿಕೊಂಡರು.

2000ರಲ್ಲಿ ಜಿಂಬಾಬ್ವೆ ವಿರುದ್ಧ ಗೆಲವು ಸಾಧಿಸುವ ಮೂಲಕ ನ್ಯೂಜಿಲೆಂಡ್ ಕ್ರಿಕೆಟ್‌‌ನ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡರು. ಅವರ ನಾಯಕತ್ವದಲ್ಲಿ 12ನೇ ಗೆಲವು ಇದಾಗಿತ್ತು. ಇದಕ್ಕೂ ಮೊದಲು ಈ ದಾಖಲೆ ಗಫ್ ಹೊವರ್ತ್ ಅವರ ಹೆಸರಿನಲ್ಲಿತ್ತು.

ನಾಯಕನಾಗಿ ಫ್ಲೆಮಿಂಗ್
ಕಳೆದ ಹತ್ತು ವರ್ಷಗಳಲ್ಲಿ ಸುಮಾರು 80 ಟೆಸ್ಟ್ ಪಂದ್ಯಗಳಲ್ಲಿ 25 ಪಂದ್ಯಗಳಲ್ಲಿ ಗೆಲವು ಸಾಧಿಸಿದ್ದು, 25 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಒಂದು ದಿನ ಕ್ರಿಕೆಟ್ ತಂಡದ ನಾಯಕರಾಗಿ ಫ್ಲೆಮಿಂಗ್, ಕಳೆದ ಹತ್ತು ವರ್ಷಗಳಲ್ಲಿ 218 ಪಂದ್ಯಗಳಲ್ಲಿ 98 ಸಾರಿ ಗೆಲುವು ಕಂಡಿದ್ದಾರೆ.

ಅಂಕಿ ಅಂಶಗಳು
ಫ್ಲೆಮಿಂಗ್ ಇದುವರೆಗೆ 104 ಟೆಸ್ಟ್ ಪಂದ್ಯ ಆಡಿ 177 ಇನಿಂಗ್ಸ್‌ನಲ್ಲಿ 36.64 ಸರಾಸರಿಯಲ್ಲಿ 6620 ರನ್ನಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 9 ಶತಕಗಳು ಮತ್ತು 41 ಅರ್ಧ ಶಕತಕಗಳು ಸೇರಿವೆ.

ಅದೇ ರೀತಿಯಾಗಿ 280 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿ 269 ಇನಿಂಗ್ಸ್‌ಗಳಲ್ಲಿ 32.40 ಸರಾಸರಿಯಂತೆ 8037 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 8 ಶತಕ ಮತ್ತು 49 ಅರ್ಧ ಶತಕಗಳು ಸೇರಿವೆ.

(ಈ ಲೇಖನ ಯಾಹೂ(in.kannada.yahoo.com) ಕನ್ನಡದಲ್ಲಿ ಪ್ರಕಟಗೊಂಡಿದೆ. ಲಿಂಕ್-http://in.kannada.yahoo.com/News/Sports/0709/13/1070913053_1.htm)

ಶನಿವಾರ, ಸೆಪ್ಟೆಂಬರ್ 8, 2007

ಪುಟ್ಟ ಸಂಭ್ರಮ

ಕನ್ನಡದ ಪ್ರತಿಷ್ಠಿತ ಪೊರ್ಟಲ್ ದಟ್ಸ್ ಕನ್ನಡ ಡಾಟ್ ಕಾಮ್(thatskannada.com) 'ನನ್ನ ಹಾಡು' ಬ್ಲಾಗ್ ಕುರಿತು ನಾಲ್ಕು ಮೆಚ್ಚುಗೆಯ ಮತ್ತು ಪ್ರೋತ್ಸಾಹದಾಯಕ ಮಾತುಗಳನ್ನಾಡಿ ತಮ್ಮ ಪೊರ್ಟಲ್‌ನಲ್ಲಿ ಪರಿಚಯಿಸಿದ್ದಾರೆ. ಇದಕ್ಕೆ ಹೇಗೆ ನಾನು ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ. ಯಾಕೆಂದರೆ ಇದು ನನಗೆ ಪುಟ್ಟ ಸಂಭ್ರಮವನ್ನುಂಟು ಮಾಡಿದೆ. ನನ್ನ ಭಾವನೆಗಳನ್ನು ಅವರು ಗುರುತಿಸಿರುವುದಕ್ಕೆ ತುಂಬಾ ಸಂತೋಷವಾಗಿದ್ದು, ದಟ್ಸ್ ಕನ್ನಡ ಡಾಟ್ ಕಾಮ್‌ಗೆ ಅನಂತ ವಂದನೆಗಳನ್ನು ಹೇಳಲಿಚ್ಛಿಸುತ್ತೇನೆ.

ನಿಮ್ಮ ಬೆಂಬಲ, ಪ್ರೋತ್ಸಾಹ ಹೀಗೆ ಇರಲಿ.
ಮಲ್ಲಿಕಾರ್ಜುನ್

(ಬ್ಲಾಗ್ ಕುರಿತು ಮೆಚ್ಚುಗೆ ಬರೆದ ದಟ್ಸ್ ಕನ್ನಡ ಕೊಂಡಿ ಇಲ್ಲಿ ಇದೆ http://thatskannada.oneindia.in/hand_post/blogs/070907nanna-hadu-mallikarjuna.html)

ಗುರುವಾರ, ಸೆಪ್ಟೆಂಬರ್ 6, 2007

ಜೀವನ ರೂಪಿಸುವ ಶಿಕ್ಷಕರನ್ನು ಮನಸಾ ಸ್ಮರಿಸೋಣ...

ಮತ್ತೆ ಶಿಕ್ಷಕರ ದಿನಾಚರಣೆ ಬಂದಿದೆ; ಅದೇ ಬಾಲ್ಯದ ನೆನಪುಗಳನ್ನು ಹೊತ್ತು ತಂದಿದೆ.

ಈ ದಿನದಂದು ನಮಗೆ ಆಗ ಹಬ್ಬದ ಸಂಭ್ರಮ. ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಚಿಕ್ಕ ಪೋಸ್ಟರ್ ‌‌(ನಾಲ್ಕಾಣೆ ದೇಣಿಗೆ ನೀಡಬೇಕಿತ್ತು)ಗಳನ್ನು ನೋಟ್ ಬುಕ್ ಮೇಲೆ ಅಂಟಿಸಿ ಸಂತಸಪಡುತ್ತಿದ್ದೆವು. ಶಿಕ್ಷಕರ ಕುರಿತು ಮನೆಯಲ್ಲಿ ಅಪ್ಪ ಅಮ್ಮನಿಂದ ಬರೆಯಿಸಿಕೊಂಡು ಬಂದ ಪುಟ್ಟ ಭಾಷಣ ಮಾಡಿ ಸಂತಸಪಡುತ್ತಿದ್ದೆವು- ಇದು ಪ್ರಾಥಮಿಕ ಶಾಲೆಯಲ್ಲಿನ ಸಂಭ್ರಮ.

ಮುಂದೆ ಮಾಧ್ಯಮಿಕ ಶಾಲೆಗೆ ಬಂದಾಗ, ಶಿಕ್ಷಕ ದಿನಾಚರಣೆಗೆ ಚಿಕ್ಕವರಿದ್ದಾಗ ಕೊಡುತ್ತಿದ್ದ ಗೌರವ ಕೊಂಚ ಕಡಿಮೆಯಾಗಿತ್ತು. ಯಾಕೆಂದರೆ, ಪ್ರಾಥಮಿಕ ಶಾಲೆಯಲ್ಲಿ ಯಾವ ಶಿಕ್ಷಕರು ನಮ್ಮ "ಹೀರೋ"ಗಳಾಗಿ ಕಂಗೊಳಿಸುತ್ತಿದ್ದರೋ, ಅವರು ಈಗ ಕೊಂಚ ದುರ್ಬಲರಾಗಿ ಗೋಚರಿಸತೊಡಗಿದ್ದರು. ಹಾಗಂತ ಅವರಿಗೆ ಗೌರವ ಕೊಡುತ್ತಿರಲಿಲ್ಲವೆಂತಲ್ಲ. ಗೌರವದಲ್ಲಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ ಅಷ್ಟೆ.

ಇನ್ನು ಕಾಲೇಜ್ ಮೆಟ್ಟಿಲು ಹತ್ತಿದಾಗಲಂತೂ ಶಿಕ್ಷಕರು (ಪ್ರಾಧ್ಯಾಪಕ) ಅವರೇನು ಮಹಾ ಎಂಬ ಉಡಾಫೆ ಮನೋಭಾವ ಬೆಳೆದಿರುತ್ತದೆ. ಇಂಥ ಮನೋಭಾವ ಎಲ್ಲರಲ್ಲಿಯೂ ಇರುತ್ತದೆ ಎಂದು ಹೇಳುತ್ತಿಲ್ಲ. ಬಹುಶಃ ನೂರು ಕಾಲೇಜ್ ಹುಡುಗರಲ್ಲಿ ಸುಮಾರು 80ರಷ್ಟು ಹುಡುಗರು ಇದೇ ಮನೋಭಾವ ಹೊಂದಿರಬಹುದೇನೋ. ಹೀಗಿರುವಾಗ ಶಿಕ್ಷಕ ದಿನಾಚರಣೆಯ ಮಹತ್ವ ಹೇಗೆ ಗೊತ್ತಾಗಬೇಕು? ಇಂದು ಇಂದಿನ ಶಿಕ್ಷಣ ವ್ಯವಸ್ಥೆ, ಮಕ್ಕಳ ಮನೋಭಾವ, ಶಿಕ್ಷಣದ ವಾಣಿಜ್ಯೀಕರಣ... ಇತ್ಯಾದಿಗಳ ಪ್ರಭಾವ.

****

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ

ಎಂದು ಪುರಂದರದಾಸರು ಗುರುವಿನ ಮಹಿಮೆಯನ್ನು ಸಾರಿದ್ದಾರೆ. ಆದರೆ, ನಿಜಕ್ಕೂ ಈಗ "ಮುಕ್ತಿ" ತೋರುವ ಸ್ಥಾನದಲ್ಲಿ "ಗುರು" ಇದ್ದಾನೆಯೇ..? ಅಂತೆಯೇ ವಿದ್ಯಾರ್ಥಿ ಕೂಡಾ "ಮುಕ್ತಿ"ಗಾಗಿ "ಗುಲಾಮ"ನಾಗುವ ಮನೋಭಾವನೆ ಬೆಳೆಸಿಕೊಂಡಿದ್ದಾನೆಯೇ ಎಂಬೆರಡು ಪ್ರಶ್ನೆಗಳನ್ನು ಈಗಿನ ಸಂದರ್ಭದಲ್ಲಿ ಹೆಚ್ಚಾಗಿ ವಿಮರ್ಶೆಗೊಳಪಡಿಸಬೇಕಿದೆ.

ಪ್ರಾಚೀನ ಕಾಲದಲ್ಲಿ ಗುರು ತನ್ನ ಶಿಷ್ಯನನ್ನು 25 ವರ್ಷಗಳವರೆಗೂ ಸಲಹಿ, ತನ್ನ ವಿದ್ಯೆಯನ್ನೆಲ್ಲ ಧಾರೆ ಎರೆದು ಸಮಾಜದಲ್ಲೂ ಒಳ್ಳೆಯ ಪ್ರಜೆಯಾಗಿ ಬಾಳಲು ಮಾರ್ಗದರ್ಶನ ಮಾಡುತ್ತಿದ್ದ. ಶಿಷ್ಯನೂ ಅಷ್ಟೆ, ಗುರು ತೋರಿದ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳುತ್ತಿದ್ದ. ಅದಕ್ಕಾಗಿಯೇ..

ಗುರುಬ್ರಹ್ಮ ಗುರುರ್ವಿಷ್ಣು
ಗುರುಃದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಃ ಬ್ರಹ್ಮ
ತಸ್ಮೈಶ್ರೀ ಗುರವೇ ನಮಃ....


ಎಂಬ ನಾಮಸ್ಮರಣೆಯನ್ನು ಅವರು ಅಕ್ಷರಶಃ ಅನುಸರಿಸುತ್ತಿದ್ದರು. ಈಗ ಹಾಡಿಹೊಗಳುವ ಶಿಷ್ಯರೂ ಇಲ್ಲ, ಆ ಮಟ್ಟದ ಗುರುಗಳೂ ಇಲ್ಲವೆನ್ನಬೇಕಾಗಿರುವುದು ಖೇದನೀಯ ವಿಷಯ. ಇದಕ್ಕೆ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಕೆಲವು ಸುದ್ದಿಗಳೂ ಕಾರಣ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ವೇಶ್ಯಾವಾಟಿಕೆಗೆ ಒತ್ತಡಪಡಿಸಿದ ಇತ್ತೀಚಿನ ದೆಹಲಿ ಘಟನೆ ನಮ್ಮ ಕಣ್ಣ ಮುಂದೆ ಹಸಿರಾಗಿದೆ.

***

ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ "ರೋಲ್ ಮಾಡೆಲ್", ಅವರೇ "ಸೂಪರ್ ಮ್ಯಾನ್". ತನ್ನ ಗುರುಗಳಿಗೆ ತಿಳಿಯದ ವಿಷಯವೇ ಇಲ್ಲ ಎಂದು ಭಾವಿಸಿಕೊಳ್ಳುತ್ತದೆ. ಇಂಥ ಕಾಲದಲ್ಲಂತೂ ಶಿಕ್ಷಕನ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು. ಈ ಹಂತದಲ್ಲಿ ನೀಡಿದ ಶಿಕ್ಷಣವೇ ಮಗುವನ್ನು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಸುತ್ತದೆ. ಇಂಥ ಪಕ್ವ ಕಾಲದಲ್ಲಿ ಈಗಿನ ಶಿಕ್ಷಕರು ನಿಜವಾಗಿ ತಮ್ಮ ಜವಾಬ್ದಾರಿಗೆ ನ್ಯಾಯ ಸಲ್ಲಿಸುತ್ತಿದ್ದಾರೆಯೇ..?

ಡಾ.ರಾಧಾಕೃಷ್ಣನ್‌ರಂಥ ಮಹಾನ್ ವಿದ್ವಾಂಸರು ಶಿಕ್ಷಕ ಸ್ಥಾನಕ್ಕೆ ಉನ್ನತವಾದ ಗೌರವ ತಂದುಕೊಟ್ಟಿದ್ದಾರೆ. ಅಂತಹುದೇ ಹಾದಿಯನ್ನು ಅನೇಕ ಶಿಕ್ಷಕರು, ಪ್ರಾಧ್ಯಾಪಕ ಮಹನೀಯರು ಸವೆಸಿದ್ದಾರೆ. ಆದರೆ ಇದೆಲ್ಲವೂ "ಮಾಜಿ" ಕಾಲದ್ದು. ಆದರೆ, ಈಗ ಶಿಕ್ಷಕ ಕೇವಲ ಶಿಕ್ಷಕನಾಗಿ ಉಳಿದಿಲ್ಲ, ರಾಜಕಾರಣ, ವ್ಯಾಪಾರ ಮತ್ತು ಜಾತಿವಾದವು ಶಿಕ್ಷಕನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಹೀಗಿರುವಾಗ ಮಾನಸಿಕವಾಗಿ ಸದೃಢವಾದ ಆರೋಗ್ಯಪೂರ್ಣ ಪ್ರಜೆಗಳು ಸಮಾಜದೊಳಕ್ಕಿಳಿಯಲು ಹೇಗೆ ಸಾಧ್ಯ? ಅಂತೆಯೇ ಶಿಕ್ಷಕ ದಿನಾಚರಣೆಯ ಮಹತ್ವ ಮಕ್ಕಳಲ್ಲಿ ಮೂಡುವುದಾದರೂ ಹೇಗೆ ಅಲ್ಲವೇ..? ಈ ವಿಷಯದ ಬಗ್ಗೆ ಗಂಭೀರ ಚಿಂತನೆಯಾಗಬೇಕಿದೆ.

****

ಎಲ್ಲ ಶಿಕ್ಷಕರೂ ತಮ್ಮ ಜವಾಬ್ದಾರಿಯಿಂದ ವಿಮುಖಗೊಂಡಿದ್ದಾರೆಂದು ಹೇಳುವುದು ನನ್ನ ಉದ್ದೇಶವಲ್ಲ. ಹಾಗೆಯೇ ವಿದ್ಯಾರ್ಥಿಗಳೆಲ್ಲರೂ ಪ್ರಾಮಾಣಿಕರು ಎನ್ನುವುದೂ ಅಲ್ಲ. ಈಗಲೂ ಬೆರಳೆಣಿಕೆಯಷ್ಟು ಶಿಕ್ಷಕರು ತಮ್ಮ ಸ್ಥಾನಕ್ಕೆ ನಿಜವಾದ ಮಹತ್ವ ತಂದುಕೊಟ್ಟಿದ್ದಾರೆ. ಯಾವುದೇ ಮೂಲಸೌಕರ್ಯಗಳಿಲ್ಲದ ಊರಲ್ಲಿ ಮಕ್ಕಳನ್ನು ಮೇಲಕ್ಕೆ ತರಲು ಟೊಂಕ ಕಟ್ಟಿ ಹರಸಾಹಸ ಪ್ರದರ್ಶಿಸುವ ಶಿಕ್ಷಕರೆಷ್ಟಿಲ್ಲ? ಇನ್ನೂ ಕೆಲವರಂತೂ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಅವರ ಭವಿತವ್ಯಕ್ಕಾಗಿ ಟೊಂಕ ಕಟ್ಟಿ ನಿಂತಿರುತ್ತಾರೆ. ಇಂಥವರು ಬೆಳಕಿಗೆ ಬರುತ್ತಿಲ್ಲ ಎಂಬುದು ಶಿಕ್ಷಕ ಸಮುದಾಯದ ದುರದೃಷ್ಟ.

ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ, ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗ್ಗಲು ಮಾರ್ಗದರ್ಶನ ಮಾಡುವ ಮಾರ್ಗದರ್ಶಕರಿಗೆ, ಗೌರವ ನೀಡಲು ನಮಗೆ ಶಿಕ್ಷಕರ ದಿನವೇ ಬೇಕೆಂದಿಲ್ಲ. ನಮ್ಮ ಭವಿಷ್ಯ ರೂಪಿಸುವ, ನಮ್ಮನ್ನು ಸತ್ಪಥದಲ್ಲಿ ಮುನ್ನಡೆಯುವಂತೆ ಮಾರ್ಗ ತೋರುವ ಗುರುವಿನ ಸ್ಮರಣೆ ಸದಾಕಾಲ ಇರಲಿ. ಶಿಕ್ಷಕರ ದಿನವು ಇತರ ದಿನಾಚರಣೆಗಳಂತೆ ಕಾಟಾಚಾರಕ್ಕೀಡಾಗದಿರಲಿ.

(ಸೂಚನೆ: ಈ ಲೇಖನ ವೆಬ್ ದುನಿಯಾ ಕನ್ನಡ ಪೋರ್ಟಲ್‌ನಲ್ಲಿ ಪ್ರಕಟಗೊಂಡಿದೆ. ಅದನ್ನು ನೋಡಲು ಇಲ್ಲ ಕ್ಲಿಕ್ಕಿಸಿ http://kannada.webdunia.com/miscellaneous/literature/stories/0709/05/1070905002_1.htm)