ಗುರುವಾರ, ಸೆಪ್ಟೆಂಬರ್ 6, 2007

ಜೀವನ ರೂಪಿಸುವ ಶಿಕ್ಷಕರನ್ನು ಮನಸಾ ಸ್ಮರಿಸೋಣ...

ಮತ್ತೆ ಶಿಕ್ಷಕರ ದಿನಾಚರಣೆ ಬಂದಿದೆ; ಅದೇ ಬಾಲ್ಯದ ನೆನಪುಗಳನ್ನು ಹೊತ್ತು ತಂದಿದೆ.

ಈ ದಿನದಂದು ನಮಗೆ ಆಗ ಹಬ್ಬದ ಸಂಭ್ರಮ. ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಚಿಕ್ಕ ಪೋಸ್ಟರ್ ‌‌(ನಾಲ್ಕಾಣೆ ದೇಣಿಗೆ ನೀಡಬೇಕಿತ್ತು)ಗಳನ್ನು ನೋಟ್ ಬುಕ್ ಮೇಲೆ ಅಂಟಿಸಿ ಸಂತಸಪಡುತ್ತಿದ್ದೆವು. ಶಿಕ್ಷಕರ ಕುರಿತು ಮನೆಯಲ್ಲಿ ಅಪ್ಪ ಅಮ್ಮನಿಂದ ಬರೆಯಿಸಿಕೊಂಡು ಬಂದ ಪುಟ್ಟ ಭಾಷಣ ಮಾಡಿ ಸಂತಸಪಡುತ್ತಿದ್ದೆವು- ಇದು ಪ್ರಾಥಮಿಕ ಶಾಲೆಯಲ್ಲಿನ ಸಂಭ್ರಮ.

ಮುಂದೆ ಮಾಧ್ಯಮಿಕ ಶಾಲೆಗೆ ಬಂದಾಗ, ಶಿಕ್ಷಕ ದಿನಾಚರಣೆಗೆ ಚಿಕ್ಕವರಿದ್ದಾಗ ಕೊಡುತ್ತಿದ್ದ ಗೌರವ ಕೊಂಚ ಕಡಿಮೆಯಾಗಿತ್ತು. ಯಾಕೆಂದರೆ, ಪ್ರಾಥಮಿಕ ಶಾಲೆಯಲ್ಲಿ ಯಾವ ಶಿಕ್ಷಕರು ನಮ್ಮ "ಹೀರೋ"ಗಳಾಗಿ ಕಂಗೊಳಿಸುತ್ತಿದ್ದರೋ, ಅವರು ಈಗ ಕೊಂಚ ದುರ್ಬಲರಾಗಿ ಗೋಚರಿಸತೊಡಗಿದ್ದರು. ಹಾಗಂತ ಅವರಿಗೆ ಗೌರವ ಕೊಡುತ್ತಿರಲಿಲ್ಲವೆಂತಲ್ಲ. ಗೌರವದಲ್ಲಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ ಅಷ್ಟೆ.

ಇನ್ನು ಕಾಲೇಜ್ ಮೆಟ್ಟಿಲು ಹತ್ತಿದಾಗಲಂತೂ ಶಿಕ್ಷಕರು (ಪ್ರಾಧ್ಯಾಪಕ) ಅವರೇನು ಮಹಾ ಎಂಬ ಉಡಾಫೆ ಮನೋಭಾವ ಬೆಳೆದಿರುತ್ತದೆ. ಇಂಥ ಮನೋಭಾವ ಎಲ್ಲರಲ್ಲಿಯೂ ಇರುತ್ತದೆ ಎಂದು ಹೇಳುತ್ತಿಲ್ಲ. ಬಹುಶಃ ನೂರು ಕಾಲೇಜ್ ಹುಡುಗರಲ್ಲಿ ಸುಮಾರು 80ರಷ್ಟು ಹುಡುಗರು ಇದೇ ಮನೋಭಾವ ಹೊಂದಿರಬಹುದೇನೋ. ಹೀಗಿರುವಾಗ ಶಿಕ್ಷಕ ದಿನಾಚರಣೆಯ ಮಹತ್ವ ಹೇಗೆ ಗೊತ್ತಾಗಬೇಕು? ಇಂದು ಇಂದಿನ ಶಿಕ್ಷಣ ವ್ಯವಸ್ಥೆ, ಮಕ್ಕಳ ಮನೋಭಾವ, ಶಿಕ್ಷಣದ ವಾಣಿಜ್ಯೀಕರಣ... ಇತ್ಯಾದಿಗಳ ಪ್ರಭಾವ.

****

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ

ಎಂದು ಪುರಂದರದಾಸರು ಗುರುವಿನ ಮಹಿಮೆಯನ್ನು ಸಾರಿದ್ದಾರೆ. ಆದರೆ, ನಿಜಕ್ಕೂ ಈಗ "ಮುಕ್ತಿ" ತೋರುವ ಸ್ಥಾನದಲ್ಲಿ "ಗುರು" ಇದ್ದಾನೆಯೇ..? ಅಂತೆಯೇ ವಿದ್ಯಾರ್ಥಿ ಕೂಡಾ "ಮುಕ್ತಿ"ಗಾಗಿ "ಗುಲಾಮ"ನಾಗುವ ಮನೋಭಾವನೆ ಬೆಳೆಸಿಕೊಂಡಿದ್ದಾನೆಯೇ ಎಂಬೆರಡು ಪ್ರಶ್ನೆಗಳನ್ನು ಈಗಿನ ಸಂದರ್ಭದಲ್ಲಿ ಹೆಚ್ಚಾಗಿ ವಿಮರ್ಶೆಗೊಳಪಡಿಸಬೇಕಿದೆ.

ಪ್ರಾಚೀನ ಕಾಲದಲ್ಲಿ ಗುರು ತನ್ನ ಶಿಷ್ಯನನ್ನು 25 ವರ್ಷಗಳವರೆಗೂ ಸಲಹಿ, ತನ್ನ ವಿದ್ಯೆಯನ್ನೆಲ್ಲ ಧಾರೆ ಎರೆದು ಸಮಾಜದಲ್ಲೂ ಒಳ್ಳೆಯ ಪ್ರಜೆಯಾಗಿ ಬಾಳಲು ಮಾರ್ಗದರ್ಶನ ಮಾಡುತ್ತಿದ್ದ. ಶಿಷ್ಯನೂ ಅಷ್ಟೆ, ಗುರು ತೋರಿದ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳುತ್ತಿದ್ದ. ಅದಕ್ಕಾಗಿಯೇ..

ಗುರುಬ್ರಹ್ಮ ಗುರುರ್ವಿಷ್ಣು
ಗುರುಃದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಃ ಬ್ರಹ್ಮ
ತಸ್ಮೈಶ್ರೀ ಗುರವೇ ನಮಃ....


ಎಂಬ ನಾಮಸ್ಮರಣೆಯನ್ನು ಅವರು ಅಕ್ಷರಶಃ ಅನುಸರಿಸುತ್ತಿದ್ದರು. ಈಗ ಹಾಡಿಹೊಗಳುವ ಶಿಷ್ಯರೂ ಇಲ್ಲ, ಆ ಮಟ್ಟದ ಗುರುಗಳೂ ಇಲ್ಲವೆನ್ನಬೇಕಾಗಿರುವುದು ಖೇದನೀಯ ವಿಷಯ. ಇದಕ್ಕೆ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಕೆಲವು ಸುದ್ದಿಗಳೂ ಕಾರಣ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ವೇಶ್ಯಾವಾಟಿಕೆಗೆ ಒತ್ತಡಪಡಿಸಿದ ಇತ್ತೀಚಿನ ದೆಹಲಿ ಘಟನೆ ನಮ್ಮ ಕಣ್ಣ ಮುಂದೆ ಹಸಿರಾಗಿದೆ.

***

ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದನೆಲ್ಲ ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ "ರೋಲ್ ಮಾಡೆಲ್", ಅವರೇ "ಸೂಪರ್ ಮ್ಯಾನ್". ತನ್ನ ಗುರುಗಳಿಗೆ ತಿಳಿಯದ ವಿಷಯವೇ ಇಲ್ಲ ಎಂದು ಭಾವಿಸಿಕೊಳ್ಳುತ್ತದೆ. ಇಂಥ ಕಾಲದಲ್ಲಂತೂ ಶಿಕ್ಷಕನ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು. ಈ ಹಂತದಲ್ಲಿ ನೀಡಿದ ಶಿಕ್ಷಣವೇ ಮಗುವನ್ನು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಸುತ್ತದೆ. ಇಂಥ ಪಕ್ವ ಕಾಲದಲ್ಲಿ ಈಗಿನ ಶಿಕ್ಷಕರು ನಿಜವಾಗಿ ತಮ್ಮ ಜವಾಬ್ದಾರಿಗೆ ನ್ಯಾಯ ಸಲ್ಲಿಸುತ್ತಿದ್ದಾರೆಯೇ..?

ಡಾ.ರಾಧಾಕೃಷ್ಣನ್‌ರಂಥ ಮಹಾನ್ ವಿದ್ವಾಂಸರು ಶಿಕ್ಷಕ ಸ್ಥಾನಕ್ಕೆ ಉನ್ನತವಾದ ಗೌರವ ತಂದುಕೊಟ್ಟಿದ್ದಾರೆ. ಅಂತಹುದೇ ಹಾದಿಯನ್ನು ಅನೇಕ ಶಿಕ್ಷಕರು, ಪ್ರಾಧ್ಯಾಪಕ ಮಹನೀಯರು ಸವೆಸಿದ್ದಾರೆ. ಆದರೆ ಇದೆಲ್ಲವೂ "ಮಾಜಿ" ಕಾಲದ್ದು. ಆದರೆ, ಈಗ ಶಿಕ್ಷಕ ಕೇವಲ ಶಿಕ್ಷಕನಾಗಿ ಉಳಿದಿಲ್ಲ, ರಾಜಕಾರಣ, ವ್ಯಾಪಾರ ಮತ್ತು ಜಾತಿವಾದವು ಶಿಕ್ಷಕನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಹೀಗಿರುವಾಗ ಮಾನಸಿಕವಾಗಿ ಸದೃಢವಾದ ಆರೋಗ್ಯಪೂರ್ಣ ಪ್ರಜೆಗಳು ಸಮಾಜದೊಳಕ್ಕಿಳಿಯಲು ಹೇಗೆ ಸಾಧ್ಯ? ಅಂತೆಯೇ ಶಿಕ್ಷಕ ದಿನಾಚರಣೆಯ ಮಹತ್ವ ಮಕ್ಕಳಲ್ಲಿ ಮೂಡುವುದಾದರೂ ಹೇಗೆ ಅಲ್ಲವೇ..? ಈ ವಿಷಯದ ಬಗ್ಗೆ ಗಂಭೀರ ಚಿಂತನೆಯಾಗಬೇಕಿದೆ.

****

ಎಲ್ಲ ಶಿಕ್ಷಕರೂ ತಮ್ಮ ಜವಾಬ್ದಾರಿಯಿಂದ ವಿಮುಖಗೊಂಡಿದ್ದಾರೆಂದು ಹೇಳುವುದು ನನ್ನ ಉದ್ದೇಶವಲ್ಲ. ಹಾಗೆಯೇ ವಿದ್ಯಾರ್ಥಿಗಳೆಲ್ಲರೂ ಪ್ರಾಮಾಣಿಕರು ಎನ್ನುವುದೂ ಅಲ್ಲ. ಈಗಲೂ ಬೆರಳೆಣಿಕೆಯಷ್ಟು ಶಿಕ್ಷಕರು ತಮ್ಮ ಸ್ಥಾನಕ್ಕೆ ನಿಜವಾದ ಮಹತ್ವ ತಂದುಕೊಟ್ಟಿದ್ದಾರೆ. ಯಾವುದೇ ಮೂಲಸೌಕರ್ಯಗಳಿಲ್ಲದ ಊರಲ್ಲಿ ಮಕ್ಕಳನ್ನು ಮೇಲಕ್ಕೆ ತರಲು ಟೊಂಕ ಕಟ್ಟಿ ಹರಸಾಹಸ ಪ್ರದರ್ಶಿಸುವ ಶಿಕ್ಷಕರೆಷ್ಟಿಲ್ಲ? ಇನ್ನೂ ಕೆಲವರಂತೂ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಅವರ ಭವಿತವ್ಯಕ್ಕಾಗಿ ಟೊಂಕ ಕಟ್ಟಿ ನಿಂತಿರುತ್ತಾರೆ. ಇಂಥವರು ಬೆಳಕಿಗೆ ಬರುತ್ತಿಲ್ಲ ಎಂಬುದು ಶಿಕ್ಷಕ ಸಮುದಾಯದ ದುರದೃಷ್ಟ.

ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ, ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗ್ಗಲು ಮಾರ್ಗದರ್ಶನ ಮಾಡುವ ಮಾರ್ಗದರ್ಶಕರಿಗೆ, ಗೌರವ ನೀಡಲು ನಮಗೆ ಶಿಕ್ಷಕರ ದಿನವೇ ಬೇಕೆಂದಿಲ್ಲ. ನಮ್ಮ ಭವಿಷ್ಯ ರೂಪಿಸುವ, ನಮ್ಮನ್ನು ಸತ್ಪಥದಲ್ಲಿ ಮುನ್ನಡೆಯುವಂತೆ ಮಾರ್ಗ ತೋರುವ ಗುರುವಿನ ಸ್ಮರಣೆ ಸದಾಕಾಲ ಇರಲಿ. ಶಿಕ್ಷಕರ ದಿನವು ಇತರ ದಿನಾಚರಣೆಗಳಂತೆ ಕಾಟಾಚಾರಕ್ಕೀಡಾಗದಿರಲಿ.

(ಸೂಚನೆ: ಈ ಲೇಖನ ವೆಬ್ ದುನಿಯಾ ಕನ್ನಡ ಪೋರ್ಟಲ್‌ನಲ್ಲಿ ಪ್ರಕಟಗೊಂಡಿದೆ. ಅದನ್ನು ನೋಡಲು ಇಲ್ಲ ಕ್ಲಿಕ್ಕಿಸಿ http://kannada.webdunia.com/miscellaneous/literature/stories/0709/05/1070905002_1.htm)

ಕಾಮೆಂಟ್‌ಗಳಿಲ್ಲ: