ಶುಕ್ರವಾರ, ಮಾರ್ಚ್ 8, 2019

ಕಾರ್ಗಿಲ್ ಗರ್ಲ್- ಗುಂಜನಾ ಸಕ್ಸೇನಾ

ರಣರಂಗದಲ್ಲಿ ಮಹಿಳೆಯರದ್ದು 'ಸಪೋರ್ಟಿಂಗ್‌ ರೋಲ್‌' ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ವ್ಯಾಖ್ಯಾನ ಬದಲಾಗಿದೆ. ಪುರುಷರಷ್ಟೇ ಸರಿಸಮಾನವಾಗಿ ರಣರಂಗದಲ್ಲಿ ಓಡಾಡಬಲ್ಲ ಧೀರೆ ಗುಂಜನಾ ಸಕ್ಸೇನಾ ಅಂಥ ಉದಾಹರಣೆಗಳಲ್ಲೊಬ್ಬರು. ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆ. ಸೇನಾ ವಲಯ ಹಾಗೂ ಕುಟುಂಬಸ್ಥರು ಗುಂಜನಾ ಅವರನ್ನು 'ಕಾರ್ಗಿಲ್‌ ಗರ್ಲ್‌' ಎಂದು ಪ್ರೀತಿಯಿಂದ ಕರೆಯುತ್ತಾರೆ. ಸೇನೆ ಗುಂಜನಾಗೆ ಹೊಸದಲ್ಲ. ತಂದೆ ಹಾಗೂ ಸಹೋದರರಿಬ್ಬರೂ ಸೇನೆಯಲ್ಲಿ ಅಪ್ರತಿಮ ಸಾಹಸ ಮೆರೆದವರು. ದಿಲ್ಲಿ ವಿವಿಯ ಹಂಸರಾಜ್‌ ಕಾಲೇಜ್‌ನಲ್ಲಿ ಡಿಗ್ರಿ ಪಡೆದ ಬಳಿಕ, ಸೇನೆ ಸೇರುವುದೊಂದೇ ಅವರ ಮುಂದಿದ್ದ ಆಯ್ಕೆ. 1994ರಲ್ಲಿ ಗುಂಜನಾ ಸಕ್ಸೇನಾ, ಶ್ರೀವಿದ್ಯಾ ರಾಜನ್‌ ಸೇರಿದಂತೆ 25 ಮಹಿಳೆಯರ ಮೊದಲ ಪೈಲಟ್‌ ತಂಡವನ್ನು ಭಾರತೀಯ ವಾಯುಪಡೆ ರಚಿಸಿತು. ಹೀಗಿದ್ದರೂ, ಮಹಿಳಾ ತಂಡದ ಸೇವೆ ಸಂಪೂರ್ಣವಾಗಿ ಸೇನೆಗೆ ಲಭ್ಯವಾಗಿದ್ದು 2016ರಲ್ಲಿ. ಆದರೆ, ಗುಂಜನಾ ಮತ್ತು ಶ್ರೀವಿದ್ಯಾ ಅವರ ಸಾಹಸಗಾಥೆ 1999ರ ಕಾರ್ಗಿಲ್‌ ಯುದ್ಧದ ವೇಳೆಯಲ್ಲಿ ಜಗಜ್ಜಾಹೀರಾಯಿತು. ಸೇನೆ ಇನ್ನೂ ಮಹಿಳೆಯರನ್ನು ಯುದ್ಧಭೂಮಿಗೆ ಕಳುಹಿಸಬೇಕೇ ಬೇಡವೇ ಎಂಬ ದ್ವಂದ್ವದಲ್ಲಿದ್ದಾಗಲೇ, ಈ ಮಹಿಳೆಯರಿಬ್ಬರು ಇಡೀ ಯುವತಿಯರಿಗೆ ರೋಲ್‌ ಮಾಡೆಲ್‌ ಆಗುವ ಸಾಹಸ ಮೆರೆದರು. 
ಹಾಗೆ ನೋಡಿದರೆ, ಫ್ಲೈಟ್‌ ಲೆಫ್ಟಿನೆಂಟ್‌ ಗುಂಜನಾ ಮತ್ತು ಶ್ರೀವಿದ್ಯಾ ಅವರು ಫೈಟರ್‌ ಜೆಟ್‌ಗಳ ಹಾರಾಟ ನಡೆಸಿರಲಿಲ್ಲ. ಆದರೆ, ಕಾರ್ಗಿಲ್‌ ಯುದ್ಧ ತುತ್ತತುದಿಯಲ್ಲಿದ್ದಾಗ, ಭಾರತೀಯ ವಾಯುಪಡೆ ತನ್ನೆಲ್ಲ ಪೈಲಟ್‌ಗಳ ಗರಿಷ್ಠ ಸೇವೆಯನ್ನು ಬಳಸಿಕೊಳ್ಳಲು ಮುಂದಾಯಿತು. ಆಗ, ಗುಂಜನಾ ಮತ್ತು ಶ್ರೀವಿದ್ಯಾ ಅವರಿಗೆ ಕರೆ ಬಂತು. ಗಾಯಾಳು ಯೋಧರ ಸ್ಥಳಾಂತರ ಮತ್ತು ಯುದ್ಧಭೂಮಿಯಲ್ಲಿ ಪಾಕಿಸ್ತಾನದ ಸ್ಥಿತಿಯನ್ನು ಗುರುತಿಸಿ ಮಾಹಿತಿ ನೀಡುವ ಟಾಸ್ಕ್‌ ನೀಡಲಾಯಿತು. ಅಚ್ಚರಿಯ ಸಂಗತಿ ಎಂದರೆ, ಗುಂಜನಾ ಮತ್ತು ಶ್ರೀವಿದ್ಯಾ ಹಾರಾಟ ಮಾಡಲಿರುವ ಹೆಲಿಕಾಪ್ಟರ್‌ಗಳು ತುಂಬ ಚಿಕ್ಕವು ಮತ್ತು ಶಸ್ತ್ರರಹಿತವಾಗಿದ್ದವು. ಒಮ್ಮೆ ಇವರು ತಮ್ಮ ಕಾಪ್ಟರ್‌ ಅನ್ನು ಕಾರ್ಗಿಲ್‌ ಏರ್‌ಸ್ಟ್ರಿಪ್‌ನಿಂದ ಟೇಕ್‌ ಆಫ್‌ ಮಾಡುತ್ತಿರುವಾಗಲೇ ಪಾಕಿಸ್ತಾನದ ಕ್ಷಿಪಣಿಯೊಂದು ಇವರತ್ತ ನುಗ್ಗಿ ಬಂತು. ಆಗ ಸ್ವಲ್ಪದರಲ್ಲಿ ಕಾಪ್ಟರ್‌ ಅದರಿಂದ ತಪ್ಪಿಸಿಕೊಂಡಿತು. ಇಂಥ ಸಾವಿನ ಸಮೀಪ ಹೋದ ಅನೇಕ ಅನುಭವವಗಳು ಗುಂಜನಾ ಅವರಿಗೆ ಕಾರ್ಗಿಲ್‌ ಯುದ್ಧದ ವೇಳೆ ಆದವು. ಒಂದೊಮ್ಮೆ ಕಾಪ್ಟರ್‌ ಅಪಘಾತಕ್ಕೀಡಾಗಿ ವೈರಿಗಳ ನೆಲದಲ್ಲಿ ಬಿದ್ದರೆ ನೆರವಿಗೆ ಇರಲಿ ಎಂದು ಗುಂಜನಾ ತಮ್ಮ ಬಳಿ ಐಎನ್‌ಎಸ್‌ಎಎಸ್‌ ರೈಫಲ್‌ ಮತ್ತು ರಿವಾಲ್ವರ್‌ ಇಟ್ಟುಕೊಳ್ಳುತ್ತಿದ್ದರು. ಯುದ್ಧಭೂಮಿಯಲ್ಲಿ ನೇರವಾಗಿ ಭಾಗಿಯಾದ ಮೊದಲ ಮಹಿಳಾ ಪೈಲಟ್‌ಗಳೆಂಬ ಖ್ಯಾತಿ ಅವರಿಗೆ ಅಂಟಿಕೊಂಡಿತು. ಕಾಪ್ಟರ್‌ ಪೈಲಟ್‌ ಆಗಿದ್ದ ಗುಂಜನಾ ಅವರು ಕೇವಲ 7 ವರ್ಷದವರೆಗೆ ಮಾತ್ರ ಸೇವೆ ಸಲ್ಲಿಸಿದರು. ಕಾರ್ಗಿಲ್‌ನಲ್ಲಿ ತೋರಿದ ಅಪ್ರತಿಮ ಸಾಹಸಕ್ಕಾಗಿ ಶೌರ್ಯವೀರ ಪದಕ ನೀಡಲಾಯಿತು. ಎಲ್ಲಕ್ಕಿಂತ ಸಾವಿರಾರು ಯುವತಿಯರಿಗೆ ಸೇನೆ ಸೇರುವ ಸ್ಫೂರ್ತಿಯಾದರು. 

ಕಾಮೆಂಟ್‌ಗಳಿಲ್ಲ: