Article ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Article ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಅಕ್ಟೋಬರ್ 15, 2022

Justice D Y Chandrchud | ಡಿ ವೈ ಚಂದ್ರಚೂಡ್ ನ್ಯಾಯನಿಷ್ಠ, ಧೈರ್ಯಶಾಲಿ ನ್ಯಾಯಮೂರ್ತಿ

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ, 'ಭಾರತೀಯ ನ್ಯಾಯಾಂಗವು ವ್ಯವಸ್ಥೆ ಸುರಕ್ಷಿತ ಕೈಗಳಲ್ಲಿದೆ' ಎಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬಂತು! ನ್ಯಾಯವಾದಿಯಾಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ, ಹೈಕೋರ್ಟ್ ನ್ಯಾಯಮೂರ್ತಿ- ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅವರು ತೋರಿದ ಧೈರ್ಯ, ದೃಢತೆ, ನ್ಯಾಯಪರತೆಯೇ ಈ ಮೆಚ್ಚುಗೆಯ ಹಿಂದಿನ ಕಾರಣ.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ನ್ಯಾ. ಚಂದ್ರಚೂಡ್ ಅವರನ್ನು ಹತ್ತಿರದಿಂದ ಬಲ್ಲ ಮುಂಬೈ ನ್ಯಾಯವಾದಿಗಳು ಅವರನ್ನು ಮೂರು ಸಿ(C)ಗಳಲ್ಲಿ ಬಣ್ಣಿಸುತ್ತಾರೆ.  compassion, courage and conscientiousness. ಅಂದರೆ, ಸಹಾನುಭೂತಿ, ಧೈರ್ಯ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ವ್ಯಕ್ತಿ ಎಂದರ್ಥ. ಅವರು ನೀಡಿದ ಎಲ್ಲ ತೀರ್ಪುಗಳಲ್ಲಿ ನ್ಯಾಯಪರತೆಯೊಂದಿಗೆ ಈ ಮೂರು ಮೌಲ್ಯಗಳು ಪ್ರತಿಫಲನಗೊಂಡಿರುವುದನ್ನು ಸುಲಭವಾಗಿ ಗುರುತಿಸಬಹುದು. ಹಾಗಾಗಿಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿ. ವೈ.ಚಂದ್ರಚೂಡ ಅವರಿಗೆ ವಿಶೇಷವಾದ ಗೌರವವಿದೆ. ಅವರೀಗ ಸುಪ್ರೀಂ ಕೋರ್ಟ್‌ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ. ಸುಮಾರು ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ  ಇರಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದೀರ್ಘ ಅವಧಿಗೆ ಸಿಜೆಐ ಆಗುತ್ತಿರುವುದು ಇವರೇ ಮೊದಲಿಗರು. ಇನ್‌ಫ್ಯಾಕ್ಟ್ ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತರಾವ್ ವಿ ಚಂದ್ರಚೂಡ್ ಅವರೂ 7 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ಇದು ಈ ವರೆಗಿನ ಗರಿಷ್ಠ ದಾಖಲೆಯಾಗಿದೆ. ಈಗ ಅವರ ಪುತ್ರ ದೀರ್ಘಾವಧಿಗೆ ಅದೇ ಹುದ್ದೆಯಲ್ಲಿ ಇರಲಿರುವುದು ಕಾಕತಾಳೀಯವಷ್ಟೇ.  ಬಹುಶಃ ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ತಂದೆ-ಮಗ ಇಬ್ಬರು ದೀರ್ಘಾವಧಿಗೆ ಸಿಜೆಐ ಆಗಿರುವುದು ವಿಶಿಷ್ಟ ದಾಖಲೆಯಾಗಲಿದೆ.

1959ರಲ್ಲಿ ಜನನ
ಡಿ ವೈ ಚಂದ್ರಚೂಡ್ ಅವರ ಪೂರ್ತಿ ಹೆಸರು ಧನಂಜಯ್ ಯಶವಂತರಾವ್ ಚಂದ್ರಚೂಡ್. 1959 ನವೆಂಬರ್ 11ರಂದು ಮುಂಬೈನಲ್ಲಿ ಜನಿಸಿದರು. ತಂದೆ ಯಶವಂತರಾವ್ ಚಂದ್ರಚೂಡ್. ಅವರೂ ಸಿಜೆಐ ಆಗಿದ್ದವರು. ತಾಯಿ ಪ್ರಭಾ. ಶಾಸ್ತ್ರೀಯ ಸಂಗೀತಗಾರ್ತಿ. ಧನಂಜಯ್ ಅವರು ದಿಲ್ಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್‌ ಲಾ ಕಾಲೇಜಿನಿಂದ ಕಾನೂನು ಪದವಿ ಗಳಿಸಿದರು. ಹಾಗೆಯೇ, ಹಾರ್ವರ್ಡ್ ಲಾ ಸ್ಕೂಲ್‌ನಿಂದ ಮಾಸ್ಟರ್ ಆಫ್ ಲಾ ಮತ್ತು ಜುರಿಡಿಕಲ್ ಸೈನ್ಸ್‌ನಲ್ಲಿ ಪಿಎಚ್‌ಡಿ ಸಂಪಾದಿಸಿದರು.  ಆ ಬಳಿಕ ಅವರು ಬಾಂಬೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕಿ ಆರಂಭಿಸಿದರು. ಈ ಮಧ್ಯೆ ಅವರು ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಕೆಲಸ ಮಾಡಿದರು. 2000ರಲ್ಲಿ ಅವರನ್ನು ಬಾಂಬೆ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಅಕ್ಟೋಬರ್ 31ರಂದು ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. 2016 ಮಾರ್ಚ್ 13ರಂದು ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಭಡ್ತಿ ನೀಡಲಾಯಿತು. 

ಬಹುಮುಖ ವ್ಯಕ್ತಿತ್ವ
ನಿಯೋಜಿತ ಸಿಜೆಐ ಡಿ ವೈ ಚಂದ್ರಚೂಡ್ ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರ ಪೀಠದಲ್ಲಿ ಸ್ವಾಭಾವಿಕ ನಾಯಕನಂತಿರುತ್ತಾರೆ. ಅವರ ಸಮಚಿತ್ತತೆ, ಸಭ್ಯತೆ ಮತ್ತು ದೃಢವಾದ ನಡವಳಿಕೆ, ಅವರ ಪಾಂಡಿತ್ಯ ಮತ್ತು ನ್ಯಾಯದಾನ ಮಾಡುವ ಅವರ ಉತ್ಸಾಹವು ಹೆಚ್ಚು ವಿಶ್ವಾಸಾರ್ಹವಾಗಿದೆ. ಹಾಗಾಗಿ, ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಬಗ್ಗೆ ಇಡೀ ಜಗತ್ತೇ ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದರೆ ಅತಿಶಯೋಕ್ತಿಯೇನೂ ಆಗಲಾರದು. 

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಚಂದ್ರಚೂಡ್ ಅವರು ಮುಂಬೈ ವಿಶ್ವವಿದ್ಯಾಲಯದ ಕಂಪ್ಯಾರಟಿವ್ ಕಾನ್ಸಿಟಿಟ್ಯೂಷನಲ್ ಲಾ ಕಾಲೇಜು ಹಾಗೂ ಅಮೆರಿಕದ ಓಕ್ಲಹೋಮ್ ಯುನಿವರ್ಸಿಟಿಯ ಸ್ಕೂಲ್‌ ಆಫ್ ಲಾ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕರೂ ಹೌದು. ಚಂದ್ರಚೂಡ ಅವರು ನಿಸರ್ಗ ಪ್ರೇಮಿ. ನಡೆಯುವುದೆಂದರೆ ತುಂಬ ಖುಷಿ ಅವರಿಗೆ. ಅಧ್ಯಾತ್ಮಿಕ ಹಾಗೂ ತತ್ವಜ್ಞಾನ ವಿಷಯಗಳು ಇಷ್ಟ. ಇಬ್ಬರು ಮಕ್ಕಳಿದ್ದಾರೆ. ಮೊದಲನೆಯ ಮಗ ಅಭಿನವ್ ಬಾಂಬೆ ಹೈಕೋರ್ಟ್‍‌ನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಎರಡನೇಯ ಮಗ ಚಿಂತನ್ ಅವರು ಲಂಡನ್‌ನ ಬ್ರಿಕ್ ಕೋರ್ಟ್ ಚೇಂಬರ್ಸ್‌ನಲ್ಲಿ ನ್ಯಾಯವಾದಿಯಾಗಿದ್ದಾರೆ.

ತಂದೆ ತೀರ್ಪುಗಳನ್ನೇ ಬದಲಿಸಿದ ಮಗ
ಡಿ ವೈ ಚಂದ್ರಚೂಡ್ ಅವರ ತಂದೆ ಯಶವಂತ ವಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 16ನೇ ಮುಖ್ಯ ನ್ಯಾಯಮೂರ್ತಿಯಾಗಿ ಏಳು ವರ್ಷ ನಾಲ್ಕು ತಿಂಗಳು ಕಾಲ ಕಾರ್ಯ ನಿರ್ವಹಿಸಿದ್ದರು. ಆ ಸಮಯದಲ್ಲಿ ಸಿಜೆಐ ಆಗಿ ಯಶವಂತ ಚಂದ್ರಚೂಡ್ ಅವರು ಖಾಸಗಿ ಹಕ್ಕು (right to privacy) ಮತ್ತು ವಿವಾಹೇತರ ಸಂಬಂಧ (Adultery) ಕುರಿತು ತೀರ್ಪು ನೀಡಿದ್ದರು. ಸೀನಿಯರ್ ಚಂದ್ರಚೂಡ್ ಅವರು ಅಡಲ್ಟರಿ ಕಾನೂನಿನ 497 ವಿಧಿಯ ಸಿಂಧುತ್ವವನ್ನು ಎತ್ತಿ ಹಿಡಿದ್ದರು. ಇದಾದ 35 ವರ್ಷದ ಬಳಿಕ ಅವರ ಪುತ್ರ ಡಿ ವೈ ಚಂದ್ರಚೂಡ್ ಅವರು, ನಮ್ಮ ತೀರ್ಪುಗಳು ವರ್ತಮಾನಕ್ಕೆ ಹೆಚ್ಚು ಹೊಂದಾಣಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು. ಅಲ್ಲದೇ, ವಿವಾಹೇತರ ಸಂಬಂಧ ಅಪರಾಧಿಕರಣವನ್ನು ತೆಗೆದು ಹಾಕಿದ್ದರು.  ಅದೇ ರೀತಿ, ಖಾಸಗಿ ಹಕ್ಕಿಗೆ ಸಂಬಂಧಿಸಿದಂತೆ ಸಿಜೆಐ ಯಶವಂತ್ ಚಂದ್ರಚೂಡ್ ಅವರು ವಿವಾದಿತ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಬದಲಿಸಿದ್ದರು. 

ಡಿ ವೈ ಚಂದ್ರಚೂಡ್ ನೀಡಿದ ಪ್ರಮುಖ ತೀರ್ಪುಗಳು
|  ಅಯೋಧ್ಯೆ ವಿವಾದ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠವು 2019 ನವೆಂಬರ್ 9ರಂದು ಐತಿಹಾಸಿಕ ತೀರ್ಪು ಪ್ರಕಟಿಸಿತು. ವಿವಾದಿತ ಅಯೋಧ್ಯೆಯ ಜಾಗವು ಹಿಂದೂಗಳಿಗೆ ಸೇರಿದ್ದು, ಮುಸ್ಲಿಮರಿಗೆ ಪರ್ಯಾಯ ಭೂಮಿ ಒದಗಿಸುವಂತೆ ಆದೇಶ ಮಾಡಲಾಯಿತು. ಈ ಸಾಂವಿಧಾನಿಕ ಪೀಠದ ನೇತೃತ್ವವನ್ನು ಅಂದಿನ ಮುಖ್ಯ ನ್ಯಾಯಮೂರ್ತಿ  ರಂಜನ್ ಗೊಗೊಯ್ ವಹಿಸಿದ್ದರು. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಸ್ ಅಬ್ದುಲ್ ನಝೀರ್, ಅಶೋಕ್ ಭೂಷಣ್ ಮತ್ತು ಎಸ್ ಎ ಬೋಬ್ಡೆ ಅವರು ಪೀಠದಲ್ಲಿದ್ದ ಇತರರು. ದಶಕಗಳಿಂದ ನಡೆದುಕೊಂಡಿದ್ದ ಬಂದಿದ್ದ ಪ್ರಕರಣಕ್ಕೆ ಈ ತೀರ್ಪು ಅಂತ್ಯ ಹಾಡಿತು.

|  ಖಾಸಗಿ ಹಕ್ಕು: 2007 ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಪೀಠವು ಖಾಸಗಿ ಹಕ್ಕಿನ ಸಂಬಂಧ ಐತಿಹಾಸಿಕ ತೀರ್ಪು ಪ್ರಕಟಿಸಿತು. ಖಾಸಗಿ ಹಕ್ಕು ಕೂಡ ಮೂಲಭೂತ ಹಕ್ಕು ಎಂಬುದನ್ನು ಸಂವಿಧಾನ ಖಾತರಿಪಡಿಸುತ್ತದೆ ಎಂಬ ತೀರ್ಪನ್ನು ಬರೆದಿದ್ದೇ ನ್ಯಾ. ಡಿ ವೈ ಚಂದ್ರಚೂಡ್ ಅವರು. ಖಾಸಗಿ ಹಕ್ಕು ಮತ್ತು ಘನತೆಯ ಹಕ್ಕು ಬದುಕಿನ ಆಂತರಿಕ ಹಕ್ಕುಗಳಾಗಿವೆ ಎಂದು ತಮ್ಮ ತೀರ್ಪಿನಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

|  ಗರ್ಭಪಾತ ಹಕ್ಕು:  ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿತು. ಅವಿವಾಹಿತ ಮತ್ತು ವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ಹೊಂದಿದ್ದಾರೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪು ನೀಡಿದ ಡಿ ವೈ ಚಂದ್ರಚೂಡ ನೇತೃತ್ವದ ಪೀಠದಲ್ಲಿ ಎ ಎಸ್ ಬೋಪಣ್ಣ, ಬಿ ವಿ ನಾಗರತ್ನ ನ್ಯಾಯಮೂರ್ತಿಗಳಿದ್ದರು. 

|  ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ:  ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದವರ ಪ್ರವೇಶಕ್ಕೆ ಒಪ್ಪಿಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ಪೀಠದಲ್ಲೂ ನ್ಯಾ. ಡಿ ವೈ ಚಂದ್ರಚೂಡ್ ಅವರಿದ್ದರು. ಮಹಿಳೆಯರಿಗೆ ದೇಗುಲ ಪ್ರವೇಶ ನಿರಾಕರಿಸುವುದು ಸಾಂವಿಧಾನಿಕ ತತ್ವದ ವಿರುದ್ಧವಾಗಿದೆ ಎಂದು 9 ನ್ಯಾಯಮೂರ್ತಿಗಳಿದ್ದ ಪೀಠವು ಅಭಿಪ್ರಾಯಪಟ್ಟಿತ್ತು.

|  ಕ್ರಿಯೇಟಿವ್ ಪ್ರೈವೇಟ್ ಲಿ. ವರ್ಸಸ್ ಪಶ್ಚಿಮ ಬಂಗಾಳ ಪ್ರಕರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ರಿಪಬ್ಲಿಕ್ ಟಿವಿ  ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ರಕ್ಷಣಾ ಸಚಿವಾಲಯ ವರ್ಸಸ್ ಬಬಿತಾ ಪುನಿಯಾ ಪ್ರಕರಣದಲ್ಲಿ ಲಿಂಗ ಸಮಾನ ನ್ಯಾಯ ಹಾಗೂ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಪರಿಸರ ರಕ್ಷಣೆ, ಕಾರ್ಮಿಕರ ಹಿತರಕ್ಷಣೆ ಸಂಬಂಧ ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಅದೇ ರೀತಿ, ಸಾಂವಿಧಾನಿಕ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲೂ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ತೀರ್ಪುಗಳಲ್ಲಿ ನ್ಯಾ. ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆ ಕೆಲಸ ಮಾಡಿದೆ.

ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿತವಾಗಿರುವ ಡಿ ವೈ ಚಂದ್ರಚೂಡ್ ಅವರ ನ್ಯಾಯಪರತೆಯಿಂದಾಗಿ ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಹಾಗಾಗಿ, ಅವರ ಮೇಲೆ ನಿರೀಕ್ಷೆಗಳ ಬೆಟ್ಟ ದೊಡ್ಡದಿದೆ. ಮುಖ್ಯ ನ್ಯಾಯಮೂರ್ತಿಯಾಗಿ ಅವರ ಮುಂದೆ ಸಾಕಷ್ಟು ಸವಾಲಗಳೂ ಇವೆ. ಆದರೆ, ಈವರೆಗಿನ ಅವರ ಕಾರ್ಯವೈಖರಿಯನ್ನು ಪರಿಗಣಿಸಿದರೆ, ಎಲ್ಲ ಸವಾಲು, ಸಂಕಟಗಳನ್ನು ಅವರು ಮೆಟ್ಟಿ ನಿಲ್ಲುತ್ತಾರೆಂಬುದರಲ್ಲಿ ಅನುಮಾನಗಳಿಲ್ಲ.

ಈ ಲೇಖನವು ವಿಸ್ತಾರನ್ಯೂಸ್ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ.

ಗುರುವಾರ, ಮಾರ್ಚ್ 5, 2020

10 Deadliest Viruses: ಜಗತ್ತನ್ನು ಕಾಡಿದ ಆ 10 ವೈರಸ್‌ಗಳು!

- ಮಲ್ಲಿಕಾರ್ಜುನ ತಿಪ್ಪಾರ
ಕೊರೊನಾ ವೈರಸ್‌(ಕೋವಿಡ್‌-19)ಗೆ ಇಡೀ ಜಗತ್ತೇ ತಲ್ಲಣಿಸಿದೆ. 60 ರಾಷ್ಟ್ರಗಳಿಗೆ ಹಬ್ಬಿರುವ ಈ ವೈರಾಣುವಿಗೆ ಈಗಾಗಲೇ 30 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಕೊರೊನಾ ಹರಡದಂತೆ, ಮಾರಣಾಂತಿಕವಾಗದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಇನ್ನೂ ದೊಡ್ಡ ಪ್ರಮಾಣದಲ್ಲಿಯಶಸ್ಸು ದೊರೆಯುತ್ತಿಲ್ಲ.

ಆದರೆ, ಕೊರೊನಾ ವೈರಾಣುಗಿಂತಲೂ ಭೀಕರ ವೈರಸ್‌ಗಳ ಹಾವಳಿಯನ್ನು ಈ ಜಗತ್ತು ಕಂಡಿದೆ. 20ನೇ ಶತಮಾನದಲ್ಲಿಇಡೀ ಮನುಕುಲಕ್ಕೆ ಸಂಚಕಾರ ತಂದಿದ್ದ ಸಿಡುಬು(ಸ್ಮಾಲ್‌ ಪಾಕ್ಸ್‌) ವೈರಾಣು ಇದೀಗ ಭೂಮಿಯ ಮೇಲಿಲ್ಲ! ನಮ್ಮ ವೈದ್ಯ ವಿಜ್ಞಾನ ಬೆಳೆದಂತೆ ವೈರಾಣುಗಳಿಗೆ ಲಸಿಕೆಗಳು, ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಆದರೂ ಈವರೆಗೂ ಕೆಲವು ವೈರಾಣುಗಳಿಗೆ ಯಾವುದೇ ರೀತಿಯ ಮದ್ದು ದೊರೆತಿಲ್ಲಮತ್ತು ಇನ್ನೂ ಕೆಲವು ರೋಗಾಣುಗಳನ್ನು ನಿಯಂತ್ರಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ಕೊರೊನಾ ಮುಂಚೆ ಎಬೋಲಾ ಎಂಬ ವೈರಸ್‌ ಕೂಡ ಹೆಚ್ಚು ಭೀತಿಯನ್ನು ಸೃಷ್ಟಿಸಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆ ಆಫ್ರಿಕಾದ ಕೆಲವು ರಾಷ್ಟ್ರಗಳಲಿ ಕಾಣಿಸಿಕೊಂಡಿದ್ದ ಎಬೋಲಾ ಸೃಷ್ಟಿಸಿದ್ದ ಭೀಕರತೆ ಮಾತ್ರ ಗಂಭೀರವಾಗಿತ್ತು. ಎಬೋಲಾ ಪೀಡಿತರ ಪೈಕಿ ಶೇ.90ರಷ್ಟು ಜನರು ಸರಿಯಾದ ಚಿಕಿತ್ಸೆ ದೊರೆಯದೆ ಸಾವಿಗೀಡಾಗಿದ್ದರು. ಇದೀಗ ಕೊರೊನಾ ಕೂಡ ಅಂಥದ್ದೇ ಸ್ಥಿತಿಯನ್ನು ಸೃಷ್ಟಿಸಿದೆ. ಆರೋಗ್ಯ ತುರ್ತು ಪರಿಸ್ಥಿತಿ ಮಾತ್ರವಲ್ಲದೇ ವಿಶ್ವದ ಆರ್ಥಿಕ ವಲಯದ ಮೇಲೆ ಕೊರೊನಾ ಕೆಟ್ಟ ಪರಿಣಾಮ ಬೀರಿದೆ.

ಕೊರೊನಾ ಹೊರತುಪಡಿಸಿ ಈ ವಿಶ್ವವನ್ನು ಕಾಡಿದ ಅತಿ ಭಯಂಕರ ಹತ್ತು ವೈರಾಣುಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಮಾರಣಾಂತಿಕ 'ಮಾರ್ಬರ್ಗ್‌'
1967ರಲ್ಲಿವಿಜ್ಞಾನಿಗಳು ಈ ವೈರಸ್‌ ಗುರುತಿಸಿದರು. ಉಗಾಂಡದಿಂದ ಮಂಗಗಳನ್ನು ಲ್ಯಾಬ್‌ ಕಾರ್ಮಿಕರು ಜರ್ಮನಿಗೆ ತರುತ್ತಿದ್ದರು. ಈ ವೇಳೆ, ಮಂಗಗಳಿಂದ ಅವರಿಗೂ ಈ ವೈರಸ್‌ ತಗುಲಿತ್ತು. ಎಬೋಲಾ ವೈರಸ್‌ ಮಾದರಿಯಲ್ಲೇ ಮಾರ್ಬರ್ಗ್‌ ವೈರಸ್‌ ಇದ್ದು, ಹೆಮರಾಜಿಕ್‌ ಫೀವರ್‌(ರಕ್ತಸ್ರಾವ ಜ್ವರ)ಕ್ಕೆ ಕಾರಣವಾಗುತ್ತದೆÜ. ಅಂದರೆ, ಮಾರ್ಬರ್ಗ್‌ ಸೋಂಕುಪೀಡಿತ ವ್ಯಕ್ತಿಗೆ ಸಿಕ್ಕಾಪಟ್ಟೆ ಜ್ವರ ಉಂಟಾಗಿ, ರಕ್ತಸ್ರಾವವಾಗುತ್ತದೆ. ಇದರ ಪರಿಣಾಮ ವ್ಯಕ್ತಿ ಶಾಕ್‌ಗೊಳಗಾಗಬಹುದು, ಬಹು ಅಂಗಾಂಗಗಳು ವೈಫಲ್ಯ ಕಾಣಬಹುದು ಮತ್ತು ಅಂತಿಮವಾಗಿ ಸಾವು ಸಂಭವಿಸಬಹುದು. ಮಾರ್ಬರ್ಗ್‌ ಮರಣದ ಪ್ರಮಾಣ ಶೇ.25ರಷ್ಟಿದೆ. ಆದರೆ, 1998 ಮತ್ತು 2000ರಲ್ಲಿ ಈ ವೈರಸ್‌ ಕಾಣಿಸಿಕೊಂಡಾಗ ಮರಣ ಪ್ರಮಾಣ ಶೇ.80ರಷ್ಟಿತ್ತು! ವಿಶೇಷವಾಗಿ ಕಾಂಗೊದಲ್ಲಿಈ ಜ್ವರ ಕಾಣಿಸಿಕೊಂಡ ನೂರು ಜನರ ಪೈಕಿ 80 ಜನರು ಸಾವಿಗೀಡಾಗುತ್ತಿದ್ದರು. 2005ರಲ್ಲಿಅಂಗೋಲಾದಲ್ಲಿ ಮಾರ್ಬರ್ಗ್‌ ಕಾಣಿಸಿಕೊಂಡು ಹೆಚ್ಚಿನ ಸಾವು ನೋವಿಗೆ ಕಾರಣವಾಗಿತ್ತು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

2. ಅಲ್ಲೋಲ ಕಲ್ಲೋಲ 'ಎಬೋಲಾ'
ಮಾರಣಾಂತಿಕ 'ಎಬೋಲಾ ವೈರಸ್‌' 1967ರ ಸಮಯದಲ್ಲಿಆಫ್ರಿಕಾದ ಕಾಂಗೊ ಮತ್ತೂ ಸೂಡಾನ್‌ ರಾಷ್ಟ್ರಗಳಲ್ಲಿಏಕಕಾಲಕ್ಕೆ ಕಾಣಿಸಿಕೊಂಡಿತು. ಇದು ಕೂಡ ಡೆಡ್ಲಿವೈರಸ್‌ ಆಗಿದ್ದು, ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ಸಾವು ಖಚಿತ. ರಕ್ತಅಥವಾ ದೇಹದ ಇತರ ದ್ರವ ಅಥವಾ ಸೋಂಕಿತ ವ್ಯಕ್ತಿ, ಪ್ರಾಣಿಯ ಅಂಗಾಂಶಗಳಿಂದ ಈ ವೈರಸ್‌ ಹರಡುತ್ತದೆ.  ರಕ್ತಅಥವಾ ದೇಹದ ಇತರ ದ್ರವ ಅಥವಾ ಸೋಂಕಿತ ವ್ಯಕ್ತಿ, ಪ್ರಾಣಿಯ ಅಂಗಾಂಶಗಳಿಂದ ಈ ವೈರಸ್‌ ಹರಡುತ್ತದೆ. ತೀರಾ ಇತ್ತೀಚೆಗೆ 
ಅಂದರೆ 2014ರಲ್ಲಿಎಬೋಲಾ ಪಶ್ಚಿಮ ಆಫ್ರಿಕಾದಲ್ಲಿಕಾಣಿಸಿಕೊಂಡಿತ್ತು. ಆತಂಕಕಾರಿ ಸಂಗತಿ ಎಂದರೆ, ಈ ವರೆಗೂ ಕಂಡು ಬಂದಿರುವ ವೈರಸ್‌ಗಳ ಪೈಕಿ ಇದು ಅತ್ಯಂತ ಡೆಡ್ಲಿವೈರಸ್‌ ಎಂಬುದು ಡಬ್ಲ್ಯೂಎಚ್‌ಒ ಅಭಿಮತವಾಗಿದೆ. ವೈರಸ್‌ನಿಂದಾಗಿ ಸಾವಿನ ಪ್ರಮಾಣ ಶೇ.50ರಷ್ಟಿತ್ತು. ಸೂಡಾನ್‌ನಲ್ಲಿಈ ಪ್ರಮಾಣ ಶೇ.70ರಷ್ಟಿತ್ತು.

3. ಭಯಂಕರ 'ರೇಬಿಸ್‌'
ರೇಬಿಸ್‌ ವೈರಸ್‌ಗೆ ಈಗ ಮದ್ದು ಇದೆ. ಆದರೆ, 1920ಕ್ಕಿಂತ ಮುಂಚೆ ಈ ವೈರಸ್‌ ಮಾರಣಾಂತಿಕವಾಗಿತ್ತು. ಆ ಬಳಿಕ ರೇಬಿಸ್‌ಗೆ ಮದ್ದು ಕಂಡು ಹಿಡಿದು ಅದನ್ನು ಹತೋಟಿಗೆ ತರಲಾಗಿತ್ತು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಈ ವೈರಸ್‌ನ ಉಪಟಳ ಅಷ್ಟಿಲ್ಲ. ಆದರೆ, ಈಗಲೂ ಭಾರತ ಮತ್ತು ಆಫ್ರಿಕದ ಕೆಲವು ಭಾಗಳಲ್ಲಿರೇಬಿಸ್‌ ಆಗಾಗ ಜನರಿಗೆ ತೊಂದರೆ ನೀಡುತ್ತದೆ. ರೇಬಿಸ್‌ಪೀಡಿತ ವ್ಯಕ್ತಿಯ ಮೆದುಳು ತನ್ನ ಕೆಲಸವನ್ನು ನಿಲ್ಲಿಸುತ್ತದೆ. ವಿಶೇಷವಾಗಿ ನಾಯಿ ಕಚ್ಚಿದಾಗ ಈ ವೈರಸ್‌ ಸೋಂಕು ತಗಲುತ್ತದೆ. ಕ್ರೋಧೋನ್ಮತ್ತ ಯಾವುದೇ ಪ್ರಾಣಿ ಕಚ್ಚಿದಾಗಲೂ ರೇಬಿಸ್‌ ಸೋಂಕು ಹರಡಬಹುದು. ಈಗಿನ ದಿನಗಳಲ್ಲಿರೇಬಿಸ್‌ಗೆ ಚುಚ್ಚುಮದ್ದು ಮತ್ತು ಆ್ಯಂಟಿಬಯೋಟಿಕ್ಸ್‌ಗಳು ಲಭ್ಯ ಇವೆ. ಆದರೆ, ರೇಬಿಸ್‌ಪೀಡಿತ ಪ್ರಾಣಿ ಕಚ್ಚಿದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಶೇ.100ರಷ್ಟು ಸಾವು ಖಚಿತ ಎನ್ನುತ್ತಾರೆ ತಜ್ಞರು.

4. 'ಎಚ್‌ಐವಿ' ಎಂಬ ಪಾಶವಿ
ಬಹುಶಃ ಎಚ್‌ಐವಿ ವೈರಾಣು ಸೃಷ್ಟಿಸಿದ್ದ ಆತಂಕವನ್ನು ಬೇರೆ ಯಾವುದೇ ವೈರಾಣು ಸೃಷ್ಟಿಸಿಲ್ಲವೇನೋ? ಅದರಲ್ಲೂಭಾರತದಲ್ಲಂತೂ ಎಚ್‌ಐವಿ ವೈರಾಣು ಸೃಷ್ಟಿಸಿದ್ದ ಭೀಕರತೆ ಇನ್ನೂ ಇದೆ. ಆಧುನಿಕ ಜಗತ್ತಿನ ಅತ್ಯಂತ ಡೆಡ್ಲಿವೈರಸ್‌ ಎಂದು ಎಚ್‌ಐವಿಯನ್ನು ಪರಿಗಣಿಸಲಾಗುತ್ತದೆ. ಈಗಲೂ ಜನರನ್ನು ಕೊಲ್ಲುವುದರಲ್ಲಿಈ ವೈರಾಣು ನಂಬರ್‌ ಒನ್‌ ಸ್ಥಾನದಲ್ಲಿದೆ! 1980ರಲ್ಲಿಕಾಂಗೋದಲ್ಲಿಮೊದಲ ಬಾರಿ ಎಚ್‌ಐವಿ ವೈರಾಣು ಪತ್ತೆಯಾಯಿತು. ಅಲ್ಲಿಂದ ಇಲ್ಲಿವರೆಗೂ 3.6 ಕೋಟಿ ಜನರು ಈ ವೈರಾಣುವಿಗೆ ಬಲಿಯಾಗಿದ್ದಾರೆ. ಮಾನವ ಕುಲ ಈವರೆಗೆ ಕಂಡ ಅತ್ಯಂತ ಮಾರಣಾಂತಿಕ ವೈರಸ್‌ ಇದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಎಚ್‌ಐವಿಯನ್ನು ತಡೆಯಲು ಅತ್ಯಂತ ಶಕ್ತಿಶಾಲಿ ಆ್ಯಂಟಿ ವೈರಲ್‌ ಔಷಧ ಸಾಧ್ಯವಾಗಿದೆಯಾದರೂ ಈಗಲೂ ಕಡಿಮೆ ತಲಾದಾಯ ಇರುವ ರಾಷ್ಟ್ರಗಳಲ್ಲಿಎಚ್‌ಐವಿ ಆತಂಕ ಇನ್ನೂ ನಿಂತಿಲ್ಲ. ಸಬ್‌-ಸಹರನ್‌ ಆಫ್ರಿಕಾದಲ್ಲಿಪ್ರತಿ 20 ವಯಸ್ಕರಲ್ಲಿಒಬ್ಬರು ಎಚ್‌ಐವಿ ಪೀಡಿತರಾಗುತ್ತಿದ್ದಾರೆ. ಸದ್ಯ 3.1 ಕೋಟಿಯಿಂದ 3.5 ಕೋಟಿ ಜನರು ಎಚ್‌ಐವಿಪೀಡಿತರಿದ್ದಾರೆ. ಭಾರತದಲ್ಲಿಎಚ್‌ಐವಿಪೀಡಿತರ ಸಂಖ್ಯೆ ಹೆಚ್ಚಿತ್ತು. ಆದರೆ ಸರಕಾರ ಹಾಗೂ ಸಂಘಸಂಸ್ಥೆಗಳ ಜಾಗೃತಿಯ ಪರಿಣಾಮವಾಗಿ ಅದರ ಪರಿಣಾಮ ತಗ್ಗಿದೆ.

5. ಜಗತ್ತು ಕಾಡಿದ 'ಸಿಡುಬು'
1980ರಲ್ಲಿವಿಶ್ವ ಆರೋಗ್ಯ ಸಂಸ್ಥೆಯು ಇಡೀ ಜಗತ್ತನ್ನು ಸ್ಮಾಲ್‌ಪಾಕ್ಸ್‌(ಸಿಡುಬು) ಮುಕ್ತ ಮಾಡುವುದಾಗಿ ಘೋಷಿಸಿತು. ಆದರೆ, ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಮಾನವ ಕುಲ ಈ ಸ್ಮಾಲ್‌ಪಾಕ್ಸ್‌ ರೋಗಾಣುವಿನ ಅಟ್ಟಹಾಸಕ್ಕೆ ನರಳಿದೆ. ಸೋಂಕುಪೀಡಿತ ಪ್ರತಿ ಮೂವರ ಪೈಕಿ ಒಬ್ಬರ ಸಾವು ಆಗ ಖಚಿತವಾಗಿತ್ತು. ಇದರಿಂದ ಬದುಕುಳಿದವರು ಶಾಶ್ವತ ಗಾಯದ ಗುರುತುಗಳು ಮತ್ತು ಅಂಧ ಸಮಸ್ಯೆಯಿಂದ ಬಳಲಬೇಕಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. 20ನೇ ಶತಮಾನದಲ್ಲಿಈ ಸ್ಮಾಲ್‌ಪಾಕ್ಸ್‌ನಿಂದಾಗಿ ಅಂದಾಜು 30 ಕೋಟಿ ಜನರು ಸಾವಿಗೀಡಾಗಿದ್ದಾರೆ!

6. ಅಮೆರಿಕದ ಹಂಟರ್‌ 'ಹ್ಯಾಂಟ್‌'
ಹ್ಯಾಂಟ್‌ವೈರಸ್‌ ಪಲ್ಮನರಿ ಸಿಂಡ್ರೋಮ್‌(ಎಚ್‌ಪಿಎಸ್‌) ಮೊದಲ ಬಾರಿಗೆ 1993ರಲ್ಲಿಅಮೆರಿಕದಲ್ಲಿಕಾಣಿಸಿಕೊಂಡಿತು. ಈ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆದರೆ, ಸೋಂಕಿತ ಇಲಿಯ ಹಿಕ್ಕೆಯು ಮನುಷ್ಯ ಸಂಪರ್ಕಕ್ಕೆ ಬಂದರೆ ಸೋಂಕು ಗ್ಯಾರಂಟಿ ತಗಲುತ್ತದೆ. 1950ರಲ್ಲಿಈ ಹ್ಯಾಂಟ್‌ವೈರಸ್‌ ತೀವ್ರವಾಗಿ ಕಾಣಿಸಿಕೊಂಡಿತು. ಕೊರಿಯನ್‌ ವಾರ್‌ ವೇಳೆ 3,000ಕ್ಕೂ ಹೆಚ್ಚು ಸೈನಿಕರು ಈ ವೈರಾಣುವಿನಿಂದ ಬಳಲಿದ್ದರು ಮತ್ತು ಪೀಡಿತರ ಪೈಕಿ ಶೇ.12ರಷ್ಟು ಯೋಧರು ಸಾವಿಗೀಡಾಗಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇದು ಆಗ ಹೊಸದಾದ ರೋಗಾಣು ಆದ್ದರಿಂದ ತಕ್ಷಣಕ್ಕೆ ಯಾವುದೇ ಚಿಕಿತ್ಸೆ ಇರಲಿಲ್ಲ. ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ಇದಕ್ಕೆ ಔಷಧವನ್ನು ಕಂಡುಹಿಡಿದವು.

7. ಇನ್‌ಫ್ಲುಯೆಂಜಾ
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ಪ್ರಕಾರ, ಜಗತ್ತಿನಾದ್ಯಂತ ವರ್ಷಕ್ಕೆ ಐದು ಲಕ್ಷ ಜನರು ಈ ವೈರಸ್‌ನಿಂದಾಗಿ ಸಾವಿಗೀಡಾಗುತ್ತಾರೆ. ಇದು ಕೂಡ ಅತ್ಯಂತ ಡೆಡ್ಲಿವೈರಾಣು ಆಗಿದ್ದು, ಇದನ್ನು ಕೆಲವೊಮ್ಮೆ ಸ್ಪಾನಿಸ್‌ ಫ್ಲುಎಂದೂ ಕರೆಯಲಾಗುತ್ತದೆ. 1918ರಲ್ಲಿಇದು ಮೊದಲ ಬಾರಿಗೆ ಪತ್ತೆಯಾಯಿತು ಮತ್ತು ಈವರೆಗೆ ಸುಮಾರು 5 ಕೋಟಿ ಜನರು ಈ ವೈರಾಣುವಿಗೆ ಬಲಿಯಾಗಿದ್ದಾರೆ. ಈಗ ಇಡೀ ಜಗತ್ತಿಗೆ ತಲೆನೋವು ತಂದಿರುವ ಕೋವಿಡ್‌-19(ಕೊರೊನಾ ವೈರಸ್‌) ಮರಣದ ಪ್ರಮಾಣದ ಈಇನ್‌ಫ್ಲುಯೆಂಜಾ ವೈರಸ್‌ಗಿಂತಲೂ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

8. 'ಡೆಂಗೆ' ಭೀತಿಯ ಡಂಗುರ
ಡೆಂಗೆ ವೈರಸ್‌ ಬಗ್ಗೆ ಹೇಳುವುದೇ ಬೇಡ! ಪ್ರತಿ ವರ್ಷ ಡೆಂಗೆ ವೈರಸ್‌ ಹಾವಳಿಯನ್ನು ಮಾಧ್ಯಮಗಳಲ್ಲಿಕಾಣುತ್ತವೆ. ಈ ವೈರಸ್‌ 1950ರಲ್ಲಿಫಿಲಿಪ್ಪಿನ್ಸ್‌ ಮತ್ತು ಥಾಯ್ಲೆಂಡ್‌ನಲ್ಲಿಮೊದಲ ಬಾರಿಗೆ ಪತ್ತೆಯಾಯಿತು. ಆ ಬಳಿಕ ಜಗತ್ತಿನ ಉಷ್ಣ ವಲಯ ಹಾಗೂ ಉಪಉಷ್ಣವಲಯಗಳ ರಾಷ್ಟ್ರಗಳಲ್ಲಿವ್ಯಾಪಕವಾಗಿ ಹರಡಿತು. ಸದ್ಯ, ಜಗತ್ತಿನ ಶೇ.40ರಷ್ಟು ಜನಸಂಖ್ಯೆ ಈ ಡೆಂಗೆ ಪ್ರಭಾವದ ಪ್ರದೇಶಗಳಲ್ಲಿದೆ. ಈ ವೈರಸ್‌ ಪ್ರಸರಣಕ್ಕೆ ಮುಖ್ಯ ಸೊಳ್ಳೆಗಳು ಕಾರಣ. ಈ ಸೊಳ್ಳೆಗಳಿಂದಾಗಿಯೇ ಇಡೀ ಜಗತ್ತಿನಾದ್ಯಂತ ವ್ಯಾಪಕ ರೀತಿಯಲ್ಲಿಡೆಂಗೆ ಹರಡುವಂತಾಗಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ 5 ರಿಂದ 10 ಕೋಟಿ ಜನರು ಡೆಂಗೆ ಸೋಂಕುಪಿಡೀತರಾಗುತ್ತಾರೆ. ಇತರ ವೈರಸ್‌ಗಳಿಗೆ ಹೋಲಿಸಿದರೆ ಮರಣದ ಪ್ರಮಾಣ ಕಡಿಮೆ ಇದೆ. ಶೇ.2.5ರಷ್ಟು ಮಾತ್ರ ಮರಣ ಪ್ರಮಾಣವಿದೆ. ಹಾಗಂತ ವೈರಸ್‌ ನಿಯಂತ್ರಣಕ್ಕೆ ಮದ್ದು ಇದೆ ಎಂದು ಭಾವಿಸಬೇಕಿಲ್ಲ!

9. ಮಕ್ಕಳಿಗೆ ಕಂಟಕ 'ರೋಟ್‌'
ಮಕ್ಕಳಿಗೆ ಕಂಟಕಪ್ರಾಯವಾಗಿರುವ ಈ ರೋಟ್‌ ವೈರಸ್‌ ನಿಯಂತ್ರಣಕ್ಕೆ ಈಗ ಎರಡು ಲಸಿಕೆಗಳು ಲಭ್ಯ ಇವೆ. ಶಿಶುಗಳು ಹಾಗೂ ಮಕ್ಕಳಿಗೆ ಮಾರಣಾಂತಿಕವಾಗಿ ಕಾಯಿಲೆಯನ್ನು ಸೃಷ್ಟಿಸುತ್ತಿದ್ದ ಈ ವೈರಸ್‌ ಅತ್ಯಂತ ವೇಗವಾಗಿ ಹರಡಬಲ್ಲದು. ಸದ್ಯ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಈ ವೈರಸ್‌ ಕಾರಣಕ್ಕೆ ಸಾವಿಗೀಡಾಗುವ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ. ಆದರೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಇದು ಮಾರಣಾಂತಿಕವಾಗಿ ಪರಿಣಮಿಸಿದೆ. ರೀಹೈಡ್ರೇಷನ್‌ ಚಿಕಿತ್ಸೆ ಎಲ್ಲೆಡೆ ಇರದಿರುವುದೇ ಇದಕ್ಕೆ ಕಾರಣ. 2008ರಲ್ಲಿಐದು ವರ್ಷದೊಳಗಿನ 453,0000 ಮಕ್ಕಳು ಈ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ! ಆದರೆ, ಆ ಬಳಿಕ ಲಸಿಕೆಗಳನ್ನು ಪೂರೈಸಿದ ಪರಿಣಾಮ ಮರದ ಪ್ರಮಾಣದಲ್ಲಿಭಾರೀ ಕುಸಿತವಾಗಿದೆ.

10. ಎಪ್ಪಾ... 'ನಿಫಾ!'
ಬಾವಲಿ ಕಚ್ಚಿದ ಹಣ್ಣುಗಳು ಮಾನವನ ಸಂಪರ್ಕಕ್ಕೆ ಬಂದಾಗ ಈ ನಿಫಾ ಸೋಂಕು ತಗಲುತ್ತದೆ. ಇದಕ್ಕೂ ಸದ್ಯಕ್ಕೆ ಯಾವುದೇ ಔಷಧಗಳಿಲ್ಲ. 2018ರ ಮಾಹಿತಿ ಪ್ರಕಾರ 700 ಜನರಿಗೆ ನಿಫಾ ಸೋಂಕು ತಗುಲಿತ್ತು ಮತ್ತು ವೈರಾಣುಪೀಡಿತರ ಪೈಕಿ ಶೇ.50ರಿಂದ 70ರಷ್ಟು ನಿಧನರಾಗಿದ್ದರು. ನಮ್ಮ ನೆರೆಯ ಕೇರಳದಲ್ಲಿನಿಫಾ ಭಾರಿ ಭೀತಿಯನ್ನು ಸೃಷ್ಟಿಸಿತ್ತಲ್ಲದೇ 17 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.



ಶುಕ್ರವಾರ, ಡಿಸೆಂಬರ್ 20, 2019

Donald Trump Impeachment: ಡೊನಾಲ್ಡ್‌ ಆಗ್ತಾರಾ ಬೋಲ್ಡ್‌?

- ಮಲ್ಲಿಕಾರ್ಜುನ ತಿಪ್ಪಾರ
ನಿರೀಕ್ಷೆಯಂತೆ ಅಮೆರಿಕದ ಕಾಂಗ್ರೆಸ್‌ನ ಹೌಸ್‌ ಆಫ್‌ ರಿಪ್ರಸೆಂಟೇಟಿವ್‌ನಲ್ಲಿಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ವಾಗ್ದಂಡನೆಗೆ ಗೆಲುವು ದೊರೆತಿದೆ. ಇನ್ನು ಮುಂದಿನ ಪ್ರಕ್ರಿಯೆ ಸೆನೆಟ್‌ನಲ್ಲಿನಡೆಯಲಿದ್ದು, ಇಲ್ಲಿರಿಪಬ್ಲಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸದನದಲ್ಲಿವಾಗ್ದಂಡನೆ ಪ್ರಕ್ರಿಯೆ ನಡೆದು, ಟ್ರಂಪ್‌ ವಿರುದ್ಧ ಗೆಲುವು ದೊರೆತರೆ ಅವರು ಹುದ್ದೆಯನ್ನು ಕಳೆದುಕೊಳ್ಳುತ್ತಾರೆ, ಇಲ್ಲದಿದ್ದರೆ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.

ಅಮೆರಿಕದ 45ನೇ ಅಧ್ಯಕ್ಷರಾಗಿರುವ ಡೊನಾಲ್ಡ್‌ ಟ್ರಂಪ್‌ ಅವರು ಸದಾ ವಿವಾದದಿಂದಲೇ ಸುದ್ದಿಯಾಗಿದ್ದು, ಇದೀಗ ತಮ್ಮ ಅವಧಿಯ ಕೊನೆಯ ಹಂತದಲ್ಲಿವಾಗ್ದಂಡನೆಗೆ ಗುರಿಯಾಗುತ್ತಿದ್ದಾರೆ. ಅಮೆರಿಕ ಸಂಸತ್ತಿನ 230 ವರ್ಷಗಳ ಇತಿಹಾದಲ್ಲಿಈ ವರೆಗೆ ಟ್ರಂಪ್‌ ಅವರನ್ನು ಸೇರಿಸಿಕೊಂಡು ಐವರು ಅಧ್ಯಕ್ಷರು ವಾಗ್ದಂಡನೆ ಪ್ರಕ್ರಿಯೆಗೊಳಪಟ್ಟಿದ್ದಾರೆ. ಆದರೆ, ಯಾವ ಅಧ್ಯಕ್ಷರ ವಿರುದ್ಧವೂ ವಾಗ್ದಂಡನೆ ಸಂಪೂರ್ಣವಾಗಿ ಗೆಲುವು ಕಂಡಿಲ್ಲ. ಟ್ರಂಪ್‌ ಪ್ರಕರಣದಲ್ಲೂಇದೇ ಫಲಿತಾಂಶವನ್ನು ನಿರೀಕ್ಷಿಸಬಹುದು.

ಟ್ರಂಪ್‌ ವಿರುದ್ಧ ವಾಗ್ದಂಡನೆ ಯಶಸ್ವಿಯಾಗಬೇಕಿದ್ದರೆ 'ನಂಬರ್‌ ಗೇಮ್‌' ಮುಖ್ಯ ಪಾತ್ರವಹಿಸುತ್ತದೆ. ಈ ಆಟದಲ್ಲಿಟ್ರಂಪ್‌ ಗೆಲುವು ಸಾಧಿಸಬಹುದು. ಆದರೆ, ಅವರ ವಿರುದ್ಧದ ಆರೋಪಗಳಂತೂ ನಿಷ್ಕರ್ಷೆಯಲ್ಲಿಇರಲಿವೆ ಮತ್ತು ಇತಿಹಾಸದಲ್ಲಿದಾಖಲಾಗಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಜ್ಞಾವಂತ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಅಮೆರಿಕದಲ್ಲಿತಪ್ಪು ಮಾಡಿದರೆ ಅಧ್ಯಕ್ಷರೂ ಶಿಕ್ಷೆಯನ್ನು ಅನುಭವಿಸಬೇಕು ಎಂಬ ಸಂದೇಶವನ್ನಂತೂ ಟ್ರಂಪ್‌ ಪ್ರಕರಣ ಇಡೀ ಜಗತ್ತಿಗೇ ರವಾನಿಸಿದೆ.
ಸಂವಿಧಾನ ಏನು ಹೇಳುತ್ತದೆ?
ಅವಧಿಪೂರ್ವ ಅಧ್ಯಕ್ಷರನ್ನು ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೆಸ್‌ಗೆ ಅಮೆರಿಕ ಸಂವಿಧಾನ ಸಂಪೂರ್ಣ ಅಧಿಕಾರ ನೀಡಿದೆ. ಆದರೆ, ಅದಕ್ಕೆ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿಒಪ್ಪಿಗೆ ನೀಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅಧ್ಯಕ್ಷರ ವಿರುದ್ಧ, ದೇಶದ್ರೋಹ, ಭ್ರಷ್ಟಾಚಾರ, ಗಂಭೀರ ಸ್ವರೂಪದ ಅಪರಾಧ ಮತ್ತು ದುಷ್ಕೃತ್ಯದಂಥ ಪ್ರಕರಣಗಳಿರಬೇಕು. ಆದರೆ, ಈ ಆರೋಪಗಳನ್ನು ಯಾವ ರೀತಿ ವ್ಯಾಖ್ಯಾನಿಸಬೇಕು ಎಂಬುದನ್ನು ಸಂವಿಧಾನ ಸ್ಪಷ್ಪಡಿಸಿಲ್ಲ. ಇದಕ್ಕಾಗಿಯೇ ಸ್ಟ್ಯಾಂಡರ್ಡ್‌ ಎನ್ನಬಹುದಾದ ಯಾವುದೇ ಮಾನದಂಡಗಳಿಲ್ಲ. ಹಾಗಾಗಿ ಬಹುತೇಕ ಸಂದರ್ಭದಲ್ಲಿಅಧ್ಯಕ್ಷರ ವಿರುದ್ಧದ ವಾಗ್ದಂಡನೆಗಳಿಗೆ ಸೋಲಾಗಿದೆ. ಹೀಗಿದ್ದೂ, ಬಲಿಷ್ಠ ರಾಷ್ಟ್ರವೊಂದರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಮುಖ್ಯಸ್ಥರನ್ನು ವಾಗ್ದಂಡನೆಗೆ ಗುರಿಪಡಿಸುವ ಸಾಧ್ಯತೆಯನ್ನು ಮಾತ್ರ ತೆರೆದಿಟ್ಟಿದೆ.

ಟ್ರಂಪ್‌ ವಿರುದ್ಧ 2 ಆರೋಪ
1. ಅಧಿಕಾರದ ದುರುಪಯೋಗ. ಅಧ್ಯಕ್ಷ ಮರು ಆಯ್ಕೆಗೆ ವಿದೇಶಿ ಸರಕಾರದ ನೆರವು.
2. ವಾಗ್ದಂಡನೆ ಪ್ರಕ್ರಿಯೆಯಲ್ಲಿಕಾಂಗ್ರೆಸ್‌ ಕಾರ್ಯ ನಿರ್ವಹಣೆಗೆ ಅಡ್ಡಿ ಆರೋಪ

ಮುಂದೆ ಏನಾಗುತ್ತದೆ?
ಸಂಸತ್ತಿನಲ್ಲಿ(ಹೌಸ್‌ ಆಫ್‌ ರಿಪ್ರಸೆಂಟೆಟೀವ್‌) ಟ್ರಂಪ್‌ ವಿರುದ್ಧ ವಾಗ್ದಂಡನೆಗೆ ಒಪ್ಪಿಗೆ ಸಿಕ್ಕಿದೆ. ಟ್ರಂಪ್‌ ಅವರು ಶಿಕ್ಷೆ ಎದುರಿಸಬೇಕಿದ್ದರೆ ಅದಕ್ಕೆ ಅಮೆರಿಕದ ಸೆನೆಟ್‌ ಒಪ್ಪಿಗೆ ನೀಡಬೇಕಾಗುತ್ತದೆ. ಸಂಸತ್ತಿನಲ್ಲಿಡೆಮಾಕ್ರಟ್‌ಗಳ ಪಾರಮ್ಯವಿದ್ದರೆ, ಸೆನೆಟ್‌ನಲ್ಲಿರಿಪಬ್ಲಿಕನ್ನರ ಸಂಖ್ಯೆ ಹೆಚ್ಚಿದೆ. ಹಾಗಾಗಿ, ಸೆನೆಟ್‌ನಲ್ಲಿಈ ವಾಗ್ದಂಡನೆಗೆ ಸೋಲಾಗಬಹುದು. ಹಾಗಾಗಿ ಅಷ್ಟು ಸರಳವಾಗಿ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಸೆನೆಟ್‌ನಲ್ಲಿರಿಪಬ್ಲಿಕನ್ನರ ನಾಯಕರಾಗಿರುವ ಮಿಚ್‌ ಮೆಕ್‌ಕೆನ್ನಾಲ್‌ ಅವರು, ವಿಚಾರಣೆ ವೇಳೆ ಅಧ್ಯಕ್ಷರ ತಂಡದೊಂದಿಗೆ ರಿಪಬ್ಲಿಕನ್‌ ಸೆನೆಟರ್‌ಗಳು ಸಂಪೂರ್ಣ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದ್ದರು. ಇದೀಗ ಸೆನೆಟ್‌ನಲ್ಲಿವಾಗ್ದಂಡನೆಗೆ ಸಂಬಂಧಿಸಿದ ನಿಯಮಗಳನ್ನು ರಚಿಸಬೇಕಾದ ಹೊಣೆಗಾರಿಕೆ ಮೆಕ್‌ಕೆನ್ನಾಲ್‌ ಮೇಲಿದೆ.

ವಾಗ್ದಂಡನೆ ಪ್ರಕ್ರಿಯೆ ಹೀಗಿದೆ
- ಅಮೆರಿಕ ಹೌಸ್‌ ಆಫ್‌ ರಿಪ್ರಸೆಂಟೇಟಿವ್‌ನಲ್ಲಿಗೆದ್ದಿರುವ ವಾಗ್ದಂಡನೆ ಇನ್ನು ಸೆನೆಟ್‌ಗೆ ವರ್ಗಾವಣೆಯಾಗುತ್ತದೆ.
- ಸೆನೆಟ್‌ನಲ್ಲಿಸುದೀರ್ಘ ವಿಚಾರಣೆ ನಡೆಯುತ್ತದೆ. ಬಳಿಕ, ಅಧ್ಯಕ್ಷರ ವಿರುದ್ಧದ ವಾಗ್ದಂಡನೆಯನ್ನು ಮತಕ್ಕೆ ಹಾಕಲಾಗುತ್ತದೆ.
- ಒಂದು ವೇಳೆ, ಸೆನೆಟ್‌ನಲ್ಲಿಟ್ರಂಪ್‌ ವಿರುದ್ಧ ಮೂರನೇ ಎರಡಕ್ಕಿಂತ ಕಡಿಮೆ ಮತ ಬಿದ್ದರೆ ಅವರು ಅವರು ಶಿಕ್ಷೆಯಿಂದ ಪಾರಾಗಲಿದ್ದಾರೆ.
- ಟ್ರಂಪ್‌ಗೆ ಶಿಕ್ಷೆಯ ಪರವಾಗಿ ಮೂರನೇ ಎರಡಕ್ಕಿಂತ ಹೆಚ್ಚು ಅಂದರೆ ಶೇ.67ರಷ್ಟು ಮತ ಬಿದ್ದರೆ ಅವರು ತಮ್ಮ ಹುದ್ದೆಯಿಂದ ಕೆಳಗಿಳಯಬೇಕಾಗುತ್ತದೆ.

ಎಷ್ಟು ದಿನಗಳ ಕಾಲ ನಡೆಯಲಿದೆ?
- ಒಟ್ಟಾರೆ 126 ಗಂಟೆಗಳ ಕಾಲ ವಾಗ್ದಂಡನೆ ಪ್ರಕ್ರಿಯೆ ನಡೆಯಲಿದೆ
- ಡಿಸೆಂಬರ್‌ 18: ಈಗಾಗಲೇ ಹೌಸ್‌ ಆಫ್‌ ರಿಪ್ರಸೆಂಟೆಟೀವ್‌ನಲ್ಲಿವಾಗ್ದಂಡನೆಗೆ ಒಪ್ಪಿಗೆ ದೊರೆತಿದೆ.
- 2020 ಜನವರಿ 6: ರಿಪಬ್ಲಿಕನ್ನರೇ ಹೆಚ್ಚಾಗಿರುವ ಸೆನೆಟ್‌ನಲ್ಲಿವಿಚಾರಣೆ ಆರಂಭ. ವಾಗ್ದಂಡನೆಯ ಪ್ರಕ್ರಿಯೆಯೆ ನಿಯಮ, ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಲಾಗುವುದು.
- 2020 ಜನವರಿ 7: ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಮತ್ತು ಸೆನೆಟರ್‌ಗಳು ತೀರ್ಪುಗಾರರಾಗಿ ಪ್ರಮಾಣ ಸ್ವೀಕಾರ
- 2020 ಜನವರಿ 9: ಹೌಸ್‌ ಪ್ರಾಸೆಕ್ಯೂಟರ್‌ಗಳು ಮತ್ತು ಶ್ವೇತಭವನದ ಅಧಿಕಾರಿಗಳು ಪ್ರತಿ 24 ಗಂಟೆಗೆ ತಮ್ಮ ವಾದಗಳನ್ನು ಮಂಡಿಸುತ್ತಾರೆ.
- ಈ ಒಟ್ಟಾರೆ ಪ್ರಕ್ರಿಯೆ ಮುಗಿಯಲು ವಾರ ಬೇಕಾಗಬಹುದು. ಆದರೆ, ಅಮೆರಿಕ ಅಧ್ಯಕ್ಷರ ಪ್ರೈಮರಿ ಎಲೆಕ್ಷನ್‌ ಹೊತ್ತಿಗೆ ಈ ಪ್ರಕ್ರಿಯೆ ಮುಗಿಯಬೇಕೆಂದು ಡೆಮಾಕ್ರಟ್‌ಗಳು ಬಯಸುತ್ತಿದ್ದಾರೆ.

ಟ್ರಂಪ್‌ ರಾಜೀನಾಮೆ ನೀಡ್ತಾರಾ?
ಇಲ್ಲ. ಸದ್ಯಕ್ಕೆ ಇಲ್ಲ. ಸಂಸತ್ತಿನ ಜನಪ್ರತಿನಿಧಿಗಳ ಮನೆಯಲ್ಲಿಮಾತ್ರ ವಾಗ್ದಂಡನೆಗೆ ಒಪ್ಪಿಗೆ ದೊರೆತಿದೆ. ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕಿದ್ದರೆ ಸಂಸತ್ತಿನ ಮತ್ತೊಂದು ಹೌಸ್‌ ಸೆನೆಟ್‌ ಕೂಡ ಒಪ್ಪಿಗೆ ನೀಡಬೇಕು. ಆದರೆ, ಈಗಿರುವ ಲೆಕ್ಕಾಚಾರ ಪ್ರಕಾರ ಅಷ್ಟು ಸುಲಭವಲ್ಲ. ಟ್ರಂಪ್‌ ವಾಗ್ದಂಡನೆಗೆ ಸೆನೆಟ್‌ ಕೂಡ ಮೂರನೇ ಎರಡರಷ್ಟು ಮತ ಹಾಕಬೇಕು. ಆದರೆ, ಇಷ್ಟೊಂದು ಮತಗಳು ದೊರೆಯುವುದು ಕಷ್ಟ. ಯಾಕೆಂದರೆ, ಸೆನೆಟ್‌ನಲ್ಲಿರಿಪಬ್ಲಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸೆನೆಟ್‌ನಲ್ಲಿರುವ 45 ಡೆಮಾಕ್ರಟ್‌ ಹಾಗೂ ಇಬ್ಬರು ಸ್ವತಂತ್ರ ಸದಸ್ಯರ ಜತೆಗೆ 53 ರಿಪಬ್ಲಿಕನ್ನರ ಪೈಕಿ ಕನಿಷ್ಠ 20 ರಿಪಬ್ಲಿಕನ್ನರಾದರೂ ವಾಗ್ದಂಡನೆ ಪರವಾಗಿ ಮತ ಹಾಕಬೇಕು. ಆಗ ಮಾತ್ರ ಟ್ರಂಪ್‌ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಈಗಿನ ಪರಿಸ್ಥಿತಿ ನೋಡಿದರೆ, ಡೆಮಾಕ್ರಟ್‌ಗಳ ಪೈಕಿಯೇ ಇಬ್ಬರು ಕೈಕೊಡುವ ಎಲ್ಲಸಾಧ್ಯತೆ ಇದೆ.

ಉಪಾಧ್ಯಕ್ಷ ಅಧ್ಯಕ್ಷ?
ಸದ್ಯದ ಲೆಕ್ಕಾಚಾರ ಪ್ರಕಾರ ಟ್ರಂಪ್‌ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವುದು ಅಸಂಭವ. ಸೆನೆಟ್‌ನಲ್ಲಿವಾಗ್ದಂಡನೆಗೆ ಸೋಲಾಗುವ ಎಲ್ಲಸಾಧ್ಯತೆಗಳಿವೆ. ಹೀಗಿದ್ದೂ ಒಂದು ವೇಳೆ, ವಾಗ್ದಂಡನೆಗೆ ಗುರಿಯಾಗಿ ಟ್ರಂಪ್‌ ಅಧಿಕಾರ ಬಿಟ್ಟು ಕೊಟ್ಟರೆ ಆಗ ಅಮೆರಿಕ ಅಧ್ಯಕ್ಷರು ಯಾರು ಆಗ್ತಾರೆ? ಅಲ್ಲಿನ ಸಂವಿಧಾನ ಪ್ರಕಾರ, ಸರಕಾರದ ಉಳಿದ ಅವಧಿಯವರೆಗೆ ಉಪಾಧ್ಯಕ್ಷರಾದವರು ಅಧ್ಯಕ್ಷರಾಗಿರುತ್ತಾರೆ. ಅಂದರೆ,ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅಧ್ಯಕ್ಷರಾಗಲಿದ್ದಾರೆ. ಆದರೆ, ಸದ್ಯಕ್ಕಂತೂ ಇದು ಸಾಧ್ಯವಿಲ್ಲ!

ರಾಜಕೀಯ ಪರಿಣಾಮವೇನು?
ಟ್ರಂಪ್‌ ವಿರುದ್ಧ ವಾಗ್ದಂಡನೆ ರಾಜಕೀಯ ಪರಿಣಾಮ ಬಗ್ಗೆ ಕೂಡ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಟ್ರಂಪ್‌ ಹೇಳಿರುವ ಪ್ರಕಾರ, ಈ ವಾಗ್ದಂಡನೆ ಡೆಮಾಕ್ರಟ್‌ಗಳಿಗೆ ಹಿನ್ನಡೆಯುಂಟು ಮಾಡಲಿದ್ದು, ಅಧ್ಯಕ್ಷೀಯ ಚುನಾವಣೆ ವೇಳೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಹಾಗೆ ನೋಡಿದರೆ, ಇದು ಎರಡು ಅಗಲಿನ ಕತ್ತಿಯ ನಡಿಗೆಯೇ ಆಗಿದೆ. ಮುಂದಿನ ವರ್ಷ ನವೆಂಬರ್‌ 20ರ ಹೊತ್ತಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಟ್ರಂಪ್‌ ಎರಡನೇ ಅವಧಿಗೆ ಮರು ಆಯ್ಕೆ ಬಯಸಿದ್ದಾರೆ. ಒಂದು ವೇಳೆ, ವಾಗ್ದಂಡನೆ ಅವರ ಪರವಾಗಿ ಸಹಾನುಭೂತಿ ಸೃಷ್ಟಿಸಿದರೆ ಖಂಡಿತವಾಗಿಯೂ ಅವರ ಗೆಲುವಿಗೆ ಇದು ಕಾರಣವಾಗಲಿದೆ. ಹಾಗೆಯೇ, ಡೆಮಾಕ್ರಟ್‌ಗಳ ರೀತಿಯಲ್ಲಿಅಮೆರಿಕದ ಜನ ಕೂಡ ಯೋಚನೆ ಮಾಡಿದ್ದಾದರೆ, ಖಂಡಿತವಾಗಿಯೂ ಟ್ರಂಪ್‌ ಹಿನ್ನಡೆಯಾಗಲಿದೆ.

ಐವರು ಅಧ್ಯಕ್ಷರ ವಿರುದ್ಧ ವಾಗ್ದಂಡನೆ
- ಭ್ರಷ್ಟಾಚಾರ ಆರೋಪ ಹೊತ್ತಿದ್ದ ಅಧ್ಯಕ್ಷ ಜೇಮ್ಸ್‌ ಬ್ಯೂಕ್ಯಾನನ್‌ ಅವರ ವಿರುದ್ಧ 1860ರಲ್ಲಿವಾಗ್ದಂಡನೆ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಅವರು ಶಿಕ್ಷೆಯಿಂದ ಪಾರಾಗಿದ್ದರು.
- ಟೆನ್ಯೂರ್‌ ಆಫೀಸ್‌ ಕಾಯಿದೆ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ1868ರಲ್ಲಿಆಂಡ್ರೋ ಜಾನ್ಸನ್‌ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ನಡೆದಿತ್ತು. ಕೇವಲ ಒಂದು ಮತದ ಅಂತರದಲ್ಲಿಅವರು ವಾಗ್ದಂಡನೆಯಿಂದ ಪಾರಾಗಿದ್ದರು.
- 1974ರಲ್ಲಿಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಅವರ ವಿರುದ್ಧವೂ ವಾಗ್ದಂಡನೆ ನಡೆದಿತ್ತು. ಅಧಿಕಾರದ ದುರುಪಯೋಗ ಸೇರಿದಂತೆ ನಾನಾ ಕಾರಣಗಳಿಂದ ವಾಗ್ದಂಡನೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಇನ್ನೇನು ತನಿಖೆ ಮುಗಿಯುವ ಹಂತದಲ್ಲಿಅವರು ರಾಜೀನಾಮೆ ನೀಡಿದ್ದರಿಂದ ವಾಗ್ದಂಡನೆ ಕೈ ಬಿಡಲಾಗಿತ್ತು.
- 1998ರಲ್ಲಿಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರು ವಾಗ್ದಂಡನೆ ಪ್ರಕ್ರಿಯೆಗೆ ಒಳಗಾಗಬೇಕಾಯಿತು. ವಿಚಾರಣೆಯಲ್ಲಿಅವರು ನಿರ್ದೋಷಿ ಎಂದು ಸಾಬೀತಾಗಿ, ವಾಗ್ದಂಡನೆ ವಿರುದ್ಧ ಗೆಲುವು ಸಾಧಿಸಿದ್ದರು.
- 2019ರಲ್ಲಿ ಹಾಲಿ ಅಧ್ಯಕ್ಷ ಟ್ರಂಪ್‌ ವಿರುದ್ಧವೂ ವಾಗ್ದಂಡನೆ ಪ್ರಕ್ರಿಯೆ ನಡೆಯುತ್ತಿದೆ. ಮರು ಆಯ್ಕೆಗೆ ವಿದೇಶಿ ಸರಕಾರಗಳ ನೆರವು ಸೇರಿದಂತೆ ಇನ್ನಿತರ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.

ಸೋಮವಾರ, ಡಿಸೆಂಬರ್ 9, 2019

DuckDuckGo: ಗೂಗಲ್‌ಗೆ ಸ್ಪರ್ಧೆ ಒಡ್ಡಲಿದೆಯೇ ಡಕ್‌ಡಕ್‌ಗೋ?

- ಮಲ್ಲಿಕಾರ್ಜುನ ತಿಪ್ಪಾರ

ಮೊನ್ನೆ ಮೊನ್ನೆಯಷ್ಟೇ ಟ್ವಿಟರ್‌ ಸಿಇಒ ಜಾಕ್‌ ಡಾರ್ಸೆ ಅವರು, ''ಡಕ್‌ಡಕ್‌ಗೋ ನನಗೆ ತುಂಬ ಇಷ್ಟವಾಗಿದ್ದು, ಅದನ್ನೇ ನನ್ನ ಡಿಫಾಲ್ಟ್‌ ಸರ್ಚ್ ಎಂಜಿನ್‌ ಆಗಿ ಬದಲಿಸಿಕೊಂಡಿರುವೆ,'' ಎಂದು ಟ್ವೀಟ್‌ ಮಾಡಿದ್ದು ದೊಡ್ಡ ಸುದ್ದಿಗೆ ಕಾರಣವಾಯಿತು. ತಂತ್ರಜ್ಞಾನ ಮಾರುಕಟ್ಟೆಯಲ್ಲಿಗೂಗಲ್‌ ಸರ್ಚ್ ಎಂಜಿನ್‌ ಏಕಸ್ವಾಮ್ಯವನ್ನು ಹೊಂದಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಡಕ್‌ಡಕ್‌ಗೋ ಕೂಡ ಸದ್ದು ಮಾಡುತ್ತಿದೆ. ಹಾಗಂತ, ಸಿಕ್ಕಾಪಟ್ಟೆ ಸ್ಪರ್ಧೆ ನೀಡುತ್ತಿದೆ ಎಂದರ್ಥವಲ್ಲ. ಗೂಗಲ್‌ ಸರ್ಚ್ ಎಂಜಿನ್‌ ಬಳಕೆಯಲ್ಲಿಶೇ. 81.5ರಷ್ಟು ಪಾಲು ಹೊಂದಿದ್ದರೆ, ಡಕ್‌ಡಕ್‌ಗೋ ಪಾಲು ಕೇವಲ ಶೇ. 0.28 ಮಾತ್ರ. ಆದರೆ, ಅದರ ವಿಶ್ವಾಸರ್ಹತೆ ಹೆಚ್ಚಾಗುತ್ತಿದೆ ಎಂದರೆ ತಪ್ಪಲ್ಲ.

ಗೂಗಲ್‌ ಸರ್ಚ್ ಎಂಜಿನ್‌ ನಮ್ಮ ಬದುಕಿನ ಭಾಗವೇ ಆಗಿದ್ದರೂ, ಅದು ನಮ್ಮ ಖಾಸಗಿತನಕ್ಕೆ ಕನ್ನ ಹಾಕಿದೆ, ನಮ್ಮ ನಡವಳಿಕೆ ಮೇಲೆ ಸದಾ ಕಣ್ಣಿಟ್ಟಿರುತ್ತದೆ, ಬಳಕೆದಾರರ ಎಲ್ಲ ಚಟುವಟಿಕೆಗಳನ್ನು ಬೆನ್ನಟ್ಟಿ ಅದರ ಅನ್ವಯ ಜಾಹೀರಾತುಗಳನ್ನು ಪೂರೈಸುತ್ತಿದೆ... ಹೀಗೆ ನಾನಾ ಕಾರಣಗಳಿಂದ ಬಳಕೆದಾರರಿಗೆ ಒಂದಿಷ್ಟು ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂಬ ಆರೋಪಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿದ್ದು, ಅದಕ್ಕಾಗಿ ಯುರೋಪ್‌ ಕೋರ್ಟ್‌ಗಳ ಕಟೆಕಟೆಯಲ್ಲಿ ನಿಂತಿದೆ. ಇಂಥ ಹೊತ್ತಿನಲ್ಲಿ ಟ್ವಿಟರ್‌ ದೈತ್ಯ ಕಂಪನಿಯೊಬ್ಬರು ಸಿಇಒ ತಮ್ಮ ಡಿಫಾಲ್ಟ್‌ ಸರ್ಚ್ ಎಂಜಿನ್‌ ಡಕ್‌ಡಕ್‌ಗೋ ಎಂದು ಹೇಳಿದ್ದಾರೆಂದರೆ ಅದಕ್ಕೆ ಮಹತ್ವ ಬಂದೇ ಬರುತ್ತದೆ.


ಕೃತಿಕ ಬುದ್ಧಿಮತ್ತೆ(ಎಐ) ಆಧರಿತ ಡಿಜಿಟಲ್‌ ಸೇವೆಗಳು ನಮ್ಮನ್ನು ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಯಾವ ಮಾಹಿತಿಯೂ ರಹಸ್ಯವಾಗಿ ಉಳಿಯುವುದಿಲ್ಲ. ಎಷ್ಟೇ ಕಠಿಣ ಪಾಸ್‌ವರ್ಡ್ ನಮ್ಮ ಮಾಹಿತಿ ಪರರ ಪಾಲಾಗುವುದನ್ನು ತಡೆಯಲಾರದು. ಮಾಹಿತಿ ತಂತ್ರಜ್ಞಾನ ಎಂಬ ಬಟಾ ಬಯಲಿನಲ್ಲಿನಿಂತಿರುವ ನಾವು, ನಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಎದೆಯುಬ್ಬಿಸಿಕೊಂಡಿದ್ದೇವೆ. ಆನ್‌ಲೈನ್‌ನಲ್ಲಿನ ನಮ್ಮ ಪ್ರತಿ ಚಟುವಟಿಕೆಯೂ ನಮ್ಮನ್ನು ಬೆತ್ತಲಾಗಿಸುತ್ತದೆ! ಖಾಸಗಿ ಮಾಹಿತಿಯನ್ನು ಕಾಪಾಡಿಕೊಳ್ಳುವ ವಾಗ್ದಾನಗಳನ್ನು ಎಲ್ಲಸಂಸ್ಥೆಗಳು ನೀಡುತ್ತವೆ. ಆದರೆ, ಅದೇನೂ ಪರಮ ಸತ್ಯವಲ್ಲ.

ಹೀಗಿದ್ದೂ ಡಕ್‌ಡಕ್‌ಗೋ ಮಾತ್ರ ತಾನು ಬಳಕೆದಾರರ ಖಾಸಗಿ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತಿದೆ. ಗೂಗಲ್‌ನಂತೆ ಡಕ್‌ಡಕ್‌ಗೋ, ಬಳಕೆದಾರರ ಚಟುವಟಿಕೆ ಮೇಲೆ ನಿಗಾ ವಹಿಸುವುದು, ಐಪಿ ಅಡ್ರೆಸ್‌ಗಳನ್ನು ಪಡೆಯುವುದು ಮತ್ತು ಆನ್‌ಲೈನ್‌ ನಡುವಳಿಕೆಯ ಆಧಾರದ ಮೇಲೆ ಜಾಹೀರಾತುಗಳನ್ನು ಫುಶ್‌ ಮಾಡುವುದಾಗಲಿ ಮಾಡುವುದಿಲ್ಲಎಂಬುದು ಬಳಕೆದಾರರ ಅಂಬೋಣ. ಹಾಗಾಗಿ, ನಿಧಾನವಾಗಿ ಗೂಗಲ್‌ ಸರ್ಚ್ ಎಂಜಿನ್‌ಗೆ ಡಕ್‌ಡಕ್‌ಗೋ ಪರ್ಯಾಯ ಎಂಬ ರೀತಿಯಲ್ಲಿ ಬಿಂಬಿತವಾಗುತ್ತದೆ. ಬಳಕೆಯ ಪ್ರಮಾಣದ ಗಮನಿಸಿದರೆ ಸದ್ಯಕ್ಕೆ ಹಾಗೇ ಹೇಳುವುದು ತಪ್ಪು. ಹಾಗಂತ, ತೀರಾ ಕಡೆಗಣಿಸುವಂತೆಯೂ ಇಲ್ಲ.

2019ರ ನವೆಂಬರ್‌ ಅಂಕಿ-ಸಂಖ್ಯೆಗಳನ್ವಯ ಡಕ್‌ಡಕ್‌ಗೋ ನಿತ್ಯ ಸರಾಸರಿ 4.8 ಕೋಟಿ ಬಳಕೆದಾರರನ್ನು ಹೊಂದಿದೆ. ಅತಿ ಹೆಚ್ಚು ವೀಕ್ಷಿಸಿದ ಆಧಾರದ ಮೇಲೆ ಶೋಧಗಳನ್ನು ಗೂಗಲ್‌ ನಿಮ್ಮ ಮುಂದಿಟ್ಟರೆ, ಡಕ್‌ಡಕ್‌ಗೋ ಅತಿ ಹೆಚ್ಚು ನಿಖರವಾದ ಶೋಧಗಳನ್ನು ಬಳಕೆದಾರರಿಗೆ ನೀಡುತ್ತದೆ. ಹಾಗಂತ ಅದು ಹೇಳಿಕೊಂಡಿದೆ. ಇದು ತಕ್ಕಮಟ್ಟಿಗೂ ನಿಜವೂ ಹೌದು. ಡಕ್‌ಡಕ್‌ಗೋ ಸರ್ಚ್ಎಂಜಿನ್‌ನಲ್ಲಿ ನಿಮಗೆ ಬೇಕಿರುವ ವಿಷಯವನ್ನು ಶೋಧಿಸಿದರೆ ಅಸಂಖ್ಯ ಮಾಹಿತಿ ನಿಮ್ಮ ಮುಂದೆ ಬಂದು ಬೀಳುವುದಿಲ್ಲ.

ಗ್ರೇಟರ್‌ ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾದ ಪಾವೊಲಿಯಲ್ಲಿ ಡಕ್‌ಡಕ್‌ಗೋ ಕಚೇರಿಯನ್ನು ಹೊಂದಿದ್ದು, ಬೆರಳೆಣಿಕೆ ಉದ್ಯೋಗಿಗಳನ್ನು ಹೊಂದಿದೆ. 11 ವರ್ಷಗಳ ಹಿಂದೆ ಗೆಬ್ರೀಯಲ್‌ ವಿನ್‌ಬರ್ಗ್‌ ಎಂಬುವವರು ಇದನ್ನು ಹುಟ್ಟುಹಾಕಿದರು. 2011 ಫೆಬ್ರವರಿ 22ರಂದು ಡಿಡಿಜಿ.ಜಿಜಿ(ddg.gg) ಡೊಮೈನ್‌ ನೇಮ್‌ ಅಡಿ ಕಂಪನಿ ನೋಂದಣಿಯಾಗಿದೆ. 2018ರಲ್ಲಿ ಡಕ್‌.ಕಾಂ(duck.com) ಸ್ವಾಧೀನ ಪಡಿಸಿಕೊಂಡ ಬಳಿಕ ಡಕ್‌ಡಕ್‌ಗೋ.ಕಾಂ(https://duckduckgo.com/) ಎಂದು ಬದಲಾಯಿತು. ಇನ್ಸ್‌ಟಂಟ್‌ ಆನ್ಸರ್ಸ್‌, ಟಾರ್‌ ಅಕ್ಸೆಸ್‌, ವಾಟ್ಸ್‌ ಸರ್ಚ್, ಬ್ಯಾಂಗ್ಸ್‌ ಇವುಗ ಡಕ್‌ಡಕ್‌ಗೋ ಸರ್ಚ್ ಎಂಜಿನ್‌ನ ವಿಶೇಷತೆಗಳಾಗಿವೆ.

ವೈಯಕ್ತಿಕ ಮಾಹಿತಿ ಸಂಗ್ರಹವಿಲ್ಲಡಕ್‌ಡಕ್‌ ಗೋ ಡಿಫಾಲ್ಟ್‌ ಆಗಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲಅಥವಾ ಹಂಚಿಕೆ ಮಾಡುವುದಿಲ್ಲ. ಇದು ತಮ್ಮ ಪ್ರೈವೇಸಿ ಪಾಲಿಸಿಯಾಗಿದೆ ಎನ್ನುತ್ತಾರೆ ಡಕ್‌ಡಕ್‌ಗೋ ಹಿಂದಿನ ರೂವಾರಿ ಗೆಬ್ರೀಯಲ್‌ ವಿನ್‌ಬರ್ಗ್‌ ಅವರು.

ಪ್ರಮುಖ ಸರ್ಚ್ ಎಂಜಿನ್‌ಗಳುಗೂಗಲ್‌, ಯಾಹೂ, ಬಿಂಗ್‌, ಯಾಂಡೆಕ್ಸ್‌.

ಈ ಲೇಖನವು ವಿಜಯ ಕರ್ನಾಟಕದ 2019ರ ಡಿಸೆಂಬರ್ 12ರ ಸಂಚಿಕೆಯಲ್ಲಿ ಪ್ರಕಟವಾಗಿದೆ

ಶುಕ್ರವಾರ, ಮಾರ್ಚ್ 8, 2019

ಕಾರ್ಗಿಲ್ ಗರ್ಲ್- ಗುಂಜನಾ ಸಕ್ಸೇನಾ

ರಣರಂಗದಲ್ಲಿ ಮಹಿಳೆಯರದ್ದು 'ಸಪೋರ್ಟಿಂಗ್‌ ರೋಲ್‌' ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ವ್ಯಾಖ್ಯಾನ ಬದಲಾಗಿದೆ. ಪುರುಷರಷ್ಟೇ ಸರಿಸಮಾನವಾಗಿ ರಣರಂಗದಲ್ಲಿ ಓಡಾಡಬಲ್ಲ ಧೀರೆ ಗುಂಜನಾ ಸಕ್ಸೇನಾ ಅಂಥ ಉದಾಹರಣೆಗಳಲ್ಲೊಬ್ಬರು. ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆ. ಸೇನಾ ವಲಯ ಹಾಗೂ ಕುಟುಂಬಸ್ಥರು ಗುಂಜನಾ ಅವರನ್ನು 'ಕಾರ್ಗಿಲ್‌ ಗರ್ಲ್‌' ಎಂದು ಪ್ರೀತಿಯಿಂದ ಕರೆಯುತ್ತಾರೆ. ಸೇನೆ ಗುಂಜನಾಗೆ ಹೊಸದಲ್ಲ. ತಂದೆ ಹಾಗೂ ಸಹೋದರರಿಬ್ಬರೂ ಸೇನೆಯಲ್ಲಿ ಅಪ್ರತಿಮ ಸಾಹಸ ಮೆರೆದವರು. ದಿಲ್ಲಿ ವಿವಿಯ ಹಂಸರಾಜ್‌ ಕಾಲೇಜ್‌ನಲ್ಲಿ ಡಿಗ್ರಿ ಪಡೆದ ಬಳಿಕ, ಸೇನೆ ಸೇರುವುದೊಂದೇ ಅವರ ಮುಂದಿದ್ದ ಆಯ್ಕೆ. 1994ರಲ್ಲಿ ಗುಂಜನಾ ಸಕ್ಸೇನಾ, ಶ್ರೀವಿದ್ಯಾ ರಾಜನ್‌ ಸೇರಿದಂತೆ 25 ಮಹಿಳೆಯರ ಮೊದಲ ಪೈಲಟ್‌ ತಂಡವನ್ನು ಭಾರತೀಯ ವಾಯುಪಡೆ ರಚಿಸಿತು. ಹೀಗಿದ್ದರೂ, ಮಹಿಳಾ ತಂಡದ ಸೇವೆ ಸಂಪೂರ್ಣವಾಗಿ ಸೇನೆಗೆ ಲಭ್ಯವಾಗಿದ್ದು 2016ರಲ್ಲಿ. ಆದರೆ, ಗುಂಜನಾ ಮತ್ತು ಶ್ರೀವಿದ್ಯಾ ಅವರ ಸಾಹಸಗಾಥೆ 1999ರ ಕಾರ್ಗಿಲ್‌ ಯುದ್ಧದ ವೇಳೆಯಲ್ಲಿ ಜಗಜ್ಜಾಹೀರಾಯಿತು. ಸೇನೆ ಇನ್ನೂ ಮಹಿಳೆಯರನ್ನು ಯುದ್ಧಭೂಮಿಗೆ ಕಳುಹಿಸಬೇಕೇ ಬೇಡವೇ ಎಂಬ ದ್ವಂದ್ವದಲ್ಲಿದ್ದಾಗಲೇ, ಈ ಮಹಿಳೆಯರಿಬ್ಬರು ಇಡೀ ಯುವತಿಯರಿಗೆ ರೋಲ್‌ ಮಾಡೆಲ್‌ ಆಗುವ ಸಾಹಸ ಮೆರೆದರು. 
ಹಾಗೆ ನೋಡಿದರೆ, ಫ್ಲೈಟ್‌ ಲೆಫ್ಟಿನೆಂಟ್‌ ಗುಂಜನಾ ಮತ್ತು ಶ್ರೀವಿದ್ಯಾ ಅವರು ಫೈಟರ್‌ ಜೆಟ್‌ಗಳ ಹಾರಾಟ ನಡೆಸಿರಲಿಲ್ಲ. ಆದರೆ, ಕಾರ್ಗಿಲ್‌ ಯುದ್ಧ ತುತ್ತತುದಿಯಲ್ಲಿದ್ದಾಗ, ಭಾರತೀಯ ವಾಯುಪಡೆ ತನ್ನೆಲ್ಲ ಪೈಲಟ್‌ಗಳ ಗರಿಷ್ಠ ಸೇವೆಯನ್ನು ಬಳಸಿಕೊಳ್ಳಲು ಮುಂದಾಯಿತು. ಆಗ, ಗುಂಜನಾ ಮತ್ತು ಶ್ರೀವಿದ್ಯಾ ಅವರಿಗೆ ಕರೆ ಬಂತು. ಗಾಯಾಳು ಯೋಧರ ಸ್ಥಳಾಂತರ ಮತ್ತು ಯುದ್ಧಭೂಮಿಯಲ್ಲಿ ಪಾಕಿಸ್ತಾನದ ಸ್ಥಿತಿಯನ್ನು ಗುರುತಿಸಿ ಮಾಹಿತಿ ನೀಡುವ ಟಾಸ್ಕ್‌ ನೀಡಲಾಯಿತು. ಅಚ್ಚರಿಯ ಸಂಗತಿ ಎಂದರೆ, ಗುಂಜನಾ ಮತ್ತು ಶ್ರೀವಿದ್ಯಾ ಹಾರಾಟ ಮಾಡಲಿರುವ ಹೆಲಿಕಾಪ್ಟರ್‌ಗಳು ತುಂಬ ಚಿಕ್ಕವು ಮತ್ತು ಶಸ್ತ್ರರಹಿತವಾಗಿದ್ದವು. ಒಮ್ಮೆ ಇವರು ತಮ್ಮ ಕಾಪ್ಟರ್‌ ಅನ್ನು ಕಾರ್ಗಿಲ್‌ ಏರ್‌ಸ್ಟ್ರಿಪ್‌ನಿಂದ ಟೇಕ್‌ ಆಫ್‌ ಮಾಡುತ್ತಿರುವಾಗಲೇ ಪಾಕಿಸ್ತಾನದ ಕ್ಷಿಪಣಿಯೊಂದು ಇವರತ್ತ ನುಗ್ಗಿ ಬಂತು. ಆಗ ಸ್ವಲ್ಪದರಲ್ಲಿ ಕಾಪ್ಟರ್‌ ಅದರಿಂದ ತಪ್ಪಿಸಿಕೊಂಡಿತು. ಇಂಥ ಸಾವಿನ ಸಮೀಪ ಹೋದ ಅನೇಕ ಅನುಭವವಗಳು ಗುಂಜನಾ ಅವರಿಗೆ ಕಾರ್ಗಿಲ್‌ ಯುದ್ಧದ ವೇಳೆ ಆದವು. ಒಂದೊಮ್ಮೆ ಕಾಪ್ಟರ್‌ ಅಪಘಾತಕ್ಕೀಡಾಗಿ ವೈರಿಗಳ ನೆಲದಲ್ಲಿ ಬಿದ್ದರೆ ನೆರವಿಗೆ ಇರಲಿ ಎಂದು ಗುಂಜನಾ ತಮ್ಮ ಬಳಿ ಐಎನ್‌ಎಸ್‌ಎಎಸ್‌ ರೈಫಲ್‌ ಮತ್ತು ರಿವಾಲ್ವರ್‌ ಇಟ್ಟುಕೊಳ್ಳುತ್ತಿದ್ದರು. ಯುದ್ಧಭೂಮಿಯಲ್ಲಿ ನೇರವಾಗಿ ಭಾಗಿಯಾದ ಮೊದಲ ಮಹಿಳಾ ಪೈಲಟ್‌ಗಳೆಂಬ ಖ್ಯಾತಿ ಅವರಿಗೆ ಅಂಟಿಕೊಂಡಿತು. ಕಾಪ್ಟರ್‌ ಪೈಲಟ್‌ ಆಗಿದ್ದ ಗುಂಜನಾ ಅವರು ಕೇವಲ 7 ವರ್ಷದವರೆಗೆ ಮಾತ್ರ ಸೇವೆ ಸಲ್ಲಿಸಿದರು. ಕಾರ್ಗಿಲ್‌ನಲ್ಲಿ ತೋರಿದ ಅಪ್ರತಿಮ ಸಾಹಸಕ್ಕಾಗಿ ಶೌರ್ಯವೀರ ಪದಕ ನೀಡಲಾಯಿತು. ಎಲ್ಲಕ್ಕಿಂತ ಸಾವಿರಾರು ಯುವತಿಯರಿಗೆ ಸೇನೆ ಸೇರುವ ಸ್ಫೂರ್ತಿಯಾದರು. 

ಮಂಗಳವಾರ, ಫೆಬ್ರವರಿ 19, 2019

ಸ್ವರ್ಗದಂಥ ಕಾಶ್ಮೀರ ನರಕವಾಗಿದ್ದೇಕೆ?


'ಸ್ವರ್ಗಕ್ಕಿಂತ ಸುಂದರ!' ಎಂದು ಕಾಶ್ಮೀರ ಕುರಿತು ಕವಿರತ್ನ ಕಾಳಿದಾಸ ಹೇಳಿದ ಮಾತುಗಳೇನೂ ಅತಿಶೋಯುಕ್ತಿವಲ್ಲ. ಹಿಮಾಲಯ ಗರಡಿಯ ಈ ನಾಡು ಕಣ್ಣಿಗೆ ತಂಪೆರೆಯುವ ಬೀಡು. ಆದರೆ, ರಾಜಕೀಯ ಕಾರಣಗಳಿಂದಾಗಿ ಅದರ ಮಣ್ಣಿನಲ್ಲಿ ನಿತ್ಯ ನೆತ್ತರು ಹರಿಯುತ್ತಿದೆ. 'ಭರತ ವರ್ಷ'ದ ಅವಿಭಾಜ್ಯ ಅಂಗವಾದ ಕಾಶ್ಮೀರವು ಇದೀಗ ಪಾಕಿಸ್ತಾನ-ಭಾರತ ನಡುವಿನ 'ಕದನದ ಕೊಂಡಿ'ಯಾಗಿದೆ. ಕಾಶ್ಮೀರದ ಇಂದಿನ ಪರಿಸ್ಥಿತಿಗೆ ಯಾರು, ಹೇಗೆ, ಯಾಕೆ ಕಾರಣರಾದರು ಎಂದು ವಿಶ್ಲೇಷ ಮಾಡುತ್ತ ಕುಳಿತರೆ ಅದು, ಸತ್ತ ಕತ್ತೆಯ ಕಾಲು ಹಿಡಿದು ಎಳೆದಂತಾಗುತ್ತದೆ. ಆಗಿರುವ ಐತಿಹಾಸಿಕ ಪ್ರಮಾದಗಳನ್ನು ತಿದ್ದಿಕೊಂಡು, ಕಾಶ್ಮೀರಕ್ಕೊಂದು ಹೊಸ ಭರವಸೆಯನ್ನು ನೀಡಬೇಕಾದ, ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯ ಈ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. 

ಮುಸ್ಲಿಂ ಅರಸರ ಆಳ್ವಿಕೆ

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಲ್ಲಿ ಕಾಶ್ಮೀರವನ್ನು ಹಿಂದೂ ರಾಜ ಆಳುತ್ತಿದ್ದ. ಅದಕ್ಕೂ ಮೊದಲು ಈ ರಾಜ್ಯವನ್ನು ಅಂದರೆ, 1346ರಿಂದ 1819ರವರೆಗೆ ಮುಸ್ಲಿಂ ರಾಜರು ಆಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿ ಹಿಂದೂ ದೇಗುಲಗಳನ್ನು ನಾಶ ಮಾಡಲಾಯಿತು. ಜನರ ಒತ್ತಾಯದಿಂದ ಇಸ್ಲಾಮ್‌ ಧರ್ಮವನ್ನು ಹೇರಲಾಯಿತು. ಆದರೆ, 1587ರಿಂದ 1752ರವರೆಗಿನ ಮೊಘಲ ಆಡಳಿತದಲ್ಲಿ ಕಾಶ್ಮೀರ ಯಾವುದೇ ಅಪಸವ್ಯಗಳಿಗೆ ಒಳಗಾಗಲಿಲ್ಲ. ನಂತರದ ಆಫ್ಘನ್‌ಆಡಳಿತವನ್ನು ಕತ್ತಲೆ ಅವಧಿ ಎದು ಕರೆಯಲಾಗುತ್ತದೆ. 1819ರಲ್ಲಿ ಮುಸ್ಲಿಂ ಆಡಳಿತ ಕೊನೆಗೊಂಡಿತು. 

ಹಿಂದೂ ಅರಸರ ಆಡಳಿತ 
ಮೊದಲನೆಯ ಸಿಖ್‌ ವಾರ್‌(1846)ರ ಮುಕ್ತಾಯ ಬಳಿಕ ಈಗಿರುವ ಕಾಶ್ಮೀರವನ್ನು ಜಮ್ಮುವಿನಲ್ಲಿ ಆಡಳಿತ ಮಾಡುತ್ತಿದ್ದ ಮಹಾರಾಜ ಗುಲಾಬ್‌ ಸಿಂಗ್‌ ಅವರ ಸುಪರ್ದಿಗೆ ವಹಿಸಲಾಯಿತು. ಬಳಿಕ, ಮಹಾರಾಜ ರಣಬೀರ್‌ ಸಿಂಗ್‌, ಮಹಾರಾಜ ಪ್ರತಾಪ್‌ ಸಿಂಗ್‌, ಮಹಾರಾಜ ಹರಿಸಿಂಗ್‌ ಅವರು ಆಧುನಿಕ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಅಡಿಪಾಯ ಹಾಕಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಲ್ಲಿ ಕಾಶ್ಮೀರವನ್ನು ಆಳುತ್ತಿದ್ದವರು ರಾಜಾ ಹರಿಸಿಂಗ್‌ ಅವರು. 1880ರಲ್ಲಿ ಬ್ರಿಟಿಷ್‌ ಆಡಳಿತವು ಆಫ್ಘಾನಿಸ್ತಾನ ಮತ್ತು ರಷ್ಯಾಗೆ ಸಂಬಂಧಿಸಿದಂತೆ ಸ್ಪಷ್ಟವಾದ ಗಡಿಗಳನ್ನು ಗುರುತಿಸಿತು. 

ಸ್ವಾತಂತ್ರ್ಯದ ಬಳಿಕ ಕಾಶ್ಮೀರ 

ಭಾರತದಿಂದ ಪಾಕಿಸ್ತಾನ ಪ್ರತ್ಯೇಕತೆಯಲ್ಲೇ ಕಾಶ್ಮೀರ ಬಿಕ್ಕಟ್ಟು ಕೂಡ ಅಡಕವಾಗಿದೆ. ವಿಭಜನೆಯ ಸಮಯದಲ್ಲಿ ಕಾಶ್ಮೀರ ಯಾವ ಕಡೆ ಹೋಗಬೇಕು ಎಂಬ ನಿರ್ಧಾರವನ್ನು ಅಂದಿನ ರಾಜ ಹರಿಸಿಂಗ್‌ ಅವರಿಗೆ ಬಿಡಲಾಯಿತು. ಅವರ ಮುಂದೆ ಕೆಲವು ಷರತ್ತುಗಳೊಂದಿಗೆ ಸ್ವತಂತ್ರ ರಾಷ್ಟ್ರವಾಗುವ ಆಯ್ಕೆಯನ್ನು ನೀಡಲಾಗಿತ್ತು. ಕೆಲವು ತಿಂಗಳು ತೊಳಲಾಡಿದ ಬಳಿಕ ಅವರು, ಭಾರತೀಯ ಒಕ್ಕೂಟ ಜತೆ ಸೇರುವ ನಿರ್ಧಾರಕ್ಕೆ ಬಂದರು. ಮುಸ್ಲಿಂ ಬಾಹುಳ್ಯದ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂದು ಹಟ ಹಿಡಿದ ಪಾಕಿಸ್ತಾನ, ಕಣಿವೆ ರಾಜ್ಯದ ಮೇಲೆ ಯುದ್ಧ ಸಾರಿತು. ರಾಜಾ ಹರಿಸಿಂಗ್‌ ಭಾರತದ ಆಶ್ರಯಕ್ಕೆ ಬಂದರು. ಭಾರತ ತನ್ನ ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿ ಕೊಟ್ಟಿತು. ಅದು 1948ರ ಸಮಯ. ಉಭಯ ರಾಷ್ಟ್ರಗಳ ನಡುವಿನ ಮೊದಲ ಯುದ್ಧವದು. ಇದರಲ್ಲಿ ಸೋಲುಂಡಿದ್ದು ಪಾಕಿಸ್ತಾನವೇ. ಕಾಶ್ಮೀರದ ಕೆಲವು ಪ್ರದೇಶದ ಮೇಲೆ ಪಾಕಿಸ್ತಾನ ನಿಯಂತ್ರಣ ಸಾಧಿಸಿದರೆ, ಬಹುತೇಕ ಭಾಗವು ಭಾರತದ ಆಡಳಿತಕ್ಕೆ ಒಳಪಟ್ಟಿತು. 

ವಿಶೇಷ ಸ್ಥಾನಮಾನ 

ಭಾರತ ಒಕ್ಕೂಟ ಸೇರಬೇಕಿದ್ದರೆ ಒಂದಿಷ್ಟು ಭರವಸೆಗಳನ್ನು ಈಡೇರಿಸಬೇಕೆಂಬುದು ಅಂದಿನ ರಾಜಮನೆತನದ ಆಗ್ರಹವಾಗಿತ್ತು. ಇದಕ್ಕೆ ಅಂದಿನ ಪ್ರಧಾನಿ ನೆಹರು ಕೂಡ ಒಪ್ಪಿಗೆ ಸೂಚಿಸಿದ್ದರು. ಇದರ ಪರಿಣಾಮವೇ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ರಕ್ಷ ಣೆ, ಹಣಕಾಸು, ಸಂವಹನ ಮತ್ತು ವಿದೇಶಾಂಗ ವ್ಯವಹಾರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಆಡಳಿತದಲ್ಲಿ ಕಾಶ್ಮೀರವು ಪ್ರತ್ಯೇಕತೆಯನ್ನು ಹೊಂದಿದೆ. ಇದಕ್ಕಾಗಿ ಸಂವಿಧಾನದ ವಿಧಿ 370ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರನ್ವಯ, ಕಾಶ್ಮೀರವು ತನ್ನದೇ ಸ್ವಂತ ಸಂವಿಧಾನ ಹೊಂದಿದ್ದ, ಕೆಲವೊಂದು ವಿಶೇಷ ಹಕ್ಕುಗಳನ್ನು ಪಡೆದುಕೊಂಡಿದೆ. 

 ಬಿಕ್ಕಟ್ಟಿನ ಸುಕ್ಕುಗಳು

ಕಾಶ್ಮಿರ ಸಮಸ್ಯೆ ಮೂಲ ಹುಡುಕುತ್ತಾ ಹೋದರೆ ಅದು ದೇಶ ವಿಭಜನೆಗೆ ತಂದು ನಿಲ್ಲಿಸುತ್ತದೆ. ಮುಸ್ಲಿಮರೇ ಹೆಚ್ಚಾಗಿದ್ದ ರಾಜ್ಯವನ್ನು ಆಳುತ್ತಿದ್ದ ಹಿಂದೂ ರಾಜ ಹರಿಸಿಂಗ್‌ ಭಾರತದೊಂದಿಗೆ ವಿಲೀನಗೊಳಿಸುವ ನಿರ್ಧಾರ ಸಹಜವಾಗಿ ಪಾಕಿಸ್ತಾನಕ್ಕೆ ಹೊಟ್ಟೆಯುರಿಗೆ ಕಾರಣವಾಯಿತು ಮತ್ತು ಅಲ್ಲಿಂದಲೇ ಕಾಶ್ಮೀರ ಕಣಿವೆಯಲ್ಲಿ ನೆತ್ತರ ಹರಿಯಲು ಆರಂಭವಾಯಿತು. ಬಳಿಕ, ಉಭಯ ರಾಷ್ಟ್ರಗಳ ನಾಯಕರು ಕೈಗೊಂಡ ಕೆಲವು ನಿರ್ಧಾರಗಳು ಸಮಸ್ಯೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದವು. ಭಾರತದ ಅಂದಿನ ಪ್ರಧಾನಿ ಜವಾಹರ ಲಾಲ್‌ ನೆಹರು ಅವರು ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ಈ ಸಮಸ್ಯೆಯನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಟ್ಟವರು ಅಂದಿನ ರಕ್ಷ ಣಾ ಸಚಿವ ವಿ. ಕೆ. ಕೃಷ್ಣ ಮೆನನ್‌ಅವರು. 1950ರಲ್ಲಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ 8 ಗಂಟೆಗಳ ಕಾಲ ಮಾತನಾಡಿ ಕಾಶ್ಮೀರ ಮೇಲಿನ ಹಕ್ಕು ಪ್ರತಿಪಾದಿಸಿದರು. ಕೊನೆಯದಾಗಿ, ಕಾಶ್ಮೀರ ವಿಷಯವನ್ನು ಮತ್ತೆ ಮತ್ತೆ ಕೆದಕುವುದೆಂದರೆ ಸತ್ತ ಕತ್ತೆಯ ಬಾಲ ಹಿಡಿದು ಎಳೆದಂತೆ'' ಎಂದು ಹೇಳಿದ್ದರು. ಆನಂತರದ ರಾಜತಾಂತ್ರಿಕ ಮಾತುಕತೆಗಳು, ಯುದ್ಧಗಳು ಸಮಸ್ಯೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದವು. ಯುದ್ಧದಲ್ಲಿ ಗೆಲ್ಲಲಾಗದು ಎಂಬ ಕಟು ವಾಸ್ತವ ಅರಿವಾಗುತ್ತಿದ್ದಂತೆ ಪಾಕಿಸ್ತಾನ, ಭಯೋತ್ಪಾದನೆ ಮೂಲಕ ಗೆಲ್ಲುವ ಹೂಟಕ್ಕಿಳಿಯಿತು; ಶಾಂತಿಮಾತುಕತೆಗಳು ಹಳ್ಳ ಹಿಡಿದವು. ಸೇನೆಯ ಕೈಗೊಂಬೆಯಂತೆ ವರ್ತಿಸುವ ಪಾಕಿಸ್ತಾನದ ಯಾವುದೇ ಸರಕಾರವು ಈವರೆಗೂ ನಿರ್ದಿಷ್ಟವಾಗಿ ಪರಿಹಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಭಾರತವು, ಭಯೋತ್ಪಾದನೆ ಕೃತ್ಯ ಮತ್ತು ಅಪ್ರಚೋದಿತ ಕಾಳಗವನ್ನು ಗಡಿಯಲ್ಲಿ ನಿರಂತರ ಎದುರಿಸುತ್ತಲೇ ಬಂದಿದೆ. 

ನೆತ್ತರ ಹರಿಸಿದ ಯುದ್ಧಗಳು

ಇಡೀ ಕಾಶ್ಮೀರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂಬ ಪಾಕಿಸ್ತಾನದ ದುರಾಸೆಯಿಂದಾಗಿ ಈವರೆಗೆ ನಾಲ್ಕು ಯುದ್ಧಗಳು ಉಭಯ ರಾಷ್ಟ್ರಗಳ ನಡುವೆ ನಡೆದಿವೆ. ಈ ಪೈಕಿ ಮೂರು ಯುದ್ಧಗಳು ನೇರವಾಗಿ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ್ದರೆ, ಒಂದು ಯುದ್ಧವು ಪೂರ್ವ ಪಾಕಿಸ್ತಾನ ವಿಮೋಚನೆಗೆ ಸಂಬಂಧಿಸಿದ್ದಾಗಿದೆ. ವಿಶೇಷ ಎಂದರೆ, ಈ ನಾಲ್ಕೂ ಯುದ್ಧಗಳಲ್ಲಿ ಭಾರತ ಮೇಲುಗೈಯ ಸಾಧಿಸಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಪಾಕಿಸ್ತಾನ ಮಾತ್ರ ಜಯ ದೊರಕಿದ್ದು ತನಗೇ ಎಂದುಹೇಳಿಕೊಳ್ಳುತ್ತದೆ. 

1947 ಯುದ್ಧ: ಇದನ್ನು ಮೊದಲನೆಯ ಕಾಶ್ಮೀರ ಯುದ್ಧ ಎಂದು ಕರೆಯಲಾಗುತ್ತದೆ. 1947 ಅಕ್ಟೋಬರ್‌ನಲ್ಲಿ ಆರಂಭವಾದ ಯುದ್ಧ ಏಪ್ರಿಲ್‌ 1948ರವರೆಗೆ ನಡೆಯಿತು. ಅಂತಿಮವಾಗಿ ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಕ್‌ ಭಾರತದ ವಶವಾದರೆ, ಪಾಕಿಸ್ತಾನಕ್ಕೆ ಅಜಾದ್‌ ಕಾಶ್ಮೀರ ಮತ್ತು ಗಿಲ್ಗಿಟ್‌-ಬಾಲ್ಟಿಸ್ತಾನ ದಕ್ಕಿದವು. ಜತೆಗೆ ಲೈನ್‌ ಆಫ್‌ ಕಂಟ್ರೋಲ್‌ ಗುರುತಿಲಾಯಿತು. 

1965ರ ಯುದ್ಧ: ಪಾಕಿಸ್ತಾನದ ಆಪರೇಷನ್‌ ಗ್ರಿಬ್ರಾಲ್ಟರ್‌ನೊಂದಿಗೆ ಯುದ್ಧ ಕೂಡ ಆರಂಭವಾಯಿತು. ಮೊದಲಿಗೆ ಪಾಕಿಸ್ತಾನದ ಸೇನೆಯ ಕಾಶ್ಮೀರದೊಳಗೆ ನುಸುಳಿತು. ಇದಕ್ಕೆ ಪ್ರತಿಯಾಗಿ ಭಾರತವು ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸಿತು. 17 ದಿನಗಳ ಕಾಲ ನಡೆದ ಯುದ್ಧದಲ್ಲಿ ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿತು. ಅಂತಿಮವಾಗಿ ಪಾಕ್‌ ಅಧ್ಯಕ್ಷ ಅಯೋಬ್‌ ಖಾನ್‌ ಮತ್ತು ಅಂದಿನ ಪ್ರಧಾನಿ ಲಾಲ ಬಹದ್ದೂರ್‌ ಶಾಸ್ತ್ರಿ ತಾಷ್ಕೆಂಟ್‌ನಲ್ಲಿ ತಾಷ್ಕೆಂಟ್‌ ಒಪ್ಪಂದಕ್ಕೆ ಸಹಿ ಹಾಕಿದರು. 

ಪೂರ್ವ ಪಾಕಿಸ್ತಾನ ವಿಮೋಚನೆಕಾಶ್ಮೀರ ಕಾರಣಕ್ಕಾಗಿ 1971ರ ಯುದ್ಧ ನಡೆಯಲಿಲ್ಲ. ಬದಲಿಗೆ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಈ ಯುದ್ಧವಿದು. ಪಶ್ಚಿಮ ಪಾಕಿಸ್ತಾನದ ದುರಾಡಳಿತಕ್ಕೆ ಬೇಸತ್ತ ಪೂರ್ವ ಪಾಕಿಸ್ತಾನದ ನಾಯಕರು ಬಂಡಾಯವೆದ್ದರು. ಪೂರ್ವ ಪಾಕಿಸ್ತಾನದ ನೆರವಿಗೆ ಧಾವಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು, ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಡಿಸುವ ಮೂಲಕ ಭಾರಿ ಹೊಡೆತವನ್ನು ನೀಡಿದರು. ಅಪಾರ ಪ್ರಮಾಣದ ಸಾವು ನೋವು ಸಂಭವಿಸಿತು. ಪಾಕಿಸ್ತಾನದ ನೌಕಾ ಪಡೆ ಮತ್ತು ವಾಯು ಪಡೆ ಇನ್ನಿಲ್ಲದಂತೆ ಘಾಸಿಗೊಂಡವು. ಪಾಕಿಸ್ತಾನದ 90 ಸಾವಿರ ಸೈನಿಕರು ಸೆರೆಯಾಳಾದರು. ಅಂತಿಮವಾಗಿ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದಯವಾಯಿತು. ಪಾಕಿಸ್ತಾನ ಇನ್ನಿಲ್ಲದಂತೆ ನಷ್ಟ ಅನುಭವಿಸಿತು. 

ಕಾರ್ಗಿಲ್‌ ಯುದ್ಧ-1999:ಎಲ್‌ಒಸಿ ದಾಟಿ ಒಳ ನುಗ್ಗಿದ ಪಾಕಿಸ್ತಾನದ ಪಡೆಗಳು ಕಾಶ್ಮೀರ ಕಾರ್ಗಿಲ್‌ ಜಿಲ್ಲೆಯ ಕೆಲವು ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತವು ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ಕೈಗೊಂಡಿತು. ಎರಡು ತಿಂಗಳ ಕಾಲ ಈ ಯುದ್ಧ ನಡೆಯಿತು. ಭಾರತೀಯ ಸೇನೆ ತನ್ನೆಲ್ಲ ಪ್ರದೇಶಗಳನ್ನು ಒಂದೊಂದಾಗಿ ಮರಳಿ ವಶಪಡಿಸಿಕೊಂಡಿತು. ಘನಘೋರ ಯುದ್ಧದ ಸುಳಿವು ಅರಿತ ಅಂತಾರಾಷ್ಟ್ರೀಯ ಸಮುದಾಯವು ಯುದ್ಧ ವಿರಾಮಕ್ಕೆ ಒತ್ತಡ ಹೇರಿದವು. ಯುದ್ಧ ಕೊನೆಯಾಯಿತು. ಎರಡು ಕಡೆ ಅಪಾರ ಸಾವು ನೋವು ಸಂಭವಿಸಿತು. 

ಮಾತುಕತೆ, ಒಪ್ಪಂದಗಳು
ಕಾಶ್ಮೀರ ಮೇಲಿನ ಹಕ್ಕು ಸಾಧನೆಗೆ ಪಾಕಿಸ್ತಾನ ಆಗಾಗ ಯುದ್ಧಕ್ಕೆ ಮುಂದಾದರೂ ಭಾರತವು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅನೇಕ ಒಪ್ಪಂದ ಮತ್ತು ಮಾತುಕತೆಗಳನ್ನು ಆ ರಾಷ್ಟ್ರದ ಜತೆ ಕೈಗೊಂಡಿದೆ. ಈ ಪೈಕಿ ಕೆಲವು ಯಶಸ್ವಿಯಾದರೆ, ಬಹುತೇಕ ವಿಫಲವಾಗಿವೆ. 

ಶಿಮ್ಲಾ ಒಪ್ಪಂದ:
1971ರ ಯುದ್ಧದಲ್ಲಿ ಪಾಕಿಸ್ತಾನ ಸೋತ ನಂತರ ಏರ್ಪಟ್ಟ ಒಪ್ಪಂದವಿದು. ಪಾಕ್‌ ಅಧ್ಯಕ್ಷ ಝುಲ್ಫಿಕರ್‌ ಅಲಿ ಭುಟ್ಟೊ ಮತ್ತು ಪ್ರಧಾನಿ ಇಂದಿರಾ ಗಾಂಧಿ ಅವರು ಶಿಮ್ಲಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಅದರ ಅನ್ವಯ ಭಾರತವು ಸೆರೆಯಾಳಾಗಿಸಿಕೊಂಡಿದ್ದ ಎಲ್ಲ ಪಾಕ್‌ ಸೈನಿಕರನ್ನು ಬಿಟ್ಟಕೊಡುವುದು. ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಯನ್ನು ಮಾತುಕತೆಯ ಮೂಲಕ ನಡೆಸಬೇಕೆಂದು ಕರಾರು ಮಾಡಲಾಯಿತು. 

1990ರ ದಶಕ: ಈ ಅವಧಿಯಲ್ಲಿ ಉಭಯ ರಾಷ್ಟ್ರಗಳ ಪ್ರಧಾನಿಗಳು ಎರಡು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದರು. ಹಾಗೆಯೇ ವಿದೇಶಾಂಗ ಕಾರ್ಯದರ್ಶಿಗಳು ಮೂರು ಸುತ್ತಿನ ಮಾತುಕತೆ ನಡೆಸಿದರು. ಕಾಶ್ಮೀರ ಸಮಸ್ಯೆ ಸೇರಿದಂತೆ ಒಟ್ಟು 8 ವಿಷಯಗಳ ಬಗ್ಗೆ ಚರ್ಚಿಸಲಾಯಿತು. 1997ರಲ್ಲಿ ನಡೆದ ಮಾತುಕತೆ ವಿಫಲವಾದರೆ(ಕಾಶ್ಮೀರ ವಿಷಯಕ್ಕಾಗಿ), 1999ರಲ್ಲಿ ಕೈಗೊಳ್ಳಲಾದ ಪ್ರಯತ್ನದಲ್ಲಿ ಉಭಯ ಪ್ರಧಾನಿಗಳು ಲಾಹೋರ್‌ನಲ್ಲಿ ಮಾತುಕತೆ ನಡೆಸಿ ಮೂರು ಒಪ್ಪಂದಕ್ಕೆ ಸಹಿ ಹಾಕಿದದರು. ಆದರೆ, ಪಾಕಿಸ್ತಾನದಲ್ಲಿ ಸೇನಾಡಳಿತ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಎಲ್ಲ ಮಾತುಕತೆಗಳು ವಿಫಲಗೊಂಡವು. 

ಲಾಹೋರ್‌ಗೆ ಬಸ್‌: ಶಾಂತಿಯ ಸಂದೇಶ ಹೊತ್ತು ಅಂದಿನ ಪ್ರಧಾನಿ ವಾಜಪೇಯಿ ಅವರು 1999ರಲ್ಲಿ ಲಾಹೋರ್‌ ಬಸ್‌ ಯಾತ್ರೆಯನ್ನು ಕೈಗೊಂಡರು. ಫೆಬ್ರವರಿ 21ರಂದು ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದವು. ಆದರೆ, ಬಸ್‌ ಯಾತ್ರೆ ಮುಗಿಸಿ ವಾಪಸ್‌ ಬರುವಷ್ಟರಲ್ಲಿ ಪಾಕಿಸ್ತಾನದ ಸೇನಾ ಪಡೆಗಳು ಕಾರ್ಗಿಲ್‌ನೊಳಗೆ ನುಸುಳಿಕೊಂಡಿದ್ದವು. ಇದೇ ಮುಂದೆ ಕಾರ್ಗಿಲ್‌ ಯುದ್ಧಕ್ಕೆ ಕಾರಣವಾಯಿತು. 

ಭಯೋತ್ಪಾದನೆ
ಯುದ್ಧದ ಮೂಲಕ ಭಾರತದ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಾಗತ್ತಿದ್ದಂತೆ ಪಾಕಿಸ್ತಾನದ ಸೇನೆ ಭಯೋತ್ಪಾದನೆಗೆ ನೀರೇರಿಯಿತು. ಇದಕ್ಕೆ ಕಾಶ್ಮೀರ ಪ್ರತ್ಯೇಕವಾದಿಗಳೂ ಇಂಬು ನೀಡಿದರು. ಸ್ಥಳೀಯರ ಭಾರತ ವಿರೋಧಿ ಭಾವನೆಯನ್ನೆ ಬಂಡವಾಳವಾಗಿಸಿಕೊಂಡ ಅಲ್ಲಿನ ಸೇನೆ ಉಗ್ರ ಸಂಘಟನೆಗಳು ಎಲ್ಲ ಸಹಕಾರ, ನೆರವು ಒದಗಿಸಿತು. ಈ ವಿಷಯ ಪ್ರತಿ ಭಯೋತ್ಪಾದನೆ ಸಂದರ್ಭದಲ್ಲಿ ಸಾಬೀತಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬಲಿಯಾದ ಸೈನಿಕರು, ನಾಗರಿಕರ ಪಟ್ಟಿ ದೊಡ್ಡದಿದೆ. ಜೈಷೆ ಇ ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಗೆ 2017ರಿಂದ 2019ವರೆಗಿನ ಫೆಬ್ರವರಿ 14ರ ವರೆಗೆ 110ಕ್ಕೂ ಹೆಚ್ಚು ಯೋಧರು ಬಲಿಯಾದರೆ, ಉಗ್ರರನ್ನೂ ಸೇನೆ ಸದೆ ಬಡೆದಿದೆ. ಇದು ಕೇವಲ ಉದಾಹರಣೆಯಷ್ಟೆ. ಒಂದು ಅಂದಾಜಿನ ಪ್ರಕಾರ, 1947ರಿಂದ ಇಲ್ಲಿಯವರೆಗೆ ಯೋಧರು, ನಾಗರಿಕರು ಸೇರಿ 40 ಸಾವಿರದಿಂದ 80 ಸಾವಿರವರೆಗೂ ಜನ ಸತ್ತಿದ್ದಾರೆ. ಇದಕ್ಕೆಲ್ಲ ಕೊನೆ ಹಾಡಬೇಕಾದ ಕಾಲ ಈಗ ಸನ್ನಿಹಿತವಾಗಿದೆ. 


https://vijaykarnataka.indiatimes.com/state/vk-special/how-heaven-of-earth-kashmir-becoming-the-hell-due-to-pakistan-terrorism/articleshow/68052382.cms