ಸೋಮವಾರ, ಮಾರ್ಚ್ 11, 2019

ನಿಮಗೆ ಕಿಡಲ್ ಗೊತ್ತಾ?, ಮಕ್ಕಳಿಗೋಸ್ಕರವೇ ಇರುವ ಸರ್ಚ್‌ ಎಂಜಿನ್‌

ಗೂಗಲ್‌ ಸರ್ಚ್‌ ಎಂಜಿನ್‌ ಜಗತ್ತಿನ ಎಲ್ಲ ಮಾಹಿತಿಯನ್ನು ಕ್ಷ ಣ ಮಾತ್ರದಲ್ಲಿ ನಿಮ್ಮ ಮುಂದೆ ಹರವಿ ಇಡುತ್ತದೆ. ಅದರಲ್ಲಿ ಬೇಕಾದದ್ದು, ಬೇಡವಾದದ್ದೂ ಎಲ್ಲವೂ ಇರುತ್ತದೆ. ನಮ್ಮ ಆದ್ಯತೆಗನುಗುಣವಾಗಿ ನಾವೇ ಹೆಕ್ಕಿಕೊಳ್ಳಬೇಕಷ್ಟೆ. ಆದರೆ, ಮಕ್ಕಳ ವಿಷಯಕ್ಕೆ ಬಂದಾಗ ನಾವು ಬಹಳಷ್ಟು ಹುಷಾರ್‌ ಆಗಿರಬೇಕಾಗುತ್ತದೆ. ಎಲ್ಲವನ್ನೂ ಮುಚ್ಚು ಮರೆಯಿಲ್ಲದೇ ನೀಡುವ ಗೂಗಲ್‌ ಸರ್ಚ್‌ ಎಂಜಿನ್‌ ಬಳಕೆಯನ್ನು ನಿಧಾನಗೊಳಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೋಸ್ಕರವೇ 'ಕಿಡಲ್‌ ಸರ್ಚ್‌ ಎಂಜಿನ್‌' ಇದೆ. ಅದನ್ನು ಬಳಸಲು ಮಕ್ಕಳಿಗೆ ಪ್ರೇರೇಪಿಸಬೇಕು. 


- ಮಲ್ಲಿಕಾರ್ಜುನ ತಿಪ್ಪಾರ 
ಈ ಇಂಟರ್ನೆಟ್‌ ಯುಗದಲ್ಲಿ ಎಲ್ಲವೂ ಮುಕ್ತ ಮುಕ್ತ. ಯಾವುದೇ ಮುಚ್ಚು ಮರೆಯಿಲ್ಲ. ನಮಗೆ ಬೇಕಾದ್ದು, ಬೇಡವಾದದ್ದು ಎಲ್ಲ ಮಾಹಿತಿಯೂ ನಮ್ಮ ಕಣ್ಣೆದುರಿಗೆ ಬಂದು ಬೀಳುತ್ತಿದೆ. ಕೈ ಬೆರಳಲ್ಲಿ ತುದಿಯಲ್ಲೇ ನಲಿದಾಡುತ್ತಿರುತ್ತದೆ. ಆದರೆ, ಹೀಗೆ ಯಾವುದೇ ಸೆನ್ಸಾರ್‌ ಇಲ್ಲದೇ ಬೇಕಾಬಿಟ್ಟಿಯಾಗಿ ದೊರೆಯುವ ಮಾಹಿತಿ ನಮ್ಮ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದು ಯೋಚಿಸಿದರೆ ಆತಂಕವಾಗುತ್ತದೆ. ಹಾಗಾಗಿಯೇ, ಮಕ್ಕಳಿಗೋಸ್ಕರವೇ ಗೂಗಲ್‌ ಕಂಪನಿಯು ಕಿಡಲ್‌ ಸರ್ಚ್‌ ಎಂಜಿನ್‌ ಆರಂಭಿಸಿದೆ. ಆದರೆ, ಬಹಳಷ್ಟು ಜನರಿಗೆ ಈ ಬಗ್ಗೆ ಜ್ಞಾನವಿಲ್ಲ. ಸಾಮಾನ್ಯವಾಗಿ ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಯಾವುದೇ ಮಿತಿ ಇಲ್ಲ. ಅಲ್ಲಿ ದೊರೆಯುವ ಕಂಟೆಂಟ್‌ ಅನೇಕ ಬಾರಿ ಮಕ್ಕಳಿಗೆ ಬೇಡವಾದದ್ದೇ ಇರುತ್ತದೆ. ಅಂಥದ್ದೆಲ್ಲ ಅವರ ಕಣ್ಣಿಗೆ ಬಿದ್ದರೆ, ಇಲ್ಲವೇ ಅದರ ಗೀಳಿಗೆ ಮಕ್ಕಳು ಅಂಟಿಕೊಂಡು ಬಿಟ್ಟರೆ ಅದರಿಂದಾಗುವ ದುಷ್ಪರಿಣಾಮವನ್ನು ಊಹಿಸುವುದು ಕಷ್ಟ. ಮಕ್ಕಳ ಬೆಳವಣಿಗೆ ಮೇಲೆ ನಕಾರತ್ಮಕ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು. ಶಿಕ್ಷ ಣ ವ್ಯವಸ್ಥೆಯು ಹೆಚ್ಚೆಚ್ಚು ತಂತ್ರಜ್ಞಾನಸ್ನೇಹಿಯಾಗುತ್ತ ಮುಂದುವರಿಯುತ್ತಿರುವುದರಿಂದ ಮಕ್ಕಳ ಹಂತದಲ್ಲೇ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಇಂಟರ್ನೆಟ್‌ ಬಳಕೆ ಅನಿವಾರ್ಯವಾಗಿದೆ. ಶಾಲಾ ಕಾಲೇಜು ಮಕ್ಕಳು ಪ್ರಾಜೆಕ್ಟ್ಗಳನ್ನು ಮಾಡಬೇಕಾಗುತ್ತದೆ. ಅವರು ತಮ್ಮ ಪ್ರಾಜೆಕ್ಟ್ಗಳನ್ನು ಪೂರೈಸಲು ಮತ್ತೆ ಮೊರೆ ಹೋಗುವುದು ಈ ಗೂಗಲ್ಲನ್ನೇ. ಹಾಗಾಗಿ, ಮಕ್ಕಳ ಸೇಫ್‌ ಸರ್ಚ್‌ ಎಂಜಿನ್‌ ಆಗಿ ಕಿಡಲ್‌ ಅನ್ನು ರೂಪಿಸಲಾಗಿದೆ. 

2014ರಲ್ಲಿ ಆರಂಭ 

ಮಕ್ಕಳಿಗೋಸ್ಕರವೇ ಮೀಸಲಾಗಿರುವ ಈ ಡೊಮೈನ್‌ ಅನ್ನು 2014ರಲ್ಲಿ ನೋಂದಣಿ ಮಾಡಲಾಯಿತು. ಕಿಡಲ್‌ ಸರ್ಚ್‌ ಎಂಜಿನ್‌, ಗೂಗಲ್‌ ಕಸ್ಟಮ್‌ ಸರ್ಚ್‌ ಎಂಜಿನ್‌ ವಿಂಡೋ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ತಮಗೆ ಬೇಕಿದ್ದ ಮಾಹಿತಿ ಬಗ್ಗೆ ಕೀ ವರ್ಡ್‌ ಹಾಕಿದಾಗ, ಸರ್ಚ್‌ ರಿಸಲ್ಟ್‌ಗಳನ್ನು ತೋರಿಸುತ್ತದೆ. ಮೊದಲ ಮೂರು ರಿಸಲ್ಟ್‌ಗಳು ಸುರಕ್ಷಿತವಾಗಿದ್ದು ಮತ್ತು ಮಕ್ಕಳಿಗೋಸ್ಕರವೇ ಇರುವ ಮಾಹಿತಿಯಾಗಿರುತ್ತದೆ. ಕಿಡಲ್‌ ಎಡಿಟರ್‌ಗಳಿಂದ ದೃಢೀಕರಣಗೊಂಡಿರುತ್ತದೆÜ. ಮುಂದಿನ ನಾಲ್ಕು ಪೇಜ್‌ಗಳ ಬಗ್ಗೆ ಮಕ್ಕಳಿಗೋಸ್ಕರವೇ ಎಂಬ ಕಡ್ಡಾಯವಿರುವುದಿಲ್ಲ ಬದಲು ಮಕ್ಕಳ ಸ್ನೇಹಿಯಾಗಿರುತ್ತವೆ. 8 ಮತ್ತು ಅದರಿಂದಾಚೆಯ ಎಲ್ಲ ರಿಸಲ್ಟ್‌ಗಳು ವಯಸ್ಕರಿಗೆ ಅರ್ಥವಾಗುವಂಥವುಗಳಾಗಿರುತ್ತವೆ. ಮಕ್ಕಳು ಇವುಗಳನ್ನು ಅರಿತು ಮಾಡಿಕೊಳ್ಳುವುದು ಕಷ್ಟ. ಹೀಗೆ ಕಾಣಿಸಿಕೊಳ್ಳುವ ಎಲ್ಲ ರಿಸಲ್ಟ್‌ಗಳು ಗೂಗಲ್‌ನ ಸೇಫ್‌ಸರ್ಚ್‌ ಮೂಲಕ ಜರಡಿಗೊಳಗಾಗಿರುತ್ತವೆ. ಒಂದೊಮ್ಮೆ ಬಳಕೆದಾರರು ಕೆಟ್ಟ ಪದಗಳನ್ನು ಸರ್ಚ್‌ ಮಾಡಿದರೂ ಅದರ ರಿಸಲ್ಟ್‌ ದೊರೆಯುವುದಿಲ್ಲ. ಮತ್ತೊಮ್ಮೆ ಪ್ರಯತ್ನಿಸಿ ಎಂಬ ಸಂದೇಶ ಡಿಸ್‌ಪ್ಲೇ ಆಗುತ್ತದೆ. 

ಕೆಪಿಡಿಯಾ 

ಸರ್ಚ್‌ ಎಂಜಿನ್‌ ಒದಗಿಸುವ ಆನ್‌ಲೈನ್‌ ವಿಶ್ವಕೋಶವನ್ನು ಕಿಡಲ್‌ ವಿಶ್ವಕೋಶ(ಕೆಪಿಡಿಯಾ) ಎಂದು ಕರೆಯಲಾಗುತ್ತದೆ. ಅದರಲ್ಲಿ 700,000ಕ್ಕೂ ಹೆಚ್ಚು ಆರ್ಟಿಕಲ್‌ಗಳಿವೆ. ಮಕ್ಕಳಿಗಾಗಿಯೇ ಮರುಸೃಷ್ಟಿಸಲಾದ ವಿಕಿಪಿಡಿಯಾ ಲೇಖನಗಳನ್ನು ಇದು ಒಳಗೊಂಡಿರುತ್ತದೆ. 

ಕೆಪಿಡಿಯಾ

ಗೇ, ಲೆಸ್ಬಿಯನ್‌, ಸೆಕ್ಸ್‌ ಎಜುಕೇಷನ್‌ನಂಥ ಶಬ್ದಗಳನ್ನು ನಿಷೇಧಿಸಿದ್ದರಿಂದ 2016ರಲ್ಲಿ ಕಿಡಲ್‌ ಭಾರೀ ಟಿಕೆಯನ್ನು ಎದುರಿಸಬೇಕಾಯಿತು. ಜತೆಗೆ ಟ್ರಾನ್ಸ್‌ಜೆಂಡರ್‌, ಬೈಸೆಕ್ಸುವಲ್‌ ಪದಗಳನ್ನು ಬ್ಲಾಕ್‌ ಮಾಡಲಾಗಿತ್ತು. ಆದರೆ, ವಿರೋಧ ಹೆಚ್ಚಾಗುತ್ತಿದ್ದಂತೆ ಈ ಪದಗಳನ್ನು ಅನ್‌ಬ್ಲಾಕ್‌ ಮಾಡುವುದಾಗಿ ಕಿಡಲ್‌ ಪ್ರಕಟಣೆ ನೀಡಿತು. 

ಸುರಕ್ಷಿತ ಸರ್ಚ್‌ 

ಕಿಡಲ್‌ನಲ್ಲಿ ಕಾಣಿಸಿಕೊಳ್ಳುವ ಸರ್ಚ್‌ ರಿಸಲ್ಟ್‌ಗಳು ಫ್ಯಾಮಿಲಿ ಫ್ರೆಂಡ್ಲಿಯಾಗಿರುತ್ತವೆ. ಸೈಟ್‌ಗಳಿಗೆ ಜರಡಿ ಹಿಡಿದು ಮಕ್ಕಳಿಗೆ ಯೋಗ್ಯವಾದ ಸೈಟ್‌ಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. 

ಬೃಹತ್‌ ಥಂಬ್‌ನೇಲ್ಸ್‌ 

ಕಿಡಲ್‌ನ ಬಹುತೇಕ ಸರ್ಚ್‌ ರಿಸಲ್ಟ್‌ಗಳು ಬೃಹತ್‌ ಥಂಬ್‌ನೇಲ್ಸ್‌ಗಳನ್ನು ಹೊಂದಿರುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ರಿಸಲ್ಟ್‌ಗಳನ್ನು ಸುಲಭವಾಗಿ ಶೋಧಿಸಲು ಮತ್ತು ಅವುಗಳ ನಡುವಿನ ವ್ಯತ್ಯಾಸವನ್ನು ಅರಿಯಲು ಮಕ್ಕಳಿಗೆ ಸಾಧ್ಯವಾಗುತ್ತದೆ. ಜತೆಗೆ ಅಗತ್ಯವಿರುವ ಹೆಚ್ಚು ಸೂಕ್ತವಾದ ರಿಸಲ್ಟ್‌ಗಳ ಮೇಲೆ ಕ್ಲಿಕ್‌ ಮಾಡಲು ಅನುವು ಮಾಡಿಕೊಡುತ್ತದೆ. ಥಂಬ್‌ನೇಲ್ಸ್‌ಗಳು ಚಿತ್ರಿಕೆ ಸುಳಿವುಗಳಾಗಿ ಕಾರ್ಯನಿರ್ವಹಿಸುವುದರಿಂದ ಮಕ್ಕಳಿಗೆ ಬೇಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಯಾಕೆಂದರೆ, ದೊಡ್ಡವರಂತೆ ಮಕ್ಕಳಿಗೆ ವೇಗವಾಗಿ ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. 

- ಮಕ್ಕಳಿಗೆ ಓದಲು ಸುಲಭವಾಗುವ ದೃಷ್ಟಿಯಿಂದ ಬೃಹತ್‌ ಏರಿಯಲ್‌ ಫಾಂಟ್‌ಗಳನ್ನು ಕಿಡಲ್‌ ಬಳಸುತ್ತದೆ. ಹಾಗಾಗಿ, ರಿಸಲ್ಟ್‌ಗಳಲ್ಲಿ ಇರುವ ಕಂಟೆಂಟ್‌ ಬೇಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 

 ಖಾಸಗಿತನ 
ಕಿಡಲ್‌ ಯಾವುದೇ ರೀತಿಯಲ್ಲಿ ಬಳಕೆದಾರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಪ್ರತಿ 24 ಗಂಟೆಗೊಮ್ಮೆ ಲಾಗ್‌ಗಳನ್ನು ಡಿಲಿಟ್‌ ಮಾಡಲಾಗುತ್ತದೆ. 



ಕಿಡಲ್ ಸರ್ಚ್ ಎಂಜಿನ್ ವೆಬ್ ವಿಳಾಸ- ಕ್ಲಿಕ್ ಮಾಡಿ.
 ​https://www.kiddle.co

ಈ ಲೇಖನವು ವಿಜಯ ಕರ್ನಾಟಕದ 11-2-19ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಇಲ್ಲೂ ಕ್ಲಿಕ್ ಮಾಡಿ

ಕಾಮೆಂಟ್‌ಗಳಿಲ್ಲ: