ಮಂಗಳವಾರ, ಮಾರ್ಚ್ 12, 2019

13 ದಿನ ಬಳಿಕ 13 ತಿಂಗ್ಳು ಪ್ರಧಾನಿಯಾದ್ರು ವಾಜಪೇಯಿ

ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅತಂತ್ರ ಪಾರ್ಲಿಮೆಂಟ್‌ಗೆ ಕಾರಣವಾಗಿದ್ದರಿಂದಲೇ ಮತ್ತೊಂದು ಚುನಾವಣೆಯನ್ನು ದೇಶ ಎದುರಿಸಬೇಕಾಯಿತು. ಆದರೆ, ಈ ಚುನಾವಣೆಯಲ್ಲೂ ಯಾವುದೇ ಪಕ್ಷ ಅಥವಾ ಕೂಟಕ್ಕೆ ಬಹುಮತ ಬರಲಿಲ್ಲ. ಹಾಗಾಗಿ ರಾಜಕೀಯ ಅಸ್ಥಿರತೆ ಮುಂದುವರಿಯಿತು. ಅಲ್ಲದೆ ಕೇವಲ ಎರಡು ವರ್ಷದಲ್ಲೇ ಮತ್ತೊಂದು ಚುನಾವಣೆ ಎದುರಿಸಬೇಕಾಯಿತು. 12ನೇ ಲೋಕಸಭೆಗೆ 1998ರಲ್ಲಿ ನಡೆದ ಚುನಾವಣೆಯಲ್ಲಿ ಶೇ.25.8ರಷ್ಟು ಮತಗಳೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷ ವಾಗಿ ಉದಯವಾಯಿತು; ಒಟ್ಟು 141 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಬಿಜೆಪಿ ನೇತೃತ್ವದ ಎನ್‌ಡಿಎ ಒಟ್ಟು 545 ಸೀಟುಗಳ ಪೈಕಿ 256 ಸೀಟುಗಳನ್ನು ಪಡೆಯಿತು. ಅದೇ ರೀತಿ, ಕಾಂಗ್ರೆಸ್‌ ನೇತೃತ್ವದ ಯುಪಿಎ ಶೇ.30.8ರಷ್ಟು ಮತ ಪಡೆದು ಒಟ್ಟು 164 ಸೀಟುಗಳನ್ನು ಪಡೆಯಿತು. ಕಾಂಗ್ರೆಸ್‌ ಸ್ವತಂತ್ರವಾಗಿ 140 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತು. ತೃತೀಯ ರಂಗ ಕೇವಲ 74 ಕ್ಷೇತ್ರಗಳಿಗೆ ತೃಪ್ತಿ ಪಡಬೇಕಾಯಿತು. ಅತಿ ದೊಡ್ಡ ಪಕ್ಷ ವಾಗಿದ್ದ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ದೊರೆಯಿತು. ಅಟಲ್‌ ಬಿಹಾರಿ ವಾಜಪೇಯಿ ಅವರು ಎರಡನೇ ಬಾರಿಗೆ ಪ್ರಧಾನಿಯಾದರು. ಆದರೆ, ರಾಜಕೀಯ ಸ್ಥಿರತೆ ಮಾತ್ರ ಕಂಡು ಬರಲಿಲ್ಲ. ಅಂತಿಮವಾಗಿ 13 ತಿಂಗಳು ಬಳಿಕ ವಾಜಪೇಯಿ ಸರಕಾರ ಪತನವಾಯಿತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ವಿಶ್ವಾಸಮತ ಸಾಬೀತುವೇಳೆ ಎನ್‌ಡಿಎಗೆ ಬೆಂಬಲ ನೀಡಿಲಲ್ಲ. ಕೇವಲ ಒಂದು ಮತದ ಅಂತರದಲ್ಲಿ ಬಿಜೆಪಿ ಸರಕಾರ ಉರುಳಿತು. ಬಳಿಕ ರಾಷ್ಟ್ರಪತಿಗಳು ಎರಡನೇ ಅತಿದೊಡ್ಡ ಪಕ್ಷ ವಾಗಿದ್ದ ಕಾಂಗ್ರೆಸ್‌ಗೆ ಸರಕಾರ ರಚಿಸಲು ಆಹ್ವಾನ ನೀಡಿದರು. ಆದರೆ, ಕಾಂಗ್ರೆಸ್‌ ಮಾತ್ರ ತನ್ನಿಂದ ಸರಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ, ಅವರು ಸಂಸತ್ತನ್ನು ವಿಸರ್ಜಿಸಿದರು. 1998ರ ಚುನಾವಣೆಯಲ್ಲಿ ಒಟ್ಟು 60,58,80,192 ಮತದಾರರಿದ್ದರು. ಈ ಪೈಕಿ 37,54,41,739 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಅಂದರೆ ಒಟ್ಟು ಮತದಾನ ಪ್ರಮಾಣ ಶೇ.62ರಷ್ಟಿತ್ತು. ಒಟ್ಟು 178 ರಾಜಕೀಯ ಪಕ್ಷ ಗಳು ಈ ಚುನಾವಣೆಯಲ್ಲಿ ಭಾಗವಹಿಸಿದ್ದವು. 13 ದಿನ ಮತ್ತು 13 ತಿಂಗಳ ಪ್ರಧಾನಿಯಾಗಿದ್ದ ವಾಜಪೇಯಿ ಅವರು ವಿಶಿಷ್ಟ ದಾಖಲೆ ಮಾಡಿದರು.
- ತಿಪ್ಪಾರ

ಈ ಲೇಖನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ಕಾಮೆಂಟ್‌ಗಳಿಲ್ಲ: