ಸೋಮವಾರ, ಮಾರ್ಚ್ 4, 2019

ಮೊದಲ ಚುನಾವಣೆಯಲ್ಲಿ 489 ಸೀಟಿಗೆ 68 ಹಂತದ ಮತದಾನ

ಮೊದಲನೆ ಸಾರ್ವತ್ರಿಕ ಚುನಾವಣೆಹೇಗಿದ್ದಿರಬಹುದು? ಅಂಥದೊಂದು ಕುತೂಹಲ ಸಾಮಾನ್ಯ. 1949 ನವೆಂಬರ್‌ 26ರಿಂದ ಮೊದಲನೆಯ ಚುನಾವಣೆ ನಡೆಯುವವರೆಗೆ ಮಧ್ಯಂತರ ಸಂಸತ್ತು ಅಸ್ತಿತ್ವದಲ್ಲಿತ್ತು. 25 ಅಕ್ಟೋಬರ್‌ 1951ರಿಂದ 21 ಫೆಬ್ರವರಿ 1952ರ ವರೆಗೆ ಒಟ್ಟು 489 ಸೀಟುಗಳಿಗಾಗಿ 68 ಹಂತದಲ್ಲಿ ಚುನಾವಣೆ ನಡೆಯಿತು. ಶೇ.44.99 ಮತಗಳೊಂದಿಗೆ ಕಾಂಗ್ರೆಸ್‌ 364 ಸೀಟುಗಳನ್ನು ಗೆದ್ದಿತು. ಎರಡನೇ ಸ್ಥಾನದಲ್ಲಿದ್ದ ಸಿಪಿಐ ಗೆದ್ದಿದ್ದು ಕೇವಲ 16 ಸೀಟು ಮಾತ್ರ. ರಾಮಮನೋಹರ ಲೋಹಿಯಾ ಮತ್ತು ಜಯಪ್ರಕಾಶ್‌ ನಾರಾಯಣ್‌ ನೇತೃತ್ವದ ಸೋಷಿಯಲಿಸ್ಟ್‌ ಪಾರ್ಟಿ 12 ಸೀಟು ಗೆದ್ದುಕೊಂಡಿತು. ಭಾರೀ ಗೆಲುವು ಕಂಡ ಕಾಂಗ್ರೆಸ್‌ ನೆಹರು ನೇತೃತ್ವದಲ್ಲಿ ಸರಕಾರ ರಚಿಸಿತು ಮತ್ತು 1952ರ ಏಪ್ರಿಲ್‌ 17ರಂದು ಮೊದಲ ಲೋಕಸಭೆ ಅಸ್ತಿತ್ವಕ್ಕೆ ಬಂತು. ಅಂದ ಹಾಗೆ, ನೆಹರು ಅವರು ತಮ್ಮ ಸಂಪುಟದ ಮಾಜಿ ಸಹೋದ್ಯೋಗಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್‌ ಅವರಿಂದ ತೀವ್ರ ಸವಾಲು ಎದುರಿಸಿದ್ದರು. ಆದರೂ ಮುಖರ್ಜಿ ನೇತೃತ್ವದ ಜನಸಂಘ(ಇಂದಿನ ಬಿಜೆಪಿ) ಗೆದ್ದಿದ್ದು 3 ಮತ್ತು ಅಂಬೇಡ್ಕರ್‌ ಅವರ ಆಲ್‌ ಇಂಡಿಯಾ ಷೆಡ್ಯೂಲ್ಡ್‌ ಕ್ಯಾಸ್ಟ್‌ ಫೆಡರೇಷನ್‌ 2 ಸ್ಥಾನ ಗೆದ್ದುಕೊಳ್ಳಲು ಮಾತ್ರ ಸಾಧ್ಯವಾಯಿತು. ಆಗ ಮೈಸೂರು ರಾಜ್ಯವಾಗಿದ್ದ ಕರ್ನಾಟಕದಿಂದ ಕಾಂಗ್ರೆಸ್‌ ಗೆದ್ದಿದ್ದು 10 ಸ್ಥಾನ ಮಾತ್ರ. ಅತಿ ಹೆಚ್ಚು ಸ್ಥಾನಗಳನ್ನು ಉತ್ತರಪ್ರದೇಶ(81)ದಿಂದ ಗೆದ್ದುಕೊಂಡಿತ್ತು. ದ್ವಿಸದಸ್ಯ ಕ್ಷೇತ್ರಗಳು ಅಸ್ತಿತ್ವದಲ್ಲಿ ಇದ್ದುದರಿಂದ ಸಹಜವಾಗಿಯೇ ಮತದಾನ ಪ್ರಮಾಣ ಹೆಚ್ಚಿತು. ಮೊದಲ ಚುನಾವಣೆಯಿಂದ ಆರಂಭವಾದ ಕಾಂಗ್ರೆಸ್‌ನ ಜೈತ್ರಯಾತ್ರೆ 1977ವರೆಗೂ ಮುಂದುವರಿಯಿತು. 1947ರಲ್ಲಿ ಸ್ವಾತಂತ್ರ್ಯ ಪಡೆದ ಭಾರತಕ್ಕೆ ಸಾರ್ವತ್ರಿಕ ಚುನಾವಣೆಯು ಹಬ್ಬದ ರೀತಿಯಲ್ಲಿ ಇತ್ತು. 21 ವರ್ಷ ಮೇಲ್ಪಟ್ಟ ಎಲ್ಲರೂ ಮತ ಚಲಾಯಿಸಲು ಅವಕಾಶವಿದ್ದರಿಂದಲೇ ದೇಶದ ಬಹುತೇಕ ಜನರು ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಯಿತು. ಅಲ್ಲಿಂದ ಶುರುವಾದ ದೇಶದ ಚುನಾವಣಾ ರಾಜಕೀಯ ಈಗ 17ನೇ ಲೋಕಸಭೆವರೆಗೂ ಬಂದು ನಿಂತಿದೆ.

ಈ ಆರ್ಟಿಕಲ್ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಕ್ಲಿಕ್ ಮಾಡಿ
https://vijaykarnataka.indiatimes.com/elections/lok-sabha/news/flashback-of-first-general-election-in-india/articleshow/68203413.cms

ಕಾಮೆಂಟ್‌ಗಳಿಲ್ಲ: