ಸೋಮವಾರ, ಸೆಪ್ಟೆಂಬರ್ 11, 2017

ಹುಡುಗನೊಬ್ಬನ ಗಜಲ್‌ಗಳು: ಆ ಕಾಗದಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು

- ಪ್ರದ್ಯುಮ್ನ
ಮಳೆಗಾಲದ ಈ ದಿನಗಳೇ ಹಾಗೆ. ಒಂಚೂರು ನೆನಪುಗಳನ್ನು ಹಸಿ ಹಸಿಯಾಗಿಟ್ಟು, ಮತ್ತೊಂದಿಷ್ಟನ್ನು ಶಾಶ್ವತವಾಗಿ ಶವಾಗಾರಕ್ಕೆ ತಳ್ಳುವ ಸಾಧನ. ಇಂದು ವ್ಯಾಪಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟ ದಿನ ಮಳೆ ಮಾಯ; ಮಾರನೇ ದಿನ ಭೋರ್ಗರೆಯುವ ವರ್ಷಧಾರೆ. ನಮ್ಮ್ಮಳಗಿನ ನೆನಪುಗಳು ಹಾಗೆಯೇ. ಅವು ಜೀವಗೊಳ್ಳಲು ಯಾವುದೇ ಸೂಚನೆಗಳಿಲ್ಲ; ಯಾವುದೋ ಒಂದು ಸಣ್ಣ ನೆಪ ಸಾಕು ಭಗ್ಗನೇ ಪ್ರಜ್ವಲಿಸಲು. ಅಂದು ಹಾಗೆಯೇ ಆಗಿತ್ತು. ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಬೆಳಗ್ಗೆ ಸಂಭವಿಸಬೇಕಾಗಿದ್ದ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯಲಿಲ್ಲ. ಅರ್ಥಾತ್ ಹಾಲು ಹಾಕುವವನು ಸರಿಯಾದ ಟೈಮ್‌ಗೆ ಬರಲಿಲ್ಲ. ಪೇಪರ್ ಹುಡುಗ ತೊಯ್ದ ತೊಪ್ಪೆಯಾದ ನಾಲ್ಕು ಪೇಪರ್‌ಗಳನ್ನು ರಸ್ತೆಯ ಆ ಬದಿಯಿಂದಲೇ ಇತ್ತ ಎಸೆದು ಪರಾರಿ... ಹೀಗೆ ಎಲ್ಲ ಕೆಲಸಗಳು!
ನೀರಿನಲ್ಲಿ ಅದ್ದಿ ತೆಗೆದಂತಿದ್ದ ಪತ್ರಿಕೆಯ ಒಂದೊಂದು ಪುಟವನ್ನು ಎಚ್ಚರಿಕೆಯಿಂದ ಬಿಡಿಸುತ್ತಿರುವಾಗಲೇ ಮೂಲೆಯೊಂದರಲ್ಲಿ ಪುಟ್ಟ ಸುದ್ದಿ ಕಣ್ಣಿಗೆ ಬಿತ್ತು; ಆತ್ಮಹತ್ಯೆ. ಇಂಥ ಸುದ್ದಿಯನ್ನು ನಾನೇನೂ ಮೊದಲ ಬಾರಿ ಓದುತ್ತಿರಲಿಲ್ಲ. ಆತ್ಮಹತ್ಯೆಗಳ ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ, ಈ ಸುದ್ದಿ ಮಾತ್ರ ನನ್ನೊಳಗೇ ಮಾಸದೆ, ಕದಲದೇ ಕುಳಿತ್ತಿದ್ದ ಆ ದುರಂತದ ಅನೇಕ ನೆನಪುಗಳನ್ನು ಬಡೆದೆಬ್ಬಿಸಿತು. ನಾನು ಪ್ರತಿಕ್ಷಣ ಮರೆಯಲು ಕಷ್ಟಪಡುವ ಯಾತನಾಮಯ ನೆನಪುಗಳವು.
****
ಅವಳಾದರೂ ಎಂಥವಳು? ಅವಳನ್ನೊಮ್ಮೆ ನೋಡಿದ ಬಳಿಕ ಮತ್ತೊಮ್ಮೆ ತಿರುಗಿ ನೋಡಲೇಬೇಕೆನ್ನುವ ರೂಪವತಿ. ಆಕೆಗೆ ತನ್ನ ರೂಪ, ಲಾವಣ್ಯದ ಬಗ್ಗೆ ತುಸು ಗರ್ವವೂ ಇತ್ತು. ಇಟ್ಸ್ ನ್ಯಾಚುರಲ್. ಆದರೆ, ಅವಳಲ್ಲಿದ್ದ ಧೈರ್ಯ ಮಾತ್ರ ಅದಮ್ಯ, ಅಚಲ, ಬಂಡೆಯಂಥದ್ದು. ಆ ಗುಣವೇ ನನ್ನನ್ನು ಆಕರ್ಷಿಸಿದ್ದು. ಕಾಲೇಜ್‌ಗೆ ಬರುವಾಗ ಬೀದಿ ಕಾಮಣ್ಣರು ತಿರುಗಿ ಬಿದ್ದಿದ್ದು ಆ ಪುಟ್ಟ ಪಟ್ಟಣದ ಪೂರ್ತಿ ದೊಡ್ಡ ಸುದ್ದಿಯಾಗಿತ್ತು. ಹಾಗಿತ್ತು ಅವಳ ಧೈರ್ಯ. ಕಾಲೇಜಿನಲ್ಲಿ ಅವಳನ್ನು ಕಂಡು ಬಹುತೇಕರೆಲ್ಲರೂ ಮಾರು ದೂರವೇ ಇರುತ್ತಿದ್ದರು. ನಾನೋ ಅವಳನ್ನು ನನಗರಿವಿಲ್ಲದಂತೆ ಹುಚ್ಚನಂತೆ ಪ್ರೀತಿಸುತ್ತಿದ್ದೆ. ಆದರೆ, ಹೇಳುವುದು ಹೇಗೆ? ಅದಕ್ಕೆ ಎಲ್ಲಿಂದ ತರಬೇಕು ಧೈರ್ಯ? ಆದರೆ, ಎಂಥ ಗಟ್ಟಿ ಹುಡುಗಿಯಾದರೂ ಅವಳೊಳಗೆ ಒಬ್ಬ ಮುಗ್ಧೆ ಇರುತ್ತಾಳೆ, ಕರುಣಾಮಯಿ ಇರುತ್ತಾಳೆ. ಯಾಕೆಂದರೆ, ಹೆಣ್ಣೆಂದರೆ ಹಾಗೆ ಅಲ್ಲವೇ? ಅವಳು ಸಹನೆಯ ಪ್ರತಿರೂಪ, ವಾತ್ಸಲ್ಯದ ಗಣಿ. ಪ್ರೀತಿ ತೋರಿದರೆ ತಿರುಗಿ ಅದೇ ಸಿಗುತ್ತದೆ ಎನ್ನುತ್ತಾರಲ್ಲ ಹಾಗೆ ಅವಳಿದ್ದಳು. ಅವಳು ಅಂದರೆ ಅವಳೇ. ಅವಳ ಹಾಗೆ ಮತ್ತಾರು ಇರಲಿಲ್ಲ. ಹಾಗಾಗಿ ಕಾಲೇಜ್‌ನಲ್ಲಿ ಅವಳಿಗೆ ಸ್ಟಾರ್‌ಗಿರಿ ತನ್ನಿಂದತಾನೇ ಒಲಿದು ಬಂದಿತ್ತು. ಆಕೆಯ ಕುಟುಂಬವೂ ಆ ಪಟ್ಟಣದಲ್ಲಿ
ಸ್ಥಿತಿವಂತವಾಗಿತ್ತು; ರೆಪ್ಯೂಟೆಡ್ ಫ್ಯಾಮಿಲಿ. ಆದರೆ, ನಾನು? ನನ್ನಲ್ಲೇ ನನಗೇ ಅನೇಕ ಪ್ರಶ್ನೆಗಳಿದ್ದವು; ಉತ್ತರ ದೊರೆಯುವುದು
ಯಾವ ಸಾಧ್ಯತೆಗಳಿರಲಿಲ್ಲ. ಕಾಲೇಜ್‌ಗೆ ಬರುವುದೇ ದೊಡ್ಡ ಸಾಹಸವಾಗಿರುವಾಗ ಇನ್ನು ಪ್ರೀತಿ, ಪ್ರೇಮಕ್ಕೆ ಎಲ್ಲಿಂದ ಬರಬೇಕು
ಧೈರ್ಯ? ಆದರೂ, ಈ ಹುಚ್ಚುಖೋಡಿ ಮನಸ್ಸು ಕೇಳಬೇಕಲ್ಲ. ಅದು ತನ್ನ ಹುಚ್ಚು ಜಗತ್ತಿನಲ್ಲೇ ಲಂಗು ಲಗಾಮಿಲ್ಲದೇ ಓಡುವ ಕುದುರೆ. ನನ್ನ ಕಲ್ಪನೆಯ ಲೋಕದಲ್ಲಿ ಈ ಕುದುರೆ ಕಟ್ಟಿ ಹಾಕುವ ಧೀಮಂತಿಕೆ ಆಕೆಗೂ ಇರಲಿಲ್ಲ. ಇರಲಾದರೂ ಹೇಗೆ ಸಾಧ್ಯ?
ಆದರೆ, ಅದೊಂದು ದಿನ, ಅಲ್ಲಲ್ಲ ಸುದಿನ ಅದು. ಭೂಮಿ-ಆಕಾಶ ಎಂದಾದರೂ ಒಂದಾದೀತೆ ಎಂದು ಭಾವಿಸಿದ್ದವನ ಭಾಗ್ಯದ ಬಾಗಿಲು ತೆರೆದ ದಿನ. ಅಂದು ಹಾಗೆ ಆಗಿತ್ತು. ಬೆಳಗಿನ ಜಾವದಿಂದಲೇ ಸುರಿಯುತ್ತಿದ್ದ ಮಳೆಗೆ ಕರುಣೆಯೇ ಇರಲಿಲ್ಲ. ಆಕಾಶ ತನ್ನೆಲ್ಲ ಸಿಟ್ಟು, ದುಃಖವನ್ನು ಈ ಕಣ್ಣೀರ ಮೂಲಕ ಹಾಕುತ್ತಿದೆ ಎನ್ನುವಂತಿತ್ತು. ಅದು ಎಂಥ ಮಳೆ, ಭೋರ್ಗರೆಯುವ ಜಲಪಾತದಡಿ ಶಬ್ದ ಕೇಳಿಸುತ್ತದಲ್ಲವೇ, ಹಾಗಿತ್ತು ಮಳೆಯು ಭೂಮಿಗೆ ಅಪ್ಪಳಿಸುವಾಗ ಹೊರಡುವ ಸೌಂಡು. ಅಂದರೆ ನೀವೇ ಊಹಿಸಿ. ಬಹುಶಃ ಅಷ್ಟೊಂದು ಮಳೆಯನ್ನು ಈ ಪಟ್ಟಣ ಹಿಂದೆಂದೂ ಕಂಡಿರಲಿಲ್ಲ. ಮಳೆ ತುಸುವೇ ಬಿಡುವು ಕೊಟ್ಟಿದ್ದ  ಸಮಯದಲ್ಲಿ  ನಾನು ನನ್ನ ತಡಕ್ಲಾಸ್ ಸೈಕಲ್ ಏರಿ ಕಾಲೇಜ್‌ನತ್ತ ಮುಖ ಮಾಡಿದ್ದೆ. ಇನ್ನೇನೂ ಕಾಲೇಜ್ ಅರ್ಧ ಕಿಲೋ ಮೀಟರ್ ಇರಬೇಕು. ಅವಳು ತನ್ನ ಸ್ಕೂಟಿ ತಳ್ಳುತ್ತಾ  ಏದುಸಿರು  ಬಿಡುತ್ತಾ ಹೊರಟಿದ್ದಳು. ನಾನು ಅವಳನ್ನೊಮ್ಮೆ ನೋಡಿ ಮುಗಳ್ನಕ್ಕೆ. ಅವಳ ಕಣ್ಣಿನಲ್ಲಿ ನೆರವಿನ ಬೇಡಿಕೆ; ಅದನ್ನರಿತೇ ಅವಳತ್ತ ಧಾವಿಸಿದೆ. ಇಲ್ಲದಿದ್ದರೆ ಆಕೆಯತ್ತ ಹೋಗುವ ಧೈರ್ಯ ಯಾವ ಹುಡುಗನಿಗಿತ್ತು ಹೇಳಿ? ಅವಳಿಗೆ ಗೊತ್ತಿತ್ತು ಕಾಲೇಜ್ ಬಿಡುವಿನ ವೇಳೆ ನಾನು ಮೋಟಾರ್ ಸೈಕಲ್ ರಿಪೇರಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದದ್ದು. ಆಕೆಯ ಸ್ಕೂಟಿ ಪಕ್ಕಕ್ಕೆ ಹಚ್ಚಿ ಒಂದಿಷ್ಟು ಆ ಕಡೆ, ಈ ಕಡೆ ನೋಡಿದೆ, ಪ್ಲಗ್ ಕ್ಲೀನ್ ಮಾಡಿ ಹಾಕಿದ್ದೇ ತಡ ಸ್ಕೂಟಿ ತನ್ನ ಎಂದಿನ ಲಯಕ್ಕೆ ಮರಳಿತ್ತು. ಅವಳ ಮುಖದಲ್ಲಿ ಖುಷಿಯ ಹೊನಲಿತ್ತು. ಸಣ್ಣಗೆ ಹನಿಯುತ್ತಿದ್ದ ಮಳೆಗೆ ಆಕೆಯ ಮುಖ ತುಂಬ ಮಳೆ ಹನಿಗಳ ಮುತ್ತಗಳಿದ್ದವು!
ನಾನು ಇನ್ನೇನು ಸೈಕಲ್ ಏರಬೇಕನ್ನುವಷ್ಟರಲ್ಲಿ. ‘‘ನಂಗೆ ಗೊತ್ತು. ನೀನು ನನ್ನ ಇಷ್ಟಪಡಿತ್ತಿದ್ದೀಯಾ,’’ ಎಂದವಳೇ ಸ್ಕೂಟಿಯ ಕಿವಿ ಹಿಂಡಿತ್ತಾ, ಮುಗುಳು ನಗೆ ಬೀರಿ ಹೊರಟೇ ಹೋದಳು. ಇತ್ತ ಮಳೆ ಕರುಣೆ ಇಲ್ಲದಂತೆ ಭೋರ್ಗರೆಯಲಾರಂಭಿಸಿತು ಮತ್ತೆ. ಅಲ್ಲಿಗೆ ಎಲ್ಲ ಖಾತ್ರಿಯಾಗಿತ್ತು. ಅವಳ್ಯಾಕೆ ನನ್ನನ್ನು ಇಷ್ಟಪಡುತ್ತಿದ್ದಳು ಎನ್ನುವುದು ಇಂದಿಗೂ ನನಗೆ ಗೊತ್ತಿಲ್ಲ. ಅಂದಿನ ಆ ನಮ್ಮ ಭೇಟಿ ಮುಂದೆ ದಿನವೂ ನಮ್ಮಿಬ್ಬರ ಸ್ನೇಹ ಮತ್ತೊಂದು ಹಂತಕ್ಕೆ ತಲುಪಿ, ಪ್ರೀತಿಯ ಹಡಗಿನಲ್ಲಿ ಪಯಣಿಸಲು ದಾರಿ ಮಾಡಿಕೊಟ್ಟಿತ್ತು. ಅವಳ ಜತೆ ಕಳೆದ ಅಷ್ಟೂ ಕ್ಷಣಗಳು ನನ್ನ ಪಾಲಿನ ಅಮೂಲ್ಯ ರತ್ನಗಳು. ಅವುಗಳಿಗೆ ಬೆಲೆಯೇ ಕಟ್ಟಲಾಗದು.
ನಮ್ಮ ಎಂದಿನ ಭೇಟಿಗಳಲ್ಲಿ ಗೊತ್ತಾಗಿದ್ದು ಏನಂದರೆ; ಅವಳು ತನ್ನ ತಾಯಿಯನ್ನು ಬೆಟ್ಟದಷ್ಟು ಪ್ರೀತಿಸುತ್ತಿದ್ದಳು. ಇನ್‌ಫ್ಯಾಕ್ಟ್, ನನ್ನನ್ನು ಪ್ರೀತಿಸುವುದುಕ್ಕಿಂತಲೂ ಹೆಚ್ಚು. ತಾಯಿಯೇ ಆಕೆಗೆ ಸ್ನೇಹಿತೆ, ಗುರು... ಎಲ್ಲವೂ ಆಗಿದ್ದಳು. ಅಷ್ಟೊಂದು ಗಟ್ಟಿಗತ್ತಿಯಾಗಲು ತಾಯಿಯೇ ಕಾರಣ ಎನ್ನುತ್ತಿದ್ದವಳು, ಆಕೆಯನ್ನು ಯಾವಾಗ ಬೇಕಾದರೂ ನಾನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇನೆ ಎಂದು ಕಣ್ಣೀರು ಹಾಕುತ್ತಿದ್ದಳು. ಅವಳು ಇಲ್ಲದಿದ್ದರೆ ತನಗೇ ಬದುಕೇ ಇಲ್ಲ. ನೀನು ನನ್ನ ತಾಯಿಯೇ ಆಗಬೇಕು ಎನ್ನುತ್ತಿದ್ದುದ್ದನ್ನು ನೋಡಿದರೆ, ಇವಳೇನಾ ಕಾಲೇಜಿನಲ್ಲಿ ನಾನು ನೋಡಿದ ಗಟ್ಟಿಗತ್ತಿ ಎಂಬ ಅನುಮಾನ ಬರುತ್ತಿತ್ತು. ಆಂತರ್ಯದಲ್ಲಿ ಅಷ್ಟೊಂದು ಮೃದುವಾಗಿದ್ದಳು.
ಆಕೆ, ಯಾವ ಕ್ಷಣ ತನ್ನ ಜೀವನದಲ್ಲಿ ಬರಬಾರದು ಎಂದು ಹಗಲಿರುವ ಪ್ರಾರ್ಥಿಸುತ್ತಿದ್ದಳು ಆ ಕ್ಷಣ ಬಂದು ಬಿಟ್ಟಿತು. ಇತಿಹಾಸದ ಮೇಷ್ಟ್ರು ತಮ್ಮ ಎಂದಿನ ಕಥನ ಶೈಲಿಯಲ್ಲಿ ಪಾಠ ಮಾಡುತ್ತಿರುವಾಗಲೇ ಅಟೆಂಡರ್ ಬಂದು ಆಕೆಯನ್ನು ಹೊರ ಕರೆದು ತಾಯಿ ಸತ್ತ ಸುದ್ದಿ ಮುಟ್ಟಿಸಿದ್ದ. ಆಕೆಯ ಕಣ್ಣೀರು ಕಂಡೆ ನನಗೆಲ್ಲವೂ ಅರ್ಥವಾಗಿತ್ತು. ಆಕೆಯ ಹಿಂದೆ ನಾನು ಎದ್ದು ಹೊರಟೆ. ಅವಳ ಮುಖ ನೋಡುವ ಧೈರ್ಯ ನನ್ನಲ್ಲಿರಲಿಲ್ಲ. ಕಣ್ಣೀರು ಸುರಿಯುತ್ತಲೇ ಇತ್ತು. ಅಯ್ಯೋ ದೇವರೇ... ಆಕೆಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡೆಂದು ಕೇಳಿಕೊಳ್ಳುವುದನ್ನು ಬಿಟ್ಟರೆ ಆಕೆಯನ್ನು ಸಂತೈಸುವ ದಾರಿ ನನ್ನ ಬಳಿ ಇರಲಿಲ್ಲ.
ಎಲ್ಲವು ಮುಗಿದು ಮತ್ತೆ ಕಾಲೇಜ್‌ಗೆ ಬಂದಾಗ ಆಕೆ ಮೊದಲಿನಂತಿರಲಿಲ್ಲ. ಆಕೆಯ ಕಣ್ಣಲ್ಲಿ ಹೊಳಪು ಮಾಸಿತ್ತು; ಧಾಡಸಿತನದ ಕುರುಹುಗಳು ಮಾಯವಾಗಿದ್ದವು. ರೂಪವತಿಯಾದ ಮುಖವೀಗ ಕಳಾಹೀನವಾಗಿತ್ತು. ತಾಯಿ ಅಗಲಿಕೆ ಆಕೆಯನ್ನು ಹೈರಾಣಾಗಿಸಿತ್ತು. ನನ್ನ ಮಾತುಗಳಿಂದ ಒಂದಿಷ್ಟು ಆಹ್ಲಾದ ತಂದುಕೊಂಡುವಳಂತೆ ಕಾಣುತ್ತಿದ್ದಳಾದರೂ ಮತ್ತೆ ಅದೇ ದುಃಖದ ಮಡುವಿನಲ್ಲೇ ಇರುತ್ತಿದ್ದಳು. ಈಕೆಯನ್ನು ಮೊದಲಿನ ಗಟ್ಟಿಗತ್ತಿ ಹುಡುಗಿಯನ್ನಾಗಿ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ ಒಂದಿಷ್ಟು ದಿನಗಳು ಉರುಳಿದವು.
ಅದೊಂದು ದಿನ. ನಾನು ಕನಸು ಮನಸ್ಸಿನಲ್ಲಿ ಎಣಿಸಿರದ ಸುದ್ದಿಯೊಂದು ಅಪ್ಪಳಿಸಿತು. ಆಕೆಯ ಆತ್ಮಹತ್ಯೆಯ ಸುದ್ದಿ ಕೇಳಿದಾಕ್ಷಣ ನಾನು ನಿಂತ ನೆಲ ಕಂಪಿಸಿದಂತಾಯಿತು. ಏನಾಯಿತು ಎನ್ನುವಷ್ಟರಲ್ಲಿ ನಾನು ಪ್ರಜ್ಞೆಯ ಪರಿಧಿ ದಾಟಿ ಹೋಗಿದ್ದೆ; ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಪಕ್ಕದಲ್ಲಿದ್ದ ಸ್ನೇಹಿತ ನನಗೆ ಪ್ರಜ್ಞೆ ಬಂದಿದ್ದು ನೋಡಿ ಖುಷಿಯಾಗಿದ್ದ. ‘‘ಮೂರು ದಿನ ಆಯ್ತು ಕಣೋ ಆಸ್ಪತ್ರೆಯಲ್ಲಿದ್ದೀಯಾ,’’ ಎಂದ. ನಾನು, ‘‘ಅವಳು....’’ ಎನ್ನುವಷ್ಟರಲ್ಲಿ ತನ್ನ ಜೇಬಿನಲ್ಲಿದ್ದ ಮಡಚಿದ ಕಾಗದವನ್ನು ಕೊಟ್ಟ. ಅದರಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು.
****
ಅಂಥ ಧೈರ್ಯವಂತೆ, ಎಂಥ ಸನ್ನಿವೇಶವನ್ನು ಎದುರಿಸುವಂಥ ಛಾತಿ ಇದ್ದ ಹುಡುಗಿ ಆಂತರ್ಯದಲ್ಲಿ ಇಷ್ಟೊಂದು ದುರ್ಬಲಳಾಗಿದ್ದಳೇ? ಈ ಪ್ರಶ್ನೆಗೆ ಅಂದಿನಿಂದ ಇಂದಿಗೂ
ಉತ್ತರ ಹುಡುಕುತ್ತಲೇ ಇದ್ದೇನೆ. ಯಾಕೆಂದರೆ, ಆಕೆಯನ್ನು ನೋಡಿದ ಯಾರೇ ಅವಳು ಹೀಗೆ ಮಾಡಬಹುದು ಎಂದು ಊಹಿಸಲು ಸಾಧ್ಯವಿರಲಿಲ್ಲ; ಹಾಗಿದ್ದಳು ನನ್ನ ಹುಡುಗಿ. ಹೀಗೆ ದುರಂತದ ನೆನಪುಗಳು ಮಳೆಯಲ್ಲಿ ಮತ್ತೆ ಜೀವ ಪಡೆಯುತ್ತಿರುವಾಗಲೇ ಆಕೆ ಕೊಟ್ಟ ಹೋದ ಕಾಗದವನ್ನು ಮತ್ತೊಮ್ಮೆ ಬಿಚ್ಚಿ ನೋಡಿದೆ. ಅವಳ ನಗುವಿನ ಮುಖ ಮಿಂಚಿ ಮರೆಯಾಯ್ತು. ಹೊರಗಡೆ ಮತ್ತೆ ಮಳೆ ಭೋರ್ಗರೆಯಾರಂಭಿಸಿತು. ನನಗೆ ಗೊತ್ತಿಲ್ಲದಂತೆ ಕಣ್ಣ ಹನಿಯೊಂದು ಆ ಕಾಗದ ಮೇಲೆ ಬಿದ್ದು ಇಂಗಿ ಹೋಯಿತು.

(ಈ ಲೇಖನ ವಿಜಯ ಕರ್ನಾಟಕದ ಸೆಪ್ಟೆಂಬರ್ 11, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)