ಸೋಮವಾರ, ಜೂನ್ 14, 2021

Sunil Chhetri overtakes Lionel Messi - ಕಾಲ್ಚೆಂಡು ಮಾಂತ್ರಿಕ ಸುನಿಲ್‌ ಛೆತ್ರಿ

ರಾಷ್ಟ್ರೀಯ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ , ಅಂತಾರಾಷ್ಟ್ರೀಯ ಸಕ್ರಿಯ ಫುಟ್ಬಾಲಿಗರ ಪೈಕಿ ಅತಿ ಹೆಚ್ಚು ‘ಗೋಲ್‌’ ಬಾರಿಸಿದವರ ಪಟ್ಟಿಯಲ್ಲಿಮೆಸ್ಸಿಯನ್ನೇ ಮೀರಿಸಿದ್ದಾರೆ!


ಮಲ್ಲಿಕಾರ್ಜುನ ತಿಪ್ಪಾರ
ಆರಾಧಿಸುವ ವ್ಯಕ್ತಿಯ ಸಾಧನೆಯನ್ನು ನೀವೇ ಹಿಂದಿಕ್ಕಿ ಮುನ್ನಡೆದರೆ ಆಗ ಆಗುವ ಆನಂದವನ್ನು ಅಭಿವ್ಯಕ್ತಿಸಲಾದೀತೆ? ಏನಿದ್ದರೂ ಆ ಅನುಭವವನ್ನು ಅನುಭವಿಸಬೇಕಷ್ಟೇ. ಇಂಥದ್ದೇ ಮನಸ್ಥಿತಿಯಲ್ಲಿದ್ದಾರೆ ಭಾರತೀಯ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಛೆತ್ರಿ. 

‘ಜಗತ್ತಿನ ಸಾರ್ವಕಾಲಿಕ  ಶ್ರೇಷ್ಠ ಫುಟ್ಬಾಲಿಗ’ ಎಂದು ಗುರುತಿಸಿಕೊಳ್ಳುತ್ತಿ­ರುವ ಅರ್ಜೆಂಟೀನಾದ ಆಟಗಾರ ಲಿಯೋನೆಲ್‌ ಮೆಸ್ಸಿ ಸಾಧನೆಯನ್ನು ನಮ್ಮ ಸುನಿಲ್‌ ಹಿಂದಿಕ್ಕಿದ್ದಾರೆ. ಸಕ್ರಿಯ ಫುಟ್ಬಾಲ್‌ ಆಟಗಾರರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್‌ಗಳನ್ನು ಗಳಿಸಿದವರು ಪಟ್ಟಿಯಲ್ಲಿಪೋರ್ಚುಗಲ್‌ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ(103) ಅಗ್ರ ಸ್ಥಾನದಲ್ಲಿದ್ದರೆ, ಲಿಯೋನೆಲ್‌ ಮೆಸ್ಸಿ 72 ಗೋಲುಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರು. ಈಗ ಭಾರತದ ಸುನಿಲ್‌ ಬಾಂಗ್ಲಾದೇಶದ ವಿರುದ್ಧ ಏಷ್ಯಾ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ2 ಗೋಲು ಬಾರಿಸಿ, ತಮ್ಮ ಗೋಲುಗಳ ಸಂಖ್ಯೆಯನ್ನು 74ಕ್ಕೆ ಹೆಚ್ಚಿಸಿಕೊಂಡು, ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈವರೆಗೆ ಅವರು 117 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

ಅಂತಾರಾಷ್ಟ್ರೀಯ ಗೋಲುಗಳ ಪಟ್ಟಿಯಲ್ಲಿಮೆಸ್ಸಿಯನ್ನು ಅವರು ಹಿಂದೆ ಹಾಕುತ್ತಿದ್ದಂತೆ, ಮೆಸ್ಸಿಗಿಂತ ಯೇ ಶ್ರೇಷ್ಠ ಎಂಬ ವಾದ ಸೋಷಿಯಲ್‌ ಮೀಡಿಯಾಗಳಲ್ಲಿಜೋರಾಗಿತ್ತು. ಇದಕ್ಕೆಲ್ಲಉತ್ತರ ನೀಡಿರುವ ಸುನಿಲ್‌, ‘‘ಮೆಸ್ಸಿಯ ಅಸಂಖ್ಯ ಅಭಿಮಾನಿಗಳಲ್ಲಿನಾನೂ ಒಬ್ಬ. ನನ್ನ ಮತ್ತು ಅವರ(ಮೆಸ್ಸಿ) ಮಧ್ಯೆ ಹೋಲಿಕೆ ಸರಿ­ಯಲ್ಲ,’’ ಎಂದಿದ್ದಾರೆ. ‘‘ಲಿಯೋನೆಲ್‌ ಮೆಸ್ಸಿ­ಯನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ, ಕೈ ಕುಲುಕಿ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳುವೆ,’’ ಎನ್ನುವ ಅವರಿಗೆ ಅದು ಪಕ್ಕಾ ಫ್ಯಾನ್‌ಬಾಯ್‌ ಮೊಮೆಂಟ್‌!

ಕ್ರಿಕೆಟ್‌ನ್ನೇ ಉಸಿರಾಡುವ ಭಾರತದಂಥ ರಾಷ್ಟ್ರದಲ್ಲಿಫುಟ್ಬಾಲ್‌ ಆಟಗಾರರೊಬ್ಬರ ಈ ಸಾಧನೆಗೆ ಹೆಚ್ಚಿನ ಮಹತ್ವವಿದೆ. ಕ್ರಿಕೆಟ್‌ನ ಅಬ್ಬರದಲ್ಲಿಫುಟ್ಬಾಲ್‌ ಸೇರಿದಂತೆ ಇತರ ಆಟಗಳಿಗೆ ಪ್ರಾಧಾನ್ಯ, ಪ್ರಾಯೋಜಕತ್ವ ಸಿಗು­ವುದು ಕಷ್ಟ. ಹಾಗಿದ್ದೂ, ಹಲವು ಗುಂಪು ಆಟಗಾರರು ಮತ್ತು ಅಥ್ಲೀಟ್‌ಗಳು ದೇಶದ ಕೀರ್ತಿಯನ್ನು ಆಗಾಗ ಗಗನಕ್ಕೆ ಏರಿಸುತ್ತಲೇ ಇರುತ್ತಾರೆ. ಅಂಥ ಅಭಿಮಾನದ ಕ್ಷ ಣಕ್ಕೆ ಸುನಿಲ್‌ ಈಗ ಕಾರಣವಾಗಿದ್ದಾರೆ.

ದಂತಕತೆ ಬೈಚುಂಗ್‌ ಭುಟಿಯಾ ಬಳಿಕ ಸುನಿಲ್‌ ಛೆತ್ರಿ ಭಾರತೀಯ ಫುಟ್ಬಾಲ್‌ ನೊಗವನ್ನು ಸಮರ್ಥವಾಗಿ ಎಳೆಯುತ್ತಿದ್ದಾರೆ. ಇಂಡಿಯನ್‌ ಸೂಪರ್‌ ಲೀಗ್‌(ಐಸಿಎಲ್‌)ನಲ್ಲಿಬೆಂಗಳೂರು ಫುಟ್ಬಾಲ್‌ ಕ್ಲಬ್‌(ಬಿಎಫ್‌ಸಿ) ಪರವಾಗಿಯೂ ಆಡುತ್ತಿರುವ  ‘ಕ್ಯಾಪ್ಟನ್‌ ಫೆಂಟಾಸ್ಟಿಕ್‌’ ಸುನೀಲ್‌ ಛೆತ್ರಿ ಹುಟ್ಟಿದ್ದು ಈಗಿನ ತೆಲಂಗಾಣದ ಸಿಕಂದರಾಬಾದ್‌ನಲ್ಲಿ1984ರ ಆಗಸ್ಟ್‌ 3ರಂದು. ತಂದೆ ಕೆ.ಬಿ.ಛೆತ್ರಿ, ತಾಯಿ ಸುಶೀಲಾ. ತಂದೆ ಭಾರತೀಯ ಸೇನೆಯಲ್ಲಿಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಮೆಕಾನಿಕಲ್‌ ಎಂಜಿನಿಯರ್‌ ಅಧಿಕಾರಿ. ಸುನಿಲ್‌ ಅವರು ತಂದೆ ಅವರೂ ಭಾರತೀಯ ಸೇನೆಯ ಪರವಾಗಿ ಫುಟ್ಬಾಲ್‌ ಆಡಿದ್ದಾರೆ. ತಾಯಿ ಸುಶೀಲಾ ಹಾಗೂ ಅವರ ಇಬ್ಬರು ಅವಳಿ ಸಹೋದರಿಯರು ನೇಪಾಳದ ಮಹಿಳಾ ರಾಷ್ಟ್ರೀಯ ಫುಟ್ಬಾಲ್‌ ತಂಡಕ್ಕೆ ಆಡುತ್ತಿದ್ದರು. ತಂದೆ ತಾಯಿ ಇಬ್ಬರೂ ಫುಟ್ಬಾಲ್‌ ಆಟಗಾರರು; ಸುನಿಲ್‌ಗೆ ಫುಟ್ಬಾಲ್‌ ರಕ್ತಗತ.

ತಂದೆ ಸೇನೆಯಲ್ಲಿಅಧಿಕಾರಿಯಾಗಿದ್ದರಿಂದಾಗಿ ಸುನಿಲ್‌ ಶಾಲಾ ಶಿಕ್ಷ ಣ ಒಂದೇ ರಾಜ್ಯಕ್ಕೆ ಸಿಮೀತವಾಗಲಿಲ್ಲ. ಸಿಕ್ಕಿಮ್‌ನ ಗ್ಯಾಂಗ್ಟಕ್‌ನ ಬಹಾಯಿ ಸ್ಕೂಲ್‌, ಪಶ್ಚಿಮ ಬಂಗಾಳದ ಡಾರ್ಜೀಲಿಂಗ್‌ ಬೆತ್ನೀಸ್‌ ಸ್ಕೂಲ್‌, ಕೋಲ್ಕೊತಾದ ಲೊಯೊಲಾ ಸ್ಕೂಲ್‌ ಮತ್ತು ದಿಲ್ಲಿಯ ಆರ್ಮಿ ಪಬ್ಲಿಕ್‌ ಸ್ಕೂಲ್‌ನಲ್ಲಿಶಾಲಾ ಶಿಕ್ಷ ಣವನ್ನು ಪೂರೈಸಿದ್ದಾರೆ. ಕೋಲ್ಕೊತಾದ ಅಶುತೋಷ ಕಾಲೇಜ್‌ನಲ್ಲಿಪ್ರವೇಶ ಪಡೆದು, 12ನೇ ತರಗತಿಯಲ್ಲಿಓದುತ್ತಿದ್ದಾಗಲೇ 2001ರಲ್ಲಿಮಲೇಷ್ಯಾದಲ್ಲಿಆಯೋಜಿಸಲಾಗಿದ್ದ ಏಷ್ಯನ್‌ ಸ್ಕೂಲ್‌ ಚಾಂಪಿಯನ್‌ಶಿಪ್‌ಗೆ ಭಾರತೀಯ ತಂಡಧಿವನ್ನು ಪ್ರತಿನಿಧಿಸುವ ಅವಕಾಶ ಒದಗಿ ಬಂತು. ಕಾಲೇಜು ಶಿಕ್ಷ ಣಧಿಧಿಧಿವನ್ನು ಅರ್ಧಕ್ಕೆ ಮೊಟಕುಧಿಗೊಳಿಸಧಿಬೇಕಾ­ಧಿಯಿತು. ಮುಂದಿನ ನಾಲ್ಕೈದು ವರ್ಷದಲ್ಲಿಅವರು ಭಾರತೀಯ ರಾಷ್ಟ್ರೀಯ ಫುಟ್ಬಾಲ್‌ ತಂಡಕ್ಕೆ ಪ್ರವೇಶ ಪಡೆದರು. ನಂತರ ನಡೆದಿದ್ದೆಲ್ಲಇತಿಹಾಸ.

ಸುನಿಲ್‌ ತಮ್ಮ ಬಹುಕಾಲದ ಗೆಳತಿ ಸೋನಂ ಭಟ್ಟಾಚಾರ್ಯ ಅವರನ್ನು 2017ರಲ್ಲಿಮದುವೆಯಾದರು. ಈ ಸೋನಮ್‌ ಬೇರೆ ಯಾರೂ ಅಲ್ಲ. ರಾಷ್ಟ್ರೀಯ ಫುಟ್ಬಾಲ್‌ ತಂಡದ ಮಾಜಿ ಆಟಗಾರ, ಮೋಹನ್‌ ಬಗಾನ್‌ ತಂಡದ ದಂತಕತೆ ಸುಬ್ರತ ಭಟ್ಟಾಚಾರ್ಯ ಅವರ ಪುತ್ರಿ. ಇವರು ಛೆತ್ರಿ ಮೆಂಟರ್‌ ಕೂಡ. ಸುನಿಲ್‌ ಅವರ ಆಟ ಹಾಗೂ ವ್ಯಕ್ತಿತ್ವದ ಮೇಲೆ ಅವರ ತಾಯಿ ದಟ್ಟ ಪ್ರಭಾವ ಬೀರಿದ್ದಾರೆಂಬುದು ಅವರ ಮಾತುಗಳನ್ನು ಕೇಳಿದರೆ ಅರಿವಾ­ಗುತ್ತದೆ. ‘‘ಆಟದ ಬಗ್ಗೆ ಹೇಳುವುದಾದರೆ ಅದು ನನ್ನ ತಂದೆ, ತಾಯಿಂದಲೇ ಆರಂಭವಾಗುತ್ತದೆ, ವಿಶೇಷವಾಗಿ ನನ್ನ ತಾಯಿ. ತಾಯಿಯೊಂದಿಗೆ ಕೇರಂ, ಚೆಸ್‌, ಚೀನೀಸ್‌ ಚೆಕರ್ಸ್‌ ಮತ್ತು ಇತರ ಹೊರಾಂಗಣ ಕ್ರೀಡೆಗಳನ್ನು ಆಡುವುದು ತೀರಾ ಸಾಮಾನ್ಯವಾಗಿತ್ತು. ನನಗೆ 13 ವರ್ಷವಾಗೋವರೆಗೂ ಈ ಯಾವುದೇ ಆಟದಲ್ಲೂನನ್ನ ತಾಯಿಯನ್ನು ಸೋಲಿಸಲು ನನ್ನಿಂದಾ­ಗಲಿಲ್ಲ. ಅವರೂ ಎಂದು ಸೋಲಲು ಒಪ್ಪುತ್ತಿರಲಿಲ್ಲ. ಸೋಲು ಒಪ್ಪಿಕೊಳ್ಳ­ದಿರುವ ಗುಣ ನನ್ನ ತಾಯಿಯಿಂದಲೇ ಬಂದಿದೆ ನನಗೂ ಬಂದಿದೆ,’’  ಎನ್ನುತ್ತಾರೆ ಅವರು. ಬೈಚುಂಗ್‌ ಭುಟಿಯಾ ಅವರಿಂದಲೂ ಸಾಕಷ್ಟು ಕಲಿತಿದ್ದೇನೆ. ಅವರ ಸರಳ ವ್ಯಕ್ತಿತ್ವ ತುಂಬಾ ಇಷ್ಟ ಎನ್ನುತ್ತಾರೆ ಅವರು.

ರಾಷ್ಟ್ರೀಯ ತಂಡದ ಪರವಾಗಿ ಅತಿ ಹೆಚ್ಚು ಪಂದ್ಯಗಳು ಹಾಗೂ ಗೋಲು ಬಾರಿಸಿರುವ ದಾಖಲೆಯನ್ನು ಹೊಂದಿರುವ ಸುನಿಲ್‌ಅವರು ತಮ್ಮ ವೃತ್ತಿಪರ ಫುಟ್ಬಾಲ್‌ ಆಟವನ್ನು 2002ರಲ್ಲಿಏಷ್ಯಾದ ಹಳೆಯ ಕ್ಲಬ್‌ಗಳಲ್ಲಿಒಂದಾಗಿರುವ ಮೋಹನ್‌ ಬಗಾನ್‌ ಕ್ಲಬ್‌ನೊಂದಿಗೆ ಆರಂಭಿಸಿಧಿದರು. ಬಳಿಕ ಜೆಸಿಟಿ ಕ್ಲಬ್‌ಗೆ ವಲಸೆ ಬಂದು, 48 ಪಂದ್ಯಗಳಲ್ಲಿ21 ಗೋಲು ಬಾರಿಸಿ ಗಮನ ಸೆಳೆದರು. 2010ರಲ್ಲಿಮೇಜರ್‌ ಲೀಗ್‌ ಸಾಕರ್‌ನಲ್ಲಿಕನ್ಸಾಸ್‌ ಸಿಟಿ ವಿಜಾರ್ಡ್ಸ್‌ನೊಂದಿಗೆ ಗುರುಧಿತಿಸಿಧಿಕೊಂಡರು. ಈ ಮೂಲಕ ವಿದೇಶದ ಕ್ಲಬ್‌ ಪರವಾಗಿ ಆಟವಾಡಿದ ಭಾರತೀಯ ಉಪಖಂಡದ ಮೂರನೇ ಆಟಗಾರ ಎನಿಸಿಕೊಂಡರು. ಅಲ್ಲಿಂದ ಹಿಂದಿರುಗಿದ ಬಳಿಕ ಚಿರಾಗ್‌ ಯುನೈಟೆಡ್‌, ಮೋಹನ್‌ ಬಗಾನ್‌ ಪರವಾಗಿ ಐ ಲೀಗ್‌ನಲ್ಲಿಆಡಿದರು. ಮತ್ತೆ ವಿದೇಶಕ್ಕೆ ತೆರಳಿ ಪೋರ್ಚುಗಲ್‌ನ ಸ್ಪೋರ್ಟಿಂಗ್‌ ಕ್ಲಬ್‌ ಸೇರಿದರು. 2005ರಲ್ಲಿಭಾರತೀಯ ರಾಷ್ಟ್ರೀಯ ಫುಟ್ಬಾಲ್‌ ತಂಡವನ್ನು ಸೇರಿ, ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದರು. ಈ ಪಂದ್ಯದಲ್ಲಿಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ಹೊಡೆದರು.

ಸುನಿಲ್‌ ಛೆತ್ರಿ ಅವರ ನೆರವಿನಿಂದಾಗಿ ಭಾರತ ತಂಡವು 2007, 2009 ಮತ್ತು 2012ರಲ್ಲಿನೆಹರು ಕಪ್‌ ಮತ್ತು 2011ರ ಎಸ್‌ಎಎಫ್‌ಎಫ್‌ ಚಾಂಪಿ­ಯನ್‌ಶಿಪ್‌ ಗೆದ್ದುಕೊಂಡಿತು. 2008ರ ಏಷ್ಯನ್‌ ಫುಟ್ಬಾಲ್‌ ಕಾನೆಧಿಡೆರಷನ್‌(ಎಎಫ್‌ಸಿ) ಚಾಲೆಂಜ್‌ ಕಪ್‌ ಗೆಲ್ಲುವಲ್ಲಿಯೂ ಅವರ ಪಾತ್ರ ಮಹತ್ವ­ದ್ದಾಗಿತ್ತು. ಈ ಗೆಲುವಿನಿಂದಾಗಿಯೇ ಭಾರತವು 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯನ್‌ ಕಪ್‌ ಪಂದ್ಯಾವಳಿಯಲ್ಲಿಆಡಲು ಅರ್ಹತೆ ಪಡೆದು­ಕೊಂಡಿತು. 2007, 2011, 2013, 2014, 2017 ಮತ್ತು 2019 ಹೀಗೆ ದಾಖಲೆಯ ಆರು ಬಾರಿ ಎಐಎಫ್‌ಎಫ್‌(ಆಲ್‌ ಇಂಡಿಯಾ ಫುಟ್ಬಾಲ್‌ ಫೆಡರೆಷನ್‌) ವರ್ಷದ ಆಟಗಾರ ಎಂದು ಅವರನ್ನು ಹೆಸರಿಸಲಾಗಿದೆ. 2014ರಲ್ಲಿಇವರ ನೇತೃತ್ವದಲ್ಲಿಬೆಂಗಳೂರು ಫುಟ್ಬಾಲ್‌ ಕ್ಲಬ್‌ ಚೊಚ್ಚಿಲ ಋುತುವಿನಲ್ಲಿಪ್ರಶಸ್ತಿ ಗೆದ್ದುಕೊಂಡಿತು.

ಭಾರತದಲ್ಲಿಕ್ರಿಕೆಟ್‌ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟ ಫುಟ್ಬಾಲ್‌. 36 ವರ್ಷದ ಸುನಿಲ್‌  ಭಾರಧಿತೀಯ ಫುಟ್ಬಾಲ್‌ ತಂಡದ ಧ್ರುವತಾರೆ. ಹೊಸ ಪೀಳಿಗೆಯ ಆಟಗಾರರಿಗೆ ಅವರು ರೋಲ್‌ಮಾಡೆಲ್‌. ಭಾರತದ ಕ್ರೀಡಾಕ್ಷೇತ್ರದ ಪ್ರಮುಖ ಪ್ರಶಸ್ತಿ ಅರ್ಜುನ್‌ ಅವಾರ್ಡ್‌ಧಿ (2011), ದೇಶದ ನಾಲ್ಕನೇ ಅತ್ಯುಚ್ಚ ನಾಗರಿಕ ಪ್ರಶಸ್ತಿ ಪದ್ಮಶ್ರೀ ಮತ್ತು ದಿಲ್ಲಿಫುಟ್ಬಾಲ್‌ ಅಸೋಷಿಯೇಷನ್‌ನ ಫುಟ್ಬಾಲ್‌ ರತ್ನ ಅವಾರ್ಡ್‌  ಸಾಧನೆಯ ಕಿರೀಟಧಿವನ್ನು ಅಲಂಕರಿಸಿವೆ. ಶಾರುಖ್‌ ಖಾನ್‌ ಮತ್ತು ಸಚಿನ್‌ ತೆಂಡೂಲ್ಕರ್‌ ಅವರನ್ನು ಇಷ್ಟಪಡುವ ಅವರಿಗೆ ಸಂಗೀತ ಕೇಳುವುದು ಸಿಕ್ಕಾಪಟ್ಟೆ ಇಷ್ಟ. ಹಾಬಿಯಾಗಿ ಕ್ರಿಕೆಟ್‌, ಬ್ಯಾಡ್ಮಿಂಟ್‌, ಟೆನ್ನಿಸ್‌ ಕೂಡ ಆಡುತ್ತಾರೆ. ಬೆಂಗಳೂರು ಎಫ್‌ಸಿ ಮೂಲಕ  ಅವರು ಕನ್ನಡ ನಾಡಿಗೆ ಇನ್ನಷ್ಟು ಹತ್ತಿರವಾಗಿದ್ದೆರಂಬುದೂ ನಮಗೆ ಹೆಮ್ಮೆಯೇ ಸರಿ.


ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯ 2021ರ ಜೂನ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


ಶನಿವಾರ, ಜೂನ್ 12, 2021

Dr siddalingaiah- 'ಊರು ಕೇರಿ' ಬಿಟ್ಟು ನಡೆದ ಕವಿ ಸಿದ್ದಲಿಂಗಯ್ಯ

 ಕವಿ ಡಾ. ಸಿದ್ದಲಿಂಗಯ್ಯ ನಿಧನದಿಂದಾಗಿ ನಮ್ಮ ನೆಲದ ಹೋರಾಟದ, ಸಾಂಸ್ಕೃತಿಕ ಚಿಂತನೆಯ ದೊಡ್ಡದೊಂದು ಸತ್ವ ನಮ್ಮೊಳಗಿಂದ ಕಳೆದುಹೋದ ಭಾವ. ನಾಡಿನೆಲ್ಲೆಡೆ ದಲಿತ ಪ್ರಜ್ಞೆ ವಿಸ್ತರಿಸಿ, ಸಾಮೂದಾಯಿಕ ಜಾಗೃತಿಯನ್ನು ತಮ್ಮ ಬಂಡಾಯ ಭಾವದ ಕವಿತೆಗಳ ಮೂಲಕವೇ ಇವರು ಅಭಿವ್ಯಕ್ತಿಸಿದ್ದರು. ಇವರ ಬರಹ, ಹೋರಾಟಗಳೆಲ್ಲವೂ ಅನುಕರಣೀಯ, ದಾರಿದೀಪ.


ಡಾ.  ಸಿದ್ದಲಿಂಗಯ್ಯ ಅವರು ದಲಿತ ಸಮುದಾಯದ ಒಳಬೇಗುದಿ, ನೋವು, ಶೋಷಣೆ, ಅಪಮಾನ, ಮಡುಗಟ್ಟಿದ ಆಕ್ರೋಶವನ್ನು ಅಭಿವ್ಯಕ್ತಿಸಲು ಬಳಸಿದ ಪದಗಳು ನಿಗಿ ನಿಗಿ ಕೆಂಡ. ಅವು ಅಷ್ಟೇ ಆಗಿದ್ದರೆ, ವ್ಯಕ್ತಿಗತ ಆಕ್ರೋಶದ ನುಡಿಗಳಾ ಗಿರುತ್ತಿದ್ದವು; ಹಾಗಾಗಲಿಲ್ಲ. ಬಂಡಾಯ, ಪ್ರತಿಭಟನೆಯ ಸತ್ವ ದೊಂದಿಗೆ ಸಾಹಿತ್ಯಿಕ ಗುಣ ಅವರ ಕವಿತೆಗಳಲ್ಲಿದ್ದುದರಿಂದ ಸಾರ್ವತ್ರಿಕ ಎನಿಸಿಕೊಂಡವು. 

ಅವರ ಪ್ರಸಿದ್ಧ ಕವಿತೆ ‘ಇಕ್ರಲಾ ವದೀರ್ಲಾ...’ ಸಾಲುಗಳು ಮೇಲ್ನೋಟಕ್ಕೆ ರೋಷವನ್ನು ಅಭಿವ್ಯಕ್ತಿಸಿದರೂ ಆಳದಲ್ಲಿನೋವಿನ ನುಡಿಗಳೇ ಆಗಿವೆ. ನೋವು ಮತ್ತು ಆಕ್ರೋಶದ ಮೂಲಕವೇ ಅಭಿಧಿಧಿವ್ಯಕ್ತಿಯ ದಾರಿಯನ್ನು ಕಂಡುಕೊಂಡವರು ಅವರು. 

ಬರೆದ ಪ್ರತಿ ಕವಿತೆಯೂ, ಪ್ರತಿ ಪದವೂ ಸ್ವರೂಪದಲ್ಲಿಬಂಡಾಯವನ್ನು ಪ್ರತಿನಿಧಿಸುತ್ತವೆ. ಅವರು ಸಾಹಿತ್ಯ ಕೃಷಿ ಆರಂಭಿಸಿದ ಕಾಲದ ಸಂದರ್ಭವು ಕಾವ್ಯಕ್ಕೆ ಸೂಧಿರ್ತಿಯಾಗಿತ್ತು. ಡಾ. ಸಿದ್ದಲಿಂಗಯ್ಯ ಅವರು ತಮ್ಮ ಕವಿತೆ, ನಾಟಕ, ಪ್ರಬಂಧ, ವಿಮರ್ಶೆ, ಗದ್ಯದ ಮೂಲಕ ದಲಿತರ ಪ್ರಜ್ಞೆಯನ್ನು ವಿಸ್ತರಿಸಿಧಿದರು; ಸಾಮೂದಾಯಿಕ ಜಾಗೃತಿ ಹೆಚ್ಚಿಸಿದರು.  ಈ ಮೂಲಕ ನಾಡಿನ ಬಂಡಾಯ ಮತ್ತು ದಲಿತ ಸಾಹಿತ್ಯಕ್ಕೆ ಹೊಸ ಕಸುವು ತುಂಬಿದರು. ಪ್ರತಿಭಟನಾಸ್ತ್ರವನ್ನಾಗಿ ಸಾಹಿತ್ಯವನ್ನು ಬಳಸಿಕೊಂಡು ಜಾಗೃತಿಯ ದೀವಿಟಿಗೆಯನ್ನು ಮತ್ತೊಂದು ಪೀಳಿಗೆಗೆ ದಾಟಿಸಿದರು. ಕರ್ನಾಟಕದ ಮಟ್ಟಿಗೆ ದಲಿತ ಸಾಹಿತ್ಯದ ಇತಿಹಾಸವನ್ನು ಬರೆದರೆ ಅದು ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯದ ಇತಿಹಾಸವೂ ಆಗುತ್ತದೆ. 

ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದ ಬಡ, ಶೋಷಿತ ಕುಟುಂಬದಲ್ಲಿ1954 ಫೆಬ್ರವರಿ 3ರಂದು ಸಿದ್ದಲಿಂಗಯ್ಯ ಅವರು ಜನಿಸಿದರು. ತಂದೆ ದೇವಯ್ಯ, ತಾಯಿ ವೆಂಕಮ್ಮ. ಹಳ್ಳಿಯಲ್ಲಿಪ್ರಾಥಮಿಕ ಶಾಲೆ ಮುಗಿಸಿ ಬಂದು ಸೇರಿದ್ದು ಬೆಂಗಳೂರಿನ ಮಲ್ಲೇಶ್ವರದ ಸರಕಾರಿ ಹೈಸ್ಕೂಲ್‌ಗೆ. ಹಾಸ್ಟೆಲ್‌ನಲ್ಲಿವಾಸ್ತವ್ಯ. ಬಳಿಕ ಬೆಂಗಳೂರು ವಿವಿಯಿಂದ ಕನ್ನಡದಲ್ಲಿಎಂಎ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿ ಪಡೆದುಕೊಂಡರು. ಕವಿ ಜಿ ಎಸ್‌ ಶಿವರುದ್ರಪ್ಪ ಅವರು ಸಿದ್ದಲಿಂಗಯ್ಯ ಅವರನ್ನು ಸಂಶೋಧಕ ಸಹಾಯಕರನ್ನಾಗಿ ನೇಮಕ ಮಾಡಿಕೊಂಡರು. ಮುಂದೆ ಬೆಂಗಳೂರು ವಿವಿಯ ಕನ್ನಡ ಪ್ರಧ್ಯಾಪಕರಾಗಿ, ಕನ್ನಡ ವಿಭಾಗ ಮುಖ್ಯಸ್ಥರಾದರು. ಡಾ. ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. 

ಸಾಹಿತ್ಯ ಕೃತಿಗಳು: 1975ರಲ್ಲಿಪ್ರಕಟಗೊಂಡ ‘ಹೊಲೆ ಮಾದಿಗರ ಹಾಡು’ ಸಿದ್ದಲಿಂಗಯ್ಯರ ಮೊದಲ ಕವನ ಸಂಕಲನ.  ಆ ಬಳಿಕ ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಆಯ್ದ ಕವನಗಳು, ಅಲ್ಲೆಕುಂತವರೆ ಕವನ ಸಂಕಲನಗಳು ಪ್ರಕಟಗೊಂಡು ಜನಮನ್ನಣೆ ಗಳಿಸಿದವು.  ಏಕಲವ್ಯ(1986), ನೆಲಸಮ(1980), ಪಂಚಮ (1980) ಅವರು ರಚಿಸಿದ ನಾಟಕಗಳು. ಹಕ್ಕಿ ನೋಟ, ರಸಗಳಿಗೆಗಳು, ಎಡಬಲ, ಉರಿಕಂಡಾಯ ಅವರ ವಿಮರ್ಶಾ ಕೃತಿಗಳು. ‘ಊರು ಕೇರಿ’ ಅವರ ಸಿದ್ದಲಿಂಗಯ್ಯ ಆತ್ಮಚರಿತ್ರೆಯಾಗಿದೆ. ಇದು ಸಂಪುಟಗಳಲ್ಲಿಪ್ರಕಟವಾಗಿದೆ. ಅವತಾರಗಳು, ಸದನದಲ್ಲಿಸಿದ್ದಲಿಂಗಯ್ಯ ಭಾಗ -1, ಸದನದಲ್ಲಿಸಿದ್ದಲಿಂಗಯ್ಯ ಭಾಗ -2 ಮತ್ತು ಜನಸಂಸ್ಕೃತಿ ಅವರ ಲೇಖನ ಸಂಗ್ರಹಗಳು.

ಎರಡು ಬಾರಿ ಎಂಎಲ್ಸಿ
ಡಾ. ಸಿದ್ದಲಿಂಗಯ್ಯ ಅವರು 1988ರಿಂದ 1994 ಮತ್ತು  1995ರಿಂದ 2001ರ ತನಕ ಎರಡು ಅವಧಿಗೆ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಈ ಅವಧಿಯಲ್ಲಿನಾಡು ನುಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಸೆಳೆಯುವಲ್ಲಿಯಶಸ್ವಿಯಾಗಿದ್ದರು. ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿಯೂ ಗಮನಾರ್ಹ ಕೆಲಸ ಮಾಡಿದ್ದಾರೆ.

ಇಕ್ರಲಾ ವದಿರ್ಲಾ...!
ಸಿದ್ದಲಿಂಗಯ್ಯ ಅವರ ಕವಿತೆಗಳು ಬಂಡಾಯದ ಕಹಳೆಯೂದಿ ಕ್ರಾಂತಿ ಗೀತೆಗಳು ಎನಿಸಿಧಿಕೊಂಡವು. ಆ ಪೈಕಿ ‘ಇಕ್ರಲಾ ವದೀರ್ಲಾ/ ಈ ನನ್ನ ಮಕ್ಕಳ ಚರ್ಮ ಎಬ್ರಲಾ...’, ‘ನಿನ್ನೆ ದಿನ/ ನನ್ನ ಜನ/ ಬೆಟ್ಟದಂತೆ ಬಂದರು...’, ‘ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ..’,  ‘ಹಸಿವಿನಿಂದ ಸತ್ತೋರು, ಸೈಜುಗಲ್ಲುಹೊತ್ತೋರು/ ವದಿಸಿಕೊಂಡು ವರಗಿದವರು ನನ್ನ ಜನರು...’ ಕವಿತೆಗಳು ಪ್ರಮುಖವಾದವು. ಇಕ್ರಲಾ ವದೀರ್ಲಾ ಕವಿತೆಯಂತೂ ಧ್ವನಿಸುವ ಪ್ರತಿಭಟನೆ, ಬಂಡಾಯ, ಆಕ್ರೋಶದಿಂದಾಗಿ ಹೆಚ್ಚು ಜನಪ್ರಿಯವಾಗಿತ್ತು. ಇಂಥ ಕವಿತೆಗಳನ್ನು ಬರೆದಿದ್ದ ಸಿದ್ದಲಿಂಗಯ್ಯನವರು, ಆ ಬೆಟ್ಟದಲಿ ಸುಳಿದಾಡ ಬೇಡ ಗೆಳತಿ... ಎಂಬ ನವಿರು ಪ್ರೇಮಗೀತೆಯನ್ನು ಬರೆದು ಅಚ್ಚರಿ ಮೂಡಿಸಿದ್ದರು.

ಪ್ರಶಸ್ತಿಗಳು
ಪಂಪ, ನೃಪತುಂಗ, ಆಳ್ವಾಸ್‌ ನುಡಿಸಿರಿ, ನಾಡೋಜ, ಸಂದೇಶ, ಡಾ. ಅಂಬೇಡ್ಕರ್‌, ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಉತ್ತಮ ಚಲನಚಿತ್ರ ಗೀತ ರಚನೆಗಾಗಿ ಕರ್ನಾಟಕ ಸರಕಾರದಿಂದ ಪ್ರಶಸ್ತಿ ಕೂಡ ಬಂದಿದೆ.  ಶ್ರವಣಬೆಳಗೊಳ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದರು.

(2021ರ ಜೂನ್ 12ರ ವಿಜಯ ಕರ್ನಾಟಕ ವರದಿಯಲ್ಲಿ ಪ್ರಕಟವಾದ ವರದಿ)

ಗುರುವಾರ, ಜೂನ್ 3, 2021

George Fernandes- The Statesman: ಜಾರ್ಜ್... ನೀವು ಸದಾ ನೆನಪಿನಲ್ಲಿರುತ್ತೀರಿ

ಕಾರ್ಮಿಕ ಚಳವಳಿಯ ಅಗ್ರಮಾನ್ಯ ನಾಯಕರಾಗಿ, ಸಮಾಜವಾದಿ ಚಿಂತಕರಾಗಿ ಜಾರ್ಜ್ ಫರ್ನಾಂಡಿಸ್ ಅವರು ಏರಿದ ಎತ್ತರ ಅಷ್ಟಿಷ್ಟಲ್ಲ. ರಾಜಕಾರಣಿಗಳಿಗೆ ಅವರು ರೋಲ್ ಮಾಡೆಲ್. ಜೂನ್ 3 ಜಾರ್ಜ್ ಫರ್ನಾಂಡಿಸ್ ಹುಟ್ಟಿದ ದಿನ. ಅವರ ನೆನಪಿನಲ್ಲಿ...

 

- ಮಲ್ಲಿಕಾರ್ಜುನ ತಿಪ್ಪಾರ
ಹೋರಾಟದ ಮೂಲಕವೇ ರಾಜಕೀಯ ಏಳ್ಗೆ ಕಂಡು, ಜನ ಮತ್ತು ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಿದವರು ಜಾರ್ಜ್ ಫರ್ನಾಂಡಿಸ್. ಅವರನ್ನು ಕೇವಲ ರಾಜಕಾರಣಿ ಎಂಬ ಒಂದೇ ಪದದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಸಮತಾವಾದಿ, ಅತ್ಯುತ್ತಮ ವಾಗ್ಮಿ... ಹೀಗೆ ಏನೆಲ್ಲ ವಿಶೇಷಣಗಳನ್ನು ಅವರಿಗೆ ಧಾರಾಳವಾಗಿ ನೀಡಬಹುದು. ಅವರು ಎಂದೂ ತಾವು ನಂಬಿದ ಸಿದ್ಧಾಂತಕ್ಕೆ ತಿಲಾಂಜಲಿ ಇಡಲಿಲ್ಲ. ರಾಜಕೀಯದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು; ಯಾವುದಕ್ಕೂ ರಾಜಿಯಾಗಲಿಲ್ಲ. ಅಧಿಕಾರ ಸುಖ ಅವರನ್ನು ಆಲಸಿಯಾಗಿ ಮಾಡಲಿಲ್ಲ; ಗರ್ವಿಷ್ಠರನ್ನಾಗಿಸಲಿಲ್ಲ. ಅಧಿಕಾರ ಬರುವ ಮುಂಚೆ ಹೇಗಿದ್ದರೋ, ಕುರ್ಚಿಯಲ್ಲಿ ಕುಳಿತಾಗಲೂ ಹಾಗೆಯೇ ಇದ್ದರು. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು.

ಅವರ ಉಡುಗೆ ತೊಡುಗೆ ಸಿಂಪಲ್‌. ಒಂದು ಖಾದಿ ಪ್ಯಾಂಟ್‌; ಇಸ್ತ್ರಿಯಾಗದ ಖಾದಿ ಜುಬ್ಬಾ, ಇಷ್ಟೆ ಅವರ ತೊಡುಗೆ. ಬಿಳಿ ಕೂದಲು ತುಂಬಿದ ತಲೆ, ಮುಖಕ್ಕೊಂದು ಅಗಲವಾದ ಕನ್ನಡಕ ಅವರ ಒಟ್ಟು ವ್ಯಕ್ತಿತ್ವಕ್ಕೆ ಒಂದು ಗಂಭೀರತೆಯನ್ನು ತಂದುಕೊಟ್ಟಿತ್ತು. ಆದರೆ, ಅವರ ಜೀವನ ಮಾತ್ರ ಸರಳವಾಗಿರಲಿಲ್ಲ. ಮೂಲತಃ ಕರ್ನಾಟಕದವರಾದರೂ ಇಡೀ ಭಾರತವೇ ಅವರ ಹೋರಾಟದ ಅಂಗಣವಾಗಿತ್ತು. ಅವರು ಕಾಲಿಟ್ಟ ಕಡೆ ಹೋರಾಟದ ಹೆಜ್ಜೆಗಳು ಮೂಡುತ್ತಿದ್ದವು. ಮಂಗಳೂರು, ಬೆಂಗಳೂರು, ಮುಂಬಯಿ, ಬಿಹಾರ, ದಿಲ್ಲಿ... ಹೀಗೆ ಅವರ ಕಾರ್ಯಕ್ಷೇತ್ರ ಹರಡಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಯಾವಾಗಲೂ ಚಿಂತನೆಗಳಿರುತ್ತಿದ್ದವು. ಕಾರ್ಮಿಕರ ಶ್ರೇಯೋಭಿವೃದ್ಧಿಯೇ ಮೂಲಮಂತ್ರವಾಗಿತ್ತು. ಅವರ ಹಿತರಕ್ಷ ಣೆಗೆ ಎಂಥ ಹೋರಾಟಕ್ಕೂ ಅಣಿಯಾಗುತ್ತಿದ್ದರು. ಒಮ್ಮೆ ಅವರ ಮುಷ್ಕರ ಕರೆಗೆ ಇಡೀ ದೇಶವೇ ಸ್ತಬ್ಧವಾಗಿತ್ತು; ಅಂಥ ಧೀಃಶಕ್ತಿ ಅವರಲ್ಲಿತ್ತು. ಆದರೆ, ಅವರ ಕೊನೆಯ ದಿನಗಳು ಮಾತ್ರ ಯಾತನಾಮಯವಾಗಿದ್ದವು ಎಂಬುದು ಅವರನ್ನು ಇಷ್ಟಪಡೋರಿಗೆ ಅರಗಿಸಿಕೊಳ್ಳಲಾಗದ ಸಂಗತಿ.

ಕನ್ನಡದ ಕುವರ
ಜಾರ್ಜ್‌ ಫರ್ನಾಂಡಿಸ್‌ ಕನ್ನಡದವರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಕರಾವಳಿಯ ಮಂಗಳೂರಿನವರು.
1930 ಜೂನ್‌ 3ರಂದು ಮಂಗಳೂರಿನ ಕ್ಯಾಥೋಲಿಕ್‌ ಕುಟುಂಬದಲ್ಲಿ ಜನಿಸಿದರು. ತಂದೆ ಜೋಸೆಫ್‌ ಫರ್ನಾಂಡಿಸ್‌, ತಾಯಿ ಅಲಿಶಾ ಮಾರ್ಥಾ ಫರ್ನಾಂಡಿಸ್‌. ಇವರಿಗೆ ಆರು ಮಕ್ಕಳು. ಜಾರ್ಜ್‌ ಹಿರಿಯರು. ಕುಟುಂಬದಲ್ಲಿ ಜಾರ್ಜ್‌ ಅವರನ್ನು ಪ್ರೀತಿಯಿಂದ ಎಲ್ಲರೂ ಜರ್ರಿ ಎಂದು ಕರೆಯುತ್ತಿದ್ದರು. ಜೋಸೆಫ್‌ ಅವರದ್ದು ಕ್ರಿಶ್ಚಿಯನ್‌ ಸಂಪ್ರದಾಯಸ್ಥ ಕುಟುಂಬ. ಹಾಗಾಗಿ, ಹಿರಿಯ ಮಗ ಪಾದ್ರಿಯಾಗಲಿ ಎಂದು ಅವರನ್ನು ಪಾದ್ರಿ ತರಬೇತಿಗೆ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಆದರೆ ಜಾರ್ಜ್‌ ಪಾದ್ರಿಯಾಗಲಿಲ್ಲ. ಬೆಂಗಳೂರು ಬಿಟ್ಟು ಸೀದಾ ಮುಂಬೈ(ಅಂದಿನ ಬಾಂಬೆ)ಗೆ ತೆರಳಿದರು. ಆಗ ಅವರಿಗೆ ಕೇವಲ 19 ವರ್ಷ. ಮುಂಬೈನ ಬೀದಿಗಳಲ್ಲಿ ಅಲೆಯುತ್ತಿದ್ದ ಜಾರ್ಜ್‌ಗೆ ಪರಿಚಯದವರು ಯಾರೂ ಇರಲಿಲ್ಲ. ಎಷ್ಟೋ ಸಾರಿ ಅವರು ಸಮುದ್ರ ತೀರ ಮತ್ತು ರಸ್ತೆಗಳಲ್ಲಿ ಮಲಗುತ್ತಿದ್ದರು. ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಸಿಗುವವರೆಗೂ ಕೈಗೆ ಸಿಕ್ಕ ಕೆಲಸಗಳನ್ನು ಮಾಡಿದರು. ಮುಂಬೈಯಲ್ಲಿ ಅವರದ್ದು ಅಕ್ಷರಶಃ ಕಷ್ಟದ ಜೀವನವೇ ಆಗಿತ್ತು.

ಜಾರ್ಜ್ ಫರ್ನಾಂಡಿಸ್ (ಚಿತ್ರ ಕೃಪೆ-ಇಂಟರ್ನೆಟ್)
ಲೋಹಿಯಾ ಮತ್ತು ಡಿಮೆಲ್ಲೊ ಸಂಪರ್ಕ
ಮುಂಬೈ ಜೀವನದಲ್ಲಿ ಹೋರಾಟ ಬದುಕು ನಡೆಸುತ್ತಿರುವಾಗಲೇ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಮತ್ತು ಹಿರಿಯ ಕಾರ್ಮಿಕ ಮುಖಂಡ ಡಿ'ಮೆಲ್ಲೊ ಅವರ ಸಂಪರ್ಕ ಜಾರ್ಜ್‌ಗೆ ದೊರಕಿತು. ಇಲ್ಲಿಂದಲೇ ಜಾರ್ಜ್‌ ಅವರ ಹೋರಾಟದ ಮಜಲುಗಳು ಆರಂಭವಾದವು. ಅದು ಕಾರ್ಮಿಕ ಚಳವಳಿಕ ಉಚ್ಛ್ರಾಯ ಕಾಲ. ಹಾಗಾಗಿ, ನಿಧಾನವಾಗಿ ಕಾರ್ಮಿಕ ಚಳವಳಿಯಲ್ಲಿ ಜಾರ್ಜ್‌ ಅಗ್ರಗಣ್ಯ ನಾಯಕರಾಗಿ ರೂಪುಗೊಂಡರು. ಅಲ್ಲಿಂದ ಅವರು 1961ರಲ್ಲಿ ಬಾಂಬೆ ಮುನ್ಸಿಪಲ್‌ ಕಾರ್ಪೊರೇಷನ್‌ಗೆ ಸ್ಪರ್ಧಿಸಿ ಆಯ್ಕೆಯಾದರು. ಹೋರಾಟದ ಜತೆಗೆ ರಾಜಕೀಯ ಜೀವನವನ್ನು ಆರಂಭಿಸಿದರು.

ಜಾರ್ಜ್‌ ದಿ ಜೈಂಟ್‌ ಕಿಲ್ಲರ್‌!
ಕಾರ್ಪೊರೇಷನ್‌ಗೆ ಆಯ್ಕೆಯಾದ ಆರು ವರ್ಷದ ಬಳಿಕ ಜಾರ್ಜ್‌ ಲೋಕಸಭೆ ಸ್ಪರ್ಧೆಗೆ ಮುಂದಾದರು. ದಕ್ಷಿಣ ಮುಂಬೈ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದರು. ಅವರ ಎದುರಾಳಿ
, ಮಹಾರಾಷ್ಟ್ರದ ಅಂದಿನ ಪ್ರಖ್ಯಾತ ಕಾಂಗ್ರೆಸ್‌ ನಾಯಕ ಎಸ್‌.ಕೆ.ಪಾಟೀಲ್‌. ಈ ಚುನಾವಣೆಯಲ್ಲಿ ಜಾರ್ಜ್‌ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಫಲಿತಾಂಶ ಪ್ರಕಟವಾದಾಗ ಮಾತ್ರ ಎಲ್ಲರಿಗೂ ಆಶ್ಚರ್ಯವಾಗಿತ್ತು. ಪ್ರಭಾವಿ ಪಾಟೀಲ್‌ರನ್ನು ಸೋಲಿಸಿ ಜಾರ್ಜ್‌ ಆಯ್ಕೆಯಾಗಿದ್ದರು. ಅಲ್ಲಿಂದಲೇ ಅವರಿಗೆ The Giant Killer ಎಂಬ ಹೆಸರು ಬಂತು. ಇಲ್ಲಿಂದ ಅವರು ರಾಜಕೀಯದಲ್ಲಿ ಹಿಂದಿರುಗಿ ನೋಡಲಿಲ್ಲ. ಹೋರಾಟದ ಜತೆಗೆ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಮೇಲೇರಿದರು.

ಭೂಗತ ನಾಯಕ
1974ರ ಹೊತ್ತಿಗೆ ದೇಶದಲ್ಲಿ ಜಾರ್ಜ್‌ ಜನಪ್ರಿಯ ಹೆಸರಾಗಿತ್ತು. ಈ ಅವಧಿಯಲ್ಲಿ ಅವರು ರೇಲ್ವೆ ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಅದು ಎಷ್ಟು ಪರಿಣಾಮಕಾರಿ ಕರೆಯಾಗಿತ್ತು ಎಂದರೆ, ಇಡೀ ದೇಶ ಅಕ್ಷ ರಶಃ ಸ್ತಬ್ಧವಾಗಿತ್ತು. ಈ ಮುಷ್ಕರಕ್ಕೆ ದೇಶದ ಎಲ್ಲ ಉದ್ಯಮ ವಲಯಗಳಿಂದ ಬೆಂಬಲ ದೊರಕಿತ್ತು. ಮೂರು ವಾರಗಳ ಈ ಮುಷ್ಕರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯಲ್ಲೂ ಅಭದ್ರತೆ ಹುಟ್ಟು ಹಾಕಿತ್ತು ಎಂದರೆ ಅದರ ಪರಿಣಾವನ್ನು ಯಾರಾದರೂ ಊಹಿಸಬಹುದು. ಇದೇ ಸಂದರ್ಭದಲ್ಲಿ 'ಲೋಕ ನಾಯಕ' ಜಯಪ್ರಕಾಶ್‌ ನಾರಾಯಣ್‌ ಅವರ ಮೂವ್‌ಮೆಂಟ್‌ ಫಾರ್‌ ಚೇಂಜ್‌ ಚಳವಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಆಂತರಿಕವಾಗಿ ಹೆಚ್ಚುತ್ತಿದ್ದ ಸರಕಾರ ವಿರೋಧಿ ಧೋರಣೆ ಮತ್ತೊಂದೆಡೆ ಕೋರ್ಟ್‌ನಲ್ಲಾದ ಹಿನ್ನಡೆಯನ್ನು ಅರಗಿಸಿಕೊಳ್ಳಲಾಗದ ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಪ್ರತಿಪಕ್ಷ ನಾಯಕರು ಜೈಲು ಪಾಲಾದರು. ಆಗ ಜಾರ್ಜ್‌ ಮತ್ತು ಅವರ ಜತೆಗಿದ್ದವರು ಭೂಗತರಾದರು. ಈ ಸಂದರ್ಭದಲ್ಲಿ ಬರೋಡಾದಿಂದ ಡೈನಮೈಟ್‌ ತಂದು ಸರಕಾರಿ ಕಚೇರಿಗಳನ್ನು ಧ್ವಂಸಗೊಳಿಸುವ ಯೋಜನೆ ಜಾರ್ಜ್‌ ಅವರದ್ದಾಗಿತ್ತು. ಆದರೆ, ಕೋಲ್ಕತಾ(ಅಂದಿನ ಕಲ್ಕತ್ತಾ)ದಲ್ಲಿ ಸೆರೆ ಸಿಕ್ಕರು. ಡೈನಮೈಟ್‌ ಕದ್ದ ಆರೋಪವನ್ನು ಜಾರ್ಜ್‌ ಮೇಲೆ ಹಾಕಿ ಅವರನ್ನು 9 ತಿಂಗಳು ಕಾಲ ತಿಹಾರ್‌ ಜೈಲಿನಲ್ಲಿ ಇಡಲಾಯಿತು. ಈ ಪ್ರಕರಣವೇ ಮುಂದೆ 'ಬರೋಡಾ ಡೈನಮೈಟ್‌' ಎಂದು ಪ್ರಖ್ಯಾತವಾಯಿತು. ಜೈಲಿನಲ್ಲಿದ್ದುಕೊಂಡೇ ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ, ಮೂರು ಲಕ್ಷ ಮತಗಳ ಅಂತರದಿಂದ ಗೆದ್ದರು. ಜಾರ್ಜ್‌ ಅವರನ್ನು ಬಂಧಿಸಿದ ಕ್ಷ ಣದಲ್ಲಿ ಅವರ ಕೋಳ ತೊಟ್ಟ ಕೈ ಮೇಲತ್ತಿದ ಫೋಟೋ ಈ ಗೆಲುವಿನಲ್ಲಿ ಭಾರಿ ಪ್ರಭಾವ ಬೀರಿತ್ತು!

ಸಚಿವರಾದರು ಜಾರ್ಜ್‌
ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡಿತು. ಇದೇ ಮೊದಲ ಬಾರಿಗೆ ಮೊರಾರ್ಜಿ ದೇಸಾಯಿ ನೇತೃತ್ವದ ಪ್ರಥಮ ಕಾಂಗ್ರೆಸ್ಸೇತರ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲಿ ಜೈಲುಪಾಲಾಗಿದ್ದ ನಾಯಕರೆಲ್ಲ ಬಿಡುಗಡೆಗೊಂಡರು. ಜಾರ್ಜ್‌ ಅವರು ದೇಸಾಯಿ ಸಂಪುಟದಲ್ಲಿ ಕೈಗಾರಿಕಾ ಸಚಿವರಾದರು. ಬಂಡವಾಳ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದ ಅಮೆರಿಕ ಐಬಿಎಂ ಮತ್ತು ಕೊಕಾಕೋಲಾ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡ ಫಲವಾಗಿ ಅವರೆಡೂ ಕಂಪನಿಗಳು ಭಾರತದಿಂದ ಕಾಲು ಕೀಳಬೇಕಾಯಿತು. ಮುಂದೆ ಜನತಾ ದಳ ನಾಯಕ ವಿ.ಪಿ. ಸಿಂಗ್‌ ನೇತೃತ್ವದ ಸರಕಾರದಲ್ಲಿ ರೇಲ್ವೆ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವ ಕೊಂಕಣ ರೇಲ್ವೆ ಯೋಜನೆ ಅನುಷ್ಠಾನಗೊಳಿಸಿದರು.

ಬಿಜೆಪಿಯ ಸಖ್ಯ
ಜೆಪಿ ಚಳವಳಿಯಲ್ಲಿ ಉದಯಿಸಿದ ನಾಯಕರ ಜನತಾ ಪರಿವಾರ ದಿಕ್ಕಾಪಾಲಾದ ಸಂದರ್ಭ ಅದು. ರಾಜಕೀಯ ಅನಿವಾರ್ಯತೆ ಮತ್ತು ಕಾಂಗ್ರೆಸ್‌ ವಿರೋಧಿ ನೀತಿಯ ಪ್ರಮುಖ ಧ್ಯೇಯದಿಂದಾಗಿ ಜಾರ್ಜ್‌ ಅವರು ಅನಿವಾರ್ಯವಾಗಿ ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಆಡ್ವಾಣಿ ಜತೆ ಕೈ ಜೋಡಿಸಬೇಕಾಯಿತು. ವಿಶೇಷ ಎಂದರೆ, ಆರ್‌ಎಸ್‌ಎಸ್‌ ನೀತಿಯನ್ನು ಜಾರ್ಜ್‌ ಟೀಕಿಸುತ್ತಿದ್ದರು. ಹಾಗಿದ್ದೂ ಅವರು ಬಿಜೆಪಿ ಜತೆ ಹೆಜ್ಜೆ ಹಾಕಬೇಕಾಯಿತು. ಜತೆಗೆ ಬಿಜೆಪಿ ನೇತೃತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌-ಎನ್‌ಡಿಎ ಸಂಚಾಲಕರಾದರು. ಯಾರೂ ನಿರೀಕ್ಷಿಸದ ರೀತಿಯಲ್ಲಿ
1998ರಲ್ಲಿ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆಗ ಜಾರ್ಜ್‌ ಅವರಿಗೆ ರಕ್ಷಣಾ ಸಚಿವ ಸ್ಥಾನ ತಾನಾಗಿಯೇ ಒಲಿದು ಬಂತು. ವಿಪರ್ಯಾಸ ಎಂದರೆ, ಜಾರ್ಜ್‌ ತಮ್ಮ ಬದುಕಿನುದ್ದಕ್ಕೂ ಅಣ್ವಸ್ತ್ರಗಳನ್ನು ವಿರೋಧಿಸುತ್ತಲೇ ಬಂದಿದ್ದರು. ಆದರೆ, ಅದೇ ಜಾರ್ಜ್‌ ಅವರು ಅಣ್ವಸ್ತ್ರ ಪರೀಕ್ಷೆಯಲ್ಲಿ ವಾಜಪೇಯಿ ಜತೆ ಪಾಲುದಾರರಾದರು!

ಬೆನ್ನತ್ತಿದ ವಿವಾದಗಳು
ಜಾರ್ಜ್‌ ಅವರು ರಕ್ಷಣಾ ಸಚಿವರಾಗಿದ್ದಾಗಲೇ ಬಾರಾಕ್‌ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳು ಬೆನ್ನು ಹತ್ತಿದವು. ಇದಕ್ಕಾಗಿ ಅವರು ರಕ್ಷಣಾ ಸಚಿವ ಸ್ಥಾನವನ್ನು ತೊರೆಯಬೇಕಾಯಿತು. ಮುಂದೆ ತನಿಖೆ ವೇಳೆ ಜಾರ್ಜ್‌ ಅವರು ನಿರ್ದೋಷಿ ಎಂದು ಸಾಬೀತಾದ ಮೇಲೆ ಮತ್ತೆ ರಕ್ಷ ಣಾ ಸಚಿವರಾದರು. ಆದರೆ, ಕಾರ್ಗಿಲ್‌ ಯುದ್ಧದ ವೇಳೆ ಖರೀದಿಸಲಾದ ಶವಪೆಟ್ಟಿಗೆಗಳ ಹಗರಣ ಮತ್ತೆ ಜಾರ್ಜ್‌ ತಲೆಯೇರಿತು. ತೀರಾ ಇತ್ತೀಚೆಗಷ್ಟೇ ಈ ಹಗರಣದಲ್ಲೂ ಜಾರ್ಜ್‌ ಅವರು ನಿರ್ದೋಷಿ ಎಂದು ಸಾಬೀತಾಯಿತಾದರೂ, ಅದನ್ನು ಕೇಳಿ ಸಂತೋಷ ಪಡುವ ಸ್ಥಿತಿಯಲ್ಲಿ ಜಾರ್ಜ್‌ ಇರಲಿಲ್ಲ. ಸಾಮಾನ್ಯವಾಗಿ ಭಾರತದ ಮಗ್ಗಲು ಮುಳ್ಳು ಪಾಕಿಸ್ತಾನ ಎಂದು ಬಹುತೇಕ ರಾಜಕಾರಣಿಗಳು ಹೇಳುತ್ತಾರೆ. ಆದರೆ, ಜಾರ್ಜ್‌ ಮಾತ್ರ ಭಾರತದ ನಂ.1ವೈರಿ ಪಾಕಿಸ್ತಾನವಲ್ಲ ಚೀನಾ ಎಂದು ಬಹಿರಂಗವಾಗಿ ಹೇಳುವ ಮೂಲಕ ಭಾರಿ ಸಂಚಲನಕ್ಕೆ ಕಾರಣವಾಗಿದ್ದರು.

ನೇಪಥ್ಯಕ್ಕೆ ಜಾರಿದ ಜಾರ್ಜ್‌
2004ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಮರಳಿ ಅಧಿಕಾರ ಹಿಡಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಎನ್‌ಡಿಎ ಸೋಲು ಕಂಡು ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂತು. ಈ ಅವಧಿಯಲ್ಲಿ ದೇಶದ ಇಬ್ಬರು ಪ್ರಮುಖ ನಾಯಕರು ನೇಪಥ್ಯಕ್ಕೆ ಜಾರುವಂತಾಯಿತು. ಒಬ್ಬರು ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ, ಮತ್ತೊಬ್ಬರು ಜಾರ್ಜ್‌. ನಂತರ ಅವರಿಗೆ ಅಲ್ಜೈಮರ್‌ ಕಾಯಿಲೆ ಉಲ್ಬಣಗೊಂಡು ಸಂಪೂರ್ಣವಾಗಿ ಸಾರ್ವಜನಿಕ ಜೀವನದಿಂದ ಮರೆಯಾಗಬೇಕಾಯಿತು.

ಮರಳಿ ಬಾರದ ಲೋಕಕ್ಕೆ
ಜಾರ್ಜ್‌ ಅದ್ಭುತ ಮಾತುಗಾರರು. ಅವರು ಭಾಷಣಕ್ಕೆ ನಿಂತರೆ ಇಡೀ ಜನಸಮೂಹ ತದೇಕ ಚಿತ್ತದಿಂದ ಆಲಿಸುತ್ತಿತ್ತು. ಸಂಸತ್ತಿನಲ್ಲಿ ಮಾತನಾಡಲು ಆರಂಭಿಸಿದರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಕೊಂಕಣಿ, ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ಜಾರ್ಜ್‌ ನಿರರ್ಗಳವಾಗಿ ಮಾತನಾಡುತ್ತಿದ್ದರು. ಪ್ರಖರ ಸಮಾಜವಾದಿಯಾಗಿದ್ದ ಜಾರ್ಜ್‌ ತುಂಬ ದಿನಗಳ ಕಾಲ ಅನಾರೋಗ್ಯಪೀಡಿತರಾಗಿ ಕೊನೆಯ ದಿನಗಳನ್ನು ಅತ್ಯಂತ ಯಾತನೆಯಲ್ಲಿ ಕಳೆದರು. 2019ರ ಜನವರಿ 29ರಂದು ಇಹಲೋಕ ತ್ಯಜಿಸಿದರು.

ವಿಯೆಟ್ನಾಮಿಯಾಗಿ ಹುಟ್ಟುವೆ!
''ಒಂದು ವೇಳೆ ಪುನರ್ಜನ್ಮ ಎಂಬುದಿದ್ದರೆ ನಾನು ವಿಯೆಟ್ನಾಮಿಯಾಗಿ(ವಿಯೆಟ್ನಾಮ್‌ ಪ್ರಜೆ) ಹುಟ್ಟುವೆ,'' ಎಂದು ಜಾರ್ಜ್‌ ಒಮ್ಮೆ ಹೇಳಿದ್ದರು. ಒಂದುವರೆ ದಶಕದ ಹಿಂದೆ ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ಬಯಕೆಯನ್ನು ಅವರು ಹೊರಹಾಕಿದ್ದರು. ''ವಿಯೆಟ್ನಾಮಿ ಜನರು ತಮ್ಮ ಬದ್ಧತೆಯನ್ನು ಪೂರೈಸಲು ಸಾಯಲು ಸಿದ್ಧರಾಗಿರುತ್ತಾರೆ. ಅಂಥ ಶಿಸ್ತು ಅವರಲ್ಲಿರುತ್ತದೆ. ನಾನು ವಿಯೆಟ್ನಾಮ್‌ನ ಅಭಿಮಾನಿ,'' ಎಂದು ಹೇಳಿದ್ದರು.