ಎಂದಿನಂತೆ ಸೂರ್ಯನ ಕಿರಣಗಳ ಕಿಟಕಿಯೊಳಗಿಂದ ನನ್ನ ಮೇಲೆ ಬಿದ್ದಿರಲಿಲ್ಲ. ಆಗಲೇ ನನ್ನ ಮೊಬೈಲ್ ರಿಂಗುಣಿಸಿದ್ದು.ನಿದ್ದೆಯೇ ಮಂಪರಿನಲ್ಲಿ ಹಲೋ ಎಂದೆ. ಅತ್ತ ಕಡೆಯಿಂದ ಮಾತಾಡಿದ್ದು ನನ್ನ ಸಹೋದರ ಮಾವ. ಆತನ ದನಿ ನಡಗುತ್ತಿತ್ತು.ಹೇಗೊ ಸಾವರಿಸಿಕೊಂಡು ವಿಷಯ ಹೇಳಿದಾ. ಆಗ ನನಗೆ ನಿಂತ ನೆಲ ನಡುಗಿದ ಅನುಭವ. ಆಗಲೇ ಕಿಟಕಿಯೊಳಗಿನಿಂದ ಸೂರ್ಯ ರಶ್ಮಿಯೊಂದು ನನ್ನ ಗಲ್ಲದ ಮೇಲೆ ಬಿತ್ತು. ಅದು ಎಂದಿನಂತೆ ಹಿತವಾಗಿರಲಿಲ್ಲ; ಬೆಂಕಿಯಂತೆ ಸುಡುತ್ತಿತ್ತು. ಅದನ್ನು ತಂಪಾಗಿಸಲು ಏನೊ ಎಂಬಂತೆ ನನ್ನ ಕಣ್ಣೀರಧಾರೆ ಚಿಮ್ಮಿತು.
ಹಾಗೇ ನಿಂತಕೊಂಡದ್ದನ್ನು ನೋಡಿದ ಗೆಳೆಯ ವಿನೋದ, "ಏನ್ ಪೋನು" ಅಂತಾ ಗಾಬರಿಯಿಂದ ಕೇಳಿದ. ಆದರೆ, ನನಗೆ ಹೇಳುವುದಕ್ಕೆ ಬಾಯಿಯಾದರೂ ಎಲ್ಲಿತ್ತು. ಅಳುವೊಂದು ಒಂದೇ ನನ್ನ ಬಾಯಿಗೆ ಗೊತ್ತಾಗಿದ್ದು ಆಗ. ಏನೂ ತಿಳಿಯದೆ ಆತ ಆಶ್ಚರ್ಯಗಣ್ಣುಗಳಿಂದ ನನ್ನ ದಿಟ್ಟಿಸುತ್ತಾ ನೋಡುತ್ತಿದ್ದ; ನಾನು ಅವನ ಹೆಗಲ ಮೇಲೆ ಮುಖವೊಡ್ಡಿ ಮನಸ್ಸು ಹಗುರವಾಗೊವರೆಗೆ ಅತ್ತೆ.
****
ಚೆನ್ನೈನಿಂದ ಬೆಳಗಾವಿಯ ನನ್ನ ಹಳ್ಳಿಗೆ ಹೋಗಬೇಕಾದ್ರೆ ಕನಿಷ್ಟ 21 ರಿಂದ 23 ಗಂಟೆಯಾದ್ರೂ ಬೇಕು. ಮಧ್ಯಾಹ್ನದ ಚೆನ್ನೈನಿಂದ ಬೆಂಗಳೂರಿಗೆ ಹೊರಡುವ ಟ್ರೈನ್‌ಗೆ ಬಿಟ್ಟು ಬರಲು ವಿನೋದ ಬಂದಿದ್ದ. ಟ್ರೈನ್ ತನ್ನ ನಿಗದಿತ ಸಮಯಕ್ಕೆ ನಿರ್ಭಾವಕತೆಯಿಂದ ಹೊರಟಿತು. ಹೊರಗೆ ಭಾವಕನಾದ ವಿನೋದ ಕಣ್ಣೀರು ತುಂಬಿಕೊಂಡಿದ್ದ; ನನ್ನ ಎದೆಯೊಳಗೆ ಕಣ್ಣೀರಿನ ಜಲಪಾತವೇ ಬೀಳುತ್ತಿತ್ತು.
ಚೆನ್ನೈ ದಾಟಿ ಟ್ರೈನ್ ಅದೇ ನಿರ್ಭಾವುಕ ಶಬ್ಧ ಮಾಡುತ್ತ ಮತ್ತು ಅಷ್ಟೆ ವೇಗವಾಗಿ ಓಡುತ್ತಿತ್ತು. ಎಲ್ಲರೂ ಹೀಗೆ ಓಡಬೇಕು ಎಂದು ಅಣುಕಿಸುತ್ತವಂತೆ ಭಾಸವಾಯಿತು ನನಗೆ.
****
ಕಿಟಕಿಗೆ ತಲೆ ಹಚ್ಚಿ ಕಣ್ಣುಚ್ಚುದ್ದಂತೆ ನನ್ನ ಅವ್ವನ ಮುಖ, ಅವಳು ಆ ಹೊಲ ಬಿಡಿಸಿಕೊಳ್ಳುವುದಕ್ಕಾಗಿ ಪಟ್ಟ ಪಾಡು ಎಲ್ಲ ಸುಯ್ಯಂತ ಸುಳಿಯಿತು.
ನಾನು ಪ್ರತಿ ಸಾರಿ ಊರಿಗೆ ಹೋದಾಗ ಅವ್ವನದು ಒಂದೆ ಮಾತು. " ತಮ್ಮಾ ಆ ತುಣಕ್ ಹೊಲ ಬಿಡ್‌ಸ್ಕೊಳ್ಳುನಪಾ. ಆ ಹೊಲದಿಂದ ನಾಲ್ಕ್ ಕಾಳು ಜೋಳ ಬಂದ್ರ್ ಎಷ್ಟೊ ಸಹಾಯ ಆದಂಗ್ ಆಗತೈತಿ. ನೀ ತಿಂಗ್ಳಾ ಎರಡು ಸಾವಿರು ಕಳಿಸಿದ್ರ್ ಸಾಕ್. ನಾ ಹೆಂಗರ್ ಮನಿ ನಡೆಸ್ಕೊಂಡ್ ಹೋಗ್ತೇನಿ. ನಿಮ್ಮ ಅಪ್ಪ್ ಅಂತ್ರೂ ದುಡಿಯಂವಾ ಅಲ್ಲಾ, ದುಃಖ ಪಡಂವಾ ಅಲ್ಲಾ. ನಾ ಹೀಂಗ್ ಎಷ್ಟಾ ದಿನಾ ದುಡೀಲಿ" ಅನ್ನಾಕೆ.
"ಅಲ್ಲವೋ ಆ ಹೊಲಕ್ ಯಾಕ್ ಅಷ್ಟು ಚಿಂತಿ ಮಾಡ್ತಿಯವ್ವಾ. ಇರೋದು ಒಂದೂವರೆ ಎಕ್ರೆನೂ ಇಲ್ಲಾ. ಆ ಹೊಲದಿಂದ ಎಷ್ಟು ಜೋಳಾ ಪಡದೀ ನೀ" ಅನ್ನುತ್ತಿದ್ದಾಂಗ, ಅವ್ವ ಕೊಂಚ ಬೇಸರ ಮಾಡ್ಕೊಂಡು, "ಹಂಗ್ ಅನ್ನಬೇಡೊ ತಮ್ಮಾ, ಅದು ಎಷ್ಟು ಆದ್ರೂ ಹಿರೇರು ಮಾಡಿಟ್ಟ ಆಸ್ತಿ. ಅಂಗೈಷ್ಟಿದ್ದರೂ ಹೊಲಾ ಹೊಲನಾಪಾ" ಅನ್ನುತ್ತ ಕಣ್ಣಂಚಿನೊಳಗ ನೀರು ತರುತ್ತಿದ್ದಳು.
ಆಮೇಲೆ ನಾನು ಊರಿಗೆ ಹೋದಾಗೊಮ್ಮೆ ಮುಂದಿನ ಸಾರಿ ಬಂದಾಗ ಹೊಲ ಬೀಡ್ಸ್ಕೊಂಡ ಬರೋಣ ಅಂತಾ ಹೇಳ್ತಿದ್ದೆ.
ಅಷ್ಟಕ್ಕೆ ಅವ್ವ ತುಂಬಾ ಸಂತೋಷ ಪಡೋಳು. ನನ್ನ ಅವ್ವನ ಆ ನಗುವನ್ನು ಹಾಗೇ ನಿರಂತರವಾಗಿರಸುವುದಕ್ಕಾಗಿ ನಾನು ನನ್ನ ಶಕ್ತಿಮೀರಿ ಉಳಿಸಿದ ಹಣ ಬ್ಯಾಂಕ್ ಅಕೌಂಟಿನಲ್ಲಿ 30000 ರೂಪಾಯಿ ತೋರಿಸಿತ್ತಿತ್ತು.
ಆ ಹೊಲನಾ ನಮ್ಮ ತಂಗಿ ಮದುವೆಗೆ ಅಂತಾ ನಮ್ಮ ಕಾಕಾ ತನ್ನ ಕಾಕಾನಿಗೆ ಹತ್ತು ಸಾವಿರು ರೂಪಾಯಿಗೆ ಉಣ್ಣಾಕ್ ಹಾಕಿದ್ದ. ಐದಾರು ವರ್ಷದಲ್ಲಿ ಬಡ್ಡಿ, ಚಕ್ರ ಬಡ್ಡಿ ಸೇರಿ ಮೊವ್ವತ್ತು ಸಾವಿರು ಆಗಿತ್ತು. ದಿನಾಲೂ ಕುಡಿಯೊ ನಮ್ಮ ಅಪ್ಪನಿಗೆ ಅಷ್ಟು ಹಣಕೊಟ್ಟು ಹೊಲ ತನ್ನದಾಗಿಸಿಕೊಳ್ಳೊ ವಿಚಾರಾದ್ರೂ ಹೆಂಗ್ ಬಂದಿತ್ತು.
ನಮ್ಮ ಅಪ್ಪ ಶುದ್ಧ ಕುಡಕ. ಅವನು ತಾನು ದುಡಿದಿದ್ದನ್ನು ಕುಡಿದು ಹಾಳು ಮಾಡೋದು ಅಲ್ಲದೆ ಅವ್ವನ ಕೂಲಿಯ ಹಣವನ್ನು ಕೂಡಾ ಕುಡಿದು ಹಾಳು ಮಾಡುತ್ತಿದ್ದ. ಆಗ ಅವ್ವ ಒಲೆ ಮುಂದೆ ಕುಳಿತು ಕಣ್ಣೀರು ಹಾಕುದನ್ನು ನಾ ಎಷ್ಟೊ ಬಾರಿ ನೋಡಿದ್ದೇನೆ.
ನಾನು ದುಡಿಯೋಕೆ ಶುರು ಮಾಡಿದ ಮೇಲೆ ಅವ್ವನ ಕಣ್ಣಲ್ಲಿ ಒಮ್ಮೆಯೂ ಒಂದು ಹನಿ ನೀರು ಬರಬಾರ್ದು ಹಾಗೇ ನೋಡ್ಕಬೇಕು ಅಂತಾ ಅನ್ನೊಂಡಿದ್ದು ನೆನಪಾದಗ ನನ್ನ ಕಣ್ಣೀರು ಕಪಾಳ ಮೇಲೆ ಜಿನಗುತ್ತಿತ್ತು.
ನಾನು ಕೆಲಸಕ್ಕೆ ಸೇರಿಕೊಂಡ ವಿಷಯ ತಿಳಿದ ತಕ್ಷಣವೇ ಅವ್ವ ನನಗೆ ಹೇಳಿದ್ದು."ತಮ್ಮಾ ಲಗೂನ್ ಹೊಲ ಬಿಡ್ಸಕೊಳ್ಳನಾಪಾ ಅಂತ್.." ಹೀಗೆ ನೆನಪಿನ ಸುರಳಿ ಬಿಚ್ಚುತ್ತಾ ಹೋಗುತ್ತಿದ್ದಂತೆ ಟ್ರೈನ್ ಒಮ್ಮೆ ಗಕ್ಕನೆ ನಿಂತಿತು;ನೆನಪಿನ ಸುರಳಿ ಕೂಡಾ ಕತ್ತರಿಸಿತು. ಆದರೆ ಕಣ್ಣೀರು ಮಾತ್ರ ಹಾಗೇ ಜಿನಗುತ್ತಿತ್ತು. ಹೊರಗೆ ನೋಡಿದ್ರೆ ಬೆಂಗಳೂರು ಎಂಬ ಬೋರ್ಡ್.
****
ಟ್ರೈನ್ ಇಳಿದು ಬೆಳಗಾವಿಗೆ ಹೋಗೊ ಬಸ್ ಹತ್ತಿದೆ. ಆಗಲೂ ನನ್ನ ಕಣ್ ಮುಂದೆ ಬರುವ ಚಿತ್ರಗಳ ನನ್ನ ಅವ್ವ ಮತ್ತು ಆ ಹೊಲ. ಆಗಲೇ ಹೊರಗೆ ಸಣ್ಣಗೆ ಕತ್ತಲು ಆವರಿಸುತಿತ್ತು. ಬೆಂಗಳೂರು ದಾಟಿ ಬಸ್ಸು ತುಮಕೂರನ್ನು ಮುಂದೆ ಮಾಡಿಕೊಂಡು ಒಂದೆ ಸವನೇ ನುಣಪಾದ ರಸ್ತೆ ಮೇಲೆ ಏದಿರುಸಿರು ಬೀಡದಂತೆ ಓಡುತ್ತಿತ್ತು. ನಾನು ಕಣ್ಣೀರ ನಡುವೆಯೂ ನಿದ್ದೆಗೆ ಪ್ರಯತ್ನಿಸಿದೆ. ಆದ್ರೆ ನಿದ್ದೆ ಬರಲಿಲ್ಲ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಸ್ ನಿಂತಾಗ ಸೂರ್ಯ ತನ್ನ ಮುಖ ಜಗತ್ತಿಗೆ ತೋರಿಸುತ್ತಿದ್ದ. ಅದೇ ಸಮಯಕ್ಕೆ ನನ್ನ ಊರು ತಲಪಲು ಟ್ರೈನ್ ಇತ್ತು. ನಾನು ರೈಲು ನಿಲ್ದಾಣದತ್ತ ಧಾವಿಸಿದೆ. ಟ್ರೈನ್ ಹತ್ತಿ ಕುಳಿತುಕೊಂಡಾಗಲೇ, ಮತ್ತ ಅದೆ ಅವ್ವನ ಕುಂಕಮವಿಟ್ಟ ತೇಜೊವರ್ಣ ಮುಖ ಮತ್ತು ಕಪ್ಪು ಮಣ್ಣಿನ ಆ ಹೊಲ.
ರೈಲು ಇಳಿದು ಮನೆ ಹಾದಿ ಹಿಡಿದೆ. ಎದುರಾದವರು ನನ್ನ ಅವ್ವನ ಗುಣಗಾನ ಮಾಡಿ ಮುಂದೆ ಹೋಗುತ್ತಿದ್ದರು. ಆಗ ದುಃಖ ಉಮ್ಮಳಿಸುತ್ತಿತ್ತು. ಸರಕಾರಿ ಧನಸಹಾಯದಲ್ಲಿ ಕಟ್ಟಿಸಿದ್ದ ಆ ನನ್ನ ಮನೆಯ ಮುಂದೆ ಕುಂಕಮ ಹೊತ್ತ ಅವ್ವನ ಮುಖ ನಿರ್ವಣವಾಗಿದ್ದನ್ನು ನೋಡಿದಾಗಲೇ ಅಲ್ಲಿವರೆಗೂ ಮಡಗಟ್ಟಿದ್ದ ನನ್ನ ದುಃಖದ ಕಣ್ಣೀರು ಅಣೆಕಟ್ಟು ಒಡೆದು ಭೋರ್ಗರೆಯಿತು.
***
ಅವ್ವನ ಎಲ್ಲ ಅಂತಿಮ ಕ್ರಿಯೆಗಳನ್ನು ಮುಗಿಸಿ ಮರಳಿ ಚೆನ್ನೈಗೆ ಬರಲು ಬಸ್ ಹತ್ತಿ ಹೊರಟೆ. ಸ್ವಲ್ಪ ಊರು ದಾಟಿದ ನಂತರ ಎದುರಾದ ಕಪ್ಪು ಹೊಲದಲ್ಲಿ ಅವ್ವ ಜೋಳದ ರಾಶಿ ಮಾಡಿದಂತೆ ಅಣಕಿಸಿದಂತಾಯಿತು.
ಶನಿವಾರ, ಆಗಸ್ಟ್ 11, 2007
ಸೋಮವಾರ, ಆಗಸ್ಟ್ 6, 2007
ಚೆನ್ನೈನಲ್ಲಿ ಸಖತ್ "ಮುಂಗಾರು ಮಳೆ": ಕನ್ನಡಿಗರಿಗೆ ಪುಳಕ
ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..!
ಅರೆ ಏನು ಇದು.. ಅಂತಾ ಕೇಳ್ತಿದ್ದೀರಾ. ಅಂಥದ್ದೇನೂ ಇಲ್ಲ ಮಾರಾಯ್ರೆ. ಅದೇ ಕನ್ನಡದ ಸೂಪರ್ ಡೂಪರ್ ಹಿಟ್ "ಮುಂಗಾರು ಮಳೆ" ಚಿತ್ರ ಚೆನ್ನೈನಲ್ಲಿ ಬಿಡುಗಡೆಯಾಗಿ ಸಖತ್ ಮೋಡಿ ಮಾಡಿದೆ ಇಲ್ಲಿಯ ಚೆನ್ನೈ ಕನ್ನಡಿಗರಿಗೆ...!
ನಿನ್ನೆ ಭಾನುವಾರ ಇಡೀ ನಮ್ಮ ಆಫೀಸೇ "ಮುಂಗಾರು ಮಳೆ" ಪ್ರದರ್ಶಿಸುತ್ತಿರುವ ಕ್ಯಾಸಿನೊ ಚಿತ್ರಮಂದಿರ ಬಳಿಯಿತ್ತು. ಅದೇನೂ ಮಹಾ ವಿಶೇಷ ಅನ್ನಬೇಡಿ. ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ" ಇದ್ದ ಹಾಗೆ. ಇಲ್ಲಿ ಕನ್ನಡಿಗರು, ಮಲಿಯಾಳಿಗಳು, ಆಂಧ್ರದವರು ಮತ್ತು ತಮಿಳರು ಬಹಳ ಅನ್ಯೂನ್ಯದಿಂದ ಕೆಲಸ ಮಾಡುತ್ತಾರೆ. ಯಾಕೆಂದರೆ ನಮ್ಮದು ಹೇಳಿ ಕೇಳಿ ಸಾಫ್ಟವೇರ್ ಲೋಕಲಾಯಿಜಿಶನ್ ಮತ್ತು ಮೀಡಿಯಾ ಮೂಲದ ಎಂಎನ್‌ಸಿ ಕಂಪೆನಿ. ಹೀಗಾಗಿ ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ"
ಈಗ ಅರ್ಥ ಆಗಿರಬೇಕಲ್ಲ ಇಡೀ ನಮ್ಮ ಆಫೀಸ್ ತಂಡವೇ ಕ್ಯಾಸಿನೋ ಬಳಿ ಇತ್ತು ಅಂತ ಯಾಕೆ ಹೇಳ್ದೆ ಅಂತ. ಸರಿ ಮತ್ತೆ ಮುಂಗಾರಿ..ಗೆ ಬರೋಣ.
ನಮ್ಮ ಕನ್ನಡ ತಂಡದಲ್ಲಿ ಸಾರಥಿ ಅಂತ ಅಪ್ಪಟ ಕನ್ನಡ ಪ್ರೇಮಿಗಳು ಇದ್ದಾರೆ. ಭಾನುವಾರ ಸುಮಾರು ನಮ್ಮ ಆಫೀಸ್‌ನ 30 ಜನರನ್ನು "ಮಳೆ"ಯಲ್ಲಿ ತೋಯಿಸಿದ ಮಹಾನಭಾವರು. ಕನ್ನಡ ತಂಡದೊಂದಿಗೆ ಉಳಿದ ಭಾಷೆಗಳ ಸಹದ್ಯೋಗಿಗಳಿಗೆ ಅಪ್ಪಟ ಕನ್ನಡ ದೇಶೀಯ ಚಿತ್ರವನ್ನು ತೋರಿಸಿದ ಸಾರಥಿ ಅವರಿಗ ನೂರು ಸಲಾಂ.
ಬಹುಶಃ ಕ್ಯಾಸಿನೋ ಚಿತ್ರ ಮಂದಿರದವರು ಕೂಡಾ ಇಷ್ಟೊಂದು ಜನರು ಕನ್ನಡ ಚಿತ್ರ ನೋಡಲು ಬರುತ್ತಾರೆಂದು ನಿರೀಕ್ಷಿಸಿರಲಿಕ್ಕಿಲ್ಲ. ಯಾಕಂದೆರ ಭಾನುವಾರದ ಮಧ್ಯಾಹ್ನ ಪ್ರದರ್ಶನದ ಟೀಕೆಟ್‌ಗಳು ಒಂದು ದಿನದ ಹಿಂದೆಯೇ ಪೂರ್ಣವಾಗಿ ಬುಕ್ ಆಗಿದ್ದವು.
****
ಸರಿ, ನಾವೆಲ್ಲರೂ "ಮುಂಗಾರ ಮಳೆ"ಯಲ್ಲಿ ತೋಯಿಸಿಕೊಳ್ಳಲು ಚಿತ್ರಮಂದಿರದೊಳಗೆ ಹೊದೇವು. ಅಲ್ಲಿಯದು ಬೇರೆಯೇ ಅನುಭವ. ಪಕ್ಕಾ ತಮಿಳು ಚಿತ್ರಗಳ ಮಧ್ಯೆ ಅಪ್ಪಟ ಕನ್ನಡ ಚಿತ್ರವನ್ನು ನೋಡುತ್ತಿರುವುದರಿಂದ ಏನೊ ಒಂಥರಾ... ಸಂತೋಷ, ಅನುಭವ ಉಂಟಾಗುತ್ತಿತ್ತು.
ಚಿತ್ರ ನೋಡ್ತಾ ನೋಡ್ತಾ.. ನಾನು ನನ್ನ ಸುತ್ತ ಕಣ್ ಹಾಯ್ಸಿದೆ. ಬಹುಶಃ ಅವರಿಬ್ಬರೂ ಪ್ರೇಮಿಗಳಿರಬೇಕು. ಆಕೆ ಕನ್ನಡತಿ, ಆತ ತಮಿಳು ಹುಡುಗ. ಇಷ್ಟು ಕರೆಕ್ಟ್ ಆಗಿ ಹೇಗೆ ಹೇಳುತ್ತಿದ್ದೇನೆ ಎಂದು ಹುಬ್ಬೇರಿಸಬೇಡಿ. ಯಾಕಂದರೆ ಆಕೆ ಮುಂಗಾರಿನ ಪಂಚಿಂಗ್ ಸಂಭಾಷಣೆಯನ್ನು ತಮಿಳನಲ್ಲಿ ಭಾಷಾಂತರಿಸಿ ಆತನಿಗೆ ಹೇಳುತ್ತಿದ್ದಳು. ಆಗ ಆತ ನಗುತ್ತಿದ್ದ...! ಇದನ್ನು ನೋಡಿ ನನಗೊ ಖುಷಿಯಾಯಿತು. ಯಾಕೆಂದರೆ ಕನ್ನಡದ ಚಿತ್ರವನ್ನು ಚೆನ್ನೈಗರು ಕೂಡಾ ಆಸ್ವಾದಿಸುತ್ತಿದ್ದಾರೆ ಅಂತ.
ಇನ್ನೂ ಚಿತ್ರದಲ್ಲಿ ತೋರಿಸಲಾದ ಜೋಗದ ಸೀನ್ ಇದೆಯಲ್ಲಾ... ಅದು ತುಂಬಾ ಮೋಡಿ ಮಾಡಿ ಬಿಟ್ಟಿದೆ ಇಲ್ಲಿನ ಜನಕ್ಕೆ. ತಮಿಳು ಸ್ಟಾರ್ ಡೈರಕ್ಟರ್ ಶಂಕರ್ ಕೂಡಾ ಇಂಥ ಜಲಪಾತವನ್ನು ತನ್ನ ಚಿತ್ರದಲ್ಲಿ ಈ ರೀತಿ ಸೆರೆ ಹಿಡಿಯಲು ಸಾಧ್ಯವಿಲ್ಲ ಎಂಬ ಮಾತು ಸಿನೆಮಾ ನೋಡಲು ಆಗಮಿಸಿದ್ದ ಚೆನ್ನೈನ ತಮಿಳರ ಮಧ್ಯೆ ಕೇಳಿ ಬರುತ್ತಿತ್ತು. ಅಷ್ಟೊಂದು ಅದ್ಭುತ.. ಅತ್ಯದ್ಭುತ ಜೋಗದ ಸಿರಿ.. ಮಾಡಿದೆ ಮೋಡಿ ಈ ಪರಿ.
ಬಾಲ್ಕನಿಯಲ್ಲಂತೂ ಕನ್ನಡಿಗರ ಉತ್ಸಾಹ ಹೇಳ ತೀರದು. "ಒಂದೆ ಒಂದು ಸಾರಿ ಕಣ್ಮಂದೆ ಬಾರೆ.., ಅನಿಸುತಿದೆ ಯಾಕೋ ಇಂದು.... ಹಾಡುಗಳಿಗೆ ಎಲ್ಲರೂ ಕೋರಸ್ ಹಾಡುತ್ತಿದ್ದರು. ಅದು ಎಂಧವರಿಗೂ ಅಭಿಮಾನವನ್ನುಂಟು ಮಾಡುವು ಸನ್ನಿವೇಶ ಆಗಿತ್ತು.
****
ಕನ್ನಡದ ಗೆಳೆಯರಲ್ಲ ತಮ್ಮ ತಮ್ಮ ತಮಿಳು ಗೆಳೆಯರನ್ನು ಚಿತ್ರಕ್ಕೆ ಆಹ್ವಾನಿಸಿ ತೋರಿಸುತ್ತಿದ್ದಾರೆ. ಆನಂದ ಪಡುತ್ತಿದ್ದಾರೆ. ಚೆನ್ನೈನ ಕೆಲವು ಪ್ರಮುಖ ಬೀದಿಗಳಲ್ಲಿ ಮುಂಗಾರು ಮಳೆ ಪೋಸ್ಟರ್ ಕಾಣಿಸಿಕೊಂಡಿವೆ. ಬಸ್‌ನಲ್ಲಿ, ಶೇರ್ ಆಟೊದಲ್ಲಿ ಹೋಗುವಾಗ ಆ ಪೋಸ್ಟರ್ ಕಣ್ಣಿಗೆ ಬಿದ್ದರೆ ಎದೆಯಲ್ಲಿ ಏನೊ ಹಾಗೇ ಸುಮ್ಮನೆ...!
"ಮುಂಗಾರು ಮಳೆ" ನೋಡಿಕೊಂಡು ಶೇರ್ ಆಟೊದಲ್ಲಿ ರೂಮ್ ದಾರಿ ಹಿಡಿದಾಗ, ಹೊರಗೆ ಸಣ್ಣಗೆ ತುಂತುರು ಮಳೆ.. ಆಗ ನನ್ನ ಗೆಳೆಯು ಗುಣಗುತ್ತಿದ್ದ ಹೀಗೆ, "ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ..."
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
-
ನನ್ನೊಳಗಿನ ಭಾವನೆಗಳಿಗೆ ಹಚ್ಚಬೇಕಿದೆ ಬಣ್ಣ, ಹಸಿರಾಗುವ ನೆಪದಲ್ಲಿ ಕೊಸರಾಡುವ ಕನಸುಗಳಿಗೆ ಕಟ್ಟಬೇಕಿದೆ ಬೇಲಿ. ಹಾರಬೇಕಿದೆ ಮುಗಿಲೇತ್ತರಕ್ಕೆ ಎಲ್ಲ ನಿಯಮ ಮೀರಿ ಗೆಲ್ಲಬೇಕ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ ಸ್ಥೈರ್ಯ ತುಂಬಿ ಬೆಳೆಸಿದಾಕೆ, ಬರೀ ಸೋಲು ಕಂಡುವನಿಗೆ ಗೆಲುವಿನ ದಾರಿ ತೋರಿಸಿದಾಕೆ.. ಅವ್ವ ಗೆದ್ದು ಬಂದಾಗ... ಮರೆಯಲ್ಲಿ ನಿಂತು ಆನಂದ...