ಶನಿವಾರ, ಮಾರ್ಚ್ 16, 2019

2014ರಲ್ಲಿ ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್‌ಗೆ ಹೀನಾಯ ಸೋಲು

ಯುಪಿಎ-2 ಅವಧಿಯಲ್ಲಿ ಕಾಂಗ್ರೆಸ್‌ನ ಸ್ವಯಂಕೃತ ಅಪರಾಧಗಳು, ಹಗರಣಗಳೇ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಆ ಪಕ್ಷ ದ ಹೀನಾಯ ಸೋಲಿಗೆ ಕಾರಣವಾಯಿತು. 2004-2009ರ ಅವಧಿಯಲ್ಲಿ ಯುಪಿಎ ಬಗ್ಗೆ ಜನರು ಹೊಂದಿದ್ದ ಸಾವಧಾನ ಭಾವ 2014ರ ಚುನಾವಣೆ ಹೊತ್ತಿಗೆ ಆಕ್ರೋಶವಾಗಿ ಪರಿಣಮಿಸಿತು. ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಮತ್ತು ಅವರ ಸಂಪುಟದ ಅನೇಕ ಸಚಿವರ ವಿರುದ್ಧವೇ ಕಲ್ಲಿದ್ದಲು, 2ಜಿ ಸ್ಪೆಕ್ಟ್ರಮ್‌, ಕಾಮನ್ವೆಲ್ತ್‌, ಆದರ್ಶ ಹೌಸಿಂಗ್‌, ಆಗಸ್ಟಾವೆಸ್ಟಲ್ಯಾಂಡ್‌ ಸೇರಿದಂತೆ ಇನ್ನಿತರ ಹಗರಣಗಳು ಕೇಳಿ ಬಂದವು. ದೇಶದಲ್ಲಿ ಎಷ್ಟೆಲ್ಲ ಭ್ರಷ್ಟಾಚಾರ ನಡೆಯುತ್ತಿದ್ದರೂ ಪ್ರಧಾನಿ ಸಿಂಗ್‌ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂಬ ಆರೋಪ ಸಾಮಾನ್ಯವಾಗಿತ್ತು. 
ಮತ್ತೊಂದೆಡೆ, ಬಿಜೆಪಿಯು ನರೇಂದ್ರ ಮೋದಿ ಅವರನ್ನು ತಮ್ಮ ಸದೃಢ ನಾಯಕರನ್ನಾಗಿ ಬಿಂಬಿಸಿತಲ್ಲದೇ, ದೇಶವನ್ನು ಮುನ್ನಡೆಸಲು ಇವರೇ ಸೂಕ್ತರು ಎಂದು ಪ್ರಚಾರ ಮಾಡಿತು. ಈ ಅವಧಿಯಲ್ಲಾದ ಒಟ್ಟು ಬೆಳವಣಿಗೆಗಳು ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷ ಗಳ ವಿರುದ್ಧ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದವು. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಖಂಡಿತ ಸೋಲುತ್ತದೆ ಎಂದು ಎಲ್ಲರೂ ಉಹಿಸಿದ್ದರು. ಆದರೆ, ತೀರಾ ಡಬಲ್‌ ಡಿಜಿಟ್‌ಗೆ ಕುಸಿಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅಂತಿಮವಾಗಿ ಫಲಿತಾಂಶ ಹೊರ ಬಿದ್ದಾಗ ಕಾಂಗ್ರೆಸ್‌ 44 ಸ್ಥಾನಗಳನ್ನು ಪಡೆದ ಹೀನಾಯ ಸೋಲು ಕಂಡಿತು. ಮತ್ತೊಂದೆಡೆ ಬಿಜೆಪಿ ಏಕಾಂಗಿಯೇ 282 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಜಯ ಸಾಧಿಸಿತು. ಕಪ್ಪು ಹಣದ ವಿರುದ್ಧ ಸಮರ ಸಾರುವ ಭರವಸೆ ನೀಡಿದ್ದ ಮೋದಿ ಅವರು ಪ್ರಧಾನಿಯಾದರು. ವಾಜಪೇಯಿ ಬಳಿಕ ಪ್ರಧಾನಿಯಾದ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆ ಅವರದ್ದಾಯಿತು. ಈ ಚುನಾವಣೆಯಲ್ಲಿ ಎನ್‌ಡಿಎ ಒಟ್ಟು 336 ಸ್ಥಾನಗಳನ್ನು ಗೆದ್ದರೆ, ಯುಪಿಎ ಗೆದ್ದಿದ್ದು ಕೇವಲ 60 ಸ್ಥಾನ ಮಾತ್ರ. ಅಧಿಕೃತ ಪ್ರತಿಪಕ್ಷ ನಾಯಕ ಇರಲಿಲ್ಲ ಎಂಬುದು 16ನೇ ಲೋಕಸಭೆಯ ವಿಶೇಷ. ಅಧಿಕೃತ ಪ್ರತಿಪಕ್ಷ ವಾಗಬೇಕಿದ್ದರೆ 545 ಸ್ಥಾನಗಳ ಪೈಕಿ ಕನಿಷ್ಠ 55 ಸ್ಥಾನಗಳನ್ನು ಗೆಲ್ಲಬೇಕು. ಆದರೆ, ಯಾವ ಪಕ್ಷ ಕ್ಕೂ ಅಷ್ಟು ಸ್ಥಾನಗಳನ್ನು ಗೆಲ್ಲಲಿಲ್ಲ. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ ಲೋಕಸಭೆಯಲ್ಲಿ ತನ್ನ ನಾಯಕನನ್ನಾಗಿ ಆಯ್ಕೆ ಮಾಡಿತು. ಈಗ ಮತ್ತೆ ಬಿಜೆಪಿ, ಕಾಂಗ್ರೆಸ್‌ 2019ರ ಚುನಾವಣೆಗೆ ಸಜ್ಜಾಗಿವೆ. 
- ತಿಪ್ಪಾರ

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ಕಾಮೆಂಟ್‌ಗಳಿಲ್ಲ: