ಬುಧವಾರ, ನವೆಂಬರ್ 19, 2008

ಏನು ಬರೆಯಲಿ ಹೇಳು...?

ಬರೆಯಲು ಹೊರಟವನ
ಅಂತರಂಗವೆಲ್ಲ ಖಾಲಿಯಾದಾಗ
ಸುಟ್ಟು ಹೋದ ಕನಸುಗಳ
ವಾಸನೆ ಮೂಗಿಗೆ ಅಡರುತ್ತಿರುವಾಗ
ಬರೆಯುವದಾದರು ಹೇಗೆ ಹೇಳು..?
ಆಗುಂತಕಳಾಗಿ ಎದುರಾಗಿ, ಮರೆಯಾದೆ
ಮರೆಯಾಗುವ ಮುನ್ನ
ಮಾಸಲಾರದ ಬರೆ ಹಾಕಿದೆ
ಬರೆ ಇನ್ನು ಹಸಿ ಹಸಿಯಾಗಿರುವಾಗಲೇ
ಹಾಳೆಯ ಮೇಲೆ ಗೆರೆಯಾದ್ರೂ
ಹೇಗೆ ಮೊಡಿತು ಹೇಳು...?
ಬದುಕಿದ್ದು ಸತ್ತಂತಿರುವಾಗ
ಭಾವವಾಗುವ ಅಕ್ಷರಗಳಿಗೆ
ಜೀವವನ್ನಾದರೂ ಹೇಗೆ ತುಂಬಲಿ...?
ನಾ ಹಾಳಾಗುವ ಮುನ್ನ
ಒಮ್ಮೆ ನೀ ಹರಸು
ಎಂದೆಂದಿಗೂ ನಾ ನಿನ್ನ
ನೀ ನನ್ನ ನೋಡದಂತೆ

ಸೋಮವಾರ, ನವೆಂಬರ್ 17, 2008

ಮರೆಯೋದಲ್ಲ

ಮಳೆಗೆ ಅಳೋದು ಮಾತ್ರ ಗೊತ್ತು

ನಗೋದಲ್ಲ

ಸೂರ್ಯನಿಗೆ ಸುಡೋದು ಗೊತ್ತು

ಆರಿಸೋದಲ್ಲ

ಆದರೆ

ನನಗೆ ನಿನ್ನ ನೆನಪು

ಮಾಡಿಕೊಳ್ಳುದು ಗೊತ್ತು

ಮರೆಯೋದಲ್ಲ

- ಇದು ನನಗೆ ಇಷ್ಟವಾದ ಒಂದು ಶಾಯರಿಯ ಭಾವಾನುವಾದ

ಶನಿವಾರ, ಅಕ್ಟೋಬರ್ 18, 2008

ಅಲೆಗಳು ಏಳುತ್ತವೆ


ಶಾಯರಿಗಳಿಗೂ ಕೆಲವು
ಅಂದಾಜು ಇರತವೆ
ಕನಸುಗಳು ತೆರೆದ
ಕಣ್ಣುಗಳಲ್ಲೂ ಒಡಮೂಡುತ್ತವೆ
ದುಃಖದಲ್ಲಿ ಕಣ್ಣೀರು
ಬರಲೇಬೇಕೆನಿಲ್ಲ
ನಗುವ ನಯನಗಳಲ್ಲು
ಅಲೆಗಳು ಏಳುತ್ತವೆ
-------- ಇದು ಹಿಂದಿ ಶಾಯರಿಯ ಭಾವಾನುವಾದ.
ಇದು ಮನಸು ಕಾಡುವ ಶಾಯರಿ ಎಂಬ
ಭಾವನೆ ನನ್ನದು.. ನಿಮ್ಮದು ...?

ಭಾನುವಾರ, ಸೆಪ್ಟೆಂಬರ್ 28, 2008

ನಗಲು ಪ್ರಯತ್ನಿಸುತ್ತಿದ್ದೇನೆ

ಕತ್ತಲೆಯೇ ಬದುಕೆಂದು
ನಂಬಿದ ನಾನು ಈಗೀಗ
ನಗಲು ಪ್ರಯತ್ನಿಸುತ್ತಿದ್ದೇನೆ
ದುಃಖದ ಸಾಗರದಲ್ಲಿ ಕೈ
ಬಿಟ್ಟು ನೀ ಹಿಂತಿರುಗಿ ನೋಡದೆ
ಹೋದಾಗ ಸಾಯಬೇಕೆಂದು
ಕೊಂಡವನಿಗೆ ಅಲೆಗಳೇ
ಈಜು ಕಲಿಸಿ ದಡಕ್ಕೆ ಎಸೆದಿವೆ ನನ್ನನ್ನು.
----
ಈಗೀಗ ಪ್ರತಿ ಸೂರ್ಯನ ಹುಟ್ಟು
ಸಾವು ಕೂಡಾ ಆಸಕ್ತಿ ಹುಟ್ಟಿಸುತ್ತಿದೆ
ರಾತ್ರಿಯಲ್ಲಿ ಚಂದ್ರನ ತಣ್ಣನೆಯ
ಬೆಳಗು ಕೂಡಾ ಹೊಮ್ಮಿಸುತ್ತಿದೆ
ನೂರಾರು ಅರ್ಥ ನನ್ನೆದೆಯ
ಭಾವದೊಳಗೆ ಆದರೆ,
ಅಲ್ಲಿ ನೀನಿಲ್ಲವೆಂಬ
ಅರಿವು ಎಚ್ಚರವಾದಾಗ
ಮತ್ತೆ ಅದೇ ಕತ್ತಲೆ ಇಷ್ಟವಾಗುತ್ತದೆ
ಆದರೂ ಪಣತೊಟ್ಟಿದ್ದೇನೆ
ಕತ್ತಲೆಯನ್ನೇ ಹಿಂಜಿ
ಬೆಳಕನ್ನು ಪಡೆಯಬೇಕೆಂದು
ಆ ಬೆಳಕಲ್ಲಿ ಹೊಸ ಲೋಕ,
ಭಾವ, ಭಾಷೆ ಕಲಿಯಬೇಕೆಂಬ
ಹಂಬಲ ನನ್ನದು.

ಶನಿವಾರ, ಜುಲೈ 26, 2008

ಏನೋ ಆಗಿದೆ


ಏನೋ ಆಗಿದೆ
ನನಗಿಂದು
ಮುಂಗಾರು ಮೊದಲ
ಮಳೆ ಬಿದ್ದ ನೆಲದ
ಸುವಾಸನೆಯಂತೆ
ಹರಡಿದೆ ಮನವು
ಬರಿದಾಗಿದ್ದ ಭಾವಗಳು
ಮತ್ತೆ ಮೆಲ್ಲನೆ
ಚಿಗುರೊಡೆದಿವೆ
ಸೂರ್ಯನತ್ತ ಚಾಚಿ
ಮೊಗ್ಗಾಗಿ ಹೂ
ಬಿರಿಯಲು ಎದೆಯೊಳಗೆ
ಏನೋ ಉಲ್ಲಾಸ,
ಸಂಭ್ರಮದ ನರ್ತನ
ಕಾಣದ ಹೃದಯವ
ಕಾಣಲು ಕಾತರಿಸಿವೆ
ಕಣ್ಣಗಳೆರಡು
ಮುಗಿಲಾಚೆ ಮಲಗಿ
ಭೂ ಅಂಚಿನಲ್ಲಿ
ಅಸ್ತಂಗತವಾಗಲು
ಗರಿಗೆದರಿವೆ ಬಯಕೆಗಳು

ಶನಿವಾರ, ಜುಲೈ 19, 2008

ನೋವು


ಪ್ರಿತಿಸಿದವರನ್ನು
ಮಿಸ್
ಮಾಡಿಕೊಳ್ಳುವುದು
ಈ ಜಗತ್ತಿನಲ್ಲಿಯೇ
ಅತಿ ದೂಡ್ಡ
ನೋವು
ಆದರೆ,
ಇದಕಿಂತಲೂ
ದೂಡ್ಡ ನೋವು
ಎಂದರೆ,
ನಾವು ಯಾರನ್ನು
ಮಿಸ್
ಮಾಡಿಕೊಳ್ಳುತ್ತೇವೆ
ಅವರು ನಮ್ಮ
ಬಗ್ಗೆ ಒಂದು
ಕ್ಷಣವೂ
ಯೋಚಿಸದಿರುವುದು !

ಭಾನುವಾರ, ಜುಲೈ 13, 2008

ಬಾ(ಬ)ಲ ಭೀಮ








ನನ್ನ ಮೇಲ್ ಬಾಕ್ಸಿಗೆ ಒಂದು ಮೇಲ್ ಬಂದಿತ್ತು. ೨೦ ಕೆ.ಜಿ. ಬಾಲಕ ಎಂಬ ಒಕ್ಕಣಿಕೆ ಇತ್ತು ಅದರಲ್ಲಿ. ಒಳಗೆ ಬಾಲಕನ ಕೆಲವು ಫೋಟೋಗಳು ಇದ್ದವು . ನೋಡಲು ಏನೋ ಖುಷಿ ಅನ್ನಿಸಿತು. ನೀವು ನೋಡಿ ಖುಷಿ ಪಡಬಹುದು ಅಂತ ಬ್ಲಾಗಲ್ಲಿ ಪೋಸ್ಟ್ ಮಾಡತಿದಿನಿ.... ನಿಮಗೂ ಖುಷಿ ಆದ್ರೆ ಎರಡು ಲೈನ್ ಬರೆಯಿರಿ...

ಶುಕ್ರವಾರ, ಮೇ 23, 2008

ಸುರಿ ಮಳೆಯೇ ಸುರಿ


ಸುರಿ ಮಳೆಯೇ ಸುರಿ
ಮೈಗಂಟಿದ ಅವಳ
ಕಂಪು ತೊಳೆಯೋವರೆಗೂ
ನೆನಪುಗಳು ಮಾಸೋವರೆಗೂ
ಎಡಬಿಡದೆ ಸುರಿ... ಹರಿ...

ನಿನ್ನ ಹನಿಗಳನ್ನೇ
ಮುತ್ತುಗಳನ್ನಾಗಿ ಧಾರೆ
ಎರೆದೆ ಅವಳಿಗೆ
ಕನ್ನಿರೋರೆಸುವ ಕೈಗಳಾದೆ
ಹೃದಯ ಒಡೆದ ಮಾರಿಯಾದಳವಳು
ಸುರಿ ಮಳೆಯೇ ಸುರಿ... ಹರಿ...

ನನ್ನ ನೆರಳಾಗಿರುವೆಯೆಂದು
ಆಣೆ ಮಾಡಿದ್ದು ಈ ಮಳೆಯಲ್ಲೇ
ಮುರಿದಿದ್ದು ಇದೇ ಮಳೆಯಲ್ಲೇ
ನನ್ನ ಕನ್ನೀರಿಗೂ, ನಿನ್ನ
ಹನಿಗಳಿಗೂ ವ್ಯತ್ಯಾಸವೇ ಇಲ್ಲ
ಸುರಿ ಮಳೆಯೇ ಸುರಿ.. ಹರಿ..

ಶನಿವಾರ, ಏಪ್ರಿಲ್ 12, 2008

ದೂರ ನಿಲ್ಲಿ ಕವನಗಳೇ ..


ಸಾಕಾಗಿದೆ ಕವನಗಳ
ಸಹವಾಸ, ಹೂತ್ತುಗೂತ್ತಿಲ್ಲದೆ
ದಿಗ್ಗನೇ ಎದ್ದು ನಿಲ್ಲುವ ಭಾವಗಳಿಗೆ
ಅಕ್ಷರ ಅಂಗಿ ತೊಡಿಸುವ
ಪದಗಳೇ ದೂರ ನಿಲ್ಲಿ.

ಕಲ್ಪನೆ, ಕೌತುಕ ,
ಕಾಮವಾಂಛೆ ಮೀರಿ
ನಿಲ್ಲಲು ಸೆಣಿಸುತ್ತಿದ್ದೇನೆ
ಅಡ್ಡ ಬಂದು ಸೆಡ್ಡು
ಹೊಡೆಯಬೇಡಿ, ಪದಗಳ
ಬೇಡಿಯೊಳಗೆ ಬಂಧಿಯಾಗಲು
ನನಗಿಷ್ಟವಿಲ್ಲ

ಕನಸು, ಕನವರಿಕೆ
ನೀಗಲೆಂದೇ ದೂರ
ಹೋಗಿ ಎಂಬ ನಿವೇದನೆ
ನಿಮಗೆ, ಅದು ಹಮ್ಮು
ಎಂದರೆ ನಾನಲ್ಲ ಹೂಣೆ

ಆಕಾಶದ ಆಚೆ ಹಾರಿ
ಭೂ ಲೋಕವೆಲ್ಲಾ ತೂರಿ
ಸ್ವತಂತ್ರ, ಸ್ವೇಚ್ಚೆಯಡಿ
ಸಾಗುವ ಹುಮ್ಮಸ್ಸು ನನಗೆ
ತೊದರಗಾಲು ಹಾಕಬೇಡಿ
ದೂರ ನಿಲ್ಲಿ ಕವನಗಳೇ ....

ಶುಕ್ರವಾರ, ಫೆಬ್ರವರಿ 22, 2008

ಕಾಡ್ತಿ ಯಾಕ...?

ನೀನಿಲ್ಲದ ಈ ಮನಸ್ಸು
ಮಾಗಿ ಕಾಲದ ಎಲೆ
ಉದುರಿಸಿದ ಗಿಡದಂಗಾಗೇತಿ

ಮನಸ್ಸಿನ್ಯಾಗಿನ ಮಾತು
ಹೊರಗ ಬರದ ಗಂಟಲೋಳಗ
ಕೂತು, ತಕರಾರು ಮಾಡೈತಿ

ನೆನಪಿನ ಮರದೊಳಗ
ಕೇರೀದಸ್ಟು ನಿನ್ನ
ಸಂಗಡದ ಆ ಗಳಿಗೆಗಳು
ಮತ್ತ ಹೊಳ್ಳಿ ಹೊಳ್ಳಿ ಬರ್ತಾವ

ಕೇರೀದಾಗ ತೂರಿ ಹೋದ
ಜೋಳ್ಳ ನೆನಪುಗಳೆಲ್ಲಾ ನಂದು
ಉಳಿದ ಗಟ್ಟಿ ಮಾತೆಲ್ಲಾ ನಿಂದು

ಮರೀಬೇಕಂತ ಮನಸ್ಸಿನ್ಯಾಗಿನ
ಮಾತು ಹೊರ ಬಿಟ್ಟಿಲ್ಲ
ಆದ್ರೂ ನೀ ಯಾಕ್ ಹಂಗ ಕಾಡ್ತಿ...?

ಶುಕ್ರವಾರ, ಜನವರಿ 25, 2008

ನಾವೇ ಇಲ್ಲಾಗುವಾ...


ನನ್ನೊಳಗಿನ
ಭಾವನೆಗಳಿಗೆ
ಹಚ್ಚಬೇಕಿದೆ ಬಣ್ಣ,
ಹಸಿರಾಗುವ
ನೆಪದಲ್ಲಿ ಕೊಸರಾಡುವ
ಕನಸುಗಳಿಗೆ
ಕಟ್ಟಬೇಕಿದೆ ಬೇಲಿ.

ಹಾರಬೇಕಿದೆ
ಮುಗಿಲೇತ್ತರಕ್ಕೆ
ಎಲ್ಲ ನಿಯಮ ಮೀರಿ
ಗೆಲ್ಲಬೇಕಿದೆ ವೈರಿಯೇ
ಇಲ್ಲದ ಯುದ್ಧ.
ತಲುಪಬೇಕಿದೆ
ಗುರಿಯೇ ಇಲ್ಲದ ಗಮ್ಯಕ್ಕೆ

ಬಾ ಜತೆಯಾಗು ಬಾ
ಹೀಗೆ ಇಲ್ಲಗಳ ಜತೆ
ಸಾಗುವಾ, ಅಮೂತ೯ಗಳ
ಜತೆ ನಡೆಯುವಾ
ಕೊನೆಗೊಂದು ದಿನ
ನಾವೇ ಇಲ್ಲಾಗುವಾ...