ಮಂಗಳವಾರ, ಮಾರ್ಚ್ 5, 2019

ಬಹುಜನರ ಅಭ್ಯುದಯ ಬಿಎಸ್ಪಿಯ ಧ್ಯೇಯ

ಹುಜನ ಸಮಾಜ ಪಾರ್ಟಿ(ಬಿಎಸ್‌ಪಿ)ಗೆ ರಾಷ್ಟ್ರೀಯ ಪಕ್ಷ ದ ಮಾನ್ಯತೆ ಇದ್ದರೂ ಉತ್ತರ ಪ್ರದೇಶದಲ್ಲೆ ಹೆಚ್ಚು ಅಸ್ತಿತ್ವವನ್ನು ಹೊಂದಿದೆ. ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಂದರ್ಭ ಎದುರಾದಗಲೆಲ್ಲ ಅದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ದೇಶದ ತಳಮಟ್ಟದ ಸಮುದಾಯ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕಾನ್ಶಿ ರಾಮ್‌ ಅವರು 1984ರಲ್ಲಿ ಬಿಎಸ್‌ಪಿಯನ್ನು ಹುಟ್ಟು ಹಾಕಿದರು. ಬಹುಜನ ಅಂದರೆ ಬಹುಸಂಖ್ಯಾತರು ಎಂದರ್ಥ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರನ್ನು 'ಬಹುಜನ' ವ್ಯಾಪ್ತಿಯೊಳಗೆ ಸೇರಿದೆ. ಈ ವರ್ಗದ ಜನರ ಸಾಮಾಜಿಕ ಬದಲಾವಣೆ ಮತ್ತು ಆರ್ಥಿಕ ವಿಮೋಚನೆಯ ಬಿಎಸ್‌ಪಿ ಗುರಿ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಒಂದೂ ಸೀಟು ಗೆಲ್ಲದಿದ್ದರೂ ಮತಗಳಿಕೆಯ ಪ್ರಮಾಣದಲ್ಲಿ ದೇಶದ ಮೂರನೇ ಅತಿದೊಡ್ಡ ಪಕ್ಷ ವಾಗಿ ಹೊರಹೊಮ್ಮಿತ್ತು. ಜ್ಯೋತಿರಾವ್‌ ಫುಲೆ, ಅಂಬೇಡ್ಕರ್‌, ನಾರಾಯಣಗುರು, ಪೆರಿಯಾರ್‌ ಇ ವಿ ರಾಮಸ್ವಾಮಿ, ಛತ್ರಪತಿ ಶಾಹುಜಿ ಮಹಾರಾಜ ಅವರ ಸಿದ್ಧಾವಂತನ್ನು ಬಿಎಸ್‌ಪಿ ತನ್ನ ವಿಚಾಧಾರೆಯನ್ನಾಗಿಸಿಕೊಂಡಿದೆ. ಕಾನ್ಶಿ ರಾಮ್‌ ಅವರು ಬಿಎಸ್‌ಪಿಯನ್ನು ಬಹುಜನರ ಪಕ್ಷ ವಾಗಿ ರೂಪಿಸುವಲ್ಲಿ ಮಹತ್ತರ ಕಾಣಿಕೆಯನ್ನು ನೀಡಿದರು. ನಂತರ ಅವರು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಯಾವತಿಯನ್ನು 2001ರಲ್ಲಿ ನೇಮಕ ಮಾಡಿದರು. 2017ರ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಶೇ.22ರಷ್ಟು ಮತದೊಂದಿಗೆ 19 ಸ್ಥಾನಗಳನ್ನು ಗೆದ್ದಿತ್ತು. ಬಿಎಸ್‌ಪಿಗೆ ಪ್ರತ್ಯೇಕವಾದ ವಿದ್ಯಾರ್ಥಿ ವಿಭಾಗವಿಲ್ಲ. ಮಾಯಾವತಿಅವರು ಬಿಎಸ್‌ಪಿ ಸದ್ಯದ ವರ್ಚಸ್ವಿ ನಾಯಕಿ. ಮಾಯಾವತಿ ನಾಲ್ಕು ಬಾರಿ(1995, 1997 ಮತ್ತು 2000 - 2003, 2007-2012) ಬಿಎಸ್‌ಪಿಯನ್ನು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿ, ಮುಖ್ಯಮಂತ್ರಿಯೂ ಆದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರು ಮಾಯಾವತಿ ಬೆಳವಣಿಗೆಯನ್ನು 'ಮಿರಾಕಲ್‌ ಆಫ್‌ ಡೆಮಾಕ್ರಷಿ'(ಪ್ರಜಾಪ್ರಭುತ್ವದ ಪವಾಡ) ಎಂದು ಬಣ್ಣಿಸಿದ್ದರು. ತಮ್ಮ ಕಾರ್ಯಕರ್ತರಿಂದ ಬೇಹನ್‌ಜೀ ಎಂದು ಕರೆಯಿಸಿಕೊಳ್ಳುವ ಮಾಯಾವತಿ ಪ್ರಧಾನಿ ಹುದ್ದೆ ಆಕಾಂಕ್ಷಿಯೂ ಹೌದು. ಪ್ರಸಕ್ತ ಚುನಾವಣೆಯಲ್ಲಿ ಅವರು ಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿದೆ. ಆನೆಯು ಬಿಎಸ್‌ಪಿಯ ಚುನಾವಣಾ ಗುರುತು. 

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ

ಕಾಮೆಂಟ್‌ಗಳಿಲ್ಲ: