ಸೋಮವಾರ, ಅಕ್ಟೋಬರ್ 3, 2016

ಪುಟಿನ್: ಎದೆಗಾರಿಕೆಯ ನಾಯಕ

- ಅಂದಿನ ರಷ್ಯಾದ ಅಧ್ಯಕ್ಷ  ಬೋರಿಸ್ ಎಲ್ಸಿನ್ ಅವರು ಪುಟಿನ್‌ರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಳ್ಳುವವರೆಗೂ ಪುಟಿನ್ ಹೊರ ಪ್ರಪಂಚಕ್ಕೆ ಅಷ್ಟೇನೂ ಗೊತ್ತಿರದ ವ್ಯಕ್ತಿಯೇ ಆಗಿದ್ದರು. -

The party of power is in power again.
ಇತ್ತೀಚೆಗಷ್ಟೇ ರಷ್ಯಾದ ಡುಮಾ(ಸಂಸತ್ತು)ಗೆ ನಡೆದ ಚುನಾವಣೆಯಲ್ಲಿ ರಷ್ಯಾಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬೆಂಬಲಿತ ‘ಯುನೈಟೆಡ್ ರಷ್ಯಾ ಪಾರ್ಟಿ’ ಜಯಶಾಲಿಯಾದಾಗ ಅಲ್ಲಿನ ಪ್ರಮುಖ ಪತ್ರಿಕೆಯೊಂದು ತನ್ನ ಸಂಪಾದಕೀಯಕ್ಕೆ ಕೊಟ್ಟ ತಲೆಬರಹ ಇದು.
  ಕಳೆದ 17 ವರ್ಷಗಳಿಂದ ಪ್ರಧಾನಿಯಾಗಿ ಇಲ್ಲವೇ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಪುಟಿನ್ ಅವರಿಗೆ ಈ ಚುನಾವಣೆ ಹಿಂದಿನ ಚುನಾವಣೆಗಳಂತೆ ಸರಳವಾಗಿರಲಿಲ್ಲ. ಸಿರಿಯಾದಲ್ಲಿನ ಯುದ್ಧ, ಉಕ್ರೇನ್ ಸಂಘರ್ಷಗಳು, ಅಂತಾರಾಷ್ಟ್ರೀಯ ಸಂಬಂಧದಲ್ಲಿ ಬಿರುಕು, ತೈಲ ಬೆಲೆ ಇಳಿಕೆ ಸೇರಿದಂತೆ ಸಮಸ್ಯೆಗಳು ಮುಕುರಿಕೊಂಡಿದ್ದವು. ರಷ್ಯಾದೊಳಗೇ ಒಂದು ರೀತಿಯಲ್ಲಿ ಪುಟಿನ್ ವಿರೋಧಿ ಅಲೆಯನ್ನು ಇವು ಸೃಷ್ಟಿಸಿದ್ದವು. ಇದರ ಹೊರತಾಗಿಯೂ ಪುಟಿನ್ ಅವರ ಜನಬೆಂಬಲ ಗಳಿಸಲು ಸಾಧ್ಯವಾಗಿದ್ದು ಹೇಗೆ ಎಂದು ರಾಜಕೀಯ ವಿಶ್ಲೇಷಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ, ರಷ್ಯಾದ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ. ಇದರ್ಥ ಈ ಬಾರಿ ಪುಟಿನ್ ಬೆಂಬಲಿತ ಯುನೈಟೆಡ್ ರಷ್ಯಾ ಪಾರ್ಟಿ ಮಣ್ಣುಮುಕ್ಕಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಚುನಾವಣೆಯಲ್ಲಿ ಶೇ.47.8ರಷ್ಟು ಮಾತ್ರ ಮತದಾನವಾಗಿದೆ. ಈ ಪೈಕಿ ರಷ್ಯಾ ಯುನೈಟೆಡ್ ಪಾರ್ಟಿ ಶೇ.45.2ರಷ್ಟು ಮತಗಳನ್ನು ಪಡೆದಿದೆ. ಅಂದರೆ, ಒಟ್ಟು 450 ಸ್ಥಾನಗಳ ಪೈಕಿ 343 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ, ದಿ ಕಮ್ಯುನಿಸ್ಟ್ ಪಾರ್ಟಿ ಮತ್ತು ರಾಷ್ಟ್ರೀಯವಾದಿ ಎಲ್‌ಡಿಪಿಆರ್ ಶೇ.13ರಷ್ಟು ಮತಪಡೆಯಲಷ್ಟೇ ಶಕ್ಯವಾಗಿವೆ.
 
ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಇಷ್ಟೊಂದು ಪ್ರಮಾಣದಲ್ಲಿ ಗೆಲವು ಸಾಧ್ಯವಾಗಿದ್ದು ಹೇಗೆ ? ಇದಕ್ಕೆಲ್ಲ ಉತ್ತರ ವ್ಲಾದಿಮಿರ್ ಪುಟಿನ್ ಅವರ ವ್ಯಕ್ತಿತ್ವ ಮತ್ತು ನಾಯಕತ್ವ. ಇಡೀ ಜಗತ್ತಿಗೆ ದೊಡ್ಡಣ್ಣನಂತೆ ಪೋಸು ಕೊಡುವ ಅಮೆರಿಕಕ್ಕೆ ಸರಿಸಮಾನವಾಗಿ ನಿಂತು ಮಾತನಾಡುವ ಇಲ್ಲವೇ ಅದರ ನೀತಿಗಳನ್ನು ಯಾವುದೇ ಹಿಂಜರಿಕೆ ಇಲ್ಲದೇ ಖಂಡಿಸಿ, ಅದಕ್ಕೊಂದು ಅಂತಾರಾಷ್ಟ್ರೀಯ ಒಮ್ಮತಾಭಿಪ್ರಾಯವನ್ನು ಕ್ರೋಡೀಕರಿಸುವ ಸಾಮರ್ಥ್ಯವಿರುವುದು ಪುಟಿನ್ ಅವರಿಗೆ ಮಾತ್ರ. ಇದಕ್ಕೆ ಪುಷ್ಟಿಕರಣ ಬೇಕಿದ್ದರೆ; 2015ರ ‘ಟೈಮ್ ಮ್ಯಾಗಜಿನ್’ ಪ್ರಕಟಿಸಿದ ಮೋಸ್ಟ್ ಇನ್‌ಫ್ಲ್ಯೂಯಿನ್ಸ್ ಪೀಪಲ್ ಪಟ್ಟಿಯಲ್ಲಿ ಪುಟಿನ್‌ಗೆ ಅಗ್ರಸ್ಥಾನವಿತ್ತು. 2013, 2014 ಮತ್ತು 2015ರ ಸಾಲಿನಲ್ಲಿ ‘ಫೋರ್ಬ್ಸ್’ ಪಟ್ಟಿ ಪ್ರಕಟಿಸಿದ ‘ಮೋಸ್ಟ್ ಪವರ್ ಫುಲ್’ ಪಟ್ಟಿಯಲ್ಲಿ ಇವರೇ ಮೊದಲಿಗರಾಗಿದ್ದರು. ಅಂದರೆ, ಅವರ ಸಾಮರ್ಥ್ಯದ ಬಗ್ಗೆ ಜಗತ್ತಿಗಿದ್ದ ಭರವಸೆಯ ಪ್ರತೀಕವಿದು. ಹಾಗಂತ, ಪುಟಿನ್ ವ್ಯಕ್ತಿತ್ವದಲ್ಲೇನೂ ಕಪ್ಪುಚುಕ್ಕೆಗಳೇ ಇಲ್ಲ ಎಂದು ಹೇಳಿದರೆ ಮೂರ್ಖತನವಾಗುತ್ತದೆ; ಅವರ ಮೇಲೂ ಆರೋಪಗಳಿವೆ. ಕಳೆದ ಏಪ್ರಿಲ್‌ನಲ್ಲಿ ‘ಪನಾಮಾ ಪೇಪರ್ಸ್’ ಹೊರಗೆಡುವಿದ ಮಾಹಿತಿಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ಇದೇ ಪುಟಿನ್ ಅವರ ಹೆಸರು.  ಇವರ ಸಮೀಪವರ್ತಿಗಳು ಶತಕೋಟಿ ಡಾಲರ್ ಹಣವನ್ನು ವಿದೇಶಗಳಲ್ಲಿ ಹುಸಿ ಕಂಪನಿಗಳ ಹೆಸರಲ್ಲಿ ತೊಡಗಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಪನಾಮಾ ಪೇಪರ್ಸ್‌ನಿಂದ ಇಡೀ ಜಗತ್ತಿಗೆ ಗೊತ್ತಾಯಿತು. ಕಂಪನಿಗಳ ಹೆಸರಲ್ಲಿ ವಿದೇಶದಲ್ಲಿ ಹಣ ತೊಡಗಿಸುವುದು ಕಾನೂನು ಪ್ರಕಾರ ನ್ಯಾಯವೇ ಅಥವಾ ಅಲ್ಲವೇ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳೇ ಇಂಥ ಕೃತ್ಯಕ್ಕೆ ಇಳಿಯುವುದು ನೈತಿಕವಾಗಿಯೂ ಅಧಃಪತನದ ಮುನ್ಸೂಚನೆ†. ಈ ಪನಾಮಾ ಪೇಪರ್ಸ್‌ನಿಂದ ಭಾರತದ ಕೆಲವು ಗಣ್ಯವ್ಯಕ್ತಿಗಳ ವ್ಯಕ್ತಿತ್ವ ಕೂಡ  ಒರೆಗಲ್ಲಿಗೆ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಪುಟಿನ್ 1952 ಅಕ್ಟೋಬರ್ 7ರಂದು ಜನಿಸಿದರು. ಇವರ ತಂದೆ ವ್ಲಾದಿಮಿರ್ ಸ್ಪಿರಿಡೊನೊವಿಚ್ ಪುಟಿನ್ ರಷ್ಯಾದ ಸಬ್‌ಮರಿನ್‌ನವೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಮಾರಿಯಾ ಪುಟಿನಾ ಅವರು ಫ್ಯಾಕ್ಟರಿ ಕೆಲಸಗಾರ್ತಿ. ಬಾಸ್ಕೊಲೇನ್‌ನಲ್ಲಿ ಶಾಲಾ ಅಧ್ಯಯನ ಆರಂಭಿಸಿದ ಪುಟಿನ್, 12 ವಯಸ್ಸಿಗೆ ಬರುವಷ್ಟರಲ್ಲಿ ಜುಡೋ, ಸಾಂಬೋದಲ್ಲಿ ಪ್ರಾವೀಣ್ಯತೆ ಸಾಧಿಸಿದ್ದರು. ಸೇಂಟ್ ಪೀಟರ್ಸ್‌ಬರ್ಗ್ ಹೈಸ್ಕೂಲಿನಲ್ಲಿದ್ದಾಗ ಜರ್ಮನ್ ಕಲಿತರು. 1970ರಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಯುನಿರ್ವಸಿಟಿ ಸೇರಿದ ಪುಟಿನ್ 19975ರಲ್ಲಿ ಕಾನೂನು ಪದವೀಧರರಾಗಿ ಹೊರ ಬಂದರು. 1983ರಲ್ಲಿ ಲುಡ್ಲುಮಿಲಾ ಅವರನ್ನು ವಿವಾಹವಾದರು. ಇಬ್ಬರು ಮಕ್ಕಳಿದ್ದಾರೆ. ಆದರೆ, 2014ರಲ್ಲಿ ಪುಟಿನ್‌ರಿಂದ ಲುಡ್ಲುಮಿಲಾ ವಿಚ್ಚೇದನ ಪಡೆದಿದ್ದಾರೆ.
  ಪುಟಿನ್ ಅವರು ಜರ್ಮನಿ ಕಲಿತಿರುವುದು ಅವರಿಗೆ ಉದ್ಯೋಗವನ್ನು ತಂದುಕೊಟ್ಟಿತು ಎಂದು ಹೇಳಬಹುದು. ಜರ್ಮನಿ ಮಾತನಾಡುತ್ತಿರುವುದರಿಂದಲೇ ಅವರು ರಷ್ಯಾದ ಕೆಜಿಬಿ ಸೀಕ್ರೆಟ್ ಪೊಲೀಸ್ ಸೇವೆಗೆ ಸೇರ್ಪಡೆಗೊಳ್ಳುವಂತಾಯಿತು. ಕೆಜಿಬಿಯಲ್ಲಿ 16 ವರ್ಷ ಸೇವೆ ಸಲ್ಲಿಸಿದ ಅವರು ಲೆಫ್ಟಿನೆಂಟ್ ಕರ್ನಲ್‌ವರೆಗೂ ಬಡ್ತಿ ಪಡೆದರು. ಆದರೆ, 1991ರಲ್ಲಿ ಸೇವೆಯಿಂದ ಬಿಡುಗಡೆಗೊಂಡು ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. 1999ರಲ್ಲಿ  ಅಂದಿನ ರಷ್ಯಾದ ಅಧ್ಯಕ್ಷ  ಬೋರಿಸ್ ಎಲ್ಸಿನ್ ಅವರು ಪುಟಿನ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಳ್ಳುವವರೆಗೂ ಪುಟಿನ್ ಹೊರ ಪ್ರಪಂಚಕ್ಕೆ ಅಷ್ಟೇನೂ ಗೊತ್ತಿರದ ವ್ಯಕ್ತಿಯೇ ಆಗಿದ್ದರು. 1999ರಿಂದ 2000ವರೆಗೆ ರಷ್ಯಾದ ಪ್ರಧಾನಿಯಾಗಿದ್ದರು. 2000ರಿಂದ 2008ವರೆಗ ಅಧ್ಯಕ್ಷರಾಗಿದ್ದರು. 2008ರಿಂದ 2012ವರೆಗೆ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಅವರು ಆಡಳಿತಾರೂಢ ಯುನೈಟೆಡ್ ರಷ್ಯಾ ಪಕ್ಷದ ಅಧ್ಯಕ್ಷರೂ ಆಗಿ ಕೆಲಸ ಮಾಡಿದ್ದಾರೆ. ಮತ್ತೆ 2012 ಮೇ 7ರಂದು ರಷ್ಯಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2018ರ ಮಾರ್ಚ್‌ನಲ್ಲೇ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಒಂದು ವೇಳೆ ಪುಟಿನ್ ಅವರು ಮತ್ತೆ ಆಯ್ಕೆ ಮುಂದಾದರೆ ಅವರು ಗೆಲವು ಸರಳವಾಗಲಿದೆ ಎಂಬುದನ್ನು ಮೊನ್ನೆಯಷ್ಟೇ ಡುಮಾಗೆ ನಡೆದ ಚುನಾವಣೆ ಸಾಕ್ಷೀಕರಿಸಿದೆ.
  ಭಾರತ ಮತ್ತು ರಷ್ಯಾ ನಡುವಿನ ಸಂಬಂಧಕ್ಕೆ ಬಹುದೊಡ್ಡ ಇತಿಹಾಸವಿದೆ. ಭಾರತದ ಸರಳ ಸ್ನೇಹಿತ ರಾಷ್ಟ್ರ ಎಂದೇ ರಷ್ಯಾವನ್ನು ಕರೆಯಲಾಗುತ್ತದೆ. ಶೀತಲ ಸಮರ ಕಾಲದಿಂದಲೂ ಅಂಥದೊಂದು ಬಂಧನ ಎರಡೂ ರಾಷ್ಟ್ರಗಳ ಮಧ್ಯೆ ಇದೆ. ಈ ಸಂಬಂಧ ಪುಟಿನ್ ಆಡಳಿತಾವಧಿಯಲ್ಲೂ ಹಾಗೆಯೇ ಮುಂದುವರಿದಿದೆ. ಆದರೆ, ಇತ್ತೀಚಿಗೆ ಭಾರತದ ವಿದೇಶಾಂಗ ನೀತಿಗಳಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ರಷ್ಯಾ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದೆ ಎಂದು ವಿದೇಶಾಂಗ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಇದಕ್ಕೆ ಅವರು ಪಾಕಿಸ್ತಾನದ ಜತೆಗೆ ರಷ್ಯಾ ನಡೆಸುತ್ತಿರುವ ಸೇನಾ ಸಮರಾಭ್ಯಾಸವನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ. ಭಾರತ ಒಂದೆಡೆ ಅತಿಯಾಗಿ ಅಮೆರಿಕವನ್ನು ಅಪ್ಪಿಕೊಳ್ಳುತ್ತಿರುವುದು ಕೂಡ ಪುಟಿನ್ ಅವರ ನಡೆಗೆ ಕಾರಣವಾಗಿರಬಹುದು.
  ಮೇಲ್ನೋಟಕ್ಕೆ ಮೃದು ಮನಸ್ಸಿರುವಂತೆ ಕಂಡರೂ ಪುಟಿನ್ ಅಂತರಾಳದಲ್ಲಿ ಅತ್ಯಂತ ಗಟ್ಟಿ ಇರುವ ವ್ಯಕ್ತಿ. ಕಠಿಣ ನಿರ್ಣಯ ಕೈಗೊಳ್ಳುವ ಸಂದರ್ಭಗಳಲ್ಲಿ ಅವರು ಅಂಥ ಗಟ್ಟಿತನವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಸಿರಿಯಾದ ಮೇಲಿನ ದಾಳಿಯನ್ನು ಉದಾಹರಣೆಯಾಗಿ ನೀಡಬಹುದು. ರಷ್ಯಾದ ದಾಳಿಯನ್ನು ಅಮೆರಿಕ ಎಷ್ಟೇ ವಿರೋಧಿಸಿದರೂ ಪುಟಿನ್ ಕ್ಯಾರೇ ಎನ್ನದೇ ತಾವು ಅಂದುಕೊಂಡಿದ್ದನ್ನು ಮಾಡಿಯೇ ಬಿಟ್ಟರು. ಅಂದರೆ, ಪುಟಿನ್ ಎಂಥದ್ದೇ ಸಂದರ್ಭದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬುದು ವೇದ್ಯವಾಗುತ್ತದೆ.
   ಜುಡೋ ಸಮರ ಕಲೆಯಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದಿರುವ ಪುಟಿನ್ ಎದೆಗಾರಿಕೆಯಳ್ಳ ನಾಯಕ ಎನ್ನುವುದರಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಕುದುರೆ ಸವಾರಿ, ಸ್ಕೂಬಾ ಡೈವಿಂಗ್ ಕೂಡ ಮಾಡಬಲ್ಲರು. ಹೆಲ್ಸ್ ಏಂಜಿಲ್ ಮೋಟಾರ್‌ಸೈಕಲ್ ಕ್ಲಬ್‌ನ ಗೌರವ ಸದಸ್ಯರೂ ಆಗಿರುವ ಪುಟಿನ್, ಫಾರ್ಮುಲಾ ಒನ್ ರೇಸ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಸದಾ ರಾಜಕೀಯ ಜಂಜಾಟದ ನಡುವೆಯೂ ಫಿಶಿಂಗ್‌ಗೆ ಸಮಯ ಹೊಂದಿಸಿಕೊಳ್ಳಬಲ್ಲರು. ಶೀತಲ ಸಮರದಂಥ ಪರಿಸ್ಥಿತಿ ಈಗಿಲ್ಲ ಎನ್ನುವುದು ಖರೆ. ಆದರೆ, ಅಂಥ ಸಂದರ್ಭ ಎದುರಾದರೆ ಇಡೀ ಜಗತ್ತನ್ನೇ ಧ್ರುವೀಕರಿಸಬಲ್ಲ ಛಾತಿ 63 ವರ್ಷ ವಯಸ್ಸಿನ ಪುಟಿನ್ ಅವರಿಗಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
- Mallikarjun Tippar


(ಇದು ವ್ಯಕ್ತಿಗತ ಅಂಕಣ. ವಿಕೆ ಸೆಪ್ಟೆಂಬರ್ 25ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)