ಗುರುವಾರ, ಆಗಸ್ಟ್ 27, 2020

What to do if your phone is hacked?: ಫೋನ್‌ ಹ್ಯಾಕ್‌ ಆಗಿದೆಯಾ? ನೀವೇ ಚೆಕ್‌ ಮಾಡಿಕೊಳ್ಳಿ

ಆ್ಯಂಡ್ರಾಯ್ಡ ಫೋನ್‌ಗಳು ಜನಪ್ರಿಯವಾಗುತ್ತಿರುವಂತೆ ಅವು ಹ್ಯಾಕರ್ಸ್‌ ಮತ್ತು ಸೈಬರ್‌ ಕ್ರಿಮಿನಲ್‌ಗಳ ನೆಚ್ಚಿನ ಫೋನ್‌ಗಳೂ ಆಗುತ್ತಿವೆ! ಈ ಖದೀಮರು ಬಳಕೆದಾರರನ್ನು ತಮ್ಮ ಖೆಡ್ಡಾಗೆ ಕೆಡವಿಕೊಳ್ಳಲು ಸದಾ ಕಾಯುತ್ತಿರುತ್ತಾರೆ, ಇದಕ್ಕಾಗಿ ಒಂದಿಲ್ಲಒಂದು ಹೊಸ ದಾರಿಯನ್ನು ಹುಡುಕುತ್ತಿರುತ್ತಾರೆ. ಮೊಬೈಲ್‌ ಬಳಕೆಯ ಜ್ಞಾನ ಕೊಂಚ ಕಡಿಮೆ ಇರುವ ಬಳಕೆದಾರರನ್ನು ಟಾರ್ಗೆಟ್‌ ಮಾಡುವ ಸೈಬರ್‌ ಕ್ರಿಮಿನಲ್‌ಗಳು, ಅನುಮಾನಾಸ್ಪದ ಆ್ಯಪ್‌ ಮತ್ತು ವೈರಸ್‌ ಇರುವ ಯುಆರ್‌ಎಲ್‌ ತೆರೆಯುವಂತೆ ಪ್ರೇರೇಪಿಸುತ್ತಾರೆ. ಜೊತೆಗೆ ಥರ್ಡ್‌ ಪಾರ್ಟಿ ಎಪಿಕೆ ಫೈಲ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ ಅನಗತ್ಯ ಜಾಹೀರಾತುಗಳು ಕಾಣಿಸಿಕೊಳ್ಳುತ್ತೇವೆ. ನಮ್ಮ ಸ್ಮಾರ್ಟ್‌ ಫೋನ್‌ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂಬುದನ್ನು ನಾವು ಗುರುತಿಸಿಕೊಳ್ಳಬಹುದು. ರೋಗದ ಗುಣ ಲಕ್ಷ ಣ ಕೇಳಿ ರೋಗ ನಿರ್ಧಾರ ಮಾಡುತ್ತಾರಲ್ಲಹಾಗೆ. ಹಾಗಿದ್ದರೆ, ನಮ್ಮ ಸ್ಮಾರ್ಟ್‌ ಫೋನ್‌ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನೀವಿಲ್ಲಿನೆನಪಿಡಬೇಕಾದ ಸಂಗತಿ ಏನೆಂದರೆ, ಹ್ಯಾಕಿಂಗ್‌ ಎಂದರೆ, ಅಪಾಯಕಾರಿ ಆ್ಯಪ್‌ಗಳು, ಮಾಲ್‌ವೇರ್‌, ಸ್ಪೈ ವೇರ್‌, ನಿಮ್ಮ ಬ್ಯಾಂಕಿಂಗ್‌ ಡೇಟಾ ಕದಿಯುವ ಪ್ರೋಗ್ರಾಮ…, ವೈರಸ್‌ ಇರುವ ಲಿಂಕ್‌ ಮತ್ತು ಒಟ್ಟಾರೆ ನಿಮ್ಮ ಸ್ಮಾರ್ಟ್‌ ಫೋನ್‌ಗೆ ಹಾನಿಯನ್ನುಂಟು ಮಾಡುವ ಸಂಗತಿಗಳನ್ನು ಹ್ಯಾಕಿಂಗ್‌ ಎಂದು ಭಾವಿಸಬಹುದು. 

 • ಪಾಪ್‌ ಆ್ಯಡ್‌ ಹೆಚ್ಚಾಗುವುದು
  ನಿಮ್ಮ ಫೋನ್‌ ಸ್ಕ್ರೀನ್‌ ಮೇಲೆ ಇದ್ದಕ್ಕಿದ್ದಂತೆ ಪಾಪ್‌ ಅಪ್‌ ಜಾಹೀರಾತುಗಳು ಕಾಣಿಸಿಕೊಳ್ಳಲಾರಂಭಿಸಿದರೆ, ಅಂಥ ಫೋನ್‌ನಲ್ಲಿ ಮಾಲ್‌ವೇರ್‌ ಸೇರಿಕೊಂಡಿರುವ ಸಾಧ್ಯತೆ ಇರುತ್ತದೆ ಎಂದು ಪರಿಗಣಿಸಬಹುದು. 

 • ಗೊತ್ತಿಲ್ಲದಂತೆ ಅಪರಿಚಿತ ಆ್ಯಪ್‌ ಇನ್‌ಸ್ಟಾಲ್‌
  ಕೆಲವೊಂದು ಸಾರಿ ನಿಮಗೆ ಗೊತ್ತಿಲ್ಲದಂತೆ ಕೆಲವೊಂದು ಆ್ಯಪ್‌ಗಳು ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್‌ ಆಗಿರುತ್ತವೆ. ಅಂಥ ಆ್ಯಪ್‌ಗಳು ಅಪಾಯಕಾರಿಯಾಗಿರುತ್ತವೆ. ಇದು ಕೂಡ ನಿಮ್ಮ ಫೋನ್‌ ಮಾಲ್‌ವೇರ್‌ ದಾಳಿಗೆ ಒಳಗಾಗಿರುವ ಸಂಕೇತವಾಗಿರುತ್ತದೆ. 

 • ಐಕಾನ್‌ ಕಾಣದಂತೆ ಮಾಯ
  ನೀವು ಯಾವುದೇ ಒಂದು ಆ್ಯಪ್‌ ಒಂದನ್ನು  ಡೌನ್ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿಕೊಳ್ಳುತ್ತೀರಿ. ಆದರೆ, ಇನ್‌ಸ್ಟಾಲ್‌ ಆಗುತ್ತಿದ್ದಂತೆ ಆ್ಯಪ್‌ನ ಐಕಾನ್‌ ಸ್ಕ್ರೀನ್‌ ಮೇಲೆ ಕಾಣಿಸದಿದ್ದರೆ ಅಂಥ ಆ್ಯಪ್‌ ಮಾಲ್ವೇರ್‌ಗೆ ಒಳಗಾಗಿರುವ ಸಾಧ್ಯತೆ ಇರುತ್ತದೆ. 

 • ಬ್ಯಾಟರಿ ಖಾಲಿಯಾಗುತ್ತಿದ್ದರೆ...
  ನಿಮ್ಮ ಸ್ಮಾರ್ಟ್‌ ಫೋನ್‌ ಬ್ಯಾಟರಿ ಇದ್ದಕ್ಕಿದ್ದಂತೆ ಖಾಲಿಯಾಗುತ್ತಿದ್ದರೆ ಅಂದರೆ ಶೇ.100ರಷ್ಟಿದ್ದ ಬ್ಯಾಟರಿ ತಕ್ಷ ಣವೇ ಶೇ.10ಕ್ಕೆ ಇಳಿಯುತ್ತಿದ್ದರೆ ಅಂಥ ಫೋನ್‌ ಮಾಲ್‌ವೇರ್‌ ದಾಳಿಗೆ ಒಳಗಾಗಿದೆ ಎಂದು ಭಾವಿಸಬೇಕು.

 • ಅಂತಾರಾಷ್ಟ್ರೀಯ ಕರೆಗಳು, ಮಿಸ್ಡ್‌ ಕಾಲ್‌ಗಳು
  ಒಂದೊಮ್ಮೆ  ನಿಮಗೆ ಮೇಲಿಂದ ಮೇಲೆ ಅಂತಾರಾಷ್ಟ್ರೀಯ ಕರೆಗಳು ಬರುತ್ತಿದ್ದರೆ, ಮಿಸ್ಡ್‌ ಕಾಲ್‌ಗಳಾಗುತ್ತಿದ್ದರೆ  ನಿಮ್ಮ ಫೋನ್‌ ಅನ್ನು ಹ್ಯಾಕ್‌ ಮಾಡಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ನಿಮ್ಮ ಫೋನ್‌ ಅನ್ನು ಪರೀಕ್ಷಿಸಿಕೊಳ್ಳುವುದು ಬೆಸ್ಟ್‌.

 • ಡೇಟಾ ಖಾಲಿಯಾಗುತ್ತಿದ್ದರೆ....
  ನೀವು ನಿಯಂತ್ರಿತ ಡೇಟಾ ಪ್ಯಾಕ್‌ ಹಾಕಿಸಿಕೊಂಡಿರುತ್ತೀರಿ. ಆದರೂ ಡೇಟಾ ಖಾಲಿಯಾಗುತ್ತಿದ್ದರೆ ಅಂದು ಚಿಂತೆಯ ವಿಷಯ ಖಂಡಿತ  ಹೌದು. ಯಾಕೆಂದರೆ, ನಿಮ್ಮ ಫೋನ್‌ ವೈರಸ್‌ ದಾಳಿಗೊಳಗಾಗಿರುವ ಸಾಧ್ಯತೆ ಇರುತ್ತದೆ. 

 • ಆ್ಯಪ್‌ ಕ್ರ್ಯಾಶ್‌, ಅಪ್ಡೇಟ್‌ ಆಗದಿರುವುದು
  ಒಂದು ವೇಳೆ ಆ್ಯಪ್‌ಗಳು ಪದೇ ಪದೇ ಕ್ರ್ಯಾಶ್‌ ಆಗುತ್ತಿದ್ದರೆ ಮತ್ತು ಅಪ್ಡೇಟ್‌ ಮಾಡಲು ಸಾಧ್ಯವಾಗುತ್ತಿಲ್ಲವಾದರೆ ಮಾಲ್‌ವೇರ್‌ಇಫೆಕ್ಟ್ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.

 • ನಿಧಾನ ಪ್ರದರ್ಶನ
  ಚೆನ್ನಾಗಿಯೇ ಇರುವ ಸ್ಮಾರ್ಟ್‌ ಫೋನ್‌ ನಿಧಾನವಾಗಿ ಪ್ರದರ್ಶನ ತೋರಿಸಲಾರಂಭಿಸಿದರೆ ಖಂಡಿತವಾಗಿಯೂ ಅಪಾಯದ ಮುನ್ಸೂಚನೆಯಾಗಿರುತ್ತದೆ.  ಹಾಗಾಗಿ, ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.


 1. ಕಾಲ್‌ ವಾರ್ನಿಂಗ್‌, ಹುಷಾರಾಗಿರಿ!

ಬಳಕೆದಾರ ವೈಯಕ್ತಿಕ ಮಾಹಿತಿಯನ್ನು ಕದಿಯುವುದಕ್ಕಾಗಿ ಕೆಲವು ನಕಲಿ ಕರೆಗಳು ಬರುತ್ತಿದ್ದು ಈ ಬಗ್ಗೆ ಎಚ್ಚರ ವಹಿಸುವಂತೆ ಸರಕಾರವೇ ಎಚ್ಚರಿಸಿದೆ. ಸೈಬರ್‌ ಖದೀಮರು ಬಳಕೆದಾರರಿಗೆ ಕರೆ ಮಾಡಿ, ಬ್ಯಾಂಕಿಂಗ್‌ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ನಿಮ್ಮಿಂದ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವುದು ಸೂಕ್ತ. ಅಂಥ ಕರೆಗಳನ್ನು ಗುರುತಿಸುವುದು ಹೇಗೆ?

 •  ಸಾಮಾನ್ಯವಾಗಿ ಈ ರೀತಿಯ ಕರೆಗಳ ನಂಬರ್‌ +92ನಿಂದ ಆರಂಭವಾಗಿರುತ್ತವೆ.
 • ಇಂಥ ಕರೆಗಳು ಸಾಮಾನ್ಯ­ ವಾಗಿ ಧ್ವನಿ ಕರೆಗಳು ಇಲ್ಲವೇ ವಾಟ್ಸ್‌ ಆ್ಯಪ್‌ ಕರೆಗಳಾಗಿರುತ್ತವೆ.
 • ಬ್ಯಾಂಕ್‌ ಖಾತೆ ನಂಬರ್‌ ಅಥವಾ ಡೆಬಿಟ್‌ ಕಾರ್ಡ್‌ ಮಾಹಿತಿ ಪಡೆಯುವುದೇ ಉದ್ದೇಶವಾಗಿರುತ್ತದೆ.
 • ನಕಲಿ ಲಾಟರಿ, ಲಕ್ಕಿ ಡ್ರಾ ದೊರೆತಿದೆ ಎಂಬ ಆಮಿಷ ಒಡ್ಡುವ ಕರೆಗಳಾಗಿರುತ್ತವೆ. 
 • ಖದೀಮರು ತಾವು ಅಧಿಧಿಕೃತ ಸಂಸ್ಥೆಯಿಂದಲೇ ಕರೆ ಮಾಡುತ್ತಿರುವುದಾಗಿ ನಂಬಿಸುತ್ತಾರೆ.
 • ಕೆಲವೊಮ್ಮೆ ಸೈಬರ್‌ ಕ್ರಿಮಿನಲ್‌ಗಳು ನಿಮಗೆ ಕ್ಯೂಆರ್‌ ಕೋಡ್‌ ಅಥವಾ ಬಾರ್‌ ಕೋಡ್‌ ಸಂದೇಶಗಳನ್ನು ಕಳುಹಿಸುತ್ತಾರೆ. ಅಂಥ ಕ್ಯೂಆರ್‌ ಕೋಡ್‌ಗಳನ್ನು  ಎಂದಿಗೂ ಸ್ಕ್ಯಾ‌ನ್‌ ಮಾಡಲು ಹೋಗಬೇಡಿ.
 • ಖದೀಮರು +01 ಆರಂಭವಾಗುವ ನಂಬರ್‌ನಿಂದಲೂ ಕರೆಗಳ ಬರಬಹುದು ಹುಷಾರಾಗಿರಿ.


  (ಈ ಲೇಖನ ವಿಜಯ ಕರ್ನಾಟಕದ 2020ರ ಆಗಸ್ಟ್ 26ರ ಸಂಚಿಕೆಯಲ್ಲಿ ಪ್ರಕಟಾಗಿದೆ) 

ಕಾಮೆಂಟ್‌ಗಳಿಲ್ಲ: