- ಮಲ್ಲಿಕಾರ್ಜುನ ತಿಪ್ಪಾರ
ತಂತ್ರಜ್ಞಾನ ಬೆಳೆದಂತೆ ನಮ್ಮ ಜೀವನ ಬಹಳ ಸುಲಭವಾಗಿದೆ. ಕೈ ಬೆರಳ ತುದಿಯಲ್ಲೇ ಇಡೀ ಜಗತ್ತಿದೆ. ಕುಳಿತಲ್ಲೇ ನಿಮಗೆ ಬೇಕಾದ್ದನ್ನು ತರಿಸಿಕೊಳ್ಳಬಹುದು; ಇಲ್ಲ ಮಾರಬಹುದು. ಈ ಡಿಜಿಟಲ್ ಯುಗದಲ್ಲಿ ಬಹಳಷ್ಟು ಉಪಯೋಗಗಳಿವೆ. ಹಾಗೆಯೇ, ಸ್ವಲ್ಪ ಮೈಮರೆತರೂ ಎಲ್ಲವನ್ನೂ ಕಳೆದುಕೊಳ್ಳಲು ಕ್ಷಣಾರ್ಧ ಸಾಕು. ಸೈಬರ್ ಖದೀಮರು ಯಾವ ಮಾಯೆಯಿಂದಲಾದರೂ ನಿಮ್ಮ ಫೋನ್ ಹೊಕ್ಕು, ನಿಮ್ಮೆಲ್ಲ ಮಾಹಿತಿ ಹಾಗೂ ಹಣವನ್ನು ಕಿತ್ತುಕೊಳ್ಳಬಲ್ಲರು. ಈ ಖದೀಮರು ಇತ್ತೀಚಿನ ಎರಡು ವರ್ಷಗಳಲ್ಲಿ ಹೊಸ ದಾರಿ ಮೂಲಕ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ. ಅವರೀಗ ಕ್ಯೂಆರ್ ಕೋಡ್ ಬಳಸಿಕೊಂಡು, ಜನರ ಖಾತೆಯಲ್ಲಿರುವ ಹಣವನ್ನು ಎಗರಿಸುತ್ತಿದ್ದಾರೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಹೇಗೆ ವಂಚನೆ?
ಈ ಮೊದಲು ಫಿಶಿಂಗ್ ಮೇಲ್, ಲಿಂಕ್ಸ್ ಕಳುಹಿಸಿ ಹಣವನ್ನು ಎತ್ತುತ್ತಿದ್ದ ಖದೀಮರು ಕ್ಯೂಆರ್ ಕೋಡ್ ಮೂಲಕ ಆ ಕೆಲಸವನ್ನು ಮಾಡುತ್ತಿದ್ದಾರೆ. ಅಪರಿಚಿತರಿಗೆ ಕ್ಯೂಆರ್ ಕೋಡ್ ಕಳುಹಿಸಿ, ನಿಮಗೆ ಇಂತಿಂಥ ಸ್ಕೀಮ್‌ನಲ್ಲಿ ಹಣ ಬಂದಿದೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ನಿಮ್ಮ ಅಕೌಂಟ್‌ಗೆ ಹಣ ವರ್ಗಾವಣೆಯಾಗುತ್ತದೆ ಎಂಬ ಒಕ್ಕಣಿಕೆ ಸಂದೇಶಗಳನ್ನು ಕಳುಹಿಸುತ್ತಾರೆ. ಬಳಕೆದಾರರು ಇದನ್ನು ನಿಜ ಎಂದು ನಂಬಿ, ಹಣದ ಆಮಿಷಕ್ಕೆ ಒಳಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಖಾತೆಗೆ ಹಣ ವರ್ಗಾವಣೆ ಆಗುವ ಬದಲು, ನಿಮ್ಮ ಖಾತೆಯಲ್ಲಿರುವ ಹಣವೇ ಅವರಿಗೆ ವರ್ಗಾವಣೆಯಾಗಿರುತ್ತದೆ! ಆಗಲೇ ಮೋಸ ಹೋಗಿರುವುದು ಗೊತ್ತಾಗುತ್ತದೆ. ಜತೆಗೆ ಹಣ ಮಾತ್ರವಲ್ಲದೇ, ನಮ್ಮೆಲ್ಲವೈಯಕ್ತಿಕ ಮಾಹಿತಿಯನ್ನು ಅವರು ಖದಿಯುತ್ತಾರೆ. ಸಾಮಾನ್ಯವಾಗಿ ಇಂಥ ಆಮಿಷ ಒಡ್ಡುವ ಸಂದೇಶಗಳು ವಾಟ್ಸ್‌ಆ್ಯಪ್ ಮೂಲಕವೇ ಇಲ್ಲವೇ ಮೇಲ್ ಮುಖಾಂತರ ಬರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು.
ರಕ್ಷ ಣೆ ಹೇಗೆ?
ಸೈಬರ್ ಕಳ್ಳರು ಒಂದಿಲ್ಲ ಒಂದು ಹೊಸ ದಾರಿಯನ್ನು ಹುಡುಕಿಕೊಳ್ಳುತ್ತಿದ್ದಾರೆ. ಈಗ ಕ್ಯೂಆರ್ ಕೋಡ್ ಮೂಲಕ ಹಣ ಕೀಳುತ್ತಿದ್ದಾರೆ. ಈ ವಂಚನೆಯ ಜಾಲಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂದರೆ, ನಮ್ಮ ಎಚ್ಚರದಲ್ಲಿ ನಾವಿರಬೇಕು. ಯಾವುದೇ ಕಾರಣಕ್ಕೂ ನಮ್ಮ ಯುಪಿಐ ಐಡಿ ಅಥವಾ ಬ್ಯಾಂಕ್ ಮಾಹಿತಿಯನ್ನು ಅಪರಿಚಿತರ ಜತೆ ಹಂಚಿಕೊಳ್ಳಬಾರದು. ಅಪರಿಚಿತರಿಂದ ಅಥವಾ ಶಂಕಾಸ್ಪದ ವ್ಯಕ್ತಿಗಳಿಂದ ಬರುವ ಯಾವುದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಹೋಗಬಾರದು. ಜತೆಗೆ, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇವಿಷ್ಟು ಮಾಡುವುದರಿಂದ ಖಂಡಿತವಾಗಿಯೂ ನೀವು ವಂಚಕರ ಜಾಲಕ್ಕೆ ಬೀಳದೆ ಬಚಾವ್ ಆಗಬಹುದು. ಹಾಗೆಯೇ, ಆನ್‌ಲೈನ್ ವ್ಯವಹಾರ ಮಾಡುವಾಗ ಅಥವಾ ಹಣವನ್ನು ಪಾವತಿಸುವಾಗ ವ್ಯಕ್ತಿಯ ನೈಜತೆಯನ್ನು ತಿಳಿಯಲು ಪ್ರಯತ್ನಿಸಿ. ಅದರಲ್ಲೂ ಆನ್‌ಲೈನ್ ವೇದಿಕೆಗಳಲ್ಲಿ ಖರೀದಿಸುವಾಗ ಬಹಳ ಹುಷಾರ್ ಆಗಿರಬೇಕು. ಸಿಕ್ಕ ಸಿಕ್ಕ ತಾಣಗಳಲ್ಲಿ ಖರೀದಿಗೆ ಮುಂದಾಗಬಾರದು. ವಿಶ್ವಾಸಾರ್ಹ ವೇದಿಕೆಗಳನ್ನು ಮಾತ್ರ ಬಳಸಿ. ಒಂದೊಮ್ಮೆ ನೀವು ಯುಪಿಐ ಬಳಸುತ್ತಿದ್ದರೆ ಕೋಡ್ ಮೂಲಕ ಅದನ್ನು ಸೆಕ್ಯುರ್ ಮಾಡಿಟ್ಟುಕೊಳ್ಳಿ. ಭೀಮ್, ಫೋನ್‌ಪೇ, ಗೂಗಲ್ ಪೇ ಸೇರಿದಂತೆ ಎಲ್ಲಯುಪಿಐ ಪೇಮೆಂಟ್ ತಾಣಗಳು ಬಳಕೆದಾರರಿಗೆ ಸೆಕ್ಯುರಿಟಿ ಪಿನ್ ಮಾಡಲು ಅವಕಾಶ ಮಾಡಿಕೊಟ್ಟಿರುತ್ತವೆ. ಹಾಗಾಗಿ, ತಪ್ಪದೇ ಸೆಕ್ಯುರಿಟಿ ಪಿನ್ ಸೆಟ್ ಮಾಡಿಕೊಳ್ಳಿ. ಅಪರಿಚಿತರಿಂದ ವ್ಯವಹರಿಸುವಾಗ ಸಾಧ್ಯವಾದಷ್ಟು ನಗದು ಮೂಲಕ ವಹಿವಾ ಮಾಡುವುದು ಉತ್ತಮ. ಇದರಿಂದ ಆನ್‌ಲೈನ್ ವಂಚನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.
ಎಚ್ಚರಿಕೆಯೊಂದೇ ದಾರಿ
ಆನ್‌ಲೈನ್ ಹಣಕಾಸು ವ್ಯವಹಾರ ಹೆಚ್ಚಾದಂತೆ ಆನ್‌ಲೈನ್ ವಂಚನೆಗಳೂ ಹೆಚ್ಚಾಗುತ್ತಿರುವುದು ಸತ್ಯ. ಹಾಗಾಗಿ, ನಾವು ಯಾವಾಗಲೂ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿಶೇಷವಾಗಿ, ಆನ್‌ಲೈನ್ ತಾಣಗಳ ಮೂಲ ಹಣ ಪಾವತಿಸುವ ಸಂದರ್ಭ ಎದುರಾದಾಗ ಎಷ್ಟು ಸಾಧ್ಯವೋ ಅಷ್ಟು ಮುಂಜಾಗೃತೆಯನ್ನು ವಹಿಸಿಕೊಳ್ಳಬೇಕು. ನಾವು ಯಾರಿಗೆ ಹಣ ಪಾವತಿಸುತ್ತಿದ್ದೇವೆ ಎಂಬುದರ ಬಗ್ಗೆ ಗೊತ್ತಿರಬೇಕು. ಚೂರೇ ಚೂರು ಸಂಶಯ ಬಂದರೂ ಆನ್‌ಲೈನ್ ಮೂಲಕ ಹಣ ಪಾವತಿಸಲು ಹೋಗಬೇಡಿ. ಹಾಗೆಯೇ, ಅಪರಿಚಿತರಿಂದ ಬರುವ ಯಾವುದೇ ರೀತಿಯ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಹೋಗಲೇ ಬೇಡಿ. ಹಣ ಕಳೆದುಕೊಂಡು ಪರಿತಪಿಸುವುದಕ್ಕಿಂತ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಬೆಸ್ಟ್ ಉಪಾಯ ಅಲ್ಲವೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ