ಸೋಮವಾರ, ಆಗಸ್ಟ್ 6, 2007

ಚೆನ್ನೈನಲ್ಲಿ ಸಖತ್ "ಮುಂಗಾರು ಮಳೆ": ಕನ್ನಡಿಗರಿಗೆ ಪುಳಕ


ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..!

ಅರೆ ಏನು ಇದು.. ಅಂತಾ ಕೇಳ್ತಿದ್ದೀರಾ. ಅಂಥದ್ದೇನೂ ಇಲ್ಲ ಮಾರಾಯ್ರೆ. ಅದೇ ಕನ್ನಡದ ಸೂಪರ್ ಡೂಪರ್ ಹಿಟ್ "ಮುಂಗಾರು ಮಳೆ" ಚಿತ್ರ ಚೆನ್ನೈನಲ್ಲಿ ಬಿಡುಗಡೆಯಾಗಿ ಸಖತ್ ಮೋಡಿ ಮಾಡಿದೆ ಇಲ್ಲಿಯ ಚೆನ್ನೈ ಕನ್ನಡಿಗರಿಗೆ...!

ನಿನ್ನೆ ಭಾನುವಾರ ಇಡೀ ನಮ್ಮ ಆಫೀಸೇ "ಮುಂಗಾರು ಮಳೆ" ಪ್ರದರ್ಶಿಸುತ್ತಿರುವ ಕ್ಯಾಸಿನೊ ಚಿತ್ರಮಂದಿರ ಬಳಿಯಿತ್ತು. ಅದೇನೂ ಮಹಾ ವಿಶೇಷ ಅನ್ನಬೇಡಿ. ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ" ಇದ್ದ ಹಾಗೆ. ಇಲ್ಲಿ ಕನ್ನಡಿಗರು, ಮಲಿಯಾಳಿಗಳು, ಆಂಧ್ರದವರು ಮತ್ತು ತಮಿಳರು ಬಹಳ ಅನ್ಯೂನ್ಯದಿಂದ ಕೆಲಸ ಮಾಡುತ್ತಾರೆ. ಯಾಕೆಂದರೆ ನಮ್ಮದು ಹೇಳಿ ಕೇಳಿ ಸಾಫ್ಟವೇರ್ ಲೋಕಲಾಯಿಜಿಶನ್ ಮತ್ತು ಮೀಡಿಯಾ ಮೂಲದ ಎಂಎನ್‌ಸಿ ಕಂಪೆನಿ. ಹೀಗಾಗಿ ನಮ್ಮ ಆಫೀಸ್ ಅಂದ್ರೆ "ಮಿನಿ ಸೌತ್ ಇಂಡಿಯಾ"

ಈಗ ಅರ್ಥ ಆಗಿರಬೇಕಲ್ಲ ಇಡೀ ನಮ್ಮ ಆಫೀಸ್ ತಂಡವೇ ಕ್ಯಾಸಿನೋ ಬಳಿ ಇತ್ತು ಅಂತ ಯಾಕೆ ಹೇಳ್ದೆ ಅಂತ. ಸರಿ ಮತ್ತೆ ಮುಂಗಾರಿ..ಗೆ ಬರೋಣ.

ನಮ್ಮ ಕನ್ನಡ ತಂಡದಲ್ಲಿ ಸಾರಥಿ ಅಂತ ಅಪ್ಪಟ ಕನ್ನಡ ಪ್ರೇಮಿಗಳು ಇದ್ದಾರೆ. ಭಾನುವಾರ ಸುಮಾರು ನಮ್ಮ ಆಫೀಸ್‌ನ 30 ಜನರನ್ನು "ಮಳೆ"ಯಲ್ಲಿ ತೋಯಿಸಿದ ಮಹಾನಭಾವರು. ಕನ್ನಡ ತಂಡದೊಂದಿಗೆ ಉಳಿದ ಭಾಷೆಗಳ ಸಹದ್ಯೋಗಿಗಳಿಗೆ ಅಪ್ಪಟ ಕನ್ನಡ ದೇಶೀಯ ಚಿತ್ರವನ್ನು ತೋರಿಸಿದ ಸಾರಥಿ ಅವರಿಗ ನೂರು ಸಲಾಂ.

ಬಹುಶಃ ಕ್ಯಾಸಿನೋ ಚಿತ್ರ ಮಂದಿರದವರು ಕೂಡಾ ಇಷ್ಟೊಂದು ಜನರು ಕನ್ನಡ ಚಿತ್ರ ನೋಡಲು ಬರುತ್ತಾರೆಂದು ನಿರೀಕ್ಷಿಸಿರಲಿಕ್ಕಿಲ್ಲ. ಯಾಕಂದೆರ ಭಾನುವಾರದ ಮಧ್ಯಾಹ್ನ ಪ್ರದರ್ಶನದ ಟೀಕೆಟ್‌ಗಳು ಒಂದು ದಿನದ ಹಿಂದೆಯೇ ಪೂರ್ಣವಾಗಿ ಬುಕ್‌ ಆಗಿದ್ದವು.
****
ಸರಿ, ನಾವೆಲ್ಲರೂ "ಮುಂಗಾರ ಮಳೆ"ಯಲ್ಲಿ ತೋಯಿಸಿಕೊಳ್ಳಲು ಚಿತ್ರಮಂದಿರದೊಳಗೆ ಹೊದೇವು. ಅಲ್ಲಿಯದು ಬೇರೆಯೇ ಅನುಭವ. ಪಕ್ಕಾ ತಮಿಳು ಚಿತ್ರಗಳ ಮಧ್ಯೆ ಅಪ್ಪಟ ಕನ್ನಡ ಚಿತ್ರವನ್ನು ನೋಡುತ್ತಿರುವುದರಿಂದ ಏನೊ ಒಂಥರಾ... ಸಂತೋಷ, ಅನುಭವ ಉಂಟಾಗುತ್ತಿತ್ತು.

ಚಿತ್ರ ನೋಡ್ತಾ ನೋಡ್ತಾ.. ನಾನು ನನ್ನ ಸುತ್ತ ಕಣ್ ಹಾಯ್ಸಿದೆ. ಬಹುಶಃ ಅವರಿಬ್ಬರೂ ಪ್ರೇಮಿಗಳಿರಬೇಕು. ಆಕೆ ಕನ್ನಡತಿ, ಆತ ತಮಿಳು ಹುಡುಗ. ಇಷ್ಟು ಕರೆಕ್ಟ್ ಆಗಿ ಹೇಗೆ ಹೇಳುತ್ತಿದ್ದೇನೆ ಎಂದು ಹುಬ್ಬೇರಿಸಬೇಡಿ. ಯಾಕಂದರೆ ಆಕೆ ಮುಂಗಾರಿನ ಪಂಚಿಂಗ್ ಸಂಭಾಷಣೆಯನ್ನು ತಮಿಳನಲ್ಲಿ ಭಾಷಾಂತರಿಸಿ ಆತನಿಗೆ ಹೇಳುತ್ತಿದ್ದಳು. ಆಗ ಆತ ನಗುತ್ತಿದ್ದ...! ಇದನ್ನು ನೋಡಿ ನನಗೊ ಖುಷಿಯಾಯಿತು. ಯಾಕೆಂದರೆ ಕನ್ನಡದ ಚಿತ್ರವನ್ನು ಚೆನ್ನೈಗರು ಕೂಡಾ ಆಸ್ವಾದಿಸುತ್ತಿದ್ದಾರೆ ಅಂತ.

ಇನ್ನೂ ಚಿತ್ರದಲ್ಲಿ ತೋರಿಸಲಾದ ಜೋಗದ ಸೀನ್ ಇದೆಯಲ್ಲಾ... ಅದು ತುಂಬಾ ಮೋಡಿ ಮಾಡಿ ಬಿಟ್ಟಿದೆ ಇಲ್ಲಿನ ಜನಕ್ಕೆ. ತಮಿಳು ಸ್ಟಾರ್ ಡೈರಕ್ಟರ್ ಶಂಕರ್ ಕೂಡಾ ಇಂಥ ಜಲಪಾತವನ್ನು ತನ್ನ ಚಿತ್ರದಲ್ಲಿ ಈ ರೀತಿ ಸೆರೆ ಹಿಡಿಯಲು ಸಾಧ್ಯವಿಲ್ಲ ಎಂಬ ಮಾತು ಸಿನೆಮಾ ನೋಡಲು ಆಗಮಿಸಿದ್ದ ಚೆನ್ನೈನ ತಮಿಳರ ಮಧ್ಯೆ ಕೇಳಿ ಬರುತ್ತಿತ್ತು. ಅಷ್ಟೊಂದು ಅದ್ಭುತ.. ಅತ್ಯದ್ಭುತ ಜೋಗದ ಸಿರಿ.. ಮಾಡಿದೆ ಮೋಡಿ ಈ ಪರಿ.

ಬಾಲ್ಕನಿಯಲ್ಲಂತೂ ಕನ್ನಡಿಗರ ಉತ್ಸಾಹ ಹೇಳ ತೀರದು. "ಒಂದೆ ಒಂದು ಸಾರಿ ಕಣ್ಮಂದೆ ಬಾರೆ.., ಅನಿಸುತಿದೆ ಯಾಕೋ ಇಂದು.... ಹಾಡುಗಳಿಗೆ ಎಲ್ಲರೂ ಕೋರಸ್ ಹಾಡುತ್ತಿದ್ದರು. ಅದು ಎಂಧವರಿಗೂ ಅಭಿಮಾನವನ್ನುಂಟು ಮಾಡುವು ಸನ್ನಿವೇಶ ಆಗಿತ್ತು.
****
ಕನ್ನಡದ ಗೆಳೆಯರಲ್ಲ ತಮ್ಮ ತಮ್ಮ ತಮಿಳು ಗೆಳೆಯರನ್ನು ಚಿತ್ರಕ್ಕೆ ಆಹ್ವಾನಿಸಿ ತೋರಿಸುತ್ತಿದ್ದಾರೆ. ಆನಂದ ಪಡುತ್ತಿದ್ದಾರೆ. ಚೆನ್ನೈನ ಕೆಲವು ಪ್ರಮುಖ ಬೀದಿಗಳಲ್ಲಿ ಮುಂಗಾರು ಮಳೆ ಪೋಸ್ಟರ್ ಕಾಣಿಸಿಕೊಂಡಿವೆ. ಬಸ್‌ನಲ್ಲಿ, ಶೇರ್ ಆಟೊದಲ್ಲಿ ಹೋಗುವಾಗ ಆ ಪೋಸ್ಟರ್ ಕಣ್ಣಿಗೆ ಬಿದ್ದರೆ ಎದೆಯಲ್ಲಿ ಏನೊ ಹಾಗೇ ಸುಮ್ಮನೆ...!

"ಮುಂಗಾರು ಮಳೆ" ನೋಡಿಕೊಂಡು ಶೇರ್ ಆಟೊದಲ್ಲಿ ರೂಮ್ ದಾರಿ ಹಿಡಿದಾಗ, ಹೊರಗೆ ಸಣ್ಣಗೆ ತುಂತುರು ಮಳೆ.. ಆಗ ನನ್ನ ಗೆಳೆಯು ಗುಣಗುತ್ತಿದ್ದ ಹೀಗೆ, "ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ..."

13 ಕಾಮೆಂಟ್‌ಗಳು:

Unknown ಹೇಳಿದರು...

CHENNAI 'MUNGAARU MALE' CINE-VIMARSHE ODI KHUSHI AIYTHU. NAANINNU NODILLA, AADRE NODO KAALA DURA ILLA. ADRUNU VIMATSHE ODIDAAGA - `VIMARSHENE ISTU CHENDA IDRE INNU CINEMA ADESTU CHANDA,HITHA,MANAGNA IRBHUDU ANKONDE. HORNAADALLIDDARU KANNADAVANNU KANNALLI THUMBIDA NIMAGE NAAVU KANNAAADINAVARU RUNIGALU...

VEEBI

ಅನಾಮಧೇಯ ಹೇಳಿದರು...

ಹಾಗೇ ಸುಮ್ಮನೆ ಲೈಟಾಗಿ ಒಂದು ಕಮೆಂಟು... ಮಲ್ಲಿ
ಅಯ್ಯೋ ಈ ಚೆನ್ನೈ ಬಿಸಿಲು ಅಲ್ಲಲ್ಲ ಬೆಂಕಿ ಜೊತೆ ಹಂಗೆ ಪಕ್ಕ ಸರಿದು ಹೊಗುವ ಸುಂದರಿಯರ ನಡುವೆ.. ಒಂದು ಮುಂಗಾರು ಮಳೆ ರಪಾರಪಾ ಅಂತ ಹೊಡೆದರೆ ಹಂಗೆ ಸುಮ್ಮನೆ ನಿಂತ್ಕೊಂಡು ತೊಯ್ಸಿಕೊಂಡಾಗ ಆಗೋ ಖುಷಿ.


ಬರಿ ಹಸಿಹಸಿ ಭಾವನೆಗಳ ತಾಕಲಾಟ ಅತ್ತ ಅದೂ ಇತ್ತ ಇದೂ ಅಲ್ಲ ಹಂಗೇ ಆಗಿದ್ದು ಮುಂಗಾರು ಮಳೆ ನೋಡುವಾಗ..
ಕುಣಿದು ಕುಣಿದು ಬಾರೇ .. ಜೀವಕೆ ಜೀವ ತಂದವಳೇ ಎಂಗೈತೆ ಚೆನ್ನಾಗೈತಲ್ಲ. ಪಾಪ ದೇವದಾಸು ಲಾಸ್ಟ್ ಸಾಯಬಾರದಿತ್ತೊ. ಅದು ಪಿರಿತಿ ಪ್ರೇಮದಷ್ಟೆ ಬೆಳ್ಳಗಿತ್ತು. ಪೀರಿತಿ ಎಂದೂ ಸಾಯಬಾರದಲ್ಲವಾ..

ಅನಾಮಧೇಯ ಹೇಳಿದರು...

ಅಮ್ಮಣ್ಣಿ.... ಪಾಪು... ಲೇಖನ ಸಖತ್ ಉಂಟು...


ತಿಪ್ಪಾರವರೇ, ನಿಮ್ಮ ಲೇಖನ ಒದಿ ಮತ್ತೊಮ್ಮೆ ಮುಂಗಾರು ಮಳೆಯಲ್ಲಿ ತೋಯ್ದಂತಾಯಿತು. ಮುಂಗಾರು ಮಳೆ ತೋರಿಸಿದ ವಿಜಯ ಸಾರಥಿಯವರಿಗೂ ಆ ಅನುಭವವನ್ನು ಅಷ್ಟೇ ವೇಗದಲ್ಲಿ ಅಕ್ಷರದಲ್ಲಿ ದಾಖಲಿಸಿದ ನಿಮಗೂ ಧನ್ಯವಾದ ಸಲ್ಲಬೇಕು.


ಚೈನ್ನೈನಲ್ಲಿ ಸಖತ್ ಮುಂಗಾರು ಮಳೆ ಸುರಿದಂತೆ ವೆಬ್ ದುನಿಯಾ ಕಚೇರಿಯಲ್ಲಿಯೂ ಮಳೆಯ ಕಲರವ ಕೇಳಿಬರುತ್ತಿದೆ. ಮುಂಗಾರು ಮಳೆಯಂತೆ ಚೆನ್ನೈ ಚಿತ್ರಿಮಂದಿರಕ್ಕೆ ಬರುವ ಉಳಿದ ಕನ್ನಡ ಚಿತ್ರಗಳನ್ನೂ ವಿಜಯ ಸಾರಥಿಯವರು ತೋರಿಸಲು ಮನಸ್ಸು ಮಾಡುತ್ತಾರೆ ಎನ್ನುವ ವಿಶ್ವಾಸ ನಮ್ಮದು.

ನಿಮ್ಮ ಲೇಖನ ಚೆನ್ನಾಗಿದೆ. ಸುರಿವ ಜಡಿ ಮಳೆಯನ್ನು ಅಕ್ಷರದಲ್ಲಿ ಸೆರೆ ಹಿಡಿದಿದ್ದೀರಿ.ಲೇಖನ ದಾಖಲಿಸಿದ ನಿಮ್ಮ ತುಡಿತ ಹೀಗೆಯೇ ಮುಂದುವರೆಯಲಿ...

jomon_varghese14@yahoo.com

Poojary ಹೇಳಿದರು...

chennagide lekhana..mungaru male illi illandru..maleyalli neneda haage aythu..gud keep writing

ಅನಾಮಧೇಯ ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Sarathy ಹೇಳಿದರು...

ಅಲ್ರೀಯಪ್ಪಾ ಮುಂಗಾರು ಮಳಿಗ ನನ್ನ ಹೆಸ್ರು ಥಳ್ಕ ಹಾಕ್ಲಿಕ್ ಹತ್ತೀರಿಯಲ್ಲಾ.....ನಾನ ಮುಂಗಾರ ಮಳಿ ಮುಗಿಸ್ಕೊಂಡು ಹಿಂಗಾರು ಮಳಿ ಕಾಯ್ಲಿಕ್ ಹತ್ತಿದೀನ್ರೀ....

ಅನಾಮಧೇಯ ಹೇಳಿದರು...

geleya,

nimma lekhana odi bahala santhoshavayitu.

naavu kooda hoda Shanivara Chennai nalli Mungaru male yalli toydu hodevu. Alli bandidda Kannadigara utsaha mere meerittu.

Prakash ಹೇಳಿದರು...

Chennai nagaradalli 'muMgaaru maLe' surida kate kELi saMtasavaayitu. kaLeda tiMgaLu illina kannaDa baLagada geLeyarella sEri ee citrada pradarshana maaDiddevu. kannaDa chalanacitragaLa kaMpu elleDe haraDali.
prakAsh, Dublin, Ireland

Prakash ಹೇಳಿದರು...

Chennai nagaradalli 'muMgaaru maLe' surida kate kELi saMtasavaayitu. kaLeda tiMgaLu illina kannaDa baLagada geLeyarella sEri ee citrada pradarshana maaDiddevu. kannaDa chalanacitragaLa kaMpu elleDe haraDali.
Prakash, Dublin, Ireland

Unknown ಹೇಳಿದರು...

ಮಲ್ಲಿಕಾರ್ಜುನ avarE nimma lEkhanA tuMbA bhAvanAthmakavAgi mooDi baMdide. Nimage manah purvaka dhanvAdagaLu. sArathiyavarigu koodA nannA dhanvAdagaLannA tiLisi. chalanachitrA chennAgiddalli ella vargada, ella bhAsheya janaru mechchikoLLuttare eMbudakke nimma nimmA lEkhanave sAkshi.
- KannaDada abhimaani, anivaasi kannaDigA

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

ಪ್ರಕಾಶ್ ಅವರಿಗೆ ತುಂಬಾ ಧನ್ಯವಾದಗಳು.. ಆಗಾಗ ಬ್ಲಾಗಿಗೆ ಇಣುಕುತ್ತೀರಿ

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

Thank santosh... ಆಗಾಗ ಬ್ಲಾಗಿಗೆ ಭೇಟಿ ನೀಡುತ್ತೀರಿ

MD ಹೇಳಿದರು...

ಮಲ್ಲಿ,
ಕಳೆದು ಹೋದ ದೋಸ್ತ ಸಿಕ್ಕಂಗಾತು ನಿನ್ನ ಬ್ಲಾಗ್ ಒದಿದ ಮೇಲೆ.
ಬೆಳಗಾವಿ ಕುಂದಾ,ಜೋಳದ ರೊಟ್ಟಿ ಚಟ್ನಿ ಚೆನ್ನೈದಾಗ ಕುಂತು ನಮ್ಮೆಲಾರ್ಗೂ ಹಂಚಾಕತ್ತೀಯಲ್ಲ !
ಆದರೆ ಒಂದು ವಿಷಯದಾಗ್ ನೀನು ಪುಣ್ಯ ಮಾಡಿದ್ದೀಯಾ. ನೀನು ಚೆನ್ನೈದಲ್ಲಿ ಕುಳಿತುಕೊಂಡು ಒಂದು ಕನ್ನಡ ಸಿನಿಮಾ ನಡೆಯುತ್ತಿದೆ ಅನ್ನೋ ಖುಶಿ ಇದೆ.
ಅಲ್ಲಿದ್ದು ಕನ್ನದ ಚಿತ್ರವನ್ನು ನೋಡಿದ್ದರೆ, ನನಗೆ ಕನ್ನಡ ರಾಜಧಾನಿ ಬೆಂಗಳೂರಿನ ನೆಲದ ಮೇಲಿದ್ದು 'ಮುಂಗಾರು ಮಳೆ ನಾ ನೋಡಿಲ್ವಲ್ಲಾ,ಕನ್ನಡ ಮೂವಿ ಚೆನ್ನಾಗಿರೋಲ್ಲಾರಿ ಯಾವುದೋ ತಮಿಳಿನ ರಿಮೇಕ್ ಇರಬಹುದು ' ಅಂತ ಹೇಳಿಕೊಳ್ಳುತ್ತ , ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಇತ್ತೀಚಿನ ತಮಿಳು/ತೆಲುಗು ಚಲನಚಿತ್ರಗಳದ್ದೇ ಮಾತಾಡುವ 'ಅಪ್ಪಟ ಕನ್ನಡಿಗರ' ನ್ನು ನೋಡಿ ಸಾಕಾಗಿದೆ.
ನಿಜವಾಗ್ಲೂ ಹೇಳ್ತೀನಿ ನನಗೆ ನನ್ನ ನಾಡಿನಲ್ಲಿ ಇದ್ದೇನೆ ಅಂತಾನೆ ಅನಿಸಲ್ಲ ಬೆಂಗ್ಳೂರಲ್ಲಿದ್ರೆ.