- ಮಲ್ಲಿಕಾರ್ಜುನ ತಿಪ್ಪಾರ
ವೈರಿಗಳನ್ನು ಮತ್ತು ಉಗ್ರರನ್ನು ಮಟ್ಟ ಹಾಕುವ ನೆಪದಲ್ಲಿ ತನ್ನದೇ ದೇಶದ ಮುಗ್ಧರ ಪ್ರಾಣ ತೆಗೆಯುವ ಹಂತಕ್ಕೆ ಯಾವ ದೇಶದ ನಾಯಕನೂ ಹೋಗಲಾರ. ಆದರೆ, ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸಾದ್ ಇಂಥ ಹೇಯ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇಡ್ಲಿಬ್ ಪ್ರಾಂತದ ಖಾನ್ ಶೇಕುನ್ ನಗರದ ಮೇಲೆ ಕೆಮಿಕಲ್ ಬಾಂಬ್ ದಾಳಿ ನಡೆಸಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರ ಪ್ರಾಣ ಹರಣ ಮಾಡಿದ್ದಾರೆ.
ಅಸಾದ್‌ರ ಈ ದುಸ್ಸಾಹಸಕ್ಕೆ ಇಡೀ ಅಂತಾರಾಷ್ಟ್ರೀಯ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ. ಮಡಿದ ಜೀವಗಳಿಗೆ ಮಮ್ಮಲ ಮರಗುತ್ತಿದೆ. ವಿಷಾನಿಲಕ್ಕೆ ತುತ್ತಾದವರ ಸಂಖ್ಯೆ 80ಕ್ಕೂ ಹೆಚ್ಚು. ಈ ಪೈಕಿ 33 ಮಕ್ಕಳಿದ್ದರೆ, 13 ಮಹಿಳೆಯರು. ಈ ಕೃತ್ಯಕ್ಕೆ ಅಸಾದ್ ಅವರೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್, ಈಗಾಗಲೇ ಸಿರಿಯಾದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದಾರೆ. ಅಸಾದ್ ವಿರುದ್ಧ ಭಾರೀ ಪ್ರಮಾಣದಲ್ಲಿ ಕೈಗೊಳ್ಳುತ್ತಿರುವ ಅಮೆರಿಕದ ಮೊದಲ ಸೇನಾ ಕಾರ್ಯಾಚರಣೆ ಇದು. ಆದರೆ, ಅಸಾದ್‌ನ ಪರಮಮಿತ್ರ ರಾಷ್ಟ್ರವಾಗಿರುವ ರಷ್ಯಾ ಬೇರೆಯದೇ ಕತೆ ಹೇಳುತ್ತಿದೆ. ಆದರೆ, ಅದರ ಕತೆಯನ್ನು ನಂಬುವ ಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಸಮುದಾಯವಿಲ್ಲ. ಇದೆಲ್ಲವೂ ಅಂತಾರಾಷ್ಟ್ರೀಯ ರಾಜಕೀಯದ ಪಟ್ಟುಗಳು. ತಮ್ಮ ಹಿತಾಸಕ್ತಿಗೋಸ್ಕರ ದಾಳಗಳನ್ನು ಎಸೆಯುವ ‘ಸೂಪರ್ ಪವರ್ ರಾಷ್ಟ್ರ’ಗಳು, ಮುಗ್ಧರ ಜೀವಕ್ಕೆ ಬೆಲೆ ನೀಡುವುದಿಲ್ಲ. ಅಸಾದ್‌ನಂಥ ನಾಯಕರು ಇಂಥ ರಾಜಕಾರಣದ ಕೈಗೊಂಬೆಯಾಗಿದ್ದುಕೊಂಡು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವವರನ್ನು ಹಣಿಯುವುದು ಯಾವುದೇ ಸರಕಾರದ ಕರ್ತವ್ಯ. ಅದರಲ್ಲೇನೂ ತಪ್ಪಿಲ್ಲ. ಆದರೆ, ಅದಕ್ಕಾಗಿ ತನ್ನದೇ ಮುಗ್ಧ ಜನರನ್ನು ಬಲಿ ಕೊಡುವುದು ಎಷ್ಟು ಸರಿ ಎಂಬ ನೈತಿಕ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.
ಮನುಷ್ಯನೊಳಗೆ ಹಿಂಸೆ ಅಂತರ್ಗತವಾಗಿರುತ್ತದೆ. ಅದು ಯಾವುದೇ ಕ್ಷಣದಲ್ಲಿ ಆಸ್ಫೋಟಗೊಳ್ಳಬಹುದು ಎಂಬುದಕ್ಕೆ ಸಿರಿಯಾ ಅಧ್ಯಕ್ಷ ಅಸ್ಸಾದ್ ಅವರು ಅತ್ಯುತ್ತಮ ಉದಾಹರಣೆ. ಅಮಾಯಕರಂತೆ ಕಾಣುವ ಅಸ್ಸಾದ್ ಆಂತರ್ಯದಲ್ಲಿ ಕ್ರೂರ ಸರ್ವಾಧಿಕಾರಿ. ಮುಗ್ಧರ ಮೇಲೆ ನಡೆಸಿರುವ ಘೋರ ಅಪರಾಧಗಳು ಇದನ್ನು ಪುಷ್ಟೀಕರಿಸುತ್ತವೆ. ಹಾಗೆ ನೋಡಿದರೆ, ಸಿರಿಯಾದಲ್ಲಿ ವಿಷಾನಿಲ ದಾಳಿ ನಡೆದಿರುವುದು ಇದೇ ಮೊದಲಲ್ಲ. 2013ರಲ್ಲೂ ಇಂಥ ದಾಳಿ ನಡೆದಿತ್ತು. ಆಗ 1000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಆಗಲೇ ಅಂತಾರಾಷ್ಟ್ರೀಯ ಸಮುದಾಯ ಕಠಿಣ ನಿರ್ಧಾರ ಕೈಗೊಂಡಿದ್ದರೆ ಖಾನ್ ಶೇಕುನ್‌ನಂಥ ಘಟನೆಗಳು ಮತ್ತೆ ನಡೆಯುತ್ತಿರಲಿಲ್ಲ.
ಎಂಥ ದುರಂತ ನೋಡಿ; ಬಶರ್ ಅಲ್ ಅಸಾದ್ ವೃತ್ತಿಯಲ್ಲಿ ವೈದ್ಯರು. ನಾಲ್ಕು ವರ್ಷ ಸೇನಾ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ಅಸಾದರದ್ದು ಜೀವವನ್ನು ಕಾಪಾಡುವಂಥ ಪುಣ್ಯದ ಕೆಲಸ. ಆದರೆ, ಅದೇ ವ್ಯಕ್ತಿ ಈಗ ಸಾಮೂಹಿಕವಾಗಿ ಜನರ ಜೀವ ತೆಗೆಯುತ್ತಿದ್ದಾರೆಂದರೆ ಇದಕ್ಕಿಂತ ವಿಪರ್ಯಾಸವೇನಿದೆ? ತನ್ನದೇ ಜನರನ್ನು ಅತ್ಯಂತ ಭೀಕರವಾಗಿ ಕೊಲ್ಲುವ ಹಂತಕ್ಕೆ ಅಧ್ಯಕ್ಷನೊಬ್ಬ ಹೋಗುತ್ತಾನೆಂದರೆ ಆತನ ಸರ್ವಾಧಿಕಾರತ್ವದ ಹಸಿವು ಅರಿವಾಗುತ್ತದೆ. ಈ ವಿಷಯದಲ್ಲಿ ಅಸಾದ್ ಕೂಡ ಜಗತ್ತು ಕಂಡ ಕ್ರೂರ ಸರ್ವಾಧಿಕಾರಿಗಳಿಗಿಂತ ತಾನೇನೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ನಮ್ಮಲ್ಲಿ ‘ವೈದ್ಯೋ ನಾರಾಯಣೋ ಹರಿ’ ಅಂದರೆ, ವೈದ್ಯ ದೇವರಿಗೆ ಸಮಾನ ಎಂದಿದೆ. ಆದರೆ, ಸಿರಿಯಾದಲ್ಲಿ ವೈದ್ಯ ಯಮನಿಗೆ ಸಮಾನ ಎಂಬಂತಾಗಿದೆ.
ಬಶರ್ ಅವರು 1965ರ ಸೆಪ್ಟೆಂಬರ್ 11ರಂದು ಡಮಾಸ್ಕಸ್‌ನಲ್ಲಿ ಜನಿಸಿದವರು. ತಂದೆ ಹಫೀಜ್ ಅಲ್ ಅಸಾದ್ ಸಿರಿಯಾದ ಅಧ್ಯಕ್ಷ. ಡಮಾಸ್ಕಸ್‌ನಲ್ಲಿ ಬೆಳೆದ ಬಶರ್ 1988ರಲ್ಲಿ ಸ್ಕೂಲ್ ಆಫ್ ಡಮಾಸ್ಕಸ್ ಯುನಿರ್ವಸಿಟಿಯಿಂದ ಪದವಿ ಪಡೆದು, ಸಿರಿಯಾ ಸೇನೆಯಲ್ಲಿ ವೈದ್ಯರಾಗಿ ನಾಲ್ಕು ವರ್ಷ ಕೆಲಸ ಮಾಡುತ್ತಾರೆ. ನಂತರ ಅವರು, ಇಂಗ್ಲೆಂಡ್‌ಗೆ ತೆರಳಿ ಲಂಡನ್ ವೆಸ್ಟರ್ನ್ ಐ ಹಾಸ್ಪಿಟಲ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ಹಾಗೆ ನೋಡಿದರೆ, ಬಶರ್ ಅವರಿಗೆ ರಾಜಕೀಯ ಕುರಿತು ಅಷ್ಟೇನೂ ಆಸಕ್ತಿ ಇರುವುದಿಲ್ಲ. ತಂದೆಯ ನಂತರ ರಾಜಕೀಯ ಉತ್ತರಾಧಿಕಾರಿ ಎಂದು ಬಷರ್ ಅವರ ಅಣ್ಣ ಬಸೆಲ್ ಅಲ್ ಅಸಾದ್ ಗುರುತಿಸಿಕೊಂಡಿರುತ್ತಾರೆ. ಆದರೆ, ಬಸೆಲ್ 1994ರಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಆಗ, ಸಿರಿಯಾಗೆ ಬಶರ್‌ನನ್ನು ತಂದೆ ಹಫೀಜ್ ಅವರು ಕರೆಯಿಸಿಕೊಂಡು, ಮಿಲಿಟಿರಿ ಅಕಾಡೆಮಿಯಲ್ಲಿ ಕೆಲಸ ಕೊಡುತ್ತಾರೆ. ‘ಸಿರಿಯಾ ಸ್ವಾಧೀನ ಲೆಬನಾನ್’ ಉಸ್ತುವಾರಿಯನ್ನು ಬಶರ್‌ಗೆ 1998ರಲ್ಲಿ ವಹಿಸುತ್ತಾರೆ. ಕುಟುಂಬದ ವ್ಯವಹಾರ ನೋಡಿಕೊಂಡು, ರಾಜಕೀಯದ ಕಡೆ ತಲೆಹಾಕದ ಬಶರ್ ಕೊನೆಗೆ ರಾಜಕೀಯ ಉತ್ತುಂಗಕ್ಕೆ ಏರುತ್ತಾ ಹೋಗಿ, ತಂದೆಯ ನಿಧನದ ಬಳಿಕ ಅಂದರೆ 2000ರಲ್ಲಿ ಸಿರಿಯಾದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.
ಅಧಿಕಾರ ವಹಿಸಿಕೊಂಡಾಗ ಅಸಾದ್ ಅವರಿಗೆ 34 ವರ್ಷ. ಜನರು ಸುಧಾರಣೆಯ ಶುಭ ಕಾಲ ಎಂದೇ ಬಗೆದಿದ್ದರು. ತಮ್ಮ ಅಧಿಕಾರಾವಧಿಯ ಆರಂಭಿಕ ವರ್ಷಗಳಲ್ಲಿ ಬಶರ್ ಅವರೂ ಜನರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಅಧಿಕಾರಕ್ಕೇರುತ್ತಿದ್ದಂತೆ ತಮ್ಮ ತಂದೆಯಂತೆ ಸರ್ವಾಧಿಕಾರಿಯ ಲಕ್ಷಣಗಳನ್ನೇನೂ ತೋರಲಿಲ್ಲ. ಮುಕ್ತ ಚಿಂತನೆಯ ಪ್ರತಿಪಾದಕರಂತೆ ಕಂಡರು. ಅನೇಕ ಸುಧಾರಣೆಗಳಿಗೆ ಶ್ರೀಕಾರ ಹಾಕಿದರು. ರಾಜಕೀಯ ವಿರೋಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದರು. ಮಾಧ್ಯಮಗಳ ಮೇಲಿದ್ದ ನಿರ್ಬಂಧಗಳನ್ನು ತೆಗೆದು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಕೊಟ್ಟಿದ್ದರಿಂದ ರಾಜಕೀಯ ಚರ್ಚೆಗಳು ಕೂಡ ನಡೆಯಲಾರಂಭಿಸಿದವು. ಭಿನ್ನ ಧ್ವನಿಗಳಿಗೆ ಅವಕಾಶ ದೊರೆಯಲಾರಂಭಿಸಿತು. ರಾಜಕೀಯ ಬಹುತ್ವಕ್ಕೆ ಮಹತ್ವ ಬರಲಾರಂಭಿಸಿತು. ಈ ಹಿನ್ನೆಲೆಯಲ್ಲೇ ಬಹುತೇಕ ರಾಜತಾಂತ್ರಿಕರು, ಶೈಕ್ಷಣಿಕ ತಜ್ಞರು ಅಸಾದ್ ಅವರ ಮೊದಲನೆಯ ಅವಧಿಯನ್ನು ಶ್ಲಾಘಿಸುತ್ತಾರೆ. ಆದರೆ, ಬಶರ್ ಅವರ ಸುಧಾರಣೆ ಕ್ರಮಗಳನ್ನು ಸೇನೆ ಹಾಗೂ ಸ್ಥಾಪಿತ ಹಿತಾಸಕ್ತಿಗಳು ಪ್ರಶ್ನಿಸಲಾರಂಭಿಸಿದವು. ಬಾತ್ ಪಾರ್ಟಿ ಮತ್ತು ಅಲಾವಿಟ್ ಸಮುದಾಯ(ಬಶರ್ ಅವರು ಪ್ರತಿನಿಧಿಸುವ ಸಮುದಾಯ) ಈ ಸುಧಾರಣೆಗಳಿಂದ ಅತೃಪ್ತಗೊಂಡವು. ಅಸ್ಥಿರತೆಯ ಭಯದಿಂದಾಗಿ ಮತ್ತು ತಮ್ಮ ಪ್ರಭಾವಕ್ಕೆ ಧಕ್ಕೆ ಬರಬಹುದೆಂಬ ಭೀತಿಯಿಂದ ಸುಧಾರಣೆಗಳಿಗೆ ಕೊಕ್ಕೆ ಹಾಕಲಾರಂಭಿಸಿದವು ಮಾತ್ರವಲ್ಲ, ಈ ಹಿಂದಿದ್ದ ದಿನಗಳತ್ತ ಆಡಳಿತವನ್ನು ಕೊಂಡೊಯ್ಯಲು ಪ್ರಯತ್ನಿಸಿದವು. ಇದರ ಪರಿಣಾಮವಾಗಿ, 2014ರಲ್ಲಿ ಅಸಾದ್ ಮರಳಿ ಅಧಿಕಾರಕ್ಕೆ ಬಂದ ನಂತರ, ಅವರ ವ್ಯಕ್ತಿತ್ವ ಹಾಗೂ ಕಾರ್ಯ ನಿರ್ವಹಣೆಯಲ್ಲಿ ಅಪಾರ ವ್ಯತ್ಯಾಸ ಕಂಡು ಬಂತು. ಯಾವ ವ್ಯಕ್ತಿಯನ್ನು ಆಶಾವಾದದ ಪ್ರತೀಕ ಎಂದು ಜನ ನೋಡುತ್ತಿದ್ದರೋ ಅದೇ ವ್ಯಕ್ತಿ ಇದೀಗ ಜನರ ಕಣ್ಣಲ್ಲಿ ವಿಲನ್ ಆಗಿ ಬದಲಾದರು.
ಹಾಗೆ ನೋಡಿದರೆ, 2014ರಲ್ಲಿ ನಡೆದ ಚುನಾವಣೆಯಲ್ಲಿ ಭಾರಿ ಮತಗಳಿಂದಲೇ ಆಯ್ಕೆಯಾಗಿದ್ದರು. ಶೇ.88.7ರಷ್ಟು ಮತಗಳನ್ನು ಅವರು ಪಡೆದಿದ್ದರು. ಬಾತ್ ಪಾರ್ಟಿಯ ಇತಿಹಾಸದಲ್ಲೇ ಅಧ್ಯಕ್ಷರೊಬ್ಬರು ಪಡೆದ ಅತಿ ಹೆಚ್ಚಿನ ಮತಗಳು ಅವು. ಆದರೆ, ಅಂತಾರಾಷ್ಟ್ರೀಯ ಸಮುದಾಯ ಮಾತ್ರ ಈ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದವು. ಇದ್ಯಾವುದಕ್ಕೆ ತಲೆ ಕೆಡಿಸಿಕೊಳ್ಳದ ಅಸಾದ್ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಮುಂದುವರಿಸಿದರು. ಅವರ ಸರ್ವಾಧಿಕಾರತ್ವದ ಲಕ್ಷಣಗಳು ಮೊದಲಿಗೆ ಗೋಚರವಾಗಿದ್ದು, ಅರಬ್ ಸ್ಪ್ರಿಂಗ್ ಪ್ರತಿಭಟನಾಕಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಾಗ. ಇದೇ ಮುಂದೆ ಸಿರಿಯಾದ ನಾಗರಿಕ ಸಂಘರ್ಷಕ್ಕೆ ಕಾರಣವಾಗಿ, ಇದೀಗ ವಿಷಾನಿಲದಂಥ ಭೀಕರ ಸಾಮೂಹಿಕ ಶಸ್ತ್ರಾಸ್ತ್ರಗಳ ಬಳಕೆಯವರೆಗೂ ಬಂದು ಮುಟ್ಟಿದೆ. ನಾಯಕನೊಬ್ಬನ ಕೆಲವು ತಪ್ಪು ನಿರ್ಧಾರಗಳು ಹೇಗೆ ಇಡೀ ದೇಶವನ್ನು ಬಡುಮೇಲು ಮಾಡುತ್ತವೆ ಎಂಬುದಕ್ಕೆ ಇದು ಜೀವಂತ ಉದಾಹರಣೆ. ಇಷ್ಟೆಲ್ಲ ಆದರೂ, ಅಸಾದ್ ತಮ್ಮ ಕ್ರಮಗಳನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಆದರೆ, ವಿಶ್ವಸಂಸ್ಥೆ ಕೈಗೊಂಡ ಅಧ್ಯಯನ ಪ್ರಕಾರ ಅಸಾದ್ ಅವರ ವಾರ್ ಕ್ರೈಮ್‌ಗಳ ಪಟ್ಟಿ ದೊಡ್ಡದಿದೆ.
ಸಿರಿಯಾದಲ್ಲಿ ನಾಗರಿಕ ಸಂಘರ್ಷ 2011ರಿಂದಲೇ ಆರಂಭವಾಗುತ್ತದೆ. ರಾಜಕೀಯ ಸುಧಾರಣೆ ಮತ್ತು ನಾಗರಿಕ ಹಕ್ಕುಗಳ ಮರುಸ್ಥಾಪನೆಗಾಗಿ ದೊಡ್ಡ ಹೋರಾಟವೇ ನಡೆಯುತ್ತದೆ. ಆಗಲೂ ಸಿರಿಯಾ ಆಡಳಿತ ಪ್ರತಿಭಟನಾಕಾರರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಒಂದೆಡೆ ಅಸಾದ್ ಆಡಳಿತದ ವಿರುದ್ಧ ಜನರು ಬೀದಿಗಿಳಿದರೆ, ಮತ್ತೊಂದೆಡೆ ಅಸಾದ್ ಪರವಾಗಿಯೂ ಹೋರಾಟ ನಡೆಯುತ್ತದೆ. ಇದರ ಒಟ್ಟು ಪರಿಣಾಮವೇ ಎಂದೂ ಮುಗಿಯದ ಸಿರಿಯಾ ನಾಗರಿಕ ಸಂಘರ್ಷ ಆರಂಭವಾಗುತ್ತದೆ. ಇದರ ಮಧ್ಯೆಯೇ ಅಮೆರಿಕ ಮತ್ತು ರಷ್ಯಾದ ಹಸ್ತಕ್ಷೇಪಗಳಿಂದಾಗಿ ಪರಿಸ್ಥಿತಿ ಮತ್ತಷ್ಟು ಹದೆಗೆಡುತ್ತದೆ. ವಾಸ್ತವದಲ್ಲಿ ತನ್ನ ದೇಶದೊಳಗಿನ ಸಂಘರ್ಷವನ್ನು ಚಾಣಾಕ್ಷತನದಿಂದ ಬಗೆಹರಿಸಬೇಕಿದ್ದ ಅಸಾದ್ ಎಡವುತ್ತಾರೆ. ಅಂತಾರಾಷ್ಟ್ರೀಯ ಸಮುದಾಯ, ಸಿರಿಯಾ ಮೇಲೆ ನಿರ್ಬಂಧನೆಗಳನ್ನು ಹೇರಿದ್ದರಿಂದ ಒಟ್ಟಾರೆ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತದೆ. ವಿರೋಧಿ ಪ್ರತಿಭಟನಾಕಾರರನ್ನು ಸೇನೆಯಿಂದ ದಂಡಿಸಲಾಗುತ್ತದೆ. ಒಂದೊಮ್ಮೆ ಸಿರಿಯಾದ ಆಶಾದಾಯಕ ಅಧ್ಯಕ್ಷನಾಗಿ ಗುರುತಿಸಿಕೊಂಡಿದ್ದ ಅಸಾದ್ ಇದೀಗ ಸಂಪೂರ್ಣ ಸರ್ವಾಧಿಕಾರಿಯಾಗಿ ಬದಲಾಗುತ್ತಾರೆ. ನಂತರ ನಡೆದಿದ್ದೆಲ್ಲ ಹಿಂಸಾತ್ಮಕ ರಾಜಕೀಯವಷ್ಟೆ.
ನಾಗರಿಕ ಸಂಘರ್ಷದಿಂದ ಬಸವಳಿದಿರುವ ಸಿರಿಯಾದಲ್ಲಿ ತುರ್ತಾಗಿ ಶಾಂತಿ ಸ್ಥಾಪನೆಯಾಗಬೇಕಿದೆ. ಆದರೆ, ತಮ್ಮ ಹಿತಾಸಕ್ತಿಗಳ ಅನುಸಾರವಾಗಿ ಸಿರಿಯಾ ಕುರಿತು ವಿದೇಶಾಂಗ ನೀತಿಗಳನ್ನು ರೂಪಿಸಿಕೊಂಡಿರುವ ಅಮೆರಿಕ ಮತ್ತು ರಷ್ಯಾಗಳಿಂದಾಗಿ ಶಾಂತಿ ಸ್ಥಾಪನೆ ಸದ್ಯಕ್ಕೆ ಮರೀಚಿಕೆಯಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದೆಡೆ, ಶಾಂತಿ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿರಬೇಕಾಗಿರುವ ಅಧ್ಯಕ್ಷ ಅಸಾದ್ ಅವರು ಉಗ್ರರನ್ನು ಮಟ್ಟ ಹಾಕುತ್ತಲೇ, ವಿಷಾನಿಲದ ಬಾಂಬ್‌ಗಳನ್ನು ಮುಗ್ಧರ ಮೇಲೆ ಎಸೆಯುತ್ತಾ ತಿರುಗುತ್ತಿರುವುದು ಮಾತ್ರ ಆಧುನಿಕ ಜಗತ್ತಿನ ಅಣಕವಷ್ಟೆ.
This article was published in VijayKarnataka, on 09 April 2017 edition

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ