ಸೋಮವಾರ, ಮಾರ್ಚ್ 15, 2021

How to secure your Facebook profile?: ಫೇಸ್‌ಬಕ್ ಖಾತೆ ಸುರಕ್ಷಿತವಾಗಿಡುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ನಾವು ಈಗ ಸೋಷಿಯಲ್ ಮೀಡಿಯಾ ಯುಗದಲ್ಲಿ ಬದುಕುತ್ತಿದ್ದೇವೆ. ಸೋಷಿಯಲ್ ಮೀಡಿಯಾಗಳಿಲ್ಲದೇ ಬದುಕೇ ಇಲ್ಲ ಎನ್ನುವಷ್ಟರಮಟ್ಟಿಗೆ ನಾವು ಅವುಗಳಿಗೆ ದಾಸರಾಗಿದ್ದೇವೆ. ಈ ಜಾಲತಾಣಗಳಿಂದ ನಮಗೆ ಲಾಭ ಮತ್ತು ನಷ್ಟಗಳೆರಡೂ ಉಂಟು. ಅವುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ನಿಂತಿದೆ.

ಸೋಷಿಯಲ್ ಮೀಡಿಯಾಗಳ ಪೈಕಿ ಫೇಸ್‌ಬುಕ್ ಜನಪ್ರಿಯವಾಗಿರುವ ತಾಣವಾಗಿದೆ. ಅಂದಾಜು 2.8 ಶತಕೋಟಿ ಬಳಕೆದಾರರು ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿದ್ದಾರೆ ಎಂದರೆ ಅದರ ಅಗಾಧತೆಯನ್ನು ನೀವು ತಿಳಿದುಕೊಳ್ಳಬಹುದು. 

ಭಾರತದಲ್ಲಂತೂ ಫೇಸ್‌ಬುಕ್  ಸೇರಿದಂತೆ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಜನರು ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಆನ್‌ಲೈನ್ ಮೂಲಕ ಸ್ನೇಹಿತರನ್ನು ಸಂಪಾದಿಸುವುದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುವುದು ಇತ್ಯಾದಿ ಚಟುವಟಿಕೆಗಳಿಗೆ ಈ ತಾಣಗಳು ಅವಕಾಶವನ್ನು ಕಲ್ಪಿಸಿಕೊಡುತ್ತೇವೆ. ಈ ಫೇಸ್‌ಬುಕ್ ತಾಣವು ಎಲ್ಲೆಲ್ಲೋ ಇದ್ದವರನ್ನು ಒಂದೇ ಕ್ಲಿಕ್‌ನಲ್ಲಿ ಹತ್ತಿರವಾಗಿಸುತ್ತವೆ ಎಂಬುದು ಅಷ್ಟೇ ಸತ್ಯ. ಆದರೆ, ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅದರಿಂದ ಅಪಾಯಗಳ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ ಅಷ್ಟೇ ಖರೆ.

ಸಮುದ್ರದ ರೀತಿಯಲ್ಲಿರುವ ಈ ಫೇಸ್‌ಬುಕ್‌ನಲ್ಲಿ ಕೊಂಚ ಯಾಮಾರಿದರೂ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಫೇಸ್‌ಬುಕ್‌ನಲ್ಲಿ ಒಳ್ಳೆಯವರು ಸಕ್ರಿಯರಾಗಿರುವಂತೆ ಕೆಟ್ಟ ಬುದ್ಧಿಯವರೂ ಇದ್ದಾರೆ. ಹಾಗಾಗಿ ನಿಮ್ಮ ಪ್ರೊಫೈಲ್‌ನಲ್ಲಿರುವ ಮಾಹಿತಿಯನ್ನು, ನಿಮ್ಮ ಫೋಟೊಗಳನ್ನು ಕದ್ದು ಕುಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ನಾವು ಫೇಸ್‌ಬುಕ್‌ನಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಬಳಕೆದಾರರ ಸುರಕ್ಷತೆಗಾಗಿ ಫೇಸ್‌ಬುಕ್ ಕೂಡ ಹಲವು ಟೂಲ್‌ಗಳನ್ನು ಒದಗಿಸಿದೆ. ಅವುಗಳನ್ನು ಬಳಸಿಕೊಂಡು ನಿಮ್ಮ ಫೇಸ್‌ಬುಕ್ ಪುಟಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು. 

 ಪ್ರೊಫೈಲ್ ಸುರಕ್ಷತೆಗೆ ಹೀಗೆ ಮಾಡಿ

ಪ್ರೊಫೈಲ್ ಲಾಕ್ ಮಾಡಿ
ಸುರಕ್ಷತೆಯ ದೃಷ್ಟಿಯಿಂದ ಇದೊಂದು ಅತ್ತುತ್ಯಮ ಆಯ್ಕೆಯಾಗಿದೆ. ನೀವು ನಿಮ್ಮ ಪ್ರೊಫೈಲ್‌ ಅನ್ನು ಲಾಕ್ ಮಾಡಿದರೆ, ಯಾರಿಗೂ ನಿಮ್ಮ ಖಾತೆಯ ವಿವರವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಫ್ರೆಂಡ್ ಲಿಸ್ಟ್‌ನಲ್ಲಿದ್ದವರಿಗೆ ಮಾತ್ರವೇ ನಿಮ್ಮ ಪ್ರೊಫೈಲ್‌ ಅಕ್ಸೆಸ್ ಸಾಧ್ಯವಾಗುತ್ತದೆ. ಒಂದೊಮ್ಮೆ ಅಪರಿಚಿತರು ನಿಮ್ಮ  ಪ್ರೊಫೈಲ್‌ ನೋಡಬೇಕಾದರೆ ಅವರು ನಿಮಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಬೇಕು ಮತ್ತು ಅದನ್ನು ಅಕ್ಸೆಪ್ಟ್ ಮಾಡಿದಾಗ ಮಾತ್ರ ಪ್ರೊಫೈಲ್ ನೋಡಲು ಸಾಧ್ಯವಾಗುತ್ತದೆ. ಪ್ರೊಫೈಲ್ ಲಾಕ್ ಮಾಡಿದರೆ, ಹೊರಗಿನವರಿಗೆ ನಿಮ್ಮ ಟೈಮ್‌ಲೈನ್‌ನಲ್ಲಿರುವ ಯಾವುದೇ ಪೋಸ್ಟ್ ಆಗಲೀ ಅಥವಾ ಇತರ ಮಾಹಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ.

ಟೈಮ್‌ಲೈನ್ನಲ್ಲಿ ಏನಿರಬೇಕು?
ಫೇಸ್‌ಬುಕ್‌ ಪುಟದಲ್ಲಿ ನಿಮ್ಮ ಸ್ನೇಹಿತರು ಅನೇಕ ಪೋಸ್ಟ್‌ಗಳಿಗೆ ನಿಮ್ಮನ್ನು ಟ್ಯಗ್ ಮಾಡುತ್ತಿರುತ್ತಾರೆ. ಇದೆಲ್ಲವೂ ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಂಡು ಕಿರಿಕಿರಿ ಮಾಡುತ್ತಿರುತ್ತದೆ. ಇದನ್ನು ತಪ್ಪಿಸಲು  ಫೇಸ್‌ಬುಕ್ ನಿಮಗೆ ಟೈಮ್‌ಲೈನ್ ರಿವ್ಯೂ ಆಯ್ಕೆಯನ್ನು ನೀಡುತ್ತದೆ. ಈ ಟೈಮ್‌ಲೈನ್ ರಿವ್ಯೂ ಟೂಲ್ ಬಳಸಿಕೊಂಡು ಯಾವ ಪೋಸ್ಟ್‌ಗಳು ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಿಕೊಳ್ಳಬಹುದು. ಇದರಿಂದ ಅನಾವಶ್ಯಕ ಕಿರಿಕಿರಿಯನ್ನು ತಪ್ಪಿಸಿಕೊಳ್ಳಬಹುದು.

 ಆಡಿಯನ್ಸ್ ನಿರ್ಧರಿಸಿಕೊಳ್ಳಿ
ನೀವು ಪೋಸ್ಟ್ ಮಾಡುವ ಇಲ್ಲವೇ, ಷೇರ್ ಮಾಡುವ ಪೋಸ್ಟ್‌ಗಳನ್ನು ಯಾರು ನೋಡಬೇಕು, ನೋಡಬಾರದು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಹುದು. ಇದಕ್ಕಾಗಿ ಫೇಸ್‌ಬುಕ್ ಒದಗಿಸುವ ಆಡಿಯನ್ಸ್ ಸೆಲೆಕ್ಟರ್ ಆಯ್ಕೆಯನ್ನು ಬಳಸಿಕೊಳ್ಳಬೇಕು. ಈ ಟೂಲ್‌ನಿಂದ  ಬಳಕೆದಾರರು ಪೋಸ್ಟ್‌ಗಳನ್ನು ಯಾರು ವೀಕ್ಷಿಸಬಹುದು ಎಂದು ಸೆಟ್ ಮಾಡಬಹುದು. ಈ ಟೂಲ್‌ನಲ್ಲಿರುವ ಎವರೀವನ್ ಅಥವಾ ಫ್ರೆಂಡ್ಸ್ ಅಥವಾ ನಿಮಗೆ ಬೇಕಾದವರಿಗೆ ಮಾತ್ರವೇ ನಿಮ್ಮ ಪೋಸ್ಟ್ ತಲುಪುವ ಹಾಗೆ ಕಷ್ಟಮೈಸ್ ಕೂಡ ಮಾಡಿಕೊಳ್ಳಬಹುದು. 

ಮ್ಯಾನೇಜ್ ಆಕ್ಟಿವಿಟಿ
ನಿಮ್ಮ ಪೋಸ್ಟ್‌ಗಳನ್ನು ಡಿಲಿಟ್ ಮಾಡಲು ಇಳ್ಲವೇ ಆರ್ಕೈವ್ ಮಾಡಲು ಮ್ಯಾನೇಜ್ ಆಕ್ಟಿವಿಟಿ ನೆರವು ನೀಡುತ್ತದೆ. ಥ್ರ್ಯಾಶ್‌ಗೆ ಕಳುಹಿಸಲಾದ ಪೋಸ್ಟ್‌ಗಳು 30 ದಿನಗಳವರೆಗೂ ಅಂದರೆ ಆಟೋಮ್ಯಾಟಿಕ್ ಆಗಿ ಡಿಲಿಟ್ ಆಗೋವರೆಗೂ ಅಲ್ಲಿಯೇ ಇರುತ್ತವೆ. ಒಂದು ವೇಳೆ ಈ ಪೋಸ್ಟ್‌ಗಳನ್ನು ನೀವು ರಿಸ್ಟೋರ್ ಮಾಡಿಕೊಳ್ಳುವುದಾದರೆ 30 ದಿನಗಳ ಮುಂಚೆಯೇ ಮಾಡಿಕೊಳ್ಳಬೇಕು. ಆ ಬಳಿಕ ಮತ್ತೆ ಅವು ಸಿಗುವುದಿಲ್ಲ.





















(ಈ ಲೇಖನವು ವಿಜಯ ಕರ್ನಾಟಕದ 2021ರ ಮಾರ್ಚ್ 15ರ ಸಂಚಿಕೆಯಲ್ಲಿ ಪ್ರಕಟವಾಗಿದೆ)

ಕಾಮೆಂಟ್‌ಗಳಿಲ್ಲ: