ಭಾನುವಾರ, ಜುಲೈ 31, 2022

Partha Chatterjee and Arpita Mukherjee- ಹಗರಣಕ್ಕೆ ಪಾರ್ಥ ಅರ್ಪಿತ!

ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಎಂಬೆರಡು ಹೆಸರು ಬೇಡದ ಕಾರಣಕ್ಕೆ ಪ್ರಸಿದ್ಧಿಯಾಗಿವೆ. ವಿಭಿನ್ನ ವ್ಯಕ್ತಿತ್ವದ ಈ ಇಬ್ಬರು ಹಗರಣದ ಸುಳಿಯಲ್ಲಿಸಿಲುಕಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
‘‘ಅವಳು ಚೆಲುವೆ. ಪ್ರತಿಭಾವಂತೆ. ಕೆಳಹಂತದಿಂದ ಮೇಲೆ ಬಂದವಳು. ನಾನು ಯಾವಾಗಲೂ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. 2013ರಲ್ಲಿನಾನು ಬಿಜೆಪಿ ಸೇರಿದೆ. ಆ ಬಳಿಕ ಸಂಪರ್ಕ ಕಡಿದು ಹೋಯಿತು. ಒಂದಂತೂ ಸತ್ಯ. ಆಕೆ, ಅತಿಯಾದ ಮಹತ್ವಾಕಾಂಕ್ಷೆ ಹೊಂದಿದ್ದಳು...’’

- ಚಿತ್ರಕರ್ಮಿ ಹಾಗೂ ಬಿಜೆಪಿಯ ನಾಯಕ ಸಂಗಮಿತ್ರ ಚೌಧರಿ ಅವರು ಅರ್ಪಿತಾ ಮುಖರ್ಜಿ ಬಗ್ಗೆ ಆಡಿದ ಮಾತುಗಳಿವು. ಚೌಧರಿ ಮಾತುಗಳು ಸತ್ಯ. ಅರ್ಪಿತಾ ಮುಖರ್ಜಿ ಎಷ್ಟು ಪ್ರತಿಭಾವಂತಳೋ ಅಷ್ಟೇ ಮಹತ್ವಾಕಾಂಕ್ಷಿಯೂ ಹೌದು. ಯಾವುದೋ ಒಂದು ಹಂತದಲ್ಲಿರಾಜಕಾರಣಿಯ ನಂಟು ಬೆಳೆಸಿಕೊಂಡು, ಈಗ ಹಗರಣದ ಸುಳಿಯಲ್ಲಿಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಾಪ್ತ ಹಾಗೂ ಸಚಿವರಾಗಿದ್ದ ಪಾರ್ಥ ಚಟರ್ಜಿ ಶಾಲಾ ಸೇವಾ ಆಯೋಗದ ನೇಮಕಾತಿ ವೇಳೆ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಜಾರಿ ನಿರ್ದೇಶನಾಲಯ(ಇ.ಡಿ) ಹೊರ ಹಾಕುತ್ತಿರುವ ಮಾಹಿತಿ, ಎಣಿಸುತ್ತಿರುವ ನೋಟುಗಳ ಮೌಲ್ಯ ಇಡೀ ಹಗರಣದ ಕತೆಯನ್ನು ಹೇಳುತ್ತಿವೆ. ಈ ಕತೆಯೊಳಗೇ ‘ಕ್ಯಾಶ್‌ ಕ್ವೀನ್‌’ ನಟಿ ಅರ್ಪಿತಾ ಮುಖರ್ಜಿ ಅವರದ್ದೂ ಒಂದು ಪ್ರಮುಖ ಪಾತ್ರ! ಯಾಕೆಂದರೆ, ಬಗೆದಷ್ಟು ಸಿಗುತ್ತಿರುವ ನಗದು ಅರ್ಪಿತಾ ಮನೆಯಲ್ಲೇ ಹೆಕ್ಕಿರುವುದು. ಈವರೆಗೆ ಅರ್ಪಿತಾ ಮನೆಯಲ್ಲಿ50 ಕೋಟಿ ರೂ. ನಗದು ಮತ್ತು ನಾಲ್ಕೂವರೆ ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಯಾರು ಈ ಅರ್ಪಿತಾ ಮುಖರ್ಜಿ?
ಪ್ರತಿಭಾವಂತೆ ನಟಿ ಎನಿಸಿಕೊಂಡಿದ್ದ ಅರ್ಪಿತಾಗೆ ಸಿನಿಮಾರಂಗದಲ್ಲಿಅಬ್ಬಾ ಎನ್ನುವಂಥ ಯಶಸ್ಸು ಕಾಣಲಿಲ್ಲ. 2008ರಿಂದ 2014ರ ಅವಧಿಯಲ್ಲಿಅರ್ಪಿತಾ ಅವರು ಬೆಂಗಾಳಿ ಮತ್ತು ಒಡಿಯಾ ಭಾಷೆಯ ಕೆಲವು ಚಿತ್ರಗಳಲ್ಲಿನಟಿಸಿದ್ದಾರೆ. ಆದರೆ, ರಾಜಕೀಯ ಕಾರಿಡಾರ್‌ನಲ್ಲಿದೊರೆತ ಸಂಪರ್ಕಗಳು ಅರ್ಪಿತಾ ಅವರನ್ನು ಕೋಲ್ಕೊತಾದ ಪ್ರತಿಷ್ಠಿತ ವ್ಯಕ್ತಿಯನ್ನಾಗಿಸಿದವು. ದಕ್ಷಿಣ ಕೋಲ್ಕೊತಾದ ಚೋಕಾ ಪ್ರದೇಶದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿವಾಸ್ತವ್ಯ ಸಾಮಾನ್ಯವಾಯಿತು. ನಗರದಲ್ಲಿರುವ ಹುಕ್ಕಾ ಬಾರ್‌ಗಳಿಗೆ ಅರ್ಪಿತಾ ನಿತ್ಯದ ಕಸ್ಟಮರ್‌. ಬ್ಯಾಂಕಾಂಕ್‌, ಸಿಂಗಾಪುರ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿರಜೆ ಮೋಜು ಕಳೆದಿದ್ದಿದೆ. 

ಕೋಲ್ಕೊತಾದ ಹೊರವಲಯದಲ್ಲಿರುವ ಬೆಲ್ಗಾರಿಯಾದಲ್ಲಿವಾಸವಾಗಿದ್ದ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿಬಂದವರು ಅರ್ಪಿತಾ. ಕಾಲೇಜು ದಿನಗಳಿಂದಲೇ ಮಾಡೆಲಿಂಗ್‌ನಲ್ಲಿಆಸಕ್ತಿ. ತಂದೆಯ ಮರಣದ ನಂತರ, ಜಾಗ್ರಾಮ್‌ನ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದರು ಎಂಬ ಮಾಹಿತಿ ಈಗ ಹೊರ ಬಿದ್ದಿದೆ. ಆದರೆ, ಈ ಮದುವೆಯ ಬಗ್ಗೆ ಹೆಚ್ಚಿನ ವಿವರಗಳೂ ಇನ್ನೂ ಸಿಕ್ಕಿಲ್ಲ. ಆ ಬಳಿಕ ಚಿತ್ರೋದ್ಯಮಕ್ಕೆ ಮರಳಿದ ಅರ್ಪಿತಾ, ಸುವೇಂದು ನಿರ್ದೇಶನದ ‘ಬಂದೆ ಉತ್ಕಲ್‌ ಜನನಿ’, ಅಶೋಕ್‌ ಪಟಿ ಅವರ ‘ಪ್ರೇಮ್‌ ರೋಗಿ’ ಸೇರಿದಂತೆ ಎಂಟು ಒಡಿಯಾ ಸಿನಿಮಾಗಳಲ್ಲಿನಾಯಕಿಯಾಗಿ ನಟಿಸಿದ್ದಾರೆ. ಈ ಎರಡೂ ಚಿತ್ರಗಳು ಬಾಕ್ಸಾಫಿಸ್‌ನಲ್ಲಿಹಿಟ್‌ ಎನಿಸಿಕೊಂಡಿವೆ. 2012ರಲ್ಲಿತೆರೆ ಕಂಡ ‘ರಾಜು ಆವಾರಾ’ ಒಡಿಯಾ ಚಿತ್ರವೇ ಕೊನೆ. ಮತ್ತೆ ಅರ್ಪಿತಾ ಒಡಿಯಾ ಚಿತ್ರದಲ್ಲಿಕಾಣಿಸಿಕೊಂಡಿಲ್ಲ. ಇದಕ್ಕೂ ಮೊದಲು ಕೇಮಿತಿ ಬಂಧನ (2011), ಮು ಕನಾ ಇತೆ ಖರಾಪ್‌(2010) ಚಿತ್ರಗಳಲ್ಲಿನಟಿಸಿದ್ದಾರೆ. ‘ಭೂತ್‌ ಇನ್‌ ರೋಸ್‌ವಿಲ್ಲೆ’, ‘ಜೀನಾ ದಿ ಎಂಡ್ಲೆಸ್‌ ಲವ್‌’, ‘ಬಿದೇರ್ಹಿ ಖೋಂಜೆ ರವೀಂದ್ರಹತ್‌’, ‘ಮಾಮಾ ಭಗ್ನೆ’ ಮತ್ತು ಪಾರ್ಟನರ್‌’ ಸೇರಿದಂತೆ ಕೆಲವು ಬೆಂಗಾಲಿ ಸಿನಿಮಾಗಳಲ್ಲಿಸಣ್ಣ ಪಾತ್ರಗಳಲ್ಲಿಅಭಿನಯಿಸಿದ್ದಾರೆ. ಆದರೆ 2014ರಿಂದ ಯಾವುದೇ ಬೆಂಗಾಲಿ ಸಿನಿಮಾದಲ್ಲೂಕಾಣಿಸಿಕೊಂಡಿಲ್ಲಅರ್ಪಿತಾ. 

ಪಾರ್ಥ ಚಟರ್ಜಿ ಅವರ  ನಕ್ತಲಾ ಉದಯನ್‌ ಸಂಘದ 2020 ಸಾಲಿನ ದುರ್ಗಾ ಪೂಜೆಗೆ ಅರ್ಪಿತಾ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದರು. ಆ ವೇಳೆಯಲ್ಲಿಅರ್ಪಿತಾ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಾರ್ಥ ಚಟರ್ಜಿ ಅವರ ಜತೆಗೆ ವೇದಿಕೆ ಹಂಚಿಕೊಂಡಿರುವ ಫೋಟೊಗಳು, ಕಂತೆ ಕಂತೆ ನೋಟು ಸಿಗುತ್ತಿದ್ದಂತೆ ಭಾರಿ ವೈರಲ್‌ ಆದವು. ಪ್ರತಿಪಕ್ಷ ಗಳು, ಟಿಎಂಸಿ ಜತೆ ಅರ್ಪಿತಾ ಇದ್ದಾರೆಂಬುದಕ್ಕೆ ಈ ಫೋಟೊಗಳು ಸಾಕ್ಷಿಯಾಗಿವೆ ಎಂದು ಆರೋಪಿಸಿವೆ. ಈ ಫೋಟೊಗಳನ್ನು ಪ್ರತಿಪಕ್ಷ ದ ನಾಯಕ ಸುವೇಂದು ಅಧಿಕಾರಿ ಟ್ವಿಟರ್‌ನಲ್ಲಿಹಂಚಿಕೊಂಡು, ಟಿಎಂಸಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. 

ದೀದಿಯ ಅತ್ಯಾಪ್ತ ಪಾರ್ಥ ಚಟರ್ಜಿ
ಈ ಹಿಂದೆ ಶಾರದಾ ಮತ್ತು ನಾರದ ಹಗರಣವು ಮಮತಾ ಬ್ಯಾನರ್ಜಿ ಸುತ್ತ ಇದ್ದ ಬಹುತೇಕ ನಾಯಕರನ್ನು ಸುತ್ತಿಕೊಂಡಿತ್ತು. ಆ ಸುಳಿಯಲ್ಲಿಸಿಲುಕಿಕೊಳ್ಳದೇ ಇದ್ದ ಏಕೈಕ ಹಿರಿಯ ಸಚಿವ ಈ ಪಾರ್ಥ ಚಟರ್ಜಿ. ಆ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈಗ ಅದೇ ವ್ಯಕ್ತಿಯ ಸುತ್ತ ಶಿಕ್ಷ ಕರ ನೇಮಕ ಹಗರಣ ಸುತ್ತಿಕೊಂಡಿದೆ! 

ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದ ಪಾರ್ಥ ಅವರು, 1960ರ ದಶಕದಲ್ಲಿಕಾಂಗ್ರೆಸ್‌ ಮೂಲಕ ರಾಜಕಾರಣ ಆರಂಭಿಸಿದರು. ಶುಭ್ರತ್‌ ಮುಖರ್ಜಿ ಮತ್ತು ಪ್ರಿಯ ರಂಜನ್‌ ದಾಸಮುನ್ಷಿ ಅವರು ಪಾರ್ಥ ಅವರಿಗೆ ರೋಲ್‌ ಮಾಡೆಲ್‌ ರಾಜಕಾರಣಿಗಳು. ವಿದ್ಯಾರ್ಥಿಗಳ ದಿನಗಳಲ್ಲಿರಾಜಕೀಯದಲ್ಲಿದ್ದೂ ಉನ್ನತ ಶಿಕ್ಷ ಣವನ್ನು ಪಡೆದುಕೊಂಡ ಕೆಲವೇ ಕೆಲವು ಬಂಗಾಳದ ನಾಯಕರಲ್ಲಿಇವರು ಒಬ್ಬರು. ಕಲ್ಕತ್ತಾ ವಿವಿಯಿಂದ ಪಿಜಿ ಪದವಿ ಪಡೆದ ಅವರು, ಇಂಡಿಯನ್‌ ಇನ್ಸ್‌ ಟಿಟ್ಯೂಟ್‌ ಆಫ್‌ ಸೋಷಿಯಲ್‌ ವೆಲೆಧೀರ್‌ ಆ್ಯಂಡ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದರು. ಕಾರ್ಪೊರೇಟ್‌ ಕಂಪನಿಯಲ್ಲಿಸ್ವಲ್ಪ ದಿನಗಳ ಕಾಲ ಎಚ್‌ಆರ್‌ ಆಗಿ ಕೆಲಸ ಮಾಡಿದ ಅನುಭವವಿದೆ.

ಟಿಎಂಸಿ ಸರ್ಕಲ್‌ನಲ್ಲಿ‘ಪಾರ್ಥ ದಾ’ ಎಂದೇ ಖ್ಯಾತರಾಗಿದ್ದ ಅವರೇನೂ ಆಕರ್ಷಕ ಭಾಷಣಕಾರರಲ್ಲ. ಬದಲಿಗೆ ಅತ್ಯುತ್ತಮ ಸಂಘಟಕ. ಇಂದು ಟಿಎಂಸಿ ಏನಾದರೂ ಬಂಗಾಳದಲ್ಲಿತಳಮಟ್ಟದಲ್ಲಿಗಟ್ಟಿ ಕಾರ್ಯಕರ್ತರ ಪಡೆಯನ್ನು ಹೊಂದಿದೆ ಎಂದರೆ ಅದರಲ್ಲಿಪಾರ್ಥ ಅವರ ಕೊಡಗೆ ಅಪಾರ. ಆ ಕಾರಣಕ್ಕಾಗಿಯೇ ಮಮತಾ ದೀದಿ ಅವರನ್ನು ತಮ್ಮ ಅತ್ಯಾಪ್ತ ಬಳಗಕ್ಕೆ ಸೇರಿಸಿಕೊಂಡಿದ್ದರು. ಕಾಂಗ್ರೆಸ್‌ನಿಂದ ಟಿಎಂಸಿಗೆ ಹಿರಿಯ ನಾಯಕರೊಂದಿಗೆ ಬಂದ ಅವರು, ನಿಧಾನ ಮತ್ತು ನಿರಂತರ ಗತಿಯಲ್ಲಿತಮ್ಮ ರಾಜಕೀಯ ಬೆಳವಣಿಗೆಯನ್ನು ಕಂಡುಕೊಂಡರು. ದಕ್ಷಿಣ ಕೋಲ್ಕೊತಾ ಮೂಲದ ಪಾರ್ಥ ಅವರು, ಬಂಗಾಳ ವಿಧಾನಸಭೆಗೆ 2001ರಲ್ಲಿಬೆಹಲಾ ಪಶ್ಚಿಮ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದರು. ಆ ಬಳಿಕ ಸತತ ಐದು ಅವಧಿಗೆ ಗೆದ್ದಿದ್ದಾರೆ. 2011ರಲ್ಲಿಟಿಎಂಸಿ ಅಧಿಕಾರಕ್ಕೆ ಬಂದಾಗ ಪ್ರಮುಖ ಖಾತೆಗಳೇ ಇವರನ್ನು ಅರಸಿಕೊಂಡು ಬಂದವು. 2014ರಿಂದಲೂ ಅವರ ಸಂಪುಟ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಬಂಗಾಳ ವಿಧಾನಸಭೆಯಲ್ಲಿಪ್ರತಿಪಕ್ಷ ದ ನಾಯಕರಾಗಿಯೂ ಪಾರ್ಥ ಕಾರ್ಯಧಿನಿರ್ವಹಿಸಿದ್ದಾರೆ. ಈಗ ಹಗರಣದ ಹಿನ್ನೆಲೆಯಲ್ಲಿಟಿಎಂಸಿ ಪಕ್ಷ ದಿಂದಲೇ ಅವರನ್ನು ಕಿತ್ತು ಹಾಕಲಾಗಿದೆ.

‘ಎಲ್ಲಬಣ್ಣಗಳನ್ನು ಮಸಿ ನುಂಗಿತು’ ಎನ್ನುವ ಹಾಗೆ, ಪಾರ್ಥ ಚಟರ್ಜಿ ಅವರೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಹಣದ ಲಾಲಸೆ, ಅಧಿಕಾರದ ದರ್ಪಗಳೆರಡೂ ಸೇರಿ ಬಿಟ್ಟರೆ ಅನಾಹುತ ಗ್ಯಾರಂಟಿ. ರಾಜಕೀಯ ಇತಿಹಾಸದಲ್ಲಿಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೂ ರಾಜಕೀಯ ನಾಯಕರು ಬುದ್ಧಿ ಕಲಿಯುವುದಿಲ್ಲ. ಅಪಾರ ಅನುಭವವಿದ್ದೂ ಅತಿಆಸೆಗೆ ರಾಜಕೀಯ ಜೀವನಕ್ಕೆ ಕೊಳ್ಳಿ ಇಟ್ಟುಕೊಂಡಿದ್ದು ಪಾರ್ಥ; ಅತಿ ಮಹತ್ವಾಕಾಂಕ್ಷಿಯೇ ಅರ್ಪಿತಾ ಅವರ ಜೀವನಕ್ಕೆ ಮುಸುಕು ಕವಿಯುವಂತೆ ಮಾಡಿತು!



ಈ ಲೇಖನವು ವಿಜಯ ಕರ್ನಾಟಕದ 2022ರ ಜುಲೈ 31ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಕಾಮೆಂಟ್‌ಗಳಿಲ್ಲ: