ಮಂಗಳವಾರ, ಫೆಬ್ರವರಿ 19, 2019

ಸ್ವರ್ಗದಂಥ ಕಾಶ್ಮೀರ ನರಕವಾಗಿದ್ದೇಕೆ?


'ಸ್ವರ್ಗಕ್ಕಿಂತ ಸುಂದರ!' ಎಂದು ಕಾಶ್ಮೀರ ಕುರಿತು ಕವಿರತ್ನ ಕಾಳಿದಾಸ ಹೇಳಿದ ಮಾತುಗಳೇನೂ ಅತಿಶೋಯುಕ್ತಿವಲ್ಲ. ಹಿಮಾಲಯ ಗರಡಿಯ ಈ ನಾಡು ಕಣ್ಣಿಗೆ ತಂಪೆರೆಯುವ ಬೀಡು. ಆದರೆ, ರಾಜಕೀಯ ಕಾರಣಗಳಿಂದಾಗಿ ಅದರ ಮಣ್ಣಿನಲ್ಲಿ ನಿತ್ಯ ನೆತ್ತರು ಹರಿಯುತ್ತಿದೆ. 'ಭರತ ವರ್ಷ'ದ ಅವಿಭಾಜ್ಯ ಅಂಗವಾದ ಕಾಶ್ಮೀರವು ಇದೀಗ ಪಾಕಿಸ್ತಾನ-ಭಾರತ ನಡುವಿನ 'ಕದನದ ಕೊಂಡಿ'ಯಾಗಿದೆ. ಕಾಶ್ಮೀರದ ಇಂದಿನ ಪರಿಸ್ಥಿತಿಗೆ ಯಾರು, ಹೇಗೆ, ಯಾಕೆ ಕಾರಣರಾದರು ಎಂದು ವಿಶ್ಲೇಷ ಮಾಡುತ್ತ ಕುಳಿತರೆ ಅದು, ಸತ್ತ ಕತ್ತೆಯ ಕಾಲು ಹಿಡಿದು ಎಳೆದಂತಾಗುತ್ತದೆ. ಆಗಿರುವ ಐತಿಹಾಸಿಕ ಪ್ರಮಾದಗಳನ್ನು ತಿದ್ದಿಕೊಂಡು, ಕಾಶ್ಮೀರಕ್ಕೊಂದು ಹೊಸ ಭರವಸೆಯನ್ನು ನೀಡಬೇಕಾದ, ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯ ಈ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. 

ಮುಸ್ಲಿಂ ಅರಸರ ಆಳ್ವಿಕೆ

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಲ್ಲಿ ಕಾಶ್ಮೀರವನ್ನು ಹಿಂದೂ ರಾಜ ಆಳುತ್ತಿದ್ದ. ಅದಕ್ಕೂ ಮೊದಲು ಈ ರಾಜ್ಯವನ್ನು ಅಂದರೆ, 1346ರಿಂದ 1819ರವರೆಗೆ ಮುಸ್ಲಿಂ ರಾಜರು ಆಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿ ಹಿಂದೂ ದೇಗುಲಗಳನ್ನು ನಾಶ ಮಾಡಲಾಯಿತು. ಜನರ ಒತ್ತಾಯದಿಂದ ಇಸ್ಲಾಮ್‌ ಧರ್ಮವನ್ನು ಹೇರಲಾಯಿತು. ಆದರೆ, 1587ರಿಂದ 1752ರವರೆಗಿನ ಮೊಘಲ ಆಡಳಿತದಲ್ಲಿ ಕಾಶ್ಮೀರ ಯಾವುದೇ ಅಪಸವ್ಯಗಳಿಗೆ ಒಳಗಾಗಲಿಲ್ಲ. ನಂತರದ ಆಫ್ಘನ್‌ಆಡಳಿತವನ್ನು ಕತ್ತಲೆ ಅವಧಿ ಎದು ಕರೆಯಲಾಗುತ್ತದೆ. 1819ರಲ್ಲಿ ಮುಸ್ಲಿಂ ಆಡಳಿತ ಕೊನೆಗೊಂಡಿತು. 

ಹಿಂದೂ ಅರಸರ ಆಡಳಿತ 
ಮೊದಲನೆಯ ಸಿಖ್‌ ವಾರ್‌(1846)ರ ಮುಕ್ತಾಯ ಬಳಿಕ ಈಗಿರುವ ಕಾಶ್ಮೀರವನ್ನು ಜಮ್ಮುವಿನಲ್ಲಿ ಆಡಳಿತ ಮಾಡುತ್ತಿದ್ದ ಮಹಾರಾಜ ಗುಲಾಬ್‌ ಸಿಂಗ್‌ ಅವರ ಸುಪರ್ದಿಗೆ ವಹಿಸಲಾಯಿತು. ಬಳಿಕ, ಮಹಾರಾಜ ರಣಬೀರ್‌ ಸಿಂಗ್‌, ಮಹಾರಾಜ ಪ್ರತಾಪ್‌ ಸಿಂಗ್‌, ಮಹಾರಾಜ ಹರಿಸಿಂಗ್‌ ಅವರು ಆಧುನಿಕ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಅಡಿಪಾಯ ಹಾಕಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಲ್ಲಿ ಕಾಶ್ಮೀರವನ್ನು ಆಳುತ್ತಿದ್ದವರು ರಾಜಾ ಹರಿಸಿಂಗ್‌ ಅವರು. 1880ರಲ್ಲಿ ಬ್ರಿಟಿಷ್‌ ಆಡಳಿತವು ಆಫ್ಘಾನಿಸ್ತಾನ ಮತ್ತು ರಷ್ಯಾಗೆ ಸಂಬಂಧಿಸಿದಂತೆ ಸ್ಪಷ್ಟವಾದ ಗಡಿಗಳನ್ನು ಗುರುತಿಸಿತು. 

ಸ್ವಾತಂತ್ರ್ಯದ ಬಳಿಕ ಕಾಶ್ಮೀರ 

ಭಾರತದಿಂದ ಪಾಕಿಸ್ತಾನ ಪ್ರತ್ಯೇಕತೆಯಲ್ಲೇ ಕಾಶ್ಮೀರ ಬಿಕ್ಕಟ್ಟು ಕೂಡ ಅಡಕವಾಗಿದೆ. ವಿಭಜನೆಯ ಸಮಯದಲ್ಲಿ ಕಾಶ್ಮೀರ ಯಾವ ಕಡೆ ಹೋಗಬೇಕು ಎಂಬ ನಿರ್ಧಾರವನ್ನು ಅಂದಿನ ರಾಜ ಹರಿಸಿಂಗ್‌ ಅವರಿಗೆ ಬಿಡಲಾಯಿತು. ಅವರ ಮುಂದೆ ಕೆಲವು ಷರತ್ತುಗಳೊಂದಿಗೆ ಸ್ವತಂತ್ರ ರಾಷ್ಟ್ರವಾಗುವ ಆಯ್ಕೆಯನ್ನು ನೀಡಲಾಗಿತ್ತು. ಕೆಲವು ತಿಂಗಳು ತೊಳಲಾಡಿದ ಬಳಿಕ ಅವರು, ಭಾರತೀಯ ಒಕ್ಕೂಟ ಜತೆ ಸೇರುವ ನಿರ್ಧಾರಕ್ಕೆ ಬಂದರು. ಮುಸ್ಲಿಂ ಬಾಹುಳ್ಯದ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂದು ಹಟ ಹಿಡಿದ ಪಾಕಿಸ್ತಾನ, ಕಣಿವೆ ರಾಜ್ಯದ ಮೇಲೆ ಯುದ್ಧ ಸಾರಿತು. ರಾಜಾ ಹರಿಸಿಂಗ್‌ ಭಾರತದ ಆಶ್ರಯಕ್ಕೆ ಬಂದರು. ಭಾರತ ತನ್ನ ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿ ಕೊಟ್ಟಿತು. ಅದು 1948ರ ಸಮಯ. ಉಭಯ ರಾಷ್ಟ್ರಗಳ ನಡುವಿನ ಮೊದಲ ಯುದ್ಧವದು. ಇದರಲ್ಲಿ ಸೋಲುಂಡಿದ್ದು ಪಾಕಿಸ್ತಾನವೇ. ಕಾಶ್ಮೀರದ ಕೆಲವು ಪ್ರದೇಶದ ಮೇಲೆ ಪಾಕಿಸ್ತಾನ ನಿಯಂತ್ರಣ ಸಾಧಿಸಿದರೆ, ಬಹುತೇಕ ಭಾಗವು ಭಾರತದ ಆಡಳಿತಕ್ಕೆ ಒಳಪಟ್ಟಿತು. 

ವಿಶೇಷ ಸ್ಥಾನಮಾನ 

ಭಾರತ ಒಕ್ಕೂಟ ಸೇರಬೇಕಿದ್ದರೆ ಒಂದಿಷ್ಟು ಭರವಸೆಗಳನ್ನು ಈಡೇರಿಸಬೇಕೆಂಬುದು ಅಂದಿನ ರಾಜಮನೆತನದ ಆಗ್ರಹವಾಗಿತ್ತು. ಇದಕ್ಕೆ ಅಂದಿನ ಪ್ರಧಾನಿ ನೆಹರು ಕೂಡ ಒಪ್ಪಿಗೆ ಸೂಚಿಸಿದ್ದರು. ಇದರ ಪರಿಣಾಮವೇ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ರಕ್ಷ ಣೆ, ಹಣಕಾಸು, ಸಂವಹನ ಮತ್ತು ವಿದೇಶಾಂಗ ವ್ಯವಹಾರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಆಡಳಿತದಲ್ಲಿ ಕಾಶ್ಮೀರವು ಪ್ರತ್ಯೇಕತೆಯನ್ನು ಹೊಂದಿದೆ. ಇದಕ್ಕಾಗಿ ಸಂವಿಧಾನದ ವಿಧಿ 370ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರನ್ವಯ, ಕಾಶ್ಮೀರವು ತನ್ನದೇ ಸ್ವಂತ ಸಂವಿಧಾನ ಹೊಂದಿದ್ದ, ಕೆಲವೊಂದು ವಿಶೇಷ ಹಕ್ಕುಗಳನ್ನು ಪಡೆದುಕೊಂಡಿದೆ. 

 ಬಿಕ್ಕಟ್ಟಿನ ಸುಕ್ಕುಗಳು

ಕಾಶ್ಮಿರ ಸಮಸ್ಯೆ ಮೂಲ ಹುಡುಕುತ್ತಾ ಹೋದರೆ ಅದು ದೇಶ ವಿಭಜನೆಗೆ ತಂದು ನಿಲ್ಲಿಸುತ್ತದೆ. ಮುಸ್ಲಿಮರೇ ಹೆಚ್ಚಾಗಿದ್ದ ರಾಜ್ಯವನ್ನು ಆಳುತ್ತಿದ್ದ ಹಿಂದೂ ರಾಜ ಹರಿಸಿಂಗ್‌ ಭಾರತದೊಂದಿಗೆ ವಿಲೀನಗೊಳಿಸುವ ನಿರ್ಧಾರ ಸಹಜವಾಗಿ ಪಾಕಿಸ್ತಾನಕ್ಕೆ ಹೊಟ್ಟೆಯುರಿಗೆ ಕಾರಣವಾಯಿತು ಮತ್ತು ಅಲ್ಲಿಂದಲೇ ಕಾಶ್ಮೀರ ಕಣಿವೆಯಲ್ಲಿ ನೆತ್ತರ ಹರಿಯಲು ಆರಂಭವಾಯಿತು. ಬಳಿಕ, ಉಭಯ ರಾಷ್ಟ್ರಗಳ ನಾಯಕರು ಕೈಗೊಂಡ ಕೆಲವು ನಿರ್ಧಾರಗಳು ಸಮಸ್ಯೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದವು. ಭಾರತದ ಅಂದಿನ ಪ್ರಧಾನಿ ಜವಾಹರ ಲಾಲ್‌ ನೆಹರು ಅವರು ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ಈ ಸಮಸ್ಯೆಯನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಟ್ಟವರು ಅಂದಿನ ರಕ್ಷ ಣಾ ಸಚಿವ ವಿ. ಕೆ. ಕೃಷ್ಣ ಮೆನನ್‌ಅವರು. 1950ರಲ್ಲಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ 8 ಗಂಟೆಗಳ ಕಾಲ ಮಾತನಾಡಿ ಕಾಶ್ಮೀರ ಮೇಲಿನ ಹಕ್ಕು ಪ್ರತಿಪಾದಿಸಿದರು. ಕೊನೆಯದಾಗಿ, ಕಾಶ್ಮೀರ ವಿಷಯವನ್ನು ಮತ್ತೆ ಮತ್ತೆ ಕೆದಕುವುದೆಂದರೆ ಸತ್ತ ಕತ್ತೆಯ ಬಾಲ ಹಿಡಿದು ಎಳೆದಂತೆ'' ಎಂದು ಹೇಳಿದ್ದರು. ಆನಂತರದ ರಾಜತಾಂತ್ರಿಕ ಮಾತುಕತೆಗಳು, ಯುದ್ಧಗಳು ಸಮಸ್ಯೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದವು. ಯುದ್ಧದಲ್ಲಿ ಗೆಲ್ಲಲಾಗದು ಎಂಬ ಕಟು ವಾಸ್ತವ ಅರಿವಾಗುತ್ತಿದ್ದಂತೆ ಪಾಕಿಸ್ತಾನ, ಭಯೋತ್ಪಾದನೆ ಮೂಲಕ ಗೆಲ್ಲುವ ಹೂಟಕ್ಕಿಳಿಯಿತು; ಶಾಂತಿಮಾತುಕತೆಗಳು ಹಳ್ಳ ಹಿಡಿದವು. ಸೇನೆಯ ಕೈಗೊಂಬೆಯಂತೆ ವರ್ತಿಸುವ ಪಾಕಿಸ್ತಾನದ ಯಾವುದೇ ಸರಕಾರವು ಈವರೆಗೂ ನಿರ್ದಿಷ್ಟವಾಗಿ ಪರಿಹಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಭಾರತವು, ಭಯೋತ್ಪಾದನೆ ಕೃತ್ಯ ಮತ್ತು ಅಪ್ರಚೋದಿತ ಕಾಳಗವನ್ನು ಗಡಿಯಲ್ಲಿ ನಿರಂತರ ಎದುರಿಸುತ್ತಲೇ ಬಂದಿದೆ. 

ನೆತ್ತರ ಹರಿಸಿದ ಯುದ್ಧಗಳು

ಇಡೀ ಕಾಶ್ಮೀರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂಬ ಪಾಕಿಸ್ತಾನದ ದುರಾಸೆಯಿಂದಾಗಿ ಈವರೆಗೆ ನಾಲ್ಕು ಯುದ್ಧಗಳು ಉಭಯ ರಾಷ್ಟ್ರಗಳ ನಡುವೆ ನಡೆದಿವೆ. ಈ ಪೈಕಿ ಮೂರು ಯುದ್ಧಗಳು ನೇರವಾಗಿ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ್ದರೆ, ಒಂದು ಯುದ್ಧವು ಪೂರ್ವ ಪಾಕಿಸ್ತಾನ ವಿಮೋಚನೆಗೆ ಸಂಬಂಧಿಸಿದ್ದಾಗಿದೆ. ವಿಶೇಷ ಎಂದರೆ, ಈ ನಾಲ್ಕೂ ಯುದ್ಧಗಳಲ್ಲಿ ಭಾರತ ಮೇಲುಗೈಯ ಸಾಧಿಸಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಪಾಕಿಸ್ತಾನ ಮಾತ್ರ ಜಯ ದೊರಕಿದ್ದು ತನಗೇ ಎಂದುಹೇಳಿಕೊಳ್ಳುತ್ತದೆ. 

1947 ಯುದ್ಧ: ಇದನ್ನು ಮೊದಲನೆಯ ಕಾಶ್ಮೀರ ಯುದ್ಧ ಎಂದು ಕರೆಯಲಾಗುತ್ತದೆ. 1947 ಅಕ್ಟೋಬರ್‌ನಲ್ಲಿ ಆರಂಭವಾದ ಯುದ್ಧ ಏಪ್ರಿಲ್‌ 1948ರವರೆಗೆ ನಡೆಯಿತು. ಅಂತಿಮವಾಗಿ ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಕ್‌ ಭಾರತದ ವಶವಾದರೆ, ಪಾಕಿಸ್ತಾನಕ್ಕೆ ಅಜಾದ್‌ ಕಾಶ್ಮೀರ ಮತ್ತು ಗಿಲ್ಗಿಟ್‌-ಬಾಲ್ಟಿಸ್ತಾನ ದಕ್ಕಿದವು. ಜತೆಗೆ ಲೈನ್‌ ಆಫ್‌ ಕಂಟ್ರೋಲ್‌ ಗುರುತಿಲಾಯಿತು. 

1965ರ ಯುದ್ಧ: ಪಾಕಿಸ್ತಾನದ ಆಪರೇಷನ್‌ ಗ್ರಿಬ್ರಾಲ್ಟರ್‌ನೊಂದಿಗೆ ಯುದ್ಧ ಕೂಡ ಆರಂಭವಾಯಿತು. ಮೊದಲಿಗೆ ಪಾಕಿಸ್ತಾನದ ಸೇನೆಯ ಕಾಶ್ಮೀರದೊಳಗೆ ನುಸುಳಿತು. ಇದಕ್ಕೆ ಪ್ರತಿಯಾಗಿ ಭಾರತವು ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸಿತು. 17 ದಿನಗಳ ಕಾಲ ನಡೆದ ಯುದ್ಧದಲ್ಲಿ ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿತು. ಅಂತಿಮವಾಗಿ ಪಾಕ್‌ ಅಧ್ಯಕ್ಷ ಅಯೋಬ್‌ ಖಾನ್‌ ಮತ್ತು ಅಂದಿನ ಪ್ರಧಾನಿ ಲಾಲ ಬಹದ್ದೂರ್‌ ಶಾಸ್ತ್ರಿ ತಾಷ್ಕೆಂಟ್‌ನಲ್ಲಿ ತಾಷ್ಕೆಂಟ್‌ ಒಪ್ಪಂದಕ್ಕೆ ಸಹಿ ಹಾಕಿದರು. 

ಪೂರ್ವ ಪಾಕಿಸ್ತಾನ ವಿಮೋಚನೆಕಾಶ್ಮೀರ ಕಾರಣಕ್ಕಾಗಿ 1971ರ ಯುದ್ಧ ನಡೆಯಲಿಲ್ಲ. ಬದಲಿಗೆ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಈ ಯುದ್ಧವಿದು. ಪಶ್ಚಿಮ ಪಾಕಿಸ್ತಾನದ ದುರಾಡಳಿತಕ್ಕೆ ಬೇಸತ್ತ ಪೂರ್ವ ಪಾಕಿಸ್ತಾನದ ನಾಯಕರು ಬಂಡಾಯವೆದ್ದರು. ಪೂರ್ವ ಪಾಕಿಸ್ತಾನದ ನೆರವಿಗೆ ಧಾವಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು, ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಡಿಸುವ ಮೂಲಕ ಭಾರಿ ಹೊಡೆತವನ್ನು ನೀಡಿದರು. ಅಪಾರ ಪ್ರಮಾಣದ ಸಾವು ನೋವು ಸಂಭವಿಸಿತು. ಪಾಕಿಸ್ತಾನದ ನೌಕಾ ಪಡೆ ಮತ್ತು ವಾಯು ಪಡೆ ಇನ್ನಿಲ್ಲದಂತೆ ಘಾಸಿಗೊಂಡವು. ಪಾಕಿಸ್ತಾನದ 90 ಸಾವಿರ ಸೈನಿಕರು ಸೆರೆಯಾಳಾದರು. ಅಂತಿಮವಾಗಿ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದಯವಾಯಿತು. ಪಾಕಿಸ್ತಾನ ಇನ್ನಿಲ್ಲದಂತೆ ನಷ್ಟ ಅನುಭವಿಸಿತು. 

ಕಾರ್ಗಿಲ್‌ ಯುದ್ಧ-1999:ಎಲ್‌ಒಸಿ ದಾಟಿ ಒಳ ನುಗ್ಗಿದ ಪಾಕಿಸ್ತಾನದ ಪಡೆಗಳು ಕಾಶ್ಮೀರ ಕಾರ್ಗಿಲ್‌ ಜಿಲ್ಲೆಯ ಕೆಲವು ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತವು ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ಕೈಗೊಂಡಿತು. ಎರಡು ತಿಂಗಳ ಕಾಲ ಈ ಯುದ್ಧ ನಡೆಯಿತು. ಭಾರತೀಯ ಸೇನೆ ತನ್ನೆಲ್ಲ ಪ್ರದೇಶಗಳನ್ನು ಒಂದೊಂದಾಗಿ ಮರಳಿ ವಶಪಡಿಸಿಕೊಂಡಿತು. ಘನಘೋರ ಯುದ್ಧದ ಸುಳಿವು ಅರಿತ ಅಂತಾರಾಷ್ಟ್ರೀಯ ಸಮುದಾಯವು ಯುದ್ಧ ವಿರಾಮಕ್ಕೆ ಒತ್ತಡ ಹೇರಿದವು. ಯುದ್ಧ ಕೊನೆಯಾಯಿತು. ಎರಡು ಕಡೆ ಅಪಾರ ಸಾವು ನೋವು ಸಂಭವಿಸಿತು. 

ಮಾತುಕತೆ, ಒಪ್ಪಂದಗಳು
ಕಾಶ್ಮೀರ ಮೇಲಿನ ಹಕ್ಕು ಸಾಧನೆಗೆ ಪಾಕಿಸ್ತಾನ ಆಗಾಗ ಯುದ್ಧಕ್ಕೆ ಮುಂದಾದರೂ ಭಾರತವು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅನೇಕ ಒಪ್ಪಂದ ಮತ್ತು ಮಾತುಕತೆಗಳನ್ನು ಆ ರಾಷ್ಟ್ರದ ಜತೆ ಕೈಗೊಂಡಿದೆ. ಈ ಪೈಕಿ ಕೆಲವು ಯಶಸ್ವಿಯಾದರೆ, ಬಹುತೇಕ ವಿಫಲವಾಗಿವೆ. 

ಶಿಮ್ಲಾ ಒಪ್ಪಂದ:
1971ರ ಯುದ್ಧದಲ್ಲಿ ಪಾಕಿಸ್ತಾನ ಸೋತ ನಂತರ ಏರ್ಪಟ್ಟ ಒಪ್ಪಂದವಿದು. ಪಾಕ್‌ ಅಧ್ಯಕ್ಷ ಝುಲ್ಫಿಕರ್‌ ಅಲಿ ಭುಟ್ಟೊ ಮತ್ತು ಪ್ರಧಾನಿ ಇಂದಿರಾ ಗಾಂಧಿ ಅವರು ಶಿಮ್ಲಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಅದರ ಅನ್ವಯ ಭಾರತವು ಸೆರೆಯಾಳಾಗಿಸಿಕೊಂಡಿದ್ದ ಎಲ್ಲ ಪಾಕ್‌ ಸೈನಿಕರನ್ನು ಬಿಟ್ಟಕೊಡುವುದು. ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಯನ್ನು ಮಾತುಕತೆಯ ಮೂಲಕ ನಡೆಸಬೇಕೆಂದು ಕರಾರು ಮಾಡಲಾಯಿತು. 

1990ರ ದಶಕ: ಈ ಅವಧಿಯಲ್ಲಿ ಉಭಯ ರಾಷ್ಟ್ರಗಳ ಪ್ರಧಾನಿಗಳು ಎರಡು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದರು. ಹಾಗೆಯೇ ವಿದೇಶಾಂಗ ಕಾರ್ಯದರ್ಶಿಗಳು ಮೂರು ಸುತ್ತಿನ ಮಾತುಕತೆ ನಡೆಸಿದರು. ಕಾಶ್ಮೀರ ಸಮಸ್ಯೆ ಸೇರಿದಂತೆ ಒಟ್ಟು 8 ವಿಷಯಗಳ ಬಗ್ಗೆ ಚರ್ಚಿಸಲಾಯಿತು. 1997ರಲ್ಲಿ ನಡೆದ ಮಾತುಕತೆ ವಿಫಲವಾದರೆ(ಕಾಶ್ಮೀರ ವಿಷಯಕ್ಕಾಗಿ), 1999ರಲ್ಲಿ ಕೈಗೊಳ್ಳಲಾದ ಪ್ರಯತ್ನದಲ್ಲಿ ಉಭಯ ಪ್ರಧಾನಿಗಳು ಲಾಹೋರ್‌ನಲ್ಲಿ ಮಾತುಕತೆ ನಡೆಸಿ ಮೂರು ಒಪ್ಪಂದಕ್ಕೆ ಸಹಿ ಹಾಕಿದದರು. ಆದರೆ, ಪಾಕಿಸ್ತಾನದಲ್ಲಿ ಸೇನಾಡಳಿತ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಎಲ್ಲ ಮಾತುಕತೆಗಳು ವಿಫಲಗೊಂಡವು. 

ಲಾಹೋರ್‌ಗೆ ಬಸ್‌: ಶಾಂತಿಯ ಸಂದೇಶ ಹೊತ್ತು ಅಂದಿನ ಪ್ರಧಾನಿ ವಾಜಪೇಯಿ ಅವರು 1999ರಲ್ಲಿ ಲಾಹೋರ್‌ ಬಸ್‌ ಯಾತ್ರೆಯನ್ನು ಕೈಗೊಂಡರು. ಫೆಬ್ರವರಿ 21ರಂದು ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದವು. ಆದರೆ, ಬಸ್‌ ಯಾತ್ರೆ ಮುಗಿಸಿ ವಾಪಸ್‌ ಬರುವಷ್ಟರಲ್ಲಿ ಪಾಕಿಸ್ತಾನದ ಸೇನಾ ಪಡೆಗಳು ಕಾರ್ಗಿಲ್‌ನೊಳಗೆ ನುಸುಳಿಕೊಂಡಿದ್ದವು. ಇದೇ ಮುಂದೆ ಕಾರ್ಗಿಲ್‌ ಯುದ್ಧಕ್ಕೆ ಕಾರಣವಾಯಿತು. 

ಭಯೋತ್ಪಾದನೆ
ಯುದ್ಧದ ಮೂಲಕ ಭಾರತದ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಾಗತ್ತಿದ್ದಂತೆ ಪಾಕಿಸ್ತಾನದ ಸೇನೆ ಭಯೋತ್ಪಾದನೆಗೆ ನೀರೇರಿಯಿತು. ಇದಕ್ಕೆ ಕಾಶ್ಮೀರ ಪ್ರತ್ಯೇಕವಾದಿಗಳೂ ಇಂಬು ನೀಡಿದರು. ಸ್ಥಳೀಯರ ಭಾರತ ವಿರೋಧಿ ಭಾವನೆಯನ್ನೆ ಬಂಡವಾಳವಾಗಿಸಿಕೊಂಡ ಅಲ್ಲಿನ ಸೇನೆ ಉಗ್ರ ಸಂಘಟನೆಗಳು ಎಲ್ಲ ಸಹಕಾರ, ನೆರವು ಒದಗಿಸಿತು. ಈ ವಿಷಯ ಪ್ರತಿ ಭಯೋತ್ಪಾದನೆ ಸಂದರ್ಭದಲ್ಲಿ ಸಾಬೀತಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬಲಿಯಾದ ಸೈನಿಕರು, ನಾಗರಿಕರ ಪಟ್ಟಿ ದೊಡ್ಡದಿದೆ. ಜೈಷೆ ಇ ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಗೆ 2017ರಿಂದ 2019ವರೆಗಿನ ಫೆಬ್ರವರಿ 14ರ ವರೆಗೆ 110ಕ್ಕೂ ಹೆಚ್ಚು ಯೋಧರು ಬಲಿಯಾದರೆ, ಉಗ್ರರನ್ನೂ ಸೇನೆ ಸದೆ ಬಡೆದಿದೆ. ಇದು ಕೇವಲ ಉದಾಹರಣೆಯಷ್ಟೆ. ಒಂದು ಅಂದಾಜಿನ ಪ್ರಕಾರ, 1947ರಿಂದ ಇಲ್ಲಿಯವರೆಗೆ ಯೋಧರು, ನಾಗರಿಕರು ಸೇರಿ 40 ಸಾವಿರದಿಂದ 80 ಸಾವಿರವರೆಗೂ ಜನ ಸತ್ತಿದ್ದಾರೆ. ಇದಕ್ಕೆಲ್ಲ ಕೊನೆ ಹಾಡಬೇಕಾದ ಕಾಲ ಈಗ ಸನ್ನಿಹಿತವಾಗಿದೆ. 


https://vijaykarnataka.indiatimes.com/state/vk-special/how-heaven-of-earth-kashmir-becoming-the-hell-due-to-pakistan-terrorism/articleshow/68052382.cms

ಕಾಮೆಂಟ್‌ಗಳಿಲ್ಲ: