ಸೋಮವಾರ, ಜೂನ್ 24, 2019

Best Yoga Apps: ಯೋಗ ಕಲಿಕೆಗೆ ಆ್ಯಪ್ ಗುರು

- ಮಲ್ಲಿಕಾರ್ಜುನ ತಿಪ್ಪಾರ 
ಭಾರತವು ಯೋಗವನ್ನು ಇಡೀ ಜಗತ್ತಿಗೆ ಕೊಡುಗೆಯಾಗಿ ನೀಡಿದೆ. ಪ್ರಾಚೀನ ಕಾಲದ ಈ ವೈದ್ಯ ಪದ್ಧತಿ ಕೇವಲ ದೈಹಿಕವಾಗಿ ಮಾತ್ರ ಲಾಭವನ್ನು ತಂದುಕೊಡುವುದಲ್ಲದೇ ಮಾನಸಿಕವಾಗಿ ಅಧ್ಯಾತ್ಮಿಕ ದೃಷ್ಟಿಯಲ್ಲೂ ನಿಮ್ಮನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿಯೇ ಯೋಗವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಯಾವುದೇ ಧರ್ಮ, ವರ್ಗ, ಜಾತಿ, ಬಣ್ಣ, ಪ್ರಾದೇಶಿಕ ಹಂಗಿಲ್ಲದೇ ಬೆಳೆಯುತ್ತಿದೆ. ಕಳೆದ ಐದು ವರ್ಷಗಳಿಂದ ವಿಶ್ವಸಂಸ್ಥೆ ಆಚರಿಸಿಕೊಂಡು ಬರುತ್ತಿರುವ 'ಅಂತಾರಾಷ್ಟ್ರೀಯ ಯೋಗ ದಿನಾಚರಣೆ' ಇದಕ್ಕೆ ಸಾಕ್ಷಿಯಾಗುತ್ತಿದೆ. ಯೋಗವನ್ನು ಗುರುವಿನ ನೆರವಿನಿಂದಲೇ ಕಲಿಯಬೇಕು ಎಂಬ ಮಾತಿದೆ. ಇಂದಿನ ಆಧುನಿಕ ಯುಗದಲ್ಲಿ ಈ ಗುರುವಿನ ಸ್ಥಾನವನ್ನು ಆ್ಯಪ್‌ಗಳು ತುಂಬುತ್ತಿವೆ. ಯೋಗಕ್ಕೆ ಸಂಬಂಧಿಸಿದಂತೆ ನೂರಾರು ಆ್ಯಪ್‌ಗಳಿವೆ. ಗೂಗಲ್‌ ಪ್ಲೇ ಸ್ಟೋರ್‌, ಆ್ಯಪಲ್‌ನಲ್ಲಿ ಸಾಕಷ್ಟು ಆ್ಯಪ್‌ಗಳಿದ್ದು, ಆ ಪೈಕಿ ಒಂದಿಷ್ಟು ಆ್ಯಪ್‌ಗಳು ತುಂಬ ಉಪಯುಕ್ತವಾಗಿವೆ. ಗುರು ನೀಡುವ ಮಾರ್ಗದರ್ಶನದಷ್ಟೇ ಶುದ್ಧವಾದ ಪಾಠವನ್ನು ಈ ಆ್ಯಪ್‌ಗಳು ನೀಡುತ್ತವೆ. ಅಂಥ ಕೆಲವು ಉಪಯುಕ್ತ ಆ್ಯಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ. 

ಹೆಡ್‌ಸ್ಪೇಸ್‌
ಯಾವುದೇ ಯೋಗ ಮಾಡಲು ಏಕಾಗ್ರತೆಯೂ ಮುಖ್ಯ. ಏಕಾಗ್ರತೆಯನ್ನು ಸಾಧಿಸಲು ಧ್ಯಾನ ನಿಮಗೆ ಹೆಚ್ಚಿನ ನೆರವು ನೀಡುತ್ತದೆ. ಆ ಹಿನ್ನೆಲೆಯಲ್ಲಿ ಹೆಡ್‌ಸ್ಪೇಸ್‌ ನಿಮಗೆ ಧ್ಯಾನದ ಅನೇಕ ಪಾಠಗಳನ್ನು ಹೇಳಿಕೊಡುತ್ತದೆ. ವಿಶೇಷವಾಗಿ ಯೋಗ ಆರಂಭಿಕರಿಗೆ ಇದು ಹೆಚ್ಚಿನ ಸಹಾಯ ಮಾಡಬಲ್ಲದು. ಅನೇಕ ಹೊಸ ಹೊಸ ಫೀಚರ್‌ಗಳನ್ನು ಹೊಂದಿರುವ ಈ ಆ್ಯಪ್‌, ಸ್ಲೀಪ್‌ ವಿಥ್‌ ನರೇಟೆಡ್‌ ಸ್ಟೋರಿಸ್‌ ಎಂಬ ಸೆಕ್ಷ ನ್‌ ಹೊಂದಿದೆ. ಇದು ನಿಮಗೆ ಸುಖವಾದ ನಿದ್ರೆ ಮಾಡಲು ನೆರವು ನೀಡುತ್ತದೆ. 

ಯೋಗ ಗೋ
ಯೋಗಕ್ಕೆ ಸಂಬಂಧಿಸಿದ ಬಹಳಷ್ಟು ಆ್ಯಪ್‌ಗಳು ಯೋಗಾಸನಗಳು ಬಗ್ಗೆ ವಿಶೇಷವಾದ ಮಾಹಿತಿ ನೀಡುತ್ತವೆ. ಆದರೆ, ಈ ಯೋಗ ಗೋ ಆ್ಯಪ್‌ ನಿಮಗೆ ಯೋಗದ ಜತೆಗೆ ಡಯಟ್‌ ಪ್ಲ್ಯಾನ್‌ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡುತ್ತದೆ. ಫಿಟ್ನೆಸ್‌ ಗೋಲ್‌ ಅನ್ನು ನೀವು ನಿರ್ಧರಿಸಿ ಆ ದಿಸೆಯಲ್ಲಿ ಯೋಗ ಗೋ ಆ್ಯಪ್‌ ಮೂಲಕ ಅದನ್ನು ತಲುಪಬಹುದು. ಜತೆಗೆ ಆರೋಗ್ಯಕಾರಿ ಊಟದ ರೆಸೆಪಿಗಳು ಕೂಡ ಈ ಆ್ಯಪ್‌ನಲ್ಲಿವೆ. 

5 ಮಿನಿಟ್‌ ಯೋಗ
ಇದೊಂದು ಅತ್ಯಂತ ಸರಳವಾದ ಯೋಗ ಆ್ಯಪ್‌. ಹೆಸರೇ ಹೇಳುವಂತೆ ಐದು ನಿಮಿಷದಲ್ಲೇ ನಿಮಗೆ ಯೋಗ ಪಾಠ ಮಾಡುತ್ತದೆ. ಜತೆಗೆ, ಡೈಲಿ ರಿಮೈಂಡರ್ಸ್‌, ಟೈಮರ್‌ ಕೂಡ ಒದಗಿಸುತ್ತದೆ. ಇದರಲ್ಲಿರುವ ವಿಡಿಯೊ ಟುಟೊರಿಯಲ್ಸ್‌ ಚೆನ್ನಾಗಿವೆ. ಯೋಗಾಸನದ ಚಿತ್ರಗಳು ಮತ್ತು ವಿವರಣೆಗಳು ಪರಿಪೂರ್ಣವಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಇಲ್ಲಿರುವ ವಿಡಿಯೊಗಳನ್ನು ರನ್‌ ಮಾಡಲು ತುಂಬ ಹೆಚ್ಚಿನ ಡೇಟಾ ಏನೂ ಖರ್ಚು ಮಾಡುವುದಿಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದರೆ ನೀವು ಹಣ ಕೊಟ್ಟು ಚಂದಾದಾರರಾಗಬೇಕಾಗುತ್ತದೆ ಮತ್ತು ಈ ಆ್ಯಪ್‌ಗೆ 4.5 ರಾರ‍ಯಂಕಿಂಗ್‌ ಅನ್ನು ಬಳಕೆದಾರರು ನೀಡಿದ್ದಾರೆ. 

ಡೌನ್‌ ಯೋಗ
ಯೋಗಕ್ಕೆ ಸಂಬಂಧಿಸಿದಂತೆ ಇದೊಂದು ಅತ್ಯುತ್ತಮ ಆ್ಯಪ್‌ ಆಗಿದ್ದು, ಅದ್ಭುತ ಅನುಭವವನ್ನು ನೀಡುತ್ತದೆ. ಜತೆಗೆ, ಇಲ್ಲಿರುವ ಯೋಗ ಪಾಠಗಳನ್ನು ನಿಮಗೆ ಬೇಕಾದಂತೆ ಕಸ್ಟ್‌ಮೈಸ್‌ ಮಾಡಿಕೊಳ್ಳಬಹುದು. ಜತೆಗೆ, ಗೂಗಲ್‌ ಫಿಟ್ನೆಸ್‌ ಸಪೋರ್ಟ್‌, ಬಿಗಿನರ್ಸ್‌ ಕ್ಲಾಸಸ್‌, ಆಫ್‌ಲೈನ್‌ ಸಪೋರ್ಟ್‌, ವಾಯ್ಸ್‌ ಗೈಡನ್ಸ್‌, ಮ್ಯೂಸಿಕ್‌ ಸೇರಿದಂತೆ ಇನ್ನಿತರ ಸೇವೆಗಳನ್ನು ಈ ಆ್ಯಪ್‌ ಒದಗಿಸುತ್ತದೆ. ಯೋಗ ಆಸನಗಳ ಬಗ್ಗೆ ಅತ್ಯತ್ತಮ ಮಾಹಿತಿಯನ್ನು ಈ ಆ್ಯಪ್‌ ಒಳಗೊಂಡಿದೆ. ಇದು ಕೂಡ ಉಚಿತ ಮತ್ತು ಪ್ರೀಮಿಯಂ ಆಫರ್‌ಗಳನ್ನು ಹೊಂದಿದೆ. ಬಳಕೆದಾರರು 4.9 ಶ್ರೇಯಾಂಕವನ್ನು ಈ ಆ್ಯಪ್‌ಗೆ ನೀಡಿದ್ದಾರೆ. 

ಪಾಕೆಟ್‌ ಯೋಗ
ಯೋಗ ಆ್ಯಪ್‌ಗಳಲ್ಲೇ ಪಾಕೆಟ್‌ ಯೋಗ ಕೂಡ ಅತ್ಯುತ್ತಮ ಆ್ಯಪ್‌ ಎಂದು ಗುರುತಿಸಿಕೊಂಡಿದೆ. ಯೋಗಾಸನ ತಿಳಿಸಿಕೊಡಲು ಈ ಆ್ಯಪ್‌ ಪಠ್ಯ ಮತ್ತು ಇಮೇಜ್‌ಗಳನ್ನು ಬಳಸುತ್ತದೆ. 200ಕ್ಕೂ ಹೆಚ್ಚುವ ಯೋಗಾಸನಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಇದರಲ್ಲಿದೆ. ಪ್ರಾಕ್ಟಿಸ್‌ ಸೆಷನ್‌, ಯೋಗ ಚಟುವಟಿಕೆ ಲಾಗ್‌ ಬುಕ್‌ ಕೂಡ ಇದ್ದು, ಸಂಗೀತ ಕೂಡ ಇದೆ. ವಿಶೇಷ ಎಂದರೆ, ಪಾಕೆಟ್‌ ಯೋಗ ಕರ್ಮ(ಪಾಯಿಂಟ್‌) ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ನೀವು ಎಷ್ಟು ಯೋಗಾಸನಗಳನ್ನು ಮಾಡುತ್ತೀರೋ ಅಷ್ಟು ಕರ್ಮ ನೀವು ಪಡೆದುಕೊಳ್ಳುತ್ತೀರಿ. ಹೀಗೆ ಕರ್ಮ ಪಡೆದುಕೊಳ್ಳುತ್ತ ಹೋದಂತೆ ನೀವು ಇನ್ನೂ ಹೆಚ್ಚಿನ ಫೀಚರ್‌ಗಳನ್ನು ಅನ್‌ಲಾಕ್‌ ಮಾಡುತ್ತ ಹೋಗುತ್ತೀರಿ. ಅದಂರೆ, ಇನ್ನೂ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಈ ಆ್ಯಪ್‌ಗೆ ಬಳಕೆದಾರರು 4.4 ಶ್ರೇಯಾಂಕ ನೀಡಿದ್ದಾರೆ. 

ಟ್ರ್ಯಾಕ್‌ ಯೋಗ 
ಯೋಗಾಸಕ್ತರ ಎಲ್ಲ ಅಗತ್ಯಗಳನ್ನು ಈ ಆ್ಯಪ್‌ ಪೂರೈಸುತ್ತದೆ. ಯೋಗ ಕಲಿಯುಲು ಆರಂಭಿಸುವವರು, ಈಗಾಗಲೇ ಒಂದಿಷ್ಟು ಮಾಹಿತಿ ಹೊಂದಿವರು ಮತ್ತು ತಜ್ಞತೆ ಸಾಧಿಸಿದವರು ಎಂಬ ಮೂರೂ ವರ್ಗದ ಯೋಗಾಸಕ್ತರನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಎಚ್‌ಡಿ ವಿಡಿಯೊ ಕಂಟೆಂಟ್‌ ಒದಗಿಸುತ್ತದೆ. ಲೈಬ್ರರಿ ಇದೆ. ಯೋಗ ಮಾತ್ರವಲ್ಲದೆ ಫ್ರೀಸ್ಟೈಲ್‌ ವರ್ಕೌಟ್‌ಗಳ ಬಗ್ಗೆ ಇಲ್ಲಿ ಮಾಹಿತಿ ದೊರೆಯುತ್ತದೆ. ಪಾಕೆಟ್‌ ಯೋಗದ ಕರ್ಮ ಪಾಯಿಂಟ್‌ ರೀತಿಯಲ್ಲೇ ಈ ಆ್ಯಪ್‌ ಕೂಡ ಕ್ರಿಯಾ ಪಾಯಿಂಟ್‌ ಸಿಸ್ಟಮ್‌ ಹೊಂದಿದ್ದು, ಇದು ಯೋಗದ ಮೇಲೆ ಆಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕ್ರಿಯಾ ಪಾಯಿಂಟ್‌ ಹೆಚ್ಚೆಚ್ಚು ಗಳಿಸಿದಂತೆ ನಿಮಗೆ ಇನ್ನೂ ಹೆಚ್ಚಿನ ಫೀಚರ್‌ಗಳನ್ನು ಅನ್‌ಲಾಕ್‌ ಮಾಡುತ್ತ ಹೋಗಬಹುದು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 4.5 ಶ್ರೇಯಾಂಕವಿದೆ. 

ಯೋಗ ಡೈಲಿ ಫಿಟ್ನೆಸ್‌
ಉಚಿತ ಯೋಗ ಆ್ಯಪ್‌ಗಳಲ್ಲೇ ಯೋಗ ಡೈಲಿ ಫಿಟ್ನೆಸ್‌ ಅತ್ಯುತ್ತಮ ಆ್ಯಪ್‌ ಎಂದು ಗುರುತಿಸಿಕೊಂಡಿದೆ. ಸರಳ ಫೀಚರ್‌ಗಳನ್ನು ಹೊಂದಿರುವ ಸರಳ ಆ್ಯಪ್‌ ಎಂದು ಹೇಳಬಹುದು. ನಾನಾ ತರಹದ ಎಕ್ಸರ್‌ಸೈಜ್‌, ಆಸನಗಳು ಮತ್ತು 30 ದಿನ ಯೋಗ ಕಲಿಕೆಯ ಕೋರ್ಸ್‌ ಇದೆ. 

ಯೋಗ ಸ್ಟುಡಿಯೊ
ಈ ಆ್ಯಪ್‌ ಅದ್ಭತವಾದ ಲೈಬ್ರರಿ ಹೊಂದಿದ್ದು, ಅನೇಕ ಯೋಗಾಸನಗಳ ಬಗ್ಗೆ ಮಾಹಿತಿ ನೀಡುತ್ತದೆ. ಜತೆಗೆ 70ಕ್ಕ ಹೆಚ್ಚು ಯೋಗ ಮತ್ತು ಧ್ಯಾನದ ಕ್ಲಾಸ್‌ಗಳು ಇಲ್ಲಿವೆ. ಎಚ್‌ಡಿ ವಿಡಿಯೊ ಸೇರಿದಂತೆ ಇನ್ನಿತರ ಹೈಟೆಕ್‌ ಅದ್ಭುತ ಅನುಭವವನ್ನು ಈ ಆ್ಯಪ್‌ ನೀಡುತ್ತದೆ. 

                  Yoga Page

ಕಾಮೆಂಟ್‌ಗಳಿಲ್ಲ: