ಪರಿಸರ ರಕ್ಷಣೆಯಲ್ಲೂ ಗಾಂಧಿ ಮಾರ್ಗದ ಮೂಲಕವೇ ಯಶಸ್ಸು ಕಂಡ ಸುಂದರಲಾಲ್ ಬಹುಗುಣ ಅವರು ಚಿಪ್ಕೋ ಚಳವಳಿಯ ಮೂಲಕ ಜಗದ್ವಿಖ್ಯಾತರಾದವರು.
ಬಹುಶಃ ಹಿಮಾಲಯದ ತಪ್ಪಲಿನಲ್ಲಿಇಂದು
ಅರಣ್ಯ ಉಳಿದಿರಲು ಬಹುಗುಣ ರೂಪಿಸಿದ ಚಳವಳಿಯೇ ಕಾರಣ. ಇಲ್ಲದಿದ್ದರೆ ಅಭಿವೃದ್ಧಿಯ ಹೆಸರಲ್ಲಿ
ಹಿಮಾಲಯದ ತಪ್ಪಲಿನ ಕಾಡು ನಾಶವಾಗಿ, ಬೋಳು ದಿನ್ನೆಯಾಗಿರುತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿಹೆಚ್ಚು ಪ್ರಚಲಿತವಾಗುತ್ತಿರುವ ಗಂಗಾ ಉಳಿಸಿ ಚಳವಳಿಗೂ ಬಹುಗುಣ
ಅವರು ಪ್ರೇರಕ ಎಂಬುದನ್ನು ಬಹುತೇಕ ಪರಿಸರ ಹೋರಾಟಗಾರರು ಒಪ್ಪಿಕೊಳ್ಳುತ್ತಾರೆ.
ಚಿಪ್ಕೋ ಚಳವಳಿ ಭಾಗವಾಗಿ
ಬಹುಗುಣ ಅವರು,
ಅಂದಿನ ಉತ್ತರ ಪ್ರದೇಶದ ಹಿಮಾಲಯದ ವ್ಯಾಪ್ತಿಯ ಹಳ್ಳಿಹಳ್ಳಿಗಳಿಗೆ ನಡೆದುಕೊಂಡೇ ಹೋಗಿ
ಜನರನ್ನು ಜಾಗೃತಗೊಳಿಸಿದರು. 1981ರಿಂದ 1983ರ
ಅವಧಿಯಲ್ಲಿ ಹಿಮಾಲಯದ ಸುಮಾರು 5000 ಕಿ.ಮೀ.
ಕಾಲ್ನಡಿಗೆಯಲ್ಲಿ ಪ್ರವಾಸ ಮಾಡಿದರು. ಚಳವಳಿಗೆ ಸ್ಥಳೀಯರಿಂದ
ದೊಡ್ಡ ಮಟ್ಟದ ಬೆಂಬಲ ಪಡೆದರು. ಇದರ ಪರಿಣಾಮ
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಿಮಾಲಯ ವ್ಯಾಪ್ತಿಯ ಕಾಡು ನಾಶಕ್ಕೆ ಅಂಕುಶ ಹಾಕುವ ಕಾನೂನನ್ನು ಜಾರಿಗೆ
ತರಬೇಕಾಯಿತು. ಇಲ್ಲಿಂದ ಭಾರತದ ಪರಿಸರ ಹೋರಾಟಕ್ಕೆ
ಬಹುಗುಣ ಅವರು ಮುಖವಾದರು, ವಕ್ತಾರರೆನಿಸಿಕೊಂಡರು.
ದಶಕಗಳವರೆಗೆ ನಡೆದ ತೆಹ್ರಿ
ಡ್ಯಾಮ್ ವಿರೋಧಿ ಹೋರಾಟಕ್ಕೆ ಬಹುಗುಣ ಚಾಲಕಶಕ್ತಿಯಾಗಿದ್ದರು. ಈ ಡ್ಯಾಮ್
ನಿರ್ಮಾಣ ವಿರೋಧಿಸಿ ಹಲವು ಬಾರಿ ಸತ್ಯಾಗ್ರಹ ಕೈಗೊಂಡರು. ಉತ್ತರಾಖಂಡದಲ್ಲಿ ಹರಿಯುವ ಭಾಗಿರಥಿ ನದಿಗೆ ತೆಹ್ರಿ ಎಂಬ ಹಳ್ಳಿಯ ಸಮೀಪ ಡ್ಯಾಮ್
ನಿರ್ಮಾಣ ಮಾಡಲಾಗುತ್ತಿತ್ತು. ಈ ಡ್ಯಾಮ್ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಬಹುಗುಣ ಜಾಗೃತಿ ಮೂಡಿಸಿದರು. ಆಡಳಿತ ಶಕ್ತಿಗಳು ಹೋರಾಟಕ್ಕೆ ಬೆಲೆ ನೀಡದೇ ಇದ್ದಾಗ ಸತ್ಯಾಗ್ರಹಗಳನ್ನು ಕೈಗೊಂಡರು.
1995ರಲ್ಲಿ ಬಹುಗುಣ ಅವರು ಭಾಗಿರಥಿ
ನದಿಯ ದಂಡೆಯಲ್ಲಿ 45 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್
ಡ್ಯಾಮ್‌ಗೆ ಸಂಬಂಧಿಸಿ ಪರಿಶೀಲನಾ ಸಮಿತಿ ನೇಮಕ ಮಾಡಿದ
ನಂತರವೇ ತಮ್ಮ ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು. ಇಷ್ಟಾಗಿಯೂ ಪ್ರಗತಿ
ಕಾಣದ ಹಿನ್ನೆಲೆಯಲ್ಲಿ ಮತ್ತೆ ದಿಲ್ಲಿಯ ರಾಜಘಾಟ್ನಲ್ಲಿ ಗಾಂಧಿ ಸಮಾಧಿ
ಬಳಿ 74 ದಿನ ಉಪವಾಸ ಸತ್ಯಾಗ್ರಹ ಕೈಗೊಂಡರು. ಆಗ
ಪ್ರಧಾನಿಯಾಗಿದ್ದವರು ಎಚ್.ಡಿ.ದೇವೇಗೌಡ.
ಯೋಜನೆಯ ಬಗ್ಗೆ ಪರಿಶೀಲಿಸುವ ವಾಗ್ದಾನವನ್ನು ದೇವೇಗೌಡರು ನೀಡಿದ ಬಳಿಕ ಬಹುಗುಣ ಸತ್ಯಾಗ್ರಹವನ್ನು
ಅಂತ್ಯಗೊಳಿಸಿದ್ದರು. ಡ್ಯಾಮ್ ನಿರ್ಮಾಣವೇನೂ
ಸ್ಥಗಿತಗೊಳ್ಳಲಿಲ್ಲ. ಈ ಪ್ರಕರಣ ಸ್ಥಳೀಯ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ನಲ್ಲಿ ದಶಕಗಳ ಕಾಲ ನಡೆದು, 2001ರಲ್ಲಿ ಡ್ಯಾಮ್ ನಿರ್ಮಾಣವು ಪುನರಾರಂಭವಾಯಿತು. ಇಷ್ಟಾದರೂ ಬಹುಗುಣ ಹೋರಾಟವನ್ನು
ಕೈಬಿಡಲಿಲ್ಲ. ಅವರನ್ನು 2004ರಲ್ಲಿ ಡೆಹ್ರಾಡೂನ್ಗೆ ಸ್ಥಳಾಂತರಿಸಲಾಯಿತು.
ಬಹುಗುಣ ಅವರು ಹಿಮಾಲಯ ಜನರ
ಬದುಕನ್ನು ರಕ್ಷಿಸಲು ಕಂಕಣಬದ್ಧರಾಗಿದ್ದರು. ವಿಶೇಷವಾಗಿ ಬೆಟ್ಟಗಳಲ್ಲಿ ದುಡಿಯುವ
ಮಹಿಳೆಯರ ಹಕ್ಕುಗಳ ಪರವಾಗಿದ್ದರು. ಪರಿಸರ ಹೋರಾಟದ ಜತೆಗೆ ನದಿಗಳ ರಕ್ಷಣೆಗೂ
ಮುಂದಾಳತ್ವ ವಹಿಸಿಕೊಂಡಿದ್ದರು. ಅವರ ಹೋರಾಟದ ಹಾದಿ ಸರಳ ರೇಖೆಯಲ್ಲ;
ಅದು ಟಿಸಿಲೊಡೆದ ಅನೇಕ ಹಾದಿಗಳ ಸಂಗಮ. ತಮ್ಮ ಜೀವಿತಾವಧಿಯ
ಪೈಕಿ ಒಟ್ಟು 76 ವರ್ಷಗಳನ್ನು ಸಾಮಾಜಿಕ ಹೋರಾಟಗಳಿಗೆ ತ್ಯಾಗ ಮಾಡಿದ್ದಾರೆ.
ಉತ್ತರಾಖಂಡದ ಮರೋದಾ ಎಂಬ ಸಣ್ಣ
ಹಳ್ಳಿಯಲ್ಲಿ 1927
ಜನವರಿ 9ರಂದು ಬಹುಗುಣ ಜನಿಸಿದರು. ಇವರ ತಂದೆ ಅಂಬಾದತ್ತ ಅವರು ಅಂದಿನ ತೆಹ್ರಿ ಗರ್ವಾಲ್ ರಾಜ್ಯಾಡಳಿತದಲ್ಲಿ
ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದೆಲ್ಲೆಡೆ ಸ್ವಾತಂತ್ರ್ಯದ
ಕಿಡಿ ಹೊತ್ತಿದ ಸಂದರ್ಭವದು. ಬಹುಗುಣ 14 ವರ್ಷ
ಇದ್ದಾಗಲೇ ಮಹಾತ್ಮ ಗಾಂಧಿ ಅವರಿಂದ ಪ್ರಭಾವಿತರಾದರು. ಅಹಿಂಸೆ,
ಸತ್ಯಾಗ್ರಹಗಳು ಅವರನ್ನು ಬಹುವಾಗಿ ಆಕರ್ಷಿಸಿದವು. ಗಾಂಧಿ
ನಂತರ ಬಹುಗುಣರನ್ನು ಪ್ರಭಾವಿಸಿದವರು ಎಂದರೆ ಶ್ರೀದೇವ್ ಸುಮನ್
ಅವರು. ತೆಹ್ರಿ ಗರ್ವಾಲ್ ರಾಜ್ಯಾಡಳಿತವನ್ನು
ಕೊನೆಗಾಣಿಸಲು ಅವರು ಹೋರಾಟ ನಡೆಸುತ್ತಿದ್ದರು.
ಗಾಂಧಿ ಮತ್ತು ಸುಮನ್ ಅವರಿಂದ
ಬಹಳಷ್ಟು ಪ್ರಭಾವಿತಗೊಂಡಿದ್ದ ಬಹುಗುಣ ಚಿಕ್ಕವಯಸ್ಸಿನಲ್ಲೇ ಹೋರಾಟಕ್ಕೆ ಧುಮುಕಿದರು. ತೆಹ್ರಿ ಗರ್ವಾಲ್ ರಾಜ್ಯಾಡಳಿತ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡರು.
ಪರಿಣಾಮ ಏಳು ತಿಂಗಳು ಸೆರೆವಾಸ ಅನುಭವಿಸಬೇಕಾಯಿತು. ತಮ್ಮ
24ನೇ ವಯಸ್ಸಿನಲ್ಲಿ ಬಹುಗುಣ ಕಾಂಗ್ರೆಸ್ ಪಾರ್ಟಿ ಸೇರಿದರು.
1947ರಲ್ಲಿ ಭಾರತ ಸ್ವತಂತ್ರಗೊಂಡರೂ ತೆಹ್ರಿ ರಾಜ್ಯಾಡಳಿತದ ವಿರುದ್ಧ ಹೋರಾಟ ಮುಂದುವರಿದೇ
ಇತ್ತು. ಅಂತಿಮವಾಗಿ 1949 ಆಗಸ್ಟ್
1ರಂದು ತೆಹ್ರಿ ರಾಜ್ಯ ಭಾರತದ ಒಕ್ಕೂಟವನ್ನು ಸೇರಿತು.
ಸ್ವಾತಂತ್ರ್ಯ ಹೋರಾಟದ ಬಳಿಕ
ಬಹುಗುಣ ಅವರು ಮದ್ಯಪಾನ ವಿರೋಧಿ, ಮಹಿಳೆಯರ ಹಕ್ಕು ಹೋರಾಟಗಳಲ್ಲಿ ತೊಡಗಿಸಿಕೊಂಡರು.
ಕೊನೆಗೆ ಚಿಪ್ಕೋ ಚಳವಳಿ ಮೂಲಕ ಪರಿಸರ ಸಂರಕ್ಷ ಣೆಯ ಪ್ರತಿನಿಧಿಯಾದರು.
ವ್ಯಕ್ತಿಯೊಬ್ಬ ನಿಸ್ವಾರ್ಥವಾಗಿ ಸಮಾಜ ಸೇವೆಗೆ ತೊಡಗಿಸಿಕೊಂಡಾಗ ಅವರನ್ನು ಪ್ರಶಸ್ತಿಗಳು
ಹುಡುಕಿಕೊಂಡು ಬರುತ್ತವೆ. ಚಿಪ್ಕೋ ಚಳವಳಿಗೆ 1987ರಲ್ಲಿ ರೈಟ್ ಲೈವ್ಲೀಹುಡ್ ಅವಾರ್ಡ್
ಸಂದಿತು. ದೇಶದ ಪರಮೋಚ್ಚ ನಾಗರಿಕ ಗೌರವಗಳಾದ ಪದ್ಮಶ್ರೀ(1981)
ಮತ್ತು ಪದ್ಮವಿಭೂಷಣ(2009) ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಐಐಟಿಗಳು, ಸಂಘ ಸಂಸ್ಥೆಗಳು ಬಹುಗುಣ ಅವರನ್ನು ಸನ್ಮಾನಿಸಿವೆ.
ಅವರ ಜೀವನ, ಹೋರಾಟ, ಫಿಲಾಸಫಿಗಳು
ಹಲವು ಪುಸ್ತಕಗಳಿಗೆ ವಿಷಯಗಳಾಗಿವೆ. ಬಹುಗುಣ ಕೆಲವು ಕೃತಿಗಳನ್ನು ರಚಿಸಿದ್ದಾರೆ.
ಅವರು ಕರ್ನಾಟಕಕ್ಕೆ ಹಲವು
ಬಾರಿ ಭೇಟಿ ನೀಡಿದ್ದಾರೆ.
ಇಲ್ಲಿನ ಪರಿಸರ ಚಳವಳಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರೇರಕ ಶಕ್ತಿಯಾಗಿದ್ದರು.
94 ವರ್ಷ ವಯಸ್ಸಾಗಿದ್ದ ಬಹುಗುಣ ಕೋವಿಡ್ ಸೋಂಕಿನಿಂದಾಗಿ
ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೇ 21ರಂದು ಕೊನೆಯುಸಿರೆಳೆದರು.
ಪರಿಸರ ಮೇಲಿನ ಪ್ರೀತಿ, ಬದುಕಿನ ಮೇಲಿನ ವ್ಯಾಮೋಹದಿಂದಾಗಿ
ಅವರು ಚಿರಸ್ಥಾಯಿ. ಅವರನ್ನು ಕಳೆದುಕೊಂಡ ಹಿಮಾಲಯದ ಮರ ಗಿಡಗಳು ಕಣ್ಣೀರು
ಸುರಿಸುತ್ತಿರಬಹುದು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ