ಶನಿವಾರ, ಜೂನ್ 12, 2021

Dr siddalingaiah- 'ಊರು ಕೇರಿ' ಬಿಟ್ಟು ನಡೆದ ಕವಿ ಸಿದ್ದಲಿಂಗಯ್ಯ

 ಕವಿ ಡಾ. ಸಿದ್ದಲಿಂಗಯ್ಯ ನಿಧನದಿಂದಾಗಿ ನಮ್ಮ ನೆಲದ ಹೋರಾಟದ, ಸಾಂಸ್ಕೃತಿಕ ಚಿಂತನೆಯ ದೊಡ್ಡದೊಂದು ಸತ್ವ ನಮ್ಮೊಳಗಿಂದ ಕಳೆದುಹೋದ ಭಾವ. ನಾಡಿನೆಲ್ಲೆಡೆ ದಲಿತ ಪ್ರಜ್ಞೆ ವಿಸ್ತರಿಸಿ, ಸಾಮೂದಾಯಿಕ ಜಾಗೃತಿಯನ್ನು ತಮ್ಮ ಬಂಡಾಯ ಭಾವದ ಕವಿತೆಗಳ ಮೂಲಕವೇ ಇವರು ಅಭಿವ್ಯಕ್ತಿಸಿದ್ದರು. ಇವರ ಬರಹ, ಹೋರಾಟಗಳೆಲ್ಲವೂ ಅನುಕರಣೀಯ, ದಾರಿದೀಪ.


ಡಾ.  ಸಿದ್ದಲಿಂಗಯ್ಯ ಅವರು ದಲಿತ ಸಮುದಾಯದ ಒಳಬೇಗುದಿ, ನೋವು, ಶೋಷಣೆ, ಅಪಮಾನ, ಮಡುಗಟ್ಟಿದ ಆಕ್ರೋಶವನ್ನು ಅಭಿವ್ಯಕ್ತಿಸಲು ಬಳಸಿದ ಪದಗಳು ನಿಗಿ ನಿಗಿ ಕೆಂಡ. ಅವು ಅಷ್ಟೇ ಆಗಿದ್ದರೆ, ವ್ಯಕ್ತಿಗತ ಆಕ್ರೋಶದ ನುಡಿಗಳಾ ಗಿರುತ್ತಿದ್ದವು; ಹಾಗಾಗಲಿಲ್ಲ. ಬಂಡಾಯ, ಪ್ರತಿಭಟನೆಯ ಸತ್ವ ದೊಂದಿಗೆ ಸಾಹಿತ್ಯಿಕ ಗುಣ ಅವರ ಕವಿತೆಗಳಲ್ಲಿದ್ದುದರಿಂದ ಸಾರ್ವತ್ರಿಕ ಎನಿಸಿಕೊಂಡವು. 

ಅವರ ಪ್ರಸಿದ್ಧ ಕವಿತೆ ‘ಇಕ್ರಲಾ ವದೀರ್ಲಾ...’ ಸಾಲುಗಳು ಮೇಲ್ನೋಟಕ್ಕೆ ರೋಷವನ್ನು ಅಭಿವ್ಯಕ್ತಿಸಿದರೂ ಆಳದಲ್ಲಿನೋವಿನ ನುಡಿಗಳೇ ಆಗಿವೆ. ನೋವು ಮತ್ತು ಆಕ್ರೋಶದ ಮೂಲಕವೇ ಅಭಿಧಿಧಿವ್ಯಕ್ತಿಯ ದಾರಿಯನ್ನು ಕಂಡುಕೊಂಡವರು ಅವರು. 

ಬರೆದ ಪ್ರತಿ ಕವಿತೆಯೂ, ಪ್ರತಿ ಪದವೂ ಸ್ವರೂಪದಲ್ಲಿಬಂಡಾಯವನ್ನು ಪ್ರತಿನಿಧಿಸುತ್ತವೆ. ಅವರು ಸಾಹಿತ್ಯ ಕೃಷಿ ಆರಂಭಿಸಿದ ಕಾಲದ ಸಂದರ್ಭವು ಕಾವ್ಯಕ್ಕೆ ಸೂಧಿರ್ತಿಯಾಗಿತ್ತು. ಡಾ. ಸಿದ್ದಲಿಂಗಯ್ಯ ಅವರು ತಮ್ಮ ಕವಿತೆ, ನಾಟಕ, ಪ್ರಬಂಧ, ವಿಮರ್ಶೆ, ಗದ್ಯದ ಮೂಲಕ ದಲಿತರ ಪ್ರಜ್ಞೆಯನ್ನು ವಿಸ್ತರಿಸಿಧಿದರು; ಸಾಮೂದಾಯಿಕ ಜಾಗೃತಿ ಹೆಚ್ಚಿಸಿದರು.  ಈ ಮೂಲಕ ನಾಡಿನ ಬಂಡಾಯ ಮತ್ತು ದಲಿತ ಸಾಹಿತ್ಯಕ್ಕೆ ಹೊಸ ಕಸುವು ತುಂಬಿದರು. ಪ್ರತಿಭಟನಾಸ್ತ್ರವನ್ನಾಗಿ ಸಾಹಿತ್ಯವನ್ನು ಬಳಸಿಕೊಂಡು ಜಾಗೃತಿಯ ದೀವಿಟಿಗೆಯನ್ನು ಮತ್ತೊಂದು ಪೀಳಿಗೆಗೆ ದಾಟಿಸಿದರು. ಕರ್ನಾಟಕದ ಮಟ್ಟಿಗೆ ದಲಿತ ಸಾಹಿತ್ಯದ ಇತಿಹಾಸವನ್ನು ಬರೆದರೆ ಅದು ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯದ ಇತಿಹಾಸವೂ ಆಗುತ್ತದೆ. 

ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದ ಬಡ, ಶೋಷಿತ ಕುಟುಂಬದಲ್ಲಿ1954 ಫೆಬ್ರವರಿ 3ರಂದು ಸಿದ್ದಲಿಂಗಯ್ಯ ಅವರು ಜನಿಸಿದರು. ತಂದೆ ದೇವಯ್ಯ, ತಾಯಿ ವೆಂಕಮ್ಮ. ಹಳ್ಳಿಯಲ್ಲಿಪ್ರಾಥಮಿಕ ಶಾಲೆ ಮುಗಿಸಿ ಬಂದು ಸೇರಿದ್ದು ಬೆಂಗಳೂರಿನ ಮಲ್ಲೇಶ್ವರದ ಸರಕಾರಿ ಹೈಸ್ಕೂಲ್‌ಗೆ. ಹಾಸ್ಟೆಲ್‌ನಲ್ಲಿವಾಸ್ತವ್ಯ. ಬಳಿಕ ಬೆಂಗಳೂರು ವಿವಿಯಿಂದ ಕನ್ನಡದಲ್ಲಿಎಂಎ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿ ಪಡೆದುಕೊಂಡರು. ಕವಿ ಜಿ ಎಸ್‌ ಶಿವರುದ್ರಪ್ಪ ಅವರು ಸಿದ್ದಲಿಂಗಯ್ಯ ಅವರನ್ನು ಸಂಶೋಧಕ ಸಹಾಯಕರನ್ನಾಗಿ ನೇಮಕ ಮಾಡಿಕೊಂಡರು. ಮುಂದೆ ಬೆಂಗಳೂರು ವಿವಿಯ ಕನ್ನಡ ಪ್ರಧ್ಯಾಪಕರಾಗಿ, ಕನ್ನಡ ವಿಭಾಗ ಮುಖ್ಯಸ್ಥರಾದರು. ಡಾ. ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. 

ಸಾಹಿತ್ಯ ಕೃತಿಗಳು: 1975ರಲ್ಲಿಪ್ರಕಟಗೊಂಡ ‘ಹೊಲೆ ಮಾದಿಗರ ಹಾಡು’ ಸಿದ್ದಲಿಂಗಯ್ಯರ ಮೊದಲ ಕವನ ಸಂಕಲನ.  ಆ ಬಳಿಕ ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಆಯ್ದ ಕವನಗಳು, ಅಲ್ಲೆಕುಂತವರೆ ಕವನ ಸಂಕಲನಗಳು ಪ್ರಕಟಗೊಂಡು ಜನಮನ್ನಣೆ ಗಳಿಸಿದವು.  ಏಕಲವ್ಯ(1986), ನೆಲಸಮ(1980), ಪಂಚಮ (1980) ಅವರು ರಚಿಸಿದ ನಾಟಕಗಳು. ಹಕ್ಕಿ ನೋಟ, ರಸಗಳಿಗೆಗಳು, ಎಡಬಲ, ಉರಿಕಂಡಾಯ ಅವರ ವಿಮರ್ಶಾ ಕೃತಿಗಳು. ‘ಊರು ಕೇರಿ’ ಅವರ ಸಿದ್ದಲಿಂಗಯ್ಯ ಆತ್ಮಚರಿತ್ರೆಯಾಗಿದೆ. ಇದು ಸಂಪುಟಗಳಲ್ಲಿಪ್ರಕಟವಾಗಿದೆ. ಅವತಾರಗಳು, ಸದನದಲ್ಲಿಸಿದ್ದಲಿಂಗಯ್ಯ ಭಾಗ -1, ಸದನದಲ್ಲಿಸಿದ್ದಲಿಂಗಯ್ಯ ಭಾಗ -2 ಮತ್ತು ಜನಸಂಸ್ಕೃತಿ ಅವರ ಲೇಖನ ಸಂಗ್ರಹಗಳು.

ಎರಡು ಬಾರಿ ಎಂಎಲ್ಸಿ
ಡಾ. ಸಿದ್ದಲಿಂಗಯ್ಯ ಅವರು 1988ರಿಂದ 1994 ಮತ್ತು  1995ರಿಂದ 2001ರ ತನಕ ಎರಡು ಅವಧಿಗೆ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಈ ಅವಧಿಯಲ್ಲಿನಾಡು ನುಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಸೆಳೆಯುವಲ್ಲಿಯಶಸ್ವಿಯಾಗಿದ್ದರು. ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿಯೂ ಗಮನಾರ್ಹ ಕೆಲಸ ಮಾಡಿದ್ದಾರೆ.

ಇಕ್ರಲಾ ವದಿರ್ಲಾ...!
ಸಿದ್ದಲಿಂಗಯ್ಯ ಅವರ ಕವಿತೆಗಳು ಬಂಡಾಯದ ಕಹಳೆಯೂದಿ ಕ್ರಾಂತಿ ಗೀತೆಗಳು ಎನಿಸಿಧಿಕೊಂಡವು. ಆ ಪೈಕಿ ‘ಇಕ್ರಲಾ ವದೀರ್ಲಾ/ ಈ ನನ್ನ ಮಕ್ಕಳ ಚರ್ಮ ಎಬ್ರಲಾ...’, ‘ನಿನ್ನೆ ದಿನ/ ನನ್ನ ಜನ/ ಬೆಟ್ಟದಂತೆ ಬಂದರು...’, ‘ಯಾರಿಗೆ ಬಂತು, ಎಲ್ಲಿಗೆ ಬಂತು ನಲ್ವತ್ತೇಳರ ಸ್ವಾತಂತ್ರ್ಯ..’,  ‘ಹಸಿವಿನಿಂದ ಸತ್ತೋರು, ಸೈಜುಗಲ್ಲುಹೊತ್ತೋರು/ ವದಿಸಿಕೊಂಡು ವರಗಿದವರು ನನ್ನ ಜನರು...’ ಕವಿತೆಗಳು ಪ್ರಮುಖವಾದವು. ಇಕ್ರಲಾ ವದೀರ್ಲಾ ಕವಿತೆಯಂತೂ ಧ್ವನಿಸುವ ಪ್ರತಿಭಟನೆ, ಬಂಡಾಯ, ಆಕ್ರೋಶದಿಂದಾಗಿ ಹೆಚ್ಚು ಜನಪ್ರಿಯವಾಗಿತ್ತು. ಇಂಥ ಕವಿತೆಗಳನ್ನು ಬರೆದಿದ್ದ ಸಿದ್ದಲಿಂಗಯ್ಯನವರು, ಆ ಬೆಟ್ಟದಲಿ ಸುಳಿದಾಡ ಬೇಡ ಗೆಳತಿ... ಎಂಬ ನವಿರು ಪ್ರೇಮಗೀತೆಯನ್ನು ಬರೆದು ಅಚ್ಚರಿ ಮೂಡಿಸಿದ್ದರು.

ಪ್ರಶಸ್ತಿಗಳು
ಪಂಪ, ನೃಪತುಂಗ, ಆಳ್ವಾಸ್‌ ನುಡಿಸಿರಿ, ನಾಡೋಜ, ಸಂದೇಶ, ಡಾ. ಅಂಬೇಡ್ಕರ್‌, ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಉತ್ತಮ ಚಲನಚಿತ್ರ ಗೀತ ರಚನೆಗಾಗಿ ಕರ್ನಾಟಕ ಸರಕಾರದಿಂದ ಪ್ರಶಸ್ತಿ ಕೂಡ ಬಂದಿದೆ.  ಶ್ರವಣಬೆಳಗೊಳ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದರು.

(2021ರ ಜೂನ್ 12ರ ವಿಜಯ ಕರ್ನಾಟಕ ವರದಿಯಲ್ಲಿ ಪ್ರಕಟವಾದ ವರದಿ)

ಕಾಮೆಂಟ್‌ಗಳಿಲ್ಲ: